ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: 28 ವರ್ಷ ನಡೆದೇ ಜಗತ್ತು ಸುತ್ತಿದ ಬುಷ್ಬಿ !

ಏಳು, ಆಫೀಸಿಗೆ ಧಾವಿಸು, ದುಡಿ, ತಿಂಗಳ ಕೊನೆಯಲ್ಲಿ ಸಂಬಳಕ್ಕೆ ಕಾಯು, ಇಂಥ ಗಾಣದ ಲಯ ಮೀರಿದವರು. ಕಾರ್ಲ್ ಬುಷ್ಬಿ ಅಂಥವನು. ಅಸಾಧ್ಯವೆಂದು ಇತರರು ಭಾವಿಸಿದ್ದನ್ನು ಸಾಧಿಸಿ ತೋರಿಸಬೇಕೆಂಬ ಹಠ ಕಾರ್ಲ್ ಬುಷ್ಬಿಯ ಈ ಸಾಹಸದ ಹಿಂದೆ ಇತ್ತು. ಬ್ರಿಟಿಷ್ ಸೇನೆಯ ಪ್ಯಾರಾ ಟ್ರೂಪರ್ ಆಗಿದ್ದ ಬುಷ್ಬಿಗೆ ಬಾಲ್ಯದಿಂದಲೂ ದೂರದೂರಿಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುವ ಕನಸು.

ಕಾಡುದಾರಿ

ಒಂದು ಮಳೆ ಬಂದು ತಂಪಾದ ದಿನ ‘ಇಂದೊಂಚೂರು ಚಳಿ ಇದೆ, ವಾಕಿಂಗ್ ಮುಂದೆ ಹಾಕೋಣ’ ಅಂದುಕೊಳ್ಳುತ್ತಾ ಆರಾಮ ಕುರ್ಚಿಯಲ್ಲಿ ಕುಳಿತು ಬೆಳಗಿನ ಕಾಫಿ ಹೀರುತ್ತೇವೆ. ಅನೇಕರಿಗೆ ಇಂಥ ಸುಖವಿಲ್ಲ. ಅವರು ಮುಂಜಾನೆ 3 ಗಂಟೆಗೂ ಮೊದಲು ಎದ್ದು ತರಕಾರಿ ತರೋಕೆ ಮಾರ್ಕೆಟ್‌ಗೆ ಹೋಗಬೇಕಾಗುತ್ತದೆ. ಅದು ಬದುಕಿನ ಪಾಡಾಯಿತು. ಬದುಕನ್ನೇ ನಡಿಗೆ ಮಾಡಿಕೊಂಡವರು, ಟ್ರೆಕ್ಕಿಂಗ್ ಎಂಬ ನಡಿಗೆಯಿಂದ ಜೀವನದ ಲಯ ಕಂಡುಕೊಂಡವರು, ನಡಿಗೆಗಾಗಿ ಬದುಕುವವರು... ಜನ ಎಷ್ಟು ವಿಧ.

ಇಂಗ್ಲೆಂಡಿನ ಕಾರ್ಲ್ ಬುಷ್ಬಿಯ ಕತೆ ನೋಡಿ. ನಡೆಯುತ್ತಲೇ ಜಗತ್ತನ್ನು ಗೆದ್ದವನಿವನು. ಸತತ 28 ವರ್ಷ ಕಠಿಣ ಸನ್ನಿವೇಶಗಳ ನಡುವೆ ವಾಕಿಂಗ್ ಮಾಡಿ ಇದೀಗ ಮನೆ ತಲುಪಿಕೊಂಡಿದ್ದಾನೆ. ನಡಿಗೆಯಲ್ಲಿ ಜಗತ್ತು ಸುತ್ತಲು ಹೊರಟವರನ್ನು ಕಂಡರೆ, ಹುಂಬರು ಅನ್ನಬೇಕೆನಿಸುತ್ತದೆ. ಬುಲೆಟ್ ಟ್ರೇನ್, ವಿಮಾನಗಳ ಕಾಲದಲ್ಲಿ ಯಾರು ನಡೆದು ವಿಶ್ವ ಸುತ್ತುತ್ತಾರೆ? ಯಾಕಾದರೂ ಸುತ್ತಬೇಕು? ಅದೂ ವರ್ಷಗಟ್ಟಲೆ. ಆದರೂ ಇಂಥ ಹುಚ್ಚರೇ ಬದುಕಿನಲ್ಲಿ ನಾವೆಲ್ಲ ಕಾಣಲಾರದ ಇನ್ನೊಂದು ಲಯ ಕಂಡುಕೊಂಡವರು.

