ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಎಂದೆಂದಿಗೂ ʼಮೌಗ್ಲಿʼ ಆಗದ ಅವೆರಾನಿನ ವಿಕ್ಟರ್‌

ಮನುಷ್ಯರ ಮಕ್ಕಳು, ತಮ್ಮ ಹೆತ್ತವರಿಂದ ಹೇಗೋ ತಪ್ಪಿಸಿಕೊಂಡು ಕಾಡಿನಲ್ಲಿ ಪ್ರಾಣಿಗಳ ಸಂಪ ರ್ಕಕ್ಕೆ ಬರುತ್ತವೆ. ಪ್ರಾಣಿಗಳು ಮಕ್ಕಳನ್ನು ಕೊಲ್ಲದೆ ಕಾಪಾಡುತ್ತವೆ. ಆ ಮಗುವು ಪ್ರಾಣಿಗಳ ಜತೆಯಲ್ಲಿದ್ದು ಪ್ರಾಣಿಗಳ ಜೀವನವನ್ನೇ ರೂಢಿಸಿಕೊಳ್ಳುತ್ತವೆ. ಅಕಸ್ಮಾತ್ ಮನುಷ್ಯರ ಕೈಗೆ ಸಿಕ್ಕಿಬೀಳುತ್ತವೆ. ನಾನಾ ರೀತಿಯ ಕಷ್ಟಗಳಿಗೆ ಸಿಲುಕುತ್ತವೆ. ಇದು ಕೇವಲ ಕಥೆಯಲ್ಲ, ವಾಸ್ತವ.

ಎಂದೆಂದಿಗೂ ʼಮೌಗ್ಲಿʼ ಆಗದ ಅವೆರಾನಿನ ವಿಕ್ಟರ್‌

ಅಂಕಣಕಾರ ಡಾ.ನಾ.ಸೋಮೇಶ್ವರ

ಹಿಂದಿರುಗಿ ನೋಡಿದಾಗ

ಮೌಗ್ಲಿ ಹೆಸರನ್ನು ನಾವೆಲ್ಲರೂ ಕೇಳಿದ್ದೇವೆ. ಕಥೆಯಾಗಿ, ಚಲನಚಿತ್ರವಾಗಿ, ಟೆಲಿವಿಷನ್ ಧಾರಾ ವಾಹಿಯಾಗಿ ಕಾಮಿಕ್ ಪುಸ್ತಕವಾಗಿ ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ಅದು ಆಕರ್ಷಿಸಿದೆ. ಇದನ್ನು ಬರೆದವನು ಜೋಸೆಫ್ ರಡ್ಯರ್ಡ್ ಕಿಪ್ಲಿಂಗ್ (1865-1936) ಎಂಬ ಇಂಗ್ಲಿಷ್ ಪತ್ರಕರ್ತ, ಕವಿ, ಕಥೆಗಾರ ಹಾಗೂ ಕಾದಂಬರಿಕಾರ. ಇವನು ಬ್ರಿಟಿಷ್ ಇಂಡಿಯಾದಲ್ಲಿ ಹುಟ್ಟಿದ. 1907ರಲ್ಲಿ ಸಾಹಿತ್ಯ ನೊಬೆಲ್ ಪಾರಿತೋಷಕವನ್ನು ಪಡೆದ ಕಿಪ್ಲಿಂಗ್, ಇವತ್ತು ಭಾರತದಲ್ಲಿ ಮನೆ ಮಾತಾಗಿರುವುದಕ್ಕೆ ಕಾರಣ, ಆತನು ಬರೆದ ‘ಜಂಗಲ್ ಬುಕ್’ ಎನ್ನುವ ಪುಸ್ತಕ ಹಾಗೂ ಅದರಲ್ಲಿ ಚಿತ್ರಿಸಿದ ‘ಮೌಗ್ಲಿ’ ಎಂಬ ಪಾತ್ರ. ಮೌಗ್ಲಿ ಓರ್ವ ಹುಡುಗನು ಹೆಸರು. ‌

ಇವನದ್ದು ಕಾಲ್ಪನಿಕ ಪಾತ್ರ. ಮಧ್ಯಪ್ರದೇಶದ ‘ಸಿಯೋನಿ’ ಪ್ರಾಂತ. ಅಲ್ಲಿ ‘ಪೆಂಚ್’ ಎಂಬ ಕಾಡು. ಅಲ್ಲಿ ಶೇರ್‌ಖಾನ್ ಎಂಬ ಹುಲಿ. ಆ ಹುಲಿಯ ಆಕ್ರಮಣದಿಂದ ತಪ್ಪಿಸಿಕೊಳ್ಳಲು, ಮೌಗ್ಲಿಯ ಹೆತ್ತವರು ಶಿಶುವನ್ನು ಎತ್ತಿಕೊಂಡು ಕಾಡಿನಲ್ಲಿ ಓಡಿಹೋಗುವಾಗ, ಶಿಶುವನ್ನು ಕಳೆದುಕೊಳ್ಳುತ್ತಾರೆ. ಆ ಶಿಶುವು ಕೊನೆಗೆ ಒಂದು ತೋಳದ ಗುಹೆಯನ್ನು ಸೇರುತ್ತದೆ. ಅಮ್ಮ ತೋಳವು ಈ ಮನುಷ್ಯನ ಕೂಸನ್ನು ಸಾಕುತ್ತದೆ.

