Shishir Hegde Column: ಮರಗಳಿಗೇಕೆ ಹಾರ್ಟ್ ಅಟ್ಯಾಕ್ ಆಗುವುದಿಲ್ಲ ?
ಮನುಷ್ಯನಿಗೆ ಕ್ಯಾನ್ಸರ್, ಮಣ್ಣು ಮಸಿ ರೋಗಗಳು ಬರುವಂತೆ. ಅಸಹಜ ಸಾವು ಪ್ರಾಣಿ ಸಸ್ಯಗಳೆರಡ ರಲ್ಲೂ ಇದೆ. ಆದರೆ ಸಸ್ಯಗಳಲ್ಲಿ ಸಹಜ ಸಾವು ಹೇಗೆ? ಮನುಷ್ಯನಲ್ಲಿ ಸಹಜ ಸಾವು ಎಂದರೆ ಯಾವು ದೋ ಒಂದು ಅಥವಾ ಕೆಲವು ಅಂಗಗಳು ಇನ್ನು ತನ್ನ ಕೈಲಾಗುವುದಿಲ್ಲ ಎಂದು ಕೈ ಎತ್ತುವುದು. ಸಸ್ಯಗಳಲ್ಲಿ? ಅವಕ್ಕೆ ಹೃದಯವೂ ಇಲ್ಲ, ಕಿಡ್ನಿ, ಲಿವರ್‌ಗಳೂ ಇಲ್ಲ.


ಶಿಶಿರಕಾಲ
shishirh@gmail.com
ಕಾಯಿ ಬಿಡುವ, ಹಣ್ಣು ಕೊಡುವ ಮರಗಳು, ಬಿದಿರು, ಕೆಲವು ಹುಲ್ಲುಗಳು ಹಲವಾರು ವರ್ಷ ಬದುಕುತ್ತವೆಯಲ್ಲ, ಅವುಗಳ ಬದುಕು ಸಂಪೂರ್ಣ ವಿಭಿನ್ನ. ವಾರ್ಷಿಕ ಸಸ್ಯಗಳು ಏನೋ ಒಂದು ಚಿಕ್ಕ ಸಮಸ್ಯೆಯಾದರೆ ತಕ್ಷಣ ಸತ್ತು ಹೋಗುತ್ತವೆ. ಆದರೆ ಮರಗಳು ಹಾಗಲ್ಲ. ಒಂದು ಮರಕ್ಕೆ ಒಂದು ಭಾಗದಲ್ಲಿ ಏನೋ ಒಂದು ಸಮಸ್ಯೆಯಾದರೆ ಆ ಭಾಗವನ್ನು ಅವು ರಿಪೇರಿ ಮಾಡಿಕೊಳ್ಳಲು ಹೋಗುವುದಿಲ್ಲ. ಬದಲಿಗೆ ಆ ಭಾಗಕ್ಕೆ ನೀರು, ಪೋಷಕಾಂಶದ ಪೂರೈಕೆಯನ್ನು ನಿಲ್ಲಿಸಿಕೊಂಡು ಬಿಡುತ್ತದೆ. ಹೀಗೆ ಹಾನಿಗೊಳಗಾದ ಭಾಗವನ್ನಷ್ಟೇ ಒಣಗಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ.
ಸಾವಿನ ಬಗ್ಗೆ ಅಸಂಖ್ಯ ಪುಸ್ತಕಗಳು ಪ್ರಕಟವಾಗಿವೆ. ಕೆಲವು ಅಧ್ಯಾತ್ಮದ ಹಿನ್ನೆಲೆಯವಾದರೆ ಇನ್ನು ಕೆಲವು ಧಾರ್ಮಿಕ, ವೈಜ್ಞಾನಿಕ ಇತ್ಯಾದಿ. ಬರೆದಿರುವ ಲೇಖಕರೆಲ್ಲ ತಾವು ಜೀವಂತವಾಗಿರುವಾಗಲೇ ಬರೆದದ್ದು ಎಂಬುದು ಈ ಪುಸ್ತಕಗಳ ವಿಶೇಷತೆ ಮತ್ತು ಸಾಮ್ಯತೆ! ಎಲ್ಲ ದೇಶ ಕಾಲದಲ್ಲೂ ಸಾವಿನ ಬಗ್ಗೆ ವಿವರಿಸಿದವರಿದ್ದಾರೆ, ಬರೆದವರಿದ್ದಾರೆ.
