ವಿದೇಶವಾಸಿ
ವಿಯೆಟ್ನಾಂನಲ್ಲಿ ತಾನು ಮಾಡಿದ ಯುದ್ಧದಲ್ಲಿ ಅಮೆರಿಕ ಸೋತಿದೆ. ಅಫ್ಘಾನಿಸ್ತಾನದಲ್ಲೂ ಎಲ್ಲವನ್ನೂ ಅರ್ಧದಲ್ಲೇ ಕೈಬಿಟ್ಟು ರಾತ್ರೋರಾತ್ರಿ ಪೇರಿ ಕಿತ್ತಿದೆ. ಇದೀಗ ಇರಾನ್‌ನಲ್ಲೂ ದಾಳಗಳನ್ನೆಲ್ಲ ಇರಾನ್‌ನ ಕೈಗೆ ಒಪ್ಪಿಸಿ ಅಲ್ಲಿಂದ ಮರಳಿದೆ. ಆದರೂ ತಾನು ಗೆದ್ದನೆಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಅಂದ ಹಾಗೆ ಅಮೆರಿಕ ಇನ್ನೊಂದು ಯುದ್ಧ ಗೆದ್ದಿದೆ. ಅಲ್ಲ, ಸರಿಯಾಗಿ ಹೇಳಬೇಕು ಎಂದರೆ, ತಾನು ಇನ್ನೊಂದು ಯುದ್ಧ ಗೆದ್ದಿರುವುದಾಗಿ ಅಮೆರಿಕ ಹೇಳಿಕೊಂಡಿದೆ!
ಇದೊಂದು ಭಾರೀ ವಿಚಿತ್ರ ಯುದ್ಧ. ನಿಜವಾಗಿ ಯುದ್ಧ ಆರಂಭವಾದದ್ದು ಇಸ್ರೇಲ್ ಮತ್ತು ಹಿಜಬು ಸಂಘಟನೆಯ ನಡುವೆ. ಹಿಜಬು ಸಂಘಟನೆಯನ್ನು ಮುಗಿಸಲು ಪಣತೊಟ್ಟ ಇಸ್ರೇಲ, ಹಿಜಬು ಸಂಘಟನೆ ಹೆಚ್ಚು ಸಕ್ರಿಯವಾಗಿರುವ ಗಾಝಾ ಮತ್ತು ದಕ್ಷಿಣ ಲೆಬನಾನ್ ಮೇಲೆ ಸತತವಾಗಿ ದಾಳಿ ಮಾಡುತ್ತಿತ್ತು. ಅದಕ್ಕೆ ಕಾರಣ ಏನು ಎಂದು ಎಲ್ಲರಿಗೂ ಗೊತ್ತಿದ್ದದ್ದೇ. ಈ ದಾಳಿಯನ್ನು ಕೆಲವು ದೇಶಗಳು ಖಂಡಿಸಿದವು, ಕೆಲವು ದೇಶಗಳು ತಟಸ್ಥವಾಗಿದ್ದವು. ಇನ್ನು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದ ಕೆಲವು ದೇಶಗಳೂ ಇದ್ದವು. ಈ ನಡುವೆ ಜಗತ್ತಿಗೇ ಗೊತ್ತಿದ್ದ ಸತ್ಯ ಎಂದರೆ, ಅಮೆರಿಕ ಇಸ್ರೇಲ್ ದೇಶವನ್ನು ಬೆಂಬಲಿಸುತ್ತಿದೆ ಮತ್ತು ಇರಾನ್ ಹಿಜಬು ಸಂಘಟನೆಯ ಬೆನ್ನ ಹಿಂದೆ ನಿಂತಿದೆ ಎನ್ನುವುದು.
