Naveen Sagar Column: ಕೆನ್ನೆಗಲ್ಲದೇ ಬೇರೆಡೆ ಹೊಡೆದಾಗ ಏನು ಮಾಡ್ಬೇಕು ಮಿಸ್ಟರ್ ಗಾಂಧಿ ?
ಅತ್ತ ಭಾರತದ ಸೇನೆ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಆಪರೇಷನ್ ಸಿಂದೂರ ಎಂಬ ಘೋಷ ಮೊಳಗಿಸ್ತಾ ಇದ್ರೆ... ಇತ್ತ ಕರ್ನಾಟಕ ಕಾಂಗ್ರೆಸ್ ಗಾಂಧಿಯ ಫೋಟೋ ಮೇಲೆ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು ಬರೆದು ಪೋಸ್ಟ್ ಮಾಡಿತ್ತು. ಆಗ ನೆನಪಾಗಿದ್ದು ಮುನ್ನಾ ಭಾಯ್ ಚಿತ್ರದ ಆ ದೃಶ್ಯ. ಬಲಗೆನ್ನೆಗೆ ಹೊಡೆದರೆ ಎಡಗೆನ್ನೆ ತೋರಿಸು ಅಂದ ಗಾಂಧಿ, ಎರಡೂ ಕೆನ್ನೆಗೆ ಹೊಡೆದಾಗ ಏನು ಮಾಡಬೇಕು ಅಂತ ಹೇಳೋದನ್ನ ಮರೆತಿದ್ರು


ಪದಸಾಗರ
ಲಗೇ ರಹೋ ಮುನ್ನಾಭಾಯ್ ಸಿನಿಮಾದಲ್ಲಿ ಒಂದು ದೃಶ್ಯವಿತ್ತು. ಗಾಂಧಿವಾದದ ಗುಂಗಲ್ಲಿ ಭ್ರಮಣೆಗೆ ಒಳಗಾದ ಮುನ್ನಾಭಾಯ್ ಮೇಲೆ ಖಳನಾಯಕ ಎಗರಿ ಬಂದು ಕೆನ್ನೆಗೆ ಬಾರಿಸ್ತಾನೆ. ಮುನ್ನಾಭಾಯ್‌ಗೆ ಗಾಂಧಿ ಹೇಳಿದ್ದು ನೆನಪಾಗುತ್ತೆ. ಯಾರಾದ್ರೂ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಅಂತ..! ಬಹಳ ವಿನಮ್ರತೆಯಿಂದ ಇನ್ನೊಂದು ಕೆನ್ನೆ ಮುಂದಿಡು ತ್ತಾನೆ. ಇನ್ನೊಂದು ಕೆನ್ನೆ ತೋರಿಸಿದಾಕ್ಷಣ ಹೊಡೆಯದೇ ಇರೋದಕ್ಕೆ ಅವನೇನು ಗಾಂಧಿಯ ಅನುಯಾಯಿಯಾ? ರಪ್ಪನೆ ಇನ್ನೊಂದು ಕೆನ್ನೆಗೆ ಇನ್ನೂ ಬಲವಾಗಿಯೇ ಕಪಾಳಮೋಕ್ಷ ಮಾಡ್ತಾನೆ. ಆಗ ಮುನ್ನಾಭಾಯಿಗೆ ಅಸಲಿ ಗೊಂದಲ ಶುರು ಆಗತ್ತೆ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಅಂತ ಬಾಪು ಹೇಳಿದ್ರು. ಆದರೆ ಎರಡೂ ಕೆನ್ನೆಗೆ ಹೊಡೆದಾಗ ಏನು ಮಾಡಬೇಕು ಅಂತ ಹೇಳಲೇ ಇಲ್ವಲ್ಲ..!!
