ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramesh Kote Column: ಕರುಣ್‌, ಇನ್ನೊಂದು ಅವಕಾಶ ಕೇಳಬೇಡಿ !

ನೀವೇ ಹೇಳಿ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡಬೇಕಾ? ಹೌದು! ಒಂದು ವೇಳೆ ಕರುಣ್ ಆಡಿದ ಎಂಟು ಇನ್ನಿಂಗ್ಸ್‌ಗಳ ಪೈಕಿ ಒಂದರಲ್ಲಿ ಒಂದು ದೊಡ್ಡ ಇನಿಂಗ್ಸ್ ಆಡಿದ್ದರೂ ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ನೋಡಿ ತಂಡದಿಂದ ಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ.

ಕರುಣ್‌, ಇನ್ನೊಂದು ಅವಕಾಶ ಕೇಳಬೇಡಿ !

Ashok Nayak Ashok Nayak Aug 6, 2025 8:06 AM

ಅಖಾಡ

ರಮೇಶ್‌ ಕೋಟೆ

ಮೇಲಿನ ಮಾತನ್ನು ನಾನು ಹೇಳುತ್ತಿಲ್ಲ! ಸ್ವತಃ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರೇ ಹೇಳುತ್ತಿರಬಹುದು. ನಾಲ್ಕು ಪಂದ್ಯಗಳಲ್ಲಿ ಅವಕಾಶ ನೀಡಿದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಕರುಣ್ ಕಂಡಾಗ ಗಂಭೀರ್‌ಗೆ ಈ ಮಾತು ಮನಸಿನಲ್ಲಿ ಸುಳಿದಿರಬಹುದು. ಈ ಮಾತು ಗಳಲ್ಲಿ ನ್ಯಾಯ ಇದೆ ಅಲ್ಲವೇ? ಬರೋಬ್ಬರಿ ಎಂಟು ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದಾಗ ಆಡಬೇಕು, ರನ್ ಗಳಿಸಬೇಕು, ಆಯ್ಕೆಗಾರರ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಅಲ್ಲವೇ? ಕರುಣ್ ನಾಯರ್‌ಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಒಂದಲ್ಲ, ಎರಡಲ್ಲ ಎಂಟು ಇನ್ನಿಂಗ್ಸ್‌ ಗಳಲ್ಲಿ ಅವಕಾಶ ಸಿಕ್ಕಿತ್ತು. ಆದರೆ ಆತ ದೇಸಿ ಕ್ರಿಕೆಟ್‌ನಲ್ಲಿ ಹರಿಸಿದ ರನ್ ಹೊಳೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹರಿಸಲಿಲ್ಲ.

ಕನಿಷ್ಠ ಎಂಟು ಇನ್ನಿಂಗ್ಸ್‌ಗಳ ಪೈಕಿ ಒಂದೇ ಒಂದರಲ್ಲಿಯೂ ಮೂರಂಕಿ ವೈಯಕ್ತಿಕ ಮೊತ್ತವನ್ನೂ ಕಲೆ‌ ಹಾಕಲು ಸಾಧ್ಯವಾಗಲಿಲ್ಲ. ಇದು ಟೀಮ್ ಮ್ಯಾನೇಜ್ಮೆಂಟ್‌ಗೆ ಮಾತ್ರವಲ್ಲದೆ, ಕೋಟ್ಯಂತರ ಕನ್ನಡಿಗರಿಗೂ ಬೇಸರ ತಂದಿತು. ಏಕೆಂದರೆ ಕರುಣ್ ನಾಯರ್ ಎಂಟು ವರ್ಷಗಳ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ.

