ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ಅಲೋಕ ಮತ್ತು ಭೈರವ: ಬುದ್ಧ ಮತ್ತು ಶಿವ

ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಹಂಗ್ ಡಾವೊ ವಿಪಸ್ಸನ ಭವನ ಕೇಂದ್ರದ ಗುರು. ಕೋಲ್ಕತಾದ ವಿಮಾನ ನಿಲ್ದಾಣದ ಬಳಿ ಈ ಬಿಕ್ಕುಗಳ ತಂಡವನ್ನು ಬೀದಿನಾಯಿಗಳ ಗುಂಪೊಂದು ಸೇರಿಕೊಂಡಿತು. ಸ್ವಲ್ಪ ದೂರ ನಡೆದು ಉಳಿದೆಲ್ಲ ನಾಯಿಗಳು ಹಿಂದುಳಿದರೆ, ಕಂದು-ಬಿಳಿ ಬಣ್ಣದ, ಹಣೆಯ ಮೇಲೆ ಹೃದಯದಾಕಾರದ ಬಿಳಿ ಬಣ್ಣವಿದ್ದ ಈ ನಾಯಿ ಬಿಡದೇ ಹಿಂಬಾಲಿಸಿತು. ಏಳೆಂಟು ದಿನಗಳ ಕಾಲ ಜತೆಗೇ ಸಾಗಿದ ಈ ನಾಯಿಯನ್ನು ಕಂಡು ಈತ ಎಲ್ಲರಂತಲ್ಲ, ಇದರಲ್ಲೇನೋ ವಿಶೇಷತೆ ಇದೆ ಎಂದೆನಿಸಿತು.

ಕಾಡುದಾರಿ

‘ಜಾಗತಿಕ ಶಾಂತಿಯ ದೂತ’ ಎನಿಸಿಕೊಂಡ ಶ್ವಾನ ಅಲೋಕ, ಭಾರತಕ್ಕೆ ಕ್ಲುಪ್ತ ಭೇಟಿ ನೀಡಿದೆ. ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಕಠಿಣ ತೀರ್ಪಿನ ಹಿನ್ನೆಲೆಯಲ್ಲಿ ಅಲೋಕನ ನಡಿಗೆ, ಸಾಧನೆ, ಅದು ನೀಡುತ್ತಿರುವ ಸಂದೇಶಗಳ ಪುನರಾವಲೋಕನ ಮಾಡಬೇಕಿದೆ. ಹಾಗೇ ಭೈರವ ಎಂಬ ನಾಯಿಯ ಕತೆಯೂ ಕುತೂಹಲ ಕಾರಿಯಾಗಿದೆ.

ಇದು ಎರಡು ಭಾರತೀಯ ಬೀದಿ ನಾಯಿಗಳ ಕತೆ. ಅಲೋಕ ಮತ್ತು ಭೈರವ. ಒಂದು ಸಾವಿರಾರು ಮೈಲು ನಡಿಗೆಯಲ್ಲಿ ಬೌದ್ಧ ಬಿಕ್ಕುಗಳ ಜೊತೆಗೆ ಸಾಗಿ ಜಾಗತಿಕ ಶಾಂತಿ ದೂತ ಎನಿಸಿದರೆ, ಇನ್ನೊಂದು ಶಿವಭಕ್ತರಿಗೆ ಇಷ್ಟವಾಗಿ ಸಾಕ್ಷಾತ್ ಭೈರವ ಎನಿಸಿದೆ. ಅಲೋಕನ ಕತೆ 2022ರಲ್ಲಿ ಶುರುವಾಗುತ್ತದೆ. ಬಹುಶಃ ಅದಕ್ಕೆ ಆಗ ಎರಡುವರೆ- ಮೂರು ವರ್ಷ ವಯಸ್ಸು. ಕೋಲ್ಕತ್ತಾದ ಬೀದಿಗಳಲ್ಲಿ ಅಡ್ಡಾಡುತ್ತಿದ್ದ ಬೀದಿ ನಾಯಿಗಳಲ್ಲಿ ಅದೂ ಒಂದು. 2022 ಡಿಸೆಂಬರ್'ನಲ್ಲಿ ಒಂದು ಬೌದ್ಧ ಬಿಕ್ಕುಗಳ ತಂಡ ಕೋಲ್ಕತಾದಿಂದ 112 ದಿನಗಳ ಶಾಂತಿ ಪಾದಯಾತ್ರೆ ಆರಂಭಿಸಿತ್ತು. ಈ ತಂಡದ ನಾಯಕ ಬಿಕ್ಕು ಪನ್ನಕರ. ಇವರು ವಿಯೆಟ್ನಾಂ- ಅಮೆರಿಕ ಮೂಲದ ಥೇರಾವಾದ ಬೌದ್ಧ ಸನ್ಯಾಸಿ.

ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಹಂಗ್ ಡಾವೊ ವಿಪಸ್ಸನ ಭವನ ಕೇಂದ್ರದ ಗುರು. ಕೋಲ್ಕತಾದ ವಿಮಾನ ನಿಲ್ದಾಣದ ಬಳಿ ಈ ಬಿಕ್ಕುಗಳ ತಂಡವನ್ನು ಬೀದಿನಾಯಿಗಳ ಗುಂಪೊಂದು ಸೇರಿಕೊಂಡಿತು. ಸ್ವಲ್ಪ ದೂರ ನಡೆದು ಉಳಿದೆಲ್ಲ ನಾಯಿಗಳು ಹಿಂದುಳಿದರೆ, ಕಂದು-ಬಿಳಿ ಬಣ್ಣದ, ಹಣೆಯ ಮೇಲೆ ಹೃದಯದಾಕಾರದ ಬಿಳಿ ಬಣ್ಣವಿದ್ದ ಈ ನಾಯಿ ಬಿಡದೇ ಹಿಂಬಾ ಲಿಸಿತು.

ಏಳೆಂಟು ದಿನಗಳ ಕಾಲ ಜತೆಗೇ ಸಾಗಿದ ಈ ನಾಯಿಯನ್ನು ಕಂಡು ಈತ ಎಲ್ಲರಂತಲ್ಲ, ಇದರಲ್ಲೇ ನೋ ವಿಶೇಷತೆ ಇದೆ ಎಂದೆನಿಸಿತು. ಸಂಸಾರ ಬಂಧನ ತೊರೆದ ಈ ಯತಿಗಳಿಗೇ ಇದರ ಮೇಲೆ ಅಕ್ಕರೆ ಬೆಳೆಯಿತು. ಹಲವು ಕಡೆ ಅದುವೇ ತಂಡವನ್ನು ಮುನ್ನಡೆಸಿತು. ಬಿಕ್ಕು ಪನ್ನಕರ ಅದಕ್ಕೆ ಪ್ರೀತಿ ಯಿಂದ ‘ಅಲೋಕ’ ಎಂದು ಹೆಸರಿಟ್ಟರು. ಅಲೋಕ ಎಂದರೆ ಬೆಳಕು, ದಿವ್ಯತೆ, ಸ್ಪಷ್ಟತೆ. ಅದು ಬುದ್ಧನ ಇನ್ನೊಂದು ಹೆಸರು ಕೂಡ. ಬಿಕ್ಕುಗಳ ಜೊತೆಗೆ ನೂರಾರು ದಿನವೂ ನಡೆದೇ ಸಾಗಿದ ಅಲೋಕ ಬೋಧಗಯಾ, ಸಾರನಾಥ, ಕುಶಿನಗರ, ವೈಶಾಲಿಗಳಿಗೆಲ್ಲ ಹೋದ. ಅಲ್ಲಿಂದ ಬಿಕ್ಕುಗಳು ನೇಪಾಲಕ್ಕೆ ದಾಟಿಕೊಳ್ಳುವಾಗ, ಈತನನ್ನು ಗಯಾದಲ್ಲಿ ಬಿಡಬೇಕೋ ನೇಪಾಳಕ್ಕೆ ಕರೆದೊಯ್ಯ ಬೇಕೋ ಎಂಬ ವಿಚಾರ ಚರ್ಚೆಗೆ ಬಂತು.