ಕೆಲವರು ಯಾರೋ ಹೇಳಿದ ವಿವರಣೆಗಳನ್ನು ತಮ್ಮದೇ ಅವತರಣಿಕೆಯಲ್ಲಿ ಬರೆದರೆ ಇನ್ನು ಕೆಲವು ಭೂಪರು ಇಂಥ ನಾಲ್ಕಾರು ಪುಸ್ತಕಗಳನ್ನು ನಕಲು ಮಾಡಿ ತಾವೇ ಒಂದು ಪುಸ್ತಕ ಬರೆದು ಪ್ರಕಟಿಸಿದ ಉದಾಹರಣೆಗಳಿವೆ. ಸಾವಿನ, ಸಾವಿನ ನಂತರದ ಬಗ್ಗೆ ಕಾಲ್ಪನಿಕ ಕಥೆಗಳೂ ಸಾಕಷ್ಟಿವೆ. ‘ಬೆಳಗ್ಗೆ ಎದ್ದು, ಹಲ್ಲುಜ್ಜುವಾಗ ಕನ್ನಡಿಯೊಳಗೆ ಮುಖ ಕಾಣಿಸುವುದಿಲ್ಲ. ಆಗ ಆ ವ್ಯಕ್ತಿಗೆ (!) ತಾನು ಸತ್ತಿದ್ದೇನೆ ಎಂಬುದು ತಿಳಿಯುತ್ತದೆ’- ಈ ಒಂದು ಲೈನ್ ಇಟ್ಟುಕೊಂಡು ಬರೆದ ಕಥೆಗಳು ಜಗತ್ತಿನ ಎ ಭಾಷೆಗಳಲ್ಲಿಯೂ ಇವೆ.
‘ತವರುಮನೆಯ ಸೆಂಟಿಮೆಂಟಿನ’ ಚಲನಚಿತ್ರಗಳಿಗಿಂತ ಜಾಸ್ತಿ ಲೆಕ್ಕದಲ್ಲಿ ಈ ಕಥೆಯ ರೂಪಾಂತರ ಗಳಿವೆ. ‘ಏಕೆ’ ಎಂಬ ಪ್ರಶ್ನೆಯನ್ನು ಕೇಳಲು ಕಲಿತಾಗಿನಿಂದ ಪ್ರಶ್ನೆಯಾಗಿಯೇ ಉಳಿದಿರುವುದೆಂದರೆ ‘ನಾವು ಏಕೆ ಸಾಯುತ್ತೇವೆ?’. ನೊಬೆಲ್, ಪದ್ಮವಿಭೂಷಣ ಪುರಸ್ಕೃತ ವಿಜ್ಞಾನಿ ‘ಡಾ.ವೆಂಕಿ ರಾಮಕೃಷ್ಣನ್’ ಬರೆದ Why We Die, The New Science of Aging and The quest for Immortality ಎಂಬ ಪುಸ್ತಕವನ್ನು ಇತ್ತೀಚೆಗೆ ಓದುತ್ತಿದ್ದೆ.

ಅವರದೂ ಅದೇ ಪ್ರಶ್ನೆ. ಅವರು ಅಣುಜೀವಶಾಸ್ತ್ರಜ್ಞರು. ಹಾಗಾಗಿ ಅವರದು ಜೀವಕೋಶ ಹಂತದ ವಿವರಣೆ. ವಿಭಿನ್ನ. ಅದರಂದು ವೈರುಧ್ಯದ ವಿವರಣೆ ಇದೆ. ಏನೆಂದರೆ ಈಗ ನೀವು ಈ ಕ್ಷಣ, ಈ ಲೇಖನವನ್ನು ಓದುತ್ತಿರುವ ಸಮಯದಲ್ಲಿಯೇ ಲಕ್ಷಾಂತರ ಜೀವಕೋಶಗಳು ನಿಮ್ಮ ದೇಹದೊಳಕ್ಕೆ ಸಾಯುತ್ತಿವೆ. ಜೀವಕೋಶಗಳ ಈ ಸಾವು ನಿರಂತರ. ಜೀವವಿರಬೇಕು ಎಂದರೆ ಅವು ನಿರಂತರ ಸಾಯುತ್ತಿರಬೇಕು, ಹೊಸ ಕೋಶಗಳು ವಿಭಜನೆಗೊಂಡು ಹುಟ್ಟುತ್ತಿರಬೇಕು.
ಇದು ಒಂದು ಕಡೆಯಾದರೆ ಇನ್ನೊಂದು ಕಡೆ, ಒಬ್ಬ ವ್ಯಕ್ತಿ ಸತ್ತಿದ್ದಾನೆ ಎಂದು ಘೋಷಿಸಿದಾಕ್ಷಣ ಆತನ ಸಂಪೂರ್ಣ ದೇಹ ಸತ್ತಿದೆಯೆಂದಲ್ಲ. ಹೃದಯಾಘಾತವಾದವನಿಗೆ ಮಿದುಳಿನಿಂದ ಹಿಡಿದು ಬಹುತೇಕ ಅಂಗಗಳು ‘ಸತ್ತ’ ನಂತರವೂ ಜೀವಂತವಿರುತ್ತದೆ, ಅವು ಸತ್ತಿರುವುದಿಲ್ಲ. ಹೃದಯ ಸತ್ತದ್ದಕ್ಕೆ ಅನಿವಾರ್ಯವಾಗಿ ಅವು ಸಾಯಬೇಕಾಗುತ್ತದೆ.
