Srivathsa Joshi Column: ಅಳಿಲೇ ಅಳಿಲೇ ಚಂದವಿರುವ ನಿನಗೊಂದು ಫೋಟೋ ತೆಗೆಯಲೇ ?
ಮೊದಲನೆ ಯದಾಗಿ, ಬೇಗಡೆ ಎಂಬ ಪದ ಕರ್ನಾಟಕದ ಬೇರೆ ಭಾಗಗಳಲ್ಲಿ ಅಷ್ಟೊಂದು ಪ್ರಚಲಿತ ವಿದೆಯೋ, ಅಲ್ಲಿಯವರಿಗೆ ಪರಿಚಿತವಿದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲೆಲ್ಲ ಬಹುಶಃ ಬೇಗಡೆ ಎಂದರೆ ಶಾಸೀಯ ಸಂಗೀತದ ಒಂದು ರಾಗ, ಸೀನು-ಸುಬ್ಬು ಜೋಡಿಯು ಶೇಕ್ ಟ್ವಿಸ್ಟ್ ಕುಣಿಯುತ್ತ ಬೀಟಲ್ಸ್ ಹಾಡುವ ರಾಗ ಎಂದಷ್ಟೇ ಗೊತ್ತಿರುವುದಿರಬಹುದು


ತಿಳಿರುತೋರಣ
srivathsajoshi@yahoo.com
ಅಳಿಲಿನ ಬಾಲಕೆ| ಹೊಳೆಯುವ ಬೇಗಡೆ| ಅಳತೆಯ ಲಂಟಿಸಿ| ಕುಳಿತ ಸುಪ್ರಭಾತ’- ಸುಪ್ತದೀಪ್ತಿ ಎಂಬ ಕಾವ್ಯನಾಮದಿಂದ ಬರೆಯುವ ಕವಯಿತ್ರಿ ಸ್ನೇಹಿತೆ ಜ್ಯೋತಿ ಮಹಾದೇವ್ ಬರೆದ ನಾಲ್ಕು ಸಾಲುಗಳಿವು. ಹತ್ತಿಪ್ಪತ್ತು ವರ್ಷಗಳ ಹಿಂದೆ ಅಮೆರಿಕನ್ನಡಿತಿ ಆಗಿದ್ದ ಜ್ಯೋತಿ ಈಗ ಮಣಿಪಾಲ ನಿವಾಸಿ. ಮೂಲತಃ ನಮ್ಮ ಕಾರ್ಕಳದವರು. ಒಂದೇ ಹೈಸ್ಕೂಲಲ್ಲಿ ನಾನು 8ನೆಯಲ್ಲಿದ್ದಾಗ ಅವರು 10ನೆಯಲ್ಲಿದ್ದವರು. ಅಕ್ಷರಪ್ರೀತಿಯ ದೆಸೆಯಿಂದ ನಾವು ಈಗಲೂ ಸ್ನೇಹಸಂಪರ್ಕದಲ್ಲಿ ಇದ್ದೇವೆ. ಪ್ರತಿದಿನ ವಾಟ್ಸ್ಯಾಪ್ ನಲ್ಲಿ ಅವರ ಮುಂಜಾವಿನ ಮಾತು ಇಂಥದೊಂದು ಪುಟ್ಟ ಸ್ವರಚಿತ ಕವಿತೆಯ ರೂಪದಲ್ಲಿರುತ್ತದೆ. ಬಹುತೇಕವಾಗಿ ಅದು ಮುಂಜಾನೆಯದೊಂದು ಸುಂದರ ದೃಶ್ಯ ವನ್ನು, ಬಾಲರವಿಯ ಲೀಲೆಗಳನ್ನು ತುಂಟ ಹುಡುಗನೊಬ್ಬನ ಪೋಕರಿ ಕೃತ್ಯಗಳೋ ಎಂಬಂತೆ ಅಕ್ಷರಗಳಲ್ಲಿ ಚಿತ್ರಿಸಿದ್ದಾಗಿರುತ್ತದೆ.
ಕೆಲವೊಮ್ಮೆ ಚಿಂತನೆಗೆ ಹಚ್ಚುವಂಥದ್ದಾದರೆ ಕೆಲವೊಮ್ಮೆ ಕಚಗುಳಿಯಿಟ್ಟು ನಗಿಸುವಂಥದ್ದು. ಒಟ್ಟಿನಲ್ಲಿ ಓದಿದವರಿಗೆ ಆ ದಿನವನ್ನು ಉಜ್ಜ್ವಲಗೊಳಿಸುವ ರೀತಿಯಲ್ಲಿರುತ್ತದೆ. ಪ್ರಸ್ತುತ ಈ ‘ಚುಟುಕವಿತೆ’ಯಂತೂ ನನಗೆಷ್ಟು ಇಷ್ಟವಾಯ್ತೆಂದರೆ ಒಮ್ಮೆ ಓದಿ ವಾಟ್ಸ್ಯಾಪ್ ಮೆಸೇಜ್ ಡಿಲೀಟ್ ಮಾಡಿದ್ದೆನಾದ್ದರಿಂದ ಆನ್-ಡಿಮಾಂಡ್ ಮತ್ತೊಮ್ಮೆ ಜ್ಯೋತಿಯವರಿಂದ ತರಿಸಿಕೊಂಡು ಓದಿ ಆನಂದಿಸಿದೆ. ಕವಿತೆ ಪಕ್ಕಾ ಛಂದೋಬದ್ಧ ಅಲ್ಲದಿದ್ದರೂ ದ್ವಿತೀಯಾಕ್ಷರ ಪ್ರಾಸವಿದೆ, ತಲಾ ಏಳು ಅಕ್ಷರಗಳ ನಾಲ್ಕು ಸಾಲುಗಳು ಅಚ್ಚುಕಟ್ಟಾಗಿ ಕಾಣುತ್ತವೆ- ಎಂಬ ಅಂಶವನ್ನು ನಾನಿದರಲ್ಲಿ ಗಮನಿಸಿ ಮೆಚ್ಚಿಯೇ ಮೆಚ್ಚಿದೆ; ಆದರೆ ನನ್ನ ಆನಂದಕ್ಕೆ ಮುಖ್ಯ ಕಾರಣ ಅದಲ್ಲ.
