ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kiran Upadhyay Column: ಹೀಗೊಂದು ಹಳೆಯ ಜೀವಹಳಿ

1858ರಿಂದ 1954ರವರೆಗೆ, ಹೆಚ್ಚು ಕಮ್ಮಿ ನೂರು ವರ್ಷ ವಿಯೆಟ್ನಾಂ ದೇಶ -ಫ್ರೆಂಚರ ಕೈಯಲ್ಲಿತ್ತು. 1902ರಲ್ಲಿ, ಅಂದರೆ ಇಂದಿಗೆ ಸುಮಾರು 125 ವರ್ಷಗಳ ಹಿಂದೆ ಒಂದು ರೈಲು ಮಾರ್ಗವನ್ನು ನಿರ್ಮಿಸ ಲಾಗಿತ್ತು. ಸಾಮಾನ್ಯವಾಗಿ ನಾವು ಪಟ್ಟಣ ಅಥವಾ ನಗರ ಹತ್ತಿರ ಬರುತ್ತಿದ್ದಂತೆ ಎದುರು ಬದುರು ಬರುವ ರೈಲು ಸುಗಮವಾಗಿ ಹಾದು ಹೋಗಲು ಬದಿಬದಿಯಲ್ಲಿಯೇ ನಿರ್ಮಿಸಿರುವ ಎರಡು ರೈಲು ಮಾರ್ಗವನ್ನು (ಎರಡು ಜೊತೆ ಹಳಿ) ಕಾಣುತ್ತೇವೆ.

ವಿದೇಶವಾಸಿ

ಅದಕ್ಕೆ ‘ಟ್ರೇನ್ ಸ್ಟ್ರೀಟ್’ ಎಂದು ಯಾಕೆ ಹೆಸರಿಟ್ಟರೋ ಗೊತ್ತಿಲ್ಲ. ಕನ್ನಡದಲ್ಲಿ ಅದನ್ನು ಅನುವಾದಿಸಿದರೆ ‘ರೈಲು ರಸ್ತೆ’ ಎಂದಾಗುತ್ತದೆ. ಕಾಲು ದಾರಿ, ಕಾರು ದಾರಿ, ಲಾರಿ ದಾರಿ ಅಂದರೆ ಸರಿ. ಬೇಡ, ಯಾವುದಾದರೂ ಪುಣ್ಯಾತ್ಮರ, ಪಾಪಿಷ್ಟರ ಹೆಸರಿಟ್ಟ ರಸ್ತೆಯಾದರೂ ಸರಿ. ಆದರೆ ರೈಲು ದಾರಿ ಅಥವಾ ರೈಲು ರಸ್ತೆ ಅಂದರೆ...!? ನಾನು ಮೊದಲ ಬಾರಿ ವಿಯೆಟ್ನಾಂ ರಾಜಧಾನಿ ಹನೋಯಿ ನಗರಕ್ಕೆ ಹೋಗುವವರೆಗೂ ಇದೊಂದು ಪ್ರಶ್ನೆ ಇತ್ತು. ಯಾಕೆಂದರೆ ಟ್ರೇನ್ ಸ್ಟ್ರೀಟ್ ಇರುವುದು ಅಲ್ಲಿಯೇ.

ಪ್ರಪಂಚದ ಯಾವ ಮೂಲೆಯಲ್ಲಿಯೂ ಈ ರೀತಿಯ ಹೆಸರಿರುವ ರಸ್ತೆ ಇದ್ದದ್ದು ನನ್ನ ಗಮನ ಕ್ಕಂತೂ ಬರಲಿಲ್ಲ. ಹುಡುಕಿದಾಗ, ಥೈಲ್ಯಾಂಡ್ ನಲ್ಲಿ ಮೇಕ್ಲಾಂಗ್ ರೇಲ್ವೆ ಇದಕ್ಕೆ ಹತ್ತಿರವಾಗಿದೆ ಎಂದು ತಿಳಿದು ಬಂತಾದರೂ, ಅದಕ್ಕೂ ಇದಕ್ಕೂ ವ್ಯತ್ಯಾಸವಿದೆ ಎನ್ನುವುದೂ ಗೊತ್ತಾಯಿತು. ಅಲ್ಲಿ ರೈಲ್ವೆ ರಸ್ತೆ ಎಂಬ ಹೆಸರಂತೂ ಇಲ್ಲ. ಹನೋಯಿಗೆ ಮಾತ್ರ ಅದು ಸೀಮಿತವಾಗಿರುವುದು ಯಾಕೆ? ಹನೋಯಿಯ ಓಲ್ಡ್ ಕ್ವಾರ್ಟರ್‌ನಲ್ಲಿರುವ ಟ್ರೇನ್ ಸ್ಟ್ರೀಟ್‌ಗೆ ಭೇಟಿ ಕೊಟ್ಟಾಗ ಆ ಗೊಂದಲಕ್ಕೆ ಪರಿಹಾರ ಸಿಕ್ಕಿತು. ‌