ಎಂಟು ವರ್ಷಗಳ ಹಿಂದೆ ಚೆನ್ನೈನ ಮರೀನಾ ಕಡಲತೀರದಲ್ಲಿ ತ್ರಿಶತಕ ಸಿಡಿಸಿದಾಗ ‘ಕರುಣ್ ನಾಯರ್ ಭಾರತೀಯ ಕ್ರಿಕೆಟ್ ನ ದೊಡ್ಡ ಭವಿಷ್ಯ’ ಎಂದೇ ಅಭಿಪ್ರಾಯ ವ್ಯಕ್ತವಾಗಿತ್ತು. ಏಕೆಂದರೆ, ಅಂದು ಆತನ ಬ್ಯಾಟಿಂಗ್ ಇಡೀ ವಿಶ್ವ ಕ್ರಿಕೆಟ್ ತಿರುಗಿ ನೋಡುವಂತೆ ಮಾಡಿತ್ತು. ವಿಶೇಷವಾಗಿ ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ‌ ಬ್ಯಾಟ್ಸ್‌ ಮನ್ ಎಂಬ ಐತಿಹಾಸಿಕ ದಾಖಲೆಯನ್ನು ಕರುಣ್ ಬರೆದಿದ್ದರು. ಅಲ್ಲದೇ ಎರಡು ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಲೋಕವನ್ನು ಆಳಿದ್ದ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್ ರಿಂದಾಗಲಿ ಅಥವಾ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯಿಂದಾಗಲಿ ಸಾಧ್ಯವಾಗದ ದೊಡ್ಡ ದಾಖಲೆ ಯನ್ನು ಕನ್ನಡಿಗ ಕರುಣ್ ಅಂದು ಬರೆದಿದ್ದರು. ಆದರೆ ಮುಂದಿನ ಸರಣಿಗಳಲ್ಲಿ ಸತತ ವೈಫಲ್ಯದ ಕಾರಣ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಮರಳಿದ ಬಳಿಕ ಕರುಣ್ ಟೀಮ್ ಇಂಡಿಯಾದಿಂದ ಹೊರಬೀಳಬೇಕಾಯಿತು.

ಇದನ್ನೂ ಓದಿ: Karun Nair: 8 ವರ್ಷಗಳ ಬಳಿಕ ಟೆಸ್ಟ್‌ ತಂಡಕ್ಕೆ ಗ್ರೇಟೆಸ್ಟ್‌ ಕಮ್‌ಬ್ಯಾಕ್‌ ಮಾಡಿದ ಕನ್ನಡಿಗ!

ನಂತರ ಅವರು ಸಾಕಷ್ಟು ಹಿನ್ನಡೆ ಅನುಭವಿಸಿದ್ದರು. ಕರ್ನಾಟಕ ತಂಡ ಕೂಡ ಅವರ ಮೇಲೆ ನಂಬಿಕೆಯನ್ನು ಕಳೆದುಕೊಂಡು ಕೈ ಬಿಟ್ಟಿತ್ತು. ಇದರಿಂದಾಗಿ ಕರುಣ್ ತೀವ್ರ ಮಾನಸಿಕ ಹಿನ್ನಡೆ ಅನುಭವಿಸಿದ್ದರು. 2022ರಲ್ಲಿ ಅವರು ‘ಡಿಯರ್ ಕ್ರಿಕೆಟ್, ದಯವಿಟ್ಟು ಮತ್ತೊಂದು ಅವಕಾಶ ಕೊಡು’ ಎಂದು ಮನವಿ ಮಾಡಿದ್ದರು. ನಂತರ ವಿದರ್ಭ ತಂಡಕ್ಕೆ ಸೇರ್ಪಡೆಯಾದ ಬಳಿಕ ಕರುಣ್ ಅವರ ಅದೃಷ್ಟ ಬದಲಾಯಿತು.