ಹಾಗಾಗಿ ಆ ಕೂಸು ಪ್ರಾಣಿಗಳ ಭಾಷೆ ಮತ್ತು ವರ್ತನೆಯನ್ನು ಮೈಗೂಡಿಸಿಕೊಳ್ಳುತ್ತದೆ. ನಂತರ ಮನುಷ್ಯರ ಸಂಪರ್ಕಕ್ಕೆ ಬರುತ್ತದೆ. ಮನುಷ್ಯರ ಭಾಷೆ ಹಾಗೂ ಸಾಮಾಜಿಕ ವ್ಯವಹಾರಗಳನ್ನು ಕಲಿತು, ಶಾಂತಿ ಎನ್ನುವ ಹುಡುಗಿಯ ಸ್ನೇಹವನ್ನು ಗಳಿಸುತ್ತದೆ. ಹೀಗೆ ನಡೆಯುವ ಈ ಕಥೆಯು ಎಲ್ಲರಿಗೂ ತಿಳಿದಿರುವಂಥದ್ದೆ!

ಇದನ್ನೂ ಓದಿ: Dr N Someshwara Column: ಓದಿದ್ದನ್ನು ನಾವು ಏಕೆ ಮರೆಯುತ್ತೇವೆ ?

ಮನುಷ್ಯರ ಮಕ್ಕಳು, ತಮ್ಮ ಹೆತ್ತವರಿಂದ ಹೇಗೋ ತಪ್ಪಿಸಿಕೊಂಡು ಕಾಡಿನಲ್ಲಿ ಪ್ರಾಣಿಗಳ ಸಂಪರ್ಕಕ್ಕೆ ಬರುತ್ತವೆ. ಪ್ರಾಣಿಗಳು ಮಕ್ಕಳನ್ನು ಕೊಲ್ಲದೆ ಕಾಪಾಡುತ್ತವೆ. ಆ ಮಗುವು ಪ್ರಾಣಿಗಳ ಜತೆಯಲ್ಲಿದ್ದು ಪ್ರಾಣಿಗಳ ಜೀವನವನ್ನೇ ರೂಢಿಸಿಕೊಳ್ಳುತ್ತವೆ. ಅಕಸ್ಮಾತ್ ಮನುಷ್ಯರ ಕೈಗೆ ಸಿಕ್ಕಿ ಬೀಳುತ್ತವೆ.

ನಾನಾ ರೀತಿಯ ಕಷ್ಟಗಳಿಗೆ ಸಿಲುಕುತ್ತವೆ. ಇದು ಕೇವಲ ಕಥೆಯಲ್ಲ, ವಾಸ್ತವ. ಇಂಥ ಹತ್ತು ಹಲವು ಕಥೆಗಳು ನಮ್ಮ ಇತಿಹಾಸದಲ್ಲಿ ಪದೇ ಪದೆ ಕಾಣಿಸಿಕೊಳ್ಳುತ್ತವೆ. ಮನುಷ್ಯನ ಮಗುವನ್ನು ತೋಳ ಗಳು, ಮಂಗಗಳು, ಬಬೂನುಗಳು, ಕರಡಿಗಳು, ಕುರಿಗಳು, ದನಗಳು ಸಾಕಿದ ಪ್ರಕರಣಗಳು ಸಾಕಷ್ಟು ವರದಿಯಾಗಿವೆ. ಹೀಗೆ ಪ್ರಾಣಿಗಳು ಸಾಕಿದ ಮನುಷ್ಯರ ಮಕ್ಕಳನ್ನು ‘ಕಾಡಿನ ಕಂದಮ್ಮಗಳು’ ಅಥವಾ ‘ಫೆರಲ್ ಚಿಲ್ರನ್’ ಎಂದು ಕರೆಯುವ ಪದ್ಧತಿಯಿದೆ.