ಆಗ ತನಗೆ ಮೆಟ್ಕೊಂಡಿದ್ದ ಗಾಂಧಿಭೂತಕ್ಕೆ ಕೆಲ ನಿಮಿಷ ಗುಡ್ ಬೈ ಹೇಳೋ ಮುನ್ನಾಭಾಯ್ ವಿಲನ್‌ಗಳ ಗ್ರಹಚಾರ ಬಿಡಿಸ್ತಾನೆ. ಅತ್ತ ಭಾರತದ ಸೇನೆ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಆಪರೇಷನ್ ಸಿಂದೂರ ಎಂಬ ಘೋಷ ಮೊಳಗಿಸ್ತಾ ಇದ್ರೆ... ಇತ್ತ ಕರ್ನಾಟಕ ಕಾಂಗ್ರೆಸ್ ಗಾಂಧಿಯ ಫೋಟೋ ಮೇಲೆ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು ಬರೆದು ಪೋಸ್ಟ್ ಮಾಡಿತ್ತು. ಆಗ ನೆನಪಾಗಿದ್ದು ಮುನ್ನಾಭಾಯ್ ಚಿತ್ರದ ಆ ದೃಶ್ಯ. ಬಲಗೆನ್ನೆಗೆ ಹೊಡೆದರೆ ಎಡಗೆನ್ನೆ ತೋರಿಸು ಅಂದ ಗಾಂಧಿ, ಎರಡೂ ಕೆನ್ನೆಗೆ ಹೊಡೆದಾಗ ಏನು ಮಾಡಬೇಕು ಅಂತ ಹೇಳೋದನ್ನ ಮರೆತಿದ್ರು. ಬಿಡಿ, ಹೊಡೆಯೋವ್ರು ಯಾವಾಗ್ಲೂ ಕೆನ್ನೆಗೇ ಹೊಡೀತಾರಾ? ಪಾಕಿಸ್ತಾನದಂಥ ಹೇಡಿರಾಷ್ಟ್ರಕ್ಕೆ ಎದುರು ನಿಂತು ಹೊಡೆಯೋ ತಾಕತ್ತು ಧೈರ್ಯ ಇದೆಯಾ? ಅವರು ಹೊಡೆಯೋಕೆ ಪ್ರಯತ್ನಿಸೋದು ಯಾವ ಜಾಗಕ್ಕೆ ಅಂತ ಬಿಡಿಸಿ ಹೇಳಬೇಕಾ? ಕೆನ್ನೆ ಬದಲು ಬೆನ್ನಿಗೋ ಪೃಷ್ಠಕ್ಕೋ ಹೊಡೆಯೋ ನೀಚ ರಣಹೇಡಿಗಳನ್ನು ಎದುರಿಸೋದು ಹೇಗೆ ಅಂತ ಗಾಂಧಿ ಹೇಳಿಕೊಡ ಬೇಕಿತ್ತಲ್ವಾ? ಅಲ್ಲಿ ಒಂದಕ್ಕೆ ಹೊಡೆದರೆ ಇನ್ನೊಂದು ತೋರಿಸೋ ಚಾನ್ಸೇ ಇಲ್ಲವಲ್ಲ..!
ಆಗೇನು ಮಾಡಬೇಕಿತ್ತು? ಗಾಂಧಿ ಏನೂ ಹೇಳಿಲ್ಲ ಅಂತ ಅವರ ನಕಲೀ ಶಿಷ್ಯವೃಂದದ ಮಾತು ಕೇಳಬೇಕಿತ್ತಾ? ‘ಮೈ ಎಕ್ಸ್ ಪರಿಮೆಂಟ್ಸ್ ವಿಥ್ ಸ್ಲಾಪ್ಸ್’ ಅಂತ ಗಾಂಧಿ ಈ ಕಪಾಳಮೋಕ್ಷ ಪ್ರಯೋಗ ವನ್ನು ಖುದ್ದು ಅನುಭವಿಸಿದ್ದಿದ್ದರೆ ಬಹುಶಃ ಈ ಬಿಟ್ಟಿ ಉಪದೇಶ ಕೊಡ್ತಾ ಇರಲಿಲ್ಲ. ಶಾಂತಿ ಪಾಲಿಸೋದಕ್ಕೆ ಒಂದು ದೇಶ, ಭಯೋತ್ಪಾದನೆಗೆ ಒಂದು ದೇಶ ಅಂತ ಈ ರೀತಿ ವಿಭಜನೆ ಕೂಡ ಮಾಡ್ತಾ ಇರಲಿಲ್ಲ.