ಮತ್ತೇನು ಎನ್ನುವಿರೋ? ಆಗಲೇ ಹೇಳಿದಂತೆ, ಬಾಲರವಿಯ ಲೀಲೆಗಳನ್ನು ತುಂಟ ಹುಡುಗ ನೊಬ್ಬನ ಪೋಕರಿ ಕೃತ್ಯದಂತೆ ಚಿತ್ರಿಸಿರುವುದು. ಅದು ಹೇಗೆಂದು ನೋಡೋಣ. ಮೊದಲನೆ ಯದಾಗಿ, ಬೇಗಡೆ ಎಂಬ ಪದ ಕರ್ನಾಟಕದ ಬೇರೆ ಭಾಗಗಳಲ್ಲಿ ಅಷ್ಟೊಂದು ಪ್ರಚಲಿತವಿದೆಯೋ, ಅಲ್ಲಿಯವರಿಗೆ ಪರಿಚಿತವಿದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲೆಲ್ಲ ಬಹುಶಃ ಬೇಗಡೆ ಎಂದರೆ ಶಾಸ್ತ್ರೀಯ ಸಂಗೀತದ ಒಂದು ರಾಗ, ಸೀನು-ಸುಬ್ಬು ಜೋಡಿಯು ಶೇಕ್ ಟ್ವಿಸ್ಟ್ ಕುಣಿಯುತ್ತ ಬೀಟಲ್ಸ್ ಹಾಡುವ ರಾಗ ಎಂದಷ್ಟೇ ಗೊತ್ತಿರುವುದಿರಬಹುದು.
ಇದನ್ನೂ ಓದಿ: Srivathsa Joshi Column: ಆದಾಧಿಸುವೆ ಮದನಾರಿ ಹಾಡಿನ ತತ್ತಧೀಂ ತಕಿಟ ತಕತಧೀಂ ತಕಿಟ...
ಆದರೆ ಉಡುಪಿ-ದಕ್ಷಿಣಕನ್ನಡ ಪ್ರದೇಶದವರಿಗೆ ಹಾಗಲ್ಲ. ನಮಗೆ ಬೇಗಡೆ ಎಂಬ ಪದ ಕಣ್ಣಿಗೆ ಕಂಡರೆ/ಕಿವಿಗೆ ಬಿದ್ದರೆ ಸಾಕು ಅದೇ ಒಂದು ನೊಸ್ಟಾಲ್ಜಿಯಾ ಟ್ರಿಗ್ಗರ್ ಆಗಬಲ್ಲದು. ಏಕೆಂದರೆ ನಾವು ಚಾಕೊಲೇಟ್ ಪೆಪ್ಪರ್‌ಮಿಂಟ್ ರ‍್ಯಾಪರ್ ಅನ್ನೂ ಬೇಗಡೆ ಎನ್ನುತ್ತೇವೆ, ಸಿಗರೇಟ್ ಪ್ಯಾಕ್‌ನೊಳಗೆ ಇರುವ ಸಿಲ್ವರ್ ಫಾಯಿಲ್ ಅನ್ನೂ ಬೇಗಡೆ ಎನ್ನುತ್ತೇವೆ, ಕಾಜೂಬರ್ಫಿಯ ಮೇಲಿರುವ ತೆಳ್ಳನೆಯ ಕೃತಕ ಬೆಳ್ಳಿ ಎರಕವನ್ನೂ ಬೇಗಡೆ ಎನ್ನುತ್ತೇವೆ, ರಂಗಮಂಟಪಕ್ಕೆ ಬೆಳಕು ಹಾಯಿಸುವ ವಿದ್ಯುದ್ದೀಪ ಗಳ ಮೇಲೆ ಹಿಡಿದು ವಿವಿಧ ವರ್ಣಗಳನ್ನು ಸೃಷ್ಟಿಸಲಿಕ್ಕೆ ಬಳಸುವ ಪಾರದರ್ಶಕ ಬಣ್ಣಕಾಗದ ವನ್ನೂ ಬೇಗಡೆ ಎನ್ನುತ್ತೇವೆ, ಮತ್ತು ಯಕ್ಷಗಾನ ಬಯಲಾಟದ ವೇಷಭೂಷಣಗಳು ಬೆಳ್ಳಿ-ಚಿನ್ನದವು ಎಂದೆನಿಸುವಂತೆ ಒಂದು ಬದಿ ಮಾತ್ರ ಹೊಳೆಯುವ ಅಪಾರದರ್ಶಕ ಬಣ್ಣಕಾಗದವನ್ನೂ ಬೇಗಡೆ ಎನ್ನುತ್ತೇವೆ! ಚಾಕೊಲೇಟ್/ಪೆಪ್ಪರ್‌ಮಿಂಟ್ ಬೇಗಡೆಗಳನ್ನಂತೂ ಬಣ್ಣಬಣ್ಣದವನ್ನು ಸಂಗ್ರಹಿಸಿ ಹೂಮಾಲೆಗಿಂತಲೂ ಚಂದದ ಮಾಲೆ ಮಾಡಿ ದೇವರ ಪಟಕ್ಕೆ ಹಾಕಿರುವ ದೃಶ್ಯ ಕರಾವಳಿಯ ಮನೆಗಳ ಪಡಸಾಲೆಗಳಲ್ಲಿ, ದೇವರಕೋಣೆಗಳಲ್ಲೂ ಅಪರೂಪದ್ದೇನಲ್ಲ.

