ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Rohith Kumar H G Column: ರಾಸಾಯನಿಕ ಎಂದ ಮಾತ್ರಕ್ಕೇ ವಿಷವಲ್ಲ, ಅದು ಬದುಕಿನ ಮೂಲ...

ನಿಮ್ಮಲ್ಲಿ ಹಲವರು ನನ್ನ ಸ್ನೇಹಿತನಂತೆ ನೈಸರ್ಗಿಕವಾದ ಉತ್ಪನ್ನಗಳು ಹೆಚ್ಚು ಸುರಕ್ಷಿತವೆಂದೂ, ರಾಸಾ ಯನಿಕಗಳಿರುವ ಉತ್ಪನ್ನಗಳು ನೈಸರ್ಗಿಕವಲ್ಲವೆಂದೂ ನಂಬಿರಬಹುದು. ರಾಸಾಯನಿಕಗಳು ಎಂದ ಕೂಡಲೇ ಇವು ಪ್ರಯೋಗಾಲಯಗಳಲ್ಲಿರುವ ವಸ್ತು ಅಥವಾ ನೈಸರ್ಗಿಕ ವಲ್ಲದ ವಸ್ತು ಎಂದೂ ಅಂದು ಕೊಂಡಿರಬಹುದು. ಆದರೆ, ಈ ನಂಬಿಕೆಗಳು ಎಷ್ಟು ಸತ್ಯ? ಎಷ್ಟು ಮಿಥ್ಯ? ಸರ್ವವೂ ರಾಸಾಯನಿಕವೇ!

ವಿಶ್ಲೇಷಣೆ

ಡಾ.ರೋಹಿತ್‌ ಕುಮಾರ್‌ ಎಚ್.ಜಿ.

ನನ್ನೊಬ್ಬ ಸ್ನೇಹಿತ ಅಂಗಡಿಯಿಂದ ಹರ್ಬಲ್ ನೋವಿನ ಎಣ್ಣೆಯನ್ನು ತಂದಿದ್ದ. ಅದನ್ನು ನೋಡಿ ದ ಇನ್ನೊಬ್ಬ “ಇದರಿಂದೆಲ್ಲ ನೋವು ಕಮ್ಮಿಯಾಗೊಲ್ಲ. ಶೀಘ್ರವಾಗಿ ನೋವು ಕಡಿಮೆಯಾಗ ಬೇಕೆಂದರೆ ನೋವು ನಿವಾರಕ ಸ್ಪ್ರೇ ಬಳಸು" ಎಂದ. ಅದಕ್ಕೆ, “ಅವೆಲ್ಲ ಕೆಮಿಕಲ್ ಸ್ಪ್ರೇ ಕಣೋ, ನಾನು ತಂದಿರುವುದು ನೈಸರ್ಗಿಕ ಎಣ್ಣೆ. ಇದೇ ಸುರಕ್ಷಿತ ಮತ್ತು ಉತ್ತಮ" ಎಂದ ಮೊದಲನೆಯವ.

ಆ ಎಣ್ಣೆ ಬಾಟಲಿ ಮೇಲೆ ನೋಡಿದಾಗ ಅದರ ಮೇಲೆ ದಪ್ಪಕ್ಷರಗಳಲ್ಲಿ ‘100% ನ್ಯಾಚುರಲ್’ ಮತ್ತು ‘ರಾಸಾಯನಿಕ ಮುಕ್ತ’ ಎಂದು ಬರೆದಿತ್ತು. ಇಂದು ಸೂಪರ್ ಮಾರ್ಕೆಟ್‌ಗಳಲ್ಲಿ ಹಲವಾರು ಉತ್ಪನ್ನಗಳ ಮೇಲೆ ಈ ರೀತಿಯ ಲೇಬಲ್ ಇರುವುದನ್ನು ನೀವು ಗಮನಿಸಿರಬಹುದು. ನಿಮ್ಮಲ್ಲಿ ಹಲವರು ನನ್ನ ಸ್ನೇಹಿತನಂತೆ ನೈಸರ್ಗಿಕವಾದ ಉತ್ಪನ್ನಗಳು ಹೆಚ್ಚು ಸುರಕ್ಷಿತವೆಂದೂ, ರಾಸಾ ಯನಿಕಗಳಿರುವ ಉತ್ಪನ್ನಗಳು ನೈಸರ್ಗಿಕವಲ್ಲವೆಂದೂ ನಂಬಿರಬಹುದು. ರಾಸಾಯನಿಕಗಳು ಎಂದ ಕೂಡಲೇ ಇವು ಪ್ರಯೋಗಾಲಯಗಳಲ್ಲಿರುವ ವಸ್ತು ಅಥವಾ ನೈಸರ್ಗಿಕ ವಲ್ಲದ ವಸ್ತು ಎಂದೂ ಅಂದುಕೊಂಡಿರಬಹುದು. ಆದರೆ, ಈ ನಂಬಿಕೆಗಳು ಎಷ್ಟು ಸತ್ಯ? ಎಷ್ಟು ಮಿಥ್ಯ? ಸರ್ವವೂ ರಾಸಾಯನಿಕವೇ!

ಮೊದಲಿಗೆ, ಜಗತ್ತಿನಲ್ಲಿ ಸರ್ವವೂ ರಾಸಾಯನಿಕಗಳೇ! ಹಾಗಾಗಿ, ‘ರಾಸಾಯನಿಕ-ಮುಕ್ತ’ ಎಂಬುದು ಅಸಾಧ್ಯ ಹಾಗೂ ಈ ರೀತಿಯ ಉತ್ಪನ್ನಗಳು ಇಲ್ಲವೇ ಇಲ್ಲ! ನಾವು ಕುಡಿಯುವ ನೀರಿನಿಂದ ಹಿಡಿದು ಉಸಿರಾಡೋ ಗಾಳಿಯವರೆಗೂ ಎಲ್ಲವೂ ರಾಸಾಯನಿಕಗಳೇ! ಎರಡು ಜಲಜನಕ (H) ಮತ್ತು ಒಂದು ಆಮ್ಲಜನಕ (O) ಹೊಂದಿರುವ ನೀರಿನ ರಾಸಾಯನಿಕ ಸೂತ್ರ H2O. ಗಾಳಿಯಲ್ಲಿ ಸಾರಜನಕ (N2), ಆಮ್ಲಜನಕ (O2), ಇಂಗಾಲದ ಡೈ ಆಕ್ಸೈಡ್ (CO2) ಮುಂತಾದ ಅನಿಲಗಳಿವೆ. ಹಾಗೆ ನೋಡಿದರೆ ನಮ್ಮ ದೇಹವೂ ರಾಸಾಯನಿಕಗಳ ಸಂಕೀರ್ಣ ವ್ಯವಸ್ಥೆಯೇ ಆಗಿದೆ. ಅಮೆರಿಕದ ಕೆಮಿಕಲ್ ಸೊಸೈಟಿಯ ಪ್ರಕಾರ, ನೀವು ಕೇಳುವ, ನೋಡುವ, ವಾಸನೆ ಗ್ರಹಿಸುವ, ರುಚಿ ನೋಡುವ ಮತ್ತು ಸ್ಪರ್ಶಿಸುವ ಎಲ್ಲವೂ ರಾಸಾಯನಿಕಗಳೇ ಆಗಿವೆ.

