ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kayarga Column: ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !

ನಾವಿನ್ನೂ ಯುದ್ಧ ಎಂದರೆ ಗಡಿ ಭಾಗದಲ್ಲಿ ನಡೆಯುವ ಸಂಘರ್ಷ ಎಂಬ ಭ್ರಮೆಯಲ್ಲಿದ್ದೇವೆ. ಮನೆ ಯಲ್ಲೇ ಕುಳಿತು 'ನಡೆಯಲಿ ಯುದ್ಧ' ಎಂದು ಅಬ್ಬರಿಸುತ್ತಿದ್ದೇವೆ. ಆದರೆ ಶತ್ರು ದೇಶದ ವಂಚಕರು ಅದಾ ಗಲೇ ನಮ್ಮ ಬೆಡ್ ರೂಮ್‌ಗಳಿಗೆ ನುಗ್ಗಿದ್ದಾರೆ. ನಮ್ಮ ಪ್ರತಿಯೊಂದು ಚಲನವಲನ, ವೈಯಕ್ತಿಕ ಮಾಹಿತಿ, ಇಷ್ಟಾನಿಷ್ಟಗಳೆಲ್ಲವೂ ಅವರ ಅಂಗೈಯಲ್ಲಿವೆ. ‘ರಮ್ಮಿ ಆಡಿ’ ಎಂದಾಗ ಖುಷಿಯಿಂದಲೇ ರಮ್ಮಿ ಆಡಿ ಅವರ ಜೇಬು ತುಂಬಿಸುತ್ತಿದ್ದೇವೆ. ಅವರು ಕಾಣದ ದೇಶದಲ್ಲಿ ಕುಳಿತು ಡಿಜಿಟಲ್ ಅರೆಸ್ಟ್‌ ಎಂದರೂ ನಾವು ಮುದುರಿ ಕೂರುತ್ತೇವೆ. ಅವರ ದುಡ್ಡು ಡಬಲ್ ಮಾಡುವ ಆಮಿಷಕ್ಕೆ ಬಲಿಯಾಗಿ ಲಕ್ಷಾಂತರ ರು.ಗಳನ್ನು ಕಳೆದುಕೊಂಡು ಕಂಗಾಲಾಗುತ್ತೇವೆ. ಈ ಎಲ್ಲ ವಂಚನೆಯೂ ಪಾಕಿಸ್ತಾನಿಯರು ಇಲ್ಲವೇ ಚೀನಿಯರು ಮಾಡಿದ್ದಾರೆಂದು ಅರ್ಥವಲ್ಲ. ಆದರೆ ಆಧುನಿಕ ಯುದ್ಧ ತಂತ್ರದ ಭಾಗವಾಗಿ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೂ ಈಗ ಸೈಬರ್ ದಾಳಿಯನ್ನು ಎದುರಿಸಲೇಬೇಕಿದೆ. ಪ್ರತಿ ದಾಳಿಗೆ ಸಜ್ಜಾಗಲೇ ಬೇಕಿದೆ.

ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !

ಲೋಕಮತ

kaayarga@gmail.com

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಪ್ರೇರಿತ ಉಗ್ರರು ನಡೆಸಿದ ನರಮೇಧದ ಬಳಿಕ ಪಾಕಿಸ್ತಾನದ ಮೇಲೆ ನಿರ್ಣಾಯಕ ಕ್ರಮ ಜರುಗಿಸಬೇಕೆಂಬ ಜನಾಗ್ರಹ ಹೆಚ್ಚುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ದಾಳಿಕೋರರನ್ನು ಶಿಕ್ಷಿಸಿಯೇ ಸಿದ್ಧ ಎಂದಿದ್ದಾರೆ. ನಮ್ಮ ಸೇನೆಯೂ ಸಮರ ಸನ್ನದ್ಧ ವಾಗಿರುವುದಾಗಿ ಹೇಳಿಕೊಂಡಿದೆ. ನಮ್ಮ ಮಾಧ್ಯಮಗಳು ಭಾರತ ಯುದ್ಧಕ್ಕೆ ಸಿದ್ಧವಾಗುತ್ತಿದೆ ಎಂಬ ಚಿತ್ರಣ ನೀಡುತ್ತಿವೆ. ಆದರೆ ಭಾರತದ ವಿರುದ್ಧ ಅಧಿಕೃತವಾಗಿ ನಾಲ್ಕು ಯುದ್ಧಗಳಲ್ಲಿ ಸೋತ ಪಾಕಿಸ್ತಾನವಾಗಲಿ, 1962ರಲ್ಲಿ ಮಿತ್ರದ್ರೋಹ ಬಗೆದ ಚೀನಾ ಆಗಲಿ ಅಂದಿನಿಂದ ಇಂದಿನವರೆಗೆ ಎಂದೂ ಯುದ್ಧ ನಿಲ್ಲಿಸಿಲ್ಲ. ಪಹಲ್ಗಾಮ್ ಅಥವಾ ಪುಲ್ವಾಮಾ ದಾಳಿ, ಗಲ್ವಾನ್ ನದಿ ತೀರದಲ್ಲಿ ಚೀನಾ ಸೈನಿಕರು ನಡೆಸಿದ ಸಂಘರ್ಷ ಅದರ ಮುಂದುವರಿದ ಭಾಗವಷ್ಟೇ. ಹೀಗಾಗಿ ಈ ರಾಷ್ಟ್ರಗಳು ಹೊಸದಾಗಿ ಯುದ್ಧ ಘೋಷಣೆ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಪ್ರತ್ಯಾಕ್ರಮಣಕ್ಕೆ ನಾವು ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದೇವೆ ಎನ್ನುವುದಷ್ಟೇ ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ.

