ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Harish Kera Column: ಕೆ ಪಾಪ್‌ ಖಳನಾಯಕ ಎನ್ನುವ ಮುನ್ನ...

ಕೆ ಪಾಪ್ ಹಾಗೂ ಕೆ ಗೇಮ್‌ಗಳು ನಮ್ಮ ಮುಂದಿನ ತಲೆಮಾರಿನ ಬಹುಭಾಗವನ್ನು ತೆಕ್ಕೆಗೆ ತೆಗೆದುಕೊಂಡಿರುವುದು ನಿಜ. ಅದಕ್ಕೆ ಅಂಕಿಅಂಶಗಳ ಆಧಾರ ಇದೆ. ಕೋವಿಡ್ ಲಾಕ್‌ ಡೌನ್ ಸಂದರ್ಭದಲ್ಲಿ ಕೊರಿಯಾ ನಮ್ಮ ಮನೆಗಳೊಳಗೆ ನೆಟ್‌ಫ್ಲಿಕ್ಸ್ ಮತ್ತಿತರ ಒಟಿಟಿಗಳ ಮೂಲಕ ಹೆಚ್ಚು ಹೆಚ್ಚು ನುಗ್ಗಿತು.

ಕಾಡುದಾರಿ

ಹದಿಹರೆಯದ ಮಕ್ಕಳು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕಾರಣ ಹುಡುಕುತ್ತಾ ಹೋದವರಿಗೆ ಸಿಕ್ಕಿರುವ ಹೊಸದೊಂದು ಕಾರಣ- ಕೆ ಪಾಪ್. ನಿದರ್ಶನಗಳಿವೆ. ಗಾಜಿಯಾಬಾದ್‌ನಲ್ಲಿ ಕೊರಿಯನ್ ಗೇಮ್ ಆಡುತ್ತಾ ಕಾಲ ಕಳೆದು, ಅದನ್ನು ಅಪ್ಪ ಕಸಿದುಕೊಂಡಾಗ ಹತಾಶರಾಗಿ ಕಟ್ಟಡದಿಂದ ಜಿಗಿದು ತೀರಿಕೊಂಡ ಮೂವರು ಸೋದರಿ ಯರು.

ಧಾರವಾಡದಲ್ಲಿ ಮೊನ್ನೆ ತಾನೆ ಕೊರಿಯನ್ ಗೇಮ್ ಗೀಳಿಗೆ ಬಲಿಯಾದ ಒಬ್ಬ ಯುವಕ. ಕೇರಳದಲ್ಲಿ ಆನ್‌ಲೈನ್ ಕೊರಿಯನ ಗೆಳೆಯನ ಸಾವಿನಿಂದ ನೊಂದು ಕಲ್ಲು ಕ್ವಾರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಪಬ್ಜಿ, ಬ್ಲೂವೇಲ್ ಗೇಮ್‌ಗಳ ಅಡಿಕ್ಷನ್ನಿಂದ ಸತ್ತವರು ಬಹಳ.

ಒಂದು ಲೆಕ್ಕದಂತೆ ನೂರಕ್ಕೂ ಹೆಚ್ಚು ಯುವಕರು ಇವುಗಳಿಗೆ ಜೀವ ಕೊಟ್ಟಿದ್ದಾರೆ. ಇದೇನು ನಮ್ಮ ಯುವಪೀಳಿಗೆಯ ಬಲಿ ತೆಗೆದುಕೊಳ್ಳಲೆಂದೇ ಸೃಷ್ಟಿಯಾಗಿದೆಯಾ ಕೊರಿಯನ್ ಪಾಪ್ ಮ್ಯೂಸಿಕ್ ಮತ್ತು ಗೇಮ್? ಹಾಗಂತ ಆಶ್ಚರ್ಯ ಮೂಡುವುದು, ಆತಂಕವಾಗು ವುದು ಸಹಜ.