ಅಳಿಲಿನ ಬಾಲಕ್ಕೆ ಅಂಟಿಸಿದ್ದು ಯಾವ ಥರದ ಬೇಗಡೆ ಇರಬಹುದು ಎಂದು ನಾನು ಯೋಚಿಸು ತ್ತೇನೆ. ‘ರಂಗಮಂಟಪಕ್ಕೆ ಬೆಳಕು ಹಾಯಿಸುವ ವಿದ್ಯುದ್ದೀಪಗಳ ಮೇಲೆ ಹಿಡಿದು ವಿವಿಧ ವರ್ಣ ಗಳನ್ನು ಸೃಷ್ಟಿಸಲಿಕ್ಕೆ ಬಳಸುವ ಪಾರದರ್ಶಕ ಬಣ್ಣಕಾಗದ’ ಎಂದೆನಲ್ಲ, ಬಹುಶಃ ಅದೇ ಇರಬೇಕು. ಹಳದಿ ಅಥವಾ ನಸುಗೆಂಪು ಬಣ್ಣದ್ದು. ಅಳಿಲಿನ ಬಾಲ ಬಂಗಾರದ್ದೆಂಬಂತೆ ಕಾಣಬೇಕಿದ್ದರೆ ಅದಕ್ಕೆ ಹೊಂದುವ ಬಣ್ಣ.
ಬಾಲರವಿಯ ಬಳಿ ಅದಕ್ಕೇನು ಕೊರತೆಯೇ, ಮನೆಮನೆಯ ಮಾಡಿನ ಹುಲ್ಲಿನ ಮೇಲೆ ಚಿನ್ನದ ಗೆರೆಯನ್ನು ಎಳೆಯುವವನ ಬಳಿ ಚಿನ್ನದ ದಾಸ್ತಾನು ಎಷ್ಟಿದೆಯೋ ಏನೋ! ಈಶಾವಾಸ್ಯ ಉಪನಿಷತ್ತಿನಲ್ಲಿ ಹೇಳಿದೆಯಲ್ಲ, ‘ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್| ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ||’ ಎಂದು! ಹಾಗೆಂದರೆ ಏನೆಂಬ ಕುತೂಹಲ ವಿರುವವರಿಗೆ: ಸೂರ್ಯನು ಹೊರಸೂಸುವ ಬೆಳಕು ಚಿನ್ನದ ತಟ್ಟೆ ಇದ್ದಂತೆ.
ಪ್ರಪಂಚದಲ್ಲಿ ಜನಸಾಮಾನ್ಯರಿಗೆ ಕಾಣುವುದು ಅದೇ. ಆದರೆ ನಿಜವಾದ ಬೆಳಕು, ಸತ್ಯ ಎಂಬು ವುದು, ಆ ಚಿನ್ನದ ತಟ್ಟೆಯ ಹಿಂದೆ ಅವಿತಿರುತ್ತದೆ, ಅದನ್ನು ತೋರಿಸು ಎಂದು ಸೂರ್ಯನಲ್ಲಿ ಪ್ರಾರ್ಥನೆ. ಮಾಯೆ ಮತ್ತು ಮೋಹಗಳೆಂಬ ಭ್ರಾಮಕ ಬಂಗಾರದ ಪರದೆಯು ಸತ್ಯವನ್ನು ಮುಚ್ಚಿ ಡುತ್ತದೆ, ಅದನ್ನು ಸರಿಸಿ ನಾವು ಸತ್ಯವನ್ನು ಕಂಡುಕೊಳ್ಳಬೇಕು- ಎಂಬ ಆಳವಾದ ಆಧ್ಯಾತ್ಮಿಕ ಆಲೋಚನೆಯಿದು.
ನಮ್ಮ ಇಂದಿನ ವಿಚಾರಲಹರಿಗೆ ಅಷ್ಟು ಆಳವಾದ ಅಧ್ಯಾತ್ಮ ಬೇಡ. ಅದನ್ನು ವ್ಯಾಪ್ತಿಪ್ರದೇಶದಿಂದ ಹೊರಗಿಡೋಣ. ಅಳಿಲನ್ನಷ್ಟೇ ಅನುಸರಿಸೋಣ. ಹೊಳೆಯುವ ಬೇಗಡೆಯನ್ನು ಅಳಿಲಿನ ಬಾಲಕ್ಕೆ ಸುಮ್ಮನೆ ಹೇಗ್ಹೇಗೋ ಅಂಟಿಸಿದ್ದಲ್ಲ, ಅಳತೆ ಪ್ರಕಾರ ಅಂಟಿಸಿದ್ದು!
ಪ್ರಕೃತಿಯಲ್ಲಿ ಎಲ್ಲವೂ ಹಾಗೆಯೇ ಅಲ್ಲವೇ? ಒಂದುಚೂರೂ ಹೆಚ್ಚಿಲ್ಲ ಕಮ್ಮಿಯಿಲ್ಲ. ಯಾವ್ಯಾ ವುದು ಎಷ್ಟೆಷ್ಟು ಇರಬೇಕೋ ಅಷ್ಟೇ ಪ್ರಮಾಣಬದ್ಧವಾಗಿ ಇರುತ್ತದೆ. ಶಂಖದೊಳಗಿನ ಸುರುಳಿ ಗಳಾದರೂ ಅಷ್ಟೇ, ಸೂರ್ಯಕಾಂತಿ ಹೂವಿನೊಳಗೆ ಬೀಜಗಳ ವಿನ್ಯಾಸವಾದರೂ ಅಷ್ಟೇ- ಫಿಬೊ ನಾಚಿ ಸರಣಿಯನ್ನು ಅನುಸರಿಸುವುದಾದರೆ ಕಂ ಕಿಂ ಎನ್ನದೆ ಅನುಸರಿಸುತ್ತವೆ. ಪ್ರಕೃತಿಯ ಅಸಮ ತೋಲನ ಉಂಟಾದರೆ ಅದು ನಿರ್ದಯಿ ನಿರ್ಲಜ್ಜ ಸ್ವಾರ್ಥಿ ಮಾನವನಿಂದಲೇ ಹೊರತು ಬೇರಾರೂ ಹಾಳುಗೆಡಹುವುದಿಲ್ಲ.