Image ok

12-13ನೆಯ ಶತಮಾನದಿಂದ ಆರಂಭಿಸಿ ಇಂದಿನವರೆಗೆ ಇಂಥ ಪ್ರಕರಣಗಳು ಪದೇ ಪದೆ ವರದಿ ಯಾಗಿವೆ. ಇವುಗಳಲ್ಲಿ ಅತ್ಯಂತ ಕುತೂಹಲಕರವಾದದ್ದು, ಪೂರ್ಣ ವೈಜ್ಞಾನಿಕ ಅಧ್ಯಯನಕ್ಕೆ ಒಳಪಟ್ಟದ್ದು, ವಿಜ್ಞಾನಿಗಳಿಗೂ, ಭಾಷಾ ತಜ್ಞರಿಗೂ, ಶಿಕ್ಷಣ ತಜ್ಞರಿಗೂ ಹಾಗೂ ದಾರ್ಶನಿಕರಿಗೂ ಏಕರೂಪದ ಸವಾಲನ್ನು ಒಡ್ಡಿದ ಪ್ರಕರಣವೆಂದರೆ ‘ಅವೆರಾನಿನ ವಿಕ್ಟರ್’ ಅಥವಾ ‘ವಿಕ್ಟರ್ ಆಫ್ ಅವೆರಾನ್’ (1788-1828) ಎಂಬ ನೈಜ ಪ್ರಕರಣ.

17ನೆಯ ಶತಮಾನದಲ್ಲಿ, ಯುರೋಪಿನ ಬುದ್ಧಿಜೀವಿಗಳನ್ನು ಹಲವು ಪ್ರಮುಖ ಪ್ರಶ್ನೆಗಳು ಕಾಡುತ್ತಿದ್ದವು. “ಒಂದು ಮಗುವಿನ ಬುದ್ಧಿವಂತಿಕೆಯನ್ನು ಅದರ ಹುಟ್ಟು ನಿರ್ಧರಿಸುತ್ತದೆಯೋ ಅಥವಾ ಆ ಮಗುವು ಬೆಳೆಯುವ ಪರಿಸರವು ನಿರ್ಧರಿಸುತ್ತದೆಯೋ" ಎನ್ನುವುದು ಮೊದಲನೆಯದು. ‌ಕೆಲವರು ಹುಟ್ಟೇ- ಅಂದರೆ ಹೆತ್ತವರಿಂದ ಮಕ್ಕಳಿಗೆ ಬರುವ ವಂಶವಾಹಿಗಳು ಅಥವಾ ಜೀನ್ಸ್- ಅವರ ಬುದ್ಧಿವಂತಿಕೆಯನ್ನು ನಿರ್ಧರಿಸುತ್ತದೆ ಎಂದರು. ಹಲವರು ಮಗು ಹುಟ್ಟಿದ ಮೇಲೆ, ಆ ಮಗುವು ಬೆಳೆಯುವ ಪರಿಸರವು ಆ ಮಗುವಿನ ಬುದ್ಧಿವಂತಿಕೆಯನ್ನು ರೂಪಿಸುತ್ತದೆ ಎಂದು ವಾದಿಸುತ್ತಿದ್ದರು.

ಈ ವಾಗ್ವಾದವು ಪ್ಲೇಟೋ ಮತ್ತು ಅರಿಸ್ಟಾಟಲ್ ಕಾಲದಿಂದಲೂ 17-18ನೆಯ ಶತಮಾನದವರೆಗೆ ಸಾಗಿ ಬಂದಿತ್ತು. ಈ ಎರಡೂ ಪಂಥಗಳಲ್ಲಿ ಯಾರೊಬ್ಬರೂ ತಮ್ಮ ವಾದಕ್ಕೆ ಅಗತ್ಯವಾದ ಹಾಗೂ ನಂಬಲರ್ಹವಾದ ಪುರಾವೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದರು. ವಿಕ್ಟರ್, ಓರ್ವ ಕಾಡಿನ ಕಂದಮ್ಮನಾಗಿದ್ದ. 9 ವರ್ಷ ವಯಸ್ಸಾಗುವವರೆಗೂ ಕಾಡಿನಲ್ಲಿದ್ದ. ಇವನನ್ನು ತೋಳಗಳು ಬೆಳೆಸಿದವು ಎಂದು ಪ್ರತೀತಿ.

ಈತನ ತಂದೆ-ತಾಯಿಯರು ಯಾರು, ಇವನು ನಾಡನ್ನು ಬಿಟ್ಟು ಕಾಡಿಗೆ ಹೇಗೆ ಸೇರಿಕೊಂಡ ಎಂಬ ವಿಷಯವು ಯಾರಿಗೂ ತಿಳಿದಿರಲಿಲ್ಲ. 1797. ದಕ್ಷಿಣ ಫ್ರಾನ್ಸಿನ ಅವೆರಾನ್ ಪ್ರಾಂತ. ಮೂವರು ಬೇಟೆಗಾರರು ಕಾಡಿಗೆ ಹೋಗಿದ್ದರು. ಆಗ ಅವರಿಗೆ ವಿಕ್ಟರ್ ಕಂಡ. ಬೇಟೆಗಾರರನ್ನು ನೋಡು ತ್ತಿರುವಂತೆಯೇ ವಿಕ್ಟರ್ ಮರಹತ್ತಿ ಕುಳಿತ. ಬೇಟೆಗಾರರು ಅವನನ್ನು ಉಪಾಯವಾಗಿ ಹಿಡಿದು ಕೊಂಡು ನಗರಕ್ಕೆ ಕರೆತಂದರು.