ಟೀನೇಜರ್‌ಗಳು ಪಾಪ್ ಸಂಸ್ಕೃತಿಯ ವ್ಯಸನಕ್ಕೆ ತುತ್ತಾಗುವುದು ಸಹಜ. ಎಪ್ಪತ್ತರ ದಶಕ‌ ದಲ್ಲಿ ಹಿಪ್ಪಿ ಕಲ್ಚರ್ ಇತ್ತು. ಜನ ಭಯಭೀತರಾಗಿದ್ದರು. ಡ್ರಗ್ಸ್ ಬಳಕೆ ಯಥೇಚ್ಛವಾಗಿತ್ತು.

ಇದನ್ನೂ ಓದಿ: Harish Kera Column: ಶಿವರಾತ್ರಿ: ರುದ್ರವಿಲಾಸ ಮತ್ತು ಶಿವಕರುಣೆ

ಒಂದಿಷ್ಟು ಮಂದಿ ಅದಕ್ಕೆ ಬಲಿಯಾದರು, ಹೆಚ್ಚಿನವರು ಹರೆಯ ಕಳೆದಂತೆ ಅದರಿಂದ ಹೊರ ಬಂದರು. ನಂತರದ ತಲೆಮಾರುಗಳು ಆಯಾ ಕಾಲದ ಜನಪ್ರಿಯ ಕಲ್ಚರ್‌ಗಳಿಗೆ ತಮ್ಮನ್ನು ತೆತ್ತುಕೊಂಡವು. ಹದಿಹರೆಯ ತುಂಬ ಬೇಗನೆ ಬದಲಾಗುವ ಮೂಡ್‌ಗಳನ್ನು ಪೋಷಿಸುವ, ಕನಸುಗಳನ್ನು ಕಟ್ಟುವ, ಕನಸಿನಂಥ ಲೈಫ್‌ʼಸ್ಟೈಲ್‌ಗಳನ್ನು ಬಯಸುತ್ತದೆ.

ಆ ಕಾಲದಲ್ಲಿ ನಾವು ಅವರ ಜೊತೆಗಿರಬೇಕು. ನಮ್ಮ ಪೇರೆಂಟಿಂಗ್ ವೈಫಲ್ಯಗಳಿಗೆ ಕೊರಿಯನ್ ಕಲ್ಚರ್ ಪ್ರಭಾವವನ್ನು ಬೆಟ್ಟು ಮಾಡುತ್ತಿದ್ದೇವೆ ಎಂದು ಪ್ರೊಫೆಸರ್ ಒಬ್ಬರು ಹೇಳಿದರು. ಅವರ ಮಗಳು ಕೊರಿಯನ್ ಸಂಗೀತದ ಅಭಿಮಾನಿ, ಕೊರಿಯನ್ ಭಾಷೆ ಕಲಿತಿzಳೆ, ಕಲಿಸುತ್ತಾಳೆ. ಬಾಲಿವುಡ್ ಸಂಗೀತವೂ ಆಕೆಗೆ ಇಷ್ಟ.

ಸತ್ಯ ಈ ಎರಡರ ನಡುವೆ ಎಲ್ಲೋ ಇದೆ. ಹೆತ್ತವರ ಗಮನವಿಲ್ಲದೆ ಕೆ ಗೇಮ್ ವ್ಯಸನಿಗಳಾಗಿ ಸತ್ತವರೂ ಇದ್ದಾರೆ. ತುಂಬಾ ಚೆನ್ನಾಗಿ ಪೇರೆಂಟಿಂಗ್ ಮಾಡಿದ ಕೆಲವರ ಮಕ್ಕಳೂ ನಿರ್ದಿಷ್ಟ ಕಾರಣವೇ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ.