ಅಷ್ಟರಲ್ಲಿ ಅವನು 3500 ಕಿಲೋಮೀಟರ್ ನಡೆದಿದ್ದ. ಅಲ್ಲೇ ಬಿಟ್ಟರೆ ಮತ್ತೆ ಆತ ಬೀದಿ ಪಾಲಾಗು ತ್ತಿದ್ದ. ಅವನ ಜೊತೆಗಾರಿಕೆಯಲ್ಲಿ ಬಿಕ್ಕುಗಳಿಗೆ ಶಾಂತಿ, ಆನಂದ, ಅಕ್ಕರೆ ಕಂಡಿತ್ತು. ಹೀಗಾಗಿ ನೇಪಾಳಕ್ಕೂ, ಮುಂದೆ ಅಮೆರಿಕಕ್ಕೂ ಕರೆದೊಯ್ಯೋಣ ಎಂದುಕೊಂಡರು. ಹಾಗೇ ಮಾಡಿದರು.

ಇದನ್ನೂ ಓದಿ: Harish Kera Column: ಕಪ್ಪು ಸುಂದರಿಗೆ ಒಂದು ಪ್ರೇಮ ಪತ್ರ

ಭಾರತದ ಬೀದಿ ನಾಯಿಗೆ ಅಮೆರಿಕದ ಪ್ರವೇಶ ಅಷ್ಟೇನೂ ಸುಲಭವಾಗಲಿಲ್ಲ. ದಾಖಲೆಗಳು ಬೇಕಿತ್ತು. ಲಸಿಕೆಗಳನ್ನು ಹಾಕಿಸಬೇಕಿತ್ತು. ಅದೆಲ್ಲವನ್ನೂ ಮಾಡಿಸಲಾಯ್ತು. ಇದಕ್ಕೆಲ್ಲ ಹಣಕ್ಕಾಗಿ ಯತಿಗಳು ನಿಧಿ ಸಂಗ್ರಹಕ್ಕೆ ಮುಂದಾದರು. 12 ಲಕ್ಷದಷ್ಟು ಹಣ ಸಂಗ್ರಹವಾಯ್ತು. ಅಲೋಕನಿಗೆ ಅಮೆರಿಕದ ವೀಸಾ ಸಿಕ್ಕಿತು. ವಾಷಿಂಗ್ಟನ್‌ನಲ್ಲಿ ವಿಮಾನ ನಿಲ್ದಾಣದಲ್ಲೇ 28 ದಿನ ಕ್ವಾರಂಟೈನ್‌ನಲ್ಲಿ ಇರಬೇಕಾಯ್ತು. ವೈದ್ಯಕೀಯ ಪರೀಕ್ಷೆಗಳಿದ್ದವು. ಅದನ್ನೂ ಶಾಂತಿಯಿಂದಲೇ ಉತ್ತರಿಸಿ ‘ಫಿಟ್’ ಎನಿಸಿದ.