ಸಾಮಾನ್ಯವಾಗಿ ರೈಲು ಹಳಿಯ ಹತ್ತಾರು ಮೀಟರ್ ಅಕ್ಕಪಕ್ಕದಲ್ಲಿ ಯಾವುದೇ ರೀತಿಯ ವಸತಿ, ವ್ಯಾಪಾರ, ವಹಿವಾಟುಗಳಿಗೆ ಅನುಮತಿ ಇರುವುದಿಲ್ಲ. ಬಹಳ ಹಳೆಯ ಕೆಲವು ರೈಲು ಹಳಿಗಳ ಬದಿಯಲ್ಲಿದ್ದ ಗುಡಿಸಲು, ಇಮಾರತುಗಳನ್ನೂ ಇತ್ತೀಚಿನ ದಿನಗಳಲ್ಲಿ ಎತ್ತಂಗಡಿ ಮಾಡಿಸುತ್ತಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಅದು ಸಹಜವೂ, ಅವಶ್ಯವೂ ಹೌದು. ಸುರಕ್ಷತೆಯ ಕಾರಣಕ್ಕೆ ಹಳಿಯ ಬದಿಯಲ್ಲಿ ಬೇಲಿ ಹಾಕಿರುವುದನ್ನೂ, ಗೇಟು ಕೂರಿಸಿರುವುದನ್ನೂ ನಾವು ನೋಡುತ್ತೇವೆ. ಆದರೂ ರೈಲಿಗೆ ಸಿಕ್ಕು ಹಸು, ನಾಯಿ ಇತ್ಯಾದಿ ಪ್ರಾಣಿಗಳು ಸತ್ತ ವಿಷಯ (ಕೆಲವೊಮ್ಮೆ ಮನುಷ್ಯರು ಸತ್ತ ವಿಷಯವನ್ನೂ) ಕೇಳುತ್ತಲೇ ಇರುತ್ತೇವೆ. ಅಂಥದ್ದರಲ್ಲಿ, ಪ್ರವಾಹದ ಹೊತ್ತಿಗೆ ಬರಡು ಹಳ್ಳಕ್ಕೆ ನೀರು ನುಗ್ಗಿ ಬರುವಂತೆ, ರೈಲು ಬರುವ ಹೊತ್ತಿಗೆ ಹಳಿಯ ಬದಿಗೆ ಜನ ನುಗ್ಗಿ ಬರುತ್ತಾರೆ ಎಂದರೆ ನೀವು ನಂಬಲೇಬೇಕು.

ಇದನ್ನೂ ಓದಿ: Kiran Upadhyay Column: ಹಾಗಾದರೆ ನೀವು ವಿಯೆಟ್ನಾಂನಲ್ಲಿದ್ದೀರಿ ಎನ್ನಬಹುದು

1858ರಿಂದ 1954ರವರೆಗೆ, ಹೆಚ್ಚು ಕಮ್ಮಿ ನೂರು ವರ್ಷ ವಿಯೆಟ್ನಾಂ ದೇಶ -ಫ್ರೆಂಚರ ಕೈಯಲ್ಲಿತ್ತು. 1902ರಲ್ಲಿ, ಅಂದರೆ ಇಂದಿಗೆ ಸುಮಾರು 125 ವರ್ಷಗಳ ಹಿಂದೆ ಒಂದು ರೈಲು ಮಾರ್ಗವನ್ನು ನಿರ್ಮಿಸ ಲಾಗಿತ್ತು. ಸಾಮಾನ್ಯವಾಗಿ ನಾವು ಪಟ್ಟಣ ಅಥವಾ ನಗರ ಹತ್ತಿರ ಬರುತ್ತಿದ್ದಂತೆ ಎದುರು ಬದುರು ಬರುವ ರೈಲು ಸುಗಮವಾಗಿ ಹಾದು ಹೋಗಲು ಬದಿಬದಿಯಲ್ಲಿಯೇ ನಿರ್ಮಿಸಿರುವ ಎರಡು ರೈಲು ಮಾರ್ಗವನ್ನು (ಎರಡು ಜೊತೆ ಹಳಿ) ಕಾಣುತ್ತೇವೆ. ಆದರೆ ಹನೋಯಿ ನಗರದ ಹೃದಯ ಭಾಗವನ್ನು ಸೀಳಿಕೊಂಡು ಹೋಗುವ ಈ ರೈಲ್ವೆ ಹಳಿ ಅಂದಿನಿಂದ ಇಂದಿನವರೆಗೆ ಒಬ್ಬಂಟಿಯೇ ಆಗಿದ್ದರೂ ಸದಾ ಜನರಿಂದ ಗಿಜಿಗುಡುವ ಜೀವಹಳಿಯೂ ಆಗಿದೆ.