ನನ್ನ ಪರಿಚಯದವರೊಬ್ಬರ ಮಗ, ಇಂಜಿನಿಯರಿಂಗ್ ವಿದ್ಯಾರ್ಥಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ. ಅತಿ ಮುದ್ದು, ಅತಿ ಶಿಕ್ಷೆ ಯಾವುದೂ ಇಲ್ಲದ ಅಚ್ಚುಕಟ್ಟು ಪೇರೆಂಟಿಂಗ್ ಅವರದಾಗಿತ್ತು. ಮನೆಯಲ್ಲಿ ಬಡತನ ಇರಲಿಲ್ಲ. ಸುಸಂಸ್ಕೃತ ಜೀವನಶೈಲಿ, ಬಂಧುಗಳು, ಹವ್ಯಾಸಗಳು. ಆದರೂ ಸಾವಿನತ್ತ ಆತನನ್ನು ಸೆಳೆದ ಸಂಗತಿ ಯಾವುದು? ಆಧುನಿಕ ಜಗತ್ತು ಬಯಸುವ ಯಶಸ್ಸು, ಒತ್ತಡ ಇತ್ಯಾದಿಗಳನ್ನು ಬೆರಳು ಮಾಡಿ ತೋರಿಸೋಣವೆ? ಬದುಕು ಮತ್ತು ಸಾವು ಎಲ್ಲದಕ್ಕೂ ಕಾರಣಗಳನ್ನು ಕೊಡುತ್ತದೆಂದೇನೂ ಗ್ಯಾರಂಟಿ ಇಲ್ಲ.

Screenshot_4 R

ಕೆ ಪಾಪ್ ಹಾಗೂ ಕೆ ಗೇಮ್‌ಗಳು ನಮ್ಮ ಮುಂದಿನ ತಲೆಮಾರಿನ ಬಹುಭಾಗವನ್ನು ತೆಕ್ಕೆಗೆ ತೆಗೆದುಕೊಂಡಿರುವುದು ನಿಜ. ಅದಕ್ಕೆ ಅಂಕಿಅಂಶಗಳ ಆಧಾರ ಇದೆ. ಕೋವಿಡ್ ಲಾಕ್‌ ಡೌನ್ ಸಂದರ್ಭದಲ್ಲಿ ಕೊರಿಯಾ ನಮ್ಮ ಮನೆಗಳೊಳಗೆ ನೆಟ್‌ಫ್ಲಿಕ್ಸ್ ಮತ್ತಿತರ ಒಟಿಟಿಗಳ ಮೂಲಕ ಹೆಚ್ಚು ಹೆಚ್ಚು ನುಗ್ಗಿತು.

ಕೆ ಡ್ರಾಮಾಗಳು ವಯಸ್ಸಿನ ಭೇದವಿಲ್ಲದೆ ನೋಡುಗರಿಗೆ ಹತ್ತಿರವಾದವು. ಇಂದು ಕೆ ಪಾಕ್ ಮತ್ತು ಡ್ರಾಮಾಗೆ ಭಾರತ ಅತಿ ದೊಡ್ಡ ಮಾರುಕಟ್ಟೆ. ಫಿಲಿಪ್ಪೀನ್ಸ್ ಮತ್ತು ಇಂಡೋನೇಷ್ಯಾ ನಂತರ ಭಾರತವೇ ಕೆ ಕಂಟೆಂಟ್‌ಗೆ ಭಾರಿ ಗ್ರಾಹಕ. ಡ್ಯುಯೊಲಿಂಗೊ ಆಪ್‌ನಲ್ಲಿ ಭಾರತ ದಲ್ಲಿ ನಾಲ್ಕನೇ ಜನಪ್ರಿಯ ಭಾಷೆಯೆಂದರೆ ಕೊರಿಯನ್.