2025ರಲ್ಲಿ ಬಿಕ್ಕುಗಳು ಇನ್ನೊಂದು ಶಾಂತಿ ನಡಿಗೆ ಆಯೋಜಿಸಿದರು. ಅದು ಫೋರ್ಟ್ ವರ್ತ್‌ನಿಂದ ವಾಷಿಂಗ್ಟನ್ ಡಿಸಿವರೆಗೆ. 3700 ಕಿಲೋಮೀಟರ್‌ಗಳ, 120 ದಿನಗಳ ಪಾದಯಾತ್ರೆ. ಅಲೋಕ ಅಲ್ಲೂ ಬಿಡದೆ ಸಂತರನ್ನು ಹಿಂಬಾಲಿಸಿದ. ಹತ್ತು ರಾಜ್ಯಗಳನ್ನು ದಾಟಿದ. ಅಷ್ಟರಲ್ಲಾಗಲೇ ಅಲೋಕನ ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆಗಳು ಕೂಡ ಕ್ರಿಯೇಟ್ ಆಗಿ, ಲಕ್ಷಾಂತರ ಅಭಿಮಾನಿ ಗಳು ಹುಟ್ಟಿಕೊಂಡಿದ್ದರು. ‘ಅಲೋಕ ದಿ ಪೀಸ್ ಡಾಗ್’ ಎನಿಸಿಕೊಂಡ.

ಸಂತರ ತಂಡದ ಮುಂದೆಯೇ ಇರುತ್ತಿದ್ದ ಅಲೋಕನ ನಡಿಗೆ ಸುಗಮವಾಗಿರಲಿಲ್ಲ. ಚಳಿ ಬಿಸಿಲು ಮಳೆ ಗಾಳಿ ಎನ್ನದೆ ನಡೆದ. ಮೈನಸ್ ಏಳು ಡಿಗ್ರಿ ಚಳಿಯಲ್ಲೂ ನಡೆದ. ಟೆಕ್ಸಾಸ್‌ನಲ್ಲಿ ಒಂದು ಕಡೆ ಇವರಿದ್ದ ಕಾರಿಗೆ ಟ್ರಕ್ಕೊಂದು ಬಂದು ಬಡಿಯಿತು. ಇಬ್ಬರು ಯತಿಗಳಿಗೆ, ಅಲೋಕನ ಕಾಲಿಗೆ ಏಟಾಯ್ತು.

ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಾಯ್ತು. ಕುಂಟುತ್ತಿದ್ದ ಅವನಿಗೆ ಕ್ಯಾರವಾನ್ ವ್ಯವಸ್ಥೆ ಮಾಡಿದರು. ಅದನ್ನು ನಿರಾಕರಿಸಿ ಅಲೋಕ ಹಠ ಹಿಡಿದು ಯತಿಗಳ ಜೊತೆಗೆ ಕುಂಟಿಕೊಂಡೇ ನಡೆದ. ಅವನೊಬ್ಬ ಭಾವುಕ ಜೀವಿ. ವಿಶ್ವಾದ್ಯಂತ ಅವನಿಗಾಗಿ ಮಿಡಿವವರು ಲಕ್ಷಾಂತರ ಮಂದಿ.

ಮೊನ್ನೆ ತಾನೇ ಅವನು ಮತ್ತೊಂದು ಭೇಟಿಗಾಗಿ ಭಾರತಕ್ಕೆ ಆಗಮಿಸಿದ ಬಿಕ್ಕುಗಳ ಜೊತೆ ತನ್ನ ತವರು ಭಾರತಕ್ಕೆ ಬಂದಿಳಿದ. ಪ್ರಾಣಿಪ್ರಿಯೆ ಮನೇಕಾ ಗಾಂಧಿ ಆತನನ್ನು ಭೇಟಿಯಾಗಿದ್ದಾರೆ. ‘ಜಗತ್ತಿನ ಜನತೆ ಅಲೋಕನಿಗೆ ತೋರಿಸಿದ ಪ್ರೀತಿಯಲ್ಲಿ ಹತ್ತು ಶೇಕಡದಷ್ಟು ನಮ್ಮ ದೇಶದ ಇತರ ಬೀದಿನಾಯಿಗಳಿಗೂ ತೋರಿಸಿದ್ದರೆ ನಮ್ಮ ದೃಷ್ಟಿಯೇ ಬದಲಾಗುತ್ತಿತ್ತು’ ಎಂದಿದ್ದಾರೆ.

