ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Naveen Sagar Column: ಅಲೆಕ್ಸ್‌ ಅಂದ್ರೆ ಕೋಟಿ, ಜ್ಯೋತಿರಾಜ ಅಂದ್ರೆ ಕೇವಲ ಕೋತಿ !

ಅಲೆಕ್ಸ್ ಸುರಕ್ಷತೆಗೆ ಹಗ್ಗ ಕಟ್ಟಿಕೊಳ್ಳದೇ, ಯಾವುದೇ ಸುರಕ್ಷತೆ ಸಲಕರಣೆ ಧರಿಸದೇ, ಗ್ರಿಪ್ ಇರುವ ಶೂ ಒಂದನ್ನೇ ಹಾಕಿಕೊಂಡು 1667 ಅಡಿ ಎತ್ತರದ ತೈವಾನ್‌ನ ತೈಪೈ 101‌ ಕಟ್ಟಡವನ್ನು ಬರಿಗಾಲಿನಲ್ಲಿ ಏರಿದ. ಅದು ಹವ್ಯಾಸ. ಅದಕ್ಕೆ ನೆಟ್‌ಫ್ಲಿಕ್ಸ್ ಲೈವ್. ಅವನ ಸಾಹಸ ನೋಡುವುದಕ್ಕೆ ಸಾವಿರಾರು ಜನರು ಸೇರಿರ್ತಾರೆ. ಈ ಒಂದೂವರೆ ತಾಸಿನ ಅವನ ಸಾಹಸಕ್ಕೆ ಅವನಿಗೆ ಸಿಕ್ಕಿದ್ದು 4.5 ಕೋಟಿ ರುಪಾಯಿ.

ಪದಸಾಗರ

ಗೆಳೆಯರಾದ ಕೃಷ್ಣಭಟ್ಟರು ಒಂದು ವಾರದ ಹಿಂದೆ ಫೇಸ್ʼಬುಕ್‌ನಂದು ಪೋಸ್ಟ್ ಹಾಕಿದ್ದರು. ಅವರ ಪೋಸ್ಟನ್ನು ಯಥಾವತ್ ನೀಡಿ ಮುಂದೆ ಮಾತನಾಡುತ್ತೇನೆ.

*

ವೃತ್ತಿಗೂ ಹವ್ಯಾಸಕ್ಕೂ ಇರುವ ವ್ಯತ್ಯಾಸ...‌

ವೃತ್ತಿ: ಕೊನೆಗೌಡ

ಹವ್ಯಾಸ: ಸ್ಕೈ ಸ್ಕ್ರೇಪರ್ ಅಲೆಕ್ಸ್ ಹೊನ್ನಾಲ್ಡ್

ಅಲೆಕ್ಸ್ ಸುರಕ್ಷತೆಗೆ ಹಗ್ಗ ಕಟ್ಟಿಕೊಳ್ಳದೇ, ಯಾವುದೇ ಸುರಕ್ಷತೆ ಸಲಕರಣೆ ಧರಿಸದೇ, ಗ್ರಿಪ್ ಇರುವ ಶೂ ಒಂದನ್ನೇ ಹಾಕಿಕೊಂಡು 1667 ಅಡಿ ಎತ್ತರದ ತೈವಾನ್‌ನ ತೈಪೈ 101‌ ಕಟ್ಟಡವನ್ನು ಬರಿಗಾಲಿ ನಲ್ಲಿ ಏರಿದ. ಅದು ಹವ್ಯಾಸ. ಅದಕ್ಕೆ ನೆಟ್‌ಫ್ಲಿಕ್ಸ್ ಲೈವ್. ಅವನ ಸಾಹಸ ನೋಡುವುದಕ್ಕೆ ಸಾವಿ ರಾರು ಜನರು ಸೇರಿರ್ತಾರೆ. ಈ ಒಂದೂವರೆ ತಾಸಿನ ಅವನ ಸಾಹಸಕ್ಕೆ ಅವನಿಗೆ ಸಿಕ್ಕಿದ್ದು 4.5 ಕೋಟಿ ರುಪಾಯಿ.

