ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Rohith Kumar H G Column: ದೇಶದಲ್ಲಿನ ರೇಬಿಸ್‌ ಸಮಸ್ಯೆಗೆ ʼಸುಪ್ರೀಂʼ ತೀರ್ಪು ಪರಿಹಾರವೇ ?

ಸಮಾಜವು ಭಯವಿಲ್ಲದೆ ಬದುಕಬೇಕು. ಶಿಶುಗಳು ಮತ್ತು ಮಕ್ಕಳು ರೇಬಿಸ್‌ಗೆ ಬಲಿಯಾಗಬಾರದು. ಹಾಗಾಗಿ, ಯಾವುದೇ ಬಡಾವಣೆಗಳಲ್ಲಿ ಬೀದಿನಾಯಿಗಳು ಇರಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಅಷ್ಟೇ ಅಲ್ಲದೆ, ಈ ಆದೇಶದ ಅನುಷ್ಠಾನಕ್ಕೆ ಯಾರಾದರೂ ಅಡ್ಡಿಪಡಿಸಿದರೆ ನ್ಯಾಯಾಲಯ ನಿಂದನೆಯನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.

ದೇಶದಲ್ಲಿನ ರೇಬಿಸ್‌ ಸಮಸ್ಯೆಗೆ ʼಸುಪ್ರೀಂʼ ತೀರ್ಪು ಪರಿಹಾರವೇ ?

Ashok Nayak Ashok Nayak Aug 22, 2025 8:23 AM

ನಾಯಿ ನೆರಳು

2025ರ ಆಗ 11ರಂದು, ಭಾರತದ ಸುಪ್ರೀಂ ಕೋರ್ಟ್ ನೀಡಿದ ಆದೇಶವು ದೇಶಾದ್ಯಂತ ಸಾರ್ವಜನಿಕರ ಸುರಕ್ಷತೆ ಮತ್ತು ಪ್ರಾಣಿಹಿತಾಸಕ್ತಿ ನಡುವಿನ ಚರ್ಚೆಯನ್ನು ಎಬ್ಬಿಸಿದೆ.

ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಭಾಗವಾದ ಘಾಜಿಯಾಬಾದ್‌ನಲ್ಲಿ ಜೂನ್ 30ರಂದು ಛಾವಿ ಶರ್ಮಾ ಎಂಬ ಆರು ವರ್ಷದ ಬಾಲಕಿಯ ಮೇಲೆ ರೇಬಿಸ್ ಸೋಂಕಿತ ಬೀದಿನಾಯಿ ಯೊಂದು ಆಕ್ರಮಣ ಮಾಡಿ, ಗಂಭೀರವಾಗಿ ಗಾಯಗೊಳಿಸಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ತಕ್ಷಣವೇ ಚಿಕಿತ್ಸೆ ಕೊಟ್ಟು ರೇಬಿಸ್ ಲಸಿಕೆ ನೀಡಿದಾಗ್ಯೂ, ಚಿಕಿತ್ಸೆ ಫಲಕಾರಿಯಾಗದೆ ಲಸಿಕೆಯ ನಾಲ್ಕನೇ ಮತ್ತು ಕೊನೆಯ ಡೋಸ್‌ಗಿಂತ ಕೆಲವೇ ದಿನಗಳ ಮುನ್ನ, ಅಂದರೆ ಜುಲೈ 25ರಂದು ಬಾಲಕಿ ಮೃತಪಟ್ಟಳು.

ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯನ್ನು ಪರಿಗಣಿಸಿ, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಆರ್.ಮಹಾದೇವನ್ ನೇತೃತ್ವದ ಪೀಠವು ಸ್ವಯಂಪ್ರೇರಿತವಾಗಿ ಪ್ರಕರಣ ವನ್ನು ಕೈಗೆತ್ತಿಕೊಂಡು, ದೆಹಲಿ, ಗುರುಗ್ರಾಮ, ನೊಯ್ಡಾ ಮತ್ತು ಘಾಜಿಯಾಬಾದ್‌ನಲ್ಲಿ ಬೀಡು ಬಿಟ್ಟಿರುವ ಎಲ್ಲಾ ಬೀದಿನಾಯಿಗಳನ್ನು 8 ವಾರಗಳೊಳಗಾಗಿ ಸಾರ್ವಜನಿಕ ಸ್ಥಳಗಳಿಂದ ಪ್ರತ್ಯೇಕ ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕೆಂದು ಆದೇಶ ನೀಡಿತು.

ಸಮಾಜವು ಭಯವಿಲ್ಲದೆ ಬದುಕಬೇಕು. ಶಿಶುಗಳು ಮತ್ತು ಮಕ್ಕಳು ರೇಬಿಸ್‌ಗೆ ಬಲಿಯಾಗಬಾರದು. ಹಾಗಾಗಿ, ಯಾವುದೇ ಬಡಾವಣೆಗಳಲ್ಲಿ ಬೀದಿನಾಯಿಗಳು ಇರಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಅಷ್ಟೇ ಅಲ್ಲದೆ, ಈ ಆದೇಶದ ಅನುಷ್ಠಾನಕ್ಕೆ ಯಾರಾದರೂ ಅಡ್ಡಿಪಡಿಸಿದರೆ ನ್ಯಾಯಾ ಲಯ ನಿಂದನೆಯನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.

ಈ ತೀರ್ಪಿಗೆ ಕೆಲ ದಿನಗಳಿಂದ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಲೇ ಇವೆ. ಅತ್ತ ಪ್ರಾಣಿ ಪ್ರಿಯರು, ಪ್ರಾಣಿ ದಯಾ ಸಂಘಗಳ ಹೋರಾಟಗಾರರು “ಈ ತೀರ್ಪು ಬೀದಿನಾಯಿಗಳ ಹಿಂಸೆಗೆ ಕಾರಣವಾಗುತ್ತದೆ" ಎಂದು ದೂರಿದರೆ, ಇತ್ತ ನಾಯಿಗಳ ದಾಳಿಯಿಂದ ಬಾಧಿತ ಕುಟುಂಬದವರು ಹಾಗೂ ವಿವಿಧ ಬಡಾವಣೆಗಳ ನಿವಾಸಿ ಸಂಘದವರು “ಇದೊಂದು ಅತ್ಯವಶ್ಯಕ ಕ್ರಮ" ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇಂಥದ್ದೊಂದು ದೊಡ್ಡ ತೀರ್ಪಿಗೆ ಒಂದು ಸಾವು ಮಾತ್ರ ಕಾರಣವೇ ಎಂದರೆ ಖಂಡಿತಾ ತಪ್ಪಾದೀತು.

ಅಂಕಿ-ಅಂಶಗಳು: 2024ರಲ್ಲಿ ಭಾರತದಲ್ಲಿ 37 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ! 2025ರ ಮೊದಲರ್ಧದಲ್ಲಿ ಕೇವಲ ದೆಹಲಿಯ 26000ಕ್ಕೂ ಹೆಚ್ಚು ನಾಯಿ ಕಡಿತ ಘಟನೆಗಳು ಸಂಭವಿಸಿವೆ. ಅಂದರೆ, ದಿನಕ್ಕೆ ಸರಾಸರಿ 2000 ಪ್ರಕರಣಗಳು!

ಇದರಲ್ಲಿ ಹೆಚ್ಚು ತೊಂದರೆಗೊಳಗಾದವರು ಮಕ್ಕಳು. 2024ರಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ 5 ಲಕ್ಷಕ್ಕೂ ಹೆಚ್ಚು ಮಕ್ಕಳು ನಾಯಿಗಳ ದಾಳಿಗೆ ತುತ್ತಾಗಿದ್ದಾರೆ. ಅಂದರೆ ಪ್ರತಿ ಗಂಟೆಗೆ ಸುಮಾರು 60 ಮಕ್ಕಳು ಕಡಿತಕ್ಕೆ ಒಳಗಾಗಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್ ಅತಿ ಹೆಚ್ಚು ಪ್ರಕರಣವುಳ್ಳ ರಾಜ್ಯಗಳಾಗಿವೆ.