ಇದನ್ನೂ ಓದಿ: Dr Rohith Kumar H G Column: ದೇಶದಲ್ಲಿನ ರೇಬಿಸ್‌ ಸಮಸ್ಯೆಗೆ ʼಸುಪ್ರೀಂʼ ತೀರ್ಪು ಪರಿಹಾರವೇ ?

ಅಲ್ಲದೆ, ಈ ಎಲ್ಲಾ ಪ್ರಕ್ರಿಯೆಗಳು ರಾಸಾಯನಿಕ ಕ್ರಿಯೆಗಳಿಂದಲೇ ನಡೆಯುತ್ತವೆ. 2010ರಲ್ಲಿ, ಯುನೈಟೆಡ್ ಕಿಂಗ್‌ಡಮ್‌ನ ಶೇಕಡಾ 84ರಷ್ಟು ಜನರು ತಾವು ದಿನನಿತ್ಯ ಬಳಸುವ ಉತ್ಪನ್ನಗಳಲ್ಲಿ ರುವ ರಾಸಾಯನಿಕಗಳು ಆರೋಗ್ಯಕ್ಕೆ ಮಾರಕವಾಗಿವೆ ಎಂಬ ಅಭಿಪ್ರಾಯ ಹೊಂದಿದ್ದರು. ಈ ಸಂದರ್ಭದಲ್ಲಿ ರಾಸಾಯನಿಕಗಳಿಲ್ಲದ ಉತ್ಪನ್ನವನ್ನು ಯಾರಾದರೂ ತಯಾರಿಸಿದರೆ ಅವರಿಗೆ ೧ ಮಿಲಿಯನ್ ಪೌಂಡ್‌ಗಳನ್ನು (2010ರಲ್ಲಿ ಅಂದಾಜು 7 ಕೋಟಿ ರುಪಾಯಿಗಳು) ಬಹುಮಾನವಾಗಿ ನೀಡುವುದಾಗಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯು ಘೋಷಿಸಿತು. ‌

ಆ ಮೂಲಕ ‘ರಾಸಾಯನಿಕ-ಮುಕ್ತ’ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವೇ ಇಲ್ಲ ಎನ್ನುವು ದನ್ನು ಜನರಲ್ಲಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿತು. ಅಂದ ಹಾಗೆ, ಇದುವರೆಗೂ ಈ ಬಹುಮಾನ ಪಡೆಯಲು ಯಾರಿಗೂ ಸಾಧ್ಯವಾಗಿಲ್ಲ. ಬಹೂಪಯೋಗಿ ವಸ್ತುಗಳ ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ‘ರಾಸಾಯನಿಕ-ಮುಕ್ತ’ ಅಥವಾ ‘ಯಾವುದೇ ರಾಸಾಯನಿಕಗಳನ್ನು ಬಳಸಿಲ್ಲ/ಸೇರಿಸಿಲ್ಲ’ ಎಂದು ದೊಡ್ಡಕ್ಷರಗಳಲ್ಲಿ ಬರೆದಿದ್ದಾರೆ ಎಂದರೆ ಒಂದೋ ಅವರು ತಮ್ಮ ವೈeನಿಕ ಅನಕ್ಷರತೆಯನ್ನು ಪ್ರದರ್ಶಿಸುತ್ತಿರುತ್ತಾರೆ ಅಥವಾ ಗ್ರಾಹಕರನ್ನು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸುತ್ತಿರುತ್ತಾರೆ.

Dr Rohit

ವಾಸ್ತವವಾಗಿ, ತಮ್ಮ ಉತ್ಪನ್ನದಲ್ಲಿ ಹಾನಿಕಾರಕವೆಂದು ಪರಿಗಣಿಸಲಾದ ಕೃತಕ ಅಥವಾ ಸಂಶ್ಲೇಷಿತ ರಾಸಾಯನಿಕಗಳಿಲ್ಲ ಎಂದು ಸೂಚಿಸಲು ಅವರು ಈ ರೀತಿಯಾಗಿ ನಮೂದಿಸುತ್ತಾರೆ. ಆದರೆ, ಹೀಗೆ ಸೂಚಿಸುವ ಭರದಲ್ಲಿ ಎಲ್ಲಾ ರಾಸಾಯನಿಕಗಳು ಹಾನಿಕಾರಕವೆಂದೂ, ತಮ್ಮ ಉತ್ಪ ನ್ನದಲ್ಲಿ ರಾಸಾಯನಿಕಗಳೇ ಇಲ್ಲವೆಂದೂ ತಪ್ಪು ಮಾಹಿತಿ ನೀಡುತ್ತಾರೆ.

ಆದರೆ, ‘ಸರ್ವಂ ರಾಸಾಯನಿಕಮಯಂ’ ಎಂಬುದು ಸತ್ಯ. ನೈಸರ್ಗಿಕವೆಲ್ಲವೂ ಸುರಕ್ಷಿತವೇ? ನೈಸರ್ಗಿಕ ಮೂಲಗಳಿಂದ ಹೊರತೆಗೆಯಲಾದ ರಾಸಾಯನಿಕ ದ್ರವ್ಯಗಳು, ಕೃತಕವಾಗಿ ತಯಾರಿಸಿ ದವುಗಳಿಗಿಂತ ಉತ್ತಮ ಮತ್ತು ಆರೋಗ್ಯಕರ ಎಂಬುದು ಇನ್ನೊಂದು ವಾದ. ಮನುಷ್ಯನು ತಯಾರಿಸಿದ ರಾಸಾಯನಿಕಗಳೇ ಅತ್ಯಂತ ಅಪಾಯಕಾರಿ ಎಂದು ಹಲವರು ಭಾವಿಸುತ್ತಾರೆ. ನಿಜವೇ ಎಂದು ನೋಡುವುದಾದರೆ, ಇದು ಕೂಡ ಸತ್ಯಕ್ಕೆ ದೂರವಾದುದು.

