ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naveen Sagar Column: ಜಂಟ್ಲ್‌ ಮನ್‌ ಪಟ್ಟ ತಿರಸ್ಕರಿಸಿದ್ದ ಬ್ಯಾಡ್‌ ಬಾಯ್‌ ಸೈಮಂಡ್ಸ್‌ !

ಆಂಡ್ರ್ಯೂ ಸೈಮಂಡ್ಸ್ ನನ್ನು ಇವತ್ತು ನೆನಪಿಸಿಕೊಳ್ಳೋಕೆ ಕಾರಣ ಮೊನ್ನೆ ಮೇ ಹದಿನೈದಕ್ಕೆ ಆತ ಕಾರ್ ಅಪಘಾತದಲ್ಲಿ ತೀರಿಕೊಂಡು ಮೂರು ವರ್ಷವಾಯ್ತು. ಸೈಮಂಡ್ಸ್ ಬಹಳ ವರ್ಣರಂಜಿತ ಅಷ್ಟೇ ವಿವಾ ದಾತ್ಮಕ ಮತ್ತು ರೋಚಕ ಬದುಕು ಬದುಕಿ ಹೋದವ. ಟಿಪಿಕಲ್ ಕರಿಯರ್ ಜೋವಿ‌ಯಲ್ ನೇಚರ್ ಅವನೊಳಗಿತ್ತು.

ಜಂಟ್ಲ್‌ ಮನ್‌ ಪಟ್ಟ ತಿರಸ್ಕರಿಸಿದ್ದ ಬ್ಯಾಡ್‌ ಬಾಯ್‌ ಸೈಮಂಡ್ಸ್‌ !

ಪದಸಾಗರ

ಅದು ಐಪಿಎಲ್ ಎಂಬ ಕ್ರಿಕೆಟ್ ಹಬ್ಬ ಜಗತ್ತಿಗೆ ಕಾಲಿಟ್ಟ ಹೊತ್ತು. ಈಗಿರೋ ‘ಸನ್‌ರೈಸರ್ಸ್ ಹೈದರಾ‌ ಬಾದ್’ ತಂಡ ಆಗ ‘ಡೆಕ್ಕನ್ ಚಾರ್ಜರ್ಸ್’ ಅಂತ ಕರೆಸಿಕೊಳ್ತಿತ್ತು. ಆಡಮ್ ಗಿಲ್‌ಕ್ರಿ ಆ ತಂಡದ ನಾಯಕ. ಅಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ತಂಡ. ಅಲ್ಲಿ ಎಂಥೆಂಥಾ ಕಿಲಾಡಿ ಆಟಗಾರರಿದ್ದರು. ಆದರೆ ಆ ತಂಡ ತನ್ನ ಆಟದಿಂದ ಪ್ರಖ್ಯಾತಿಯನ್ನು ಪಡೆದಷ್ಟೇ ದುರ್ನ ಡತೆ ಮತ್ತು ಸ್ಲೆಡ್ಜಿಂಗ್‌ನಿಂದ ಕುಖ್ಯಾತಿಯನ್ನೂ ಪಡೆದಿತ್ತು.

ಬ್ರೆಟ್ ಲೀ, ರಿಕಿ ಪಾಂಟಿಂಗ್, ಸೈಮಂಡ್ಸ್ ಹೀಗೆ ಸಾಲು ಸಾಲು ಮಂದಿ ಸ್ಲೆಡ್ಜಿಂಗ್‌ನಿಂದಲೇ ಎದುರಾಳಿ ಆಟಗಾರರ ಮನೋಸ್ಥೈರ್ಯ ಕುಂದಿಸುತ್ತಿದ್ದರು, ಏಕಾಗ್ರತೆ ಕೆಡಿಸುತ್ತಿದ್ದರು. ಬ್ಯಾಟರ್‌ಗಳು ‌ ಸ್ಲೆಡ್ಜಿಂಗ್‌ಗೆ ಉತ್ತರಿಸಲು ಹೋಗಿ ಔಟಾಗುತ್ತಿದ್ದರು. ಬೌಲರ್‌ಗಳು ಸ್ಲೆಡ್ಜಿಂಗ್‌ನಿಂದ ಕಂಗೆಟ್ಟು ಕೆಟ್ಟ ಚೆಂಡೆಸೆದು ಯದ್ವಾತದ್ವಾ ಹೊಡೆಸಿಕೊಳ್ತಿದ್ರು. ಅಂಥ ತಂಡದಲ್ಲಿ ಆಡಮ್ ಗಿಲ್‌ಕ್ರಿಸ್ಟ್‌ ಎಂಬ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಮ್ಮ ಪಾಲಿಗೆ ಜಂಟ್ಲ್‌ಮನ್ ಅನಿಸಿಬಿಟ್ಟಿದ್ದ.