ಕ್ರಮೇಣ ಇದಕ್ಕೆ ಇನ್ನೂ ಕೆಲವು ಕಾರಣಗಳು ಸೇರಿಕೊಂಡವು. ಇರಾನ್ ಪರಮಾಣು ಅಸ್ತ್ರ ತಯಾರಿಸುವುದಕ್ಕೆ ಸಿದ್ಧತೆ ನಡೆಸುತ್ತಿದೆ. ಅದಕ್ಕೆ ಬೇಕಾದ ಯುರೇನಿಯಮ್ ಒಟ್ಟುಗೂಡಿಸಿ ಕೊಳ್ಳುತ್ತಿದೆ ಎನ್ನುವುದು ಒಂದು ಕಾರಣವಾದರೆ, ಇರಾನ್ ಜನತೆ ಬದಲಾವಣೆ ಬಯಸುತ್ತಿದ್ದಾರೆ, ಅಲ್ಲಿಯ ಆಡಳಿತ ಮತಾಂಧರ ಕೈಯಲ್ಲಿದೆ, ಅಲ್ಲಿಯ ಯುವ ಜನಾಂಗ ಸ್ವಾತಂತ್ರ್ಯ ಬಯಸುತ್ತಿದೆ ಎನ್ನುವುದು ಇನ್ನೊಂದು ಕಾರಣ. ಈ ಎರಡು ಕಾರಣ ಬಿಟ್ಟರೆ, ಬೇರೆ ಯಾವುದೇ ಮಹತ್ವದ ಕಾರಣವೂ ಮೇಲ್ನೋಟಕ್ಕೆ ಕಂಡುಬರುವುದಿಲ್ಲ.
ಇದನ್ನೂ ಓದಿ:Kiran Upadhyay Column: ಹೆಣವನ್ನೂ ಬಿಡದ ಇವರ ಹಾಸ್ಯ...
ಅಮೇರಿಕ ಇರಾನ್ ದೇಶದಲ್ಲಿರುವ ತೈಲ, ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ ಎನ್ನುವುದು ಮೂರನೆಯ ಕಾರಣವಾದರೂ ಖುಲ್ಲಂ-ಖುಲ್ಲಾ ಹೇಳಿಕೊಂಡಿರಲಿಲ್ಲ. ಯುದ್ಧ ಆರಂಭವಾಗಿ ಎರಡು ತಿಂಗಳು ಕಳೆದ ನಂತರ, ‘ಇರಾನ್ ನಮಗೆ ಶರಣಾಗುತ್ತಿದೆ, ಇನ್ನು ಮುಂದೆ ಅಲ್ಲಿಯ ತೈಲನಿಕ್ಷೇಪಗಳೂ ನಮ್ಮ ವಶವಾಗುತ್ತಿವೆ’ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಒಮ್ಮೆ ಹೇಳಿದ್ದು ಬಿಟ್ಟರೆ, ಅದಕ್ಕೂ ಮೊದಲು ಈ ಕಾರಣವನ್ನು ಸಾರ್ವಜನಿಕವಾಗಿ ಯಾರೂ ಹೇಳಿಕೊಂಡಿರಲಿಲ್ಲ.
ಸುಮ್ಮನೇ ಆಲೋಚಿಸಿ ನೋಡಿ, ಇರಾನ್ ಪರಮಾಣು ಅಸ್ತ್ರ ತಯಾರಿಸುವ ಸಿದ್ಧತೆ ಮಾಡಿ ಕೊಳ್ಳುತ್ತಿದೆ ಎಂಬ ಕಾರಣವಾದರೆ, ಇರಾನ್‌ಗೆ ಈ ಮೊದಲು ಅಮೆರಿಕವೇ ಯುರೇನಿಯಮ್ ಪೂರೈಸಿದೆ. ಅದನ್ನು ಎರಡು ದೇಶಗಳ ನಡುವೆ ಸಂಬಂಧ ಒಳ್ಳೆಯದಾಗಿದ್ದಾಗ, ವಿದ್ಯುತ್ ಉತ್ಪಾ ದನೆಗೆ ಎಂದು ನೀಡಲಾಗಿತ್ತು ಎಂದರೂ, ಇಷ್ಟು ವರ್ಷ ಸುಮ್ಮನೆ ಕುಳಿತಿದ್ದು ಯಾಕೆ ಎನ್ನುವ ಪ್ರಶ್ನೆ ಬರುತ್ತದೆ. ಜತೆಗೆ, ಈಗಾಗಲೇ ಪರಮಾಣು ಅಸ್ತ್ರ ಹೊಂದಿದ ದೇಶಗಳ ವಿರುದ್ಧ ಅಮೆರಿಕ ಏನಾದರೂ ಕ್ರಮ ಕೈಗೊಂಡಿದೆಯೇ ಅಥವಾ ಮುಂದೆ ಕೈಗೊಳ್ಳುತ್ತದೆಯೇ ಎಂಬ ಪ್ರಶ್ನೆ ಬರುತ್ತದೆ.