ಭೂಮಿಯಲ್ಲಿನ ಐದು ಅತ್ಯಂತ ಮಾರಕ ವಿಷಗಳೂ ಪ್ರಕೃತಿದತ್ತವಾದಂಥವು ಎಂದರೆ ನೀವು ನಂಬಲೇಬೇಕು. ಜಗತ್ತಿನಲ್ಲಿ ಅತಿ ಮಾರಕವಾದ ವಿಷವೆಂದು ಪ್ರಖ್ಯಾತವಾಗಿರುವುದು ‘ಬೊಟುಲಿನಮ್ ಟಾಕ್ಸಿನ್’! ಇದು ‘ಕ್ಲೋಸ್ಟ್ರಿಡಿಯಮ್ ಬೊಟುಲಿನಮ್’ ಎಂಬ ಚಿಕ್ಕ ಬ್ಯಾಕ್ಟೀರಿಯ ದಿಂದ ಉತ್ಪತ್ತಿಯಾಗುತ್ತದೆ.

ಇದು ಎಷ್ಟು ಮಾರಣಾಂತಿಕವೆಂದರೆ, ಒಬ್ಬ ವ್ಯಕ್ತಿಯ ಸಾವಿಗೆ ಆತನ ಪ್ರತಿ ಕಿಲೋ ತೂಕಕ್ಕೆ ಕೇವಲ ಒಂದು ನ್ಯಾನೋ ಗ್ರಾಂನಷ್ಟು ಈ ವಿಷ ಕೊಟ್ಟರೆ ಸಾಕು! ಅಂದರೆ, 80 ಕಿಲೋ ತೂಕದ ಒಬ್ಬ ವ್ಯಕ್ತಿಯ ದೇಹಕ್ಕೆ ಒಂದು ಧೂಳಿನ ಕಣದಷ್ಟು ಈ ವಿಷ ಸೇರಿದರೂ ಪ್ರಾಣಪಕ್ಷಿ ಹಾರಿಹೋಗುತ್ತದೆ. ಇದರಷ್ಟೇ ಅಪಾಯಕಾರಿಯಾದ ಮತ್ತೊಂದು ನೈಸರ್ಗಿಕ ವಿಷವೆಂದರೆ ಹರಳೆ (ಕಾಸ್ಟ್ಟರ್) ಬೀಜದಲ್ಲಿರುವ ರೈಸಿನ್.

ಒಬ್ಬ ವಯಸ್ಕ ವ್ಯಕ್ತಿ ಸಾವನ್ನಪ್ಪಲು ಕೆಲವೇ ಕೆಲವು ಹರಳೆ ಬೀಜಗಳಲ್ಲಿನ ರೈಸಿನ್ ಸಾಕು! ಇದೇ ರೀತಿ ಬಣ್ಣ ಬಣ್ಣದ ಡಾರ್ಟ್ ಕಪ್ಪೆಗಳ ದೇಹದಲ್ಲಿರುವ ಬಟ್ರಕೋಟಾಕ್ಸಿನ್‌ಗೆ ನಿಮ್ಮ ಹೃದಯವನ್ನು ಕ್ಷಣಾರ್ಧದಲ್ಲಿ ನಿಲ್ಲಿಸುವ ಶಕ್ತಿ ಇದ್ದರೆ, ‘ಡೆತ್ ಕ್ಯಾಪ್ ಮಶ್ರೂಮ್’ ಎಂಬ ಬಗೆಯ ಅಣಬೆಯಲ್ಲಿ ಇರುವ ಅಮಾಟಾಕ್ಸಿನ್ ಜಗತ್ತಿನಲ್ಲಿ ಹಲವಾರು ಸಾವಿಗೆ ಕಾರಣವಾಗಿದೆ. ಕೊನೆಗೆ, ಕಾಸರಕ ( Strychnine) ಮರದಲ್ಲಿನ ವಿಷ ದೇಹಕ್ಕೆ ಸೇರಿದರೆ ವಿಪರೀತ ಸ್ನಾಯುಸೆಳೆತ ಶುರುವಾಗಿ ಕೇವಲ 15 ನಿಮಿಷಗಳ ಸಾವುಂಟು ಮಾಡುತ್ತದೆ. ಇವೆಲ್ಲದರ ನಂತರವೇ ನೀವೆ ಕಾರ್ಕೋಟಕ ವಿಷವೆಂದು ನಂಬಿರುವ ಹಾವಿನ ವಿಷಗಳು ಬರುವಂಥದ್ದು!

ಹೀಗಾಗಿ ನೈಸರ್ಗಿಕವಾಗಿರುವುದೆಲ್ಲ ಅಥವಾ ಸಸ್ಯಾಧಾರಿತವೆ ಸುರಕ್ಷಿತ ಎಂಬ ಕಲ್ಪನೆ ಸಂಪೂರ್ಣ ತಪ್ಪು. ಇದೊಂದು ಸಸ್ಯದ ಬೀಜ ಎಂದು ಯಾವ್ಯಾವುದೋ ಬೀಜ ಅಥವಾ ಸಸ್ಯಗಳ ಭಾಗಗಳನ್ನು ಸೇವಿಸುವುದು ಪ್ರಾಣಕ್ಕೆ ಘಾತಕವಾಗಬಹುದು.

ನೈಸರ್ಗಿಕ V/s ಕೃತಕ

ಒಂದು ರಾಸಾಯನಿಕ ಪದಾರ್ಥವು, ನೈಸರ್ಗಿಕವಾಗಿಯೂ (ಉದಾಹರಣೆಗೆ ಸಸ್ಯಮೂಲದ್ದು) ಮತ್ತು ಸಂಶ್ಲೇಷಿತವಾಗಿಯೂ (ಪ್ರಯೋಗಾಲಯಗಳಲ್ಲಿ ತಯಾರಿಸಿದ್ದು) ಲಭ್ಯವಿದ್ದರೆ ಅವುಗಳಲ್ಲಿ ಯಾವುದು ಉತ್ತಮ? ಎಂದು ನೀವು ಕೇಳಬಹುದು. ಇದನ್ನು ಒಂದು ಉದಾಹರಣೆಯೊಂದಿಗೆ ತಿಳಿಯೋಣ. ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾದ ವಿಟಮಿನ್ ‘ಸಿ’ ಬಗ್ಗೆ ನಿಮಗೆಲ್ಲ ಗೊತ್ತು. ವಿಟಮಿನ್ ‘ಸಿ’ಯ ರಾಸಾಯನಿಕ ಹೆಸರು ಆಸ್ಕಾರ್ಬಿಕ್ ಆಮ್ಲ. ಕಿತ್ತಳೆ ಹಣ್ಣು ಸೇರಿದಂತೆ ವಿವಿಧ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿ ವಿಟಮಿನ್ ‘ಸಿ’ ಇರುತ್ತದೆ.