ಆದ್ದರಿಂದ ಅಳಿಲಿನ ಬಾಲಕ್ಕೆ ಬಾಲರವಿ ಅಂಟಿಸುವ ಬೇಗಡೆಯೂ ಪರ್ಫೆಕ್ಟ್ ಮೆಷರ್‌ಮೆಂಟ್ ಆಗಬೇಕು. ಅದನ್ನು ಮೊದಲೊಮ್ಮೆ ಅಳೆದುನೋಡುವ ಬಾಲರವಿಯನ್ನು ಊಹಿಸಿದರೆ ಕುತ್ತಿಗೆಗೆ ಟೇಪ್ ಇಳಿಬಿಟ್ಟು ಪೆನ್ಸಿಲ್‌ನಿಂದ ಗುರುತುಹಾಕುವ, ಬರೆದುಕೊಳ್ಳುವ ಟೈಲರನ ನೆನಪಾಗುತ್ತದೆ ನನಗೆ! ಅಂದಹಾಗೆ, ಬಾಲದ ಉದ್ದವನ್ನು ಅಳೆಯುವಾಗ, ಬಾಲಕ್ಕೆ ಬೇಗಡೆ ಅಂಟಿಸುವಾಗ, ಅಳಿಲು ಬಾಲರವಿಯ ಕೈಗೆ ಆರಾಮಾಗಿ ಸಿಗುತ್ತದಲ್ಲ ಅದೇ ಸೋಜಿಗ! ಸದಾ ಚಲನಶೀಲ ಅಳಿಲು ನನ್ನ-ನಿಮ್ಮ ಕೈಗೆ ಆ ರೀತಿ ಸಿಗುವುದುಂಟೇ!? ಸಾಧ್ಯವೇ ಇಲ್ಲ.
ಬೆನ್ನು ತಟ್ಟಿ ಮೂರು ಗೆರೆ ಎಳೆಯಲಿಕ್ಕೆ ನಾವೇನು ಶ್ರೀರಾಮಚಂದ್ರ ಅಲ್ಲವಲ್ಲ! ಆಯ್ತು, ಅಳಿಲಿನ ಬಾಲಕ್ಕೆ ಬೇಗಡೆಯನ್ನು ಅಳತೆಪ್ರಕಾರ ಅಂಟಿಸಿದ್ದಾಯ್ತು. ಆಮೇಲೆ ಬಾಲರವಿ ಏನು ಮಾಡುತ್ತಾನೆ? ಏನಿಲ್ಲ ಒಂದುಕ್ಷಣ ಸುಮ್ಮನೆ ಕುಳಿತು ಅಳಿಲಿನ ಚಂದ ನೋಡುತ್ತಾನೆ. ನಮ್ಮನೆಯ ಬೆಕ್ಕು-ನಾಯಿ ಗಳಿಗೆ ಕೆಲವೊಮ್ಮೆ ಇಂಥದ್ದೇ ಏನೇನೋ ಕುಚೋದ್ಯದ ಸಿಂಗಾರಗಳನ್ನು ಮಾಡಿ ನಾವು ಕುಳಿತು ಅವುಗಳ ಹಾವಭಾವ ಅಂದಚಂದ ಗಮನಿಸುತ್ತೇವಲ್ಲ ಥೇಟ್ ಹಾಗೆಯೇ.
ಸರಿ, ಅಳಿಲು ಏನು ಮಾಡುತ್ತದೆ? ಒಂದೇ ಕಡೆ ಕೂತಿರುವುದು ಅದರ ಜಾಯಮಾನವೇ ಅಲ್ಲ, ಅದು ಮರವನ್ನೇರಿ ಎಲ್ಲೋ ಮರೆಯಾಗುತ್ತದೆ. ಬಾಲರವಿಯೂ ಆಕಾಶವೇರಿ ಲೋಕೋಪಕಾರಿ ಕೆಲಸ ಗಳತ್ತ ತನ್ನ ಗಮನ ಹರಿಸುತ್ತಾನೆ. ಇದಿಷ್ಟೂ ಬೆಳ್ಳಂಬೆಳಗ್ಗೆ ನಿಮ್ಮ ಕಣ್ಮುಂದೆಯೇ ನಡೆದ ವಿದ್ಯ ಮಾನ ಅಂತಿಟ್ಟುಕೊಳ್ಳಿ. ಈಗ ಕಹಾನಿಗೊಂದು ಟ್ವಿಸ್ಟ್.
ಅಳಿಲು ಮರೆಯಾದರೂ ಅದರ ಬಾಲದ ಬೇಗಡೆ ಏನಾಯ್ತು ಎಂದು ನಿಮಗೆ ಕುತೂಹಲ. ಚಿನ್ನದ್ದೇ ಆಗಿದ್ದರೆ, ಕೈಗೆ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂಬ ದುರಾಸೆಯಂತೂ ಬಿಲ್‌ಕುಲ್ ಅಲ್ಲ. ಆದರೆ ಬೇಗಡೆ ಅಂಟಿಸಿದ ಬಾಲವುಳ್ಳ ಅಳಿಲಿನದೊಂದು ಫೋಟೊ ಕ್ಲಿಕ್ಕಿಸಿ ಫೇಸ್‌ಬುಕ್ ಗೋಡೆಗೆ ಅಂಟಿಸೋಣ, ಒಂದಿಷ್ಟು ಲೈಕುಗಳೂ ಕಾಮೆಂಟ್‌ಗಳೂ ಬರಲಿ ಅಂತಷ್ಟೇ.
ಸರಿ, ಹೆಗಲಿಗೆ ಕ್ಯಾಮೆರಾ ಕಿಟ್ ಏರಿಸಿಕೊಂಡು ತಲೆಗೆ ಹ್ಯಾಟ್ ಇಟ್ಟುಕೊಂಡು ಒಳ್ಳೇ ವೈಲ್ಡ್‌ಲೈ- ಫೋಟೊಗ್ರಾಫರರಂತೆ ನೀವು ಮನೆಯಿಂದ ಹೊರಡುತ್ತೀರಿ. ‘ನೇಚರ್’ ಪತ್ರಿಕೆಯ ಮುಖಪುಟದಲ್ಲಿ ಬರುವಷ್ಟು ನ್ಯಾಚುರಲ್ ಆಗಿರುವಂತೆ ಈ ಅಳಿಲಿನ ಫೋಟೊ ತೆಗೆಯಬೇಕೆಂದು ನಿಮ್ಮ ಮಹದಾಸೆ. ನಿಮ್ಮ ಅದೃಷ್ಟಕ್ಕೆ, ಹತ್ತಿರದಲ್ಲೇ ಒಂದು ದೊಡ್ಡ ಮರದ ಕಾಂಡವನ್ನಾಧರಿಸಿ ಕುಳಿತಿದೆ ಅಳಿಲು!