ಏಳು, ಆಫೀಸಿಗೆ ಧಾವಿಸು, ದುಡಿ, ತಿಂಗಳ ಕೊನೆಯಲ್ಲಿ ಸಂಬಳಕ್ಕೆ ಕಾಯು, ಇಂಥ ಗಾಣದ ಲಯ ಮೀರಿದವರು. ಕಾರ್ಲ್ ಬುಷ್ಬಿ ಅಂಥವನು. ಅಸಾಧ್ಯವೆಂದು ಇತರರು ಭಾವಿಸಿದ್ದನ್ನು ಸಾಧಿಸಿ ತೋರಿಸಬೇಕೆಂಬ ಹಠ ಕಾರ್ಲ್ ಬುಷ್ಬಿಯ ಈ ಸಾಹಸದ ಹಿಂದೆ ಇತ್ತು. ಬ್ರಿಟಿಷ್ ಸೇನೆಯ ಪ್ಯಾರಾಟ್ರೂಪರ್ ಆಗಿದ್ದ ಬುಷ್ಬಿಗೆ ಬಾಲ್ಯದಿಂದಲೂ ದೂರದೂರಿಗೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುವ ಕನಸು.

ಇದನ್ನೂ ಓದಿ: Harish Kera Column: ನನಗೆ ಕೇವಲ ಮೂರು ದಿನ ದೃಷ್ಟಿ ಬಂದರೆ !

ಸೇನೆಯಲ್ಲಿದ್ದಾಗ ಸಾಹಸ, ಸಹಿಷ್ಣುತೆ ಮತ್ತು ಸವಾಲುಗಳನ್ನು ಎದುರಿಸುವ ಮನೋಭಾವ ಗಟ್ಟಿಯಾಯ್ತು. 1990ರ ದಶಕದ ಮಧ್ಯಭಾಗದಲ್ಲಿ ತಂದೆ ನೀಡಿದ ಬರ್ತ್‌ಡೇ ಗ್ರೀಟಿಂಗ್ಸ್ ಕಾರ್ಡ್ ಈ ಕನಸಿಗೆ ಹೊಸ ತಿರುವು ನೀಡಿತು. ಅದರಲ್ಲಿತ್ತು ಬ್ರಿಟನ್ ನ ಇಬ್ಬರು ಸೇನಾ ಸಿಬ್ಬಂದಿ ನಡೆಸಿದ್ದ ಚರ್ಚೆಯೊಂದರ ಉಲ್ಲೇಖ.

ರಷ್ಯಾ ಮತ್ತು ಅಮೆರಿಕ ನಡುವಿನ ಬೇರಿಂಗ್ ಜಲಸಂಧಿ ದಾಟಿ ಲಂಡನ್‌ನಿಂದ ನ್ಯೂಯಾರ್ಕ್‌ವರೆಗೆ ಕಾಲ್ನಡಿಗೆಯಲ್ಲಿ ಹೋಗಲು ಸಾಧ್ಯವೇ ಎಂಬುದು ಅದರ ತಿರುಳು. ಒಂದು ಕಾಲದಲ್ಲಿ, ಅಂದರೆ ಕೊಲಂಬಸ್ ಸಮುದ್ರ ಮಾರ್ಗ ಕಲ್ಪಿಸುವ ತುಂಬಾ ತುಂಬಾ ಮೊದಲು, ಏಷ್ಯಾ ಮತ್ತು ಉತ್ತರ ಅಮೆರಿಕ ಖಂಡಗಳನ್ನು ಭೂಸೇತುವೆ ಸಂಪರ್ಕಿಸಿತ್ತು ಎಂಬ ಕಲ್ಪನೆಯೂ ಇದೆ. ಈ ವಿಷಯ ಬುಷ್ಬಿಯ ಮನಸ್ಸಿನಲ್ಲಿ ಗಾಢವಾಗಿ ಬೇರೂರಿತು.