ಅಂತೆಯೇ ಇದನ್ನು ಪ್ರಯೋಗಾಲಯದಲ್ಲಿ ಕೃತಕವಾಗಿಯೂ ತಯಾರಿಸುತ್ತಾರೆ. ಆದರೆ, ಎರಡರ ರಾಸಾಯನಿಕ ರಚನೆಗಳು ಒಂದೇ ಆಗಿರುತ್ತವೆ. ಮೂಲ ಮಾತ್ರ ಬೇರೆ. ಇವುಗಳಲ್ಲಿ ಯಾವ ವಿಧದ ವಿಟಮಿನ್ ‘ಸಿ’ ದೇಹಕ್ಕೆ ಉತ್ತಮ ಎಂಬ ಪ್ರಶ್ನೆಗೆ ಉತ್ತರ- ಎರಡೂ! ಏಕೆಂದರೆ, ದೇಹದೊಳಗಿನ ವ್ಯವಸ್ಥೆಯು ರಾಸಾಯನಿಕಗಳನ್ನು ಅವುಗಳ ಮೂಲದ ಆಧಾರದಲ್ಲಿ ವಿಭಿನ್ನವಾಗಿ ಪರಿಗಣಿಸುವು ದಿಲ್ಲ.

ಒಂದೇ ರಾಸಾಯನಿಕ ರಚನೆ ಹೊಂದಿರುವ ನೈಸರ್ಗಿಕ ಮತ್ತು ಸಂಶ್ಲೇಷಿತ ಸಂಯುಕ್ತಗಳು ದೇಹ ದಲ್ಲಿ ಒಂದೇ ಬಗೆಯ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತವೆ. ಜತೆಗೆ ಒಂದೇ ರೀತಿಯ ಪರಿಣಾಮ ವನ್ನುಂಟುಮಾಡುತ್ತವೆ. ಹಾಗಾಗಿ, ಹಣ್ಣಿನಿಂದ ಬಂದರೂ, ಕೃತಕವಾಗಿ ತಯಾರಿಸಿದ್ದರೂ, ಆಸ್ಕಾರ್ಬಿಕ್ ಆಮ್ಲದ ಹೀರಿಕೊಳ್ಳುವಿಕೆಯಲ್ಲಾಗಲಿ, ಅದು ದೇಹದಲ್ಲಿ ತೋರಿಸುವ ಪರಿಣಾಮ ಗಳಲ್ಲಾಗಲಿ ಬದಲಾವಣೆಯಿರುವುದಿಲ್ಲ.

ಹಾಗೆಂದು, ಹಣ್ಣನ್ನು ತಿನ್ನುವ ಬದಲು ವಿಟಮಿನ್ ‘ಸಿ’ ಮಾತ್ರೆ ತೆಗೆದುಕೊಳ್ಳಿ ಎಂಬರ್ಥದಲ್ಲಿ ಇದನ್ನು ಅರ್ಥೈಸಬೇಕಿಲ್ಲ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಜತೆಗೆ ಫೈಬರ್, ಫೋಲೇಟ್, ಪೊಟ್ಯಾಸಿ ಯಮ್, ಕ್ಯಾಲ್ಸಿಯಂ ಮುಂತಾದ ಹಲವಾರು ಉತ್ತಮ ಅಂಶಗಳಿರುತ್ತವೆ. ‌

ಹಾಗಾಗಿ ಹಣ್ಣನ್ನು ತಿನ್ನುವುದು ಒಳ್ಳೆಯ ಅಭ್ಯಾಸವೇ. ಆದರೆ, ಕೃತಕವಾಗಿ ತಯಾರಿಸಲಾಗಿದೆ ಎಂಬ ಕಾರಣಕ್ಕೆ ವಿಟಮಿನ್ ‘ಸಿ’ ಅಥವಾ ಇನ್ಯಾವುದೇ ಸಂಶ್ಲೇಷಿತ ದ್ರವ್ಯಗಳನ್ನು ಹಾನಿಕಾರಕ ಎನ್ನುವುದು ಸೂಕ್ತವಲ್ಲ. ರೋಗವೊಂದರ ಚಿಕಿತ್ಸೆಗೆ ವಿಭಿನ್ನ ರಚನೆಗಳುಳ್ಳ ಒಂದು ನೈಸರ್ಗಿಕ ಹಾಗೂ ಒಂದು ಸಂಶ್ಲೇಷಿತ ಔಷಧ ಲಭ್ಯವಿದ್ದರೆ ಅವುಗಳಲ್ಲಿ ಯಾವುದು ಉತ್ತಮ? ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಪ್ರಸ್ತುತ ನೈಸರ್ಗಿಕ ಮೂಲದಿಂದ ಹೊರತೆಗೆದ ಮತ್ತು ಸಂಶ್ಲೇಷಿತ ಹಲವಾರು ದ್ರವ್ಯಗಳು ಔಷಧ ಗಳಾಗಿ ಬಳಕೆಯಲ್ಲಿವೆ.

ಆದರೆ, ಅವುಗಳ ಚಿಕಿತ್ಸಕ ಅಥವಾ ಅಡ್ಡ ಪರಿಣಾಮಗಳ ತೀವ್ರತೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅಂದರೆ, ಒಂದು ಔಷಧ ಇನ್ನೊಂದಕ್ಕಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸಬಹುದು ಅಥವಾ ಬೇರೆ ರೀತಿಯ ಅಡ್ಡ ಪರಿಣಾಮ ತೋರಬಹುದು. ಆದರೆ, ಕೃತಕಕ್ಕಿಂತ ನೈಸರ್ಗಿಕವಾದುದು ಬೇಗ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಅಥವಾ ಕಡಿಮೆ ಅಡ್ಡ ಪರಿಣಾಮ ಹೊಂದಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಎರಡೂ ಸರಿಸಮಾನ ಹಂತದ ಅಡ್ಡ ಪರಿಣಾಮಗಳನ್ನೇ ತೋರಿಸುತ್ತವೆ ಹಾಗೂ ಔಷಧಗಳ ಮೂಲದಿಂದ ಯಾವುದು ಹೆಚ್ಚು ಉತ್ತಮ ಎಂದು ನಿರ್ಧರಿಸಲು ಸಾಧ್ಯವಿಲ್ಲ.