ಅವರು ಕಳೆದ 2024-25ರ ಋತುವಿನ ರಣಜಿ ಟ್ರೋಫಿ ಟೂರ್ನಿಯಲ್ಲಿ 9 ಪಂದ್ಯಗಳಿಂದ 4 ಶತಕಗಳ ನೆರವಿನಿಂದ 863 ರನ್‌ಗಳನ್ನು ಕಲೆ ಹಾಕಿದ್ದರು. ಅಲ್ಲದೇ ವಿಜಯ್ ಹಜಾರೆ ಟ್ರೋಫಿ 50 ಓವರ್‌ಗಳ ಟೂರ್ನಿಯಲ್ಲಿಯೂ ರನ್ ಹೊಳೆ ಹರಿಸಿ ಎಂಟು ಇನ್ನಿಂಗ್ಸ್‌ಗಳಿಂದ 5 ಶತಕಗಳ ಜತೆಗೆ 779 ರನ್ ಗಳನ್ನು ಕಲೆ ಹಾಕಿದ್ದರು. ಅಂದರೆ 7 ವರ್ಷಗಳಲ್ಲಿ, ಅವಕಾಶವನ್ನು ಅರಸುತ್ತ ವನವಾಸದಲ್ಲಿ ಕಲ್ಲು-ಮುಳ್ಳು ತುಳಿದು, ಹಳ್ಳ-ಕೊಳ್ಳ ದಾಟಿ ಈ ಬಲಗೈ ಬ್ಯಾಟ್ಸ್‌ಮನ್ ಇಲ್ಲಿಗೆ ಬಂದಿದ್ದರು.

Karun-Nair-Gautam-Gambhir- R

ಹಾಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರ ಸ್ಥಾನ ಅತ್ಯಂತ‌ ಮೌಲ್ಯಯುತವಾಗಿತ್ತು. ಆದರೆ ಕರುಣ್ ಈ ಸರಣಿಯಲ್ಲಿ ಆಡುವಾಗ ತಾವು ಕಮ್‌ಬ್ಯಾಕ್ ಮಾಡಿದ ಹಾದಿಯನ್ನು ಮರೆತರೆ? ಏಕೆಂದರೆ ಅವರ ಡೊಮೆಸ್ಟಿಕ್ ಕ್ರಿಕೆಟ್ ಹಾಗೂ ‘ಲಿಸ್ಟ್‌-ಎ’ ಕ್ರಿಕೆಟ್‌ನಲ್ಲಿದ್ದ ಫಾರ್ಮ್ ನೋಡಿದಾಗ ಅವರು, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಶುಭಮನ್ ಗಿಲ್ ಸ್ಥಾನದಲ್ಲಿ ಇರಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಹಾಗಂತ ಅವರ ಬ್ಯಾಟಿಂಗ್‌ನಲ್ಲಿನ ತಂತ್ರ, ಪ್ರತಿಭೆ, ಕೌಶಲದ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ, ಅವರು ತಮ್ಮ ಪ್ರತಿಭೆಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಮತ್ತು ಕೊನೆಯ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ‌ ಅವರು, ಇನ್ನುಳಿದ ಎರಡು ಪಂದ್ಯಗಳಲ್ಲಿ ಸಾಯಿ ಸುದರ್ಶನ್ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಇದರೊಂದಿಗೆ ಮೂರನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಅವಕಾಶ ಅವರಿಗಿತ್ತು. ಆದರೆ ಇದನ್ನು ಅವರು ಸದುಪಯೋಗ ಪಡಿಸಿಕೊಳಲ್ಲಿಲ್ಲ.

ಅವರು ಈ ಸರಣಿಯ ಕೆಲ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಈ ಕಾರಣದಿಂದಲೇ ಅವರನ್ನು ಮ್ಯಾಂಚೆಸ್ಟರ್ ಟೆಸ್ಟ್‌ನಿಂದ ಕೈ ಬಿಟ್ಟು ಪುನಃ ಸಾಯಿ ಸುದರ್ಶನ್‌ಗೆ ಅವಕಾಶ ನೀಡಲಾಗಿತ್ತು. ಅದರಂತೆ ಸುದರ್ಶನ್ ಪ್ರಥಮ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದರು ಹಾಗೂ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡರು.