ಉದಾಹರಣೆಗೆ, ಪಾಕಿಸ್ತಾನ, ಉತ್ತರ ಕೊರಿಯಾ, ಅದೆಲ್ಲ ಬಿಡಿ, ಭಾರತವೂ ಈ ಪಟ್ಟಿಯಲ್ಲಿದೆ. ಆದ್ದರಿಂದ ಈ ಕಾರಣ ಅಷ್ಟು ಸಮಂಜಸ ಅನಿಸುವುದಿಲ್ಲ. ಹೋಗಲಿ, ಈಗ ಇರಾನ್ ಅಮೆರಿಕದ ಮಾತಿಗೆ ಒಪ್ಪಿದೆಯೇ ಎಂದರೆ, ಖಂಡಿತ ಇಲ್ಲ. ಏಕೆಂದರೆ ಪರಮಾಣು ಅಸ್ತ್ರ ತಯಾರಿಸುತ್ತಿದೆ ಎಂಬ ಆಪಾದನೆಯನ್ನು ಮೊದಲಿನಿಂದಲೂ ಇರಾನ್ ಒಪ್ಪಿಕೊಳ್ಳಲೇ ಇಲ್ಲ. ಈಗಲೂ ಅದು ಹೇಳುತ್ತಿರು ವುದು ಅದನ್ನೇ. ಈಗ ಅಮೆರಿಕವೂ ‘ಇರಾನ್ ಪರಮಾಣು ಅಸ್ತ್ರ ತಯಾರಿಸುವುದಿಲ್ಲ ಎಂದು ಹೇಳಿದೆ’ ಎನ್ನುತ್ತಿದೆ. ಅಂದರೆ, ಇರಾನ್ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಅಮೆರಿಕದ ಹೇಳಿಕೊಳ್ಳುವುದೇನೆಂದರೆ, ಅದು ಈ ಯುದ್ಧ ಗೆದ್ದಿದೆ!
ಇನ್ನು ಎರಡನೆಯ ಕಾರಣಕ್ಕೆ ಬರುವುದಾದರೆ, ಅಧಿಕಾರ ಬದಲಾವಣೆ, ಅದು ಪಕ್ಕಾ ಆಯಾ ದೇಶದ ಆಂತರಿಕ ಸಮಸ್ಯೆ. ಅದರಲ್ಲಿ ಅಮೆರಿಕ ಅಂತಲ್ಲ, ಯಾವ ದೇಶವೂ ಮೂಗು ತೂರಿಸಬಾರದು. ಅಲ್ಲಿಯ ಜನ ಅದನ್ನು ನಿರ್ಣಯಿಸುತ್ತಾರೆ. ವಿಶ್ವದಾದ್ಯಂತ ಇಂದು ಎಷ್ಟೋ ದೇಶಗಳಲ್ಲಿ ಜನ ತಮ್ಮ ಸರಕಾರದ ಕುರಿತಾಗಿ ಅಸಮಾಧಾನದಿಂದ ಇದ್ದಾರೆ. ಎಲ್ಲ ಕಡೆ ಸಂಧಾನಕ್ಕೆ, ಸಂಕಷ್ಟ ನಿರ್ವಹಣೆಗೆ ಅಮೆರಿಕ ಹೋಗುತ್ತದೆಯೇ? ಇಲ್ಲ, ಹೋಗಲೂ ಬಾರದು. ಇರಾನ್ ಜನತೆ ತಮ್ಮ ಸರಕಾರದ ವಿರುದ್ಧ ದಂಗೆ ಎದ್ದದ್ದು ನಿಜ. ಆದರೆ, ಯುದ್ಧ ಆರಂಭಿಸಿ ಅಮೇರಿಕ ಏನು ಮಾಡಿ ದಂತಾಯಿತು ಎಂದರೆ, ಸರಕಾರದ ವಿರುದ್ಧವಿದ್ದ ಜನರೇ ಮೊದಲು ತಮ್ಮ ದೇಶ ಉಳಿಸಿ ಕೊಳ್ಳೋಣ, ನಂತರ ಸರಕಾರ ಬದಲಾವಣೆಯ ಕುರಿತಾಗಿ ಆಲೋಚಿಸೋಣ ಎನ್ನುವಂತಾಯಿತು.