ಇನ್ನೂ ಒಂದು ಆಯಾಮದಲ್ಲಿ ನೋಡುವುದಾದರೆ, ಕೆಲವೊಮ್ಮೆ ‘ಸಂಪೂರ್ಣ ನೈಸರ್ಗಿಕ’ ಎಂದು ಕರೆಯಲಾಗುವ ಮತ್ತು ಸಂಶ್ಲೇಷಿತ ಉತ್ಪನ್ನಗಳಲ್ಲಿ ಒಂದೇ ಅಂಶಗಳಿರುತ್ತವೆ. ಉದಾಹರಣೆಗೆ ಲೇಖನದ ಮೊದಲ ಭಾಗದಲ್ಲಿ ಉಖಿಸಲಾದ ನೋವು ನಿವಾರಕ ಸ್ಪ್ರೇ ಮತ್ತು ಹರ್ಬಲ್ ನೋವಿನ ಎಣ್ಣೆ ಎರಡರಲ್ಲೂ ಕಾಂಫರ್, ಮೆಂಥಾಲ್, ಮೀಥೈಲ್ ಸ್ಯಾಲಿಸಿಲೇಟ್, ಯುಕಲೆಪ್ಟಾಲ್ ಮುಂತಾದ ಪದಾರ್ಥಗಳಿರುತ್ತವೆ.

ಹರ್ಬಲ್ ಎಣ್ಣೆಯಲ್ಲಿ ಇವುಗಳನ್ನು ಕ್ರಮವಾಗಿ ಕರ್ಪೂರ, ಪುದೀನಾ, ಗಂಧಪೂರಾ ಮತ್ತು ನೀಲಗಿರಿ ಮರಗಳಿಂದ ಪಡೆಯಲಾಗುತ್ತವೆ. ಅದೇ ಸ್ಪ್ರೇಗಳಲ್ಲಿ ಇವುಗಳನ್ನು ಕೃತಕವಾಗಿ ತಯಾರಿಸಿ ಬಳಸು ತ್ತಾರೆ. ಹಾಗಾಗಿ, ಎರಡೂ ಉತ್ಪನ್ನಗಳಲ್ಲಿ ಒಂದೇ ರಾಸಾಯನಿಕಗಳಿರುವುದರಿಂದ ವಿಟಮಿನ್ ‘ಸಿ’ ವಿಷಯದಲ್ಲಿ ತಿಳಿದುಕೊಂಡಂತೆ ಎರಡೂ ಉತ್ಪನ್ನಗಳು ತೋರಿಸುವ ಪರಿಣಾಮಗಳು ಒಂದೇ ಸಮನಾಗಿರುತ್ತವೆ. ಕೆಲವು ಸ್ಪ್ರೇಗಳಲ್ಲಿ ಶೀಘ್ರ ಉಪಶಮನಕ್ಕಾಗಿ ಈ ಎಲ್ಲಾ ಪದಾರ್ಥಗಳ ಜತೆಗೆ ಹೆಚ್ಚುವರಿಯಾಗಿ ಸಂಶ್ಲೇಷಿತ ನೋವು ನಿವಾರಕ ಔಷಧಗಳನ್ನು ಸೇರಿಸುತ್ತಾರೆ.

ಅನುಕೂಲತೆಗಳು

ಮುಂದಿನ ಪ್ರಶ್ನೆ, ಕೃತಕ ರಾಸಾಯನಿಕಗಳು ಮತ್ತು ಅವುಗಳನ್ನು ತಯಾರಿಸುವ ಪ್ರಕ್ರಿಯೆಗಳ ಅನುಕೂಲಗಳೇನು? ಶ್ವಾಸಕೋಶ, ಅಂಡಾಶಯ ಮತ್ತು ಸ್ತನ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಪ್ರಮುಖ ವಾಗಿ ಬಳಸುವ ಪ್ಯಾಕ್ಲಿಟಾಕ್ಸೆಲ್ ಎಂಬ ಔಷಧದ ಕಥೆ ಕೃತಕ ಸಂಶ್ಲೇಷಣೆಯ ಮಹತ್ವವನ್ನು ಸಾರುತ್ತದೆ.

ಉತ್ತರ ಅಮೆರಿಕದಲ್ಲಿ ಕಾಣಸಿಗುವ ಟ್ಯಾಕ್ಸಸ್ ಬ್ರೆವಿಫೋಲಿಯಾ ಎಂಬ ಪ್ರಭೇದದ ಮರಗಳು ಈ ಔಷಧದ ಮೂಲ. ಮೊದಲಿಗೆ ಪ್ಯಾಕ್ಲಿಟಾಕ್ಸೆಲ್ ಅನ್ನು ಈ ಮರಗಳ ತೊಗಟೆಯಿಂದ ಪ್ರತ್ಯೇಕಿಸಲಾ ಗುತ್ತಿತ್ತು. ಆದರೆ, ಹೀಗೆ ಪ್ರತ್ಯೇಕಿಸುವಾಗ ಅಲ್ಪ ಪ್ರಮಾಣದಲ್ಲಿ ಮಾತ್ರ ಇದು ಸಿಗುತ್ತಿದ್ದುದರಿಂದ, ಹೆಚ್ಚಿನ ಪ್ರಮಾಣದಲ್ಲಿ ಈ ಔಷಧವನ್ನು ಪಡೆಯಲು ಸಾವಿರಾರು ಮರಗಳನ್ನು ಕತ್ತರಿಸ ಬೇಕಾಗು ತ್ತಿತ್ತು.