ಆದರೆ ಅವನು ಬೇಟೆಗಾರರಿಂದ ತಪ್ಪಿಸಿಕೊಂಡು ಕಾಡಿಗೆ ಹಿಂದಿರುಗಿದ. ಹೀಗೆ 9 ಸಲ ಅವನನ್ನು ಹಿಡಿಯುವುದು ಹಾಗೂ ಅವನು ತಪ್ಪಿಸಿಕೊಂಡು ಕಾಡಿಗೆ ಓಡಿ ಹೋಗುವುದು ನಡೆಯಿತು. ಕೊನೆಗೆ ಜನವರಿ 8, 1800 ರಂದು ಅವನನ್ನು ಅಂತಿಮವಾಗಿ ಹಿಡಿದರು. ಅನಾಥಾಲಯಗಳಲ್ಲಿ ಅವನನ್ನು ಇರಿಸುವ ಹಲವು ವಿಫಲ ಪ್ರಯತ್ನಗಳನ್ನು ಮಾಡಿದರು. ಕೊನೆಗೆ ಅವನನ್ನು ಫ್ರಾನ್ಸಿನ ಅತ್ಯಂತ ದೊಡ್ಡ ಹಾಗೂ ಪ್ರಮುಖ, ಬಿಸೆತ್ರ ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಲ್ಲಿದ್ದ ಫಿಲಿಪ್ ಪೈನೆಲ್ (1745-1826) ಎಂಬ ಮನೋವೈದ್ಯನು ವಿಕ್ಟರನನ್ನು ಪರೀಕ್ಷಿಸಿದನು.

ವಿಕ್ಟರ್ ನಗ್ನನಾಗಿ ಓಡಾಡುತ್ತಿದ್ದ. ಅವನಿಗೆ ಮಾತು ಬರುತ್ತಿರಲಿಲ್ಲ. ಚಳಿ, ಮಳೆ, ಗಾಳಿಗಳ ಪರಿವೆ ಯಿರಲಿಲ್ಲ. ಹೇಳಿದ್ದು ಏನೂ ತಿಳಿಯುತ್ತಿರಲಿಲ್ಲ. ಹಸಿ ಮಾಂಸವನ್ನು ಹಾಗೂ ಹಸಿ ತರಕಾರಿಯನ್ನು ತಿನ್ನುತ್ತಿದ್ದ. ಎರಡು ಕಾಲುಗಳ ಮೇಲೆ ಅಡ್ಡಾದಿಡ್ಡಿಯಾಗಿ ನಡೆಯುತ್ತಿದ್ದ. ಸಾಮಾಜಿಕ ನಯ-ನಾಜೂಕುಗಳು ಲವಲೇಶವೂ ಇರಲಿಲ್ಲ. ಪ್ರಾಣಿಗಳ ಹಾಗೆ ಮೈಕೈ ಕೆರೆದುಕೊಳ್ಳುತ್ತಿದ್ದ. ಹತ್ತಿರ ಬಂದರೆ ಕಚ್ಚಲು ಮುಂದಾಗುತ್ತಿದ್ದ. ಅವನ ವರ್ತನೆಗಳೆಲ್ಲ ಪ್ರಾಣಿಗಳ ಹಾಗೇ ಇದ್ದವು.

ಹಾಗಾಗಿ ಪೈನೆಲ್ ಅವನನ್ನು ‘ಮಾನಸಿಕವಾಗಿ ಅಸ್ವಸ್ಥ’ನೆಂದು ತೀರ್ಮಾನಿಸಿ, ಅವನನ್ನು ‘ಹುಟ್ಟಾ ಹೆಡ್ಡ’ ಅಥವಾ ‘ಈಡಿಯಟ್’ ಎಂದು ಕರೆದ. ಫ್ರಾನ್ಸಿನ ಮಹಾಕ್ರಾಂತಿಯು ಮುಗಿದಿತ್ತು. ಬುದ್ಧಿಜೀವಿ ಗಳು ತಮ್ಮ ಕ್ರಾಂತಿಕಾರಕ ವಿಚಾರಗಳನ್ನು ಎಲ್ಲೆಡೆ ಹರಡಲಾ ರಂಭಿಸಿದರು. ಜನರು ಹೊಸ ಹೊಸ ರೀತಿಯಲ್ಲಿ ಯೋಚಿಸಲು ಆರಂಭಿಸಿದರು.

