ಪದಸಾಗರ
ಈ ಬಾರಿಯ ಚುಟುಕು ಕ್ರಿಕೆಟ್‌ನ ವಿಶ್ವಕಪ್ ಭಾರತವಲ್ಲದೆ ಇನ್ಯಾರೂ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಟೂರ್ನಿ ಶುರುವಾಗುವ ಮೊದಲೇ ಅನಿಸಿತ್ತು. ಏಕದಿನ ಸರಣಿ ಮತ್ತು ಟೆಸ್ಟ್ʼ ಗಳಲ್ಲಿ ಭಾರತವು ವೈಫಲ್ಯ ಕಂಡು ತವರಿನ ಮುಖಭಂಗ ಅನುಭವಿಸಿದ್ದು ನಿಜ. ಆದರೆ ಟಿ-ಟ್ವೆಂಟಿಯಲ್ಲಿ ಮಾತ್ರ ಭಾರತ ತಂಡದ ಖದರ್ರೇ ಬೇರೆಯಾಗಿ ಬಿಡುತ್ತಿತ್ತು.
ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿಕೊಂಡ ನಂತರದಲ್ಲಿ ನಮ್ಮ ಟಿ-ಟ್ವೆಂಟಿ ತಂಡದ ಸ್ವರೂಪವೇ ಬದಲಾಗಿ ಹೋಗಿತ್ತು. ಅಲ್ಲಿ ಒಬ್ಬೇ ಒಬ್ಬ ಆಟಗಾರನೂ ಟೆಸ್ಟ್ ಅಥವಾ ಐವತ್ತು ಓವರ್ ಪಂದ್ಯದ ಮನಸ್ಥಿತಿಯವನಿಲ್ಲ. ವೈಯಕ್ತಿಕ ದಾಖಲೆ ಬರೆಯುವ, ಶತಕ ಬಾರಿಸುವ ಆಲೋಚನೆ ಒಬ್ಬರಿಗೂ ಇಲ್ಲ. ಎಲ್ಲರದ್ದೂ ಒಂದೇ ಗುರಿ.
‘ಬಾ... ಬಂದು ಹತ್ತೋ ಹದಿನೈದು ಬಾಲ್ ಆಡಿ, ಮೂವತ್ತೋ ನಲವತ್ತೋ ಚಚ್ಚು.. ಹೋಗ್ತಾ ಇರು’. ಬ್ಯಾಟಿಂಗ್ ಲೈನಪ್ ಕೂಡ ಅದೇ ರೀತಿಯದ್ದು. ಯಾರೇ ಔಟಾದರೂ ಮುಂದೇನಪ್ಪಾ ಎಂಬ ಯೋಚನೆ ಇಲ್ಲ. ಸಚಿನ್ ಹೋದರೆ ಟಿವಿ ಆಫ್ ಮಾಡುತ್ತಿದ್ದ ಕಾಲ ಎಂದೋ ಮುಗಿದು ಹೋಗಿತ್ತು.
ಧೋನಿ ಇರುವ ತನಕ ಮ್ಯಾಚ್ ಇದೆ ಎಂಬ ಕಾಲವೂ ಸರಿದು ಹೋಗಿ ಆಗಿತ್ತು. ಕೊಹ್ಲಿಯ ಒನ್ ಮ್ಯಾನ್ ಶೋ ತಂಡವೂ ಇತಿಹಾಸ. ಈಗಿರುವ ಟಿ-ಟ್ವೆಂಟಿ ತಂಡದಲ್ಲಿ ಯಾರು ಸಿಡಿಯುತ್ತಾರೆ ಎಂಬುದು ಎದುರಾಳಿ ತಂಡಕ್ಕೆ ಸದಾ ಸಸ್ಪೆನ್ಸ್. ಎದುರಾಳಿಗಳು ಯಾರನ್ನೋ ಕಟ್ಟಿ ಹಾಕಲು ಸಿದ್ಧರಾಗಿರುತ್ತಾರೆ. ಆದರೆ ಔಟ್ ಆಫ್ ಸಿಲೆಬಸ್ ಎಂಬಂತೆ ಇನ್ಯಾರೋ ಬಂದು ಮಾರಣಹೋಮ ನಡೆಸಿ ಬಿಡುತ್ತಾರೆ.