ಮ್ಯಾಪ್ ಮೇಲೆ, ಪೆನ್ನಿನಿಂದ ಒಂದು ಮಾರ್ಗ ಗುರುತಿಸಲು ಆರಂಭಿಸಿದರು. ದಕ್ಷಿಣ ಅಮೆರಿಕದ ತುದಿಯಿಂದಲೇ ಆರಂಭಿಸಿ, ಇಡೀ ಅಮೆರಿಕ ಖಂಡ ದಾಟಿ, ಏಷ್ಯಾ ಮತ್ತು ಯುರೋಪ್ ಮೂಲಕ ತನ್ನ ಊರಾದ ಇಂಗ್ಲೆಂಡ್‌ನ ಹಲ್‌ಗೆ ಕಾಲ್ನಡಿಗೆಯ ಮರಳಬಾರದೇಕೆ ಎಂಬ ಕನಸು. ಅದೇನೂ ಸುಲಭದ್ದಲ್ಲ. ತನ್ನ ಸಾಮರ್ಥ್ಯವನ್ನು ತಾನೇ ಪರೀಕ್ಷಿಸಿಕೊಳ್ಳುವ, ಮನುಷ್ಯನ ಸಹಿಷ್ಣುತೆಯ ಮಿತಿಯನ್ನು ಅರಿಯುವ, ಇತಿಹಾಸದ ಅತ್ಯಂತ ದೀರ್ಘವಾದ ಕಾಲ್ನಡಿಗೆ. ಈ ಸಾಹಸಕ್ಕೆ ಬುಷ್ಬಿ ‘ಗೋಲಿಯಾತ್ ಎಕ್ಸ್‌ಪೆಡಿಷನ್’ ಎಂದು ಹೆಸರಿಟ್ಟರು. ಅದಕ್ಕಾಗಿ ಎರಡು ಕಠಿಣ ನಿಯಮ ರೂಪಿಸಿಕೊಂಡರು. ಮೊದಲನೆಯದು, ಯಾವುದೇ ವಾಹನ ಬಳಸುವಂತಿಲ್ಲ. ಎರಡನೆಯದು, ಕಾಲ್ನಡಿಗೆಯ ಗುರಿ ತಲುಪುವವರೆಗೆ ಬ್ರಿಟನ್‌ಗೆ ಹಿಂದಿರುಗುವಂತಿಲ್ಲ.

71 ok

1998ರ ನವೆಂಬರ್ 1ರಂದು, 29ನೇ ವಯಸ್ಸಿನಲ್ಲಿ ಬುಷ್ಬಿ ಚಿಲಿಯ ದಕ್ಷಿಣ ತುದಿಯಲ್ಲಿರುವ ಪುಂಟಾ ಅರೆನಾಸ್‌ನಿಂದ ಸಾಹಸಯಾತ್ರೆ ಆರಂಭಿಸಿದರು. ತಾಯಿಯ ಮನೆ ಇರುವ ಇಂಗ್ಲೆಂಡ್‌ನ ಹಲ್ ನಗರವೇ ಗುರಿ. ಸುಮಾರು 50000 ಕಿಲೋಮೀಟರ್ ನಡಿಗೆ. 12 ವರ್ಷಗಳಲ್ಲಿ ಪೂರ್ಣಗೊಳಿಸ ಬಹುದು ಎಂದು ಅಂದಾಜಿಸಿದ್ದರು. ಆದರೆ ಭೀಕರ ವಾಸ್ತವ ಇದಕ್ಕಾಗಿ ಅವರ ಬದುಕಿನ 28 ವರ್ಷಗಳನ್ನು ಸೆಳೆದುಕೊಂಡಿತು.

ಭೂಪಟದಲ್ಲಿ ಸುಲಭವಾಗಿ ಕಾಣುವ ಮಾರ್ಗ, ನೆಲದ ಮೇಲೆ ಅಷ್ಟು ಸರಳವಾಗಿರಲಿಲ್ಲ. ದಕ್ಷಿಣ ಅಮೆರಿಕದ ಅಟಕಾಮಾ ಮರುಭೂಮಿಯ ಸುಡುವ ಬಿಸಿಲು, ಆಹಾರ ನೀರಿನ ಕೊರತೆ, ದಟ್ಟ ಕಾಡುಗಳು, ಅಪಾಯಕಾರಿ ಪ್ರಾಣಿಗಳು, ದೇಶಗಳ ನಡುವಿನ ರಾಜಕೀಯ ಸಂಘರ್ಷಗಳು, ಗಡಿಗಳ ನಿರ್ಬಂಧಗಳು ಹೀಗೆ ಒಂದರ ಹಿಂದೆ ಒಂದರಂತೆ ಸವಾಲುಗಳು. ಅತ್ಯಂತ ಭಯಾನಕ ಅನುಭವ ಗಳಲ್ಲಿ ಒಂದಾಗಿದ್ದು ಪನಾಮ ಮತ್ತು ಕೊಲಂಬಿಯಾ ನಡುವಿನ ಡೇರಿಯನ್ ಗ್ಯಾಪ್ ಕಾಡಿನ ಪ್ರಯಾಣ.