ಅಂಗ ದಾನ, ಕಣ್ಣಿನ ದಾನ ಇವೆಲ್ಲ ಅದೇ ಅಲ್ಲವೇ? ಡಾ. ವೆಂಕಿ ಹೇಳುವಂತೆ ಸಾವು ಎಂದರೆ ನಮ್ಮ ಇಡೀ ದೇಹ ಒಂದು ಸಿಸ್ಟಮ್‌ನಂತೆ ವ್ಯವಸ್ಥೆಯಾಗಿ ಕೆಲಸಮಾಡಲಾಗದ ಒಟ್ಟು ಸ್ಥಿತಿ. ಆದರೆ ಇವತ್ತಿನ ನನ್ನ ಪ್ರಶ್ನೆ ಮನುಷ್ಯನ ಅಥವಾ ಪ್ರಾಣಿಯ ಸಾವಿನ ಬಗ್ಗೆ ಅಲ್ಲ. ಬದಲಿಗೆ ಸದ್ದುಗದ್ದಲ ವಿಲ್ಲದೆ, ಅಳು ರಂಪಾಟವಿಲ್ಲದೆ ಹೋಗಿಬಿಡುವ ಮರ-ಗಿಡಗಳ ಸಾವಿನ ಬಗ್ಗೆ. ಮನುಷ್ಯನಿಗೆ ಬರುವಂತೆ ಸಸ್ಯಗಳಿಗೂ ನೂರೆಂಟು ರೋಗಗಳು ಬರುತ್ತವೆ. ಹುಳ ಹಿಡಿಯುವುದು, ಸೂಕ್ಷ್ಮಾಣು ಜೀವಿಗಳ ದಾಳಿ, ಶಿಲೀಂಧ್ರ ದಾಳಿ, ಸಿಡಿಲು, ದುಂಬಿ ಇತ್ಯಾದಿ ಇತ್ಯಾದಿ.
ಇದನ್ನೂ ಓದಿ: Shishir Hegde Column: ಮನೆಗೆ ಬಂದು ತಲುಪಿದೆನೆಂಬ ಸಾರ್ವತ್ರಿಕ ಭಾವ
ಅವು ಮನುಷ್ಯನಿಗೆ ಕ್ಯಾನ್ಸರ್, ಮಣ್ಣು ಮಸಿ ರೋಗಗಳು ಬರುವಂತೆ. ಅಸಹಜ ಸಾವು ಪ್ರಾಣಿ ಸಸ್ಯಗಳೆರಡರಲ್ಲೂ ಇದೆ. ಆದರೆ ಸಸ್ಯಗಳಲ್ಲಿ ಸಹಜ ಸಾವು ಹೇಗೆ? ಮನುಷ್ಯನಲ್ಲಿ ಸಹಜ ಸಾವು ಎಂದರೆ ಯಾವುದೋ ಒಂದು ಅಥವಾ ಕೆಲವು ಅಂಗಗಳು ಇನ್ನು ತನ್ನ ಕೈಲಾಗುವುದಿಲ್ಲ ಎಂದು ಕೈ ಎತ್ತುವುದು. ಸಸ್ಯಗಳಲ್ಲಿ? ಅವಕ್ಕೆ ಹೃದಯವೂ ಇಲ್ಲ, ಕಿಡ್ನಿ, ಲಿವರ್‌ಗಳೂ ಇಲ್ಲ.
ಹಾಗಾದರೆ ಅವು ಸಾಯುವುದು ಹೇಗೆ? ಒಂದು ಸಸ್ಯವನ್ನು ಯಾವುದೇ ರೋಗ ರುಜಿನಗಳಿಲ್ಲದೆ ಪ್ರಯೋಗಾಲಯದಲ್ಲಿ ಬೆಳೆಸಿದರೆ ಅವು ಸಾವಿಲ್ಲದೆ ಬದುಕಬಲ್ಲವೇ? ಹುಟ್ಟುತ್ತಲೇ ಸಾವು ಆರಂಭ ವಾಗುತ್ತದೆ ಎಂಬುದು ಎಲ್ಲ ಜೀವಕ್ಕೂ ಸತ್ಯ. ನಮಗೆಲ್ಲರಿಗೂ ಸಾವಿನ ಬಗ್ಗೆ ನಿರಂತರ ಪ್ರಜ್ಞೆಯಿದೆ. ಮರೆತರೂ ಸಾವು ಎಂಬುದು ನಿಶ್ಚಿತ ಎಂಬುದು ಎಲ್ಲರಿಗೂ ಗೊತ್ತು. ನಾವು ಆಧುನಿಕವಾದಂತೆ ಸಾವನ್ನು ಉಪೇಕ್ಷಿಸುವ ಹೆಚ್ಚೆಚ್ಚು ಸಾಹಸ ಮಾಡುತ್ತಿದ್ದೇವೆ. ಆದರೆ ಈಗೀಗ ಹೆಚ್ಚೆಚ್ಚು ಆಚರಿಸಿ ಕೊಳ್ಳುವ ಹುಟ್ಟುಹಬ್ಬ, ವಾರ್ಷಿಕೋತ್ಸವ, ಹೊಸವರ್ಷಾಚರಣೆ ಸುಪ್ತವಾಗಿ ವಯಸ್ಸಾಗುತ್ತಿದೆ ಎಂದು ಪಿಸುಗುಡುತ್ತವೆ.
