Dr N Someshwara Column: ಮನೋಚಿಕಿತ್ಸೆಗೆ ಮಹಾ ತಿರುವನ್ನು ಕೊಟ್ಟ ಅನ್ನಾ ಓ
ಜೋಸೆಫ್ ಬ್ರೂಯರ್ ಬೆರ್ಥಾಳ ಎಲ್ಲ ರೋಗಲಕ್ಷಣಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದ. ಬೆರ್ಥಾ ಒಳ್ಳೆಯ ಕಥೆಗಾರ್ತಿಯಾಗಿದ್ದಳು. ಆಕೆ ತನ್ನೆಲ್ಲ ಅನುಭವಗಳ ಕಥನವನ್ನು ಸ್ವಾರಸ್ಯವಾಗಿ ಹೇಳುತ್ತಿದ್ದಳು. ಹೀಗೆ ಆಕೆಯ ಹಲವು ಕಥೆಗಳನ್ನು ಕೇಳಿದ ಮೇಲೆ, ಬ್ರೂಯರ್ ಒಂದು ವಿಶೇಷ ಸಂಗತಿಯನ್ನು ಗಮನಿಸಿದ. ಆಕೆ ತನ್ನ ಬಾಲ್ಯದ ಕಹಿ ಘಟನೆಗಳನ್ನು/ನೋವನ್ನು/ಯಾರಲ್ಲೂ ಹೇಳಿಕೊಳ್ಳಲಾಗದ ತನ್ನ ಭಾವನೆ ಗಳನ್ನು ಬ್ರೂಯರ್ ಜತೆಯಲ್ಲಿ ಮುಕ್ತವಾಗಿ ಹಂಚಿಕೊಳ್ಳಲಾರಂಭಿಸಿದಳು. ಬೆರ್ಥಾ ಹೀಗೆ ತನ್ನ ಕಥನವನ್ನು ಹೇಳಿಕೊಂಡ ನಂತರ, ಆಕೆಯ ರೋಗಲಕ್ಷಣಗಳು ಕಡಿಮೆ ಯಾಗುತ್ತಿದ್ದವು.


ಹಿಂದಿರುಗಿ ನೋಡಿದಾಗ
ಓರ್ವ ಹೆಣ್ಣುಮಗಳ ಕಥೆ-ವ್ಯಥೆಯು ಮನೋವೈದ್ಯಕೀಯ ಹಾಗೂ ಮನೋಚಿಕಿತ್ಸೆಗೆ ಮಹತ್ತರ ವಾದ ತಿರುವನ್ನು ನೀಡಬಲ್ಲದು ಎಂದರೆ, ಅದನ್ನು ನಂಬುವುದು ಕಷ್ಟವಾಗುತ್ತದೆ. ಇದು ವಿಚಿತ್ರ ವೆನಿಸಿದರೂ ಸತ್ಯ. ಆ ಹೆಣ್ಣು ಮಗಳೇ ‘ಅನ್ನಾ ಓ’. ಅನ್ನಾ ಓ ಎನ್ನುವುದು ಆಕೆಯ ನಿಜನಾಮವಲ್ಲ. ಆಕೆಗೆ ಚಿಕಿತ್ಸೆಯನ್ನು ನೀಡುತ್ತಿದ್ದ ವೈದ್ಯರು ನೀಡಿದ ಒಂದು ಸಂಕೇತ ನಾಮವದು. ಆದರೆ ಜಗತ್ತಿನಲ್ಲಿ ಆಕೆಯು ತನ್ನ ನಿಜ ಹೆಸರಿಗಿಂತ, ಈ ಸಂಕೇತ ನಾಮದಲ್ಲಿಯೇ ಪ್ರಸಿದ್ಧಳಾಗಿ ದ್ದಾಳೆ. ಈಕೆಯು ಓರ್ವ ‘ರೋಗಿ’ಯಾಗಿ ಮನೋವೈದ್ಯಕೀಯಕ್ಕೆ ದೊಡ್ಡ ತಿರುವನ್ನು ನೀಡಿದ್ದರ ಜತೆಯಲ್ಲಿ, ಓರ್ವ ಲೇಖಕಿಯಾಗಿ, ಮಹಿಳಾವಾದಿಯಾಗಿ ಹಾಗೂ ಸಮಾಜ ಸುಧಾರಕಿಯಾಗಿ ಬಹು ದೊಡ್ಡ ಸಾಧನೆಯನ್ನು ಮಾಡಿದ್ದಾಳೆ.