ಈಗ ಯುದ್ಧ ಮಾಡಲು ಸಮವಸ್ತ್ರಧಾರಿ ಸೈನಿಕರೇ ಬೇಕಿಲ್ಲ. ಮೆಷಿನ್‌ಗನ್‌ಗಳು, ಟ್ಯಾಂಕರ್‌ಗಳು, ಅತ್ಯಾಧುನಿಕ ಯುದ್ಧ ವಿಮಾನಗಳು, ಕ್ಷಿಪಣಿಗಳು, ಸಬ್‌ಮೆರಿನ್‌ಗಳು ಇಲ್ಲದೆ, ಸಮರಾಂಗಣಕ್ಕೆ ಇಳಿಯದೆ ಜಗತ್ತಿನ ಯವುದೋ ಮೂಲೆಯಲ್ಲಿ ಕುಳಿತು ‘ಯುದ್ಧ’ ಮಾಡುತ್ತಲೇ ಇರಬಹುದು. ಮಾರಕ ಶಸ್ತ್ರಾಸ್ತ್ರಗಳಿಲ್ಲದೆ ಎದುರಾಳಿ ರಾಷ್ಟ್ರಕ್ಕೆ ತೊಂದರೆ ಕೊಡುತ್ತಲೇ ಇರಬಹುದು. ಅಲ್ಲಿನ ಆಡಳಿತ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಆರೋಗ್ಯ ವ್ಯವಸ್ಥೆ ಮಾತ್ರವಲ್ಲ ಮೂಲಸೌಕರ‌್ಯಕ್ಕೂ ಧಕ್ಕೆ ತಂದು ಜನರು ನರಳುವಂತೆ ಮಾಡಬಹುದು. ಕಾಶ್ಮೀರದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಯುವಕರನ್ನು ತಪ್ಪು ಹಾದಿಗೆಳೆದು ಭಾರತದ ಮೇಲೆ ಆಗಾಗ ಛೂ ಬಿಡುವ ಪಾಕಿಸ್ತಾನ ಈಗ ಈ ಕೆಲಸವನ್ನೂ ಮಾಡುತ್ತಿದೆ. ಸೈಬರ್ ದಾಳಿಯ ಮೂಲಕ ನಿರಂತರವಾಗಿ ಭಾರತದ ಮೇಲೆ ಆಕ್ರಮಣ ಮಾಡುತ್ತಲೇ ಇದೆ.

ಇದನ್ನೂ ಓದಿ: Lokesh Kayarga Column: ರಾಜಕೀಯದಲ್ಲಿ ಕೂಗುಮಾರಿಗಳಿಗೆ ಹೆಚ್ಚು ಬೆಲೆ !