ಯಾಕಂದ್ರೆ ಔಟೆಂದು ತನಗೆ ಗೊತ್ತಾದ ಕೂಡಲೇ ಅವನು ಅಂಪೈರ್ ನಿರ್ಣಯಕ್ಕೆ ಕಾಯದೇ ಹೋಗುತ್ತಿದ್ದ ಎಂಬ ರೀಸನ್ನಿಗೆ! ದುಷ್ಟಕೂಟದಲ್ಲಿ ಕಡಿಮೆ ದುಷ್ಟ ದೇವರಂತೆ ಕಾಣುವ ಹಾಗೆ! ಹಾಂ.. ಈ ಗಿಲ್‌ಕ್ರಿಸ್ಟ್ ಕ್ಯಾಪ್ಟನ್ ಆಗಿದ್ದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡಕ್ಕೆ ಇನ್ನೊಬ್ಬ ಆಸ್ಟ್ರೇಲಿಯನ್ ಡೆರನ್ ಲೆಹಮನ್ ಕೋಚ್. ಆ ತಂಡದಲ್ಲಿ ಸಭ್ಯ ವಿವಿಎಸ್ ಲಕ್ಷ್ಮಣನೂ ಇದ್ದ. ಜಗಳಗಂಟನೆನಿಸಿದ್ದ ದೈತ್ಯ ಆಂಡ್ರ್ಯೂ ಸೈಮಂಡ್ಸ್ ಕೂಡ ಇದ್ದ. ಐಪಿಎಲ್ ಹಿಸ್ಟರಿಯನ್ನು‌ ಫಾಲೋ ಮಾಡ್ತಾ ಇರೋವ್ರಿಗೆ ನೆನಪಿರಬಹುದು... ಒಮ್ಮೆ ಕಪ್ ಕೂಡ ಗೆದ್ದಿತ್ತು ಈ ಡೆಕ್ಕನ್ ಚಾರ್ಜರ್ಸ್ ತಂಡ.

ನಾಯಕ ಮತ್ತು ಕೋಚ್ ಇಬ್ಬರೂ ಕಾಂಗರೂ ನಾಡಿನವರು. ಹಾಗಾಗಿ ಸಹಜ ಎಂಬಂತೆ ಅಲ್ಲಿ ತಂಡದ ಮನಸ್ಥಿತಿ ಆಸ್ಟ್ರೇಲಿಯಾದ್ದೇ ಇತ್ತು. ಗೆಲ್ಲೋದ್ದಕ್ಕಾಗಿ ಏನ್ ಬೇಕಾದ್ರೂ ಮಾಡ್ತೀವಿ ಅನ್ನೋ ಧೋರಣೆ. ಆ ಜಮಾನದಲ್ಲಿ ನಮ್ಮ ಭಾರತೀಯ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ಸೋದರರಿಬ್ಬರು ಭಾರಿ ಸುದ್ದಿಯಲ್ಲಿದ್ದರು. ಅವ್ರೇ ಪಠಾಣ್ ಬ್ರದರ್ಸ್.

ಇದನ್ನೂ ಓದಿ: Naveen Sagar Column: ಕೆನ್ನೆಗಲ್ಲದೇ ಬೇರೆಡೆ ಹೊಡೆದಾಗ ಏನು ಮಾಡ್ಬೇಕು ಮಿಸ್ಟರ್‌ ಗಾಂಧಿ ?

ಇರ್ಫಾನ್ ಪಠಾಣ್ ತನ್ನ ಎಡಗೈ ವೇಗದ ಸ್ವಿಂಗ್ ಬೌಲಿಂಗ್ ಮತ್ತು ಪಟಾಕಿ ಬ್ಯಾಟಿಂಗಿನಿಂದ ಆಲ್ ರೌಂಡರ್ ಪಟ್ಟ ಗಿಟ್ಟಿಸಿದ್ದ. ಬೌಲಿಂಗಲ್ಲಿ ವಾಸಿಮ್ ಅಕ್ರಮ್‌ನನ್ನು ನೆನಪಿಸುತ್ತಿದ್ದ ಇರ್ಫಾನ್ ಪಠಾಣ್ ಚೆನ್ನಾಗಿ ಆಡಿದಾಗೆಲ್ಲ ಕಪಿಲ್ ಸ್ಥಾನ ತುಂಬುವ ಆಲ್‌ರೌಂಡರ್ ಸಿಕ್ಕ ಅಂತ ಕ್ರಿಕೆಟ್ ಪಂಡಿತರು ಭರವಸೆಯ ಮಾತುಗಳನ್ನಾಡ್ತಾ ಇದ್ರು. ಆದರೆ ಇವತ್ತಿಗೂ ಕಪಿಲ್ ಸ್ಥಾನ ತುಂಬಬಲ್ಲ ನಂಬಿಕಸ್ಥ ಆಲ್‌ರೌಂಡರ್, ಟೆ‌ಸ್ಟ್ ಮತ್ತು ಏಕದಿನ ಎರಡಕ್ಕೂ ಸೂಟ್ ಆಗುವ ಸವ್ಯಸಾಚಿ ಸಿಗಲೇ ಇಲ್ಲ ಅನ್ನೋದು ಕಟುವಾಸ್ತವ.