100 ಕಿಲೋಮೀಟರ್‌ನ ಈ ಪ್ರದೇಶದಲ್ಲಿ ರಸ್ತೆಗಳೇ ಇಲ್ಲ. ದಟ್ಟ ಕಾಡು, ಕೆಸರು, ನದಿಗಳು, ವಿಷಕಾರಿ ಜೀವಿಗಳು ಮತ್ತು ಸಶಸ್ತ್ರ ಬಂಡುಕೋರರ ಗುಂಪುಗಳ ಅಪಾಯ. ಕೊಲಂಬಿಯಾದ ಗೆರಿ ಸಂಘಟನೆ ಗಳು, ಬಲಪಂಥೀಯ ಸಶಸ್ತ್ರ ಪಡೆಗಳು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ಪ್ರಭಾವ. ಬುಷ್ಬಿ ಹಲವು ಬಾರಿ ಬಂದೂಕುಧಾರಿಗಳ ಎದುರು ನಿಲ್ಲಬೇಕಾಯಿತು.

ಅನುಮಾನಾಸ್ಪದ ಅನಿಸಿದರೆ ಜೀವ ಉಳಿಯುವುದೇ ಕಷ್ಟವಾಗಿತ್ತು. ಕೆಲವು ಸಂದರ್ಭಗಳಲ್ಲಿ ನದಿಗಳಲ್ಲಿ ತೇಲುತ್ತಾ, ನೀರಿನ ಹರಿವಿನೊಂದಿಗೆ, ಮೊಸಳೆಗಳಿದ್ದ ಪ್ರದೇಶಗಳನ್ನೂ ದಾಟಬೇಕಾ ಯಿತು. ಅಪರಿಚಿತ ಸಶಸ ವ್ಯಕ್ತಿಗಳ ಎದುರು ಕೋಪ ಅಥವಾ ಆತಂಕ ತೋರದೆ ನಗುಮುಖದಿಂದ ಪರಿಸ್ಥಿತಿ ವಿವರಿಸಿದ್ದು ತಮ್ಮ ಜೀವ ಉಳಿಸಲು ನೆರವಾಯಿತು ಎಂದು ನೆನಪಿಸಿಕೊಳ್ಳುತ್ತಾರೆ. ಈ ಕಾಡಿನ ಪ್ರಯಾಣದ ಬಳಿಕ ಪನಾಮದಲ್ಲಿ ಬಂಧಿತರಾಗಿ 18 ದಿನ ಜೈಲಿನಲ್ಲಿಯೂ ಇರಬೇಕಾಯಿತು.

ಇನ್ನೊಂದು ಸಂದರ್ಭದಲ್ಲಿ ಪೆರುವಿನಲ್ಲಿ ತೀವ್ರ ಹೊಟ್ಟೆಯ ಸೋಂಕು, ಇತರ ಬ್ಯಾಕ್ಟೀರಿಯಾ ಸೋಂಕುಗಳು ಕಾಡಿದವು. ಚಿಲಿಯ ಅಟಕಾಮಾ ಮರುಭೂಮಿಯಲ್ಲಿ ಆಹಾರವಿಲ್ಲದೆ ಮೂರು ದಿನ ಒಂದೇ ಒಂದು ಬಾಳೆಹಣ್ಣನ್ನು ನಂಬಿ ಬದುಕಿದರು. 2006ರಲ್ಲಿ ಅಲಾಸ್ಕಾದಿಂದ ರಷ್ಯಾಕ್ಕೆ ಬೇರಿಂಗ್ ಜಲಸಂಧಿಯನ್ನು ದಾಟಿದ್ದು ಅವರ ಬದುಕಿನ ಅತ್ಯಂತ ಅಪಾಯಕಾರಿ ಅಧ್ಯಾಯ.