ಕೊನೆಗೌಡ ಸೀಸನ್‌ನಲ್ಲಿ ದಿನಕ್ಕೆ ಕನಿಷ್ಠ 40-50 ಅಡಿ ಎತ್ತರದ ಅಡಕೆ ಮತ್ತು ತೆಂಗಿನ ಮರ ಏರು ತ್ತಾನೆ. ಕನಿಷ್ಠ 30 ಮರ ಏರಿದರೂ. 1500 ಅಡಿ ಆಯಿತು. ಕಾಲಿಗೊಂದು ತಾಳೆಬಳ್ಳಿ... ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಹಗ್ಗ ಅವನ ಸುರಕ್ಷತೆಯದ್ದಲ್ಲ, ಅದು ಅವನು ಕೆಳಗೆ ಎಸೆಯುವ ಅಡಕೆ ಗೊನೆಯ ಸುರಕ್ಷತೆಗೆ!

ಇದನ್ನೂ ಓದಿ: Naveen Sagar Column: ವಿನಮ್ರತೆಯಿಂದ ಕೇಳುತ್ತಿದ್ದೇನೆ....ಎಲ್ಲಿದ್ದೀರಾ ಸುದೀಪ್ ?

ಅಲೆಕ್ಸ್ ರೀತಿ ಅವನ ಹತ್ರವೂ ಯಾವ ಸುರಕ್ಷತೆ ಸಲಕರಣೆ ಇರೋದಿಲ್ಲ. ಮೇಲೆ ಹೋಗಿ ಬೆಳೆದ ಗೊನೆಯನ್ನು ಮಾತ್ರವೇ ನೋಡಿ, ಮರಕ್ಕೆ ಪೆಟ್ಟಾಗದಂತೆ ಕೊನೆ ಕೊಯ್ದು, ಕೆಳಗೆ ರಪ್ಪನೆ ಬೀಳದಂತೆ ಹಗ್ಗದ ಮೇಲೆ ಬಿಡುವ ಚಾಣಾಕ್ಷತೆ ಇದ್ದರೂ ಅವನ ಕೆಲಸವನ್ನು ಲೈವ್ ಸ್ಟ್ರೀಮ್ ಮಾಡುವವರಿಲ್ಲ. ಅವನಿಗೆ ಸಿಗುವ ಕಾಸು ಕೂಡಾ ಸಾವಿರದ ಲೆಕ್ಕದಲ್ಲಿ!‌

ಇಲ್ಲಿ ಯಾರ ಸಾಹಸವೂ ಸಣ್ಣದಲ್ಲ. ಆದರೆ, ನಾವು ಅವರ ಸಾಹಸವನ್ನು ಸಾಹಸ ಎಂದು ಪರಿಗಣಿ ಸುವ, ಅವರ ಪರಿಣತಿಯನ್ನು ನೋಡುವ/ತೋರಿಸುವ ನಮ್ಮ ಪರಿಗಣನೆಯಲ್ಲಿ ವ್ಯತ್ಯಾಸವಿದೆ ಎಂದಷ್ಟೇ ಹೇಳುವುದು ನನ್ನ ಉದ್ದೇಶ.

*

ಈ ಪೋಸ್ಟ್ʼಗೆ ಸಹಜವಾಗಿಯೇ ವಿರೋಧದ ಕಮೆಂಟ್ ಬಂದವು. ಇದು ಅಸಂಬದ್ಧ ಹೋಲಿಕೆ ಅಥವಾ ಅಸಮಂಜಸ ಹೋಲಿಕೆ ಎಂಬ ಪ್ರತಿಕ್ರಿಯೆಗಳು ಕೇಳಿ ಬಂದವು. ನಿಜ, ಐವತ್ತು ಅಡಿ ಎತ್ತರದ ಒಟ್ಟು ಮೂವತ್ತು ಮರಗಳನ್ನು ಒಂದು ವರ್ಷದಲ್ಲಿ ಬಿಡಿಬಿಡಿಯಾಗಿ ಏರಿ ಇಳಿಯುವುದಕ್ಕೂ, ಒಂದೇ ಸಲಕ್ಕೆ 1667 ಅಡಿ ಎತ್ತರದ ಕಟ್ಟಡ ಏರುವುದಕ್ಕೂ ಭಾರಿ ವ್ಯತ್ಯಾಸವಿದೆ.