ಇನ್ನು ಇರ್ಫಾನ್‌ನ ಸೋದರ ಯೂಸುಫ್ ಪಠಾಣ್ ಅಂತೂ ಬೇರೆಯದೇ ರೀತಿಯ‌ ಸೆನ್ಸೇಷನ್ ಆಗಿ ಬಿಟ್ಟಿದ್ದ. ಜಯಸೂರ್ಯ, ಆಫ್ರಿದಿ ಇವರನ್ನೆಲ್ಲ ಒಂದ ಒಂದಿನ ಮೀರಿಸಿ ಬಿಡ್ತಾನೆ, ಇಪ್ಪತ್ತೈದೇ ಬಾಲಲ್ಲಿ ಸೆಂಚುರಿ ಬಾರಿಸಿಬಿಡ್ತಾನೆ ಎಂಬಷ್ಟು ವಿಶ್ವಾಸವನ್ನು ತನ್ನ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಮೂಡಿಸಿದ್ದ. ಟಿ-ಟ್ವೆಂಟಿಯಲ್ಲಿ ಮೂವತ್ತೇಳು ಬಾಲಿಗೆಲ್ಲ ಸೆಂಚುರಿ ಚಚ್ಚಿದ ಈತನಿಗೆ ಐಪಿಎಲ್‌ ನಲ್ಲಿ ಡಿಮ್ಯಾಂಡೋ ಡಿಮ್ಯಾಂಡು.

ಕೋಲ್ಕತ್ತಾ ನೈಟ್ ರೈಡರ್ಸ್‌ನ ಶಾರೂಖ್ ಖಾನ್ ಈತನನ್ನು ಭಾರಿ ಮೊತ್ತಕ್ಕೆ ಕೊಂಡುಕೊಂಡಿದ್ದ. ಪಠಾಣ್ ಇರೋ ತನಕ ಎದುರಾಳಿಗಳಿಗೆ ಆತಂಕ ಕಾಯಂ ಎಂಬ ಪರಿಸ್ಥಿತಿ ಇತ್ತು. ಅದು ಕೊಲ್ಕತ್ತಾ ಮತ್ತು ಡೆಕ್ಕನ್ ಚಾರ್ಜರ್ಸ್ ನಡುವಣ ಪಂದ್ಯ. ಕೊಲ್ಕತ್ತಾ ತಂಡದ ಆರಂಭಿಕ ವಿಕೆಟ್‌ಗಳನ್ನು ಕಿತ್ತು ಡೆಕ್ಕನ್ ಚಾರ್ಜರ್ಸ್ ಮೇಲುಗೈ ಸಾಧಿಸಿತ್ತು. ಆದರೆ ನಾಯಕ ಗಿಲ್ ಕ್ರಿಸ್ಟ್‌ ಗೆ ಸಂತಸದ ಬದಲು ಆತಂಕ ಶುರುವಾಗಿತ್ತು.

ಯಾಕಂದ್ರೆ ಬ್ಯಾಟ್ ಹಿಡಿದು ಕಣಕ್ಕಿಳಿದಿದ್ದು ಯೂಸುಫ್ ಪಠಾಣ್. ಅವನನ್ನು ಬೇಗ ಔಟ್ ಮಾಡದೇ ಹೋದರೆ‌ ಪಂದ್ಯ ಕೈತಪ್ಪೋದು ಖಚಿತ. ರನ್ ಸುರಿಮಳೆಯೇ ಆದೀತು ಎಂಬುದು ನಾಯಕ ಗಿಲ್ಲಿ ಲೆಕ್ಕಾಚಾರ.. ಆಗ ಕೋಚ್ ಮತ್ತು ನಾಯಕ ಸೇರಿ ಒಂದು ಸ್ಟ್ರಾಟೆಜಿ ಮಾಡುತ್ತಾರೆ. ಅವರಿಗೆ ಯೂಸುಫ್‌ ನ ಟೆಂಪರ್‌ಮೆಂಟ್ ಬಗ್ಗೆ ಗೊತ್ತು. ಆತನನ್ನು ರೊಚ್ಚಿಗೆಬ್ಬಿಸುವುದು, ಏಕಾಗ್ರತೆ ಹಾಳುಗೆಡವೋದು ಸುಲಭ ಎಂಬ ಸೀಕ್ರೆಟ್ ಗೊತ್ತಿತ್ತು ಅವರಿಗೆ. ಆಗ ಗಿಲ್‌ಕ್ರಿಸ್ಟ್ ಮೂವತ್ತು ಗಜ ಸರ್ಕಲ್ಲಿನ ಆಚೆಗಿದ್ದ ಸೈಮಂಡ್ಸ್‌ ನನ್ನು ಒಳಗೆ ಕರೀತಾನೆ- “ಸಿಮೋ ನೀನು ಇಲ್ಲಿ ಸಿಲ್ಲಿ ಪಾಯಿಂಟ್‌ಗೆ ಬಾ... ಅಂದ್ರೆ ಬ್ಯಾಟ್ಸ್‌ಮನ್‌ಗೆ ತೀರಾ ಹತ್ತಿರ!"ಸೈಮಂಡ್ಸ್ ಕೇಳ್ತಾನೆ, “ಯಾಕೆ ಕ್ಯಾಚ್ ಹಿಡಿಯೋ ದಕ್ಕಾ?"‌ ಆಗ ಗಿಲ್‌ಕ್ರಿಸ್ಟ್‌ ಹೇಳ್ತಾನೆ, “ಉಹೂಂ.. ಯೂಸುಫ್ ಸಿಲ್ಲಿ‌ ಪಾಯಿಂಟಲ್ಲಿ ಕ್ಯಾಚ್ ಕೊಡೋ ಸಿಲ್ಲಿ ಬ್ಯಾಟರ್ ಅಲ್ಲ.‌