ನಮ್ಮ ಎರಡು ತಲೆಮಾರಿನ ಹಿಂದಿನವರಿಗೆ ವಯಸ್ಸಾಗುತ್ತಿದ್ದುದು ಇಂದಿನ ನಮ್ಮಷ್ಟು ಬಾಧಿಸುತ್ತಿರ ಲಿಲ್ಲವೇನೋ. ಷಷ್ಟಿಪೂರ್ತಿ, ಸಹಸ್ರಚಂದ್ರದರ್ಶನಗಳಾದಾಗಲೇ ವಯಸ್ಸಾಗುತ್ತಿದೆ ಎಂದು ಬಹಿರಂಗವಾಗುತ್ತಿದ್ದದ್ದು. ಆದರೂ ಮನುಷ್ಯ ಪ್ರeಯಲ್ಲಿ ಯಾವತ್ತೂ ಸಾವು ಸಮೀಪಿಸುತ್ತಿದೆ ಎಂಬ ಕಲ್ಪನೆ ಇದ್ದೇ ಇದೆ. ಈಗೀಗಂತೂ ಹೋದಲ್ಲಿ ಬಂದಲ್ಲಿ ಎಲ್ಲರೂ ವಯಸ್ಸಾಯ್ತು ಎನ್ನುವವರೇ.
ವಯಸ್ಸಾಗುತ್ತಿದ್ದಂತೆ ತಮ್ಮ ಸಾವಿನ ಬಗ್ಗೆ ಶೋಕಾಚರಣೆ ಆರಂಭಿಸಿಕೊಳ್ಳುವವರಿದ್ದಾರೆ. ಮಾಡಿದ ತಪ್ಪುಗಳು, ಈಡೇರದ ಆಸೆಗಳು, ಒಂದಿಂದು ದಿನ ಸಂಭವಿಸುವ ಸಾವು. ಸಾವು ಸಹಜ ಎಂಬ ಅರಿವಿದ್ದೂ ಬದುಕುವ, ಸಮೀಪಿಸಿದಾಗ ವ್ಯಥಿಸುವ ಏಕೈಕ ಪ್ರಾಣಿ ಮನುಷ್ಯನೇ ಇರಬೇಕು. ಖಾಲಿ ಸೈಟಿನಲ್ಲಿ ಬೆಳೆಯುವ ಕಾಟು ಗಿಡಗಳಿಗೆ, ನಾಚಿಕೆ ಮುಳ್ಳಿನ ಗಿಡಕ್ಕೆ, ನಡುವೆ ಹುಟ್ಟಿ ತಲೆಯೆತ್ತುವ ಪಪಾಯಾ ಗಿಡಕ್ಕೆ , ಪಶ್ಚಿಮ ಘಟ್ಟದ ತಪ್ಪಲಿನ ಬೀಟೆ ಮರಕ್ಕೆ, ದೊಡ್ಡಾಲದ ಮರಕ್ಕೆ ಸಾವು ಒಂದಿಂದು ದಿನ ನಿಶ್ಚಿತವೆನ್ನುವುದು ತಿಳಿದಿದೆಯೇ? ಮರಗಳ ಸಾವು ಪ್ರಾಣಿಪಕ್ಷಿಗಳ ಸಾವಿನಂತೆ ದಿಢೀರ್ ಜರಗುವ ಕ್ರಿಯೆ ಅಲ್ಲ.
ಮರಗಳಿಗೆ ಡೆತ್ ಸರ್ಟಿಫಿಕೇಟ್‌ನಲ್ಲಿ ನಿಮಿಷ, ಕ್ಷಣ ಮರವೊಂದು ಸತ್ತಿತು ಎಂಬ ಸಾವಿನ ನಿಖರ ಸಮಯವಿಲ್ಲ. ಮರಗಳ ಸಾವು ನಿಧಾನದ ಪ್ರಕ್ರಿಯೆ. ಹೇಗೆ ಮನುಷ್ಯನಲ್ಲಿ ಬಾಲ್ಯ, ಯೌವನ, ವೃದ್ಧಾಪ್ಯ ಮತ್ತು ಸಾವು ಇದೆಯೋ ಅದೇ ರೀತಿ ಮರಗಳಲ್ಲಿಯೂ ಬಾಲ್ಯವಿದೆ, ಹೂ ಬಿಡುವ- ಬೀಜ ಬಿಡುವ ಯೌವನವಿದೆ. ಆಮೇಲೆ ವೃದ್ಧಾಪ್ಯವಿದೆ, ಅದಾದ ಮೇಲೆ ಸಾವು. ಸೊಳ್ಳೆ, ನೊಣ ಇತ್ಯಾದಿ ಬದುಕುವುದು ಕೆಲವೇ ದಿನಗಳು. ನಾಯಿ ಕೆಲವು, ಮನುಷ್ಯ ಹಲವು ವರ್ಷ, ಆನೆ, ಆಮೆಗಳು ಇನ್ನಷ್ಟು ವರ್ಷ.