ಹಿಂದೂಗಳು ಯಾವತ್ತಿಗೂ ಎಂಥ ಸಂದರ್ಭದಲ್ಲೂ ತಮ್ಮ ಹೃದಯದಲ್ಲಿ ಮುಸಲ್ಮಾನರ ವಿರುದ್ಧ ಕೋಪ ಇಟ್ಟುಕೊಳ್ಳಬಾರದು. ಮುಸಲ್ಮಾನರು ನಿಮ್ಮನ್ನು ಸರ್ವನಾಶ ಮಾಡಲು ಬಂದರೂ ಸಂಯಮದಿಂದಲೇ ಇರಬೇಕು. ಮುಸಲ್ಮಾನರು ಹಿಂದೂಗಳನ್ನು ಕೊಲ್ಲಲು ಬಂದರೆ ಧೈರ್ಯದಿಂದ ಸಾವನ್ನು ಎದುರಿಸಬೇಕೇ ಹೊರತು ತಿರುಗಿ ಕೊಲ್ಲಲು ಹೋಗಬಾರದು.
ಸಾವಿಗೆಂದೂ ಹೆದರಬಾರದು. ಮನುಷ್ಯನಾಗಿ ಹುಟ್ಟಿದ ಮೇಲೆ ಹುಟ್ಟು-ಸಾವು ಅನಿವಾರ್ಯ... ಹೀಗೆ ಪ್ರವಚನ ನೀಡಿದ ಗಾಂಽಯೇ ಅಲ್ಲವಾ ಪರೋಕ್ಷವಾಗಿ ಪಾಕಿಸ್ತಾನದ ಭಯೋತ್ಪಾದನಾ ಮನಸ್ಥಿತಿ ಯ ಸೃಷ್ಟಿಕರ್ತರು? ಕೊಲ್ಲುವ ವರ್ಗ ಮತ್ತು ಸಾಯುವ ವರ್ಗ ಸೃಷ್ಟಿಸಿದ್ದೇ ಈ ಗಾಂಧಿವಾದ ಅಲ್ಲವಾ? ಸ್ವಾತಂತ್ರ್ಯಪೂರ್ವಕಾಲದಿಂದ ಬ್ರಿಟಿಷರಿಗೆ ಲವ್ ಲೆಟರ್ ಬರೆಯುತ್ತಾ, ಮುಸಲ್ಮಾನರನ್ನು ಓಲೈಸುತ್ತಾ ಬಂದ ಗಾಂಧೀಜಿ, ಗೋಡ್ಸೆಯ ಗುಂಡೇಟು ಬೀಳುವ ತನಕ ಎಂದಿಗೂ ಸಾವನ್ನು ಹತ್ತಿರ ದಿಂದ ನೋಡಲಿಲ್ಲ. ಬಲಿದಾನ ಮಾಡಿದವರ‍್ಯಾರೋ, ಸತ್ಯಾಗ್ರಹ ಉಪವಾಸ ಮಾಡಿ ಸ್ವಾತಂತ್ರ್ಯ ತಂದುಕೊಟ್ಟೆ ಎಂದು ಕ್ರೆಡಿಟ್ ತಗೊಂಡವರ‍್ಯಾರೋ..!