ಹೋಲಿಕೆ ತಪ್ಪೇ. ಕ್ರಿಕೆಟ್ ಪಂದ್ಯದಲ್ಲಿ ಶತಕ ಹೊಡೆದವನ ಎದುರು ‘ನಾನು ಹತ್ತು ಪಂದ್ಯದಿಂದ ನಿನಗಿಂತ ಹತ್ತು ರನ್ ಜಾಸ್ತಿ ಗಳಿಸಿದ್ದೇನೆ’ ಎಂದರೆ ಹಾಸ್ಯಾಸ್ಪದ ಅನಿಸುವುದಿಲ್ಲವೇ? ಹಾಗೆಯೇ ಈ ಹೋಲಿಕೆಯೂ ಅನಿಸಿತ್ತು. ಆದರೆ ಕೃಷ್ಣಭಟ್ ಅವರ ಪೋನ ಕೊನೆಯ ಸಾಲು ಆ ಹೋಲಿಕೆಯ ಉದ್ದೇಶವನ್ನು ಹೇಳಿತ್ತು. ಅದರಲ್ಲಿ ಅಸಲಿ ಅರ್ಥವಿತ್ತು. ಇಬ್ಬರದ್ದೂ ಸಾಹಸವೇ.

ಆದರೆ ಒಂದನ್ನು ಸಾಹಸ ಅಂತ ಪರಿಗಣಿಸಿದರೆ, ಇನ್ನೊಂದನ್ನು ಕೂಲಿ/ನಿತ್ಯಕರ್ಮ ಎಂಬಂತೆ ನೋಡಲಾಗುತ್ತದೆ. ಬಹುಶಃ ಆ ಮಾತಿಗೆ ಯಾರೂ ತಕರಾರು ಮಾಡಲಾರರು. ಐವತ್ತು ಅಡಿಯಿಂದ ಕೆಳಗೆ ಬಿದ್ದರೂ ಸಾವೇ. ಐನೂರು ಅಡಿಯಿಂದ ಕೆಳಗೆ ಬಿದ್ದರೂ ಸಾವೇ. ಎರಡರಲ್ಲೂ ರಿಸ್ಕ್ ಇದೆ. ‌

Screenshot_2 R

ರಿಸ್ಕ್ ಲೆವೆಲ್ ಬದಲಿರಬಹುದಷ್ಟೆ. ವೈಯಕ್ತಿಕವಾಗಿ ನನಗೂ ಆ ಹೋಲಿಕೆ ಅಸಮಂಜಸ ಅನಿಸಿದ್ದು ಹೌದಾದರೂ ಅವರ ಕೊನೆಯ ಸಾಲು ಒಂದಷ್ಟು ಆಲೋಚನೆಗೆ ಒಡ್ಡಿಟ್ಟಿತು. ಇನ್‌ʼಫ್ಯಾಕ್ಟ್‌, ಕೃಷ್ಣ ಭಟ್ಟರ ಪೋನ ಮೊದಲ ಪ್ಯಾರಾಗ್ರಾಫ್ ಓದುವ ಹೊತ್ತ ನನ್ನ ಮನಃಪಟಲದ ಮೇಲೆ ಬಂದವನು ಜ್ಯೋತಿರಾಜ್.

ಆದರೆ ಬಹಳಷ್ಟು ಬಾರಿ ನನ್ನನ್ನು ಕಾಡುತ್ತಿದ್ದ ಇನ್ನೊಂದು ವಿಷಯವಿತ್ತು. ನಾನು ಪ್ರತಿ ಬಾರಿ ಒಲಿಂಪಿಕ್ಸ್‌ʼನ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳನ್ನು, ಈಜುಸ್ಪರ್ಧೆಗಳನ್ನು ಇನ್ನು ಕೆಲವು ಆಟಗಳನ್ನು ವೀಕ್ಷಿಸುತ್ತಿದ್ದಾಗಲೆಲ್ಲ ನನಗೆ ನನ್ನೂರಿನ ಸರ್ಕಸ್ ಕಂಪನಿಗಳು ಕಣ್ಮುಂದೆ ಬರುತ್ತಿದ್ದವು. ನಮ್ಮೂರ ಬೀದಿಗಳಿಗೆ ಬರುತ್ತಿದ್ದ ದೊಂಬರಾಟ ಎಂದು ಕರೆಯಲ್ಪಡುತ್ತಿದ್ದ ಸಾಹಸಗಳು ನೆನಪಿಗೆ ಬರುತ್ತಿದ್ದವು.