ನಿಮ್ಮ ದೃಷ್ಟಿಗೆ ಗೋಚರಿಸಿದೆ. ಅದರ ಬಾಲಕ್ಕೆ ಬೇಗಡೆ-ಗೀಗಡೆ ಏನೂ ಇರದಿದ್ದರೂ, ಪರವಾಇಲ್ವೇ ಒಳ್ಳೇ ಪೋಸ್ ಕೊಟ್ಟು ಕೂತಿದೆಯಲ್ಲ, ಫೋಟೊ ಕ್ಲಿಕ್ಕಿಸಿಯೇಬಿಡೋಣ ಎಂದು ನೀವು ಸನ್ನದ್ಧ ರಾಗುತ್ತೀರಿ. ಅಷ್ಟರಲ್ಲಿ ಅಳಿಲು ನಿಮ್ಮ ಕಣ್ತಪ್ಪಿಸಿಕೊಳ್ಳುತ್ತದೆ. ಅದೇನೂ ದೂರ ಓಡಿಹೋಗುವು ದಿಲ್ಲ, ಮರ ಏರುವುದೂ ಇಲ್ಲ. ಅಲ್ಲೇ ನಿಮ್ಮ ಕಣ್ಣುಗಳ ನೋಟದ ಮಟ್ಟಕ್ಕೇ ಮರದ ಕಾಂಡದ ಇನ್ನೊಂದು ಬದಿಗೆ (ಅಂದರೆ ಮೊದಲಿದ್ದ ಸ್ಥಳಕ್ಕೆ 180 ಡಿಗ್ರಿಗಳಷ್ಟು) ಹೋಗಿ ಕುಳಿತುಕೊಳ್ಳುತ್ತದೆ.
ಎಲಾಇವ್ನ ಅಲ್ಲಿ ಅಡಗಿದೆಯಾ ಅಂತ ನೀವೂ ಅರ್ಧ ಪ್ರದಕ್ಷಿಣೆ ಬಂದು ಮತ್ತೆ ಅದರೆದುರಿಗೆ ಪ್ರತ್ಯಕ್ಷರಾಗುತ್ತೀರಿ. ನಿಮ್ಮನ್ನು ಕಂಡ ಅಳಿಲು ಮತ್ತೊಮ್ಮೆ 180 ಡಿಗ್ರಿಯಷ್ಟು ಸರಿದು (ಅಂದರೆ ಮೊದಲು ಎಲ್ಲಿತ್ತೋ ಅಲ್ಲಿಗೆ) ಹೋಗಿ ಕೂರುತ್ತದೆ. ಅದನ್ನೇ ಅನುಸರಿಸುತ್ತ ನೀವೂ ನಿಮ್ಮ ಪ್ರದಕ್ಷಿಣೆ ಯನ್ನು ಮುಗಿಸುತ್ತೀರಿ. ಏನು ಮಾಡಿದರೂ ಅಳಿಲು ಒಂದೇಕಡೆ ಇರುವುದೇ ಇಲ್ಲ. ತಾನೂ ಮರವನ್ನು ಸುತ್ತುತ್ತದೆ, ನಿಮ್ಮನ್ನೂ ಸುತ್ತಿಸುತ್ತದೆ. ಈ ಕಣ್ಣುಮುಚ್ಚಾಲೆ ಮತ್ತು ರೌಂಡ್ ಆಂಡ್ ರೌಂಡ್ ಆಂಡ್ ರೌಂಡ್... ಸುತ್ತಾಟ ಗಂಟೆಗಟ್ಟಲೆ ಹೀಗೆಯೇ ಮುಂದುವರಿಯುತ್ತದೆ.
ಅಳಿಲು ಮರವನ್ನು ಸುತ್ತುತ್ತಿದೆ ಅಂತ ನಿಮಗೆ ಗೊತ್ತಿದೆ. ಅದನ್ನು ಅನುಸರಿಸುತ್ತ ನೀವೂ ಮರವನ್ನು ಸುತ್ತುತ್ತಿದ್ದೀರಿ ಎಂದು ಕೂಡ ನಿಮಗೆ ಗೊತ್ತಿದೆ. ಆದರೆ, ಹಾಗೆ ಮಾಡುವಾಗ ಅಳಿಲನ್ನೂ ನೀವು ಸುತ್ತುತ್ತಿದ್ದೀರಾ? ಅದೇ ಇಂಟರೆಸ್ಟಿಂಗ್ ಪ್ರಶ್ನೆ! ಅದರ ಉತ್ತರ ನೀವು ಅಂದುಕೊಂಡದ್ದಕ್ಕಿಂತ ಹೆಚ್ಚು ಇಂಟರೆಸ್ಟಿಂಗ್ ಆಗಿದೆ! ಮೊದಲಿಗೆ, ಈ ಸನ್ನಿವೇಶವನ್ನೇ ಹೋಲುವ ಇನ್ನೊಂದೆರಡು ಉದಾಹರಣೆಗಳನ್ನು ನೋಡೋಣ.