ಅಂದಿನಿಂದ ಇಂದಿನ ತನಕ ಕಾಂಗ್ರೆಸ್ ಮನಸ್ಥಿತಿ ಬದಲಾಗಲೇ ಇಲ್ಲ. ಹಿಂದೂಗಳೇ ಇಲ್ಲಿ ಶಾಂತಿ ಯಿಂದ ಇರಬೇಕು. ಕೊಂದರೂ ತಿರುಗಿಬೀಳಬಾರದು. ಮುಸಲ್ಮಾನರು ಉಗ್ರವಾದ ಮಾಡಿದರೂ ಸರಿ, ಅವರನ್ನು ಕೂರಿಸಿ ಪಾಠ ಹೇಳಿ ಮನಪರಿವರ್ತನೆ ಮಾಡಬೇಕು. ಇದು ಕಾಂಗ್ರೆಸ್ ಗಾಂಧಿವಾದ. ಪ್ರಾದೇಶಿಕತೆ ಬಂದಾಗ ಕನ್ನಡಕ್ಕೋಸ್ಕರ ರಕ್ತ ಹರಿಸೋಕೆ ಸಿದ್ಧರಾಗಿ ಹಿಂದಿ ಭಾಷಿಕರನ್ನು ಕೊಂದು ಮುಗಿಸುವಂತೆ ಮುಗಿಬೀಳುವ ಇವರಿಗೆ ದೇಶದ ಧರ್ಮದ ವಿಚಾರ ಬಂದಾಗ ವಿಶ್ವಮಾನವ ತತ್ವದ ಪಾಲಕರಾಗಿ ಬಿಡುತ್ತಾರೆ.
ಅಹಿಂಸೆ, ಹೃದಯ ವೈಶಾಲ್ಯ, ಯುದ್ಧದಿಂದ ಆಗುವ ಅಡ್ಡಪರಿಣಾಮ, ನೆರೆಹೊರೆಯವರು ನಮ್ಮವರು ಎಂಬ ಸೌಹಾರ್ದಭಾವ ಉಕ್ಕಿ ಹರಿಯತೊಡಗುತ್ತದೆ. ಕೇವಲ ಒಂದು ವಾರದ ಹಿಂದೆ ಕನ್ನಡಕ್ಕಾಗಿ ಕೈಯಲ್ಲಿ ಮಚ್ಚು ಹಿಡಿದವರು, ಇವತ್ತು ಯುದ್ಧದ ಹೊಸ್ತಿಲಲ್ಲಿ ದೇಶ ನಿಂತಿರುವಾಗ ಗುಲಾಬಿ ಹಿಡಿದು ಶಾಂತಿಮಂತ್ರ ಜಪಿಸ್ತಾ ಇದ್ದಾರೆ.
ಇವರನ್ನು ಲಾಜಿಕ್‌ಲೆಸ್ ಜನಗಳು ಅನ್ನಬೇಕೋ, ಹಿಪೋಕ್ರೈಟ್ಸ್ ಅನ್ನಬೇಕೋ, ಕೇವಲ ತಮ್ಮ ಮೂಗಿನ ನೇರಕ್ಕಷ್ಟೇ ಬದುಕುವವರು ಅನ್ನಬೇಕೋ ಗೊತ್ತಿಲ್ಲ. ಒಂದು ಮಾತು ಹೇಳ್ತೀನಿ. ಇಲ್ಲಿ ಯುದ್ಧ ಯಾರಿಗೂ ಬೇಕಿಲ್ಲ. ಖುದ್ದು ಮೋದಿಗೂ ಬೇಕಾಗಿಲ್ಲ. ಒಂದು ಕೋವಿಡ್ ನಿಂದ ದೇಶಕ್ಕಾದ ಹಿನ್ನಡೆ ಕಣ್ಮುಂದೆ ಇದೆ. ಜಾಗತಿಕವಾಗಿ ಆರ್ಥಿಕ ಹಿಂಜರಿತ ಕಾಣುತ್ತಿರುವಾಗ, ಯುದ್ಧವಾದರೆ ಏನೆಲ್ಲ ಅಡ್ಡಪರಿಣಾಮವಾಗುತ್ತೆ ಅನ್ನೋದು ಮೋದಿಗೆ ಗೊತ್ತಿಲ್ಲದ ವಿಷಯವೇನಲ್ಲ.