Dog with Mon

ಲಕ್ಷಾಂತರ ಪ್ರಾಣಿಪ್ರಿಯರು ಈ ಮಾತನ್ನು ಅನುಮೋದಿಸಿದ್ದಾರೆ. ಬೀದಿನಾಯಿಗಳ ನಿಯಂತ್ರಣದ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಈ ಘಟನೆ ಮಹತ್ವ ಪಡೆದು ಕೊಂಡಿದೆ. ಈಗ ಭೈರವ ಎಂಬ ಇನ್ನೊಂದು ನಾಯಿಯ ಕತೆಯನ್ನೂ ನೋಡೋಣ. ಈ ವರ್ಷ ಜನವರಿಯಲ್ಲಿ ಈ ಶುನಕ ಉತ್ತರ ಪ್ರದೇಶದ ಬಿಜನೋರ್‌ನ ನಂದಪುರ ಎಂಬ ಗ್ರಾಮ ದಲ್ಲಿದ್ದ ದೇವಾಲಯದಲ್ಲಿ ಕಾಣಿಸಿಕೊಂಡಿತು. ನಿಂತಲ್ಲಿ ನಿಲ್ಲದೆ ಒಂದೇ ಸಮನೆ ಆ ದೇವಾಲಯ ದಲ್ಲಿದ್ದ ಶಿವ, ದುರ್ಗೆ ಹಾಗೂ ಆಂಜನೇಯನ ವಿಗ್ರಹಗಳಿಗೆ ಸುತ್ತು ಬರುತ್ತಿತ್ತು. ಗ್ರಾಮಸ್ಥರು ಚಕಿತರಾಗಿ ವೀಕ್ಷಿಸಿದರು. ಒಂದಲ್ಲ, ಎರಡಲ್ಲ, ಮೂರು ದಿನ ಅದು ಹೀಗೆ ನಿಲ್ಲದೆ ಸುತ್ತು ಬರುತ್ತಲೇ ಇತ್ತು.

ಗ್ರಾಮಸ್ಥರು, ಭಕ್ತರು ಬೆಚ್ಚಿ ಬೆರಗಾಗಿ, ನಾಯಿಯ ದೈವಪ್ರೀತಿಗೆ ಮಾರುಹೋಗಿ, ಅದಕ್ಕೆ ‘ಭೈರವ’ ಎಂದು ಹೆಸರಿಟ್ಟರು. ಕಾಲಭೈರವ ಎಂಬ ಹಿಂದೂ ದೇವತೆಗೆ ಶ್ವಾನವೇ ವಾಹನ. ಆತನ ಸುತ್ತ ಮುತ್ತಲೂ ನಾಯಿಗಳಿರುತ್ತವೆ. ಕಾಲಭೈರವ ಶಿವನ ಇನ್ನೊಂದು ಸ್ವರೂಪ ಕೂಡ. ಕಾಶಿಯಲ್ಲೂ ವಿಶ್ವನಾಥನ ದೇವಾಲಯಕ್ಕೆ ತೆರಳುವ ಮುನ್ನ ಭಕ್ತರು ಕಾಲಭೈರವ ದೇವಾಲಯಕ್ಕೆ ಹೋಗಿ ಬರುವ ರೂಢಿ.