ಹಾಗೆಯೇ ಜೋಳ, ಸೂರ್ಯಕಾಂತಿ ಇವುಗಳದ್ದು ಕೆಲವೇ ತಿಂಗಳುಗಳ ಬದುಕು. ಅದಾದ ಮೇಲೆ ಯಾವುದೇ ಆರೈಕೆ ಮಾಡಿದರೂ ಆ ಗಿಡಗಳು ಬದುಕಲು ಸಾಧ್ಯವಿಲ್ಲ. ಇನ್ನು ಅಜ್ಜ ನೆಟ್ಟ ಆಲದ ಮರ? ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೆಲವೊಂದಿಷ್ಟು ಮರ ಪ್ರಭೇದಗಳಿವೆ. ಬ್ರಿಸ್ಟಲ್ ಕೋನ್, ಇನ್ನೊಂದಿಷ್ಟು ಪೈನ್ ಮರಗಳು. ಅವು ಆರೆಂಟು ನೂರು ವರ್ಷ ಬದುಕುವುವು. ಅವುಗಳ ಮಧ್ಯೆ ಕೆಲವೊಂದಿಷ್ಟು ಮರಗಳು ಸಾವಿರಾರು ವರ್ಷದಿಂದ ದೈವದ ಕಲ್ಲಿನಂತೆ ನಿಂತಿವೆ. ಅಲ್ಲಿನ ಒಂದು ಮರವಂತೂ ಐದುಸಾವಿರ ವರ್ಷದಿಂದ ಜೀವಂತವಿದೆ. ಕಾರ್ಬನ್ ಡೇಟಿಂಗ್ ಮೊದಲಾದ ವಿಧಾನಗಳಿಂದ ಪಕ್ಕಾ ಆದ ಲೆಕ್ಕ ಇದು. ವಿಜ್ಞಾನಿಗಳು ಹೇಳುವಂತೆ ಮೇಥುಸೇಲಾ ಎಂಬ ಪೈನ್ ಮರವಂತೂ ಐದು ಸಾವಿರ ವರ್ಷದ ನಂತರವೂ ವೃದ್ಧಾಪ್ಯದ ಲಕ್ಷಣವನ್ನೇ ತೋರುತ್ತಿಲ್ಲವಂತೆ. ಮರಗಳ ಗಾತ್ರ ಹೆಚ್ಚಿದಂತೆ ಅವುಗಳ ಆಯುಷ್ಯ ಹೆಚ್ಚು ಎನ್ನುವುದು ಎಲ್ಲಾ ಮರಗಳ ಮಟ್ಟಿಗೆ ಸತ್ಯವಲ್ಲದಿದ್ದರೂ ಬಹುತೇಕ ಲಾಗೂ ಆಗುವ ವಿಚಾರ.
ಮರ ದೊಡ್ಡವಾದಂತೆ ಅವುಗಳ ಮೇಲೆ ಕ್ರಿಮಿ, ಕೀಟಗಳ ದಾಳಿಯ ಸಾಧ್ಯತೆ ಹೆಚ್ಚು, ಬೀಸುವ ಗಾಳಿ, ಮಳೆಯ ಹೊಡೆತ ಅವಕ್ಕೆ ಜಾಸ್ತಿ. ಆದರೆ ಇದೆಲ್ಲದಕ್ಕೆ ವೈರುಧ್ಯವೆನಿಸುವಂತೆ ಮರಗಳು ಗಾತ್ರ ಹೆಚ್ಚಾದಂತೆ ಹೆಚ್ಚು ಕಾಲ ಬದುಕುತ್ತವೆ. ಭತ್ತ, ಗೋಧಿ, ಸೂರ್ಯಕಾಂತಿ ಹೀಗೆ ವಾರ್ಷಿಕ ಬೆಳೆಗಳದ್ದು ಕೆಲವೇ ತಿಂಗಳುಗಳ ಬದುಕು. ಒಮ್ಮೆ ಹೂವು ಬಿಟ್ಟಿತು, ಬೀಜ ಬೆಳೆಯಿತು ಎಂದರೆ ಗಿಡ ಒಣಗಲು ಶುರುವಾಗಿಬಿಡುತ್ತದೆ.
ಭತ್ತ ತೆನೆ ಬಿಟ್ಟ ನಂತರ ಸಾಯುವುದು ಅವುಗಳ ಗುಣ- ಸರಿ. ಆದರೆ ಆ ಸಾವು ಹೇಗೆ? ಇಡೀ ಭತ್ತದ ಗದ್ದೆಗೆ ಗದ್ದೆಯೇ ಪೈರು ಬಿಟ್ಟಾದ ನಂತರ ಅದೆಷ್ಟೇ ನೀರು ಹರಿಸಿದರೂ ಒಣಗಿ ನಿಲ್ಲುತ್ತವೆಯಲ್ಲ. ಹಾಗಾದರೆ ಅವೇನು ಆತ್ಮಹತ್ಯೆ ಮಾಡಿಕೊಳ್ಳುತ್ತವೆಯೇ? ಈ ರೀತಿ ಸಸ್ಯ ಸಾಯುವ ಪ್ರಕ್ರಿಯೆಯನ್ನು Senescence ಎನ್ನಲಾಗುತ್ತದೆ.