ಆಕೆ ತನ್ನ ಬದುಕಿನಲ್ಲಿ ಮಾಡಿದ ಸಾಧನೆಯು, ಆಕೆ ಮನೋವೈದ್ಯಕೀಯಕ್ಕೆ ನೀಡಿದ ಕೊಡುಗೆಗಿಂತ ದೊಡ್ಡದು ಎಂದು ಇತಿಹಾಸಕಾರರು ಹೇಳುವುದುಂಟು. ಅನ್ನ ಓ ಎಂಬ ಮಹಿಳೆಯ ನಿಜವಾದ ಹೆಸರು ಬೆರ್ಥಾ ಪ್ಯಾಪೆನ್‌ಹೀಮ್. ಈಕೆ ಆಸ್ಟ್ರಿಯಾದ ವಿಯೆನ್ನಾದಲ್ಲಿ ಫೆಬ್ರವರಿ 27, 1859ರಂದು ಹುಟ್ಟಿದಳು. ತಂದೆ ಸಿಗ್ಮಂಡ್ ಪ್ಯಾಪೆನ್ ಹೀಮ್ ಹಾಗೂ ತಾಯಿ ರೇಚಾ ಪ್ಯಾಪೆನ್‌ಹೀಮ್.
ಇವರ ಮೂರನೆಯ ಮಗಳಾಗಿ ಹುಟ್ಟಿದ ಬೆರ್ಥಾ, ಸಾಂಪ್ರದಾಯಿಕ ಯಹೂದಿ ಪರಿಸರದಲ್ಲಿ ಬೆಳೆ ದಳು. ಅವಳ ತಂದೆ ಶ್ರೀಮಂತರಾಗಿದ್ದರು, ವಿದ್ಯಾವಂತರಾಗಿದ್ದರು. ಬೆರ್ಥಾ ಪ್ರಾಥಮಿಕ ವಿದ್ಯಾ ಭ್ಯಾಸವನ್ನು ಪಡೆದಳಾದರೂ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಮನೆಯವರು ಒಪ್ಪಿಗೆಯನ್ನು ನೀಡಲಿಲ್ಲ.
ಇದನ್ನೂ ಓದಿ: Dr N Someshwara Column: ಎಂದೆಂದಿಗೂ ʼಮೌಗ್ಲಿʼ ಆಗದ ಅವೆರಾನಿನ ವಿಕ್ಟರ್
ಆದರೆ ಆಕೆಗಿಂತ 18 ತಿಂಗಳು ಚಿಕ್ಕವನಾಗಿದ್ದ ವಿಲ್ ಹೆಲ್ಮ್ ಪ್ಯಾಪೆನ್‌ಹೀಮರ್ ತನ್ನ ಶಿಕ್ಷಣವನ್ನು ಮುಂದುವರಿಸಿದ. ಅಂದಿನ ಸಮಾಜವು ಗಂಡು ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದ ಆದ್ಯತೆಯನ್ನು ಹೆಣ್ಣು ಮಕ್ಕಳಿಗೆ ನೀಡುತ್ತಿರಲಿಲ್ಲ. ಹಾಗಾಗಿ ಬೆರ್ಥಾ ತನ್ನ ತಮ್ಮನ ಬಗ್ಗೆ ತುಂಬಾ ಹೊಟ್ಟೆಕಿಚ್ಚು ಪಡುತ್ತಿದ್ದಳು. 1880ನೆಯ ವರ್ಷ. ತಂದೆ ಸಿಗ್ಮಂಡ್ ಹಠಾತ್ತನೆ ಅಸ್ವಸ್ಥನಾದ.
ತಂದೆಯ ಅನಾರೋಗ್ಯವು ಬೆರ್ಥಾಳ ಬದುಕಿನ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಬೆರ್ಥಾ ತನ್ನ ತಂದೆಯ ಯೋಗಕ್ಷೇಮದ ಸಂಪೂರ್ಣ ಹೊಣೆಯನ್ನು ಹೊತ್ತಳು. ತಂದೆಯ ಹಾಸಿಗೆಯ ಬದಿಯಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದ ಹಾಗೆ ಬೆರ್ಥಾಳಿಗೆ ಆತಂಕವು ತೀವ್ರವಾಯಿತು. ಆಕೆ ಭ್ರಮಾ ಧೀನಳಾಗಿ ಒದ್ದಾಡಲಾರಂಭಿಸಿದಳು. ಆರಂಭದಲ್ಲಿ ಬೆರ್ಥಾಳ ಕುಟುಂಬದವರು ಅಕೆಯ ಅಸ್ವಸ್ಥ ತೆಗೆ ಗಮನವನ್ನು ನೀಡಲಿಲ್ಲ. ಆದರೆ ಅದು ಕ್ರಮೇಣ ಹೆಚ್ಚಾಯಿತು.