ಐದನೇ ಹಾಗೂ ಓವಲ್ ಟೆಸ್ಟ್‌ನಲ್ಲಿಯೂ ಕರುಣ್ ಬೆಂಚ್ ಕಾಯುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಹೆಡ್ ಕೋಚ್ ಗೌತಮ್ ಗಂಭೀರ್, ಈ ಕನ್ನಡಿಗನಿಗೆ ಮತ್ತೊಂದು ಅವಕಾಶ ನೀಡಿದರು. ಅದರಂತೆ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಇತರೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ಒಂದೆಡೆ ಪೆವಿಲಿಯನ್‌ಗೆ ಪರೇಡ್ ನಡೆಸುತ್ತಿದ್ದರೆ, ಕರುಣ್ ಮಾತ್ರ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಇಂಗ್ಲೆಂಡ್‌ನ ಮಾರಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಆದರೆ ಎರಡನೇ ದಿನ ಶತಕ ಬಾರಿಸಬಹುದೆಂದು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಆರಂಭ ದಲ್ಲಿಯೇ ಕರುಣ್ ನಿರಾಸೆ ಮೂಡಿಸಿದರು. ಕನಿಷ್ಠ ದ್ವಿತೀಯ ಇನ್ನಿಂಗ್ಸ್‌ನಲ್ಲಿಯಾದರೂ ಅವರು ಭಾರಿ ಪ್ರದರ್ಶನ ನೀಡುತ್ತಾರೆಂದು ಭಾವಿಸಲಾಗಿತ್ತು. ಅದರಂತೆ ಅವರಿಗೆ ಒಳ್ಳೆಯ ವೇದಿಕೆ ಸಿಕ್ಕಿತ್ತು ಆದರೆ ಪಿಚ್ ಸ್ಥಿತಿಗೆ ಹೊಂದಿಕೊಳ್ಳುವಲ್ಲಿ ಆರಂಭದಲ್ಲಿಯೇ ಎಡವಿ ವಿಕೆಟ್ ಕೈ ಚೆಲ್ಲಿದರು.

ಒಟ್ಟಾರೆ ಕರುಣ್ ಆಡಿದ 4 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ ಗಳಿಂದ 25ರ ಸರಾಸರಿಯಲ್ಲಿ ಗಳಿಸಿದ್ದು 205 ರನ್‌ಗಳು ಮಾತ್ರ. ಇದರಲ್ಲಿ ಒಂದೇ ಒಂದು ಅರ್ಧ ಶತಕ ಗಳಿಸಿದ್ದರು ಅಷ್ಟೇ. ನೀವೇ ಹೇಳಿ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡಬೇಕಾ? ಹೌದು! ಒಂದು ವೇಳೆ ಕರುಣ್ ಆಡಿದ ಎಂಟು ಇನ್ನಿಂಗ್ಸ್‌ಗಳ ಪೈಕಿ ಒಂದರಲ್ಲಿ ಒಂದು ದೊಡ್ಡ ಇನಿಂಗ್ಸ್ ಆಡಿದ್ದರೂ ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ನೋಡಿ ತಂಡದಿಂದ ಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ.

ನೀವು ವಾದ ಮಾಡಬಹುದು- ‘ಕರುಣ್‌ಗೆ ಇನ್ನೊಂದು ಸರಣಿಯಲ್ಲಿ ಅವಕಾಶ ನೀಡಬೇಕು’ ಅಂತ. ಆದರೆ ಇಂಗ್ಲೆಂಡ್ ಸರಣಿಯಲ್ಲಿದ್ದ ಅಭಿಮನ್ಯು ಈಶ್ವರನ್‌ಗೆ ಒಂದೇ ಒಂದು ಪಂದ್ಯದಲ್ಲಿಯೂ ಅವಕಾಶ ಸಿಕ್ಕಿರಲಿಲ್ಲ. ಈ ಹಿನ್ನಲೆಯಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದ ಟೀಮ್ ಮ್ಯಾನೇ ಜ್ಮೆಂಟ್ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಮತ್ತೊಂದು ಕಡೆ ಸ್ಪಿನ್ನರ್ ಕುಲ್ದೀಪ್ ಯಾದವ್‌ಗೂ ಅವಕಾಶ ಸಿಕ್ಕಿರಲಿಲ್ಲ.