ಇದನ್ನೂ ಓದಿ: Naveen Sagar Column: ರಾಜುಪತ್ರಿಕೆ ಎಂಬ ಸ್ನೇಹಿತನನ್ನು ನೆನಪಿಸಿದ ರಮಣ್ ಲಾಂಬಾ ಸಾವು !
ಸ್ಯಾಮ್ಸನ್ ಆಡದಿದ್ದರೆ ಅಭಿಷೇಕ್, ಅಭಿಷೇಕ್ ಆಡದಿದ್ದರೆ ಇಶಾನ್, ಮೂರೂ ವಿಕೆಟ್ ಬೇಗ ಬಿದ್ದರೆ ಸೂರ್ಯಕುಮಾರ್, ಇವ್ರೆಲ್ಲ ಅಗ್ಗದಲ್ಲಿ ವಿಕೆಟ್ ಒಪ್ಪಿಸಿದರೆ ದುಬೆ, ಇನ್ನೊಂದಿನ ತಿಲಕ್ ವರ್ಮ, ಮತ್ತೊಂದಿನ ವಾಷಿಂಗ್ಟನ್ ಸುಂದರ್! ಬೌಲರ್ ಅಂದು ಕೊಂಡರೆ ಬ್ಯಾಟಿಂಗಲ್ಲಿ ಅಬ್ಬರಿಸಿ ಬಿಡುವ ಅಕ್ಸರ್, ಸಿಕ್ಕಿರೋ ಅಲ್ಪಸ್ವಲ್ಪ ಬಾಲುಗಳ ಹಬ್ಬ ಮಾಡುವ ರಿಂಕೂ ಸಿಂಗ್, ‘ಆಟಿಟ್ಯೂಡ್ ಕಾ ಬಾಪ್’ ಎಂಬಂತೆ ಆಡುವ ಹಾರ್ದಿಕ್ ಪಾಂಡ್ಯ... ಹೀಗೆ ಯಾವತ್ತು ಯಾರು ಸ್ಟಾರ್ ಆಗುತ್ತಾರೆ ಅಂತ ಗೊತ್ತಾಗದಷ್ಟು ಶಕ್ತಿಶಾಲಿ ತಂಡವಾಗಿ ಈಗಿನ ಭಾರತ ಮಾರ್ಪಟ್ಟಿದೆ.
ಬೌಲಿಂಗಲ್ಲಾದರೂ ಅಷ್ಟೆ, ಬುಮ್ರಾನಂಥ ಯುಗಪುರುಷನ ಸುತ್ತ ಒಮ್ಮೆ ಅರ್ಶದೀಪ್ ಕ್ಲಿಕ್ ಆದರೆ, ಇನ್ನೊಮ್ಮೆ ಸಿರಾಜ್ ಗೆಲ್ಲಿಸುತ್ತಾನೆ. ಕುಲದೀಪ್ ತಂಡದೊಳಗೆ ಬಂದಾಗೆಲ್ಲ ವಿಕೆಟ್ ಕಿತ್ತುಕೊಟ್ಟೇ ಹೋಗುತ್ತಾನೆ. ಅಕ್ಸರ್, ಸುಂದ್ರ, ವರುಣ್ ಚಕ್ರವರ್ತಿ ಇವ್ರೆಲ್ಲ ಹಾಗೊಂದಿಷ್ಟು ರನ್ ಸೋರಿಕೆ ಮಾಡಿದ್ರೂ ಅಗತ್ಯ ಬಿದ್ದಾಗೆಲ್ಲ ವಿಕೆಟ್ ಕೀಳದೇ ಇರೋದಿಲ್ಲ.
ಲೆಕ್ಕಕ್ಕೇ ಇಟ್ಕೊಳ್ದೇ ಇರೋ ಶಿವಂ ದುಬೆ ಕೂಡ ಈ ತಂಡದ ಲಕ್ಕೀ ಚಾರ್ಮ್ ಎಂಬಂತೆ ಬ್ಯಾಟಿಂಗು, ಬೌಲಿಂಗು ಯಾವುದಾದರೊಂದರಲ್ಲಿ ಕೊಡುಗೆ ಕೊಟ್ಟುಬಿಡುತ್ತಾನೆ. ಇನ್ನು ಫೀಲ್ಡಿಂಗ್ ವಿಷಯಕ್ಕೆ ಬಂದ್ರೆ ಆ ರಿಂಕೂ ಸಿಂಗ್ ಒಬ್ಬನೇ ಮೂವತ್ತು ರನ್ ಉಳಿಸಿ ಕೊಟ್ಟಿರುತ್ತಾನೆ.