ಮೊದಲೇ ಹಣದುಬ್ಬರ, ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಇರಾನ್ ಪ್ರಜೆಗಳು ಇನ್ನಷ್ಟು ಬರೆ ಎಳೆಸಿಕೊಳ್ಳಲು ತಯಾರಿರಲಿಲ್ಲ. ಇಲ್ಲವಾದರೆ, ಈ ಸಂದರ್ಭದಲ್ಲಿ ಆಂತರಿಕವಾಗಿಯೂ ಜನ ದಂಗೆ ಎದ್ದಿದ್ದರೆ, ಈಗಿರುವ ಸರಕಾರ ಉಳಿದುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಈ ಯುದ್ಧ ಆರಂಭ ವಾದ ಮೊದಲನೆಯ ರಾತ್ರಿಯೇ ಇರಾನ್‌ನ ಸರ್ವಾಧಿಕಾರಿ ಮತ್ತು ಅವನ ಪರಿವಾರದ ಮೂವತ್ತಕ್ಕೂ ಹೆಚ್ಚು ಜನರನ್ನು ಅಮೆರಿಕ ಮತ್ತು ಇಸ್ರೇಲ್ ಮುಗಿಸಿದ್ದವು. ಅಮೆರಿಕ ಅಲ್ಲಿಗೇ ಯುದ್ಧ ನಿಲ್ಲಿಸಿದ್ದರೂ ಬುದ್ಧಿವಂತ ಅನ್ನಿಸಿಕೊಳ್ಳುತ್ತಿತ್ತೋ ಏನೋ, ಆಸೆಗೆ ಬಿದ್ದ ಟ್ರಂಪ್ ಯುದ್ಧ ಮುಂದುವರಿಸಿದರು.
ಅದಾದ ನಂತರದಿಂದ ಇಲ್ಲಿಯವರೆಗೆ ಸಾಕಷ್ಟು ಅಧಿಕಾರಿಗಳನ್ನು, ಜನರನ್ನು ಕೊಂದದ್ದೇ ಸಾಧನೆ ಬಿಟ್ಟರೆ ಅಧಿಕಾರ ಹಸ್ತಾಂತರವಾಗಲೇ ಇಲ್ಲ. ಈಗ, ಒಪ್ಪಂದದ ಪ್ರಕಾರ ಅಮೆರಿಕ ಇರಾನ್‌ನ ಆಂತರಿಕ ವ್ಯವಹಾರದಲ್ಲಿ ತಲೆ ಹಾಕುವಂತಿಲ್ಲ ಎಂದಿದ್ದು, ಅದಕ್ಕೆ ಅಮೆರಿಕ ಒಪ್ಪಿದೆ. ಕಾರಣ... ಅಮೆರಿಕ ಯುದ್ಧ ಗೆದ್ದಿದೆ!