ಸರ್ಕಸ್ ಕಂಪನಿಗಳಲ್ಲಿ ರಬ್ಬರ್ ಮೈ ಎಂಬಂತೆ, ಸ್ಪ್ರಿಂಗ್ ಇರುವ ದೇಹದಂತೆ ಪಲ್ಟಿಗಳು, ಹಾರಾಟ, ನೆಗೆತ ಎಲ್ಲವೂ ನೋಡಿದಾಗ, ದೊಂಬರಾಟದ ಮಕ್ಕಳು, ಹಗ್ಗದ ಮೇಲೆ ನಡೆಯುತ್ತಾ, ಬ್ಯಾಕ್ ಫ್ಲಿಪ್, ಸಮರ್‌ಸಾಲ್ಟ್‌ʼಗಳ ಸರಣಿಯನ್ನೇ ಮಾಡುವುದನ್ನು ನೋಡಿದಾಗ, ಇವರೆಲ್ಲ ಯಾಕೆ ಏಷ್ಯನ್ ಗೇಮ್ಸ್ ಅಥವಾ ಒಲಿಂಪಿಕ್ಸ್‌ʼಗೆ ಹೋಗಬಾರದು? ಇವರ ಟ್ಯಾಲೆಂಟ್ ಯಾಕೆ ಇಲ್ಲಿ ವ್ಯರ್ಥವಾಗ್ತಿದೆ.

ಜಿಮ್ನಾಸ್ಟಿಕ್ಸ್ ಅಂದ್ರೆ ಕೊರಿಯಾ, ಜಪಾನ್, ಚೀನಾ ದೇಶಗಳದ್ದೇ ಪಾರುಪತ್ಯ. ನಮ್ಮ ದೇಶದವರು ಆ ವಿಭಾಗದಲ್ಲಿ ಗೆಲ್ಲುವುದಿರಲಿ, ಪಾಲ್ಗೊಳ್ಳುವುದೂ ಇಲ್ಲ. ಇದ್ಯಾಕೆ ಹೀಗೆ? ಈ ರೀತಿ ಸರ್ಕಸ್ ಪಟು ಗಳನ್ನು, ದೊಂಬರಾಟದ ಮಕ್ಕಳನ್ನು ಸರಿಯಾಗಿ ತರಬೇತಿ ಕೊಟ್ಟು ತಯಾರು ಮಾಡಿದರೆ, ಒಲಿಂಪಿಕ್ಸ್ ನಂದು ಪದಕ ತರಲಾರರೇ? ನಮ್ಮಲ್ಲಿ ಇಂಥ ವಿಭಾಗಗಳಲ್ಲಿ ಪ್ರತಿಭೆ ಗುರುತಿಸುವ ಕೆಲಸ ಆಗುತ್ತಿಲ್ಲವೇಕೆ? ಈ ಪ್ರಶ್ನೆ ಇಂದಿಗೂ ಕಾಡುತ್ತದೆ. ಜಿಮ್ನಾಸ್ಟಿಕ್ಸ್‌ʼಗಾಗಿ ಅಕಾಡೆಮಿಗಳು, ತರಬೇತಿ ಕೇಂದ್ರಗಳು ಎಲ್ಲವೂ ಇಲ್ಲಿವೆ.

Screenshot_3 R

ಆದರೆ ಅಲ್ಲಿ ಪ್ರತಿಭಾ ಶೋಧ ನಡೆಯುವುದಿಲ್ಲ. ಅಡ್ಮಿಶನ್ ಆದವರಿಗೆ ತರಬೇತಿ ಕೊಟ್ಟು ತಯಾರು ಮಾಡಲಾಗುತ್ತದೆ. ನಮ್ಮಲ್ಲಿ ಹಾಡು, ನೃತ್ಯ ಇಂಥ ವಿಭಾಗಕ್ಕೆ ಮಾತ್ರವೇ ಪ್ರತಿಭಾ ಶೋಧ ನಡೆಯು ತ್ತದೆಯೇ ಹೊರತು, ಇತರ ಕೌಶಲಗಳ ಶೋಧ ಆಗುವುದೇ ಇಲ್ಲ. ರೈಲ್ವೇ ಸ್ಟೇಷನ್‌ನಲ್ಲಿ ಹಾಡುತ್ತಿದ್ದ ರೋನು ಮಂಡಲ್‌ಗೆ ರಿಯಾಲಿಟ ಶೋದಲ್ಲಿ ಹಾಡುವ ಅವಕಾಶ ಸಿಗುತ್ತದೆ. ಆದರೆ ಅದೇ ರೈಲ್ವೇ ಸ್ಟೇಷನ್‌ನಲ್ಲಿ ಒಬ್ಬ ಐವತ್ತು ಕೆ.ಜಿ. ಭಾರ ಹೊರುವ ಪೈಲ್ವಾನ್ ಇದ್ದರೆ, ಅವನನ್ನು ಒಬ್ಬ ವೇಟ್ ಲಿಫ್ಟ್ ಆಗಿ ಮಾಡುವ ದಿಕ್ಕಿನಲ್ಲಿ ದೇಶ ಯೋಚಿಸುವುದಿಲ್ಲ. ‌