ಕೇರಳ ಪರಶಿನಕಡವು ಮುತ್ತಪ್ಪ ದೇವರ ದೇವಸ್ಥಾನದಲ್ಲಿ ಕೂಡ ನಾಯಿಗಳೇ ಸುಪ್ರೀಂ. ಮುತ್ತಪ್ಪನ ವಾಹನ ಕೂಡ ನಾಯಿ. ಆ ದೇವಾಲಯದಲ್ಲಿ ನಾಯಿಗಳು ರಾಜಾರೋಷವಾಗಿ ಓಡಾಡಿಕೊಂಡಿರು ತ್ತವೆ. ದತ್ತಾತ್ರೇಯ ದೇವರಿಗೆ ಕೂಡ ಶುನಕ ಅಚ್ಚುಮೆಚ್ಚು. ಅದಿರಲಿ, ನಂದಪುರದ ಶಿವ ದೇವಸ್ಥಾನ ದಲ್ಲಿ ವಿಗ್ರಹಗಳಿಗೆ ನಿರಂತರ ಸುತ್ತು ಬರುವ ಈ ಬೀದಿ ನಾಯಿ ಸಾಕ್ಷಾತ್ ಭೈರವನ ವಾಹನ ಎಂದು ಭಕ್ತರಿಗೆ ಅನಿಸಿದ್ದರೆ ಆಶ್ಚರ‍್ಯವಿಲ್ಲ. ಅವರು ನಾಯಿಯನ್ನು ಪೂಜಿಸತೊಡಗಿದರು. ಅವರ ಪ್ರೀತಿ ಉಕ್ಕಿ ಹರಿಯಿತು.

ಅದಕ್ಕೆ ಪೂರಿ, ಹಲ್ವಾ, ಲಾಡು ಮೊದಲಾದವನ್ನು ತಂದು ಅರ್ಪಿಸತೊಡಗಿದರು. ವರ್ಷಗಳಿಂದ ಸರಿಯಾ ಆಹಾರ ಸಿಕ್ಕಿರದಿದ್ದ ಬೈರವ ಭಕ್ತರು ತಂದುಕೊಟ್ಟಿದ್ದನ್ನು ಚೆನ್ನಾಗಿ ತಿಂದ. ಆದರೆ ಬರುವಾಗಲೇ ಬಡಕಲಾಗಿದ್ದ ಭೈರವ ದಿನಗಳು ಕಳೆದಂತೆ ಅಸ್ವಸ್ಥನಾದ. ಭಕ್ತರು ಹಾಗೂ ಅರ್ಚಕರು ನಾಯಿಯನ್ನು ದೇಗುಲದ ಒಂದು ಬದಿಯಲ್ಲಿ ಕಟ್ಟಿಹಾಕಿದರು.

ನಡುಗುತ್ತ ಮಲಗಿದ್ದ ಅದರ ಪಕ್ಕದಲ್ಲಿ ಭಕ್ತರು ನೋಟುಗಳನ್ನು ಎಸೆಯುತ್ತಿದ್ದರು. ಇದು ಪ್ರಾಣಿ ದಯಾ ಸಂಸ್ಥೆಯವರೊಬ್ಬರ ಗಮನ ಸೆಳೆಯಿತು. ಅವರು ಭೈರವನ ಸ್ಥಿತಿಯನ್ನು ವೈದ್ಯರ ಗಮನಕ್ಕೆ ತಂದರು. ವೈದ್ಯರು ಅದನ್ನು ಪರೀಕ್ಷಿಸಿ, ನಾಯಿಗೆ ಉಣ್ಣಿಯಿಂದ ಬ್ಯಾಕ್ಟೀರಿಯಾ ಮೂಲಕ ಬರುವ ರೋಗ ತಗುಲಿದೆಯೆಂದರು. ಈ ಬ್ಯಾಕ್ಟೀರಿಯಾ ತಂದ ಅಸ್ವಸ್ಥತೆಯಿಂದಾಗಿ ಅದು ಒಂದೆಡೆ ನಿಲ್ಲದೆ ಕೂರದೆ ಸುತ್ತು ಬರುತ್ತಲೇ ಇರುತ್ತದೆ.