ಕರ್ನಾಟಕದಲ್ಲಿ ಕಳೆದ ವರ್ಷ 3.6 ಲಕ್ಷ ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಈ ವರ್ಷದ ಮೊದಲ 6 ತಿಂಗಳಲ್ಲಿಯೇ 2.31 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.36ರಷ್ಟು ಏರಿಕೆಯಾಗಿದೆ. ಇನ್ನು ರೇಬಿಸ್ ನಿಂದಾದ ಸಾವಿನ ಅಂಕಿ-ಅಂಶದ ವಿಷಯಕ್ಕೆ ಬಂದರೆ, ಈ ಸಂಬಂಧ ಸ್ಪಷ್ಟ ಹಾಗೂ ಏಕಸ್ವರೂಪದ ಮಾಹಿತಿ ಲಭ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ, ಇಂಥ ಪ್ರಕರಣ ಗಳನ್ನು ದಾಖಲಿಸುವಲ್ಲಿ ಇರುವ ಹಲವಾರು ಸವಾಲುಗಳು.

ಲೋಕಸಭೆಯ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸರಕಾರ ನೀಡಿದ ಉತ್ತರದಲ್ಲಿದ್ದ ಮಾಹಿತಿಯ ಪ್ರಕಾರ ಭಾರತದಲ್ಲಿ 2024ರಲ್ಲಿ ಕನಿಷ್ಠ 54 ರೇಬಿಸ್ ಸಾವುಗಳು ವರದಿಯಾಗಿವೆ. ಇದೇ ವರ್ಷ ಕರ್ನಾಟಕದಲ್ಲಿಯೇ 42 ಮಂದಿ ರಬಿಸ್‌ನಿಂದ ಮೃತಪಟ್ಟಿದ್ದಾರೆ ಎಂದು ಇನ್ನೊಂದು ವರದಿ ಹೇಳಿದೆ! ಅಂದರೆ ದೇಶದಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ ರೇಬಿಸ್ ಸಾವುಗಳಲ್ಲಿ ಕರ್ನಾಟಕವೇ ಮುಂದಿದೆ.

2025ರ ಜನವರಿಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಪ್ರಕಟಿಸಿದ ವರದಿ ಯನ್ವಯ ದೇಶದಲ್ಲಿ ರೇಬಿಸ್ ನಿಂದ ಪ್ರತಿ ವರ್ಷ ಅಂದಾಜು 5726 ಮಂದಿ ಸಾವನ್ನಪ್ಪುತ್ತಿದ್ದಾರೆ. ಆದರೆ, ಈ ಎಲ್ಲಾ ಸಂಖ್ಯೆಗಳು ನಿಖರವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಅದರ ಪ್ರಕಾರ ಭಾರತ ಜಗತ್ತಿನಲ್ಲಿ ಅತ್ಯಂತ ಹೆಚ್ಚು ರೇಬಿಸ್ ಬಾಧಿತ ದೇಶವಾಗಿದ್ದು, ಜಗತ್ತಿನ ಶೇ.36ರಷ್ಟು ರೇಬಿಸ್ ಸಾವುಗಳು ಭಾರತದ ಸಂಭವಿಸುತ್ತವೆ.

ನಮ್ಮ ದೇಶದಲ್ಲಿ ವರ್ಷಕ್ಕೆ 18000 ದಿಂದ 20000 ಜನರು ರಬಿಸ್‌ಗೆ ಬಲಿಯಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಮೇಲ್ಕಂಡ ಯಾವುದೇ ಅಂಕಿ-ಅಂಶವನ್ನು ಪರಿಗಣಿಸಿದರೂ, ಇರುವ ಸಮಸ್ಯೆ ಗಂಭೀರವಾದುದೇ ಹಾಗೂ ಶೇ.99ರಷ್ಟು ರೇಬಿಸ್ ಗಳು ನಾಯಿ ಕಡಿತದಿಂದಲೇ ಬರುವಂಥವು ಎನ್ನುವುದು ಕೂಡಾ ನಿಜ.