ಸಮುದ್ರದ ಮೇಲ್ಮೈ ಹಿಮದಿಂದ ಆವೃತವಾಗಿದ್ದರೂ, ಅದು ಸ್ಥಿರವಾದ ನೆಲವಾಗಿರಲಿಲ್ಲ. ಚಲಿಸುವ ಹಿಮದ ಪದರಗಳು, ಬಿರುಕುಗಳು, ಹಿಮಗಡ್ಡೆಗಳ ನಡುವೆ ಹರಿಯುವ ಸಮುದ್ರದ ನೀರು ಮತ್ತು ಮೈನಸ್ 30 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನ ಅವರನ್ನು ಪರೀಕ್ಷಿಸಿದವು. ಬುಷ್ಬಿ ಜೊತೆಗೆ ಫ್ರೆಂಚ್-ಅಮೆರಿಕನ್ ಸಾಹಸಿ ದಿಮಿತ್ರಿ ಕೀಫರ್ ಕೆಲದೂರ ನಡಿಗೆ ಕೈಗೊಂಡಿದ್ದರು. ಒಂದು ಹಂತದಲ್ಲಿ ಅವರು ಸಾಗಿಸುತ್ತಿದ್ದ ಸುಮಾರು 90 ಕೆ.ಜಿ. ತೂಕದ ಸಾಮಗ್ರಿಗಳಿದ್ದ ಸ್ಲೆಡ್‌ಗಳು ಹಿಮದ ಪದರ ಒಡೆದು ಸಮುದ್ರದೊಳಗೆ ಬಿದ್ದವು.

ಆಹಾರ ಮತ್ತು ಬದುಕುಳಿಯಲು ಬೇಕಾದ ಸಾಮಗ್ರಿಗಳನ್ನೇ ಕಳೆದುಕೊಳ್ಳುವ ಅಪಾಯ. ಪ್ರಾಣದ ಹಂಗು ತೊರೆದು ಅವುಗಳನ್ನು ಉಳಿಸಿಕೊಂಡರು. ಇದರ ನಡುವೆ ಹಿಮಕರಡಿಯ ಮುಖಾಮುಖಿ. ಇಬ್ಬರ ಬಳಿ ಇದ್ದ ಪಟಾಕಿಗಳೂ ಅದನ್ನು ಹೆದರಿಸಲು ಶಕ್ತವಾಗಲಿಲ್ಲ. ಅದು ದಾಳಿ ಮಾಡಲು ನಿರ್ಧರಿಸಿದ್ದರೆ ತಪ್ಪಿಸಿಕೊಳ್ಳುವ ದಾರಿಯಿರಲಿಲ್ಲ. ಅದೃಷ್ಟವಶಾತ್ ಕರಡಿ ಮನಸ್ಸು ಬದಲಿಸಿ ಅಲ್ಲಿಂದ ಹೊರಟುಹೋಗಿ ಇವರನ್ನು ಬದುಕಿಸಿತು.

14 ದಿನಗಳ ಹಿಮದ ಮೇಲಿನ ಪ್ರಯಾಣ ಮುಂದುವರಿದು ಇನ್ನೇನು ಆಹಾರ ಮುಗಿಯುವ ಹಂತ ದಲ್ಲಿದ್ದಾಗ ರಷ್ಯಾದ ನೆಲ ತಲುಪಿದರು. ಗೂಢಚಾರರೆಂಬ ಅನುಮಾನದ ಮೇಲೆ ಇಬ್ಬರನ್ನೂ ಬಂಧಿಸಲಾಯಿತು. ಅಲ್ಲಿ ಇವರನ್ನು ಗಡಿಪಾರು ಮಾಡಿದರು. ವೀಸಾ ಸಮಸ್ಯೆಗಳು, ರಾಜಕೀಯ ಅಡ್ಡಿಗಳು, ಪ್ರಾಯೋಜಕರ ಆರ್ಥಿಕ ನೆರವು ಸ್ಥಗಿತಗೊಂಡಿದ್ದು, ಕೋವಿಡ್ ಸಾಂಕ್ರಾಮಿಕ ಅವರ ಪ್ರಯಾಣವನ್ನು ಹಲವು ವರ್ಷ ನಿಧಾನಗೊಳಿಸಿದವು. ಆದರೆ ತಮ್ಮ ನಿಯಮಗಳನ್ನು ಅವರು ಸಡಿಲಿಸಲಿಲ್ಲ.