ಹಾಗಾಗಿ ಈ ಕಾಲಘಟ್ಟವನ್ನು ‘ಜ್ಞಾನೋದಯದ ಯುಗ’ ಅಥವಾ ‘ಏಜ್ ಆಫ್ ಎನ್ ಲೈಟನ್‌‌ ಮೆಂಟ್’ ಎಂದು ಕರೆಯುತ್ತಿದ್ದರು. ಇವರು “ಭಾಷೆ ಹಾಗೂ ಶಿಕ್ಷಣದ ಮೂಲಕ, ಎಂಥ ಹೆಡ್ಡನ ನ್ನಾದರೂ ನಾಗರಿಕನನ್ನಾಗಿ ಮಾಡಲು ಸಾಧ್ಯ" ಎಂದು ನಂಬಿದ್ದರು. ಇದು ಯುರೋಪಿನ ಬುದ್ಧಿ ಜೀವಿಗಳನ್ನು ಕಾಡುತ್ತಿದ್ದ ಎರಡನೆಯ ಪ್ರಮುಖ ವಿಷಯವಾಗಿತ್ತು.

ಕಾರ್ಲ್ ಲಿನೇಯಸ್ (1707-1778) ಜಗತ್ತಿನ ಪ್ರತಿಯೊಂದು ಜೀವರಾಶಿಯನ್ನು ನಿಖರವಾಗಿ ಗುರುತಿಸಲು ‘ವೈಜ್ಞಾನಿಕ ದ್ವಿನಾಮಕರಣ’ ಅಥವಾ ‘ಬೈನಾಮಿಯಲ್ ನಾಮೆನ್‌ಕ್ಲೇಚರ್’ ಪದ್ಧತಿ ಯನ್ನು ಜಾರಿಗೆ ತಂದಿದ್ದು, ‘ಸಿಸ್ಟೆಮ ನ್ಯಾಚುರೆ’ ಎಂಬ ಗ್ರಂಥವನ್ನು ಬರೆದಿದ್ದು. ಈ ನಿಯಮದ ಅನ್ವಯ ‘ಹೋಮೋ ಸೆಪಿಯನ್ಸ್’ ಎನ್ನುವುದು ಮನುಷ್ಯನ ದ್ವಿನಾಮಕರಣದ ಹೆಸರಾಗಿತ್ತು.

ಕಾಡಿನ ಕಂದಮ್ಮಗಳಿಗೆ ಅವನು ‘ಹೋಮೋ ಫೆರಸ್’ ಎಂಬ ಹೆಸರನ್ನು ನೀಡಿದ್ದ. ‘ಕಾಡಿನ ಮಕ್ಕಳು ಊರ ಮಕ್ಕಳಿಗಿಂತ ಭಿನ್ನ’ ಎನ್ನುವುದು ಅವನ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲಿ ‘ಸೆಪಿಯನ್ ಮಗುವಿಗೂ ಫೆರಸ್ ಮಗುವಿಗೂ ಏನು ವ್ಯತ್ಯಾಸ’ ಎನ್ನುವ ಪ್ರಶ್ನೆಯು ಹುಟ್ಟಿತು. ಇದಕ್ಕೆ ‘ಉದಾತ್ತ ಅನಾಗರಿಕ’ ಅಥವಾ ‘ನೋಬಲ್ ಸೇವೇಜ್’ ಉತ್ತರ ಎಂದು ಭಾವಿಸಿದ್ದರು. ಅಂದರೆ ‘ಒಂದು ಮಗುವನ್ನು ಸಂಪೂರ್ಣವಾಗಿ ನಿಸರ್ಗದ ನಡುವೆ ಬೆಳೆಸಿದರೆ, ಆ ಮಗುವು ಮನುಷ್ಯ ಹಾಗೂ ಮನುಷ್ಯನ ನಾಗರಿಕತೆಯ ಸೋಂಕಿಲ್ಲದೆ ಮುಗ್ಧವಾಗಿ, ಸೌಮ್ಯವಾಗಿ, ಏಕಾಂತ ಪ್ರಿಯನಾಗಿ, ದುಷ್ಟ ತನದ ಬಗ್ಗೆ ಸಂಪೂರ್ಣ ಅನಭಿಜ್ಞನಾಗಿ ಹಾಗೂ ಪ್ರಜ್ಞಾಪೂರ್ವಕನಾಗಿ ಮತ್ತೊಬ್ಬರಿಗೆ ಹಾನಿ ಯನ್ನುಂಟು ಮಾಡದ ಉದಾತ್ತ ವ್ಯಕ್ತಿಯಾಗಿ ಬೆಳೆಯುತ್ತಾನೆ’ ಎನ್ನುವುದಾಗಿತ್ತು.