ನಿನ್ನ ಕೆಲಸ ಅದಕ್ಕಿಂತ ಮುಖ್ಯವಾದದ್ದಿದೆ. ಅಲ್ಲಿ ನಿಂತು ಅವ್ನನ್ನು ಸ್ಲೆಡ್ಜ್ ಮಾಡ್ಬೇಕು. ಅವ್ನ ಕಾನ್ಸಂಟ್ರೇಷನ್ ಹಾಳ್‌ ಮಾಡ್ಬೇಕು. ಮೂಡ್ಹಾಳ್ಮಾಡಿ ಅವ್ನು ಯದ್ವಾತದ್ವಾ ಬೀಸೋಕೆ ಹೋಗಿ ಔಟಾಗಬೇಕು. ಓಕೆ...?" “ಯೆಸ್ ಬಾಸ್" ಅಂತಾನೆ ಸೈಮಂಡ್ಸ್. ಸೀದಾ ನಾನ್‌ ಸ್ಟಾಪ್ ಸ್ಲೆಡ್ಜಿಂಗ್ ಶುರುಹಚ್ಕೋತಾನೆ. ಇದನ್ನು ಕಂಡ ಅದೇ ತಂಡದ ವಿವಿಎಸ್ ಲಕ್ಷ್ಮಣ್‌ಗೆ ಕಸಿವಿಸಿ. ಆತ ಹೇಳಿ ಕೇಳಿ ರಾಹುಲ್ ದ್ರಾವಿಡ್‌ನ ಜತೆಗಾರ.

ಕ್ರಿಕೆಟಿಗೆ ಘನತೆ ತಂದುಕೊಟ್ಟ ಜಂಟ್ಲ್ ಮನ್. ಅವನಿಗಿದು ಸರಿ ಕಾಣೋದಿಲ್ಲ. ತನ್ನದೇ ತಂಡದವ ನಾದರೂ ಮನಸು ಈ ಸ್ಲೆಡ್ಜಿಂಗ್ ಸ್ಟ್ರಾಟೆಜಿಯನ್ನು ಒಪ್ಪಿಕೊಳ್ಳೋದಿಲ್ಲ. ಸೀದಾ ಹೋಗಿ, “ಅರೆ ಯಾರ್.. ಇದೆಲ್ಲ ಯಾಕ್ ಮಾಡ್ತೀಯ.. ನಿಂಗಿದು ಸರಿ ಅನ್ಸತ್ತಾ?" ಅಂತ ಕೇಳ್ತಾನೆ. ಸೈಮಂಡ್ಸ್ ಆಗ ಹೇಳೋದೇನು ಗೊತ್ತಾ? “ ನೋಡಿ‌ ಬ್ರೋ.... ಈ ಸೇನೆಯಲ್ಲಿ ನಾನು ಒಬ್ಬ ಯೋಧ ಅಷ್ಟೆ, ಲೀಡರ್ ಅಲ್ಲ. ನನ್ನ ಕೆಲಸ ಲೀಡರ್‌ನ ಆದೇಶ ಪಾಲಿಸೋದು ಅಷ್ಟೆ". ಈ ಮಾತನ್ನು ಹೇಳಿ ಸೈಮಂಡ್ಸ್ ಮತ್ತೆ ತನ್ನ‌ ನಾಯಕನ ಆದೇಶ ಪಾಲಿಸಲು ಮುಂದಾಗ್ತಾನೆ.

ಈ ಘಟನೆಯನ್ನು ಖುದ್ದು ವಿವಿಎಸ್ ಲಕ್ಷ್ಮಣ್ ಇಂಟರ್ವ್ಯೂವೊಂದರಲ್ಲಿ ನೆನಪಿಸಿಕೊಳ್ಳುತ್ತಾ, ಆಂಡ್ರ್ಯೂ ಸೈಮಂಡ್ಸ್ ಎಂಬ ಪ್ರಚಂಡ ಆಟಗಾರನ ‘ಆನ್-ಫೀಲ್ಡ್’ ಮತ್ತು ‘ಆಫ್-ಫೀಲ್ಡ್’ ಗುಣಗಳ ಬಗ್ಗೆ ಮಾತನಾಡ್ತಾ‌ ಹೋಗ್ತಾರೆ- “ಸೈಮಂಡ್ಸ್‌ ನನ್ನು ಎಲ್ಲರೂ ತಪ್ಪಾಗಿ ತಿಳಿದುಕೊಂಡಿದ್ದಾರೆ,