ರಬಿಸ್ ಎಂಬ ಸೈಲೆಂಟ್ ಕಿಲ್ಲರ್!: ಒಬ್ಬ ವ್ಯಕ್ತಿ ಅಥವಾ ಪ್ರಾಣಿಯನ್ನು ರಬಿಸ್ ಸೋಂಕಿತ ಪ್ರಾಣಿ ಕಚ್ಚಿದಾಗ, ಕಚ್ಚಿದ ಪ್ರಾಣಿಯ ಲಾಲಾರಸದಲ್ಲಿರುವ ರೇಬಿಸ್ ವೈರಸ್ ಗಾಯದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಹೀಗೆ ದೇಹ ಸೇರಿದ ವೈರಸ್ ಕೆಲವು ವಾರಗಳಿಂದ ತಿಂಗಳವರೆಗೆ ಕಚ್ಚಿದ ಜಾಗದಲ್ಲಿನ ಸ್ನಾಯುಗಳಲ್ಲಿ ಹಲವಾರು ಬಾರಿ ದ್ವಿಗುಣಗೊಳ್ಳುತ್ತದೆ.

ನಂತರ ಕಚ್ಚಿದ ಜಾಗದ ಹತ್ತಿರದಲ್ಲಿರುವ ನರಗಳ ತುದಿಗೆ ಅಂಟಿಕೊಂಡು ಬೆನ್ನುಹುರಿಯ ಮೂಲಕ ಕೊನೆಗೆ ಮಿದುಳನ್ನು ತಲುಪುತ್ತವೆ. ಈ ಪ್ರಕ್ರಿಯೆ ನಿಧಾನವಾಗಿ ನಡೆಯುವುದರಿಂದ ರೋಗ ಲಕ್ಷಣ ಗಳು ಕಾಣಿಸಿಕೊಳ್ಳಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಕಚ್ಚಿದ ಜಾಗವು ಮಿದುಳಿಗೆ ಎಷ್ಟು ಹತ್ತಿರವಿದೆ ಎಂಬುದರ ಆಧಾರದ ಮೇಲೆ (ಹತ್ತಿರವಿದ್ದಷ್ಟೂ ಬೇಗ) ಕೆಲವು ವಾರಗಳಿಂದ 3 ತಿಂಗಳ ಒಳಗೆ ರೋಗ ಲಕ್ಷಣಳಾದ ಮಿದುಳಿನ ಉರಿಯೂತ, ನೀರನ್ನು ಕಂಡರೆ ಭಯ (ಹೈಡ್ರೋ ಫೋಬಿಯಾ), ಗೊಂದಲ, ಆಕ್ರಮಣಕಾರಿ ನಡವಳಿಕೆ, ಹೆಚ್ಚು ಲಾಲಾರಸದ ಉತ್ಪತ್ತಿ ಮತ್ತು ಪಾರ್ಶ್ವ ವಾಯು ಮುಂತಾದ ತೀವ್ರವಾದ ನರರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಸೋಂಕಿತ ಪ್ರಾಣಿಗಳಿಂದ ಕಡಿತಕ್ಕೊಳಗಾದ ತಕ್ಷಣವೇ ಲಸಿಕೆ ಪಡೆದಲ್ಲಿ ಮಿದುಳನ್ನು ವೈರಸ್ ತಲುಪದಂತೆ ತಡೆಯಬಹುದು. ಹಾಗಾಗಿಯೇ ಯಾವುದೇ ಪ್ರಾಣಿ ಕಡಿದ ನಂತರ ತಕ್ಷಣವೇ ವೈದ್ಯರನ್ನು ಕಾಣುವುದು ಅತ್ಯವಶ್ಯಕ. ಆದರೆ, ಒಮ್ಮೆ ರೋಗ ಲಕ್ಷಣಗಳು ಕಾಣಿಸಿಕೊಂಡವು ಎಂದರೆ ಅಂಥ ಪ್ರಕರಣಗಳಲ್ಲಿ ಸಾವು ಖಚಿತವಾಗಿರುತ್ತದೆ.