ಸಿಬಿಎಸ್‌ಇ ತನ್ನ ವಿದೇಶಿ ಭಾಷಾ ಪಠ್ಯಕ್ರಮದಡಿಯಲ್ಲಿ ಕೊರಿಯನ್ ಅನ್ನು ಐಚ್ಛಿಕ ಭಾಷೆಯಾಗಿ 2020ರಲ್ಲಿ ಸೇರಿಸಿದೆ. 2024ಕ್ಕೆ ಬಂದಾಗ 2000ಕ್ಕೂ ಹೆಚ್ಚು ಸಿಬಿಎಸ್‌ಇ ಶಾಲೆ ಗಳು ಕೊರಿಯನ್ ಅನ್ನು ಎರಡನೇ ಅಥವಾ ಮೂರನೇ ಭಾಷೆಯಾಗಿ ಕಲಿಸುತ್ತಿವೆ.

2020 ಮತ್ತು 2023ರ ನಡುವೆ ಭಾರತದಲ್ಲಿ ಕೊರಿಯನ್ ಜೀವನಶೈಲಿ ಉತ್ಪನ್ನಗಳ ಆಮದು ಶೇ.287ರಷ್ಟು ಹೆಚ್ಚಾಗಿದೆ. ಇದರ ಮೌಲ್ಯ 41.8 ಕೋಟಿ ಡಾಲರ್‌ಗಿಂತ ಹೆಚ್ಚು. 160ಕ್ಕೂ ಹೆಚ್ಚು ಕೆ ಬ್ಯೂಟಿ ಮತ್ತು ಕೆ ಫ್ಯಾಷನ್ ಬ್ರಾಂಡ್‌ಗಳು ಭಾರತೀಯ ಮಾಲ್‌ಗಳಲ್ಲಿವೆ.

ಕೆ ಪಾಪ್‌ನ ಅಭಿಮಾನಿಗಳೆಲ್ಲರೂ ಕೆ ಗೇಮ್‌ನ ವ್ಯಸನಿಗಳಲ್ಲ. ಕೊರಿಯನ್ ಪಾಪ್ ಬ್ಯಾಂಡ್‌ಗಳಾದ ಬಿಟಿಎಸ್, ಬ್ಲ್ಯಾಕ್‌ಪಿಂಕ್, ಸ್ಟ್ರೇ ಕಿಡ್ಸ್ ಮುಂತಾದವುಗಳ ಟೀನ್ ಫ್ಯಾನ್‌ ಗಳು ಇಂದು ಭಾರತದ ಮನೆಮನೆಗಳಲ್ಲೂ ಇದ್ದಾರೆ. ಯುಟ್ಯೂಬ್‌ನಲ್ಲಿ ಈ ಹಾಡುಗಳನ್ನು ಹಾಕಿಕೊಂಡು ನರ್ತಿಸುವುದು, ಸ್ಥಳೀಯ ಕೆ-ಗಳಲ್ಲಿ ಫ್ಯಾನ್ʼಗಳೆ ಆಗಾಗ ಒಟ್ಟು ಸೇರಿ ಸಂಭ್ರಮಿಸುವುದು, ಹೊಸ ಆಲ್ಬಂ ಬಿಡುಗಡೆಯಾದ ಕೂಡಲೆ ನೋಡುವುದು ಇವರ ಬದುಕಿನ ಭಾಗ.

ಕೊರಿಯಾಗೆ ಒಮ್ಮೆಯಾದರೂ ಹೋಗಿ ತಮ್ಮ ಆರಾಧ್ಯ ದೈವಗಳ ದರ್ಶನ ಪಡೆಯುವುದು ಕನಸು. ಇಂಥ ಕನಸು, ಯೌವ್ವನದಲ್ಲಿ ಯಾರಿಗೆ ಇರಲಿಲ್ಲ? ಕೆ ಸ್ಟಾರ್ʼಗಳು ಬಿಡಿ, ಬಾಲಿವುಡ್ ಸ್ಟಾರ್‌ಗಳು ಬಂದರೂ ಸಾಕು ನಮ್ಮಲ್ಲಿ ಮಾಲ್‌ಗಳು ತುಂಬಿ ತುಳುಕಿ ಲಾಠಿ ಚಾರ್ಜ್ ಆಗುವುದಿಲ್ಲವೇ. ಒಂದು ಲೋಕಲ್ ಹೀನೋಪಮೆ ಕೊಡುವುದಾದರೆ- ಡಿ ಬಾಸ್‌ ಗಾಗಿ ಪ್ರಾಣ ಕೊಡುವ ಅಭಿಮಾನಿಗಳೆಷ್ಟಿಲ್ಲ.