ಹಾಗಾಗಿ ಮುಂದಿನ ಟೆಸ್ಟ್ ಸರಣಿಗೆ ಇವರು ತಮ್ಮ ಸ್ಥಾನವನ್ನೂ‌ ಉಳಿಸಿಕೊಳ್ಳುವುದು ಕಷ್ಟ. ಒಂದು ವೇಳೆ ಅವರು ಭಾರತ ತಂಡದಿಂದ ಹೊರಬಿದ್ದರೆ, ಅವರ ಟೆಸ್ಟ್ ವೃತ್ತಿ‌ ಜೀವನ ಇಲ್ಲಿಗೆ ಮುಗಿದಂತೆ, ಏಕೆಂದರೆ ಅವರಿಗೆ ಆಗಲೇ 33 ವರ್ಷ ವಯಸ್ಸು. ಒಂದು ವೇಳೆ 30 ವರ್ಷ ಒಳಗಡೆ ವಯಸ್ಸು ಇದ್ದಿದ್ದರೆ, ಅವರನ್ನು ಉಳಿಸಿಕೊಳ್ಳಬಹುದಾಗಿತ್ತು. ಆದರೆ ಈಗಿನ ಸನ್ನಿವೇಶದಲ್ಲಿ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ.

ಮತ್ತೊಂದು ಕಡೆ ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್‌ ಟೆಸ್ಟ್‌ಗೆ ಕಮ್‌ಬ್ಯಾಕ್ ಮಾಡುವ ಹೊಸ್ತಿಲಲ್ಲಿ ಇದ್ದಾರೆ. ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಅವರಂಥ ಪ್ರತಿಭೆಗಳು ಟೆಸ್ಟ್ ತಂಡದಲ್ಲಿನ ಅವಕಾಶಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಸನ್ನಿವೇಶ ಹೀಗಿರುವಾಗ ಹೆಡ್ ಕೋಚ್ ಗೌತಮ್ ಗಂಭೀರ್ ತಾನೇ ಏಕೆ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ನೀಡುತ್ತಾರೆ ನೀವೇ ಹೇಳಿ? ಒಂದು ವೇಳೆ ಗಂಭೀರ್ ಜಾಗದಲ್ಲಿ ರಾಹುಲ್ ದ್ರಾವಿಡ್ ಇದ್ದಿದ್ದರೆ ‘ನಮ್ಮ ಹುಡುಗ’ ಎಂಬ ಭಾವನೆಯಿಂದ ಮತ್ತೊಂದು ಸರಣಿಗೂ ಉಳಿಸಿಕೊಳ್ಳಲು ಮನಸು ಮಾಡುತ್ತಿದ್ದರು ಎನ್ನಬಹುದಿತ್ತು.

ಆದರೆ ಗಂಭೀರ್ ಮೊದಲೇ ಪ್ರಾಯೋಗಿಕ ಮನುಷ್ಯ, ‘ನೀನ್ ಇಂದ್ರೆ ಇನ್ನೊಬ್ಬ’ ಅನ್ನೋ ಮನಸ್ಥಿತಿ ಅವರದ್ದು. ಈ ಕಾರಣದಿಂದಲೇ ಅಲ್ಲವೇ ಆರ್. ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಯಾವುದೇ ಸುಳಿವು ಇಲ್ಲದೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು!

(ಲೇಖಕರು ಪತ್ರಕರ್ತರು)