ಚಿಕಿತ್ಸೆ ನೀಡದೆ ಇನ್ನೂ ದಿನ ಮೀರಿದರೆ ಅದು ನರಮಂಡಲಕ್ಕೆ ಹಬ್ಬಿ, ಹುಚ್ಚು ಹಿಡಿದು ಸಾಯ ಬಹುದು ಎಂದೂ ಎಚ್ಚರಿಸಿದರು. ನಾಯಿಗೆ ಚಿಕಿತ್ಸೆ ಬೇಕು, ಅದಕ್ಕೆ ನೋಯಿಡಾಕ್ಕೆ ಕರೆದೊಯ್ಯ ಬೇಕು ಎಂದು ಪ್ರಾಣಿದಯಾ ಸಂಘಟನೆ ‘ಪ್ರೇಮ್‌ಪಥ್’ ಭಕ್ತರನ್ನು ಎಚ್ಚರಿಸಿತು. ಆದರೆ ಹೊಸದಾಗಿ ಬಂದ ದೇವರನ್ನು ಕಳೆದುಕೊಳ್ಳಲು ಭಕ್ತರು ಮತ್ತು ಅರ್ಚಕರು ಸಿದ್ಧರಿರಲಿಲ್ಲ. ಅದು ಹೇಗೆ ಕರೆದೊಯ್ಯುತ್ತೀರಿ ಎಂದು ರೊಚ್ಚಿಗೆದ್ದರು.

ಭಕ್ತರ ಮುಂದೆ ಅದನ್ನು ಕೊಂಡೊಯ್ಯುವ ಸಾಧ್ಯತೆ ಇರಲಿಲ್ಲ. ಹೀಗಾಗಿ ಪ್ರೇಮಪಥದವರು ರಾತ್ರಿ ಸದ್ದಿಲ್ಲದೆ ಬಂದು ಭಕ್ತರ ಕಣ್ಣು ತಪ್ಪಿಸಿ, ಭೈರವನನ್ನು ಕದ್ದುಕೊಂಡೊಯ್ಯಬೇಕಾಯ್ತು. ನೋಯಿ ಡಾದ ಅನಿಮಲ್ ಕೇರ್ ಸೆಂಟರ್‌ನಲ್ಲಿ ಅದಕ್ಕೆ ಚಿಕಿತ್ಸೆ, ಆರೈಕೆ, ಔಷಧ ದೊರೆಯಿತು. ಭೈರವ ಚೇತರಿಸಿಕೊಂಡ.

ಒಂದು ತಿಂಗಳ ಬಳಿಕ ಭೈರವನನ್ನು ಮರಳಿ ದೇವಸ್ಥಾನಕ್ಕೆ ಕರೆತರಲಾಗಿದೆ. ಆದರೆ ಈಗ ಅದರ ಹೊಣೆಯನ್ನು ಪ್ರಾಣಿದಯಾ ಸಂಘದವರೇ ಹೊತ್ತಿದ್ದಾರೆ. ಭೈರವನಿಗೆ ಡಾಗ್ ಫುಡ್ ಮಾತ್ರ ಕೊಡಬೇಕು, ಸಿಹಿತಿಂಡಿ ಇತ್ಯಾದಿ ಕೊಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಭೈರವ ನನ್ನು ತಮ್ಮಿಂದ ದೂರ ಮಾಡಿರುವ ಪ್ರಾಣಿದಯಾ ಸಂಘದವರ ಮೇಲೆ ಭಕ್ತರಿಗೆ ಕೋಪವಿದೆ. ಆದರೆ ಅದರ ದರ್ಶನದಿಂದ ತೃಪ್ತಿ ಹೊಂದುತ್ತಿದ್ದಾರೆ.

ಇಲ್ಲಿ ಅಲೋಕ ಮತ್ತು ಭೈರವನನ್ನು ಜನ ಕಂಡ ರೀತಿ ಹೇಗೆ, ಏನು ವ್ಯತ್ಯಾಸ, ಪ್ರೀತಿ ಮತ್ತು ಮೌಢ್ಯದ ವ್ಯತ್ಯಾಸ ಏನು ಎಂದೆಲ್ಲ ಕೊರೆಯಲು ನಾನು ಹೋಗುವುದಿಲ್ಲ. ಅಂಥ ಹೋಲಿಕೆ ವ್ಯರ್ಥ. ಕರ್ನಾಟಕದ ಒಂದು ಇತಿಹಾಸದ ತುಣುಕಿನೊಂದಿಗೆ ಇದನ್ನು ಮುಗಿಸೋಣ.