ನಿಮ್ಮೆರಡೂ ಕೈಗಳ ಮುಷ್ಟಿ ಕಟ್ಟಿಕೊಂಡು ಒಂದರ ಸುತ್ತ ಇನ್ನೊಂದು ತಿರುಗಿಸುವುದನ್ನು ಕಲ್ಪಿಸಿ ಕೊಳ್ಳಿ. ಒಂದು ಕೈ ಇನ್ನೊಂದನ್ನು ಸುತ್ತುತ್ತಿದೆಯೇ? ಅದು ಬೇಡ, ವೃತ್ತಾಕಾರದ ಕ್ರೀಡಾಂಗಣದಲ್ಲಿ ಸ್ಕೇಟಿಂಗ್ ಮಾಡುತ್ತಿರುವ ಇಬ್ಬರನ್ನು ಊಹಿಸಿಕೊಳ್ಳಿ. ಅದರಲ್ಲೊಬ್ಬರು ಕ್ರೀಡಾಂಗಣದ ಒಳವರ್ತುಲದಲ್ಲೂ ಇನ್ನೊಬ್ಬರು ಹೊರವರ್ತುಲದಲ್ಲೂ ಸ್ಕೇಟಿಂಗ್ ಮಾಡುತ್ತ ಸುತ್ತುತ್ತಿರಲಿ. ಹಾಗಿರುವಾಗ ಒಬ್ಬ ಕ್ರೀಡಾಳು ಇನ್ನೊಬ್ಬನನ್ನು ಸುತ್ತುತ್ತಿದ್ದಾನೆಯೇ? ಅಳಿಲಿನ ಫೊಟೊ ತೆಗೆಯುವ ನಿಮ್ಮ ಸಾಹಸದಲ್ಲಿ ಅಳಿಲಿನ ಚಲನವಲನ ಮತ್ತು ಅದನ್ನನುಸರಿಸಿ ನಿಮ್ಮ ಚಲನವಲನವೂ ಹಾಗೆಯೇ. ಅದರಲ್ಲೊಂದು ವಿಶಿಷ್ಟ ಸ್ವಾರಸ್ಯವಿದೆ, ಸೋಜಿಗವಿದೆ.
ಅದೇನೆಂದು ಈಗ ವಿವರಿಸುತ್ತೇನೆ. ಅಳಿಲನ್ನು ನೀವು ಸುತ್ತುತ್ತಿದ್ದೀರಾ ಎಂಬ ಪ್ರಶ್ನೆಗೆ ಹೆಚ್ಚಿನವರು ಹೌದು ಎಂದೇ ಉತ್ತರಿಸಬಹುದು. ಏಕೆಂದರೆ, ಫೋಟೊಗ್ರಾಫರ್ (ಅಂದರೆ ನೀವು) ಸುತ್ತುವ ವೃತ್ತದ ಒಳಗೇ ಅಳಿಲು ಸುತ್ತುವ ವೃತ್ತವಿರುವುದರಿಂದ ಅಳಿಲನ್ನು ಸುತ್ತಿದಂತೆಯೇ ಅರ್ಥ. ಅದನ್ನು ಬೇಕಿದ್ದರೆ ಒಂದು ಹಾಳೆಯ ಮೇಲೆ ಏಕಕೇಂದ್ರದ ಎರಡು ವೃತ್ತಗಳನ್ನೆಳೆದು ನಿರೂಪಿಸಬಹುದು. ಅಳಿಲಿನ ವೃತ್ತದ ತ್ರಿಜ್ಯ ಕಡಿಮೆ, ಫೊಟೊಗ್ರಾಫರ್‌ನ ವೃತ್ತದ ತ್ರಿಜ್ಯ ಹೆಚ್ಚು. ಹಾಗಾಗಿ ಫೋಟೊ ಗ್ರಾಫರ್ ಅಳಿಲನ್ನು ಸುತ್ತುತ್ತಾನೆ ಎಂದು ಸರಳವಾಗಿ ಪ್ರತಿಪಾದಿಸಬಹುದು.
ಆದರೆ, ಸ್ವಲ್ಪ ‘ತಲೆ ಓಡಿಸಿ’ ಉತ್ತರಿಸುವವರು ಫೋಟೊಗ್ರಾಫರ್ ಅಳಿಲನ್ನು ಸುತ್ತುತ್ತಿಲ್ಲ ಎನ್ನಬಹುದು! ಏಕೆ? ನಾವು ಯಾವುದೇ ವಸ್ತುವಿಗೆ ಸುತ್ತು ಬರುತ್ತಿದ್ದೇವೆ ಅಥವಾ ಪ್ರದಕ್ಷಿಣೆ ಹಾಕುತ್ತಿದ್ದೇವೆ ಎಂದರೇನು? ವಸ್ತುವಿನ ಎಡಬದಿಯಿಂದ ಆರಂಭಿಸಿ, ಮುಂದೆ ಬಂದು, ಬಲಬದಿಗೆ ಸಾಗಿ, ಹಿಂದಿನಿಂದ ಬಂದು ಮೊದಲಿದ್ದ ಸ್ಥಳಕ್ಕೆ ತಲುಪಿದೆವು ಅಂತ ತಾನೆ? ದೇವಸ್ಥಾನದಲ್ಲಿ ನಾವು ಗರ್ಭಗುಡಿಯ ಸುತ್ತ ಪ್ರದಕ್ಷಿಣೆ ಬರುವುದು ಹಾಗೆಯೇ ಅಲ್ಲವೇ? ಆದರೆ ಮೇಲೆ ವಿವರಿಸಿದ ಅಳಿಲು ಮತ್ತು ಫೋಟೊಗ್ರಾಫರನ ಚಲನವಲನದಲ್ಲಿ ಫೋಟೊಗ್ರಾಫರ್ ಮರಕ್ಕೆ ಅರ್ಧಸುತ್ತು ಬಂದಾಗ ಅಳಿಲು ಸಹ ಅರ್ಧ ಸುತ್ತು ಬಂದಿರುವುದರಿಂದ ಫೋಟೊಗ್ರಾಫರ್ ಅಳಿಲಿನ ಸುತ್ತ ಪ್ರದಕ್ಷಿಣೆ ಬರುತ್ತಿದ್ದಾನೆ ಎಂದಾಗುವುದೇ ಇಲ್ಲ.