ಕಾರಣ ಏನೇ ಇದ್ದರೂ, ಅಮೆರಿಕ ನೇರವಾಗಿ ಈ ಯುದ್ಧದಲ್ಲಿ ಭಾಗಿಯಾಗದಿದ್ದರೆ, ಇರಾನ್ ಮೇಲೆ ಸಮರ ಸಾರದಿದ್ದರೆ, ಬಾಂಬ್ ದಾಳಿ ನಡೆಸದಿದ್ದರೆ, ಇರಾನ್ ಸುತ್ತ ಮುತ್ತ ಇರುವ ದೇಶಗಳು ನಷ್ಟ ಅನುಭವಿಸಬೇಕಾಗುತ್ತಿರಲಿಲ್ಲ. ಈ ಯುದ್ಧದಿಂದ ಇರಾನ್ ಅಕ್ಕಪಕ್ಕದಲ್ಲಿರುವ ಕುವೈತ್, ಕತಾರ್, ಸೌದಿ ಅರೇಬಿಯಾ, ಬಹ್ರೈನ್, ಯುಎಇ, ಜೋರ್ಡಾನ್, ಇರಾಕ್ ದೇಶಗಳ ಮೇಲೆ ನೇರ ಪರಿಣಾಮ ವಾದರೆ, ವಿಶ್ವದ ಉಳಿದ ದೇಶಗಳ ಮೇಲೆ ಪರೋಕ್ಷ ಪರಿಣಾಮ ಉಂಟಾಯಿತು. ಇದಕ್ಕೆ ಪ್ರಮುಖ ಕಾರಣ ಸ್ಟ್ರೇಟ್ ಆಫ್ ಹೊರ್ಮುಜ್ ಅಥವಾ ಹೊರ್ಮುಜ್ ಜಲಸಂಧಿ. ಇಲ್ಲವಾದರೆ, ರಷ್ಯಾ ಮತ್ತು ಯುಕ್ರೇನ್ ನಡುವೆ ಯುದ್ಧ ಆರಂಭವಾಗಿ ನಾಲ್ಕು ವರ್ಷವಾಯಿತು. ಆ ಯುದ್ಧದಿಂದ ಈ ರೀತಿಯ ಪರಿಣಾಮ ಉಂಟಾಗಲಿಲ್ಲ.
ಇರಾನ್ ಪಕ್ಕದ ದೇಶಗಳಲ್ಲಿರುವ ಸೇನಾ ನೆಲೆಯಿಂದ ಯುದ್ಧವಿಮಾನ ಹಾರಿಸಿ ಇರಾನ್ ಮೇಲೆ ದಾಳಿ ನಡೆಸುತ್ತಿದ್ದುದರಿಂದ ಪ್ರತೀಕಾರವಾಗಿ ಆ ದೇಶಗಳ ಸೇನಾ ನೆಲೆ, ವಿಮಾನ ನಿಲ್ದಾಣಗಳ ಮೇಲೆ ಇರಾನ್ ದಾಳಿ ಮಾಡಿ ಸಾಕಷ್ಟು ಪೆಟ್ಟು ಕೊಟ್ಟಿತು. ಬೆಲೆ ಏರಿಕೆಯಾಯಿತು. ಆದರೆ ಅಮೆರಿಕ ಯುದ್ಧ ಗೆದ್ದಿದೆ!
ಈ ಯುದ್ಧದಿಂದಾದ ಅತಿ ದೊಡ್ಡ ಮತ್ತು ಕೆಟ್ಟ ಪರಿಣಾಮ ಎಂದರೆ, ಹೊರ್ಮುಜ್ ಜಲಸಂಧಿ ಯನ್ನು ಇರಾನ್ ತನ್ನ ತಾಬಾಕ್ಕೆ ತೆಗೆದುಕೊಂಡಿದ್ದು, ಅದುವರೆಗೆ ಎಲ್ಲರಿಗೂ ಮುಕ್ತವಾಗಿದ್ದ ಜಲಸಂಧಿಯಲ್ಲಿ ಚಲಿಸುವ ಹಡಗುಗಳು ಸುಂಕ ಕಟ್ಟಬೇಕು ಎಂದದ್ದು, ಅದಕ್ಕೆ ಪ್ರತಿಯಾಗಿ ಅಮೆರಿಕ ಜಲಸಂಧಿಯ ಮೇಲೆ ತಾನೂ ಪ್ರತಿಬಂಧ ಹೇರಿದ್ದು, ಆ ಪ್ರದೇಶದಲ್ಲಿ ಓಡಾಡುತ್ತಿದ್ದ ಒಂದಷ್ಟು ಹಡಗುಗಳ ಮೇಲೆ ದಾಳಿ ಮಾಡಿದ್ದು, ಕೆಲವು ಜನ ಸತ್ತಿದ್ದು. ಒಟ್ಟಾರೆ ಶಾಂತವಾಗಿದ್ದ ಜಲಸಂಧಿಯನ್ನು ಗಲೀಜೆಬ್ಬಿಸಿದ್ದು ಮಾತ್ರ ಖರೆ ಬಿಟ್ಟರೆ, ಒಂದು ನಯಾ ಪೈಸೆಯ ಪ್ರಯೋಜನ ಯಾರಿಗೂ ಆಗಲಿಲ್ಲ. ಮೊನ್ನೆ ಶಾಂತಿ ಒಪ್ಪಂದ ಆದ ಮಾರನೆಯ ದಿನವೇ ಇಸ್ರೇಲ್ ಲೆಬನಾನ್ ಮೇಲೆ ಮಾಡಿದ ಕಾರಣ ಹೇಳಿ ಇರಾನ್ ಜಲಸಂಧಿಯಲ್ಲಿ ಸಂಚಾರವನ್ನು ಮತ್ತೆ ತಡೆದಿದೆ. ಆದರೂ ಅಮೆರಿಕ ಯುದ್ಧ ಗೆದ್ದಿದೆ!