ನೌಕರರಿಗೆ, ಸೇನಾ ಸಿಬ್ಬಂದಿಗೆ ಸಂಬಳ ಕೊಡಲು ಹಣವಿಲ್ಲದೆ ದಿವಾಳಿಯಂಚಿಗೆ ಸರಿದ ದೇಶ ವೊಂದು ಉಗ್ರರಿಗೆ ನಿರಂತರವಾಗಿ ಬೆಂಬಲ ಕೊಡುತ್ತಿರುವುದು ಹೇಗೆ ಎಂದು ಅಚ್ಚರಿಯಾಗ ಬಹುದು. ಸೈಬರ್ ದಾಳಿ, ಆನ್‌ಲೈನ್ ವಂಚನೆ, ಕ್ರಿಪ್ಟೋ ಕರೆನ್ಸಿ ವಂಚನೆ, ಮಾದಕ ದ್ರವ್ಯ ಕಳ್ಳ ಸಾಗಾಟದ ಮೂಲಕ ಬಂದ ಹಣವೆಲ್ಲವೂ ಪಾಕಿಸ್ತಾನದಲ್ಲಿ ಉಗ್ರರ ಪೋಷಣೆ ಮತ್ತು ಅಲ್ಲಿನ ರಾಜಕೀಯ ಮತ್ತು ಮಿಲಿಟರಿ ನಾಯಕರ ಐಷಾರಾಮಿ ಜೀವನಕ್ಕೆ ಬಳಕೆಯಾಗುತ್ತಿದೆ ಎಂದು ನಮ್ಮ ಗುಪ್ತಚರ ಪಡೆಗಳು ಈ ಹಿಂದೆಯೇ ವರದಿ ನೀಡಿವೆ.

ಬಂದೂಕುಧಾರಿಯೊಬ್ಬ ನಮ್ಮ ಅಮಾಯಕ ನಾಗರಿಕರ ರಕ್ತ ಹರಿಸಿದಾಗ ರಕ್ತ ನಮ್ಮ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ಕೇವಲ ಮೊಬೈಲ್ ಮತ್ತು ಕಂಪ್ಯೂಟರ್ ಬಳಸಿ ಸೈಬರ್ ದಾಳಿಕೋರರು ನಡೆಸುವ ನಡೆಸುವ ಹ್ಯಾಕಿಂಗ್, ಆನ್‌ಲೈನ್ ವಂಚನೆ, ಹನಿಟ್ರ್ಯಾಪ್‌ಗಳು ದೇಶದ ಭದ್ರತೆಯನ್ನು ಮಾತ್ರವಲ್ಲ ಆರ್ಥಿಕ ಮತ್ತು ನಾಗರಿಕ ವ್ಯವಸ್ಥೆಯನ್ನು ಬುಡಮೇಲು ಮಾಡಬ ಹುದು. ಆರ್ಥಿಕ ನಷ್ಟದ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗುವ ಮಾಹಿತಿ, ಅಶ್ಲೀಲ ಕಂಟೆಂಟ್‌ಗಳ ಕಾರಣಕ್ಕೆ ಅದೆಷ್ಟೋ ಕುಟುಂಬಗಳು ಸಾವಿನ ಹಾದಿ ಹಿಡಿದಿರುವುದು ನಮ್ಮ ಕಣ್ಣ ಮುಂದಿವೆ.

7.1

ಬೆಡ್‌ರೂಮಿನಲ್ಲೇ ದಾಳಿ

ಇಷ್ಟಾದರೂ ನಾವಿನ್ನೂ ಯುದ್ಧ ಎಂದರೆ ಗಡಿ ಭಾಗದಲ್ಲಿ ನಡೆಯುವ ಸಂಘರ್ಷ ಎಂಬ ಭ್ರಮೆ ಯಲ್ಲಿದ್ದೇವೆ. ಮನೆಯಲ್ಲೇ ಕುಳಿತು 'ನಡೆಯಲಿ ಯುದ್ಧ' ಎಂದು ಅಬ್ಬರಿಸುತ್ತಿದ್ದೇವೆ. ಆದರೆ ಶತ್ರು ದೇಶದ ವಂಚಕರು ಅದಾಗಲೇ ನಮ್ಮ ಬೆಡ್ ರೂಮ್‌ಗಳಿಗೆ ನುಗ್ಗಿದ್ದಾರೆ.