ಸಾಮಾನ್ಯವಾಗಿ ಬೈಪಾಸ್ ರಸ್ತೆಯಾಗಲಿ, ಬೈಪಾಸ್ ರೈಲ್ವೆಯಾಗಲಿ ಊರಿನಿಂದ ಹತ್ತಾರು ಕಿಲೋ ಮೀಟರ್ ಹೊರಗಡೆಯಿಂದ ಹಾದು ಹೋಗುತ್ತದೆ. ಆದರೆ ಹನೋಯಿಯ ಈ ಬೈಪಾಸ್, ನಗರದ ಜನನಿಬಿಡ ಪ್ರದೇಶ ವನ್ನೇ ಸೀಳಿಕೊಂಡು ಹೋಗುತ್ತದೆ. ಅಷ್ಟೇ ಆದರೂ ವಿಶೇಷವೇನೂ ಆಗಿರು ತ್ತಿರಲಿಲ್ಲ. ಎಷ್ಟೋ ಕಡೆ ನಗರದ ಮಧ್ಯದಲ್ಲಿ ರೈಲು ಹಳಿಗಳು ಸ್ಲೀಪರ್‌ಗಳ ಮೇಲೆ ಶವವಾಗಿ ಬಿದ್ದಿರುವುದನ್ನು ನಾವು ಇಂದಿಗೂ ಕಾಣುತ್ತೆವೆ. ಆದರೆ ಈ ಹಳಿಯ ವಿಶೇಷತೆ ಎಂದರೆ, ಇದು ಬೆಳಗ್ಗೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೂ ಜನರಿಂದ ತುಂಬಿರುತ್ತದೆ. ಜತೆಗೆ ರೈಲು ಸಂಚಾರವೂ ನಡೆಯುತ್ತಿರುತ್ತದೆ.

ಏನಿಲ್ಲವೆಂದರೂ ಪ್ರತಿನಿತ್ಯ ಆರು-ಏಳು ರೈಲು ಹನೋಯಿಯಿಂದ ಉತ್ತರಾಭಿಮುಖವಾಗಿ ಈ ಹಳ್ಳಿಯ ಮೇಲೆ ಚಲಿಸುತ್ತದೆ. ಈ ಹಳಿಯ ಅಕ್ಕಪಕ್ಕದಲ್ಲಿರುವ ಕಟ್ಟಡಗಳನ್ನು ಆ ಕಾಲದಲ್ಲಿ ರೈಲ್ವೆ ಕಾರ್ಮಿಕರು ಮತ್ತು ಅವರ ಕುಟುಂಬದವರು ನೆಲೆಸಲು ಕಟ್ಟಲಾಗಿತ್ತು. ಸುಮಾರು ಇನ್ನೂರೈವತ್ತು ಮುನ್ನೂರು ಮೀಟರ್ ಹಳಿಯ ಅಕ್ಕಪಕ್ಕದಲ್ಲಿರುವ ಕಟ್ಟಡಗಳನ್ನು ಸ್ವಲ್ಪ ಗಮನಹರಿಸಿ ನೋಡಿ ದರೆ ಇದು ಸಾಮೂಹಿಕ ವಸತಿಗಾಗಿ ನಿರ್ಮಿಸಲಾದ ಕಟ್ಟಡ ಎಂದು ತಿಳಿಯುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶವೇ ವ್ಯಾಪಕ ಮನ್ನಣೆ ಗಳಿಸಿ, ವ್ಯಾಪಾರಕ್ಕೆ ಅನುಕೂಲಕರವಾಗಿರುವ, ಪ್ರವಾಸಿಗರನ್ನು ಸೆಳೆಯುವ ಆಕರ್ಷಣೆಯ ತಾಣವಾಗಿ ಮಾರ್ಪಟ್ಟಿದೆ.

ಹಳಿಯ ಎರಡೂ ಕಡೆಗಳಲ್ಲಿ ಹಣ್ಣಿನ ರಸ ಮಾಡುವ ಅಂಗಡಿಗಳು, ಟೀ-ಕಾಫಿ ಮಾರುವ ಕೆಫೆಗಳು ನೆನಪಿನ ಕಾಣಿಕೆಗಳನ್ನು ಮಾರುವ ಅಂಗಡಿಗಳು, ಬಟ್ಟೆ ಹಾಗೂ ಇನ್ನಿತರ ಸಣ್ಣ-ಪುಟ್ಟ ವಸ್ತು ಗಳನ್ನು ಮಾರುವ ಅಂಗಡಿಗಳಿವೆ. ಆದರೆ ಇಲ್ಲಿರುವ ಕೆ-ಗಳಲ್ಲಿ ಪಾನೀಯದ ದರ ಬರೆದ ಫಲಕ ಕಾಣುವುದಿಲ್ಲ.