ವಾಹನದಲ್ಲಿ ಒಂದು ಕಿಲೋಮೀಟರ್ ಸಾಗಿದರೂ ತಮ್ಮ ಸಾಹಸದ ಮೂಲ ಉದ್ದೇಶಕ್ಕೆ ಧಕ್ಕೆ ಎಂಬುದು ಅವರ ನಿಲುವಾಗಿತ್ತು. 2024ರಲ್ಲಿ ಇರಾನ್ ಅಥವಾ ರಷ್ಯಾ ಮೂಲಕ ಸಾಗುವ ಬದಲು ಕ್ಯಾಸ್ಪಿಯನ್ ಸಮುದ್ರವನ್ನು ಈಜಿಯೇ ದಾಟಲು ನಿರ್ಧರಿಸಿದರು. ಸುಮಾರು 300 ಕಿಲೋಮೀಟರ್ ದೂರವನ್ನು 31 ದಿನಗಳಲ್ಲಿ ಈಜಿ ಕ್ರಮಿಸಿದರು. ನಂತರ ಯುರೋಪ್ ತಲುಪಿ ಇಂಗ್ಲೆಂಡ್ ಕಡೆಗೆ ತಮ್ಮ ನಡಿಗೆ ಮುಂದುವರಿಸಿದರು. ಬ್ರಿಟನ್ ತಲುಪುವ ಕೊನೆಯ ಹಂತದಲ್ಲೂ ಚಾನೆಲ್ ಟನೆಲ್ ಮೂಲಕ ನಡೆದು ಬರಲು ಅನುಮತಿ ಸಿಗಲಿಲ್ಲ. ಹೀಗಾಗಿ ಇಂಗ್ಲಿಷ್ ಚಾನೆಲ್ ಅನ್ನು ಈಜಿಯೇ ದಾಟಿದರು. ಉತ್ತಮ ಈಜುಗಾರನಲ್ಲದ ಬುಷ್ಬಿ, ವಿಶೇಷ ಮ್ಯುಟೇಶನ್ ಉಡುಪುಗಳ ನೆರವಿನಿಂದ ಈಜಿದರು. ಆದರೆ ಇಂಥದ್ದೊಂದು ಸಾಹಸಕ್ಕೆ ತೆತ್ತ ಸಂಬಂಧಗಳ ಬೆಲೆಯೂ ದೊಡ್ಡದು. ಪ್ರಯಾಣದ ನಡುವೆ ಕೊಲಂಬಿಯಾದ ಮಹಿಳೆಯೊಬ್ಬಳೊಂದಿಗೆ ಏಳು ವರ್ಷಗಳ ಸಂಬಂಧ ಹೊಂದಿದ್ದರು. ನಂತರ ಜಪಾನ್ ನ ರಿಕಾ ಎಂಬ ಮಹಿಳೆಯೊಂದಿಗೆ ಮೂರು ವರ್ಷಗಳ ಕಾಲ ಪ್ರೀತಿ. ಆದರೆ ನಿರಂತರ ಪ್ರಯಾಣ, ದೂರ ಮತ್ತು ಅನಿಶ್ಚಿತತೆಯಿಂದ ಈ ಸಂಬಂಧಗಳು ಉಳಿಯಲಿಲ್ಲ.

ತಾಯಿ, ಮಗ ಮತ್ತು ಮೊಮ್ಮಗಳೊಂದಿಗಿನ ಸಂಬಂಧಗಳಿಗೂ ದೂರ ಪ್ರಯಾಣದ ಬೆಲೆ ತೆತ್ತರು. ಮಗನ ಪಾಲಿಗೆ ಈತ ಗೈರು. ಮೊಮ್ಮಗಳು ಹುಟ್ಟಿ ವರ್ಷಗಳ ಬಳಿಕ ನೋಡುತ್ತಿದ್ದಾನೆ. ಹಣದ ಸಮಸ್ಯೆಯೂ ಕಾಡಿತು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಪ್ರಾಯೋಜಕರ ನೆರವು ಸ್ಥಗಿತಗೊಂಡಿತು. ಹಲವು ವರ್ಷ ಮೆಕ್ಸಿಕೊದಲ್ಲಿ ಉಳಿದು ಜೀವನ ನಿರ್ವಹಣೆಗಾಗಿ ಕೆಲಸ ಮಾಡಬೇಕಾಯಿತು.

ವೀಸಾ ಸಮಸ್ಯೆಗಳು, ಕೋವಿಡ್ ಮತ್ತು ಅಂತಾರಾಷ್ಟ್ರೀಯ ರಾಜಕೀಯ ಸಂಘರ್ಷಗಳು ಅವರ ಪ್ರಯಾಣವನ್ನು ಮತ್ತೆ ಮತ್ತೆ ತಡೆದವು. 1998ರ ನವೆಂಬರ್ 1ರಂದು ಚಿಲಿಯಿಂದ ಹೊರಟಿದ್ದ ಬುಷ್ಬಿ, 2026ರ ನವೆಂಬರ್ 2ರಂದು ತಮ್ಮ ತಾಯಿಯ ಮನೆ ಇರುವ ಹಲ್ ನಗರ ತಲುಪಿದರು. 28 ವರ್ಷ ಕಾಲ, 58 ಸಾವಿರ ಕಿ.ಮೀ. ನಡಿಗೆ. ನಾಲ್ಕು ಖಂಡಗಳು ಮತ್ತು ಸುಮಾರು 30 ದೇಶಗಳ ಪ್ರಯಾಣ.