ನಮ್ಮ ಪ್ರತಿಯೊಂದು ಚಲನವಲನ, ವೈಯಕ್ತಿಕ ಮಾಹಿತಿ, ಇಷ್ಟಾನಿಷ್ಟಗಳೆಲ್ಲವೂ ಅವರ ಅಂಗೈ ಯಲ್ಲಿವೆ. ಅವರು ‘ರಮ್ಮಿ ಆಡಿ’ ಎಂದಾಗ ಖುಷಿಯಿಂದಲೇ ಆಡಿ ಅವರ ಜೇಬು ತುಂಬಿಸುತ್ತಿದ್ದೇವೆ. ಅವರು ಕಾಣದ ದೇಶದಲ್ಲಿ ಕುಳಿತು ಡಿಜಿಟಲ್ ಅರೆಸ್ಟ್‌ ಎಂದರೂ ನಾವು ಮುದುರಿ ಕೂರುತ್ತೇವೆ. ಅವರ ದುಡ್ಡು ಡಬಲ್ ಮಾಡುವ ಆಮಿಷಕ್ಕೆ ಬಲಿಯಾಗಿ ಲಕ್ಷಾಂತರ ರು.ಗಳನ್ನು ಕಳೆದುಕೊಂಡು ಕಂಗಾಲಾಗುತ್ತೇವೆ. ಈ ಎಲ್ಲ ವಂಚನೆಯೂ ಪಾಕಿಸ್ತಾನಿಯರು ಇಲ್ಲವೇ ಚೀನಿಯರು ಮಾಡಿದ್ದಾ ರೆಂದು ಅರ್ಥವಲ್ಲ. ಆದರೆ ಆಧುನಿಕ ಯುದ್ಧ ತಂತ್ರದ ಭಾಗವಾಗಿ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೂ ಈಗ ಸೈಬರ್ ದಾಳಿಯನ್ನು ಎದುರಿಸಲೇಬೇಕಿದೆ. ಪ್ರತಿ ದಾಳಿಗೆ ಸಜ್ಜಾಗಲೇಬೇಕಿದೆ.

ಸೈಬರ್ ದಾಳಿಯನ್ನು ನಮ್ಮ ಸರಕಾರವಾಗಲಿ, ಸೇನೆಯಾಗಲಿ ಪೂರ್ತಿಯಾಗಿ ತಡೆಗಟ್ಟಲಾಗದು. ನಾಗರಿಕರಲ್ಲಿ ಈ ಕುರಿತು ಹೆಚ್ಚಿನ ತಿಳಿವಳಿಕೆ, ಜಾಗೃತಿ ಮತ್ತು ತಂತ್ರಜ್ಞಾನದ ಸದ್ಭಳಕೆಯ ಅರಿವು ಮೂಡದಿದ್ದರೆ, ನಾವು ಶತ್ರು ದೇಶಗಳಿಗೆ ಸುಲಭದ ಮಿಕಗಳಾಗುತ್ತೇವೆ.

ದುರದೃಷ್ಟವಶಾತ್ ಈವರೆಗಿನ ಮಾಹಿತಿಯನ್ನು ಅವಲೋಕಿಸಿದರೆ ಸೈಬರ್ ವಂಚಿತರು ಮತ್ತು ಸಂತ್ರಸ್ತರಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ. ಅದರಲ್ಲೂ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಂಡ ಬೆಂಗಳೂರಿನಲ್ಲಿ ಟೆಕ್ಕಿಗಳು ಸೇರಿದಂತೆ ಸುಶಿಕ್ಷಿತರ ಬಹುದೊಡ್ಡ ವರ್ಗ ಈ ವಂಚನೆ ಜಾಲದಲ್ಲಿ ಸಿಲುಕಿ ಕೋಟ್ಯಂತರ ರು. ಕಳೆದುಕೊಳ್ಳುತ್ತಿದ್ದಾರೆ.

ಇಂಡಿಯಾ ಟುಡೇ ವರದಿ ಪ್ರಕಾರ 2024ರಲ್ಲಿ ಸೈಬರ್ ವಂಚನೆ ಕಾರಣದಿಂದ ಭಾರತೀಯರು ಸುಮಾರು 22,812 ಕೋಟಿ ರು. ನಷ್ಟ ಅನುಭವಿಸಿದ್ದಾರೆ. ಸ್ಟಾಕ್ ಟ್ರೇಡಿಂಗ್ ವಂಚನೆ ಮೂಲಕ 4,636 ಕೋಟಿ, ಹೂಡಿಕೆ ಆಮಿಷಗಳ ಮೂಲಕ 3,216 ಕೋಟಿ, ಡಿಜಿಟಲ್ ಅರೆಸ್ಟ್‌ ವಂಚನೆಗಳ ಮೂಲಕ 1,616 ಕೋಟಿ ರು. ನಷ್ಟ ಉಂಟಾಗಿದೆ.