ಅಂಗಡಿಯಲ್ಲಿ ಸಾಮಾನಿನ ರೇಟು ಬರೆದ ಬೋರ್ಡು ಕಂಡುಬರುವುದಿಲ್ಲ, ಅಲ್ಲಿ ಹೆಚ್ಚಾಗಿ ಕಾಣುವುದು ರೈಲು ಹಾದು ಹೋಗುವ ಸಮಯ ಬರೆದಿಟ್ಟ ಫಲಕಗಳು. ಹಳಿಯ ಬದಿಯಲ್ಲಿನ ಅಂಗಡಿಗಳು ಎಷ್ಟು ಹತ್ತಿರದಲ್ಲಿವೆ ಎಂದರೆ, ರೈಲಿಗೆ ಕಿಟಕಿಗಳಿದ್ದು, ಕೈ ಹೊರಗೆ ಚಾಚುವಂತಿದ್ದಿದ್ದರೆ, ಅಂಗಡಿಯ ಛಾವಣಿಗೆ ತಾಗುತ್ತಿತ್ತು. ಈ ಪ್ರದೇಶದಲ್ಲಿ ಕೆಫೆಗಳದ್ದೇ ಕಾರುಬಾರು ಜೋರು. ವಿಚಿತ್ರ ಎನಿಸಿದರೂ ವಿಶೇಷ ವಾಸ್ತವ ಇಲ್ಲಿದೆ. ಅದೆಷ್ಟೋ ಜನ ದಿನವಿಡೀ ಈ ಹಳಿಯ ಮೇಲೆ ಓಡಾಡಿ ಕೊಂಡೇ ವ್ಯಾಪಾರ ಮಾಡುತ್ತಿರುತ್ತಾರೆ.

ಕೆಫೆಯವರು ಹಳಿಯ ಪಕ್ಕದಲ್ಲಿಯೇ ಟೇಬಲ, ಕುರ್ಚಿ ಹಾಕಿ ಪಾನೀಯಗಳನ್ನು ಸರಬರಾಜು ಮಾಡುತ್ತಿರುತ್ತಾರೆ. ಏಕೆಂದರೆ, ಹಳಿಗೂ ಮತ್ತು ಅವರ ಕೆಫೆಗೂ ನಡುವಿನ ಅಂತರ ಬಹಳ ಕಡಿಮೆ. ಅನೇಕ ಕೆಫೆಗಳಲ್ಲಿ ಒಳಗಡೆ ಒಂದು ಟೇಬಲ್ ಹಾಕುವಷ್ಟೂ ಜಾಗವಿಲ್ಲ. ಅವರಿಗೆ ಇರುವುದು ಪಾನೀಯ ತಯಾರಿಸಲು ಬೇಕಾಗುವಷ್ಟು ಜಾಗ ಮಾತ್ರ. ಆದ್ದರಿಂದ ಟೇಬಲ್ ಮತ್ತು ಕುರ್ಚಿ ಹಳಿಗೆ ತಾಗಿಕೊಂಡೇ ಇದ್ದ ಹಾಗಿರುತ್ತದೆ. ಹಾಗಾದರೆ ಇಲ್ಲಿ ಅಪಘಾತಗಳೇ ಆಗಿಲ್ಲವೇ? ಅವಘಡಗಳು ಘಟಿಸಲಿಲ್ಲವೇ? ಒಂದೆರಡು ಘಟನೆಗಳು ಆಗಿದ್ದಿದೆ. ಸೆಲ್ಫಿ ಹುಚ್ಚಿನಿಂದ ರೈಲು ಬರುವಾಗ ಹಳಿಗೆ ಜಿಗಿದದ್ದಿದೆ. ಆ ಸಂದರ್ಭದಲ್ಲಿ ಚಾಲಕ ರೈಲು ನಿಲ್ಲಿಸಿದ್ದಿದೆ.