ಐವತ್ತು-ಅರವತ್ತು ಅಡಿ ಆಳದ ತೋಟದಬಾವಿಗೆ ಡೈವ್ ಹೊಡೆಯುವ ಹಳ್ಳಿ ಹುಡುಗರನ್ನು ತರಬೇತಿ ಕೊಟ್ಟು ಕ್ರೀಡಾಪಟುಗಳನ್ನಾಗಿ ಮಾಡುವ ಆಲೋಚನೆ ನಮಗೆ ಬರುವುದಿಲ್ಲ. ಹಾವು ಹಿಡಿಯುವವನಿಗೆ ಇಲ್ಲಿ ಬೆಲೆ ಸಿಗುವುದಿಲ್ಲ. ಆದರೆ ಅನ್ಯದೇಶಗಳು ತಮ್ಮ ದೇಶದಲ್ಲಿ ಹಾವು ಹಿಡಿಯುವಾತನನ್ನು ‘ಉರಗತಜ್ಞ’ ಎಂದು ನ್ಯಾಷನಲ್ ಜಿಯೋಗ್ರಫಿಕಲ್ ಅಥವಾ ಡಿಸ್ಕವರಿ ಚಾನೆಲ್ ಮೆಟೀರಿಯಲ್ ಮಾಡುತ್ತವೆ.

ನ್ಯಾಚುರಲ್ ಟ್ಯಾಲೆಂಟ್ ಗಳನ್ನು ಸ್ಪರ್ಧಾತ್ಮಕ ಟ್ಯಾಲೆಂಟ್‌ಗಳಾಗಿ ಬದಲಾಯಿಸುವ ಮನಸ್ಥಿತಿ ನಮ್ಮ ದೇಶದಲ್ಲಿಲ್ಲ. ಕೆಲವೊಮ್ಮೆಯಂತೂ ಆತನ/ಆಕೆಯ ವಿಶೇಷ ಪ್ರತಿಭೆ ಬೆಳಗಲು ವಿದ್ಯಾರ್ಹತೆ, ಇಂಗ್ಲಿಷ್ ಮಾತುಗಾರಿಕೆ ಇಂಥವುಗಳೂ ಮುಖ್ಯವಾಗಿ ಬಿಡುತ್ತವೆ.

ನಾನಿಲ್ಲಿ ಅಲೆಕ್ಸ್ ಹೊನಾಲ್ಡ್‌ʼನ ಸಾಧನೆ ಮತ್ತು ಸಾಹಸವನ್ನು ಸ್ವಲ್ಪವೂ ಕಡೆಗಣಿಸುತ್ತಿಲ್ಲ. ಯಾವ ಸಲಕರಣೆಗಳ ಸಹಾಯವಿಲ್ಲದೆ ಹಲ್ಲಿಯಂತೆ, ಕೋತಿಯಂತೆ ಗೋಡೆ ಏರುವುದು ಸುಲಭದ ಮಾತೇ ಅಲ್ಲ. ಗೋಡೆಯ ಮಾತು ಹಾಗಿರಲಿ, ಹತ್ತು ಅಡಿಯ ಕಂಬವನ್ನೂ ನಾವು ಹಾಗೆ ಏರಲಾರೆವು. ಹತ್ತಡಿ ಎತ್ತರದಿಂದ ಕೆಳಗೊಮ್ಮೆ ನೋಡಿದರೆ ಕಾಲುಗಳು ನಡುಗಬಹುದು, ಮೈಬಿಸಿಯಾಗಿ ಬೆವರಬ ಹುದು.