ಯುದ್ಧ ಮಾಡಿ ಜನರನ್ನು ಮರುಳು ಮಾಡಿ ಮತ್ತೆ ಪ್ರಧಾನಿಯಾಗೋಕೆ, ಮುಂದಿನ ತಿಂಗಳು ಲೋಕ ಸಭಾ ಚುನಾವಣೆಯೇನೂ ಇಲ್ಲ. ಹೀಗಿದ್ದೂ ಭಾರತ ಇಂದು ಕೆರಳಿ ನಿಂತಿರೋದ್ಯಾಕೆ? ಪಾಕಿಸ್ತಾನಕ್ಕೆ ಪಾಠ ಕಲಿಸಲು ನಿರ್ಧರಿಸಿರೋದ್ಯಾಕೆ? ಉಗ್ರವಾದದ ದಮನಕ್ಕೆ ಟೊಂಕ ಕಟ್ಟಿರೋದ್ಯಾಕೆ? ಒಂದು ಕಾರ್ಗಿಲ್ ಯುದ್ಧದ ನಂತರ ಮತ್ತೊಮ್ಮೆ ಭಾರತ ನರಸಿಂಹಾವತಾರ ತಾಳೋದಕ್ಕೆ ಕಾರಣ ಏನು? ಇದು ಕೇವಲ ಪಾಕಿಸ್ತಾನಕ್ಕೆ ಅಥವಾ ಉಗ್ರರಿಗೆ ಪಾಠ ಕಲಿಸಲು ಹೊರಟಿದ್ದಲ್ಲ. ದೇಶದೊಳಗಿನ ಆಂತರಿಕ ಭಯೋತ್ಪಾದಕರಿಗೆ, ದೇಶವಿರೋಧಿಗಳಿಗೆ ಸಮರ್ಥ ಉತ್ತರ ಕೊಡಲು ಸೃಷ್ಟಿಸಿಕೊಂಡ ವೇದಿಕೆ.
ಪಹಲ್ಗಾಮ್ ಘಟನೆಗೂ ಮುನ್ನ ಭಾರತವನ್ನು ಪಾಕ್ ಎಷ್ಟು ಬಾರಿ ಕೆಣಕಿತು ಅಂತ ಒಮ್ಮೆ ಯೋಚಿಸಿ. ಪ್ರತಿ ಬಾರಿಯೂ ಭಾರತ ಕೇವಲ ಕ್ರಿಯೆಗೆ ತಕ್ಕಷ್ಟು ಪ್ರತಿಕ್ರಿಯೆ ಕೊಟ್ಟಿತು. ದೇಶದ ಒಳಗಿನ ವಿರೋಧಿಗಳು ಪ್ರತಿ ಬಾರಿ ಮೋದಿಯನ್ನು ಟಾರ್ಗೆಟ್ ಮಾಡಿದರೇ ಹೊರತು, ಮೋದಿ ಯನ್ನು ಅನುಮಾನಿಸಿದರೇ ಹೊರತು, ಉಗ್ರರನ್ನು ಮನಸಾರೆ ಖಂಡಿಸಲೇ ಇಲ್ಲ.
ದೇಶದಲ್ಲಿ ಉಗ್ರಕೃತ್ಯಗಳು ನಡೆಯಬೇಕು, ಮೋದಿ ಆಳ್ವಿಕೆಯಲ್ಲಿ ದೇಶ ಸೊರಗಬೇಕು, ಅದು ರಾಜಕೀಯ ಅಸ್ತ್ರವಾಗಬೇಕು ಅಂತಲೇ ಬಯಸಿದರು. ಪುಲ್ವಾಮಾ ದಾಳಿಗೆ ಬಾಲಾಕೋಟ್ ಸ್ಟ್ರೈಕ್ ಮೂಲಕ ಉತ್ತರ ಕೊಟ್ಟರೆ ಸಾಕ್ಷ್ಯ ಕೇಳಿದ್ರು. ಪಹಲ್ಗಾಮ್ ದಾಳಿಯಾದಾಗ, ಮೋದಿಗೆ ಯುದ್ಧ ಮಾಡೋಕೆ ದಮ್ ಇಲ್ವಾ ಅಂತ ಕಿಚಾಯಿಸಿದವರು, ಈಗ ಯುದ್ಧ ಉತ್ತರ ಅಲ್ಲ ಅಂತ ಶಾಂತಿ ಕವನ ಬರೀತಿದಾರೆ.