ಆತನೊಬ್ಬ ಮೃಗ, ಜಗಳಗಂಟ, ರೆಬೆಲ್ ಇತ್ಯಾದಿ ಅಂತ. ನಾನೂ ಅವನೂ ಅಂಡರ್ ನೈಂಟೀನ್ ಕಾಲದಿಂದ ಜತೆಯಲ್ಲಿ ಆಡಿ ಬಲ್ಲೆವು. ಎದುರು ಕಾಣೋದೆಲ್ಲ ಸತ್ಯವಾಗಿರೋದಿಲ್ಲ" ಅಂತ. ಓದುಗರೇ, ಆಂಡ್ರ್ಯೂ ಸೈಮಂಡ್ಸ್‌ ನನ್ನು ಇವತ್ತು ನೆನಪಿಸಿಕೊಳ್ಳೋಕೆ ಕಾರಣ ಮೊನ್ನೆ ಮೇ ಹದಿ ನೈದಕ್ಕೆ ಆತ ಕಾರ್ ಅಪಘಾತದಲ್ಲಿ ತೀರಿಕೊಂಡು ಮೂರು ವರ್ಷವಾಯ್ತು. ಆಂಡ್ರ್ಯೂ ಸೈಮಂಡ್ಸ್ ಬಹಳ ವರ್ಣರಂಜಿತ ಅಷ್ಟೇ‌ ವಿವಾದಾತ್ಮಕ ಮತ್ತು ರೋಚಕ ಬದುಕು ಬದುಕಿ ಹೋದವ.

ವಿವಿಎಸ್ ಲಕ್ಷ್ಮಣ್‌ಗೆ ಸೈಮಂಡ್ಸ್ ಕೊಟ್ಟ ಆ ಉತ್ತರ ಬಹಳ ವಿಶೇಷವಾದದ್ದು ಅಲ್ವಾ. ತುಂಬ ಸಲ ನಮ್ಮ ದೇಶಕ್ಕೆ, ತಂಡಕ್ಕೆ, ಸಂಸ್ಥೆಗೆ ನಿಯತ್ತಾಗಿರೋಕೆ ಹೋದಾಗ ನಾವು ಇತರರ ಪಾಲಿಗೆ ವಿಲನ್ ಆಗಿಬಿಡ್ತೇವೆ. ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ‘ಬಾಡಿಲೈನ್’ ಎಂಬ ಎಪಿಸೋಡ್ ನೀವು ಒಮ್ಮೆ ನೋಡಬೇಕು. ಅಲ್ಲಿ ಇಂಗ್ಲೆಂಡಿನ ಜಾರ್ಡಿನ್ ಎಂಬ ದುಷ್ಟ ನಾಯಕನ ಆದೇಶ ಪಾಲಿಸಿದ್ದು ಲಾರ್ ವುಡ್ ಎಂಬ ವೇಗದ ಬೌಲರ್... ಒಬ್ಬೊಬ್ಬ ಆಸೀಸ್ ಬ್ಯಾಟ್ಸ್‌ಮನ್‌ಗೂ ಮೈಮೇಲೆ ಬಾಲ್ ಎಸೆದು ಅರೆಜೀವ ಮಾಡಿ ಆಸ್ಪತ್ರೆಗೆ ಕಳಿಸುತ್ತಿದ್ದ ಲಾರ್ ವುಡ್, “ದೇವ್ರೆ ಅವರ ನೋವೆಲ್ಲ ನಂಗೆ ಕೊಡು. ನನ್ನ ಕ್ಷಮಿಸು" ಅಂತ ಬೇಡಿಕೊಳ್ತಿದ್ನಂತೆ. ಆದರೆ ಲಾರ್ ವುಡ್ ಆಸ್ಟ್ರೇಲಿಯಾ ಪಾಲಿಗೆ ಮತ್ತು ಕ್ರಿಕೆಟ್ ಪ್ರಿಯರ ಪಾಲಿಗೆ ದುಷ್ಟನೇ. ಆತ ಜಾರ್ಡಿನ್ ಮತ್ತು ಇಂಗ್ಲೆಂಡ್ ಪಾಲಿಗೆ ಹೀರೋ.

ಸೈಮಂಡ್ಸ್ ಮೂಲತಃ ಅಗ್ರೆಸಿವ್‌ ವ್ಯಕ್ತಿತ್ವದವನೇ. ಆದರೆ ಟಿಪಿಕಲ್ ಕರಿಯರ ಜೋವಿಯಲ್ ನೇಚರ್ ಅವನೊಳಗಿತ್ತು. ಇಂಗ್ಲೆಂಡಲ್ಲಿ ಹುಟ್ಟಿ ಆಸ್ಟ್ರೇಲಿಯಾಗೆ ಆಡಿದ ಆಲ್ ರೌಂಡರ್ ಸೈಮಂಡ್ಸ್, ಮನಸ್ಸು ಮಾಡಿದ್ದರೆ ವೆಸ್ಟ್‌ ಇಂಡೀಸ್ ತಂಡದಲ್ಲಿ ಸ್ಥಾನ ಸಿಗುತ್ತಿತ್ತು. ಅವನಿಗೆ ಆಫರ್ ಕೂಡ ಬಂದಿತ್ತು. ಇಂಗ್ಲೆಂಡ್ ಕೂಡ ಸೈಮಂಡ್ಸ್‌ ನನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಆದರೆ ಆತ ತಾನು ಬೆಳೆದ ದೇಶದ ಪರ ಆಡಲು ನಿರ್ಧರಿಸಿ ಆಸ್ಟೇಲಿಯಾ ತಂಡಕ್ಕೆ ಸೇರಿಕೊಂಡ.