ಹಾಗಿರುವಾಗ ಜೀವಭಯ ಲೆಕ್ಕಿಸದೇ ಥ್ರಿಲ್‌ಗಾಗಿ, ಸಾಹಸವೆಂಬ ಹುಂಬತನದಿಂದ, ದಾಖಲೆ ಪುಸ್ತಕ ಸೇರುವ ಹಠದಿಂದ, ಬಹುಮಾನದ ಮೊತ್ತ ಗೆಲ್ಲುವ ಗುರಿಯಿಂದ ಜೀವವನ್ನು ಪಣಕ್ಕಿಟ್ಟು 1667 ಅಡಿ ಏರುವುದು.. ಅದರಲ್ಲಿ ಯಶಸ್ವಿಯಾಗುವುದು ಹುಡುಗಾಟ ಅಲ್ಲವೇ ಅಲ್ಲ.

ಆದರೆ ಅಂಥದ್ದೇ ಒಬ್ಬ ಸಾಹಸಿ ನಮ್ಮ ದೇಶದಲ್ಲಿದ್ದಾನೆ. ನಮ್ಮದೇ ರಾಜ್ಯದಲ್ಲಿದ್ದಾನೆ. ಸರಿಯಾದ ಮಾರ್ಗದರ್ಶನ ಮತ್ತು ಬೆಂಬಲ ಸಿಕ್ಕಿದ್ದಿದ್ದರೆ ಬಹುಶಃ ಅಲೆಕ್ಸ್ ಇರುವ ಜಾಗದಲ್ಲಿ ಅವನಿದ್ದಿರು‌ ತ್ತಿದ್ದ. ಕರ್ನಾಟಕದ ಸ್ಪೈಡರ್ ಮ್ಯಾನ್, ಕೋತಿರಾಜ ಎಂಬ ಅಡ್ಡ ಹೆಸರಿಗೆ ಸೀಮಿತನಾದ ಜ್ಯೋತಿ ರಾಜ್, ಅಲೈನ್ ರಾಬರ್ಟ್‌ನನ್ನೂ ಮೀರಿಸಿರುತ್ತಿದ್ದ.

ಇದನ್ನು ದೇಶ ನಿರ್ಲಕ್ಷಿಸಿದೆ. ಅಲೆಕ್ಸ್‌ʼನ ಸಾಹಸವನ್ನು ನೆಟ್‌ ಫ್ಲಿಕ್ಸ್ ಚಂದಾದಾರಿಕೆ ಕೊಟ್ಟು ನೋಡುತ್ತಿದೆ, ಕೊಂಡಾಡುತ್ತಿದೆ. ಆತ ಕೋಟಿಗಟ್ಟಲೆ ಜೇಬಿಗಿಳಿಸುವುದನ್ನು ನೋಡಿ ‘ವಾಹ್ ವಾಹ್!’ ಅಂತಿದೆ.‌ ಹೌದು. ತೈಪೆ 101 ಎಂಬ ತೈವಾನ್‌ನ ಎತ್ತರದ ಕಟ್ಟಡ ಏರಿದ ಅಲೆಕ್ಸ್‌ʼಗೆ ಸಿಕ್ಕಿದ್ದು ಬರೋಬ್ಬರಿ ನಾಲ್ಕೂವರೆ ಕೋಟಿ ರುಪಾಯಿ.

ನೆಟ್‌ಫ್ಲಿಕ್ಸ್ ಮೂಲಕ ಆತನ ಸಾಹಸವನ್ನು ನೋಡಿದವರ ಸಂಖ್ಯೆ ಕನಿಷ್ಠ ಆರು ಕೋಟಿ. ಅಲೆಕ್ಸ್ ಕಟ್ಟಡ ಏರುವ ರೀತಿಗೂ ಜ್ಯೋತಿರಾಜ್ ಏರುವ ರೀತಿಗೂ ಇರುವ ವ್ಯತ್ಯಾಸವಾದರೂ ಏನು? ಇಬ್ಬರೂ ಅದೇ ರೀತಿ ಸೀಮೆಸುಣ್ಣದ ಪುಡಿ ಮೂಲಕ ಕೈ ಒರೆಸಿ ಒರೆಸಿ ಮೇಲಕ್ಕೇರುತ್ತಾರೆ. ಅಲೆಕ್ಸ್‌ʼ ಗಾದರೂ ಕಾಲಿನಲ್ಲಿ ಹೈಕ್ಲಾಸ್ ಶೂಗಳಿವೆ. ಜ್ಯೋತಿರಾಜ್ ಬಳಿ ಅದೂ ಇಲ್ಲ. ಎಷ್ಟೋ ವರ್ಷ ಆತ ಬರಿಗಾಲ ದುರ್ಗದ ಬಂಡೆಗಳನ್ನು ಏರುತ್ತಿದ್ದ.