ಪಹಲ್ಗಾಮ್‌ನಲ್ಲಿ ಸತ್ತ ಅಮಾಯಕರ ಜೀವದ ಬಗ್ಗೆ ಕಿಂಚಿತ್ತಾದರೂ ಇವರಿಗೆ ಬೇಸರ ಇದ್ದಿದ್ದರೆ ಉಗ್ರವಾದವನ್ನು ಮಟ್ಟ ಹಾಕಿ ಎಂದು ಮೋದಿಗೆ ಒಕ್ಕೊರಲ ಬೆಂಬಲ ನೀಡ್ತಾ ಇದ್ರು. ರಾಜಕೀಯೇ ತರವಾಗಿ ಬೆನ್ನಿಗೆ ನಿಲ್ತಾ ಇದ್ರು. ಇಷ್ಟಕ್ಕೂ ಕೇಂದ್ರ ಸರಕಾರ ಮತ್ತು ನಮ್ಮ ಸೇನೆ ಯುದ್ಧ ಶುರು ಮಾಡಿಯೇ ಇಲ್ಲವಲ್ಲ.
ಉಗ್ರರ ನೆಲೆಯನ್ನು, ನಮ್ಮ ದೇಶದ ಹೆಣ್ಮಕ್ಕಳ ಸಿಂದೂರ ಅಳಿಸಿದವರನ್ನು ಧ್ವಂಸ ಮಾಡಲು ಆಪರೇಷನ್ ಸಿಂದೂರ ಲಾಂಚ್ ಮಾಡಿತಷ್ಟೇ. ಅದಕ್ಕೆ ಪಾಕ್ ಯಾಕೆ ವಿಲವಿಲ ಒದ್ದಾಡಬೇಕಿತ್ತು? ಪಾಕಿಸ್ತಾನ ಕೂಡ ಉಗ್ರವಾದದ ವಿರುದ್ಧ ಹೋರಾಡ್ತಾ ಇರೋ ದೇಶವಾಗಿದ್ರೆ ನಮ್ಮನ್ನು ಬೆಂಬಲಿಸ ಬೇಕಿತ್ತು.. ಆದರೆ ಅದು ಪ್ರತಿದಾಳಿ ಮಾಡಿದ್ಯಾಕೆ? ಪೂಂಚ್‌ಗೆ ಬಂದು ಮತ್ತೆ ಅಮಾಯಕರ ಹತ್ಯೆ ಮಾಡಿದ್ಯಾಕೆ? ಇದ್ಯಾವುದೂ ನಮ್ಮ ದೇಶದಲ್ಲಿರೋ ಶಾಂತಿಪ್ರಿಯರಿಗೆ ಕಾಣಿಸೋದಿಲ್ವಾ? ದೇಶಾಭಿ ಮಾನವೇ ಇಲ್ವಾ ಇವ್ರಿಗೆ? ಇವರು ಬಯಸುತ್ತಾ ಇರೋ ಶಾಂತಿಯ ಸ್ಥಾಪನೆಗೆ ಕ್ರಾಂತಿ ಅನಿವಾರ್ಯ.
ಯುದ್ಧ ಅನಿವಾರ್ಯ ಅನ್ನೋ ಸರಳ ಸತ್ಯ ಇವರಿಗೆ ಅರ್ಥ ಆಗೋದಿಲ್ವಾ? ದೇಶಕ್ಕೆ ದೇಶ ಒಂದು ಗೂಡಬೇಕಾದ ಪರಿಸ್ಥಿತಿ ಇದ್ದಾಗ್ಲೂ ರಾಜಕೀಯದ ಭೂತಗನ್ನಡಿ ಇಟ್ಟು ನೋಡೋ ಮನಸ್ಥಿತಿಗೆ ಯಾವ ಮದ್ದು ಕೊಡೋದು? ವಾಜಪೇಯಿಯವರ ಮಾತು ಮತ್ತೆ ಮತ್ತೆ ನೆನಪಾಗುತ್ತೆ. ಸರ್ಕಾರ್ ಆಯೇಗಿ, ಸರ್ಕಾರ್ ಜಾಯೇಗಿ, ಪಾರ್ಟಿಯಾ ಬನೇಗಿ, ಬಿಗಡೇಗಿ, ಮಗರ್ ಏ ದೇಶ್ ರೆಹ್ನಾ ಚಾಹಿಯೇ..! ಸರಕಾರ, ಪಕ್ಷ ಇವ್ಯಾವುದೂ ಶಾಶ್ವತ ಅಲ್ಲ. ಆದರೆ ದೇಶ ಉಳೀಬೇಕು. ಮೋದಿ ಕೂಡ ಪದೇಪದೆ ಹೇಳಿದ್ದು ಇದೇ ಧಾಟಿಯ ಮಾತು. ನನ್ನ ಮಾತು ಕೇಳಬೇಡ್ರೋ.. ನನಗೆ ಗೌರವ ಕೊಡದೇ ಹೋದ್ರೆ ಬೇಡ.. ಕನಿಷ್ಠ ಪಕ್ಷ, ಈ ದೇಶ ಕಾಯೋ ಸೈನಿಕರಿಗೆ ಗೌರವ ಕೊಡ್ರಿ.