ಸೀನಿಯರ್‌ಗಳ ನಿವೃತ್ತಿಯಿಂದ ನಲುಗಿದ್ದ ಕಾಂಗರೂ ತಂಡದ ಮಧ್ಯಮ ಕ್ರಮಾಂಕಕ್ಕೆ ವರವಾಗಿ ಸಿಕ್ಕಿದ್ದ ಸೈಮಂಡ್ಸ್‌. ಮೂರು ಬ್ಯಾಟರ್‌ಗಳ ಸ್ಥಾನವನ್ನು ಏಕಾಂಗಿಯಾಗಿ ತುಂಬಬಲ್ಲ ಸಾಮರ್ಥ್ಯ ಸೈಮಂಡ್ಸ್‌ ಗಿತ್ತು. ಬ್ಯಾಟಿಂಗಿಗೆ ಬಂದರೆ ಬೌಲರ್‌ಗಳು ಬೆವರುತ್ತಿದ್ದರು. ಸ್ಪಿನ್ ಮತ್ತು ವೇಗದ ಚೆಂಡು ಗಳನ್ನು ಸಮಾನ ನಿರ್ದಯತೆಯಿಂದ ಬೌಂಡರಿಯಾಚೆ ಕಳಿಸುತ್ತಿದ್ದ ಸೈಮಂಡ್ಸ್‌, ಬೌಲಿಂಗ್ ಮಾಡು ಅಂತ ಚೆಂಡು ಕೈಗಿತ್ತರೆ, ಸ್ಪಿನ್ ಬೇಕೋ ಮೀಡಿಯಂ - ಬೇಕೋ ಅಂತ ಕಪ್ತಾನನನ್ನು ಕೇಳುತ್ತಿದ್ದ.

ಎರಡೂ ರೀತಿಯ ಬೌಲಿಂಗ್ ಕಲೆ ಅವನಿಗೆ ಒಲಿದಿತ್ತು. ಇನ್ನು ಫೀಲ್ಡಿಂಗಿಗೆ ಅಂತ ನಿಂತರೆ ಆತನ ಸುತ್ತಲಿನ ಇಪ್ಪತ್ತೈದು ಮೀಟರ್ ಪರಿಧಿಯಲ್ಲಿ ಚೆಂಡು ಗಾಳೀಲಿ ತೇಲೋ ಹಾಗೇ ಇಲ್ಲ. ಅಕ್ಷರಶಃ ಹನುಮಂತನಂತೆ ನೆಗೆದು ಕ್ಯಾಚ್ ತೆಗೆದುಕೊಳ್ತಿದ್ದ. ಬಹಳ ಸಲ ಈತ ನಿಜಕ್ಕೂ ಮನುಷ್ಯನಾ ಅಂತ ಅನಿಸಿದ್ದಿದೆ. ರಾಮಾಯಣ ಧಾರಾವಾಹಿಯ ಆಂಜನೇಯ ಧಾರಾಸಿಂಗನ ಮಗನೇನೋ ಎಂಬಂತೆ ಕಾಣುತ್ತಿದ್ದ ಸೈಮಂಡ್ಸ್, ಮೂತಿಮೇಲೆ ತುಂಬ ಸದಾ ಜಿಂಕ್ ಜೆಲ್ ಹಚ್ಚಿಕೊಂಡೇ ಮೈದಾನ‌ ಕ್ಕಿಳಿಯುತ್ತಿದ್ದ.

ಔಟ್ ಆಗಿದ್ದೇನೆಂದು ತನಗೆ ಗೊತ್ತಾಗಿದ್ದರೂ, ಅಂಪೈರ್ ಔಟೆಂದು ಕೈ ಎತ್ತುವ ತನಕ ಅಂಗಣ ಬಿಟ್ಟು ಹೊರಡುತ್ತಿರಲಿಲ್ಲ. “ಸ್ಪೋರ್ಟ್ಸ್‌ಮನ್ ಸ್ಪಿರಿಟ್‌ನಲ್ಲಿ ನನಗೆ ನಂಬಿಕೆ ಇಲ್ಲ.. ನನಗೆ ಜಂಟ್ಲ್‌ ಮನ್ ಅನಿಸಿಕೊಳ್ಳುವ ತೆವಲು ಕೂಡ ಇಲ್ಲ. ಅಂಪೈರ್ ಇರೋದ್ಯಾಕೆ.. ಅವರು ಔಟ್ ಕೊಡಲಿ. ಆಮೇಲೆ ಹೋಗ್ತೀನಿ. ಇತಿಹಾಸ ಗೆಲುವು ಸೋಲುಗಳನ್ನು ದಾಖಲೆಯೆಂಬಂತೆ ನೋಡುತ್ತದೆಯೇ ಹೊರತು, ಜಂಟ್ಲ್‌ಮನ್ ಪಟ್ಟವನ್ನಲ್ಲ. ಅಂಕಿ-ಅಂಶಗಳಲ್ಲಿ ನನ್ನ ಗುಣ-ನಡತೆ ದಾಖಲಾಗೋದಿಲ್ಲ, ಹೊಡೆದ ರನ್ ಮಾತ್ರವೇ ದಾಖಲಾಗೋದು" ಎಂದು ದಿಟ್ಟವಾಗಿ ಹೇಳುತ್ತಿದ್ದ.