ಇದೊಂದು ವ್ಯವಸ್ಥಿತ ಜೈವಿಕ ‘ನಿರ್ಗಮನ’ ಕ್ರಿಯೆ. ಆಯಾ ಸಸ್ಯಗಳ ವಂಶವಾಹಿನಿಯಲ್ಲಿಯೇ ಬದುಕಿನ ಕಾಲಮಿತಿಯೂ ಅಚ್ಚಾಗಿರುತ್ತದೆ. ಆ ಸಮಯ ಬರುತ್ತಿದ್ದಂತೆ ಸಾವಿನ ಪ್ರಕ್ರಿಯೆ ಶುರುವಾಗಿ ಬಿಡುತ್ತದೆ. ಭತ್ತದ ಗಿಡವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಭತ್ತದ ಹೂವು- ಕದಿರು ಬಿಡುತ್ತಿದ್ದಂತೆ ಗಿಡದಲ್ಲಿ ಅದರೊಳಗಿನ ಹಾರ್ಮೋನ್ ಬದಲಾವಣೆಗಳು ಶುರುವಾಗಿ ಬಿಡುತ್ತವೆ.
ಭತ್ತದ ಬೀಜದೊಳಗೆ ವಂಶವಾಹಿಯ ಜತೆ ಪೋಷಕಾಂಶಗಳು ತುಂಬಿಕೊಳ್ಳುತ್ತಿದ್ದಂತೆ ಈ ‘ಕಿಲ್ ಸ್ವಿಚ್’, ಸಾವಿನ ಪ್ರಕ್ರಿಯೆ ಇನ್ನಷ್ಟು ವೇಗ ಪಡೆಯುತ್ತದೆ. ಭತ್ತದ ಗಿಡ ಪ್ರeಪೂರ್ವಕವಾಗಿಯೇ ಎಲೆ, ಕಾಂಡಗಳಿಗೆ ಪೋಷಕಾಂಶ ಪೂರೈಸುವುದನ್ನು ತಡೆಯುತ್ತದೆ ಮತ್ತು ಕಾಂಡ ಎಲೆಗಳಲ್ಲಿನ ಕೆಲ ಪೋಷಕಾಂಶಗಳನ್ನು ಕೂಡ ಬೀಜಗಳಿಗೆ ರವಾನಿಸುತ್ತದೆ. ಇದರಿಂದ ಕ್ರಮೇಣ ಎಲೆ ಮೊದಲಿಗೆ ಒಣಗುತ್ತದೆ.
ಹೀಗೆ ಗಿಡ ತನ್ನೊಳಗಿನ ಜೀವವನ್ನು ಬೀಜದಲ್ಲಿಡುತ್ತದೆ. ಸಾವು ಗಿಡವನ್ನು ಆವರಿಸುತ್ತದೆ. ಎಲ್ಲವೂ ಪೂರ್ವ ನಿರ್ಧಾರಿತ ಮತ್ತು timed- ನಿಗದಿತ ಕಾಲಮಿತಿ. ಯಾವುದೇ ಭತ್ತದ ಗಿಡ ಋತುಮಾನಕ್ಕೆ ತಕ್ಕಂತೆ ಬೀಜ ಬಿಟ್ಟಾದ ನಂತರ ಸತ್ತಿಲ್ಲವೆಂದರೆ ಆ ಗಿಡದೊಳಗಿನ ವಂಶವಾಹಿನಿ ಯಲ್ಲಿ ಏನೋ ಒಂದು ಸಮಸ್ಯೆಯಿದೆ ಎಂದೇ ಅರ್ಥ!!
ಆದರೆ ಕಾಯಿ ಬಿಡುವ, ಹಣ್ಣು ಕೊಡುವ ಮರಗಳು, ಬಿದಿರು, ಕೆಲವು ಹುಲ್ಲುಗಳು ಹಲವಾರು ವರ್ಷ ಬದುಕುತ್ತವೆಯಲ್ಲ, ಅವುಗಳ ಬದುಕು ಸಂಪೂರ್ಣ ವಿಭಿನ್ನ. ವಾರ್ಷಿಕ ಸಸ್ಯಗಳು ಏನೋ ಒಂದು ಚಿಕ್ಕ ಸಮಸ್ಯೆಯಾದರೆ ತಕ್ಷಣ ಸತ್ತುಹೋಗುತ್ತವೆ. ಆದರೆ ಮರಗಳು ಹಾಗಲ್ಲ. ಒಂದು ಮರಕ್ಕೆ ಒಂದು ಭಾಗದಲ್ಲಿ ಏನೋ ಒಂದು ಸಮಸ್ಯೆಯಾದರೆ ಆ ಭಾಗವನ್ನು ಅವು ರಿಪೇರಿ ಮಾಡಿಕೊಳ್ಳಲು ಹೋಗುವುದಿಲ್ಲ.
ಬದಲಿಗೆ ಆ ಭಾಗಕ್ಕೆ ನೀರು, ಪೋಷಕಾಂಶದ ಪೂರೈಕೆಯನ್ನು ನಿಲ್ಲಿಸಿಕೊಂಡು ಬಿಡುತ್ತದೆ. ಹೀಗೆ ಹಾನಿಗೊಳಗಾದ ಭಾಗವನ್ನಷ್ಟೇ ಒಣಗಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಇದ್ದ ಜಾಗದಲ್ಲಿ ಹಾನಿಯಾಗುತ್ತಿದೆ ಎಂದು ಅಲ್ಲಿನ ಕಾಲು ಕೇಳಲಿ ಅಂದರೆ ಮರಗಳಿಗೆ ಕಾಲುಗಳಿಲ್ಲವಲ್ಲ!! ಮರಗಳು ವಾರ್ಷಿಕ ಬೆಳೆಗಳಂತೆ ತಮ್ಮೆಲ್ಲ ಸತ್ವವನ್ನು ಬೀಜಕ್ಕೆ ಬಿಟ್ಟು ಸಾಯುವುದಿಲ್ಲ.