ನಿಮಗೋಸ್ಕರ, ನಿಮ್ಮ ನೆಮ್ಮದಿಯ ನಿದ್ರೆಗೋಸ್ಕರ ನಿದ್ರೆಗೆಟ್ಟು ಪ್ರಾಣದಾಸೆ ಬಿಟ್ಟು ಹೋರಾಡ್ತಾ ಇರೋ ಸೈನಿಕರಿಗೆ ಮರ್ಯಾದೆ ಕೊಡ್ರಿ, ಅವರನ್ನು ನಂಬಿ ಅಂತ ಮೋದಿ ಅಂಗಲಾಚಿದ್ದೂ ಆಯ್ತು. ಅಂದು ಉಗ್ರರು ಅಮಾಯಕರ ಧರ್ಮ ನೋಡಿ ಹಣೆಗೆ ಗುಂಡಿಟ್ಟ ನಂತರ ಹೇಳಿದ್ದು ಮೋದಿಗೆ ಹೋಗಿ ಹೇಳು ಅಂತ. ಉಗ್ರರ ಥರಾನೇ ಈ ದೇಶದಲ್ಲಿರೋ ಮೋದಿ ವಿರೋಧಿಗಳು ಮುಗಿಬಿದ್ದದ್ದೂ ಮೋದಿಯ ಮೇಲೇನೇ.
ಹಾಗಾದರೆ ಈಗ ಮೋದಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ನಿಂತಿದ್ದು ತಪ್ಪಾ? ಸೇನೆಗೆ ಸಂಪೂರ್ಣ ಅಧಿಕಾರದ ಜತೆ, ಅತ್ಯುತ್ಕೃಷ್ಣ ಶಸ್ತ್ರದ ಬಲ ಕೊಟ್ಟ ಮೋದಿ ಬಗ್ಗೆ ಹೆಮ್ಮೆ ಇರಬೇಕಿತ್ತು, ಕಳೆದ ಹತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಗಳಿಸಿದ ವರ್ಚಸ್ಸು ಕಂಡು ಹೆಮ್ಮೆ ಪಡಬೇಕಿತ್ತು. ಭಾರತ ದುರ್ಬಲ ದೇಶವಾಗಿದ್ದಿದ್ರೆ, ಜತೆಗೆ ಪಾಖಂಡಿತನ ಹೊಂದಿದ್ದರೆ, ಈ ಹೊತ್ತಲ್ಲಿ ಅಮೆರಿಕ, ರಷ್ಯಾ, ಇಸ್ರೇಲ್‌ನಂಥ ಬಲಾಢ್ಯರು ನಮ್ಮ ಜತೆ ನಿಲ್ಲುತ್ತಿರಲಿಲ್ಲ.