ಹಾಗಿರುವಾಗ ಕೆ ಪಾಪ್ ಅನ್ನು ಮಾತ್ರ ವಿಲನ್ ಮಾಡುವುದು ಯಾಕೆ? ವಾಸ್ತವವಾಗಿ, ಕೆ ಕಲ್ಚರ್‌ನ ಗೀಳಿಗೆ ಮೊದಲ ಬಲಿ ಕೊರಿಯಾವೇ ಹೊರತು ಭಾರತ ಅಲ್ಲ. ಅದು ಸ್ವಯಂ ಭಕ್ಷಕ. ತಾನು ಪ್ರಭಾವಿಸಿದ ದೇಶಗಳು ಹಾಗಿರಲಿ, ಕೊರಿಯಾದ ಅದು ಕೆ ಪಾಪ್ ಸ್ಟಾರ್‌ ಗಳನ್ನೂ ಸೇರಿಸಿಕೊಂಡು ಸಾವಿರಾರು ಜೀವಗಳ ಬಲಿ ಪಡೆದಿದೆ.

ದಕ್ಷಿಣ ಕೊರಿಯಾದಲ್ಲಿ 2023ರಲ್ಲಿ ತೀವ್ರವಾದ ಒಂಟಿತನದಿಂದ ಸಾವಿಗೀಡಾದವರ ಸಂಖ್ಯೆ 3661. ಅದರ ಹಿಂದಿನೆರಡು ವರ್ಷಗಳಲ್ಲಿ ಈ ಸಂಖ್ಯೆ ಕ್ರಮವಾಗಿ 3559 ಮತ್ತು 3378 ಇತ್ತು. ನಂತರದ ವರ್ಷಗಳ ವಿವರ ಲಭ್ಯವಿಲ್ಲದಿದ್ದರೂ, ಸರಾಸರಿ ಅಷ್ಟೇ ಇರುವುದು ಖಚಿತ. ಕೆ ಪಾಪ್ ಸ್ಟಾರ್‌ಗಳ ಆತ್ಮಹತ್ಯೆಯ ಪ್ರಮಾಣ ಹೆಚ್ಚಿದ್ದಂತಿದೆ. ಖ್ಯಾತಿಯ ಬೆನ್ನಟ್ಟಿ ಬರುವ ಅತಿ ನಿರೀಕ್ಷೆ, ಖಿನ್ನತೆ, ವೈಫಲ್ಯದ ಆತಂಕ, ಒಂಟಿತನ, ಸೈಬರ್ ಬುಲ್ಲೀಯಿಂಗ್- ಎಲ್ಲವೂ ಇದಕ್ಕೆ ಕಾರಣ.

2017ರಿಂದೀಚೆಗೆ ನಿಜಕ್ಕೂ ಕೆ ಸ್ಟಾರ್‌ಗಳಿಗೆ ಜನಪ್ರಿಯತೆ ಹಾಗೂ ಸಂಕಷ್ಟದ ಕಾಲ. 2017 ರಲ್ಲಿ ಶಿನೀ ಎಂಬ ಜನಪ್ರಿಯ ಬ್ಯಾಂಡ್‌ನ ಜಾಂಗ್ಹ್ಯುನ್ ಎಂಬಾತ ಜನಪ್ರಿಯತೆಯ ಒತ್ತಡ ಮತ್ತು ಖಿನ್ನತೆಯ ನಡುವೆ ಸಿಲುಕಿ ಪ್ರಾಣ ತ್ಯಜಿಸಿದ. 2019ರಲ್ಲಿ ಸುಲ್ಲೀ ಹಾಗೂ ಗೂಹಾರಾ ಎಂಬ ಇಬ್ಬರು ತಾರೆಯರು ಆನ್‌ಲೈನ್ ಕಿರುಕುಳ, ಹಣ ತಂದ ಸ್ವಯಂ ಕೃತಾಪರಾಧಗಳಿಗೆ ತುತ್ತಾದರು.