ವರ್ಷಾನುಗಟ್ಟಲೆ ಇಡೀ ವ್ಯವಸ್ಥೆಯೇ ಸೋತು ಸುಣ್ಣವಾಗುವಾಗ Senescence - ಮರಣ ಕ್ರಿಯೆ ಆರಂಭವಾಗುತ್ತದೆ. ಈ ಮರಣ ಕ್ರಿಯೆಯೇ ವಂಶವಾಹಿಯಲ್ಲಿ ಇಲ್ಲದ ಮರಗಳು ಅಸಂಖ್ಯ ಇವೆ. ಅವುಗಳಿಗೆ ಕಾರ್ಯತಃ ಇಂತಿಷ್ಟು ವರ್ಷದ ಬದುಕು ಎಂಬುದು ಪೂರ್ವ ನಿರ್ಧರಿತವಲ್ಲ. ಅಂಥ ಮರಗಳೇ ನೂರಾರು ವರ್ಷ, ಕೆಲವೊಮ್ಮೆ ಸಾವಿರಾರು ವರ್ಷ ಬದುಕುವವು.
ಕೆಲ ವರ್ಷದ ಹಿಂದೆ ಕ್ಯಾಲಿಫೋರ್ನಿಯಾದ ಸಿಕೋಯಾ ರಾಷ್ಟ್ರೀಯ ರಕ್ಷಿತಾರಣ್ಯಕ್ಕೆ ಹೋಗಿದ್ದೆ. ಅಲ್ಲಿನವು ದೈತ್ಯಾಕಾರದ ಸಿಕೋಯಾ ಮರಗಳು. 70-80 ಮೀಟರ್ ಎತ್ತರ, 8-10 ಮೀಟರ್ ಅಗಲದ ಕಾಂಡಗಳು. ಅಲ್ಲಿನ ಅತಿ ದೊಡ್ಡ ಸಿಕೋಯಾ ಮರ 83 ಮೀಟರ್ ಎತ್ತರವಿದೆ. ಅದರ ಕಾಂಡದ ಸುತ್ತಳತೆ 31 ಮೀಟರ್. 2700 ವರ್ಷ ವಯಸ್ಸು ಆ ಮರಕ್ಕೆ. ಏಸು ಕ್ರಿಸ್ತನಿಗಿಂತ ಮೊದಲು ಹುಟ್ಟಿದ ಗಿಡ ಅದು. ನಾವು ಅದರ ಎದುರಿಗೆ ನಿಂತು ಫೋಟೋ ತೆಗೆಸಿಕೊಳ್ಳಲು ಮುಂದಾದರೆ ಮರ ಮತ್ತು ನಾವು ಒಂದೇ ಫ್ರೇಮಿನಲ್ಲಿ ಹಿಡಿಯುವುದಿಲ್ಲ.
ಹಿಡಿಸಿದರೆ ನಾವು ಆ ಫೋಟೋದಲ್ಲಿ ಕಾಣಿಸುವುದಿಲ್ಲ. ಅಷ್ಟು ಗಾತ್ರ. ನಾನು ಅಲ್ಲಿಂದ ಬರುವಾಗ ಆ ಗಿಡದ ಬೀಜವನ್ನು ಕಿಸೆಗಿಳಿಸಿಕೊಂಡು ಬಂದಿದ್ದೆ. ಅದನ್ನು ಮನೆಗೆ ತಂದು, ಗಿಡ ಮಾಡಿದ್ದೂ ಆಯಿತು. ಆದರೆ 2700 ವರ್ಷ ಹಳೆಯ ಮರದಿಂದ ಹುಟ್ಟಿದ ಗಿಡ ಎರಡೇ ವರ್ಷದಲ್ಲಿ ಶಿವನ ಪಾದ ಸೇರಿತ್ತು. ಇಂಥ ಮರಗಳ ಆಯುಷ್ಯ ನಿರ್ಧಾರವಾಗುವುದು ವಾತಾವರಣ ಇತ್ಯಾದಿ ಬಾಹ್ಯ ಬದಲಾವಣೆಗಳಿಂದ ಮಾತ್ರ. ಅದು ಸಂಭವಿಸದಿದ್ದಲ್ಲಿ ಅವೆಲ್ಲ ಅಜರಾ‘ಮರ’.