ಇಡೀ ಜಗತ್ತನ್ನು ನಿರಂತರವಾಗಿ ಕಾಲ್ನಡಿಗೆಯಲ್ಲಿ ಸುತ್ತಿದ ಅಪರೂಪದ ಸಾಹಸಿಗಳ ಸಾಲಿನಲ್ಲಿ ತಮ್ಮ ಹೆಸರನ್ನು ದಾಖಲಿಸಿದ ಬುಷ್ಬಿ, ಇದರಿಂದ ಪಡೆದದ್ದೇನು? ಬುಷ್ಬಿಯ ನಡಿಗೆಗೆ ಬಹು ಆಯಾಮ, ಅರ್ಥಗಳಿವೆ. ಸೇನೆಯಲ್ಲಿದ್ದಾಗ ಅವರು ದೂರ ಓಡುವುದನ್ನು ಇಷ್ಟಪಡುತ್ತಿದ್ದರು. ಒಂದು ದಿನ ಓಡದೆ ಇದ್ದರೆ ತೀವ್ರ ಆತಂಕ ಪಡುತ್ತಿದ್ದರು. ಈ ಸಮಸ್ಯೆ ಮೀರಲು ವರ್ತನಾ ಮನೋವಿಜ್ಞಾನ ತಜ್ಞರ ನೆರವನ್ನೂ ಪಡೆದರು.

ಅಂಥ ಸಂದರ್ಭದಲ್ಲಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು, ಮನಸ್ಸಿನ ಅಶಾಂತಿಯಿಂದ ಹೊರ ಬರಲು, ಬದುಕಿಗೆ ಒಂದು ಸ್ಪಷ್ಟ ಉದ್ದೇಶ ಕಂಡುಕೊಳ್ಳಲು ಈ ದೀರ್ಘ ನಡಿಗೆ ಮಾರ್ಗವಾಯಿತು. ಒಂದು ಸಂದರ್ಶನದಲ್ಲಿ ಅವರು ಬದುಕಿನ ನಶ್ವರತೆಯ ಬಗ್ಗೆ ಮಾತನಾಡಿದ್ದಾರೆ. ಮನುಷ್ಯನಿಗೆ ಇರುವುದು ಒಂದೇ ಬದುಕು. ಅದು ಮುಗಿಯುವ ಮೊದಲು ಏನನ್ನಾದರೂ ಅರ್ಥಪೂರ್ಣವಾಗಿ ಮಾಡಬೇಕೆಂಬ ತೀವ್ರ ಹಂಬಲ. ಹೀಗಾಗಿ ಇದು ಬದುಕನ್ನು ಸಂಪೂರ್ಣವಾಗಿ ಅನುಭವಿಸಿದ ಪ್ರಯತ್ನವೂ ಹೌದು. ಈ ಪ್ರಯಾಣದಲ್ಲಿ ಅವರು ಕಂಡುಕೊಂಡ ಮತ್ತೊಂದು ಸಂಗತಿಯೆಂದರೆ ಮನುಷ್ಯರಲ್ಲಿರುವ ಒಳ್ಳೆಯತನ. ಆರಂಭದಲ್ಲಿ ಮಾನವೀಯತೆಯ ಬಗ್ಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯವಿರಲಿಲ್ಲವಂತೆ ಅವರಿಗೆ. ದಾರಿಯಲ್ಲಿ ಎದುರಾದ ಅಪರಿಚಿತರೇ ಬದುಕಿನ ಪಾಠ ಕಲಿಸಿದರು.

ಚಿಲಿಯ ಮರುಭೂಮಿಯಲ್ಲಿ ಸಾಗುವಾಗ ಲಾರಿ ಚಾಲಕರು ನೀರಿನ ಬಾಟಲಿ ಮತ್ತು ಹಣ್ಣು ನೀಡುತ್ತಿದ್ದರು. ಬಡತನದಲ್ಲಿ ಬದುಕುತ್ತಿದ್ದ ಅಪರಿಚಿತ ಕುಟುಂಬಗಳು ಊಟ ನೀಡುತ್ತಿದ್ದವು. ಕೆಲವರು ನೂರಾರು ಕಿ.ಮೀ. ದೂರದಿಂದ ಬಂದು ಆಹಾರ ಒದಗಿಸುತ್ತಿದ್ದರು. ಒಬ್ಬ ಅಪರಿಚಿತ ಅವರಿಗೆ ಆಹಾರದ ಕೂಪನ್‌ಗಳ ದೊಡ್ಡ ಪುಸ್ತಕವನ್ನೇ ಗಿಫ್ಟ್ ಕೊಟ್ಟಿದ್ದ. ‌