2023ರಲ್ಲಿ ಆಸ್ಟ್ರೋ ಸದಸ್ಯ ಮೂನ್ಬಿನ್, ನಟ ಲೀ ಸುನ್ ಕ್ಯುನ್, 2024ರಲ್ಲಿ ಜೇಯ್ ರಿಮ್, 2025ರಲ್ಲಿ ನಟಿ ಕಿಮ್ ಸೇಯಿ ರಾನ್ ಜೀವ ಬಿಟ್ಟರು. ಎಲ್ಲರೂ ಖ್ಯಾತಿಯ ಉತ್ತುಂಗ ದಲ್ಲಿದ್ದವರು. ಕೆ ಪಾಪ್ ಸ್ಟಾರ್ ಆಗುವ ಪ್ರಕ್ರಿಯೆ ಇವರನ್ನು ನುಗ್ಗು ನುರಿಯಾಗಿಸಿತ್ತು. ‌

ಬಾಲ್ಯದ ಅದೊಂದು ಕನಸಿನಿಂದ ತೀವ್ರತರ ಪ್ರಾಕ್ಟೀಸ್‌ಗೆ ಸೇರುವ ಇವರು ದಿನರಾತ್ರಿ ಪರಿವೆಯಿಲ್ಲದೆ ರಿಹರ್ಸಲ್ ಮಾಡಬೇಕು. ಲೆಕ್ಕಾಚಾರಕ್ಕಿಂತ ಒಂದು ಗ್ರಾಮ್ ಕೂಡ ಹೆಚ್ಚಿಗೆ ಆಹಾರ ಸೇವಿಸುವಂತಿಲ್ಲ. ಅ ಹಲವು ಬ್ಯಾಂಡ್‌ಗಳ ನಡುವೆ ಕತ್ತುಕತ್ತಿನ ಸ್ಪರ್ಧೆ. ಕೆ ಪಾಪ್ ಎಂಬುದು ಹಲವು ಬಿಲಿಯನ್ ಮೊತ್ತದ ವಹಿವಾಟು.

ಕೊರಿಯನ್ ಐಡಲ್‌ಗಳ ಸೌಂದರ್ಯದ ಮಾದರಿ ಅಪಾಯಕಾರಿಯಾದದ್ದು. ದೇಹದಲ್ಲಿ ಒಂದು ಗುಲಗುಂಜಿಯಷ್ಟಾದರೂ ಎಕ್‌ಸ್ಟ್ರಾ ಮಾಂಸ ಇರುವಂತಿಲ್ಲ. ತಿದ್ದಿ ತೀಡಿದ ಗಲ್ಲದ ಲೈನ್‌ಗಳು, ಸಂಪಿಗೆ ಎಸಳಿನಂತಹ ಮೂಗು, ಹೊಟ್ಟೆ ಸ್ವಲ್ಪ ಒಳಗೆ ಹೋಗಿರಬೇಕು, ಕಪೋಲ ಒಂದಷ್ಟು ಗುಳಿ ಬಿದ್ದರೆ ಚೆನ್ನ, ತಲೆಕೂದಲಿನ ಉದ್ದವೂ ಇಂತಿಷ್ಟೇ ಇರಬೇಕೆಂಬ ಲೆಕ್ಕಾಚಾರ. ತೋಳುಗಳ ಮೇಲೆ ಚಿತ್ರವಿಚಿತ್ರ ಟ್ಯಾಟೂಗಳು, ಕಣ್ಣುಗಳ ಆಕಾರ ಉದ್ದವಾಗಿ ದ್ದರೆ ಸೊಗಸು.