ಈ ಎಲ್ಲ ಪ್ರಶ್ನೆಗಳ ಹಿನ್ನೆಲೆಯಲ್ಲಿ ಅವೆರಾನಿನ ವಿಕ್ಟರ್ ಅವರಿಗೆ ಅತ್ಯುತ್ತಮ ಪ್ರಯೋಗ ಪರೀಕ್ಷಾ ಮಾದರಿಯಾದ. ವಿಕ್ಟರನಿಗೆ ಮಾತು ಬರದಿದ್ದರೂ ಕಿವಿಯು ಚೆನ್ನಾಗಿ ಕೇಳುತ್ತಿತ್ತು. ಹಾಗಾಗಿ ಅವನನ್ನು ಫ್ರಾನ್ಸಿನ ‘ರಾಷ್ಟ್ರೀಯ ಕಿವುಡರ ಸಂಸ್ಥೆ’ಗೆ ಕರೆದುಕೊಂಡು ಹೋದರು. ಆ ಸಂಸ್ಥೆಯಲ್ಲಿ ರೋಶ್ ಆಂಬ್ರೋಸ್ ಕ್ಯುಕುರಾನ್ ಸಿಕರ್ಡ್ (1742-1822) ಎಂಬ ಕಿವುಡರ ಅಧ್ಯಾಪಕನಿದ್ದ. ಕಿವುಡರಿಗೆ ಮಾತನ್ನು ಕಲಿಸುವುದರಲ್ಲಿ ಇವನು ನಿಸ್ಸೀಮನಾಗಿದ್ದ. ಅವನು ‘ವಿಕ್ಟರನಿಗೆ ಭಾಷೆ ಯನ್ನು ಕಲಿಸಿದರೆ, ಎಲ್ಲರ ಹಾಗೆ ಮನುಷ್ಯನಾಗುತ್ತಾನೆ’ ಎಂದು ನಂಬಿದ್ದ.

ತಾನು ಕಲಿತ ಎಲ್ಲ ವಿದ್ಯೆಯನ್ನು ವಿಕ್ಟರನ ಮೇಲೆ ಒಂದು ವರ್ಷಕಾಲ ಪ್ರಯೋಗಿಸಿದ. ವಿಕ್ಟರ್ ಭಾಷೆಯನ್ನು ಬಿಡಿ, ಕೆಲವು ಶಬ್ದಗಳನ್ನೂ ಕಲಿಯಲಿಲ್ಲ. ಸೋತು ಹತಾಶನದ ಸಿಕರ್ಡ್, ವಿಕ್ಟರನಿಗೆ ‘ಮಾತನ್ನು ಕಲಿಸಲು ಸಾಧ್ಯವಿಲ್ಲ’ ಎಂಬ ನಿರ್ಧಾರಕ್ಕೆ ಬಂದ. ಜೀನ್ ಮಾರ್ಕ್ ಗ್ಯಾಸ್ಪರ್ಡ್ ಇಟಾರ್ಡ್ (1774-1838) ಓರ್ವ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ. ಇವನು ವಿಕ್ಟರನನ್ನು ದತ್ತು ತೆಗೆದುಕೊಂಡ. ಆ ಕಾಡು ಕಂದಮ್ಮನಿಗೆ ‘ವಿಕ್ಟರ್’ ಎಂದು ನಾಮಕರಣವನ್ನು ಮಾಡಿದ.

ತನ್ನ ಮನೆಗೆ ಕರೆದುಕೊಂಡು ಬಂದ. ಮನುಷ್ಯ ಮತ್ತು ಪ್ರಾಣಿಗಳ ನಡುವೆ ಎರಡು ವ್ಯತಾಸಗಳಿವೆ ಎಂದ. ಮೊದಲನೆಯದು ‘ಸಹಾನುಭೂತಿ’ ಅಥವಾ ‘ಎಂಪತಿ’ ಹಾಗೂ ಎರಡನೆಯದು ಭಾಷೆ. ವಿಕ್ಟರನಿಗೆ ಭಾಷೆಯನ್ನು ಕಲಿಸಬೇಕು, ಅವನು ತನ್ನ ಮನಸ್ಸಿನಲ್ಲಿರುವ ಎಲ್ಲ ಭಾವನೆಗಳನ್ನು ಹಂಚಿಕೊಳ್ಳುವ ರೀತಿಯಲ್ಲಿ ಅವನನ್ನು ಬೆಳೆಸಬೇಕು ಎಂದು ಅವನಿಗೆ ಭಾಷೆಯನ್ನು ಕಲಿಸಲು ಆರಂಭಿಸಿದ. ಆರಂಭದಲ್ಲಿ ವಿಕ್ಟರ್ ಭಾಷೆಯನ್ನು ಕಲಿಯುವ ದಿಶೆಯಲ್ಲಿ ಆಸಕ್ತಿಯನ್ನು ತೋರಿದ.