ಇಂಥ ಅನುಭವಗಳು ಜನರ ಬಗ್ಗೆ ಅವರ ದೃಷ್ಟಿಕೋನ ಬದಲಿಸಿದವು. ಮನೆ ತಲುಪಿದ ಬಳಿಕ, ಮುಂದೇನು ಮಾಡಬೇಕು ಎಂಬ ಪ್ರಶ್ನೆಯೇ ಈಗ ಬುಷ್ಬಿಯನ್ನು ಕಾಡುತ್ತಿದೆ. ಇಷ್ಟು ವರ್ಷ ಬದುಕಿಗೆ ಒಂದು ಸ್ಪಷ್ಟ ಗುರಿಯಿತ್ತು. ಪ್ರತಿದಿನ ಎದ್ದು ಎಲ್ಲಿಗೆ ಹೋಗಬೇಕು, ಎಷ್ಟು ದೂರ ನಡೆಯಬೇಕು ಎಂಬುದು ಗೊತ್ತಿತ್ತು. ಈಗ ಆ ಗುರಿ ಮುಗಿದಿದೆ. ಅವರ ಮಾತಿನ ಹೇಳುವುದಾದರೆ, ಬದುಕಿನ ಉದ್ದೇಶವೇ ಹಠಾತ್ತನೆ ಕೊನೆಗೊಂಡಿದೆ ಎಂಬ ಆತಂಕ ಎದುರಾಗಿದೆ. ಮತ್ತೆ ಹೊಸ ಕೆಲಸ ಹುಡುಕಬೇಕು, ಕುಟುಂಬದೊಂದಿಗೆ ಸಂಬಂಧ ಬೆಸೆಯಬೇಕು, ಸಾಮಾನ್ಯ ಬದುಕಿಗೆ ಹೊಂದಿಕೊಳ್ಳ ಬೇಕು ಎಂಬ ಸವಾಲು. ನಡಿಗೆ ಮುಗಿದಿದೆ, ಆದರೆ ಬದುಕು ಅಷ್ಟು ಸರಳವಾಗಿ ಮುಗಿಯದು. ಬುಷ್ಬಿಯ ಮುಂದೆ ತನ್ನ ಸಾಹಸದ ಬಗ್ಗೆ ಪುಸ್ತಕ ಬರೆಯುವ, ಡಾಕ್ಯುಮೆಂಟರಿ ಮಾಡುವ ಆಫರ್‌ಗಳಿವೆ.

ವಾಕಿಂಗ್‌ನಿಂದ ಮನುಷ್ಯ ಏನನ್ನು ಪಡೆಯಬಹುದು? ರೇಷ್ಮೆ ಮಾರ್ಗದಲ್ಲಿ ನಡೆದ ಯಾತ್ರಿಕರು ಸಾಮ್ರಾಜ್ಯಗಳನ್ನು ಬೆಸೆದರು. ಬೌದ್ಧ ಭಿಕ್ಷುಗಳು ಜಗತ್ತಿನ ಒಂದು ಕಡೆಯಿಂದ ಇನ್ನೊಂದು ಕಡೆ ನಡೆದು ಧರ್ಮ ಹರಡಿದರು. ಅನೇಕರು ಸಂಸ್ಕೃತಿ, ಜ್ಞಾನ, ನಂಬಿಕೆಗಳನ್ನು ವಿನಿಮಯಿಸಿದರು. ಗಾಂಧಿ ದಾಂಡಿ ಯಾತ್ರೆಯಿಂದ ಒಂದು ಸಾಮ್ರಾಜ್ಯವನ್ನು ಕದಲಿಸಿದರು. ನಾವು ಸಾಮಾನ್ಯರು. ಆದರೆ ನಮ್ಮೊಳಗಿನ ಇನ್ನೊಬ್ಬ ಕುತೂಹಲಿ, ಸಾಹಸಿ ಮನುಷ್ಯನನ್ನು ನಡಿಗೆಯಿಂದ ಕಂಡುಕೊಳ್ಳಲು ಸಾಧ್ಯ. ಬುಷ್ಬಿ ಅದನ್ನು ತೋರಿಸಿದ್ದಾರೆ.

ಹರೀಶ್‌ ಕೇರ

View all posts by this author