ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾಷಿ ಅಲ್ಲ ಬದ್ಕ್ ವಿಶ್ವ ಕುಂದಾಪ್ರ ಕನ್ನಡ ದಿನ

ಕುಂದಾಪ್ರ ಕನ್ನಡವೆಂಬ ಭಾಷೆ, ಮಣ್ಣಿನ ಗುಣ,ಸಾಹಿತ್ಯಸಂಸ್ಕೃತಿಯ ಇಂಪು ವಿಶ್ವದಾದ್ಯಂತ ಪಸರಿಸುವ ದೃಷ್ಟಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸುವ ನಿರ್ಧಾರವನ್ನು ಅಂದು ತೆಗೆದುಕೊಳ್ಳಲಾಯಿತು. ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಇಂದು ಕೇವಲ ಆ ಭಾಷೆ ಮಾತನಾಡುವ ಕುಂದಾಪುರ, ಬೈಂದೂರು, ಕಾರ್ಕಳ, ಭಟ್ಕಳ,ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕಿಗಳಿಗಷ್ಟೇ ಸೀಮಿತವಾಗಿರದೇ, ಸಾಗರದಾಚೆಯೂ ಕೂಡ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಭಾಷಿ ಅಲ್ಲ ಬದ್ಕ್ ವಿಶ್ವ ಕುಂದಾಪ್ರ ಕನ್ನಡ ದಿನ

Ashok Nayak Ashok Nayak Jul 24, 2025 12:10 PM

ನಡೆ ನುಡಿ

ಕೆ.ಎಂ.ಶೇಖರ, ಹುಳಿಮಾವು

ಹೌದು. ಹೀಗೊಂದು ಧ್ಯೇಯವಾಕ್ಯದಡಿಯಲ್ಲಿ ಪ್ರಾದೇಶಿಕ ಭಾಷೆಯೊಂದರ ಸಂಭ್ರಮದ ಆಚರಣೆಗೆ ಸಹೃದಯ ಸಮಾನ ಮನಸ್ಕರು ಒಂದೆಡೆ ಸೇರಿ ನಿಗದಿಪಡಿಸಿಕೊಂಡ ದಿನ. ದಕ್ಷಿಣದ ಉಡುಪಿಯ ಗಡಿಯಿಂದ ಹಿಡಿದು ಉತ್ತರದ ಶಿರೂರಿನ ತನಕ, ಪೂರ್ವದ ಹೆಬ್ರಿ -ಸೋಮೇಶ್ವರ ದಿಂದ ಪಶ್ಚಿಮದ ಅರಬ್ಬೀ ಸಮುದ್ರದ ಕರಾವಳಿ ಉದ್ದಗಲಕ್ಕೂ ವಾಸವಿರುವ ಜನರ ಆಡುಭಾಷೆಯೇ ಈ ಕುಂದಗನ್ನಡ.

ಕೃಷಿಯೇ ಪ್ರಧಾನವಾಗಿರುವ ಈ ಪ್ರದೇಶದ ಜನರು ತಮ್ಮ ವಿಶಿಷ್ಟವಾದ ಸಂಸ್ಕೃತಿ ಮತ್ತು ಆಚರಣೆ ಯ ಮೂಲಕ ಹೆಸರಾದವರು. ಕಲೆ, ಸಾಹಿತ್ಯ,ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿ, ಪ್ರಾದೇಶಿಕ ಅಭಿವೃದ್ಧಿಗೂ ಕೈಲಾದಷ್ಟು ಸಹಾಯವನ್ನು ಮಾಡುತ್ತಾ ಬದುಕನ್ನು ಕಟ್ಟಿಕೊಂಡವರು.

ದಿನಬಳಕೆಯಲ್ಲಿ ಬಳಸುವ ಭಾಷೆಯ ಬದುಕನ್ನು ಮೆಚ್ಚಿಕೊಂಡವರು. ತನ್ನೂರಿನ ಅಭಿವೃದ್ಧಿಯ ಕನಸಿನ ಜೊತೆಯ ವಿಶ್ವದ ಬೇರೆ ಬೇರೆ ಪ್ರದೇಶಗಳಲ್ಲಿ ಉದರ ನಿಮಿತ್ತ ಕಾಯಕದಲ್ಲಿ ತೊಡಗಿಸಿ ಕೊಂಡಿದ್ದರೂ, ತಾವಾಡುವ ಭಾಷೆಯ ಬಗ್ಗೆ ಅಪಾರ ಅಭಿಮಾನವನ್ನು ಇಟ್ಟುಕೊಂಡವರು.