ಹಾಗಾಗಿ, ಈ ಪ್ರಕ್ರಿಯೆ ಪರಿಸರಕ್ಕೆ ಹಾನಿಕಾರಕವಾಗಿದ್ದಲ್ಲದೆ ಅಗತ್ಯತೆಯನ್ನು ಪೂರೈಸಲು ಹೆಚ್ಚಿನ ಸಮಯವೂ ಬೇಕಾಗಿತ್ತು. ಇದಕ್ಕೆ ಪರಿಹಾರವಾಗಿ ಸಿಕ್ಕಿದ್ದು ಅರೆ-ಸಂಶ್ಲೇಷಣೆ (ಅರ್ಧ ನೈಸರ್ಗಿಕ-ಅರ್ಧ ಕೃತಕ) ವಿಧಾನ. ಈ ವಿಧಾನದಲ್ಲಿ ಮರದ ಎಲೆಗಳಿಂದ ನಿರ್ದಿಷ್ಟ ರಾಸಾಯನಿಕಗಳನ್ನು (10-ಡಿಅಸಿಟೈಲ್ ಬಕಾಟಿನ್ III ಅಥವಾ ಬಕಾಟಿನ್ III) ಹೊರ ತೆಗೆದು, ಪ್ರಯೋಗಾಲಯ ದಲ್ಲಿ ಇವನ್ನು ಪ್ಯಾಕ್ಲಿಟಾಕ್ಸೆಲ್ ಆಗಿ ಪರಿವರ್ತಿಸಲಾಗುತ್ತದೆ.

ಇದರಿಂದ ಇಡೀ ಮರಗಳನ್ನು ಕಡಿಯುವ ಬದಲು ಮತ್ತೆ ಮತ್ತೆ ಹುಟ್ಟುವ ಎಲೆಗಳನ್ನು ಬಳಸಿ ಅಗತ್ಯ ಪ್ಯಾಕ್ಲಿಟಾಕ್ಸೆಲ್ ಅನ್ನು ಪಡೆಯುವುದು ಸಾಧ್ಯವಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ದೊರಕುತ್ತಿರುವ ಸುಮಾರು ಶೇ.80ರಷ್ಟು ಈ ಔಷಧವನ್ನು ಈ ರೀತಿಯಲ್ಲಿಯೇ ಕೃತಕ ಸಂಶ್ಲೇಷಣೆ ಯನ್ನು ಬಳಸಿ ಸುಸ್ಥಿರವಾಗಿ ತಯಾರಿಸಲಾಗುತ್ತಿದೆ.

ನೋವು ನಿವಾರಕ ಆಸ್ಪಿರಿನ್‌ನ ಅಭಿವೃದ್ಧಿ ಕೂಡಾ ರಾಸಾಯನಿಕ ಸಂಶ್ಲೇಷಣೆಯ ಅನುಕೂಲ ವನ್ನು ಸ್ಪಷ್ಟವಾಗಿ ಅರ್ಥಮಾಡಿಸುತ್ತದೆ. ಶತಮಾನಗಳಿಂದ ಜನರು ನೋವು ಕಡಿಮೆ ಮಾಡಲು ವಿಲೋ (Salix) ಮರದ ಸಿಪ್ಪೆ/ತೊಗಟೆಯನ್ನು ಜಗಿಯುತ್ತಿದ್ದರು. ಇದರಲ್ಲಿ ನೋವನ್ನು ತಗ್ಗಿಸುವ ‘ಸಲಿಸಿನ್’ ಎಂಬ ಸಂಯುಕ್ತವಿರುವುದರಿಂದ ನೋವು ಶಮನಗೊಳ್ಳುತ್ತಿತ್ತು.

ಆದರೆ ಸಿಪ್ಪೆಯಲ್ಲಿ ಈ ಅಂಶದ ಪ್ರಮಾಣ ಬಹಳ ಕಡಿಮೆಯಿದ್ದುದರಿಂದ, ಹೆಚ್ಚು ತೊಗಟೆಯನ್ನು ಸೇವಿಸಬೇಕಾಗುತ್ತಿತ್ತು ಮತ್ತು ಪರಿಣಾಮವೂ ತೃಪ್ತಿಕರವಾಗಿರಲಿಲ್ಲ. ಅಲ್ಲದೆ, ಈ ಮರಗಳು ಮಣ್ಣಿ ನಿಂದ ಸೀಸ ಮತ್ತು ಕ್ಯಾಡ್ಮಿಯಂಗಳಂಥ ಹಾನಿಕಾರಕ ಲೋಹಗಳನ್ನು ಹೀರಿಕೊಳ್ಳುತ್ತಿದ್ದು ದರಿಂದ, ನೇರವಾಗಿ ಸಿಪ್ಪೆಯನ್ನು ಜಗಿಯುವುದು ಆರೋಗ್ಯಕ್ಕೆ ಅಪಾಯಕಾರಿ ಆಗಬಹುದಾಗಿತ್ತು.

ಪ್ರಯೋಗಾಲಯದಲ್ಲಿ ಆಸ್ಪಿರಿನ್ ಅನ್ನು ಕೃತಕವಾಗಿ ತಯಾರಿಸುವ ಮಾರ್ಗವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದರಿಂದ, ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗಿವೆ. ಯಾವುದೇ ಹಾನಿಕಾರಕ ಗಳಿಲ್ಲದೆ, ವ್ಯಕ್ತಿಗೆ ಅಗತ್ಯವಿರುವ ಪ್ರಮಾಣದ ಔಷಧವಿರುವ ಮಾತ್ರೆಗಳು ದೊರಕುವಂತಾಗಿದೆ. ಈ ಮಾತ್ರೆಗಳು ಪರಿಣಾಮಕಾರಿಯಾಗಿ ನೋವನ್ನು ಉಪಶಮನಗೊಳಿಸುವುದರ ಜತೆಗೆ ನೈಸರ್ಗಿಕ ತೊಗಟೆಗಿಂತ ಹೆಚ್ಚು ಸುರಕ್ಷಿತವೂ ಆಗಿವೆ.

ಇದೇ ರಾಸಾಯನಿಕ ಸಂಶ್ಲೇಷಣೆಯ ಶಕ್ತಿ. ಇದರಿಂದ ಸುರಕ್ಷಿತ ಮತ್ತು ಪರಿಣಾಮಕಾರಿ ಔಷಽಗಳನ್ನು ಕಡಿಮೆ ದರದಲ್ಲಿ ತಯಾರಿಸಬಹುದಾಗಿದೆ. ಇಲ್ಲದಿದ್ದರೆ, ಎಷ್ಟೋ ಉಪಯುಕ್ತ ಔಷದಿಗಳು ಜಗತ್ತಿ ನಾದ್ಯಂತ ರೋಗಿಗಳಿಗೆ ದೊರಕಲು ಸಾಧ್ಯವಾಗುತ್ತಿರಲಿಲ್ಲ.

ಸಂಶ್ಲೇಷಿತ ರಾಸಾಯನಿಕಗಳು ಸುರಕ್ಷಿತವೇ?