ಬ್ಯಾಸ್ಕೆಟ್‌ಬಾಲ್ ಆಟಗಾರ ಲೆರೋಯ್ ಲಾಗಿ ಥರ ಇದ್ದಾನೆ ಅಂತ ಸೈಮಂಡ್ಸ್‌ ಗೆ ‘ರಾಯ್’ ಅನ್ನೋ ಅಡ್ಡಹೆಸರು ಬಂದಿತ್ತು. ಸಹ ಆಟಗಾರರು ರಾಯ್ ಅಂತಲೇ ಕರೀತಿದ್ರು. ಈಗ ಟಿ-ಟ್ವೆಂಟಿ ಜಮಾನ ದಲ್ಲಿ ಐದು-ಹತ್ತು ಸಿಕ್ಸರ್ ಬಾರಿಸೋದು ತುಂಬ ಕಾಮನ್. ಆದರೆ ಸೈಮಂಡ್ಸ್ ತೊಂಬತ್ತರ‌ ದಶಕದ ಒಂದು ಪಂದ್ಯದಲ್ಲಿ ಹದಿನಾರು ಸಿಕ್ಸ್ ಚಚ್ಚಿದ್ದ.‌

ಸೈಮಂಡ್ಸ್ ಅಂದ್ರೆ ಹುಚ್ಚುತನ, ಬಂಡುಕೋರ ಬುದ್ಧಿ, ಜಗಳಗಂಟತನ, ಮುಗ್ಧಪ್ರೀತಿ ಹೀಗೆ ಹಲವು ವಿಚಿತ್ರಗುಣಗಳ‌ ಸಂಕಲನ. ಅದ್ಯಾರೊ ‘ಮೆಂಟಲ್ ಗಿರಾಕಿ’ಯೊಬ್ಬ ಮೈದಾನಕ್ಕೆ ಬೆತ್ತಲೆ ಓಡಿ ಬಂದಾಗ ಮೈದಾನದಲ್ಲಿದ್ದ ಸಹ ಆಟಗಾರರು ಕಕ್ಕಾಬಿಕ್ಕಿಯಾಗಿ ನೋಡ್ತಾ ಸೆಕ್ಯುರಿಟಿ ಅಧಿಕಾರಿ ಗಳಿಗಾಗಿ ಕಾಯ್ತಾ ಇದ್ರೆ, ಸೈಮಂq ಮಾತ್ರ ಒಳ್ಳೇ ರಗ್ಬೀ ಆಟಗಾರನ ಥರ ಆ ವ್ಯಕ್ತಿಯನ್ನು ಅಟ್ಟಿಸಿ‌ ಕೊಂಡು ಹೋಗಿ ಕೆಡವಿದ್ದ.

ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ, ಹರ್ಭಜನ್ ಜತೆ ರಿಪೀಟೆಡ್ ಆಗಿ ಕಿರಿಕ್ ಮಾಡಿದ್ದು ಇದೇ ಸೈಮಂಡ್ಸ್‌ ಹರ್ಭಜನ್ ಕೂಡ ಬಿಸಿರಕ್ತದವ. ಗಂಗೂಲಿ ನಾಯಕತ್ವದ ಅಗ್ರೆಸಿವ್ ತಂಡ ಅದು. ಒಂದಕ್ಕೆ ಹತ್ತು ಕೊಡುವಂತೆ ಗಂಗೂಲಿಯ ಆರ್ಡರ್ ಇತ್ತು.