ಇದನ್ನೂ ಓದಿ: Roopa Gururaj Column: ಕ್ಷಮಿಸುವುದು ಕೂಡ ಸಿಟ್ಟಿನ ಲಕ್ಷಣವೇ ಎಂದ ಬುದ್ಧ

ವರ್ಷದ ಹೆಚ್ಚಿನ ಎಲ್ಲಾ ದಿನಗಳು ಒಂದಲ್ಲ ಒಂದು ವಿಚಾರಕ್ಕೆ ಅದರದ್ದೇ ಆದ ದಿನಾಚರಣೆ ಯನ್ನು ಹೊಂದಿದ್ದು, ನಮ್ಮ ಅಭಿಮಾನದ ಭಾಷೆಗಾಗಿ ಒಂದು ನಿಗದಿತ ದಿನವನ್ನು ಯಾಕೆ ಮೀಸಲಿಡಬಾರದೆಂದು ಆಲೋಚಿಸಿ,ಆರು ವರ್ಷಗಳ ಹಿಂದೆ, ಕೃಷಿ ಪ್ರಧಾನವಾದ ಕುಂದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಯ ಭಾಗವಾಗಿ ಭತ್ತ ನಾಟಿ ಮುಗಿಸಿ, ಪ್ರಥಮ ಹಬ್ಬದ ವಾತಾವರಣದ ಆಚರಣೆಗೆ ಸೂಕ್ತವಾದ ದಿನವೇ ಆಷಾಢ ಮಾಸದ ಕರ್ಕಾಟಕ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆಯೇ ಹೆಚ್ಚು ಸೂಕ್ತವೆಂದು ನಿರ್ಧರಿಸಿದರು.

ಕುಂದಾಪ್ರ ಕನ್ನಡವೆಂಬ ಭಾಷೆ, ಮಣ್ಣಿನ ಗುಣ,ಸಾಹಿತ್ಯಸಂಸ್ಕೃತಿಯ ಇಂಪು ವಿಶ್ವದಾದ್ಯಂತ ಪಸರಿಸುವ ದೃಷ್ಟಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸುವ ನಿರ್ಧಾರ ವನ್ನು ಅಂದು ತೆಗೆದುಕೊಳ್ಳಲಾಯಿತು. ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕ ಪ್ರಚಾರ ಗಿಟ್ಟಿಸಿಕೊಂಡ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಇಂದು ಕೇವಲ ಆ ಭಾಷೆ ಮಾತನಾಡುವ ಕುಂದಾಪುರ, ಬೈಂದೂರು, ಕಾರ್ಕಳ, ಭಟ್ಕಳ,ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕಿಗಳಿಗಷ್ಟೇ ಸೀಮಿತವಾಗಿರದೇ, ಸಾಗರದಾಚೆಯೂ ಕೂಡ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಬದುಕು ಕಟ್ಟಿಕೊಳ್ಳಲು ಪರವೂರಿಗೆ ಹೋದ ಈ ಪ್ರಾಂತ್ಯದ ಜನರು ತಾವಾಡುವ ಕುಂದಾಪ್ರ ಭಾಷೆಯ ತೇರನ್ನು ಸಂಘಟಿತರಾಗಿ ಎಳೆಯುತ್ತಿದ್ದಾರೆ. ದೂರದ ಮುಂಬೈ, ಲಂಡನ್, ಯುಎಇ ಯಲ್ಲಿಯೂ ಸಡಗರದಿಂದ ವಿಶ್ವ ಕುಂದಾಪ್ರ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಭಾಷಾ ವ್ಯಾಮೋಹದಿಂದಲೇ ತಾವೆಲ್ಲರೂ ಒಂದಾಗಿ ಅಮಾವಾಸ್ಯೆಯಂದು ಹುಟ್ಟಿದೂರಿನ ಸಂಸ್ಕೃತಿ, ಕ್ರೀಡೆ, ಆಚರಣೆಗಳನ್ನು ವೈಭವೀಕರಿಸಿ, ಅದ್ದೂರಿಯಿಂದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಾರೆ.

ವಿಶ್ವ ಕುಂದಾಪ್ರ ದಿನಾಚರಣೆ ಆರಂಭವಾದ ಬಳಿಕ ಈ ಭಾಷೆಗೊಂದು ಸಮಗ್ರವಾದ ವೇದಿಕೆ ಬೇಕೆಂಬ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತಂದು ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯ ದಲ್ಲಿ ಕುಂದಗನ್ನಡ ಅಧ್ಯಯನ ಪೀಠ ಆರಂಭಗೊಂಡಿದ್ದು, ಸರಕಾರ 50 ಲಕ್ಷ ರೂಪಾಯಿಗಳ ಅನುದಾನವನ್ನು ಮೀಸಲಿರಿಸಿದೆ. ಬೆಂಗಳೂರಿನಲ್ಲಿರುವ ಕುಂದಾಪ್ರ ಕನ್ನಡ ಪ್ರತಿಷ್ಠಾನ ದಿನಾಂಕ ೨೬ ಹಾಗೂ ೨೭ ರ ಶನಿವಾರ ಮತ್ತು ಭಾನುವಾರದಂದು ನಗರದ ನಂದಿ ಲಿಂಕ್ಸ್ ಮೈದಾನದಲ್ಲಿ ಕುಂದಾಪುರ ಮೂಲದ ಅನೇಕ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳ ಲಾಗಿದೆ.

‘ಕುಂದ್ರಾಪ್ದರ್ ಹಿಂದಾಪ್ರ’ ಎಂಬ ಹೆಮ್ಮೆಯ ಬಿಗುಮಾನದೊಂದಿಗೆ ಆ ಪ್ರದೇಶದ ಜನರು ತಾವಾಡುವ ಭಾಷೆಯ ಮೂಲಕವೇ ಸಂಘಟಿತರಾಗುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು. ಅವರೇ ಹೇಳುವ ಹಾಗೆ -ಇದ್ ಭಾಷಿ ಅಲ್ಲ ಬದ್ಕ್. ನಮ್ಮ ಅಬ್ಬಿ ಭಾಷಿ ಮಂಡಿ ಮೇಲ್ ಹೊತ್ಕಂಡ್ ಮೆರಸ್ತೋ!