ಇನ್ನು ಕೆಲವೊಮ್ಮೆ ರೈಲಿಗೆ ತೀರ ಹತ್ತಿರವಾಗಿ ಫೋಟೋ ತೆಗೆಸಿಕೊಳ್ಳುವ ಹುಮ್ಮಸ್ಸಿನಿಂದ ಮೈ ಕೈ ಉಜ್ಜಿಸಿಕೊಂಡಿದ್ದಿದೆ. ಇಂತಹ ಕೆಲವು ಕಾರಣದಿಂದ ಈ ಮಾರ್ಗದಲ್ಲಿ ರೈಲು ಸಂಚಾರ ನಿಲ್ಲಿಸಬೇಕು ಎಂದು ಅಲ್ಲಿಯ ಪ್ರಶಾಸನ ವಿಚಾರ ಮಾಡಿದ್ದಿದೆ. 2019ರಿಂದ ಸುಮಾರು ನಾಲ್ಕು ವರ್ಷ ಈ ಸಂಚಾರಕ್ಕೆ ನಿರ್ಬಂಧ ಹೇರಿದ್ದೂ ಇದೆ. ಆದರೆ ಅಲ್ಲಿಯ ವ್ಯಾಪಾರಸ್ಥರ ಬೇಡಿಕೆ ಹೆಚ್ಚಾದಾಗ ಪುನಃ ಅನುಮತಿ ನೀಡಿ ಸಂಚಾರ ಆರಂಭಗೊಂಡಿದೆ. ದಿನಕ್ಕೆ ಆರು ಏಳು ರೈಲು ಬರುತ್ತದೆ ಎಂದಿದ್ದನಲ್ಲ, ಅದಕ್ಕೆ ಸರಿಯಾಗಿ ಐದು ನಿಮಿಷ ಮೊದಲು ಹಳಿಗೆ ಅಂಟಿಕೊಂಡಂತಿದ್ದ ಟೇಬಲ್ ಮತ್ತು ಕುರ್ಚಿಯನ್ನು ಒಂದೋ-ಎರಡೋ ಅಡಿಯಷ್ಟು ಹಿಂದಕ್ಕೆ ಜರುಗಿಸಿ, ರೈಲು ಹಾದುಹೋಗಲು ಜಾಗ ಮಾಡಿ ಕೊಡುತ್ತಾರೆ.

ಮದಗಜದಂತೆ ನಿಧಾನವಾಗಿ ಬರುವ ರೈಲು ಮುಂದೆ ಸಾಗಿ ಹೋಗುವವರೆಗೂ ಹೀಗೆಯೇ ಇರುತ್ತದೆ. ರೈಲು ಹೋದ ಬಳಿಕ ಪುನಃ ಟೇಬಲ್ ಮತ್ತು ಕುರ್ಚಿಗಳು ಹಳಿಗೆ ಅಂಟಿಕೊಂಡು ಕುಳಿತುಕೊಳ್ಳುತ್ತವೆ. ಮತ್ತೊಂದು ರೈಲು ಬರುವಾಗ ಮತ್ತೆ ಇದೇ ಪ್ರಕ್ರಿಯೆ ಜರಗುತ್ತದೆ. ಮತ್ತೆ ಮತ್ತೆ ಮರುಕಳಿಸುವ ಈ ಕ್ರಿಯೆಗೆ ಇಲ್ಲಿ ಯಾರೂ ಮರುಗುವುದಿಲ್ಲ. ಜನರಿಗೆ ಇದೊಂದು ಪ್ರವಾಸಿ ತಾಣ. ಸಣ್ಣ-ಪುಟ್ಟ ಖರೀದಿಯ ಸ್ಥಳವೂ ಹೌದು, ಚಹಾ ಬಿಯರ್ ಹೀರಿ ತೃಷೆ ತಣಿಸಿಕೊಳ್ಳುವ ತಾಣವೂ ಹೌದು. ಅದೆಲ್ಲ ಒಂದು ಕಡೆಯಾದರೆ, ಇನ್ನೊಂದು ಕಡೆ ಇದು ನೂರಾರು ಸ್ಥಳೀಯ ನಿವಾಸಿಗಳಿಗೆ ಜೀವನಾಡಿ.