ದೇಶದಲ್ಲಿ ಪ್ರತಿದಿನ ಸರಾಸರಿ 6,000 ಕ್ಕಿಂತ ಹೆಚ್ಚು ಸೈಬರ್ ವಂಚನೆಗಳ ದೂರುಗಳು ದಾಖಲಾಗು ತ್ತಿವೆ .ಒಟ್ಟಾರೆ ಭಾರತೀಯರು ದಿನವೊಂದಕ್ಕೆ ಸುಮಾರು 60 ಕೋಟಿ ರು.ಗಳಿಗಿಂತ ಹೆಚ್ಚು ಮೊತ್ತ ಕಳೆದುಕೊಳ್ಳುತ್ತಿದ್ದಾರೆ.

ಇದರ ಹಿಂದೆ ಬಹುಸಂಖ್ಯೆಯಲ್ಲಿ ಚೀನಿಯರಿದ್ದಾರೆ. ಇಲ್ಲವೇ ಚೀನಾದ ಹ್ಯಾಕಿಂಗ್ ತಂತ್ರಜ್ಞಾನದ ನೆರವಿದೆ. ಪಾಕಿಸ್ತಾನ, ಮ್ಯಾನ್ಮಾರ್, ಥಾಯ್ಲೆಂಡ್, ಕಾಂಬೋಡಿಯಾ, ನೈಜೀರಿಯಾ ಸೇರಿದಂತೆ ನಾನಾ ರಾಷ್ಟ್ರಗಳಿಂದ ಕಾರ್ಯಾಚರಿಸುವ ಸೈಬರ್ ಖದೀಮರಿಗೆ ಶತ್ರು ದೇಶಗಳ ವ್ಯವಸ್ಥಿತ ಒತ್ತಾಸೆ ಯಿದೆ. ಈ ಕಾರಣಕ್ಕಾಗಿಯೇ ಸೈಬರ್ ವಂಚಕರನ್ನು, ವೆಬ್‌ಸೈಟ್ ಹ್ಯಾಕರ್‌ಗಳನ್ನು, ಕ್ರಿಪ್ಟೋ ಕರೆನ್ಸಿ ನೆಪದಲ್ಲಿ ದೋಚುವ ಆನ್‌ಲೈನ್ ದರೋಡೆಕೋರರನ್ನು, ಡಿಜಿಟಲ್ ಸುಂದರಿಯರನ್ನು ಮುಂದಿ ಟ್ಟು ಜನರನ್ನು ಬೆತ್ತಲು ಮಾಡುವ ಧೂರ್ತರನ್ನು ಪತ್ತೆ ಮಾಡುವುದಾಗಲಿ, ಶಿಕ್ಷಿಸುವುದಾಗಲಿ ಸಾಧ್ಯವಾಗುವುದಿಲ್ಲ.

ಚೀನಾ ತಂತ್ರ-ಕುತಂತ್ರ

ಸೈಬರ್ ದಾಳಿ ಹೊಸದೇನೂ ಅಲ್ಲ. ಎರಡು ದಶಕಗಳ ಹಿಂದೆಯೇ ರಷ್ಯಾ, ಸೈಬರ್ ದಾಳಿ ಮೂಲಕ ಎಸ್ತೇನಿಯಾದ ವಿದ್ಯುತ್ ಗ್ರಿಡ್ ವ್ಯವಸ್ಥೆಯನ್ನು ಹಾಳುಗೆಡವಿತ್ತು. ಆದರೆ ಇದೀಗ ಸೈಬರ್ ಪರಿಣತಿ ಯ ಖ್ಯಾತಿ, ಕುಖ್ಯಾತಿಯೆಲ್ಲವೂ ಚೀನಾಕ್ಕೆ ಸಲ್ಲುತ್ತದೆ. ಕಮ್ಯೂನಿಷ್ಟ್‌ ರಾಷ್ಟ್ರವು ಭಾರತ ಮಾತ್ರವಲ್ಲ, ಅಮೆರಿಕ,ಯೂರೋಪ್, ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ನಾನಾ ರಾಷ್ಟ್ರಗಳ ಒಂದೂವರೆ ದಶಕಗಳ ಹಿಂದೆಯೇ ಸೈಬರ್ ದಾಳಿ ಆರಂಭಿಸಿದೆ. ಈಗಲೂ ದಾಳಿ ಮುಂದುವರಿಸಿದೆ.