ಅಕ್ಸರ್ ಪಟೇಲ್, ಹಾರ್ದಿಕ್, ತಿಲಕ್ ವರ್ಮಾ, ಇಶಾನ್ ಒಬ್ಬೊಬ್ಬರೂ ಅರ್ಧ ಗ್ರೌಂಡ್ ಕಾಯಬಲ್ಲ ಫೀಲ್ಡರ್‌ಗಳು. ಕೈಯಲ್ಲಿ ಅದ್ಯಾವ ಮ್ಯಾಗ್ನೆಟ್ ಇದೆಯೋ, ಕಾಲಲ್ಲಿ ಅದ್ಯಾವ ಸ್ಪ್ರಿಂಗ್ ಇದೆಯೋ ಎಂಬಂತೆ ಅತಿಮಾನುಷ ಶಕ್ತಿ ಹೊಂದಿರುವವರ ಹಾಗೆ ಬಾಲ್ ಹಿಡಿಯುತ್ತಾರೆ.
ಹಿಂಜರಿಕೆ, ಆತಂಕ, ಅನುಮಾನ ಇಂಥ ಪದಗಳ ಪರಿಚಯವೇ ಇಲ್ಲ ಈ ತಂಡಕ್ಕೆ. ಇವರಲ್ಲದೆ ಇನ್ಯಾರು ಕಪ್ ಮೇಲೆ ಕೈ ಇರಿಸೋಕೆ ಸಾಧ್ಯ? ಆದರೂ ವಿನಾಕಾರಣ ಈ ತಂಡವನ್ನು ಅನುಮಾನಿಸುವ ಒಂದು ಬಳಗವಿತ್ತು. ಈ ತಂಡ ಸೋಲಲಿ ಎಂದು ಹಿಡಿಮಣ್ಣು ಹಿಡಿದುಕೊಂಡು ಕೂತವರೂ ಇದ್ದರು. ರಾಜಕೀಯ ಕಾರಣಗಳಿಗೆ ಸೋಲು ಬಯಸುತ್ತಿದ್ದ ವರ್ಗವೂ ಇಲ್ಲಿತ್ತು. ಗಂಭೀರ್ ಮೇಲಿನ ದ್ವೇಷಕ್ಕೆ, ಪ್ರಧಾನಿ ಮೋದಿ ಮೇಲಿನ ದ್ವೇಷಕ್ಕೆ ಈ ತಂಡ ಸೋಲಲೆಂದು ಹರಕೆ ಹೊತ್ತವರಿದ್ದರು.
ಹಿಸ್ಟರಿ ಭಾರತದ ಪರವಿರಲಿಲ್ಲ. ಟಿ-ಟ್ವೆಂಟಿ ಕಪ್ ಯಾರೂ ‘ಬ್ಯಾಕ್ ಟು ಬ್ಯಾಕ್’ ಗೆದ್ದಿರ ಲಿಲ್ಲ. ತವರಿನಲ್ಲಿ ಯಾರೂ ಕಪ್ ಎತ್ತಿರಲಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್ಮಲ್ಲಿ ಭಾರತ ಕಪ್ ಗೆದ್ದಿರೋ ಇತಿಹಾಸ ಇರಲಿಲ್ಲ. ನ್ಯೂಜಿಲೆಂಡ್ ಮೇಲೆ ಇಂಥ ‘ಮಾಡು ಇಲ್ಲವೇ ಮಡಿ’ ಪಂದ್ಯಗಳಲ್ಲಿ ಭಾರತ ಸದಾ ಮಡಿದಿತ್ತು.