ಬದುಕುವ ದಾರಿ, ಅಲ್ಲ, ಬದುಕುವ ಹಳಿ. ಇಲ್ಲಿಯ ವಿಶೇಷತೆ ಏನೆಂದರೆ ರೈಲು ಬರುವ ಹೊತ್ತಿಗೆ ಮಾತ್ರ ಬರುವ ಪ್ರವಾಸಿಗರನ್ನು ಅಲ್ಲಿಯ ಅಂಗಡಿಯವರು ಅಥವಾ ಇತರೆ ವ್ಯಾಪಾರ ಮಾಡುವವರು ಸುಲಿಯುವುದಿಲ್ಲ. ಸಿಕ್ಕಿದ್ದೇ ಶಿವ ಎಂದು ಲೂಟಿಗೆ ಇಳಿಯುವುದಿಲ್ಲ. ನನ್ನದೇ ಒಂದು ಅನುಭವ ಹೇಳುವುದಾದರೆ, ಇತ್ತೀಚೆಗೆ ನಾನು ಟ್ರೈನ್ ಸ್ಟ್ರೀಟ್‌ಗೆ ಹೋದಾಗ, ರೈಲು ಬರಲು ಇನ್ನೂ ಹತ್ತು-ಹದಿನೈದು ನಿಮಿಷ ಬಾಕಿ ಇದ್ದದ್ದರಿಂದ, ಜ್ಯೂಸ್ ಕುಡಿಯುತ್ತಾ ಕುಳಿತುಕೊಂಡಿದ್ದೆ. ಒಂದು ಪ್ಲಾಸ್ಟಿಕ್ ಬಾಸ್ಕೆಟ್‌ನಂತಹ ಚೀಲ, ಎರಡು ಬಟ್ಟೆಯ ತುಂಡು ಮತ್ತು ಒಂದೆರಡು ಸಣ್ಣ ಡಬ್ಬ ಹಿಡಿದುಕೊಂಡ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ತಣ್ಣನೆಯ ನಗು ಬೀರಿದ. ಸ್ಥಳೀಯ ಭಾಷೆಯಲ್ಲಿ ಸಣ್ಣ ಸ್ವರದಲ್ಲಿ ಏನೋ ಗುನುಗಿದ. ಬೇರೆ ಯಾರಾದರೂ ಆಗಿದ್ದರೆ ನಾನು ಅಷ್ಟು ಲಕ್ಷ್ಯ ಕೊಡುತ್ತಿರಲಿಲ್ಲವೇನೋ. ಏಕೆಂದರೆ ಇಂತಹ ಪ್ರವಾಸಿ ತಾಣದಲ್ಲಿ ಸಾಕಷ್ಟು ಜನ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಬಂದು ಹೋಗುತ್ತಿರುತ್ತಾರೆ. ತಮ್ಮ ಬಳಿ ಇರುವುದನ್ನು ಮಾರಲು, ಬೇಕಾದ-ಬೇಡವಾದ ಎಲ್ಲ ತಂತ್ರಗಳನ್ನೂ ಬಳಸುತ್ತಾರೆ.

ಅಷ್ಟಕ್ಕೂ ಅವಶ್ಯಕತೆ ಇಲ್ಲದ ವಸ್ತುವನ್ನು ಖರೀದಿಸುವವನು ನಾನಲ್ಲ. ಆದರೆ ಆತ ನನ್ನ ಹತ್ತಿರ ಬಂದು ನಿಂತ ರೀತಿ, ಅವನ ಹಾವ-ಭಾವ, ನಾನು ಅವನನ್ನೇ ದಿಟ್ಟಿಸುವಂತೆ ಮಾಡಿತು. ಅವನ ಭಾಷೆ ಒಂದಕ್ಷರವೂ ಅರ್ಥವಾಗಲಿಲ್ಲ. ನಾನು ಜ್ಯೂಸ್ ಅಂಗಡಿಯವನನ್ನು ಕರೆದು ‘ಆತ ಏನು ಹೇಳುತ್ತಿದ್ದಾನೆ?’ ಎಂದು ಕೇಳಿದೆ. ಆತ ನನ್ನ ಶೂ ಪಾಲಿಷ್ ಮಾಡಿ ಕೊಡುವುದಾಗಿ ಕೇಳುತ್ತಿದ್ದಾ ನೆಂದು ಹೇಳಿದ.

ನನ್ನ ಕಾಲಿನ ಕಡೆ ದೃಷ್ಟಿ ಹಾಯಿಸಿದೆ. ನಾನು ಹಾಕಿಕೊಂಡಿದ್ದ ಬೂಟು ಬಟ್ಟೆಯದ್ದಾದ್ದರಿಂದ ಅಷ್ಟು ಹೊಲಸಾದಂತೆ ಕಾಣುತ್ತಿರಲಿಲ್ಲ. ನಾನು ತೊಟ್ಟ ಬೂಟು ಚರ್ಮದಲ್ಲ, ಅಲ್ಲದೆ ನಾನು ಯಾವುದೇ ಸಭೆಗೋ, ಸಮಾರಂಭಕ್ಕೋ, ಇನ್ಯಾವುದೋ ಕಾರ್ಯಕ್ರಮಕ್ಕೋ ಹೋಗುತ್ತಿಲ್ಲವಾದ್ದ ರಿಂದ ಬೇಡ ಎಂದೆ. ಆದರೂ ಆತ ಅಲ್ಲಿಯೇ ನಿಂತು ನನ್ನನ್ನೇ ನೋಡುತ್ತಿದ್ದ. ಅವನಿಗೆ ಬೇಜಾರು ಮಾಡಲು ಮನಸಾಗಲಿಲ್ಲ. ‘ಎಷ್ಟು?’ ಎಂದು ಕೇಳಿದೆ. ‘ಹತ್ತು ಸಾವಿರ ವಿಯೆಟ್ನಾಂ ಡಾಂಗ್’ ಅಂದರೆ, ಭಾರತದ ಮೂವತ್ತೈದು ರೂಪಾಯಿ! ಅದರಲ್ಲಿ ಮತ್ತೆ ಚೌಕಾಸಿ ಮಾಡಬೇಕು ಎಂದು ಅನ್ನಿಸಲೇ ಇಲ್ಲ.