ಒಂದೆರಡು ಶಬ್ದಗಳನ್ನು ಕಲಿತ. ಅಷ್ಟೇ. ಅವನು ಹೊಸ ಶಬ್ದಗಳನ್ನು ಕಲಿಯಲು ಆಸಕ್ತಿಯನ್ನು ತೋರಲೇ ಇಲ್ಲ. ವಿಕ್ಟರನ ಕಿವಿಗಳು ಕಾಡಿನಲ್ಲಿ ಸಂಭವಿಸಬಹುದಾದ ಅಪಾಯಕಾರಿ ಶಬ್ದಗಳನ್ನು ಆಲಿಸಿ ಆತ್ಮರಕ್ಷಣೆಯನ್ನು ಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿದ್ದವು. ಆತನ ಕಿವಿ (ಮಿದುಳು) ಇತರ ಯಾವುದೇ ರೀತಿಯ ಶಬ್ದಗಳನ್ನು ಸ್ವೀಕರಿಸಲಾಗದ ಸ್ಥಿತಿಯಲ್ಲಿತ್ತು.

ವಿಕ್ಟರ್ ಮಾತನ್ನು ಕಲಿಯದಿದ್ದರೂ, ಅವನಿಗೆ ಮಾತನ್ನು ಕಲಿಸಲು ಇಟಾರ್ಡ್ ರೂಪಿಸಿದ್ದ ಪಾಠ ಗಳೆಲ್ಲ, ಭವಿಷ್ಯದಲ್ಲಿ ಕಿವುಡು ಮಕ್ಕಳಿಗೆ ಮಾತನ್ನು ಕಲಿಸಲು ಉಪಯುಕ್ತವಾದವು. ಇಟಾರ್ಡನ ಶಿಷ್ಯ ಎಡ್ವರ್ಡ್ ಸೆಗಿನ್ ಎನ್ನುವವನ ಪ್ರಭಾವಕ್ಕೆ ಒಳಗಾದ ಮೇರಿಯ ಮಾಂಟೆಸರಿ ಎನ್ನುವ ಮಹಿಳೆಯು ‘ಮಾಂಟೆಸರಿ ಶಿಕ್ಷಣ’ ಎನ್ನುವ ಹೊಸ ಶಿಕ್ಷಣ ಪದ್ದತಿಯನ್ನು ಆರಂಭಿಸಿದಳು.

ಅದು ಇಂದಿಗೂ ಅಸ್ತಿತ್ವದಲ್ಲಿದೆ. ವಿಕ್ಟರ್ ಮಾತನ್ನು ಕಲಿಯದಿದ್ದರೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಒಂದು ಹೆಜ್ಜೆಯನ್ನು ಮುಂದೆ ಇಟ್ಟಿದ್ದ. ವಿಕ್ಟರನ ಯೋಗಕ್ಷೇಮವನ್ನು ನೋಡಿಕೊಳ್ಳಲು, ಗುರಿನ್ ಎಂಬ ಮಹಿಳೆಯನ್ನು ಇಟಾರ್ಡ್ ನೇಮಿಸಿದ್ದ. ಒಂದು ದಿನ ಗುರಿನ್ ಸತ್ತ ತನ್ನ ಗಂಡನನ್ನು ನೆನೆಸಿಕೊಂಡು ಕಣ್ಣೀರನ್ನು ಹರಿಸುತ್ತಿದ್ದಳು. ಇದನ್ನು ನೋಡಿದ ವಿಕ್ಟರ್ ತಾನು ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಿದ, ಸಮಾಧಾನ ಮಾಡಲೆಂಬಂತೆ ಆಕೆಯ ಬಳಿಗೆ ಬಂದ.