ಇವೆಲ್ಲದರ ನಡುವೆಯೂ ಭಾರತವಲ್ಲದೆ ಇನ್ಯಾವ ಟೀಮ್ ಕೂಡ ಕಪ್ ಗೆಲ್ಲುವ ಫೇವರಿಟ್ಸ್ ಆಗಿ ಕಾಣಲೇ ಇಲ್ಲ. ಈ ಕಪ್ ನಾವು ಗೆಲ್ಲಲೇಬೇಕಿತ್ತು. ಹೌದು. ಇನ್ನಿಲ್ಲದ ದ್ವೇಷಕ್ಕೆ ತುತ್ತಾದ ಗಂಭೀರ್‌ಗಾಗಿ ಈ ಕಪ್ ಗೆಲ್ಲಲೇಬೇಕಿತ್ತು. ನಿಜಕ್ಕೂ ಅಷ್ಟು ದ್ವೇಷಿಸುವಂಥದ್ದು ಗಂಭೀರ್ ಏನು ಮಾಡಿದ್ದ? ಕೋಚ್ ಆದವನು ವಿಶ್ವಕಪ್ ಟೂರ್ನಿಗೆ ಪ್ರಯೋಗಕ್ಕೆ ಮುಂದಾಗಿದ್ದು ತಪ್ಪಾ? ಭಿನ್ನ ಟೀಮ್ ಕಾಂಬಿನೇಶನ್ ಮತ್ತು ಬ್ಯಾಟಿಂಗ್ ಆರ್ಡರ್ ಪ್ರಯೋಗ ಮಾಡಿದ್ದು ತಪ್ಪಾ? ಬೌಲರ್‌ಗಳನ್ನು ಬೇರೆ ಬೇರೆ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು ತಪ್ಪಾ? ಪ್ರತಿಭೆ ಇದ್ದೂ ವೈಫಲ್ಯ ಕಾಣುತ್ತಿರುವ ಆಟಗಾರರಿಗೆ ಮತ್ತೆ ಮತ್ತೆ ಅವಕಾಶ ಕಲ್ಪಿಸಿದ್ದು ತಪ್ಪಾ? ನೂರಾ ನಲವತ್ತು ಕೋಟಿ ಜನಸಂಖ್ಯೆಯಲ್ಲಿ ಲಕ್ಷಾಂತರ ಕ್ರಿಕೆಟ್ ಟ್ಯಾಲೆಂಟ್‌ಗಳ ಮಧ್ಯ ಹದಿನೈದೋ ಇಪ್ಪತ್ತೋ ಮಂದಿಯನ್ನು ಆಯ್ಕೆ ಮಾಡುವುದು, ಅವರಲ್ಲಿ ಹನ್ನೊಂದು ಮಂದಿಯನ್ನು ಆಡಿಸುವುದು ಸಣ್ಣ ಮಾತಾ? ಭಾರತ ಕ್ರಿಕೆಟ್ ತಂಡಕ್ಕೆ ನಾಯಕನಾಗುವ, ಕೋಚ್ ಆಗುವ, ಭಾರತದಂಥ ದೇಶಕ್ಕೆ ಪ್ರಧಾನಿಯಾಗುವ ಕಷ್ಟ ಬಲ್ಲವರೇ ಬಲ್ಲರು!
ಗಂಭೀರ್‌ನಷ್ಟು ದ್ವೇಷಕ್ಕೆ ಗುರಿಯಾದ ಕೋಚ್ ಇನ್ನೊಬ್ಬ ಇರಲಿಕ್ಕಿಲ್ಲ. ಸುಲಭಕ್ಕೆ ನಗು ಬಾರದ ಮುಖ, ಮೈದಾನದೊಳಗೆ ಕೊಂಚ ಜಗಳಗಂಟ ಸ್ವಭಾವದ ಗಂಭೀರ್ ಬಹುಶಃ ಐಪಿಎಲ್ ಸಮಯದಲ್ಲಿ ಕೊಹ್ಲಿಯೊಂದಿಗೆ ವಾಗ್ಯುದ್ಧ ನಡೆಸಿದ್ದೇ ಇಂದಿನ ತನಕದ ದ್ವೇಷಕ್ಕೆ ಕಾರಣವಿದ್ದರೂ ಇರಬಹುದು. ಅದರ ಹೊರತಾಗಿ ಅವನನ್ನು ದ್ವೇಷಿಸಲು ಮತ್ಯಾವ ಕಾರಣವೂ ಇಲ್ಲ.