‘ಐದು ನಿಮಿಷದೊಳಗೆ ಮುಗಿಸಿಕೊಡುತ್ತೀಯ?’ ಎಂದು ಕೇಳಿದೆ. ಆಯಿತು ಎಂಬಂತೆ ತಲೆ ಆಡಿಸಿದ. ‘ಅಂಗಡಿ ಎಲ್ಲಿದೆ?’ ಎಂದು ಕೇಳಿದೆ. ‘ಅಂಗಡಿ ಇಲ್ಲ, ಇಲ್ಲಿಯೇ ಮಾಡಿಕೊಡುತ್ತೇನೆ’ ಅಂದ. ‘ಎಲ್ಲಿಯಾದರೂ ನನ್ನ ಬೂಟನ್ನು ಈತ ತೆಗೆದುಕೊಂಡು ಓಡಿ ಹೋದರೆ ಏನು ಮಾಡುವುದು?’ ಎಂಬ ಸಣ್ಣ ಅಳುಕಿನೊಂದಿಗೆ ಬೂಟು ಬಿಚ್ಚಿಕೊಟ್ಟೆ. ಆತ ಹಳಿಯ ಮಧ್ಯದಲ್ಲಿ ಹೋಗಿ ಕುಳಿತು ಕೆಲಸ ಆರಂಭಿಸಿದ. ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗದ ಸಂದರ್ಭದಲ್ಲಿ ನಮಗೆ ಮಧ್ಯವರ್ತಿ ಯಾಗಿದ್ದವ ಅದೇ ಜ್ಯೂಸ್ ಅಂಗಡಿಯವ.

ಇರಲಿ, ನಾನು ಕೂಡ ಶಾಲಾ ದಿನಗಳಲ್ಲಿ ಬಿಳಿಯ ಕ್ಯಾನ್ವಾಸ್ ಬೂಟಿಗೆ ಬಿಳಿಯ ಪಾಲಿಶ್ ಹಚ್ಚಿದ್ದು ನೆನಪಿತ್ತು. ಇತ್ತೀಚಿನ ವರ್ಷಗಳಲ್ಲಿ ಬಟ್ಟೆಯ ಬೂಟುಗಳನ್ನು ಸ್ವಚ್ಛಗೊಳಿಸಿದ್ದು ತೀರಾ ಕಮ್ಮಿ. ‘ಈತ ಒಂದು ಬಾಸ್ಕೆಟ್, ಎರಡು ಸಣ್ಣ ಡಬ್ಬ ಇಟ್ಟುಕೊಂಡು ಹೇಗೆ ಶೂ ಸ್ವಚ್ಛ ಮಾಡಿಕೊಡುತ್ತಾನೆ?’ ಎಂದು ಕುತೂಹಲದಿಂದ ನೋಡುತ್ತಾ ಕುಳಿತೆ. ಮೂರರಿಂದ ನಾಲ್ಕು ನಿಮಿಷ ಆಗಿರಬಹುದು, ನನ್ನ ಬೂಟು ಹೊಸದಾಗಿ ಕೊಳ್ಳುವಾಗ ಹೇಗಿತ್ತೋ, ಅದೇ ರೀತಿ ಮಿಂಚುತ್ತಿತ್ತು.

ನನ್ನ ಬೂಟಿನಲ್ಲಿ ಅಷ್ಟು ಕೊಳೆ ಇತ್ತು ಎಂದು ನನಗೆ ಅನಿಸಿರಲಿಲ್ಲ. ನಾನು ಪುನಃ ಅದನ್ನು ತೊಟ್ಟು ಕೊಳ್ಳುವರೆಗೂ ಆತ ವಿಧೇಯನಾಗಿ ನನ್ನ ಮುಂದೆ ಕೈಕಟ್ಟಿ ನಿಂತುಕೊಂಡೇ ಇದ್ದ. ಅವನು ಕೇಳಿದ್ದಕ್ಕಿಂತ ಸ್ವಲ್ಪ ಹೆಚ್ಚು ಹಣವನ್ನೇ ಅವನ ಕೈಗೆ ಇಟ್ಟೆ. ಅಷ್ಟರಲ್ಲಿ ರೈಲು ಬರುವ ಸಮಯವಾಗಿತ್ತು. ಟೇಬಲ, ಕುರ್ಚಿಗಳೆಲ್ಲ ಹಿಂದೆ ಸರಿದು ರೈಲಿಗೆ ಹಾದಿ (ಹಳಿ) ಬಿಟ್ಟುಕೊಡ ಬೇಕಾಗಿತ್ತು. ಅಂಗಡಿಯವರು ಅದರಲ್ಲಿ ಮಗ್ನರಾದರು. ರೈಲು ದೊಡ್ಡದೊಂದು ಹಾರ್ನ್ ಮಾಡುತ್ತಾ, ನಿಧಾನವಾಗಿ ತನ್ನ ಪಾಡಿಗೆ ಹೊರಟುಹೋಯಿತು.