ಆಗ ಅವರ ಕುಟುಂಬದ ಹಿತೈಷಿಯಾದ ಜೋಸೆಫ್ ಬ್ರೂಯರ್ (1842-1925) ಎಂಬ ಆಸ್ಟ್ರಿಯನ್ ವೈದ್ಯನು ಬೆರ್ಥಾಳ ಯೋಗಕ್ಷೇಮವನ್ನು ವಹಿಸಲು ಮುಂದೆ ಬಂದ. ಈತನ ಗೆಳೆಯನು ಇಂದು ವಿಶ್ವವಿಖ್ಯಾತನಾಗಿರುವ ಸಿಗ್ಮಂಡ್ ಫ್ರಾಯ್ಡ್ (1856-1939). ಈತನು ಆಸ್ಟ್ರಿಯಾದಲ್ಲಿ ನರವೈದ್ಯನಾಗಿ ಪ್ರಖ್ಯಾತನಾಗಿದ್ದನು. ಬ್ರೂಯರ್ ತಾನು ಬೆರ್ಥಾಳ ಅಸ್ವಸ್ಥತೆಗೆ ಚಿಕಿತ್ಸೆಯನ್ನು ನೀಡಲಿದ್ದೇನೆ ಎಂದು ಆಕೆಯ ರೋಗ ಚರಿತ್ರೆಯನ್ನು ವಿವರಿಸಿದ. ಆಗ ಫ್ರಾಯ್ಡ್, ಆಕೆಗೆ ನೀಡುವ ಚಿಕಿತ್ಸೆ ಹಾಗೂ ಆ ಚಿಕಿತ್ಸೆಗೆ ಆಕೆ ಹೇಗೆ ಪ್ರತಿಸ್ಪಂದಿಸುತ್ತಾಳೆ ಎನ್ನುವು ದನ್ನು ತನಗೆ ನಿತ್ಯ ವರದಿ ಮಾಡಬೇಕೆಂದು ಕೇಳಿಕೊಂಡ.

ರೋಗಲಕ್ಷಣಗಳು: ಸಿಗ್ಮಂಡ್ ತೀರಿಕೊಂಡ ನಂತರ, ಬೆರ್ಥಾಳ ರೋಗಲಕ್ಷಣಗಳು ಹೆಚ್ಚಿದವು. ಎರಡು ವರ್ಷಗಳ ಅವಧಿಯಲ್ಲಿ ಬೆರ್ಥಾ ಅನುಭವಿಸಿದ ರೋಗ ಲಕ್ಷಣಗಳನ್ನು ಈ ಕೆಳಕಂಡಂತೆ ಸಂಗ್ರಹಿಸ ಬಹುದು. ಆಗ ಆಕೆಗೆ 21 ವರ್ಷಗಳಾಗಿದ್ದವು.
- ವಾಕ್‌ಸ್ತಂಭನ (ಅಫೇಸಿಯ): ಬೆರ್ಥಾ ಬಹುಭಾಷಾ ಕೋವಿದಳಾಗಿದ್ದಳು. ಅಂಥವಳಿಗೆ ಇದ್ದಕ್ಕಿದ್ದ ಹಾಗೆ ಮಾತು ನಿಂತುಹೋಗುತ್ತಿತ್ತು. ಕೆಲವು ಸಲ ಆಕೆಗೆ ತಿಳಿದಿದ್ದ ಇಂಗ್ಲಿಷ್, ಫ್ರೆಂಚ್, ಇಟಾಲಿ ಯನ್ ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಮಾತ್ರ ಮಾತನಾಡಬಲ್ಲವ ಳಾಗಿದ್ದಳು. ಉಳಿದ ಭಾಷೆಗಳಲ್ಲಿ ಮಾತನಾಡಲು ಆಗುತ್ತಿರಲಿಲ್ಲ. ಆದರೆ ಎಲ್ಲ ಸಮಯದಲ್ಲೂ ಜರ್ಮನ್ ಭಾಷೆ ಮಾತ್ರ ಚೆನ್ನಾಗಿ ಅರ್ಥವಾಗುತ್ತಿತ್ತು. ಈ ವಾಕ್‌ಸ್ತಂಭನದ ಅವಧಿಯು ವ್ಯತ್ಯಾಸ ವಾಗುತ್ತಿತ್ತು. ಕೆಲವು ಸಲ ಹಲವು ದಿನಗಳವರೆಗೆ ಮಾತನಾಡಲು ಆಗುತ್ತಲೇ ಇರಲಿಲ್ಲ.