ರೋಹಿತ್-ಕೊಹ್ಲಿ-ಜಡೇಜ ನಿವೃತ್ತಿ ನಂತರ ಹೊಸ ತಂಡ ಕಟ್ಟುವಲ್ಲಿ ಅವನ ಶ್ರಮ ದೊಡ್ಡದು. ಐಪಿಎಲ್ ಮನಸ್ಥಿತಿಯಿಂದ ಆಟಗಾರರನ್ನು ಹೊರತಂದು ಬೇರೆ ಮಾದರಿಯ ಕ್ರಿಕೆಟ್‌ಗೆ ಒಗ್ಗಿಸುವುದು, ಪ್ರತಿಯೊಬ್ಬನ ಐಪಿಎಲ್ ಸ್ಟಾರ್‌ಗಿರಿಯನ್ನು ನಿಭಾಯಿಸುತ್ತಾ ದೇಶಕ್ಕಾಗಿ ಆಡುವಂತೆ ಮಾಡುವುದು, ‘ಗೆಲುವಿಗೆ ನಾಯಕ ಕಾರಣ ಸೋಲಿಗೆ ಕೋಚ್ ಕಾರಣ’ ಎಂಬ ಜನಾಲೋಚನೆಯನ್ನು ಅರಗಿಸಿಕೊಂಡು ರಿಸಲ್ಟ್ ಕೊಡಲು ಒದ್ದಾಡುವುದು ಸಣ್ಣ ಮಾತಲ್ಲ.
ಈ ಕಪ್ ಗೆಲ್ಲದೇ ಹೋಗಿದ್ದರೆ ಮೊದಲ ತಲೆ ಉರುಳುತ್ತಿದುದೇ ಗಂಭೀರ್‌ನದ್ದು. ಸಂಜು ಸ್ಯಾಮ್ಸನ್ ‘ಸೂಪರ್-8’ರ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದಾಗ ಪಂದ್ಯವನ್ನು ಗೆಲ್ಲಿಸುವ ಜತೆಯ ತನ್ನ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದ. ಆದರೆ ಆ ನಂತರದ ಎರಡು ಭರ್ಜರಿ ಆಟದ ಮೂಲಕ ಆತ ಉಳಿಸಿದ್ದು ಗಂಭೀರ್ ತಲೆಯನ್ನು.
ಸಂಜು ಸ್ಯಾಮ್ಸನ್‌ನನ್ನು ಸರಿಯಾದ ಸಮಯಕ್ಕೆ ತಂಡದೊಳಕ್ಕೆ ತಂದಿದ್ದು, ಗಂಭೀರ್‌ನ ನಿರ್ಧಾರ. ಎಡಗೈ ಆಟಗಾರರೇ ಹೆಚ್ಚು ತುಂಬಿರುವ ಈ ತಂಡಕ್ಕೆ ಆರಂಭಿಕನಾಗಿ ಒಬ್ಬ ಬಲಗೈ ದಾಂಡಿಗ ಬೇಕಿತ್ತು. ಸಂಜು ಸ್ಯಾಮ್ಸನ್, ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಹುಡುಗ. ಸಹನೆಯೇ ಅವನ ಶಕ್ತಿ. ಸಂಜು ಸ್ಯಾಮ್ಸನ್ ಸದಾ ಒತ್ತಡದಲ್ಲೇ ಆಡಿದವ.
ತಂಡದಲ್ಲಿ ಆತನೇ ಒಂದು ಕಡೆ, ಇಡೀ ಟೀಮೇ ಒಂದು ಕಡೆ ಅನಿಸುವಂತಿರುತ್ತಿತ್ತು. ಆರಂಭಿಕ ಸ್ಥಾನಕ್ಕೆ ಭಾರತದಲ್ಲಿ ವಿಪರೀತ ಎಂಬಷ್ಟು ಸ್ಪರ್ಧೆ ಇರುವಾಗ ಸಂಜು ಸ್ಯಾಮ್ಸನ್ ವಿಫಲನಾಗುವಂತೆಯೇ ಇಲ್ಲ. ಈ ಒತ್ತಡವೇ ಅವನನ್ನು ಬೇಗ ಔಟಾಗುವಂತೆ ಮಾಡುತ್ತಿತ್ತು.