ರಾಷ್ಟ್ರಕೂಟರ ದೊರೆ ಮೂರನೇ ಕೃಷ್ಣ ಮತ್ತು ಚೋಳ ದೊರೆ ಮೂರನೇ ರಾಜಾದಿತ್ಯನ ನಡುವೆ ತಕ್ಕೋಲ ಎಂಬಲ್ಲಿ ಯುದ್ಧವಾಯಿತು. ಅದರಲ್ಲಿ ರಾಜಾದಿತ್ಯ ಸತ್ಯ. ಅವನನ್ನು ಕೊಂದವನು ಕೃಷ್ಣನ ದಂಡನಾಯಕನಾದ ಗಂಗ ದೊರೆ ಬೂತುಗ. ಈ ಬೂತುಗನಿಗೆ ನೆರವಾದವನು ಆತನ ಗೆಳೆಯ ಮಣಲೇರ. ಆತನ ಸಾಹಸವನ್ನು ಮೆಚ್ಚಿದ ಕೃಷ್ಣ ಏನನ್ನು ಬೇಕಾದರೂ ಕೇಳುವಂತೆ ಹೇಳುತ್ತಾನೆ. ಕೃಷ್ಣನ ಬಳಿ ಇದ್ದ ‘ಕಾಳಿ’ ಎಂಬ ಹೆಣ್ಣುನಾಯಿಯನ್ನು ಮಣಲೇರ ಬೇಡಿ ಪಡೆಯು ತ್ತಾನೆ.

ಬೇರೇನನ್ನೂ ಬೇಡದೆ ಆ ನಾಯಿಯನ್ನು ಮಣಲೇರ ಬೇಡಿದನೆಂದರೆ ಆ ನಾಯಿಯ ಬುದ್ಧಿ, ಸಾಹಸ ಹೇಗಿದ್ದಿರಬಹುದು. ಈ ನಾಯಿಯ ಜೊತೆ ಊರಿಗೆ ಬರುತ್ತಿದ್ದಾಗ ಒಂದು ಕಡೆ ಕಾಡುಹಂದಿ ಯೊಂದು ಇದಿರಾಗುತ್ತದೆ. ಕಾಳಿಗೂ ಹಂದಿಗೂ ಭಯಂಕರ ಹೋರಾಟ ನಡೆಯುತ್ತದೆ. ಕೊನೆಗೆ ಎರಡೂ ಗಾಯಗೊಂಡು ಸತ್ತುಹೋಗುತ್ತವೆ. ಮಣಲೇರನಿಗೆ ತೀರ ದುಃಖವಾಗುತ್ತದೆ.

ನಾಯಿಯ ಶವವನ್ನು ತನ್ನ ಊರಾದ ಆತಕೂರಿಗೆ ತಂದು ಚಶ್ವರ ದೇವಾಲಯದ ಎದುರಿಗೆ ಸಂಸ್ಕಾರ ಮಾಡುತ್ತಾನೆ. ನಂತರ ಅದಕ್ಕೆ ಸ್ಮಾರಕಶಿಲೆ ಮಾಡಿಸಿ ನೆಡುತ್ತಾನೆ. ಎರಡು ಖಂಡುಗ ಭತ್ತದ ಗದ್ದೆಯನ್ನುದತ್ತಿ ನೀಡಿ ಪೂಜೆಗೆ ವ್ಯವಸ್ಥೆ ಮಾಡುತ್ತಾನೆ. ಇಂದಿಗೂ ಆತಕೂರು ಶಾಸನ, ಅದರಲ್ಲಿ ನಾಯಿ- ಹಂದಿಗಳ ಹೋರಾಟದ ಶಿಲ್ಪವನ್ನು ನೀವು ನೋಡಬಹುದು.

ಹರೀಶ್‌ ಕೇರ

View all posts by this author