ಕಿವಿ ಅಗತ್ಯಕ್ಕಿಂತ ದೊಡ್ಡದಾಗಿರಬಾರದು. ಇದರಲ್ಲಿ ಏನಾದರೂ ತುಸು ಏರುಪೇರಾದರೆ ಕತ್ತರಿ ಬಿತ್ತೆಂದೇ ಅರ್ಥ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳದ ಪಾಪ್ ಸ್ಟಾರ್ ಇಲ್ಲ. ಕೊರಿಯಾದ ರಾಜಧಾನಿ ಸಿಯೋಲ್ ಜಗತ್ತಿನ ಅತೀ ಹೆಚ್ಚು ಪ್ಲಾಸ್ಟಿಕ್ ಸರ್ಜರಿ ನಡೆಸುವ ತಾಣವೂ ಹೌದು. ಇವನ್ನು ನೋಡುತ್ತಾ ಬೆಳೆಯುವ, ಆರಾಧಿಸುವ ಯುವಜನತೆ ಇದೇ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದೆ. ಈ ಸೌಂದರ್ಯದ ಮಾಡೆಲ್ ಅಮೆರಿಕವೆನ್ನದೆ, ಭಾರತವೆನ್ನದೆ ಹಬ್ಬಿದೆ.

ಕೆ ಪಾಪ್‌ನ ಕಪ್ಪು ಸುಳಿಯಂಥ ಆಕರ್ಷಕ ಗುಣದ ಬಗ್ಗೆಯೂ ಅಧ್ಯಯನಗಳಾಗಿವೆ. ಟೀನ್‌ ಗಳನ್ನು ಸೆಳೆಯುವ ಗುಣ ಅದರ acousticness ಹಾಗೂ danceability ಯಲ್ಲಿವೆ ಎಂದು ಅಧ್ಯಯನಕಾರರು ತಿಳಿಸುತ್ತಾರೆ. ಅಂದರೆ ಅದರ ವಾದ್ಯಸಂಗೀತದ ಲಯ, ಗುಂಫನಗಳು ಮತ್ತೆ ಮತ್ತೆ ಸೆಳೆಯುವಂಥದ್ದು. ಹಾಗೇ ಅದರ ನರ್ತನಶೀಲತೆ. ಯುವಕರು ಯಾವಾಗಲೂ ಡ್ಯಾನ್ಸಿಗೆ ಮನಸೋಲುವವರು ಎಂಬುದು ಗೊತ್ತೇ ಇದೆ.

ನಮ್ಮ ಮಕ್ಕಳು ನಿಜಕ್ಕೂ ಇದರಲ್ಲಿ ಎಷ್ಟು ಮುಳುಗಿದ್ದಾರೆ, ಈ ಭಾವನಾತ್ಮಕ ಪ್ರಪಂಚ ದಿಂದ ಹೊರಬರಬಲ್ಲ ಸಾಮರ್ಥ್ಯ ಅವರಲ್ಲಿದೆಯಾ, ಕೆ ಪಾಪ್‌ಗೆ ಪರ್ಯಾಯವಾಗಿ ಏನನ್ನು ನಾವು ಅವರಿಗೆ ಕೊಡುತ್ತೇವೆ ಎಂಬುದೆಲ್ಲ ಮುಖ್ಯವಾದ್ದು. ಆಧುನಿಕ ಜಗತ್ತಿನ ಯಶಸ್ಸಿನ ಹಸಿವು, ಅದು ಉಂಟುಮಾಡುವ ಒತ್ತಡ, ವೈಫಲ್ಯದ ಖಿನ್ನತೆ ಅಗಾಧವಾದದ್ದು. ಗೆದ್ದರೆ ಖುಷಿ, ಸೋತರೂ ಓಕೆ, ಸ್ಟಾರ್ ಅಲ್ಲದ ಸಾಮಾನ್ಯ ಮನುಷ್ಯನಾ/ಳಾಗಿರುವುದೂ ಓಕೆ ಎಂಬ ಮಾತನ್ನು ನಮ್ಮ ಮಕ್ಕಳಿಗೆ ನಾವು ಯಾವತ್ತಾದರೂ ಹೇಳಿದ್ದೇವಾ? ನಿಜಕ್ಕೂ ನಮ್ಮನ್ನೇ ನಾವು ಇನ್ನೊಮ್ಮೆ ನೋಡಿಕೊಳ್ಳೋಣ.