ಜಗತ್ತಿನ ಎಲ್ಲ ದೇಶಗಳಿಗಿಂತ ಮುನ್ನ 2006ರಷ್ಟು ಹಿಂದೆಯೇ ಪೀಪಲ್ಸ್‌ ರಿಪಬ್ಲಿಕ್ ಆರ್ಮಿ ಸಾವಿರ ಸೈಬರ್ ಯೋಧರ ವಿಶೇಷ ಪಡೆಯನ್ನು ರಚಿಸಿತ್ತು. ಚೀನಾ ಇಂದು ಅಮೆರಿಕಕ್ಕೆ ಸಡ್ಡು ಹೊಡೆದು ಸೂಪರ್ ಪವರ್ ಆಗಲು ಕಾರಣಗಳನ್ನು ವಿಶ್ಲೇಷಿಸಿದರೆ ಸೈಬರ್ ತಂತ್ರಜ್ಞಾನದಲ್ಲಿ ಅದು ಸಾಧಿಸಿದ ಪರಿಣತಿಯೂ ಮುಖ್ಯ ಕಾರಣ.

ಭಾರತದಂತಹ ರಾಷ್ಟ್ರಗಳು ತಮ್ಮ ಡಿಜಿಟಲ್ ಜ್ಞಾನವನ್ನು ವಿಶ್ವದ ಒಳಿತಿಗೆ ಬಳಸಿದರೆ, ಚೀನಾ ವೆಬ್‌ಸೈಟ್ ಹ್ಯಾಕಿಂಗ್, ವೈರಸ್, ಮಾಲ್‌ವೇರ್‌ಗಳು, ಸೈಬರ್ ವಂಚನೆ, ಕಂಪನಿಗಳ ಡಾಟಾ ಮತ್ತು ರಕ್ಷಣಾ ರಹಸ್ಯಗಳ ಕಳವು, ವೈರಿ ರಾಷ್ಟ್ರದ ಮೇಲೆ ಕಣ್ಗಾವಲು ಸೇರಿದಂತೆ ತನ್ನ ಪಾರಮ್ಯವನ್ನು ಮೆರೆಯಲು ಬೇಕಾದುದೆಲ್ಲವನ್ನೂ ಮಾಡಿದೆ.

2013ರಲ್ಲಿ ಅಮೆರಿಕದ Mandiant ಸೈಬರ್ ಭದ್ರತಾ ಕಂಪನಿ ಸುಮಾರು ಆರು ವರ್ಷಗಳ ಕಾಲ ಅಧ್ಯಯನ ನಡೆಸಿ ವರದಿ ನೀಡುವವರೆಗೂ ಭಾರತ ಸೇರಿದಂತೆ ವಿಶ್ವದ ಯಾವ ರಾಷ್ಟ್ರಕ್ಕೂ ಚೀನಾದ ಕರಾ ಮತ್ತು ತಿಳಿದಿರಲಿಲ್ಲ. ಶಾಂಘೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಚೀನಾದ ಪೀಪಲ್ಸ್‌ ಲಿಬರೇಶನ್ ಆರ್ಮಿಯ ಘಟಕವಾದ ಪಿಎಲ್‌ಎ ಯುನಿಟ್ 61398 ಸೈಬರ್ ಘಟಕ ಸುಮಾರು 141 ಕಂಪನಿಗಳ ಮೇಲೆ ಸೈಬರ್ ದಾಳಿ ನಡೆಸಿ ಡಾಟಾ ಕಳವು ಮಾಡಿದ್ದನ್ನು ಈ ವರದಿ ಬಹಿರಂಗ ಪಡಿಸಿತ್ತು. ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಪ್ರಮುಖ ದೇಶಗಳ ರಕ್ಷಣೆ, ಇಂಧನ, ವ್ಯಾನುಫ್ಯಾಕ್ಚರಿಂಗ್, ಫೈನಾನ್ಸ್‌ ಕಂಪನಿಗಳು ಚೀನಾದ ಸೈಬರ್ ದಾಳಿಗೆ ಗುರಿಯಾಗಿದ್ದವು.

* Spear & phishing mails, Custom & built malware, Encrypted data tunneling

* ಮೂಲಕ ಚೀನಾ ಮಾಹಿತಿ ಸಂಗ್ರಹ ಮತ್ತು ಹ್ಯಾಕಿಂಗ್ ಕೆಲಸವನ್ನು ವ್ಯವಸ್ಥಿತವಾಗಿ ನಡೆಸಿತ್ತು.

ಇದೇ ವೇಳೆ ಭಾರತದ ಹಲವು ಸರಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ಮೇಲೂ ಚೀನಾ ಸೈಬರ್ ದಾಳಿಯಾಗಿತ್ತು. ಈ ದಾಳಿಯ ಮೂಲಕ ಸಿಕ್ಕ ಮಾಹಿತಿಯನ್ನು ಬಳಸಿಕೊಂಡು ಚೀನಾ ತನ್ನದೇ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉತ್ಪನ್ನಗಳ ತಯಾರಿಕೆಗೆ ಬಳಸಿಕೊಂಡಿತ್ತು.