ಜ್ಯೋತಿರಾಜ್‌ನ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವುದು ನಮ್ಮಿಂದ ಸಾಧ್ಯ ವಿರಲಿಲ್ಲವೇ? ಜ್ಯೋತಿರಾಜ್‌ನನ್ನು ನಾವು ಬಳಸಿಕೊಂಡಿದ್ದು ಹೇಗೆ? ಜೋಗ ಜಲಪಾತದಲ್ಲಿ ಬಿದ್ದಿರೋ ಹೆಣ ಎತ್ತೋದಕ್ಕೆ. ಅವನಿಗೆ ಇಲ್ಲದ ಸಿನಿಮಾ ಹುಚ್ಚು ಹತ್ತಿಸಿ ಅವನ ಹೆಸರಂದು ಅಗ್ಗದ ಸಿನಿಮಾ ಮಾಡೋಕೆ. ಇದಿಷ್ಟು ಬಿಟ್ಟರೆ ಅವನು ಅವನ ಹೊಟ್ಟೆಪಾಡಿಗೆ ದಿನವೂ ಸರ್ಕಸ್ ಮೇಲೆ ಯೇ ಅವಲಂಬಿತ.

ದೇಶ ಅವನನ್ನು ಆಸ್ತಿಯಂತೆ ಕಾಪಾಡಿಕೊಳ್ಳಬೇಕಿತ್ತು. ಅವನ ಸಹಜ ಪ್ರತಿಭೆಗೊಂದು ರೂಪ ಕೊಡಬೇಕಿತ್ತು. ಕಲ್ಲುಬಂಡೆಯಂತಿರುವ ಅವನನ್ನು ಕೆತ್ತಿ ಪ್ರತಿಮೆಯಾಗಿಸಬೇಕಿತ್ತು. ಮರಡೋನಾ ಕಾಲಿಗೆ ಇನ್ಶೂರೆ ಇದ್ದಂತೆ, ಜ್ಯೋತಿರಾಜನ ಜೀವಕ್ಕೆ ಇನ್ಶೂರೆ ಮಾಡಿಸಿಡಬೇಕಿತ್ತು.

‘ಅಲೈನ್ ರಾಬರ್ಟ್‌ಗೆ ಉತ್ತರವಾಗಿ ನಮ್ಮ ಜ್ಯೋತಿರಾಜ್’ ಎಂದು ಜಗತ್ತಿನ ಮುಂದೆ ಎದೆತಟ್ಟಿ ಹೇಳಬೇಕಿತ್ತು. ಆದರೆ ಜ್ಯೋತಿ ರಾಜ್ ನಮಗೆ ದೇಶದ ಪ್ರತಿನಿಧಿಯಾಗಿ ಕಾಣುವುದೇ ಇಲ್ಲ. ಇಂದು ಇಂಟರ್‌ನೆಟ್ ಹೊಕ್ಕು ನೋಡಿದರೆ ಅಲೆಕ್ಸ್ ಹೊನಾಲ್ಡ್ ಮತ್ತು ಅಲೈನ್ ರಾಬರ್ಟ್ ಬಗ್ಗೆ ವಿಕಿಪಿಡಿ ಯಾ ಪೇಜ್‌ಗಳು ಸಿಗುತ್ತವೆ. ಅವರ ಸಾಧನೆಗಳ ಬಗ್ಗೆ ಬಯೋಪಿಕ್ ಬಂದಿವೆ, ಆತ್ಮಚರಿತ್ರೆಯ ಪುಸ್ತಕ ಗಳು ಬಂದಿವೆ. ‌