ನಮ್ಮ ಮಕ್ಕಳ ಮಾತು ನಾವು ಸರಿಯಾಗಿ ಕೇಳಿಸಿಕೊಳ್ತೀವಾ? ಮಗು ಏನೋ ಹೇಳುತ್ತಿರು ತ್ತದೆ, ಅಪ್ಪ ಮೊಬೈಲ್ ತೀಡುತ್ತಿರುತ್ತಾನೆ. ಅಮ್ಮ ಲ್ಯಾಪ್ಟಾಪ್‌ನಲ್ಲಿ ಬ್ಯುಸಿಯಾಗಿರುತ್ತಾಳೆ. ಮಕ್ಕಳ ವಿಷಯ ಹಾಗಿರಲಿ, ಯಾರಾದರೂ ಎದುರಾಗಿ ಬಂದು ಮಾತಾಡುತ್ತಿರುವಾಗಲೂ ಅನ್ಯಮನಸ್ಕರಾಗಿ ಮೊಬೈಲ್ ಪರದೆಯತ್ತ ಗಮನ ನೆಟ್ಟಿರುವವರೇ ನಮ್ಮ ನಡುವೆ ಹೆಚ್ಚು.

ಹತ್ತು ವರ್ಷಗಳ ಹಿಂದೆ ಇದ್ದಿಲ್ಲದ ಮೊಬೈಲ್ ಫೋನ್ ಇಂದು ನಮ್ಮ ದಿನಚರಿಯಲ್ಲಿ ಎಷ್ಟು ಭಾಗವನ್ನು ಆಕ್ರಮಿಸಿದೆ ಎಂದು ಸರಿಯಾಗಿ ಅವಲೋಕಿಸಿದರೆ ಗಾಬರಿಯಾಗದೇ ಇರದು. ಪ್ರವಾಸ ಹೋದಾಗ ಅಲ್ಲಿನ ವಾತಾವರಣದಲ್ಲಿ ಎಷ್ಟು ಮಗ್ನರಾಗಿರುತ್ತೇವೆ, ಎಷ್ಟು ಭಾಗ ಫೋಟೊ- ವಿಡಿಯೊ ಮಾಡುತ್ತಿರುತ್ತೇವೆ. ಗೆಳೆಯ/ತಿಯರು ಸಿಕ್ಕಾಗ ಮನಃಪೂರ್ವಕ ಮಾತುಕತೆಗೆ ಸಮಯವೆಷ್ಟು. ಮೈಂಡ್‌ಲೆಸ್, ಡೂಮ್ ಸ್ಕ್ರಾಲಿಂಗ್‌ನಲ್ಲಿ ದಿನದ ಎಷ್ಟು ಅವಧಿ ಕಳೆಯುತ್ತೇವೆ. ಸಾವಧಾನ, ನೆಮ್ಮದಿ ನಮ್ಮಲ್ಲಿ ಇದೆಯಾ? ನಮ್ಮ ಪೊಳ್ಳುತನ ಇಟ್ಟುಕೊಂಡು ಮಕ್ಕಳಿಗೆ ಪಾಠ ಮಾಡಲಾಗುತ್ತದಾ?

ಹರೀಶ್‌ ಕೇರ

View all posts by this author