ಕಳೆದ ಶುಕ್ರವಾರ ಇರಾನ್ ಮತ್ತು ಅಮೆರಿಕ ಒಂದು ಹಂತದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ, ಈ ಒಪ್ಪಂದವನ್ನು ಎರಡೂ ದೇಶಗಳು ಯಾವ ಹಂತದವರೆಗೆ ಪಾಲಿಸುತ್ತಾರೆ ಎನ್ನುವುದಕ್ಕೆ ಸಮಯವೇ ಉತ್ತರಿಸಬೇಕು. ಏಕೆಂದರೆ, ಒಪ್ಪಂದದ ಪ್ರಕಾರ, ಅಮೆರಿಕ ಈ ಮೊದಲು ಇರಾನ್ ಮೇಲೆ ನಿರ್ಬಂಧ ಹೇರಿ, ಮುಟ್ಟುಗೋಲು ಹಾಕಿ ಕೊಂಡಿದ್ದ ಇಪ್ಪತ್ತನಾಲ್ಕು ಬಿಲಿಯನ್ ಡಾಲರ್ ಹಣವನ್ನು ಇರಾನ್‌ಗೆ ಹಿಂತಿರುಗಿಸಬೇಕು, ಅದರಲ್ಲಿ ಅರ್ಧದಷ್ಟನ್ನು, ಅಂದರೆ ಹನ್ನೆರಡು ಬಿಲಿಯನ್ ಮೊತ್ತವನ್ನು ಕೂಡಲೇ ನೀಡಬೇಕು ಎಂಬ ಷರತ್ತು ಇದ್ದು, ಅಮೆರಿಕ ಅದಕ್ಕೆ ಒಪ್ಪಿಕೊಂಡಿದೆ. ಏಕೆಂದರೆ ಅಮೆರಿಕ ಯುದ್ಧ ಗೆದ್ದಿದೆ!
ಅಷ್ಟೇ ಅಲ್ಲ, ಅಮೆರಿಕ ಮತ್ತು ಇಸ್ರೇಲ್ ಬಾಂಬ್ ದಾಳಿಯಲ್ಲಿ ಆದ ನಷ್ಟವನ್ನು ತುಂಬಲು ಸುಮಾರು ಮುನ್ನೂರು ಬಿಲಿಯನ್ ಡಾಲರ್ ಖರ್ಚಾಗುತ್ತದೆ. ಯುದ್ಧದ ನಷ್ಟ ಭರಿಸಿ, ಇರಾನ್ ಮೊದಲಿನಂತಾಗಲು ಅಮೆರಿಕ ಇರಾನ್‌ಗೆ ಮುನ್ನೂರು ಬಿಲಿಯನ್ ಡಾಲರ್ ಮೊತ್ತವನ್ನು ನೀಡಬೇಕು ಎನ್ನುವ ಷರತ್ತಿಗೂ ಅಮೆರಿಕ ಒಪ್ಪಿದೆ. ಏಕೆಂದರೆ ಅಮೆರಿಕ ಯುದ್ಧಗೆದ್ದಿದೆ!