ನಾನು ಅಲ್ಲಿಂದ ಹೊರಟಾಗ ಮನಸ್ಸಿನ ತುಂಬಾ ಅನೇಕ ವಿಚಾರಗಳು ತುಂಬಿಕೊಂಡಿದ್ದವು. ‘ನನ್ನ ಬೂಟ್ ಪಾಲಿಶ್ ಮಾಡಿದವ ದಿನಕ್ಕೆ ಎಷ್ಟು ದುಡಿಯಬಹುದು? ಮೂವತ್ತೈದು ರೂಪಾಯಿಗಾಗಿ ಎಷ್ಟು ಜನರನ್ನು ಕೇಳಬಹುದು?’ ಎಷ್ಟು ಜನರ ಮುಂದೆ ಕೈಕಟ್ಟಿ ನಿಲ್ಲಬಹುದು? ಎಷ್ಟು ಜನರಿಂದ ಬೇಡ ಎಂದು ಅನ್ನಿಸಿಕೊಳ್ಳಬಹುದು? ಅವನೋ ಅವನಂಥವರೋ ಒಂದು ಒಳ್ಳೆಯ ದಿನ ಎಂದರೆ ಎಷ್ಟು ಸಂಪಾದನೆ ಮಾಡಬಹುದು? ಅವನಂತೆಯೇ ಇನ್ನೂ ಎಷ್ಟು ಜನ ಇದೇ ಬೀದಿಯಲ್ಲಿ, ಅಲ್ಲ, ಹಳಿಯ ಬದಿಯಲ್ಲಿ ಬೇರೆ ಬೇರೆ ಸಣ್ಣ-ಪುಟ್ಟ ವ್ಯಾಪಾರ ಮಾಡಬಹುದು?’ ಆ ಕ್ಷಣದಲ್ಲಿ ನನಗೆ ಆ ಹಳಿ ಕೇವಲ ರೈಲು ಹಾದು ಹೋಗುವ ಸಾಧನವಾಗಿ ಕಾಣಲಿಲ್ಲ.

ಸ್ಥಳೀಯರ ಬದುಕಿಗೆ ಕಾಯಕಲ್ಪ ಒದಗಿಸಿಕೊಡುವ ಮಾಧ್ಯಮವಾಗಿ ಕಂಡಿತು. ಅಷ್ಟು ಜನರಿಗೆ ವರ್ಷವಿಡೀ ನಿತ್ಯದ ಬದುಕು ಕಟ್ಟಿಕೊಡುವ ವರವಾಗಿ ಕಂಡಿತು. ಅದಕ್ಕೇ ಇರಬೇಕು ರೈಲಿನ ಒಳಗಿನ ಜನ ರೈಲು ಹಾದು ಹೋಗುವಾಗ ಅಂಗಡಿಯವರ, ಪ್ರವಾಸಿಗರ ಅಥವಾ ಇಂಥ ಮಾರಾಟಗಾರರ ಕಡೆ ನಗುಮುಖದಿಂದ ಕೈಬೀಸಿದರೆ, ಅದು ಟಾಟಾ-ಬೈಬೈ ಅಲ್ಲ, ಇಂಥ ವ್ಯಾಪಾರಿಗಳಿಗೆ ಮಾಡುತ್ತಿರುವ ಆಶೀರ್ವಾದ ಎಂದೆನಿಸಿತು.

ಅಲ್ಲಿಂದ ಹೊರಡುವಾಗ ನನ್ನ ಮನಸ್ಸಿನಲ್ಲೂ ಒಂದು ವಿಷಯ ಗಟ್ಟಿ ಮಾಡಿಕೊಂಡಿದ್ದೆ. ‘ಇನ್ನೂ ಎಷ್ಟೇ ಬಾರಿ ಹನೋಯಿಗೆ ಬಂದರೂ ಈ ಸ್ಥಳಕ್ಕೆ ಬಂದೇ ಬರುತ್ತೇನೆ. ರೈಲು ನೋಡಲು ಅಲ್ಲ, ಈ ಹಳಿಯ ಮೇಲೆ ತಮ್ಮ ಬದುಕಿನ ಭವಿಷ್ಯವನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಜನರನ್ನು ನೋಡಲು!

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author