- ನರಬೇನೆ (ನ್ಯೂರಾಲ್ಜಿಯ): ಮುಖದಲ್ಲಿ ತ್ರಿಶಾಖಾ ನರ (ಟ್ರೈಜೆಮೈನಲ್ ನರ್ವ್) ಇರುತ್ತದೆ. ಇದು ಕಣ್ಣು, ಮೇಲ್ದವಡೆ ಮತ್ತು ಕೆಳದವಡೆಗಳಿಗೆ ನರಶಾಖೆಗಳನ್ನು ಪೂರೈಸುತ್ತದೆ. ಈ ನರಗಳಲ್ಲಿ ಉಗ್ರಸ್ವರೂಪದ ನೋವು ಕಾಣಿಸಿಕೊಳ್ಳುತ್ತದೆ. ಇದುವೇ ‘ತ್ರಿಶಾಖಾ ನರಬೇನೆ’ ಅಥವಾ ‘ಟ್ರೈಜೆಮೈ ನಲ್ ನ್ಯೂರಾಲ್ಜಿಯ’. ಈ ನೋವನ್ನು ಕಡಿಮೆ ಮಾಡಲು ಆಕೆಗೆ ಮಾರ್ಫಿನ್ ಮತ್ತು ಕ್ಲೋರಾಲ್ ಎಂಬ ಔಷಧಗಳನ್ನು ಬ್ರೂಯರ್ ನೀಡಲಾರಂಭಿಸಿದ. ನೋವು ಕಡಿಮೆಯಾಗದಿದ್ದರೂ, ಆಕೆಯು ಈ ನೋವುನಿವಾರಕಗಳ ದಾಸ್ಯಕ್ಕೆ (ಅಡಿಕ್ಷನ್) ತುತ್ತಾದಳು.
- ಅರೆ ಪಾರ್ಶ್ವವಾಯು (ಪ್ಯಾರೆಸಿಸ್): ಪೆರಾಲಿಸಿಸ್ ಎಂದರೆ ಸಂಪೂರ್ಣ ಪಾರ್ಶ್ವವಾಯು. ಪ್ಯಾರೆಸಿಸ್ ಎಂದರೆ ಅರೆ ಪಾರ್ಶ್ವವಾಯು. ಆಕೆಯ ದೇಹದ ಬಲ ಅರೆಭಾಗವು ನಿಶ್ಚೇತಗೊಂಡಿತ್ತು. ಹಾಗಾಗಿ ಎಡಗೈಯಿಂದ ಬರೆಯುವುದನ್ನು ಕಲಿತುಕೊಂಡಳು.
- ದೃಷ್ಟಿ ಏರುಪೇರು: ಆಕೆಗೆ ವಚ್ಚಗಣ್ಣು (ಸ್ಕ್ವಿಂಟ್) ಆರಂಭವಾಯಿತು. ಎಲ್ಲ ವಸ್ತುಗಳು ತಮ್ಮ ಸಹಜ ಗಾತ್ರಕ್ಕಿಂತ ದೊಡ್ಡದಾಗಿ ಕಾಣುತ್ತಿದ್ದವು.
- ಮಾನಸಿಕ ಆಂದೋಲನ: ಬೆರ್ತಾಳನ್ನು ತೀವ್ರ ಆತಂಕವು ಕಾಡುತ್ತಿತ್ತು. ಅದಾದ ಕೂಡಲೇ ಖಿನ್ನತೆಯು ಆಕೆಯನ್ನು ಆವರಿಸುತ್ತಿತ್ತು. ಅಪರೂಪಕ್ಕೆ ಈ ಎರಡು ಘಟ್ಟಗಳ ನಡುವೆ ಆಕೆಯು ಪ್ರಶಾಂತವಾಗಿರುತ್ತಿದ್ದಳು.
- ಮರೆವು (ಆಮ್ನೀಸಿಯ): ಈ ಆತಂಕ ಅಥವಾ ಖಿನ್ನತೆಯ ಅವಧಿಯಲ್ಲಿ ಆಕೆ ಆಡುವ ಮಾತು, ನಡೆದುಕೊಳ್ಳುವ ರೀತಿ, ಮಾಡುವ ಕೆಲಸಗಳು ಸಂಪೂರ್ಣ ಸ್ವಸ್ಥವಾಗಿದ್ದಾಗ ನೆನಪಿಗೆ ಬರುತ್ತಿರ ಲಿಲ್ಲ. ಸಂಪೂರ್ಣ ವಿಸ್ಮೃತಿಯು ಆವರಿಸುತ್ತಿತ್ತು.
- ಆಹಾರ ಸೇವನಾ ವೈಪರೀತ್ಯ: ಆಕೆಯು ಆತಂಕ ಅಥವಾ ಖಿನ್ನಾವಸ್ಥೆಯಲ್ಲಿದ್ದಾಗ ಆಹಾರ ವನ್ನು ನಿರಾಕರಿಸುತ್ತಿದ್ದಳು. ಒಂದು ಬೇಸಿಗೆಯಲ್ಲಂತೂ ದ್ರವಾಹಾರವನ್ನೂ ಸೇವಿಸಲಿಲ್ಲ. ಕೇವಲ ಹಣ್ಣು ಗಳನ್ನು ತಿಂದು ಜೀವವನ್ನು ಹಿಡಿದಿಟ್ಟು ಕೊಂಡಿದ್ದಳು.