ಹರ್ಭಜನ್ ಸೈಮಂಡ್ಸ್‌ ಗೆ “ತೇರಿ ಮಾಕಿ" ಎಂದು ಬಯ್ದಿದ್ದ. ತನ್ನನ್ನು ‘ಮಂಕಿ’ ಅಂತ ಬಯ್ದ ಎಂದು ತಿರುಚಿ ಕಂಪ್ಲೇಂಟ್ ಕೊಟ್ಟು ಸೈಮಂಡ್ಸ್ ಭಜ್ಜಿಯನ್ನು‌ ಬ್ಯಾನ್ ಮಾಡಿಸಿದ್ದ. ಮತ್ತೊಂದು ಪಂದ್ಯ ದಲ್ಲಿ ತನ್ನನ್ನು ಔಟ್ ಮಾಡಿ ಸೆಲೆಬ್ರೇಟ್ ಮಾಡಿದ ಶ್ರೀಶಾಂತ್‌ಗೆ ಬ್ಯಾಟಿಂದಲೇ ಹೊಡೆಯಲು ಹೋಗಿದ್ದ ಈ ದೈತ್ಯ ಸೈಮಂಡ್ಸ್. ಆದರೆ ಐಪಿಎಲ್ ಈ ಸೈಮಂಡ್ಸ್ ನನ್ನು ಕೊಂಚ ಮೃದು ಆಗಿಸಿತ್ತು. ಅದೇ ಹರ್ಭಜನ್ ಮತ್ತು ಶ್ರೀಶಾಂತ್‌ರೊಂದಿಗೆ ಸ್ನೇಹಿತನಂತೆ ಕಾಣಿಸಿಕೊಂಡಿದ್ದ.

ಹಾಗಂತ ಆಸ್ಟ್ರೇಲಿಯಾ ತಂಡದಲ್ಲಿ ಆತ ಗುಡ್‌ಬಾಯ್ ಅಂತೇನೂ ಅನಿಸಿಕೊಂಡಿರಲಿಲ್ಲ. ಟೀಮ್ ಮೀಟಿಂಗಿಗೆ ಕರೆದರೆ ಮೀನು ಹಿಡಿಯೋಕೆ ಹೋಗಿದ್ದ. ಅದೇ ಕಾರಣಕ್ಕೆ ತಂಡದಿಂದ ಹೊರಗಿಟ್ಟಿ ದ್ದರು. ಆಟದ ಮಧ್ಯ ಪ್ರೇಕ್ಷಕರ ಕೈಯಿಂದ ಮದ್ಯ ಕೇಳಿ ಪಡೆದು ಸಿಪ್ ಮಾಡಿ ದಂಡ ಹಾಕಿಸಿ ಕೊಂಡಿದ್ದ. ಆಟವನ್ನು ಸೀರಿಯಸ್ಸಾಗಿ ತಗೋತಾ ಇಲ್ಲ ಅಂತ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿ ದ್ದಕ್ಕೆ, ಅವನ ಕೆನ್ನೆಗೆ ಬಾರಿಸಲು ಹೋಗಿದ್ದ. ಪ್ರಾಕ್ಟಿಸಿಗೆ ಬಾ ಅಂತ ಹೇಳಿದ್ರೆ ಬೇಟೆ ಆಡಿದ ಹಂದಿ ಜತೆಗೆ ಗ್ರೌಂಡಿಗೆ ಹೋಗಿದ್ದ.

ಇಂಥ ಹತ್ತು ಹಲವು ವೈಚಿತ್ರ್ಯಗಳ ಸಂಗಮವಾಗಿದ್ದ ಬ್ಯಾಡ್‌ಬಾಯ್ ಮತ್ತು ‘ಬ್ಯಾಡ್ ಬಾಯಿ’ ಇಮೇಜಿನ ಸೈಮಂಡ್ಸ್ ಬದುಕಿದ್ದಿದ್ದರೆ ಈಗಿನ್ನೂ ಐವತ್ತರ ಹರೆಯದಲ್ಲಿರುತ್ತಿದ್ದ. ಯಾವುದಾದರೂ ಐಪಿಎಲ್ ಟೀಮಲ್ಲಿ ಕೋಚ್, ಮೆಂಟರ್ ಏನೋ ಒಂದು ಆಗಿರುತ್ತಿದ್ದ. ಆದರೆ ಅದೇನು ಅರ್ಜೆಂಟಿತ್ತೋ, ಕಾರ್ ಅಪಘಾತ ಮಾಡಿಕೊಂಡು ಇಹಲೋಕ ತ್ಯಜಿಸಿಬಿಟ್ಟ.

ಆಸ್ಟ್ರೇಲಿಯಾ ಆಗಷ್ಟೇ ಶೇನ್ ವಾರ್ನ್ ಎಂಬ ಸ್ಪಿನ್ ದಂತಕಥೆಯನ್ನು ಕಳೆದುಕೊಂಡಿತ್ತು. ತನ್ನಷ್ಟೇ ವಿಕ್ಷಿಪ್ತ ವ್ಯಕ್ತಿತ್ಬದ ಶೇನ್ ವಾರ್ನ್‌ನನ್ನು ಹಿಂಬಾಲಿಸಿ ಹೊರಟುಬಿಟ್ಟ ಸೈಮಂಡ್ಸ್. ಜನ್ಮದಿನ ಸಾವಿನ ದಿನದ ಹೊರತಾಗಿಯೂ ತನ್ನ ಆಟ ಮತ್ತು ಹಾರಾಟಗಳ ಕಥೆಗಳಿಂದ ಕ್ರಿಕೆಟ್ ಪ್ರೇಮಿಗಳಿಗೆ ಪದೇಪದೆ ಸೈಮಂಡ್ಸ್ ನೆನಪಾಗುತ್ತಲೇ ಇರುತ್ತಾನೆ.