ಇದು ಒಂಥರದಲ್ಲಿ ‘ಝೀನೋ ವಿರೋಧಾಭಾಸ’ ( Zeno's paradox) ಸನ್ನಿವೇಶದಂತೆಯೇ. ಫೋಟೊಗ್ರಾಫರ್ ಅಳಿಲನ್ನು ಸುತ್ತುತ್ತಿಲ್ಲ ಎಂಬ ಉತ್ತರವೂ ಸಮಂಜಸವಾಗಿ, ತರ್ಕಬದ್ಧವಾಗಿಯೇ ಇದೆ. ಒಂದುವೇಳೆ ಅಳಿಲು ಮರದ ಕಾಂಡದ ಮೇಲೆ ಒಂದೇಕಡೆ ನಿಶ್ಚಲವಾಗಿ ಕುಳಿತಿದೆ ಯೆಂದಾದರೆ, ಹೌದು, ಫೋಟೊಗ್ರಾಫರ್ ಮರದ ಸುತ್ತ ಒಂದು ಸುತ್ತು ಬಂದರೆ ಅಳಿಲನ್ನೂ ಸುತ್ತು ಬಂದಂತೆಯೇ ಎಂದು ಧಾರಾಳವಾಗಿ ಹೇಳಬಹುದಿತ್ತು (ಹಾಗೆ ಅಳಿಲು ನಿಶ್ಚಲವಾಗಿ ಕುಳಿತಿದ್ದರೆ ಫೋಟೊಗ್ರಾಫರ್ ಮರವನ್ನು ಸುತ್ತುವ ಆವಶ್ಯಕತೆಯೇ ಇರುತ್ತಿರಲಿಲ್ಲವೆನ್ನಿ, ಅಳಿಲು ಆಗಲೇ ಪೋಸ್ ಕೊಟ್ಟು ರೆಡಿಯಾಗಿರುವುದರಿಂದ ಫೋಟೊಗ್ರಾಫರ್ ತನ್ನ ಕೆಲಸವನ್ನು ಬೇಗನೇ ಮುಗಿಸಿ ಬಿಡುತ್ತಿದ್ದ). ಆದರೆ ಫೋಟೊಗ್ರಾಫರ್‌ನಿಗೆ ಚಳ್ಳೇಹಣ್ಣು ತಿನ್ನಿಸುತ್ತ ಅಳಿಲೂ ಮರ ಸುತ್ತುತ್ತಿದೆಯಲ್ಲಾ, ಅಲ್ಲೇ ಇರೋದು ಮಜಾ!
ಈಗ, ಅಳಿಲಿನ ದೃಷ್ಟಿಕೋನದಿಂದ ಈ ಚಲನವಲನವನ್ನು ವಿಶ್ಲೇಷಿಸೋಣ. ಅದನ್ನು ಮತ್ತೂ ಸ್ವಾರಸ್ಯಕರವಾಗಿಸಲು, ಆ ಮರದ ಕಾಂಡವು ಪಾರದರ್ಶಕ (ಸೀ-ಥ್ರೂ) ಆಗಿದೆಯೆಂದುಕೊಳ್ಳೋಣ. ಅಳಿಲಿನ ಮಟ್ಟಿಗೆ ಈಗ ಮರವೇ ತಿರುಗಿದಂತೆ! ಏಕೆ ಗೊತ್ತೇ? ಮರದ ಕಾಂಡ ಪಾರದರ್ಶಕ ಆಗಿರುವುದರಿಂದ ಅಳಿಲಿಗೆ ಫೋಟೊಗ್ರಾಫರ್ ಮತ್ತು ಫೋಟೊಗ್ರಾಫರ್ಗೆ ಅಳಿಲು ಯಾವಾಗಲೂ ಕಾಣುತ್ತಿರುತ್ತಾರೆ. ಅವರಿಬ್ಬರ ಸಾಪೇಕ್ಷ ಚಲನವಲನ ಸೊನ್ನೆ!
ಫೋಟೊಗ್ರಾಫರ್ ಮರವನ್ನು ಸುತ್ತುವಾಗ ಎಷ್ಟೇ ತ್ರಿಜ್ಯದಲ್ಲಿದ್ದರೂ ಅಳಿಲಿನ ದೃಷ್ಟಿಯಲ್ಲಿ ಅವನು ಒಂದೇ ದಿಕ್ಕಿನಲ್ಲಿರುತ್ತಾನೆ. ಅಂದರೆ, ನಿರಪೇಕ್ಷವಾಗಿ ( absolute motion) ನೋಡಿದರೆ ಫೋಟೊ ಗ್ರಾಫರ್ ಅಳಿಲನ್ನು ಸುತ್ತುತ್ತಿದ್ದಾನೆ ಎಂದುಕೊಳ್ಳಬೇಕಾಗುತ್ತದೆ. ಆದರೆ ಸಾಪೇಕ್ಷವಾಗಿ ( relative motion ) ನೋಡಿದರೆ ಫೋಟೊಗ್ರಾಫರ್ ನ ದೃಷ್ಟಿಯಿಂದಾಗಲೀ, ಅಳಿಲಿನ ದೃಷ್ಟಿಯಿಂದಾಗಲೀ ಫೋಟೊಗ್ರಾಫರ್ ಅಳಿಲನ್ನು ಸುತ್ತುತ್ತಿಲ್ಲ.
ನಿಜವಾಗಿಯಾದರೆ ಅಲ್ಲಿ ಚಲನೆಯೇ ಇಲ್ಲವೇನೋ ಅಂತನಿಸುತ್ತದೆ. ಅಳಿಲಿನ ಚಲನೆಯನ್ನು ಒಂದು ಕಾಗದದ ಮೇಲೆ ಚಿತ್ರರೂಪದಲ್ಲಿ ತೋರಿಸಿದರೆ ಹೇಗಿರುತ್ತದೆ? ಪೆನ್ಸಿಲ್‌ನ ತುದಿ ವೃತ್ತಾಕಾರ ವನ್ನು ಮೂಡಿಸುತ್ತಿದ್ದಂತೆಯೇ ಕಾಗದವೂ ಅದೇ ವೇಗದಲ್ಲಿ ಸುತ್ತಬೇಕಾದ್ದರಿಂದ ನಾವು ರಚಿಸುವ ವೃತ್ತ ಕೊನೆಗೂ ಒಂದು ಬಿಂದುವಾಗಿಯೇ ಉಳಿಯುತ್ತದೆ. ಸ್ವಾರಸ್ಯವೆಂದರೆ ಫೋಟೊಗ್ರಾಫರ್‌ನ ಚಲನೆಯನ್ನು ಪ್ರತಿಬಿಂಬಿಸ ಹೊರಟರೂ, ಪೆನ್ಸಿಲ್ ಮತ್ತು ಅದೇ ಗತಿಯಿಂದ ಕಾಗದವೂ ತಿರುಗ ಬೇಕಾದ್ದರಿಂದ ಅದು ಕೂಡ ವೃತ್ತವಾಗಿರದೆ ಒಂದು ಬಿಂದುವೇ ಆಗುತ್ತದೆ.