ಸವಾಲುಗಳು: ಮೇಲಿನೆ ಅಂಕಿ-ಅಂಶಗಳನ್ನು ಪರಿಗಣಿಸಿ ಹೇಳುವುದಾದರೆ ಸುಪ್ರೀಂ ಕೋರ್ಟಿನ ಆದೇಶದ ಹಿಂದೆ ಒಂದು ಉತ್ತಮವಾದ ಉದ್ದೇಶವಂತೂ ಖಂಡಿತಾ ಇದೆ. ಆದರೆ, ಅದರ ಜತೆಗೆ ಆದೇಶದ ಅನುಷ್ಠಾನದಲ್ಲಿ ಎದುರಾಗುವ ಸವಾಲುಗಳು ಕೂಡಾ ದೊಡ್ಡ ಮಟ್ಟದ್ದೇ ಆಗಿವೆ. ಈ ಆದೇಶವನ್ನು ಜಾರಿಗೊಳಿಸಲು ವ್ಯಾಪಕ ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ಅವಶ್ಯಕತೆ ಯಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಅಂಕಿ-ಅಂಶದ ಅನುಸಾರ ಅಲ್ಲಿರುವ ಬೀದಿ ನಾಯಿಗಳ ಒಟ್ಟು ಸಂಖ್ಯೆ ಅಂದಾಜು 10 ಲಕ್ಷ!

ಇಡೀ ದೇಶದಲ್ಲಿನ ಬೀದಿನಾಯಿಗಳ ಸಂಖ್ಯೆ ಸುಮಾರು 6 ಕೋಟಿಗೂ ಹೆಚ್ಚು! ಆದರೆ, ದೆಹಲಿಯಲ್ಲಿ ಪ್ರಸ್ತುತವಿರುವ 20 ಪ್ರಾಣಿ ಜನ್ಮ ನಿಯಂತ್ರಣ ಕೇಂದ್ರಗಳಲ್ಲಿ ಕೇವಲ 2500 ನಾಯಿಗಳಿಗೆ ಮಾತ್ರ ಆಶ್ರಯ ನೀಡಬಹುದಾಗಿದೆ. ಎಲ್ಲಾ ನಾಯಿಗಳಿಗೆ ಆಶ್ರಯ ಸಿಗಬೇಕಾದರೆ ಕನಿಷ್ಠ 2000 ಹೊಸ ಆಶ್ರಯ ಕೇಂದ್ರಗಳನ್ನು ನಿರ್ಮಿಸಬೇಕಾಗುತ್ತವೆ.

ಇದಕ್ಕೆ 15000 ಕೋಟಿ ರುಪಾಯಿ ನಿರ್ಮಾಣ ವೆಚ್ಚ ಹಾಗೂ ವಾರಕ್ಕೆ 5 ಕೋಟಿ ರು. ಆಹಾರ ವೆಚ್ಚವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ಪ್ರದೇಶದ ಬೇರೆ ನಗರಗಳಾದ ಗುರುಗ್ರಾಮ (50000 ನಾಯಿಗಳಿಗೆ ಕೇವಲ 50 ನಾಯಿಗಳು ವಾಸಿಸಬಹುದಾದ 2 ಚಿಕ್ಕ ಆಶ್ರಯ ಕೇಂದ್ರ), ಘಾಜಿಯಾಬಾದ್ (48000 ನಾಯಿಗಳಿಗೆ ಯಾವುದೇ ಅಧಿಕೃತ ಆಶ್ರಯ ಕೇಂದ್ರ ವಿಲ್ಲ) ಮತ್ತು ನೊಯ್ಡಾದಲ್ಲಿ (1.5 ಲಕ್ಷ ನಾಯಿಗಳಿಗೆ 4 ಖಾಸಗಿ ಕೇಂದ್ರಗಳು) ಸಹ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಶೀಘ್ರವಾಗಿಯೇ ಕ್ರಮ ಕೈಗೊಂಡು ಮೂಲ ಸೌಕರ್ಯಗಳನ್ನು ನಿರ್ಮಿಸಿ ದರೂ, ಇವುಗಳ ನಿರ್ವಹಣೆಗೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ವಾಹನಗಳ ಕೊರತೆಯೂ ತೀವ್ರವಾಗಿವೆ.