ಹೊರಗಿನವರಿಗೆ ಅನಿಸುತ್ತಿತ್ತು, ಇವನು ಎಷ್ಟು ಚಾನ್ಸ್ ಕೊಟ್ಟರೂ ಆಡೋದಿಲ್ಲ ಅಂತ. ಆದರೆ ಆತ ಪ್ರತಿ ಮ್ಯಾಚನ್ನೂ, ವಿಫಲನಾದರೆ ಇದು ತನ್ನ ಕೊನೆ ಮ್ಯಾಚ್ ಆಗುತ್ತದೇನೋ ಎಂಬ ಒತ್ತಡದಲ್ಲೇ ಆಡುತ್ತಿದ್ದ. ಆತನಿಗೆ ಬೆಂಗಾವಲಾಗಿ ನಿಂತಿದ್ದು ಗಂಭೀರ್. ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರನನ್ನು ವೈಫಲ್ಯದಿಂದ ಅಳೆಯಬಾರದೆಂದು ಗಂಭೀರ್ ಅರಿತಿದ್ದ.
ಸಂಜು ಸ್ಯಾಮ್ಸನ್ ವಿಶ್ವಕಪ್ ತಂಡದಲ್ಲಿರಬೇಕು ಎಂದು ನಿರ್ಧರಿಸಿದ್ದು ಗಂಭೀರ್. ಆದರೆ ಹಿಂದಿನ ಸರಣಿಗಳಲ್ಲಿ ಗುಡುಗಿದ್ದ ಅಭಿಷೇಕ್ ಮತ್ತು ಇಶಾನ್ ಕಿಶನ್‌ರ ಫಾರ್ಮ್ ಅನ್ನು ಕಡೆಗಣಿಸುವಂತಿರಲಿಲ್ಲ. ಹೀಗಾಗಿ ಲೀಗ್ ಹಂತದಲ್ಲಿ ಅವರ ಮೂಲಕ ಇನ್ನಿಂಗ್ಸ್ ಆರಂಭಿಸಲಾಗಿತ್ತು.
ಯಾವ ಆಟಗಾರನೂ ಒತ್ತಡದಲ್ಲಿ ಸಿಲುಕುವಂತೆ ಮಾಡಬಾರದೆಂದು ಎಲ್ಲರನ್ನೂ ಎಲ್ಲ ಕ್ರಮಾಂಕಗಳಲ್ಲಿ ಆಡಿಸಿ ಅಭ್ಯಾಸ ಮಾಡಿಸಲಾಗಿತ್ತು. ಅದೇ ಈ ಬಾರಿ ಕಪ್ ಗೆಲುವಿಗೆ ಕಾರಣವಾಯ್ತು. ಅಂದು ಗಂಭೀರ್ ಸುಖಾಸುಮ್ಮನೆ ಬ್ಯಾಟಿಂಗ್ ಆರ್ಡರ್ ಬದಲಿಸಿ ಎಲ್ಲರ ಆಟ ಹಾಳು ಮಾಡುತ್ತಿದ್ದಾನೆ, ತಂಡದಿಂದ ಹೊರಗೆ ಒಳಗೆ ಕಳಿಸಿ ಆಟಗಾರರ ಆತ್ಮವಿಶ್ವಾಸ ಕೊಲ್ಲುತ್ತಿದ್ದಾನೆ ಎಂದು ದೂಷಿಸಿದವರಿಗೆ ಈಗ ಅರ್ಥವಾಗಿರಬಹುದು.