ಯುದ್ಧ ಆರಂಭವಾಗುವುದಕ್ಕೂ ಮೊದಲು ಇರಾನ್ ಮೇಲೆ ತೈಲ ಮತ್ತು ಅನಿಲ ಮಾರಾಟ ಮಾಡುವುದಕ್ಕೆ ನಿರ್ಬಂಧವಿತ್ತು. ಅದೂ ಒಂದೆರಡು ವರ್ಷದ ನಿರ್ಬಂಧವಲ್ಲ, ಸುಮಾರು ನಾಲ್ಕೂವರೆ ದಶಕದ ನಿರ್ಬಂಧ. ಈಗ ಆ ನಿರ್ಬಂಧವನ್ನೂ ತೆಗೆಯುವುದಕ್ಕೆ ಅಮೆರಿಕ ಒಪ್ಪಿದೆ. ಅಂದರೆ ಇನ್ನು ಮುಂದೆ ಇರಾನ್ ಯಾವ ದೇಶಕ್ಕೆ ಬೇಕಾದರೂ, ಎಷ್ಟು ಬೇಕಾದರೂ ತೈಲ ಮತ್ತು ಅನಿಲವನ್ನು ರಫ್ತು ಮಾಡಬಹುದು. ಏಕೆಂದರೆ ಅಮೆರಿಕ ಯುದ್ಧ ಗೆದ್ದಿದೆ!
ಇದೆಲ್ಲದರ ನಡುವೆ ಆದ ಇನ್ನೊಂದು ವಿಶೇಷ ಎಂದರೆ, ಈ ಸಂಧಾನಕ್ಕೆ ಇಸ್ರೇಲ್ ಇನ್ನೂ ಒಪ್ಪದೇ ಇರುವುದು. ಒಪ್ಪುವುದು ಬಿಡುವುದು ಕೊನೆಗೆ, ಯುದ್ಧ ಆರಂಭಕ್ಕೆ ಕಾರಣವಾದ ಇಸ್ರೇಲನ್ನು ಸಂಧಾನದ ಮಾತುಕತೆಗೇ ಅಮೆರಿಕ ಆಗಲಿ ಇರಾನ್ ಆಗಲಿ ಕರೆಯಲಿಲ್ಲ. ಇರಾನ್ ಕರೆಯದಿದ್ದರೆ ದೊಡ್ಡ ವಿಷಯವಲ್ಲ. ಆದರೆ ಅಮೆರಿಕ ಕರೆಯಬೇಕಿತ್ತು. ಹೋಗಲಿ, ಕೊನೆ ಪಕ್ಷ ಸಂಧಾನದ ಕುರಿತಾಗಿ ಇಸ್ರೇಲ್‌ನ ಅಭಿಪ್ರಾಯವನ್ನಾದರೂ ಕೇಳಬಹುದಿತ್ತು, ಮಾಹಿತಿಯನ್ನಾದರೂ ನೀಡಬಹುದುತ್ತು.
ಏಕೆಂದರೆ, ಅಮೆರಿಕ ಇಸ್ರೇಲ್ ಎರಡೂ ದೇಶಗಳು ಸೇರಿಯೇ ಇರಾನ್ ಮೇಲೆ ಯುದ್ಧ ಸಾರಿದ್ದವು, ದಾಳಿ ಆರಂಭಿಸಿದ್ದವು. ಆದರೆ ಸಂಧಾನದ ಮಾತುಕತೆಯಲ್ಲಿ ಇಸ್ರೇಲ್ ಇಲ್ಲ. ಈ ಸಂಧಾನದಲ್ಲಿ ಪರಮಾಣು ಅಸ್ತ್ರದ ಕುರಿತಾಗಲಿ ಅಥವಾ ಇತರೆ ಭದ್ರತೆಯ ಕುರಿತಾಗಲಿ ಸ್ಪಷ್ಟ ಚಿತ್ರಣ ಇಲ್ಲ ಎಂದಿರುವ ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮುಂದುವರಿಸಿದೆ. ಆದರೇನಂತೆ, ಆದರೇನಂತೆ, ಅಮೆರಿಕದ ಪ್ರಕಾರ, ಅಮೆರಿಕ ಯುದ್ಧ ಗೆದ್ದಿದೆ!