ಜಾಗತಿಕ ಮಾದರಿಗಳು: ಹಾಗಂತ ಇದೇನೂ ವಿಶ್ವದಲ್ಲಿ ಮೊದಲ ಬಾರಿಗೆ ಕೈಗೊಳ್ಳಲಾದ ನಿರ್ಧಾರವಲ್ಲ. ಸಿಂಗಾಪುರ್, ನೆದರ್ಲ್ಯಾಂಡ್ಸ್, ಭೂತಾನ್‌ನಂಥ ದೇಶಗಳು ಈಗಾಗಲೇ ಈ ಸಮಸ್ಯೆ ಯನ್ನು ಬಗೆಹರಿಸಿವೆ. ನೆದರ್ಲ್ಯಾಂಡ್ಸ್ ಕೈಗೊಂಡ ರಾಷ್ಟೀಯ ಕಾರ್ಯಕ್ರಮದಡಿ ಕಡಿಮೆ ಅವಧಿ ಯಲ್ಲಿಯೇ ಶೇ.70ಕ್ಕೂ ಹೆಚ್ಚಿನ ಹೆಣ್ಣು ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ಮಾಡುವುದರ ಜತೆಗೆ ಬೀದಿನಾಯಿಗಳಿಗೆ ರಬಿಸ್ ಲಸಿಕೆಯನ್ನು ನೀಡಲಾಯಿತು.

ಪ್ರಾಣಿ ಹಿಂಸೆ ಅಥವಾ ನಿರ್ಲಕ್ಷಗಳನ್ನೂ ಗಂಭೀರ ಅಪರಾಧ ಎಂದು ಪರಿಗಣಿಸಿ, ಹೆಚ್ಚಿನ ದಂಡ ಗಳನ್ನು ವಿಧಿಸಲಾಯಿತು. ಪ್ರಾಣಿಗಳ ಹಕ್ಕುಗಳ ಸಂರಕ್ಷಣೆಗೆ ವಿಶೇಷ ಪೊಲೀಸ್ ಪಡೆಗಳನ್ನು ರಚಿಸಲಾಯಿತು. ಎಲ್ಲಾ ನಾಯಿಗಳ ನೋಂದಣಿಯನ್ನು ಕಡ್ಡಾಯಗೊಳಿಸಲಾಯಿತು ಮತ್ತು ಅವುಗಳಿಗೆ ಮೈಕ್ರೋ ಚಿಪ್ ಅಳವಡಿಸಲಾಯಿತು.

ಪ್ರಾಣಿಗಳ ದತ್ತು ಪಡೆಯುವುದಕ್ಕೆ ಪ್ರೋತ್ಸಾಹಿಸುವುದರ ಜತೆಗೆ ಸಾರ್ವಜನಿಕರ ಜವಾಬ್ದಾರಿ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸಲಾಯಿತು. ಈ ಎಲ್ಲಾ ಪರಿಶ್ರಮದ ಕಾರಣ ಹತ್ತು ಲಕ್ಷಕ್ಕೂ ಹೆಚ್ಚು ನಾಯಿಗಳು ತಮ್ಮ ಮನೆಯನ್ನು ಕಂಡುಕೊಂಡು ನೆದರ್ಲ್ಯಾಂಡ್ಸ್ ಬೀದಿನಾಯಿಗಳಿಂದ ಮುಕ್ತವಾಯಿತು.