- ಹುಸಿಗರ್ಭ (ಸ್ಯೂಡೋಸಯಸಿಸ್): ಬ್ರೂಯರ್ ತನ್ನೊಡನೆ ಲೈಂಗಿಕ ಸಂಪರ್ಕವನ್ನು ಮಾಡಿ ಗರ್ಭಿಣಿಯನ್ನಾಗಿ ಮಾಡಿರುವನೆಂದು ಆಕೆ ಭಾವಿಸಿದ್ದಳು. ಹುಸಿಗರ್ಭ ಸ್ಥಿತಿಯಲ್ಲಿ, ಅಂದರೆ ತಾನು ಗರ್ಭಿಣಿಯಾಗಿದ್ದೇನೆ ಎಂದು ತನಗೆ ತಾನೆ ಹೇಳಿಕೊಂಡು ಒಪ್ಪಿರುವ ಸ್ಥಿತಿಯಲ್ಲಿ ಗರ್ಭಾವವಸ್ಥೆಯ ಕೆಲವು ಲಕ್ಷಣಗಳು ಕಾಣಬಹುದು.
- ಕಪ್ಪು-ಬಿಳುಪು: ಬೆರ್ಥಾ ಭಿನ್ನ ಚಿತ್ತವನ್ನು ತೋರುತ್ತಿದ್ದಳು. ಆತಂಕದಲ್ಲಿದ್ದಾಗ ಕೆಟ್ಟದಾಗಿ ಬೈಗಳನ್ನು ಆಡುತ್ತಿದ್ದಳು ಹಾಗೂ ಹಿಂಸಾಪ್ರವೃತ್ತಿಯನ್ನು ತೋರುತ್ತಿದ್ದಳು. ನಡುನಡುವೆ ಮಾತ್ರ ಸ್ವಸ್ಥಳಾಗಿರುತ್ತಿದ್ದಳು. ಆಗ ಅವಳಿಗೆ ತಾನು ವಿಕ್ಷಿಪ್ತಳಾಗಿದ್ದಾಗ ಮಾಡಿದ ಒಂದೂ ಕೆಲಸವೂ ನೆನಪಿ ನಲ್ಲಿ ಇರುತ್ತಿರಲಿಲ್ಲ.
ಅಂದಿನ ದಿನಗಳಲ್ಲಿ ಲಭ್ಯವಿದ್ದ ಅರಿವಿನ ಹಿನ್ನೆಲೆಯಲ್ಲಿ ಎಲ್ಲರೂ ಬೆರ್ಥಾಳಿಗೆ ‘ಚಿತ್ತೋನ್ಮಾದ’ ಅಥವಾ ‘ಹಿಸ್ಟೀರಿಯ’ ಆಗಿದೆ ಎಂದು ಕರೆದರು. 19-20ನೆಯ ಶತಮಾನದ ಆದಿಭಾಗದಲ್ಲಿ ಇಂಥ ರೋಗನಿದಾನವನ್ನು ಮಾಡುವುದು ಸಾಮಾನ್ಯವಾಗಿತ್ತು. ಈಗ ಈ ರೋಗನಿದಾನವು ಹಳತಾಗಿದೆ. ಯಾರೂ ಈ ಹೆಸರನ್ನು ಬಳಸುವುದಿಲ್ಲ.
ಆಧುನಿಕ ಮನೋವೈದ್ಯಕೀಯ ರೋಗ ವರ್ಗೀಕರಣದಲ್ಲಿ ಇದನ್ನು ‘ಡಿಎಸ್‌ಎಂ-5’ ಎಂದು ಹಾಗೂ ಅಂತಾರಾಷ್ಟ್ರೀಯ ರೋಗನಿದಾನ ಪಟ್ಟಿಯಲ್ಲಿ ಇದನ್ನು ‘ಐಸಿಡಿ-11’ ಎಂದೂ ಕರೆಯುತ್ತಾರೆ. ಕನ್ವರ್ಷನ್ ಡಿಸಾರ್ಡರ್, ಸೊಮಾಟಿಕ್ ಸಿಂಪ್ಟಮ್ ಡಿಸಾರ್ಡರ್, ಡಿಸೋಸಿಯೇಟಿವ್ ಡಿಸಾರ್ಡರ್, ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್, ಆಂಕ್ಸೈಟಿ ಡಿಸಾರ್ಡರ್, ಡಿಪ್ರೆಶನ್ ಇತ್ಯಾದಿ ಹೆಸರಿನಡಿ ಯಲ್ಲಿ ರೋಗನಿದಾನವನ್ನು ಮಾಡುವುದುಂಟು. ಆ ವಿವರಗಳು ನಮಗೆ ಸದ್ಯಕ್ಕೆ ಅನಗತ್ಯ.