ತಂಡದ ಮತ್ತು ದೇಶದ ಹಿತದೃಷ್ಟಿಯಿಂದ ಗಟ್ಟಿ ನಿರ್ಧಾರ ತೆಗೆದುಕೊಳ್ಳುವವರು, ಭವಿಷ್ಯದ ತಂಡ ಕಟ್ಟಲು ಕಟು ತೀರ್ಮಾನ ಮಾಡುವವರು ವಿಲನ್ ಆಗುವುದು ಸಹಜ. ಅಂದಿಗೆ ದ್ರಾವಿಡ್, ಸಚಿನ್, ಲಕ್ಷ್ಮಣ್, ಗಂಗೂಲಿ, ಕುಂಬ್ಳೆ ಮುಂತಾದವರನ್ನು ಹೊರಹಾಕಿದ ಎಂದು ಧೋನಿಯನ್ನು ದ್ವೇಷಿಸಲು ಶುರುಮಾಡಿದವರು ಇಂದಿಗೂ ದ್ವೇಷಿಸುತ್ತಲೇ ಇದ್ದಾರೆ. ಕೊಹ್ಲಿ, ರೋಹಿತ್ ನಿವೃತ್ತಿಗೆ ಗಂಭೀರ್‌ನೇ ಕಾರಣ ಎಂದು ಆತನನ್ನು ದ್ವೇಷಿಸುವ ಮಂದಿ ಅದಕ್ಕಾಗಿ, ಭಾರತ ಕಪ್ ಸೋತು ಗಂಭೀರ್ ತಲೆದಂಡವಾಗಲಿ ಎಂದು ಬಯಸಿದರು.
ನಾಯಕತ್ವದ ಅನುಭವ ಇಲ್ಲದಿದ್ದರೂ ಸೂರ್ಯಕುಮಾರ್ ನನ್ನು ಟಿ-ಟ್ವೆಂಟಿ ತಂಡಕ್ಕೆ ಕ್ಯಾಪ್ಟನ್ ಮಾಡಿದ್ದು ಗಂಭೀರ್. ಒಂದು ಯುವತಂಡವನ್ನು ನಗುನಗುತ್ತಾ, ಹುರಿದುಂಬಿ ಸುವ ಜತೆಯ ಆಕ್ರಮಣಕಾರಿ ಮನೋಭಾವ ತುಂಬುವ ನಾಯಕ ಬೇಕಿದ್ದಾಗ ಸೂರ್ಯ ನಿಗಿಂತ ಬೆಟರ್ ನಾಯಕ ಕಾಣಲಿಲ್ಲ. ಬೇರೆಯವರ ಆಟದಿಂದ ಭಾರತ ಗೆದ್ದಿತು,
ಇದರಲ್ಲಿ ಸೂರ್ಯಕುಮಾರ್ ಪಾತ್ರ ಏನೂ ಇಲ್ಲ ಎನ್ನುವವರು, ಸೂರ್ಯಕುಮಾರ್‌ಗೆ ಬ್ಯಾಟಿಂಗೇ ಬರೋದಿಲ್ಲ ಎನ್ನುವವರು ಒಮ್ಮೆ ಆತನ ಬ್ಯಾಟಿಂಗ್ ದಾಖಲೆಯನ್ನು ನೋಡಿ ಬರಬೇಕು. ಲೀಗ್ ಹಂತದಲ್ಲಿ ಆತ ಆಡಿದ ಆಟದಿಂದಲೇ ನಾಕೌಟ್ ಹಂತಕ್ಕೆ ಬರಲು ಸಾಧ್ಯವಾಗಿದ್ದು ಎಂಬುದನ್ನು ಗಮನಿಸಬೇಕು.
ಶಿವಂ ದುಬೆ ಎಂಬ ತಣ್ಣನೆಯ ಕಿಲ್ಲರ್ ಈ ತಂಡಕ್ಕೆ ಹೊರೆ ಎಂದೇ ಎಲ್ಲರೂ ಭಾವಿಸಿದ್ದು. ಆತನ ಮೇಲೆ ವಿಶ್ವಾಸ ಇರಿಸಿದ್ದು ಗೌತಮ್ ಗಂಭೀರ್. ಸ್ಪಿನ್ ಬೌಲಿಂಗನ್ನು ಪುಡಿಗಟ್ಟುವ, ವೇಗದ ಎಸೆತಗಳನ್ನು ಸ್ಟೇಡಿಯಮ್ಮಿನ ಆಚೆ ಹೊಡೆಯುವ ಶಕ್ತಿ ಇರುವ ಒಬ್ಬ ಆಟಗಾರ ನಿದ್ದರೆ ಆತ ದುಬೆ.