ಇಂದು ಚೀನಾದ ಮಾಲ್‌ವೇರ್ ಟೂಲ್‌ಗಳು ಡಿಜಿಟಲ್ ಮತ್ತು ಕಂಪ್ಯೂಟರ್ ತಜ್ಞರಿಗೆ ಚಿರಪರಿಚಿತ. ಇದನ್ನು ತಡೆಯಲು ಬೇಕಾದ ಹಲವು ಫೈರ್‌ವಾಲ್‌ಗಳು ಬಳಕೆಯಲ್ಲಿವೆ. ಆದರೆ ಚೀನಾದ ವಿಶೇಷ ಸೈಬರ್ ಪಡೆ ಆಗಾಗ ಅತ್ಯಾಧುನಿಕ ಮಾಲ್‌ವೇರ್‌ಗಳು, ವೈರಸ್, ಡೇಟಾ ಕಳವು ಆ್ಯಪ್ ಮೂಲಕ ಬೆದರಿಕೆ ಒಡ್ಡುತ್ತಲೇ ಇದೆ.

ಉಗ್ರ ಸ್ನೇಹಿ ತಂತ್ರಜ್ಞಾನ

ಇಷ್ಟು ಮಾತ್ರವಲ್ಲ, ಚೀನಾದಲ್ಲಿ ಅಭಿವೃದ್ಧಿಯಾಗುವ ಪ್ರತಿಯೊಂದು ತಂತ್ರಜ್ಞಾನವು ಜಗತ್ತಿನ ಇತರ ರಾಷ್ಟ್ರಗಳ ಸಮಗ್ರತೆಗೆ ಬೆದರಿಕೆ ಒಡ್ಡುತ್ತಿವೆ. ಕಾರ್ಗಿಲ್ ಯುದ್ಧ, ಮುಂಬೈ ದಾಳಿ, ಪುಲ್ವಾಮ ಮತ್ತು ಮೊನ್ನೆ ನಡೆದ ಪಹಲ್ಗಾಮ್ ನರಮೇಧದಲ್ಲಿ ಉಗ್ರರು ಚೀನಾ ನಿರ್ಮಿತ ಆ್ಯಪ್‌ಗಳ ಸಹಾಯ ಪಡೆದು ಭಾರತಕ್ಕೆ ಬಂದಿದ್ದಾರೆ. ಇವುಗಳ ಮೂಲಕವೇ ನಮ್ಮ ಗುಪ್ತಚರ ಪಡೆಗಳ ಕಣ್ತಪ್ಪಿಸಿ ಸಂವಹನ ನಡೆಸಿದ್ದಾರೆ. ಚೀನಾ ಆಗಾಗ ನಮ್ಮ ರಕ್ಷಣಾ ಸಂಸ್ಥೆಗಳು ಮತ್ತು ಸರಕಾರಿ ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸುತ್ತಲೇ ಇದೆ.

ತನ್ನ ಎದುರಾಳಿಗಳನ್ನು ಹಣಿಯಲು ಮಾತ್ರವಲ್ಲ, ಅಡ್ಡ ಮಾರ್ಗದ ಮೂಲಕ ತನ್ನ ಅರ್ಥ ವ್ಯವಸ್ಥೆಯನ್ನು ಬಲಪಡಿಸಲೂ ಚೀನಾ ಸೈಬರ್ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಸದ್ಯ ಬಳಕೆ ಯಲ್ಲಿರುವ ಬಹುತೇಕ ಮೊಬೈಲ್ ಗೇಮಿಂಗ್ ಆ್ಯಪ್‌ಗಳು ಚೀನಾ ನಿರ್ಮಿತ. ಇವು ನಮಗೆ ಆಟದ ಚಟ ಅಂಟಿಸಿ ಕಿಸೆಗೆ ಕನ್ನ ಹಾಕುವ ಜತೆಗೆ ನಮಗೆ ಗೊತ್ತಿಲ್ಲದೆ ನಮ್ಮ ಚಲನವಲನಗಳ ಮಾಹಿತಿ ಸಂಗ್ರಹಿಸುತ್ತವೆ. ಖಾಸಗಿ ಪೋಟೋಗಳನ್ನು ಸಂಗ್ರಹಿಸಿ ಇನ್ನಾರಿಗೋ ರವಾನಿಸುತ್ತವೆ. ಮುಂದೊಂದು ದಿನ ಇದೇ ಫೋಟೋಗಳು ಫೇಸ್‌ಬುಕ್, ವಾಟ್ಸ್‌ ಆ್ಯಪ್‌ನಲ್ಲೂ ಹರಿದಾಡುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಶತ್ರುದೇಶದ ಗೂಢಚಾರರಿಗೆ ನಮ್ಮ ಬೆಡ್ ರೂಮ್‌ಗಳಲ್ಲಿ ಆಶ್ರಯ ಕೊಡುತ್ತಿದ್ದೇವೆ.