ಇಲ್ಲಿ ಒಂದು ವಿಷಯ ಹೇಳಬೇಕು. ಅರವತ್ತು-ಎಪ್ಪತ್ತರ ದಶಕದಲ್ಲಿ ಅಮೆರಿಕ ವಿಯೆಟ್ನಾಂ ಯುದ್ಧ ನಡೆಯಿತು. ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ ನಡುವೆ ನಡೆಯುತ್ತಿದ್ದ ಯುದ್ಧದಲ್ಲಿ ಅಮೆರಿಕ ದಕ್ಷಿಣ ವಿಯೆಟ್ನಾಂ ಪರ ಯುದ್ಧ ಮಾಡುತ್ತಿತ್ತು. ಆ ಯುದ್ಧ ಇಂದಿಗೂ ಅಮೆರಿಕ ಸೋತ ಯುದ್ಧ ಎಂದೇ ದಾಖಲಾಗಿದೆ. ಇತ್ತೀಚೆಗೆ ಅಂದರೆ, ಕಳೆದ ಎರಡು ದಶಕದ ಹಿಂದೆ ಅಮೆರಿಕ ಅಫ್ಘಾನಿಸ್ತಾನ ದ ಮೇಲೆ ಯುದ್ಧ ಸಾರಿತ್ತು. ಸುಮಾರು ಇಪ್ಪತ್ತು ವರ್ಷ ಅಲ್ಲಿಯೇ ಇದ್ದು, ಕೊನೆಗೆ ಒಂದು ದಿನ ರಾತ್ರೋ ರಾತ್ರಿ ಅಮೆರಿಕ ಅಲ್ಲಿಂದ ಕಾಲು ಕಿತ್ತಿತು. ಯುದ್ಧೋಪಕರಣ, ಶಸ್ತ್ರಾಸ್ತ್ರ ಎಲ್ಲವನ್ನೂ ತಾಲಿಬಾನಿಗಳ ಕೈಗೆ ಸಿಗುವಂತೆ ಬಿಟ್ಟು ಬಂದಿತ್ತು.
ಇರಾನ್ ಯುದ್ಧ ಆರಂಭವಾದಾಗ ಎಲ್ಲಿ ಈ ಯುದ್ಧವೂ ದಶಕಗಳೇ ಎಳೆಯುತ್ತದೆಯೋ ಎಂಬ ಆತಂಕವಿತ್ತು. ಸದ್ಯ ಹಾಗಾಗಲಿಲ್ಲ, ಮುಂದೆ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಅಮೆರಿಕ ಯುದ್ಧ ಗೆದ್ದಿದೆ. ಅಥವಾ ಇರಾನ್ ಗೆದ್ದಿದೆ!
ಇನ್ನು, ಇರಾನ್ ಯುದ್ಧ ಆರಂಭವಾದಾಗಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಯುದ್ಧ ಗೆದ್ದಿರುವುದಾಗಿ ನೂರು ಬಾರಿ ಹೇಳಿಕೊಂಡಿದ್ದಾರೆ. ಜತೆಜತೆಗೇ ಹೆಚ್ಚು ಕಮ್ಮಿ ಮೂವತ್ತು ಸಲ ಎರಡೂ ದೇಶದ ನಡುವೆ ಯುದ್ಧ ನಿಲ್ಲಿಸಲು ಶಾಂತಿಯ ಮಾತುಕತೆ ನಡೆಯುತ್ತಿದೆ ಎಂದೂ ಹೇಳಿಕೊಂಡಿದ್ದಾರೆ. ಕೊನೆಗೂ ತಾವು ಗೆದ್ದು ಶಾಂತಿಯ ಮಾತುಕತೆ ನಡೆಸುತ್ತಿರುವುದಾಗಿಯೂ, ಒಪ್ಪಂದಕ್ಕೆ ಸಹಿ ಹಾಕುತ್ತಿರುವುದಾಗಿಯೂ ಹೇಳಿದ್ದಾರೆ. ಇದು ಹೇಗಾಯಿತು ಎಂದರೆ, ಪಂದ್ಯ ಗೆದ್ದ ನಂತರ, ಗೆದ್ದ ತಂಡದವರು ಪಂದ್ಯವನ್ನು ಡ್ರಾ ಮಾಡಿಕೊಳ್ಳೋಣ ಎಂದ ಹಾಗೆ!