ಹೇಗೆ ಎಲ್ಲ ನೈಸರ್ಗಿಕ ಪದಾರ್ಥಗಳು ಸುರಕ್ಷಿತವಲ್ಲವೋ, ಹಾಗೆಯೆ ಎಲ್ಲಾ ಸಂಶ್ಲೇಷಿತ ದ್ರವ್ಯಗಳು ಅಪಾಯಕಾರಿಯಾಗಿರುವುದಿಲ್ಲ. ಮೊದಲಿಗೆ, ಕೃತಕವಾಗಿ ತಯಾರಿಸಲಾದ ಎಲ್ಲಾ ರಾಸಾಯನಿಕ ಗಳಿಗೆ ಅಧ್ಯಯನಗಳ ಆಧಾರವಿರುತ್ತದೆ. ಅಂದರೆ, ಅವುಗಳ ವಿವಿಧ ಗುಣಲಕ್ಷಣಗಳು, ಹಾನಿಕಾರಕ ಅಂಶಗಳು, ಆರೋಗ್ಯದ ಮೇಲಾಗುವ ಪರಿಣಾಮಗಳು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು (ಆಹಾರ ಅಥವಾ ಔಷಧಿಯ ಭಾಗವಾಗಿದ್ದರೆ) ಎನ್ನುವಂಥಾ ವಿವರಗಳು ಲಭ್ಯವಿರುತ್ತವೆ.

ಕೃತಕ ರಾಸಾಯನಿಕಗಳ ತಯಾರಿ ಮತ್ತು ಅದರ ಪ್ರಕ್ರಿಯೆಗಳು, ಸೂಕ್ತ ಸಂಸ್ಥೆಗಳ ನಿಯಂತ್ರಣ ದಲ್ಲಿರುತ್ತವೆ. ಅಲ್ಲದೆ, ಮಾರುಕಟ್ಟೆಗೆ ಒಂದು ರಾಸಾಯನಿಕವು ಯಾವ ರೀತಿಯ ಬಳಕೆಗೆ ಬಿಡುಗಡೆ ಯಾಗಬಹುದು ಎಂಬುದು ಕೂಡ ವ್ಯವಸ್ಥಿತವೂ, ನಿಯಂತ್ರಿತವೂ ಆಗಿರುತ್ತದೆ. ನಮ್ಮ ದೇಶದಲ್ಲಿ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (ಎಫ್‌ ಎಸ್ ಎಸ್‌ಎಐ) ಮತ್ತು ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಗಳು ಕ್ರಮವಾಗಿ ಆಹಾರ ಮತ್ತು ಔಷಧಿಗಳ ಮೇಲ್ವಿಚಾರಣೆಯನ್ನು ನಿರಂತರವಾಗಿ ಕೈಗೊಳ್ಳುತ್ತವೆ. ಯಾವುದೇ ಹೊಸ ವೈಜ್ಞಾನಿಕ ಅಧ್ಯಯನ ಗಳು ರಾಸಾಯನಿಕಗಳ ದುಷ್ಪರಿಣಾಮಗಳನ್ನು ತೋರಿಸಿದರೆ, ಅಂಥವುಗಳ ಬಳಕೆಯನ್ನು ಈ ಸಂಸ್ಥೆಗಳು ನಿರ್ಬಂಧಿಸಬಹುದು, ನಿಷೇಧಿಸಬಹುದು ಅಥವಾ ಅದಕ್ಕೆ ಸುರಕ್ಷಿತ ಪರ್ಯಾಯ ಗಳನ್ನು ಸೂಚಿಸಬಹುದು.

ಎಲ್ಲಾ ಮೇಲ್ವಿಚಾರಣೆ ದಾಟಿ ಮಾರುಕಟ್ಟೆಗೆ ಒಂದು ಉತ್ಪನ್ನ ಬಂದರೆ ಅದರಲ್ಲಿರುವ ಎಲ್ಲ ಅಂಶಗಳು ಉತ್ತಮ ಗುಣಮಟ್ಟದ, ನಿರ್ದಿಷ್ಟ ರಾಸಾಯನಿಕಗಳ ಮತ್ತು ನಿಖರ ಪ್ರಮಾಣದ್ದಾಗಿದ್ದು, ನಿಗದಿತ ಬಳಕೆಗೆ ಮಾತ್ರ ಸೀಮಿತವಾಗಿರುತ್ತವೆ. ಹೀಗೆ ತಯಾರಿಸಲಾದ ರಾಸಾಯನಿಕಗಳು ಯಾವುದೇ ಅನಿರೀಕ್ಷಿತ ಮಾಲಿನ್ಯಕಾರಕಗಳಿಲ್ಲದ ಶುದ್ಧ ಉತ್ಪನ್ನಗಳಾಗಿರುತ್ತವೆ.

100 ಮಿಲಿಗ್ರಾಮ್ ಡೋಸ್‌ನ ಆಸ್ಪಿರಿನ್ ಮಾತ್ರೆಯಲ್ಲಿ ಅಷ್ಟೇ ಪ್ರಮಾಣದ ಔಷಧ ಇರಬೇಕು, ಇದ್ದೇ ಇರುತ್ತದೆ. ಮುಂದುವರಿದು, ವಿವಿಧ ಸಂಸ್ಥೆಗಳು ತಯಾರಿಸುವ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗಿ ರುವ ಎಲ್ಲಾ ರಾಸಾಯನಿಕ ಸಂಯುಕ್ತಗಳನ್ನು ಪ್ರಮಾಣದ ಸಮೇತ ಪಟ್ಟಿ ಮಾಡಲೇಬೇಕು. ಬಳಸ ಲಾದ ಯಾವುದೇ ಪದಾರ್ಥಗಳು ನಿಮ್ಮ ದೇಹಕ್ಕೆ ಸೂಕ್ತವಲ್ಲದಿದ್ದರೆ ಅಥವಾ ಬಳಸಲು ನಿಮಗೆ ಇಷ್ಟವಿಲ್ಲದಿದ್ದರೆ, ಸೂಕ್ತ ನಿರ್ಧಾರ ಕೈಗೊಳ್ಳಲು ನಿಮಗೆ ಈ ವಿವರಗಳು ಉಪಯುಕ್ತ ವಾಗುತ್ತವೆ. ಅಷ್ಟರ ಮಟ್ಟಿಗೆ ಈ ವ್ಯವ್ಯಸ್ಥೆ ಪಾರದರ್ಶಕತೆಯನ್ನು ಕಾಪಾಡಲು ಪ್ರಯತ್ನಿಸುತ್ತದೆ.