ಭಾರತ ಈ ವಿದ್ಯಮಾನಕ್ಕೆ ತೀರಾ ತಡವಾಗಿ ಸ್ಪಂದಿಸುತ್ತಿದೆ. ನಮ್ಮ ಸೇನೆಯಲ್ಲೂ ಈಗ ಸೈಬರ್ ದಾಳಿ ತಡೆಯಲು ಪ್ರತ್ಯೇಕ ವಿಭಾಗಗಳಿವೆ. ರಾಷ್ಟ್ರೀಯ ಸೈಬರ್ ಭದ್ರತಾ ಮಂಡಳಿ ( NCSC ) ರಾಷ್ಟ್ರೀಯ ರಕ್ಷಣಾ ಮಂಡಳಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಏಜೆನ್ಸಿಗಳ ನಡುವೆ ಸಮನ್ವಯವನ್ನು ಸಾಧಿಸುತ್ತದೆ. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿ ಕ್ರಿಯಾ ತಂಡ ( CERT-India) ಸೈಬರ್ ಘಟನೆಗಳಿಗೆ ಪ್ರತಿಕ್ರಿಯಿಸಲು ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸಲು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಡಿಫೆನ್ಸ್‌ ಸೈಬರ್ ಏಜೆನ್ಸಿ ( DCyA ) ಮೂರು ಪಡೆಗಳ ಪರವಾಗಿ ಸೈಬರ್ ಕಾರ್ಯಾಚರಣೆಗಳನ್ನು ನಡೆಸುವ ಮತ್ತು ನಿಯಂತ್ರಿಸುವ ಕೆಲಸ ಮಾಡುತ್ತಿದೆ.

ಸೈಬರ್ ಫೊರೆನ್ಸಿಕ್, ಕ್ವಾಂಟಮ್ ಕಂಪ್ಯೂಟಿಂಗ್, ಮೊಬೈಲ್ ಸೆಕ್ಯೂರಿಟಿ, ಕ್ರಿಪ್ಟೋಗ್ರಫಿಯಂತಹ ಕ್ಷೇತ್ರಗಳಲ್ಲಿ ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಸರಕಾರ ಇತ್ತೀಚೆಗೆ ಉತ್ತೇಜನ ನೀಡುತ್ತಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಈ ನಿಟ್ಟಿನಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿದೆ. ಭಾರತದ ಪರ Indian Cyber Force ÊÜáñÜᤠHacktivist Vanguard ಹ್ಯಾಕಿಂಗ್ ಕೆಲಸ ಮಾಡುತ್ತಿವೆ. ಇಸ್ರೇಲ್, ಅಮೆರಿಕದಂತಹ ದೇಶಗಳೂ ತಮ್ಮ ಗುಪ್ತಚರ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿವೆ.

ಆದರೆ ಸೈಬರ್ ಯುದ್ಧದಲ್ಲಿ ಇವಿಷ್ಟೇ ಸಾಕಾಗುವುದಿಲ್ಲ. ಸೇನೆ ಮತ್ತು ಸರಕಾರದ ಜೊತೆ ನಾಗರಿಕ ರೂ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಶತ್ರುಗಳ ಛಾಯಾ ಸಮರವನ್ನು ಎದುರಿಸುವ ಬಗ್ಗೆ ನಮಗೂ ಒಂದಷ್ಟು ಮಾಹಿತಿ, ತಿಳಿವಳಿಕೆ ಇರಲೇಬೇಕು. ನಾವು ಆನ್‌ಲೈನ್ ವಂಚಕರಿಗೆ, ಹ್ಯಾಕರ್‌ ಗಳಿಗೆ ಸುಲಭದ ಮಿಕಗಳಾಗದಂತೆ ನೋಡಿಕೊಂಡರೂ ಅದು ದೇಶಕ್ಕೆ ಸಲ್ಲಿಸುವ ಸೇವೆಯಾಗುತ್ತದೆ.