ಚಿಕಿತ್ಸೆ: ಜೋಸೆಫ್ ಬ್ರೂಯರ್ ಬೆರ್ಥಾಳ ಎಲ್ಲ ರೋಗಲಕ್ಷಣಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದ. ಬೆರ್ಥಾ ಒಳ್ಳೆಯ ಕಥೆಗಾರ್ತಿಯಾಗಿದ್ದಳು. ಆಕೆ ತನ್ನೆಲ್ಲ ಅನುಭವಗಳ ಕಥನವನ್ನು ಸ್ವಾರಸ್ಯವಾಗಿ ಹೇಳುತ್ತಿದ್ದಳು. ಹೀಗೆ ಆಕೆಯ ಹಲವು ಕಥೆಗಳನ್ನು ಕೇಳಿದ ಮೇಲೆ, ಬ್ರೂಯರ್ ಒಂದು ವಿಶೇಷ ಸಂಗತಿಯನ್ನು ಗಮನಿಸಿದ. ಆಕೆ ತನ್ನ ಬಾಲ್ಯದ ಕಹಿ ಘಟನೆಗಳನ್ನು/ನೋವನ್ನು/ಯಾರಲ್ಲೂ ಹೇಳಿಕೊಳ್ಳಲಾಗದ ತನ್ನ ಭಾವನೆಗಳನ್ನು ಬ್ರೂಯರ್ ಜತೆಯಲ್ಲಿ ಮುಕ್ತವಾಗಿ ಹಂಚಿಕೊಳ್ಳಲಾರಂಭಿಸಿದಳು. ಬೆರ್ಥಾ ಹೀಗೆ ತನ್ನ ಕಥನವನ್ನು ಹೇಳಿಕೊಂಡ ನಂತರ, ಆಕೆಯ ರೋಗಲಕ್ಷಣಗಳು ಕಡಿಮೆ ಯಾಗುತ್ತಿದ್ದವು. ಒಂದು ಉದಾಹರಣೆಯನ್ನು ವಿವರವಾಗಿ ನೋಡಬಹುದು. ಬೆರ್ಥಾಳಿಗೆ ಒಂದು ಸಲ ನೀರನ್ನು ಕುಡಿಯುವುದು ಅಸಾಧ್ಯವಾಯಿತು. ಹಾಗಾಗಿ ಆಕೆ ಅನ್ನ-ನೀರು ಸೇವಿಸುವುದನ್ನು ಬಿಡಬೇಕಾಯಿತು. ಬ್ರೂಯರ್ ಆಕೆಯ ಜತೆಯಲ್ಲಿ ಮಾತನಾಡಲಾರಂಭಿಸಿದ.
ಆಕೆಗೊಬ್ಬಳು ಅಜ್ಜಿಯಿದ್ದಳು. ಆ ಅಜ್ಜಿಯೆಂದರೆ ಆಕೆಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಒಂದು ಸಲ ಆ ಅಜ್ಜಿಯ ನಾಯಿಯು, ಬೆರ್ಥಾ ಕುಡಿಯುವ ಲೋಟದಲ್ಲಿದ್ದ ನೀರನ್ನು ಕುಡಿದುಬಿಟ್ಟಿತು. ಅಂದಿನಿಂದ ಆಕೆಗೆ ನೀರನ್ನು ಕುಡಿಯಲು ಆಗಲೇ ಇಲ್ಲ! ಆಕೆಯ ಮನದಾಳದಲ್ಲಿ ಹುದುಗಿದ್ದ ಈ ಪ್ರಕರಣವನ್ನು ಹೇಳಿಕೊಳ್ಳುತ್ತಲೇ ಆಕೆಯು ನಿರುಮ್ಮಳಳಾದಳು. ಆಕೆಗೆ ನೀರನ್ನು ಕುಡಿಯಲು ಸಾಧ್ಯವಾಯಿತು. ಮತ್ತೆಂದೂ ಆಕೆಗೆ ಈ ಸಮಸ್ಯೆ ಕಾಣಲಿಲ್ಲ.
ಬೆರ್ಥಾ ಈ ರೀತಿಯ ಚಿಕಿತ್ಸೆಗೆ ‘ಸಂಭಾಷಣಾ ಚಿಕಿತ್ಸೆ’ ಅಥವಾ ‘ಮಾತುಕತೆಯ ಚಿಕಿತ್ಸೆ’ ಎಂದು ಕರೆದಳು. ಇಂಗ್ಲಿಷಿನಲ್ಲಿ ಆಕೆ ಪ್ರಯೋಗಿಸಿದ ಪದ ‘ಟಾಕಿಂಗ್ ಥೆರಪಿ’. ಜತೆಗೆ ಆಕೆಯು ಒಂದು ಅದ್ಭುತವಾದ ಉಪಮೆಯನ್ನೂ ನೀಡಿದಳು. ಅದುವೇ ‘ಚಿಮ್ನಿ ಸ್ವೀಪಿಂಗ್’. 20ನೆಯ ಶತಮಾ ನದ ಆದಿಭಾಗದ ಯುರೋಪಿನಲ್ಲಿ ಚಳಿ ಅಧಿಕವಾಗಿದ್ದ ಕಾರಣ, ಮನೆಯ ಒಳಗೆ ಅಗ್ಗಿಷ್ಟಿಕೆಗಳು (-ರ್ ಪ್ಲೇಸ್) ಇರುತ್ತಿದ್ದವು.