ಅತಿಯಾದರೆ ಅಮೃತವೂ ವಿಷ

1990ರಲ್ಲಿ, ಜೀವರಸಾಯನಶಾಸ್ತ್ರಜ್ಞ ಬ್ರೂಸ್ ಏಮ್ಸ್ ಅವರು ಪ್ರತಿಷ್ಠಿತ ‘ಪ್ರೊಸೀಡಿಂಗ್ಸ್ ಆಫ್ ನ್ಯಾಷ ನಲ್ ಅಕಾಡೆಮಿ ಆಫ್‌ ಸೈನ್ಸಸ್’ (ಯುಎಸ್‌ಎ) ಪತ್ರಿಕೆಯಲ್ಲಿ ಪ್ರಕಟಿಸಿದ ಎರಡು ಅಧ್ಯಯನ ಗಳಲ್ಲಿ ನೈಸರ್ಗಿಕ ಮತ್ತು ಸಂಶ್ಲೇಷಿತ ಸಂಯುಕ್ತಗಳ ಹಾನಿಕಾರಕ ಸಾಮರ್ಥ್ಯಗಳನ್ನು ಪರೀಕ್ಷಿಸಿ ದ್ದರು. ಮೊದಲ ಅಧ್ಯಯನದಲ್ಲಿ ನೈಸರ್ಗಿಕ ಮತ್ತು ಕೃತಕವಾಗಿ ತಯಾರಿಸಲಾದ ರಾಸಾಯನಿಕ ಗಳಿಗೆ ಸರಿ ಸಮಾನವಾದ ಹಾನಿಕಾರಕ ಸಾಮರ್ಥ್ಯಗಳಿವೆ ಎನ್ನುವುದು ತಿಳಿದು ಬಂದಿತು.

ಇನ್ನೊಂದು ಅಧ್ಯಯನದಲ್ಲಿ ನೈಸರ್ಗಿಕ ಮತ್ತು ಕೃತಕ ಕ್ರಿಮಿನಾಶಕಗಳನ್ನು ಅಭ್ಯಸಿಸಲಾಗಿ, ಎರಡೂ ಬಗೆಯ ರಾಸಾಯನಿಕಗಳೂ ಕ್ಯಾನ್ಸರ್, ರೂಪಾಂತರಗಳು ಅಥವಾ ಜನ್ಮದೋಷಗಳನ್ನು ಉಂಟುಮಾಡಬಹುದು ಎನ್ನುವುದು ತಿಳಿಯಿತು. ಇದರಿಂದಾಗಿ, ವಿಷ ಎನ್ನುವುದು ವಸ್ತುವಿನ ಮೂಲದ ಮೇಲೆ ಅವಲಂಬಿತವಾಗಿಲ್ಲ, ಬದಲಿಗೆ ಅದರ ಪ್ರಮಾಣದ (ಡೋಸ್) ಮೇಲೆ ಅವಲಂಬಿ ತವಾಗಿದೆ ಎಂಬುದು ಈ ಅಧ್ಯಯನಗಳಿಂದ ತಿಳಿದುಬಂತು.

ಮೂಲದ ಆಧಾರದ ಮೇಲೆ ಇದು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ತೀರ್ಮಾನಿಸುವುದು ಸೂಕ್ತವಲ್ಲ. ಎಲ್ಲಾ ನೈಸರ್ಗಿಕ ರಾಸಾಯನಿಕಗಳು ಆರೋಗ್ಯಕರವೇ? ಖಂಡಿತಾ ಅಲ್ಲ. ಸಂಶ್ಲೇಷಿತ ದ್ರವ್ಯಗಳೆಲ್ಲವೂ ಅತ್ಯುತ್ತಮವೇ ಮತ್ತು ಬಳಕೆಗೆ ಅರ್ಹವೇ? ಅದು ಸಹ ತಪ್ಪು. ‘ಅತಿಯಾದರೆ ಅಮೃತವೂ ವಿಷ’ ಎಂಬ ಗಾದೆಯಂತೆ, ಯಾವುದು ಒಳ್ಳೆಯದು ಎನ್ನುವುದಕ್ಕಿಂತ ಎಷ್ಟು ಪ್ರಮಾಣ ದಲ್ಲಿ ಒಳ್ಳೆಯದು ಎನ್ನುವುದು ಮುಖ್ಯ.

ಜಾಸ್ತಿ ನೀರನ್ನು ಕುಡಿದರೂ ಸಾವು ಬರುವ ಸಾಧ್ಯತೆಯಿದೆ. ನೀತಿಯಿಷ್ಟೇ- ‘ಕೆಮಿಕಲ್’ ಎಂಬ ನೆಪದಲ್ಲಿ ಜೀವ ಉಳಿಸುವ ಔಷಧಿಯನ್ನು ತಳ್ಳಿ ಹಾಕುವ ಹುಂಬತನ ಬೇಡ. ಹಾಗಂತ ಯೋಚಿಸದೆ ಎಲ್ಲವನ್ನೂ ಒಪ್ಪಿಕೊಳ್ಳುವ ಮೌಢ್ಯವೂ ಬೇಡ. ನೈಸರ್ಗಿಕವಾಗಲಿ, ಸಂಶ್ಲೇಷಿತವಾಗಲಿ, ಯಾವು ದನ್ನೂ ಕುರುಡಾಗಿ ನಂಬದೆ, ಕುರುಡಾಗಿ ತಿರಸ್ಕರಿಸದೆ, ಅದರ ಸ್ವರೂಪವನ್ನು ತಿಳಿದು, ಪ್ರಮಾಣ ವನ್ನು ಅರಿತು, ಅಪಾಯ ಮತ್ತು ಲಾಭಗಳೆರಡನ್ನೂ ಅಳೆದು ಪ್ರಮಾಣೀಕರಿಸಿದ ಬಳಕೆ ಮಾಡು ವುದು ಉತ್ತಮ. ‘ರಾಸಾಯನಿಕ’ ಎಂದ ಮಾತ್ರಕ್ಕೇ ವಿಷವಲ್ಲ, ಅದು ಬದುಕಿನ ಮೂಲ ಎಂಬುದನ್ನು ಮರೆಯದಿರೋಣ...

(ಲೇಖಕರು ಭಾರತೀಯ ವಿeನ ಸಂಸ್ಥೆಯಲ್ಲಿ ಗ್ರ್ಯಾಂಟ್ಸ್ ಮ್ಯಾನೇಜರ್)