ಅಂದರೆ, ಅಳಿಲು ಮತ್ತು ಫೋಟೊಗ್ರಾಫರ್ ಇಬ್ಬರೂ ಮರವನ್ನು ಸುತ್ತುತ್ತಿರುವುದಾದರೂ ಕಾಗದದ ಮೇಲಿನ ಚಿತ್ರದಲ್ಲಿ ಅವರಿಬ್ಬರೂ ಮರದ ಎರಡು ವಿರುದ್ಧ ದಿಕ್ಕುಗಳಲ್ಲಿ ತಟಸ್ಥರಾಗಿರು ವಂತೆ ಭಾಸವಾಗುತ್ತದೆ. ಮೂರನೇ ವ್ಯಕ್ತಿಯ ದೃಷ್ಟಿಯಿಂದ ಮಾತ್ರ ಫೋಟೊಗ್ರಾಫರ್ ಅಳಿಲನ್ನು ಸುತ್ತುತ್ತಿದ್ದಾನೆ ಎನ್ನಬಹುದಾದರೂ ಸ್ವತಃ ಫೋಟೊಗ್ರಾಫರ್ ಅಥವಾ ಅಳಿಲಿನ ದೃಷ್ಟಿಕೋನದಿಂದ ಸುತ್ತುತ್ತಿಲ್ಲ!
ಇಲ್ಲಿ, ಮರದ ಕಾಂಡದ ಕೇಂದ್ರದಿಂದ ಕ್ರಮವಾಗಿ ಅಳಿಲು ಮತ್ತು ಫೋಟೊಗ್ರಾಫರ್ ಎಷ್ಟು ದೂರದಲ್ಲಿದ್ದಾರೆ ಎನ್ನುವುದನ್ನು ಪರಿಗಣಿಸಿಯೂ ವಾದ ಮಂಡಿಸಬಹುದು. ಅಳಿಲು ಮರದ ಕಾಂಡವನ್ನೇ ಆಧರಿಸಿರುವುದರಿಂದ ಮರದ ಸುತ್ತ ವೇಗವಾಗಿ ಚಲಿಸುತ್ತಿರಬಹುದೇನೋ ಎಂದೆನಿಸುತ್ತದೆ. ನಮ್ಮ ಸೌರವ್ಯೂಹದಲ್ಲಿ ಗ್ರಹಗಳ ಚಲನವಲನವೂ ಇದೇ ಮಾದರಿಯದು. ಭೂಮಿಗೆ ಸೂರ್ಯನ ಸುತ್ತ ತಿರುಗಲು 65.24 ದಿನಗಳು ಬೇಕಾದರೆ ಮಂಗಳಗ್ರಹಕ್ಕೆ 686.98 ದಿನಗಳು ಬೇಕು.
ಅವೆರಡೂ ಒಂದೇ ವೇಗದಲ್ಲಿ ಸೂರ್ಯನನ್ನು ಸುತ್ತಿದರೂ ಮಂಗಳನ ಕಕ್ಷೆ ಭೂಮಿಯ ಕಕ್ಷೆಗಿಂತ ದೊಡ್ಡದಾದ್ದರಿಂದ ಹೆಚ್ಚು ಸಮಯ ಬೇಕು. ಇದನ್ನೇ ಅಳಿಲು ಮತ್ತು ಫೋಟೊಗ್ರಾಫರ್‌ಗೆ ಅನ್ವಯಿಸಿದರೂ ಅಳಿಲು ಮರದ ಕಾಂಡದ ಅಕ್ಷಕ್ಕೆ ಹತ್ತಿರದಲ್ಲಿದ್ದು ಪ್ರದಕ್ಷಿಣೆಯನ್ನು ಬೇಗ ಮುಗಿಸುತ್ತದೆ. ಫೋಟೊಗ್ರಾಫರ್ ದೂರದಲ್ಲಿದ್ದು ಸುತ್ತುವುದರಿಂದ ಅವನಿಗೆ ಹೆಚ್ಚು ಸಮಯ ತಗಲುತ್ತದೆ.
ಅಳಿಲು ಅರ್ಧ ನಿಮಿಷದಲ್ಲಿ ಮರಕ್ಕೆ ಸುತ್ತು ಬಂದರೆ ಫೋಟೊಗ್ರಾಫರ್‌ನಿಗೆ ಎರಡು ನಿಮಿಷಗಳೇ ಬೇಕಾಗಬಹುದು. ಫೋಟೊಗ್ರಾಫರ್ ಒಂದು ಸುತ್ತು ಬಂದಾಗ ಅಳಿಲಿನದು ನಾಲ್ಕು ಪ್ರದಕ್ಷಿಣೆ ಗಳಾಗಿರುತ್ತವೆ. ಹಾಗೆ ನೋಡಿದರೂ ಫೋಟೊಗ್ರಾಫರ್ ಗೆ ಫೋಟೊ ಕ್ಲಿಕ್ಕಿಸಲು ಅಳಿಲಿನ ಪೋಸ್ ಸಿಗುವುದು ಸಾಧ್ಯವಿಲ್ಲ! ಉಸ್ಸಪ್ಪಾ! ಈ ಅಳಿಲಿನ ಉಸಾಬರಿಯೇ ಬೇಡ. ಇದಕ್ಕಿಂತ, ಬಾಲಕ್ಕೆ ಬಂಗಾರದ ಬೇಗಡೆ ಅಂಟಿಸಿದ ಅಳಿಲನ್ನು ಕವಿತೆಯಲ್ಲಿ ಕಲ್ಪಿಸಿಕೊಳ್ಳುವುದೇ ಚಂದ ಎಂದು ನೀವು ಮನೆಗೆ ಮರಳುತ್ತೀರಿ.