ಅವುಗಳಿಂದ ಹೊರಡುವ ಹೊಗೆಯನ್ನು ಹೊರಗೆ ಹಾಕಲು ಉದ್ದನೆಯ ಚಿಮಣಿಗಳು ಇರುತ್ತಿದ್ದವು. ಈ ಚಿಮಣಿಗಳು ಆಗಾಗ್ಗೆ ಕಟ್ಟಿಕೊಳ್ಳುತ್ತಿದ್ದವು. ಆಗ ಕಟ್ಟಿಕೊಂಡಿರುವ ಕಿಟ್ಟವನ್ನು ನಿಯತವಾಗಿ ಗುಡಿಸಿ ಸ್ವಚ್ಛಗೊಳಿಸಬೇಕಾಗಿತ್ತು. ಈ ‘ಚಿಮ್ನಿ ಸ್ವೀಪಿಂಗ್’ ಒಂದು ಉದ್ಯಮವಾಗಿತ್ತು. ಬೆರ್ಥಾ ತನ್ನ ಮನದಲ್ಲಿ ಕಿಟ್ಟ ರೂಪದಲ್ಲಿ ಸಂಗ್ರಹಗೊಂಡಿರುವ ಅನಗತ್ಯ ವಿಚಾರಗಳನ್ನು, ಹೀಗೆ ಮಾತುಕತೆಯ ಮೂಲಕ ಹೊರಹಾಕುವುದನ್ನು ‘ಚಿಮ್ನಿ ಸ್ವೀಪಿಂಗ್’ ಎಂದು ಅರ್ಥವತ್ತಾಗಿ ಹೇಳಿಕೊಂಡಳು.
ಈ ರೀತಿಯ ಚಿಕಿತ್ಸೆಯನ್ನು ‘ಕೆಥಾರಸಿಸ್’ ಎಂದು ಕರೆಯುವ ವಾಡಿಕೆಯಿದೆ. ಈ ಶಬ್ದದ ಮೂಲ ಅರ್ಥ ಬೇಧಿಯಾಗುವುದು. ಒಂದು ಸಲ ಬೇಧಿಯಾದರೆ ಹೇಗೆ ಕರುಳು ಸಂಪೂರ್ಣವಾಗಿ ಸ್ವಚ್ಛ ವಾಗುವುದೋ, ಹಾಗೆಯೇ ಮನಸ್ಸಿನ ಒಳಗೆ ಹೆಪ್ಪುಗಟ್ಟಿರುವ ನೋವುಗಳನ್ನೆಲ್ಲ ಸಂಪೂರ್ಣವಾಗಿ ಹೊರ ಹಾಕಿದಾಗ, ಅದೊಂದು ರೀತಿಯ ಭಾವವಿರೇಚಕ ಅಥವಾ ಮಾನಸಿಕ ಬೇಧಿಯೇ ಆಗಿರುತ್ತಿತ್ತು.
ಬ್ರೂಯರ್, ಬೆರ್ಥಾಳಿಗೆ ತಾನು ನೀಡುತ್ತಿರುವ ಚಿಕಿತ್ಸೆಯ ಪ್ರತಿಯೊಂದು ವಿವರಗಳನ್ನು ಫ್ರಾಯ್ಡ ನಿಗೆ ಒಪ್ಪಿಸುತ್ತಿದ್ದ. ಫ್ರಾಯ್ಡ್, ಬ್ರೂಯರ್ ಜತೆಗೂಡಿ ‘ಸ್ಟಡೀಸ್ ಆನ್ ಹಿಸ್ಟೀರಿಯ’ ಎನ್ನುವ ಪುಸ್ತಕವನ್ನು ಬರೆದು 1895ರಲ್ಲಿ ಪ್ರಕಟಿಸಿದ. ಆದರೆ ಫ್ರಾಯ್ಡ್ ಒಮ್ಮೆಯೂ ಬೆರ್ಥಾಳನ್ನು ಭೇಟಿ ಯಾಗಿರಲಿಲ್ಲ!
ಬೆರ್ಥಾ ತನ್ನ ಹುಸಿಗರ್ಭಕ್ಕೆ ಬ್ರೂಯರ್ ಕಾರಣವೆಂದಾಗ, ಬ್ರೂಯರ್ ಆಕೆಯ ಮನೆಗೆ ಹೋಗು ವುದನ್ನು ಬಿಟ್ಟ. ಹಾಗಾಗಿ ಚಿಕಿತ್ಸೆಯು ಮಧ್ಯದಲ್ಲಿಯೇ ನಿಂತಿತು. ಬೆರ್ಥಾ ಸ್ವಿಜರ್ಲೆಂಡ್‌ನಲ್ಲಿರುವ ಒಂದು ಸ್ಯಾನಿಟೋರಿಯಂಗೆ ದಾಖಲಾದಳು. ಅದು ಹೇಗೆ ಸಂಪೂರ್ಣ ಸ್ವಸ್ಥಳಾದಳು ಎನ್ನುವ ವಿವರಗಳು ತಿಳಿದಿಲ್ಲ. ಆದರೆ ಆಕೆ ಸಾರ್ವಜನಿಕ ಕ್ಷೇತ್ರಕ್ಕೆ ಬಂದಳು.