ನಾವು ಸುದೃಢವಾಗಿಯೂ, ಶಕ್ತಿಶಾಲಿಯಾಗಿಯೂ ಇರೋದ್ರಿಂದ, ಅದ್ಭುತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರೋದ್ರಿಂದ ಇಂದು ಅವರೆಲ್ಲರ ಬೆಂಬಲ ಸಿಗ್ತಾ ಇದೆ. ಇದನ್ನು ಜಗತ್ತು ಅರ್ಥಮಾಡಿಕೊಂಡರೂ ದೇಶದೊಳಗಿನ ಅತೃಪ್ತರೇ ಅರ್ಥಮಾಡಿಕೊಳ್ಳುತ್ತಿಲ್ಲ. ಅರ್ಥವಾದರೂ ಅದನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಅದರ ಫಲವೇ ಈ ಗೊಣಗಾಟ ಗೋಳಾಟ.
ಅಳ್ತಾ ಇರೋವ್ರು ಅಳ್ತಾ ಇರಲಿ, ಬಳೆ ಒಡೆದುಕೊಳ್ಳೋವ್ರು ಬಳೆ ಒಡೆದುಕೊಳ್ತಲೇ ಇರಲಿ.. ರಾಜಕೀಯ ಮಾಡೋವ್ರು ರಾಜಕೀಯ ಮಾಡುತ್ತಲೇ ಇರಲಿ. ದೇಶ ಮೋದಿ ನಾಯಕತ್ವದಲ್ಲಿ ಇವೆಲ್ಲವನ್ನೂ ಮೆಟ್ಟಿ ನಿಲ್ಲುವಷ್ಟು ಸಮರ್ಥವಾಗಿದೆ. ಪೂರ್ಣಪ್ರಮಾಣದ ಯುದ್ಧವೇ ನಡೆದರೂ ದೇಶ ತಡೆದುಕೊಳ್ಳುವಷ್ಟು ಗಟ್ಟಿಯಾಗಿದೆ. ನಮ್ಮ ಸೈನಿಕರು ಹಿಂದೆಂದಿಗಿಂತಲೂ ಹೆಚ್ಚು ಆತ್ಮ ವಿಶ್ವಾಸದಿಂದ ಶತ್ರುಪಡೆಯನ್ನು ಎದುರಿಸುತ್ತಿದ್ದಾರೆ.
ಉಗ್ರವಾದದ ಆತಂಕವಿಲ್ಲದ, ಭಯೋತ್ಪಾದಕರ ಭಯವಿಲ್ಲದ ಭಾರತವೊಂದನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಕೆಲವು ವರ್ಷಗಳಲ್ಲಿ ಮೋದಿ ಪ್ರಧಾನಿ ಸ್ಥಾನದಲ್ಲಿರುವುದಿಲ್ಲ. ಇನ್ನೂ ಕೆಲವರ್ಷ ಕಳೆದರೆ ಮೋದಿ ದೈಹಿಕವಾಗಿಯೂ ಇಲ್ಲವಾಗುತ್ತಾರೆ. ಆದರೆ ಅವರು ಕಟ್ಟಿದ ಭಯರಹಿತ, ನೆಮ್ಮದಿ ಯ ಭಾರತದಲ್ಲಿ ಬದುಕುವುದು ನಮ್ಮ ನಿಮ್ಮ ಮುಂದಿನ ಪೀಳಿಗೆ. ಆ ಸ್ವಾರ್ಥಕ್ಕೋಸ್ಕರವಾದರೂ ದೇಶದ ಪರ ಕೈಜೋಡಿಸಬಹುದಲ್ವಾ? ಇವರಿಗೆ ಇದೆಲ್ಲ ಅರ್ಥ ಮಾಡಿಸೋದು ಹೇಗೆ? ಯಾರ ಮಾತು ಕೇಳುತ್ತಾರೆ? ಗಾಂಧಿಯೇ ಬರಬೇಕೇನೋ.
ನನ್ನ ತತ್ವಗಳು ಇಂಪ್ರಾಕ್ಟಿಕಲ್ ಆಗಿದ್ದವು, ನನ್ನ ಮೂಗಿನ ನೇರಕ್ಕಿದ್ದವು. ಅಂದಿಗಷ್ಟೇ ಸರಿ ಅನಿಸಿ ದ್ದವು. ದಯವಿಟ್ಟು ಕ್ಷಮಿಸಿ ಅಂತ ಗಾಂಧಿಯೇ ಬಂದು ಹೇಳಬೇಕೇನೋ!