ಸ್ಲೋ ಪಿಚ್‌ಗಳಲ್ಲಿ ಆತನ ಮಧ್ಯಮ ವೇಗದ ಎಸೆತಗಳು ಬ್ಯಾಟರ್‌ಗಳನ್ನು ಹೇಗೆ ಯಾಮಾರಿಸುತ್ತವೆ, ಸಿಕ್ಸ್ ಹೊಡೆಯಲು ಕೆಣಕಿ ಕ್ಯಾಚ್ ಆಗುತ್ತವೆ ಎಂಬುದನ್ನು ಅರಿತಿದ್ದ ಗಂಭೀರ್ ಸಮಯ ನೋಡಿ ಬಳಸಲೆಂದೇ ದುಬೆಯನ್ನು ತಂಡದಲ್ಲಿ ಇರಿಸಿದ್ದ. ಗಂಭೀರ್‌ನ ಸ್ಟ್ರಾಟೆಜಿಗಳು, ಪ್ರಯೋಗಗಳು ಬಹಳ ಪರ್ಪೆಕ್ಟ್ ಆಗಿ ಕಾರ್ಯರೂಪಕ್ಕೆ ಬಂದದ್ದು ವಿಶ್ವಕಪ್‌ನಲ್ಲಿ. ಆತ ಅಲ್ಲಿಯವರೆಗೂ ಪ್ರಯೋಗ ಮಾಡಿದ್ದೇ ವಿಶ್ವಕಪ್‌ಗೋಸ್ಕರ.
ಕಪ್ ಗೆದ್ದ ಖುಷಿಯಲ್ಲಿ ನಾಳೆಯೇ ಆತ ರಾಜೀನಾಮೆ ಕೊಟ್ಟರೂ ಕೊಡಬಹುದು. ಆತ ಬಿಜೆಪಿ ಸಂಸದನಾಗಿದ್ದಾಗ ಹೀಗೆಯೇ ಒಂದು ಸಾರ್ಥಕ ಅವಧಿ ಮುಗಿಸಿ, ಗುಡ್ ಬೈ ಹೇಳಿದ್ದ. ಆದರೆ ಆತ ಯಾವತ್ತೂ ತಪ್ಪಾಗಿಯೇ ಅರ್ಥೈಸಲ್ಪಟ್ಟ. ಸೋಲಿಗೆ ಹೊಣೆಗಾರನಾದ ಗೆಲುವಿನ ಸಮಯದಲ್ಲಿ ಅನಾಥನಾದ.
ದ್ರಾವಿಡ್ ಎಂಬ ಯಶಸ್ವಿ ಕೋಚ್‌ನ ಸ್ಥಾನ ತುಂಬುವುದು ಸುಲಭದ ಕೆಲಸವಲ್ಲ. ಅತಿ ದೊಡ್ಡ ಸವಾಲು ಅದು. ಕೋಟ್ಯಂತರ ಮಂದಿಯ ದ್ವೇಷ-ಟೀಕೆಗಳನ್ನು ಮೆಟ್ಟಿನಿಂತು ಗೆಲುವಿಗೆ ಶ್ರಮಿಸಿ, ಯಾವ ಕ್ರೆಡಿಟ್ಟೂ ಸಿಗದೇ ತೆರೆಮರೆಗೆ ತಳ್ಳಲ್ಪಟ್ಟು ಇರುವುದು ಸುಲಭ ವಲ್ಲ.
ಭಾರತದ ಕೋಚ್ ಸ್ಥಾನ ಹೂವಿನ ಹಾಸಿಗೆ ಅಲ್ಲ. ನಮ್ಮ ಕಣ್ಣಿಗೆ ಕಾಣುವಂತೆ, ಅದು ಪೆವಿಲಿಯನ್‌ನಲ್ಲಿ ಕೂತು ಆಟ ನೋಡುವ ಹುದ್ದೆಯಲ್ಲ. ಕಪ್ ಗೆದ್ದ ಸಮಯದಲ್ಲಿ ಗಂಭೀರ್ ಸಾಗಿ ಬಂದ ಹಾದಿ ನೆನೆದು ಇದನ್ನ ಬರೆಯುವಂತಾಯ್ತು. ಕಂಗ್ರಾಟ್ಸ್ ಗಂಭೀರ್.