ಜರ್ಮನಿಯಲ್ಲಿ ಮೊದಲ ಮಹಿಳಾಪರ ಸಂಘಟನೆಯನ್ನು ಆರಂಭಿಸಿದಳು. ಮಕ್ಕಳು ಮತ್ತು ಮಹಿಳೆಯರನ್ನು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸುವುದರ ಬಗ್ಗೆ ಧ್ವನಿಯೆತ್ತಿದಳು. ಅಗತ್ಯ ವಿದ್ದ ಮಹಿಳೆಯರಿಗೆ ಮನೆಯನ್ನು ಕಟ್ಟಿಸಿಕೊಟ್ಟಳು. ಮಹಿಳಾಪರ ಸಾಹಿತ್ಯವನ್ನು ಜರ್ಮನ್ ಭಾಷೆಯಲ್ಲಿ ಬರೆಯಲಾರಂಭಿಸಿದಳು. ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಜರ್ಮನಿಯನ್ನು ಪ್ರತಿನಿಧಿಸಿದಳು. ಬೆರ್ಥಾ, ಬ್ರೂಯರ್ ಹಾಗೂ ಫ್ರಾಯ್ಡ್ ಅವರ ಅಧ್ಯಯನದಿಂದ, ಇಂದು ಮನೋ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಹೊಸ ಪರಿಕಲ್ಪನೆಗಳು ಅಸ್ತಿತ್ವಕ್ಕೆ ಬಂದಿವೆ.
ಮೊದಲನೆಯದು ‘ಸುಪ್ತಮನಸ್ಸು’ ಅಥವಾ ‘ಸಬ್ ಕಾನ್ಷಿಯಸ್ ಮೈಂಡ್’. ‘ಆಘಾತಕಾರಿ ಅನುಭವ ಗಳನ್ನು ಮೆಟ್ಟಿ ನಿಲ್ಲುವಿಕೆ’ ಅಥವಾ ‘ರೆಪ್ರೆಶನ್ ಆಫ್ ಟ್ರಮಾಟಿಕ್ ಮೆಮೋರೀಸ್’, ರೋಗಿಯು ತನಗೆ ಅರಿವಿಲ್ಲದಂತೆಯೇ ತನ್ನ ವೈದ್ಯನನ್ನು ಪ್ರೀತಿಸುವುದು. ಇದನ್ನು ‘ಭಾವಾಂತರ’ ಅಥವಾ ‘ಟ್ರಾನ್ಸ್-ರೆನ್ಸ್’ ಎಂದು ಕರೆದರೆ, ವೈದ್ಯನು ರೋಗಿಯಲ್ಲಿ ಒಲವನ್ನು ತೋರುವುದನ್ನು ‘ಪ್ರತಿ-ಭಾವಾಂತರ’ ಅಥವಾ ‘ಕೌಂಟರ್ ಟ್ರಾನ್ಸ್ ಫರೆನ್ಸ್’ ಎಂದರು.
‘ಮುಕ್ತಕಥನ’ ಅಥವಾ‘ಫ್ರೀ ಅಸೋಸಿಯೇಷನ್’ ಮೂಲಕ ಭಾವವಿರೇಚನ ಅಥವಾ ಕೆಥಾರಸಿಸ್ ಆಗುತ್ತದೆ ಎಂದರು. ಬೆರ್ಥಾ ಅಥವಾ ಅನ್ನಾ ಓ ಪ್ರಕರಣದಲ್ಲಿ ಹೊರಬಂದ ಈ ಎಲ್ಲ ಪರಿಕಲ್ಪನೆ ಗಳು ‘ಮನೋವಿಶ್ಲೇಷಣೆ’ ಅಥವಾ ‘ಸೈಕೋ-ಅನಾಲಿಸಿಸ್’ ಎಂಬ ಹೊಸ ಚಿಕಿತ್ಸಾ ವಿಧಾನವು ಹುಟ್ಟಿಕೊಳ್ಳಲು ಕಾರಣವಾಯಿತು. ಅನ್ನಾ ಓ ಪ್ರಕರಣವು ಆಧುನಿಕ ಮನೋವೈದ್ಯಕೀಯ ಕ್ಷಿತಿಜ ದಲ್ಲಿ ಮೊದಲ ಮನೋವಿಶ್ಲೇಷಣೆಯ ಪ್ರಕರಣವಾಗಿ ದಾಖಲಾಗಿದೆ.