ಆತನ ಮುಖದಲ್ಲಿ ಸಹಾನುಭೂತಿಯಿತ್ತು. ಇಷ್ಟರ ಮಟ್ಟಿಗೆ ‘ಕಾಡುಹುಡುಗ’ ನಾಡು ಹುಡುಗ ನಾಗಿದ್ದ. ಇದಕ್ಕೆ ಐದು ವರ್ಷಗಳು ಹಿಡಿದಿದ್ದವು. ಐದು ವರ್ಷಗಳಲ್ಲಿ ವಿಕ್ಟರ್ ಎರಡು ಶಬ್ದಗಳನ್ನು ಮಾತ್ರ ಕಲಿತಿದ್ದ. ಕೆಲವು ಸನ್ನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲವನಾಗಿದ್ದ ಹಾಗೂ ಮಾನವೀಯ ಭಾವನೆಗಳನ್ನು ಅಲ್ಪಮಟ್ಟಿಗೆ ವ್ಯಕ್ತಪಡಿಸಬಲ್ಲವನಾಗಿದ್ದ. ಆದರೆ ಮಾತು, ಭಾಷೆ ಹಾಗೂ ವ್ಯಾಕರಣವನ್ನು ಕಲಿತು ಎಲ್ಲರಂತೆ ಮಾತನಾಡುವುದು ಅವನಿಗೆ ಅಸಾಧ್ಯವಾಗಿತ್ತು. ಈ ಹಿನ್ನೆಲೆ ಯಲ್ಲಿ ಎರಿಕ್ ಲೆನ್ನೆಬರ್ಗ್ (1921-1975) ಎನ್ನುವ ನರವಿಜ್ಞಾನಿ ಹಾಗೂ ಭಾಷಾತಜ್ಞನು “ಒಂದು ನಿಗದಿತ ಅವಧಿಯಲ್ಲಿ ಮಗುವು ಭಾಷೆಯನ್ನು ಕಲಿಯದಿದ್ದರೆ, ಆ ನಂತರ ಅದು ಕಲಿಯುವ ಸಾಮರ್ಥ್ಯವನ್ನು ಸದಾ ಕಾಲಕ್ಕೂ ಕಳೆದುಕೊಳ್ಳುತ್ತದೆ" ಎನ್ನುವ ಸಿದ್ಧಾಂತವನ್ನು ಮಂಡಿಸಿದ.

ಒಂದು ಮಗುವು ಬುದ್ಧಿವಂತ ಮಗುವಾಗಬೇಕಾದರೆ, ಆ ಮಗುವು ಬೆಳೆಯುವ ಪರಿಸರವು ಮುಖ್ಯ ವೆಂದ. ಶಿಕ್ಷಣದಿಂದ ಕಾಡು ಮನುಷ್ಯನನ್ನು ‘ನಾಡುಮನುಷ್ಯ’ನನ್ನಾಗಿ ಮಾಡಬೇಕಾದರೆ, ಒಂದು ನಿಗದಿತ ಅವಧಿಯೊಳಗೆ ಅಗತ್ಯ ಶಿಕ್ಷಣ ದೊರೆಯಬೇಕು: ಇಲ್ಲದಿದ್ದರೆ ಆ ಮಗುವು ಭಾಷೆಯನ್ನು ಎಂದಿಗೂ ಕಲಿಯಲಾರದು ಎಂದ.

ಮಾನವೀಯತೆಯ ಗುಣಲಕ್ಷಣಗಳು ಮಗುವಿನ ವಂಶವಾಹಿಗಳಲ್ಲಿರುತ್ತವೆ. ಅವನ್ನು ಜಾಗೃತ ಗೊಳಿಸಲು ಸೂಕ್ತ ಪರಿಸರವು ಅಗತ್ಯ ಎನ್ನುವ ವಿಚಾರವನ್ನು ವಿಶದಪಡಿಸಿದ. ವಿಕ್ಟರ್, ಇಟಾರ್ಡನ ಮನೆಯನ್ನು ಬಿಟ್ಟು ಗುರಿನ್ ಜತೆಯಲ್ಲಿ ವಾಸ ಮಾಡಲಾರಂಭಿಸಿದ. ಮಾತನ್ನು ಕಲಿಯದಿದ್ದರೂ ಅವನ ವರ್ತನೆಯಲ್ಲಿ ಬದಲಾವಣೆಯಾಗಿತ್ತು.

ಮೊದಲಿನ ಹಾಗೆ ಪ್ರಾಣಿಸದೃಶ ವರ್ತನೆಗಳನ್ನು ತೊರೆದು ಶಾಂತವಾಗಿದ್ದ. 1828ರಲ್ಲಿ ಗುರಿನ್ ಮನೆಯಲ್ಲಿದ್ದ ವಿಕ್ಟರ್, ನ್ಯುಮೋನಿಯಕ್ಕೆ ತುತ್ತಾಗಿ ಮರಣಿಸಿದ. ರಡ್ಯರ್ಡ್ ಕಿಪ್ಲಿಂಗ್ ಬರೆದ ಮೌಗ್ಲಿ ಸಂಪೂರ್ಣ ಕಾಲ್ಪನಿಕ ಕಥೆ. ಕಥೆಯಲ್ಲಿ ಕಾಡು ಹುಡುಗನನ್ನು ನಾಡ ಹುಡುಗನನ್ನಾಗಿ ಮಾಡು ವುದು ಸುಲಭ. ಆದರೆ ವಾಸ್ತವದಲ್ಲಿ ಮೌಗ್ಲಿಯಂಥ ಕಾಡು ಕಂದಮ್ಮಗಳು ನಾಡ ಮಕ್ಕಳಾಗಲು ಸಾಧ್ಯವೇ ಇಲ್ಲ.