ಚಳಿ ಪ್ರದೇಶದ ಮರಗಳು ಚಳಿಗಾಲ ಶುರುವಾಗುತ್ತಿದ್ದಂತೆ ತಮ್ಮೆಲ್ಲ ಪೋಷಕಾಂಶಗಳನ್ನು ಬೇರಿಗೆ ರವಾನಿಸಿಬಿಡುತ್ತವೆ. ತಮ್ಮೆಲ್ಲ ಎಲೆಗಳನ್ನು ಉದುರಿಸಿ ಘೋರಚಳಿಗಾಲದಲ್ಲಿ ಕೋಮಾವಸ್ಥೆ, ಮತ್ತೆ ಬೇಸಗೆಯಲ್ಲಿ ಚಿಗುರಿದ ಬದುಕು. ಹೀಗೆ ಸಸ್ಯಗಳ ಸಾವಿನಲ್ಲೂ ಅಷ್ಟೇ ವೈವಿಧ್ಯವಿದೆ. ಮರಗಿಡಗಳ ಹುಟ್ಟು ಮತ್ತು ಸಾವು ಎರಡೂ ಹಾಗೆಯೇ. ಕಂಪೌಂಡಿನ ಸಿಮೆಂಟ್ ಚಡಿಯಲ್ಲಿ ಆಳದ ಗಿಡ ವೊಂದು ಯಾರಿಗೂ ತಿಳಿಯದಂತೆ ಹುಟ್ಟಿಬಿಡುತ್ತದೆ. ಹಾಗೆಯೇ ದುಂಬಿ ಹೊಡೆದ ತೆಂಗಿನಕಾಯಿ ಗಲಾಟೆ ಆಕ್ರಂದನವಿಲ್ಲದೆ ಒಣಗಿ ಸತ್ತುಬಿಡುತ್ತದೆ.
ಆದರೆ ಯಾವುದೇ ಗಿಡ ಸಾವಿನ ಭಯದಲ್ಲಿ ಎಂದೂ ಬದುಕುವುದಿಲ್ಲ. ಅದು ಬೇಕಾದರೆ ಬೆಂಗಳೂರಿನ ಪಾರ್ಕಿನಲ್ಲಿಯೇ ಇರಲಿ ಅಥವಾ ಜೋಗ ಜಲಪಾತದ ನೀರಿನ ಮಧ್ಯದಲ್ಲಿಯೇ ಇರಲಿ. ಮರಗಳೆಂದೂ ವಯಸ್ಸಾಗಿದೆ ಎಂದು ಬೇಸರಿಸುವುದಿಲ್ಲ!
ಮರಕ್ಕೆ ನಮ್ಮಂತೆ ಸಾವಿರದೆಂಟು ನರಮಂಡಲ ವ್ಯವಸ್ಥೆ ಇಲ್ಲದಿರಬಹುದು. ಹಾಗಾಗಿ ಅವುಗಳಿಗೆ ನಮ್ಮಂತೆ ನೋವಿನ ಅನುಭವ ಆಗುವುದಿಲ್ಲ ಎಂಬುದನ್ನೂ ಒಪ್ಪೋಣ. ಆದರೆ ಜೀವ ಪ್ರಜ್ಞೆ ಯಂತೂ ಇದೆ. ಆ ಪ್ರe ಇದ್ದು ಕೂಡ ಅವು ಸಮಯ ಬಂದಾಗ ನಿರ್ಮಿಸಲು ಅಂಜುವುದಿಲ್ಲ. ಅವುಗಳದು ಬದುಕುವಾಗಿನ ಗಟ್ಟಿತನ. ಸಾವಿನ ಸಮಯ ಬಂದಾಗ ಅಷ್ಟೇ ನಮ್ರತೆಯಿಂದ ಅದನ್ನು ಸ್ವೀಕರಿಸುವ, ಒಪ್ಪಿ ಆಲಿಂಗಿಸುವ ಪ್ರಜ್ಞೆ. ಮನುಷ್ಯ, ಪ್ರಾಣಿಗಳಿಗೆ ಮಾತ್ರ ತಿಳಿವಳಿಕೆ ಇದೆ, ಸಸ್ಯ ಗಳಲ್ಲಿ ತಿಳಿವಳಿಕೆಯಿಲ್ಲ ಆದರೆ ಅವು ಪ್ರತಿಕ್ರಿಯಿಸಬಲ್ಲವು ಎಂಬುದು ಇಂದಿನ ವಿಜ್ಞಾನ. ಆದರೆ ಇಂದು ಸಮಸ್ಯೆಯಿದೆ.
‘ಪ್ರಜ್ಞೆ’, ‘ಅರಿವು’ ಇವುಗಳ ಬಗೆಗಿನ ನಮ್ಮ ತಿಳಿವಳಿಕೆ ಮನುಷ್ಯಕೇಂದ್ರಿತ. ಸಸ್ಯಗಳಿಗೆ ನಾವಂದು ಕೊಂಡ, ನಮ್ಮ ಅನುಭವಕ್ಕೆ ಬರುವ ಪ್ರಜ್ಞೆ ಇರದಿರಬಹುದು. ನಮಗೆ ತಿಳಿದಿಲ್ಲ ಹಾಗಾಗಿ ಅದು ಇಲ್ಲ ಎಂಬುದು ಆಧುನಿಕ ವಿಜ್ಞಾನದ ದೊಡ್ಡ ರೋಗ. ಮರಕ್ಕಿರುವ ಜೀವ ಮತ್ತು ಜೀವೋತ್ತರ ಪ್ರಜ್ಞೆ ನಮಗಿನ್ನೂ ಸರಿಯಾಗಿ ಅರ್ಥವಾಗಿಲ್ಲ ಬಿಡಿ !!