ಡಾಕ್ಯುಮೆಂಟರಿಗಳಾಗಿವೆ. ಅವರ ಪ್ರತಿ ಸಾಹಸಗಳೂ ದಿನಾಂಕಗಳೊಂದಿಗೆ, ಎತ್ತರದ ವಿವರ ಗಳೊಂದಿಗೆ ದಾಖಲಾಗಿವೆ. ದೇಶ-ವಿದೇಶಗಳ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಆದರೆ ಜ್ಯೋತಿರಾಜನಿಗೆ ಸಿಕ್ಕಿದ್ದೇನು? ಬಹುಶಃ ಪ್ರವಾಸಿಗರ ಚಪ್ಪಾಳೆ, ಪುಡಿಗಾಸು, ಅಂದು ಇಂದು ಲೋಕಲ್ ಮೈಲೇಜ್. ಜ್ಯೋತಿರಾಜ್ ಜೋಗ ಜಲಪಾತದ ಆರೋಹಣಕ್ಕೆ ಹೋದಾಗ ಅದು ಜಾಗತಿಕ ಮಟ್ಟದ ಸುದ್ದಿಯಾಗಬೇಕಿತ್ತು.

ಆದರೆ ಅವನನ್ನು ಆ ಸಾಹಸಕ್ಕೆ ಕೈಹಾಕದಂತೆ ನಿರ್ಬಂಧಿಸಲು ಮುಂದಾಗಿತ್ತು ಸರಕಾರ. ಜ್ಯೋತಿ ರಾಜ್ ಬಿಸಿರಕ್ತದ ಯುವಕನಿದ್ದಾಗ ಆತನ ಸಾಹಸಕ್ಕೆ ಸೂಕ್ತ ಮನ್ನಣೆ ಮತ್ತು ಪ್ರೋತ್ಸಾಹ ಸಿಕ್ಕಿದ್ದರೆ ಇಂದು ನೆಟ್‌ಫ್ಲಿಕ್ಸ್‌ʼಗೆ ಭಾರತವೇ ಸವಾಲು ಹಾಕಬಹುದಿತ್ತು- ‘ಅಲೆಕ್ಸ್ ಹೊನಾಲ್ಡ್‌ʼ ನನ್ನು ಮೀರಿಸುವ ಸಾಹಸಿ ನಮ್ಮಲ್ಲಿದ್ದಾನೆ’ ಎಂದು. ಜ್ಯೋತಿರಾಜ್ ಮತ್ತು ಅಲೆಕ್ಸ್ ಇಬ್ಬರೂ ಸಮಾನ ವಯಸ್ಕರು. ಇಬ್ಬರೂ ನಲವತ್ತರ ಹರೆಯದಲ್ಲಿದ್ದಾರೆ.

ಈ ಥರದ ಸಾಹಸಗಳಿಂದ ಇದು ನಿವೃತ್ತಿಗೊಳ್ಳುವ ವಯಸ್ಸು ಅಂದರೂ ತಪ್ಪಿಲ್ಲ. ಆದರೆ ಅಲೆಕ್ಸ್ ಬೆನ್ನ ಹಿಂದೆ ಸಾಧನೆ, ದಾಖಲೆ, ಹಣ ಮತ್ತು ಖ್ಯಾತಿಯ ಗರಿ. ಜ್ಯೋತಿರಾಜ್ ಇಂದಿಗೂ ಅದೇ ದುರ್ಗದ ಗುಡ್ಡಗಳ ಮುಂದೆ ಮಂಗಾಟ ಮಾಡುವ ಕೋತಿರಾಜನಷ್ಟೇ. ಕೃಷ್ಣಭಟ್ಟರ ಕೊನೆಯ ಸಾಲು ಧ್ವನಿಸಲು ಹೊರಟದ್ದು ಇದನ್ನೇ. ಅವರು ಕೊನೆಗೌಡನ ಬದಲು ಜ್ಯೋತಿರಾಜನನ್ನು ಉದಾಹರಿಸಿದ್ದರೆ ಅದು ಪರಿಪೂರ್ಣ ಮತ್ತು ಸಂಪೂರ್ಣ‌ ಒಪ್ಪಿತ ಪೋಸ್ಟ್ ಆಗಿರುತ್ತಿತ್ತು.

ನವೀನ್‌ ಸಾಗರ್‌

View all posts by this author