ಇನ್ನು ಸಿಂಗಾಪುರ್ ಬಹಳ ಹಿಂದಿನಿಂದಲೇ ಹಲವು ಕ್ರಮಗಳನ್ನು ಜಾರಿಗೆ ತಂದಿದ್ದರ ಪರಿಣಾಮ ವಾಗಿ 1953ರಿಂದ ಇಡೀ ದೇಶ ರಬಿಸ್ ಮುಕ್ತವಾಗಿದೆ. ಆದಾಗ್ಯೂ, ಅಲ್ಲಿನ ಸರಕಾರ ತನ್ನ ಪ್ರಯತ್ನ‌ ವನ್ನು ನಿಲ್ಲಿಸಿಲ್ಲ. 2018ರಿಂದ ವೈಜ್ಞಾನಿಕ ಮತ್ತು ದತ್ತಾಂಶ ಆಧಾರಿತ ಮಾದರಿಯನ್ನು ಜಾರಿಗೆ ತಂದಿದೆ. ಬೀದಿ ನಾಯಿಗಳ ಸಂತಾನಶಕ್ತಿಹರಣ, ಚಿಪ್ ಅಳವಡಿಕೆ, ಲಸಿಕೀಕರಣಗಳ ಜತೆಗೆ ಆಕ್ರಮಣಕಾರಿ ವರ್ತನೆ ಇರುವ ನಾಯಿಗಳನ್ನು ತಹಬದಿಗೆ ತಂದು, ತರಬೇತಿ ನೀಡಿ ಅವುಗಳನ್ನು ಮನೆಗಳಿಗೆ ಸೇರಿಸಲು ಅರ್ಹ ಪ್ರಾಣಿಗಳಾಗಿ ಪರಿವರ್ತಿಸಿದೆ.

ಇನ್ನು ಭೂತಾನ್ ಸಹ ಎಲ್ಲಾ ಬೀದಿನಾಯಿಗಳನ್ನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ಜತೆಗೆ ಲಸಿಕೆಯನ್ನು ನೀಡುವ ಕಾರ್ಯವನ್ನು 2023ಕ್ಕೆ ಪೂರ್ಣಗೊಳಿಸಿತು. 14 ವರ್ಷಗಳ ಕಾಲ ಸತತವಾಗಿ ನಡೆದ ಈ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸಾವಿರಾರು ಸ್ವಯಂಸೇವಕರು ಕೈಜೋಡಿಸಿ ದ್ದರು. ಇವೆಲ್ಲದರಿಂದ, ಭೂತಾನ್ ರೇಬಿಸ್ ನಿಂದ ಬಹುಪಾಲು ಮುಕ್ತವಾಯಿತು. ಇಲ್ಲಿ ಅರ್ಥ ವಾಗುವ ಒಂದು ಮುಖ್ಯ ಅಂಶವೆಂದರೆ, ಇವೆಲ್ಲ ಕಾರ್ಯಗಳ ಅನುಷ್ಠಾನಕ್ಕೆ ಸತತ ಪರಿಶ್ರಮ, ದೀರ್ಘಕಾಲದ ಕಾರ್ಯಕ್ರಮ ಹಾಗೂ ಇದಕ್ಕೆ ನೆರವಾಗುವ ಸಹಸ್ರಾರು ಕೈಗಳು ಬೇಕಾಗುತ್ತವೆ ಎಂಬುದು.

ದೆಹಲಿಯಲ್ಲಿನ 10 ಲಕ್ಷ ನಾಯಿಗಳ ತೆರವಿಗೆ ಮತ್ತು ನಮ್ಮ ದೇಶದಲ್ಲಿರುವ 6 ಕೋಟಿ ನಾಯಿಗಳ ನಿರ್ವಹಣೆಗೆ ಸಮಗ್ರ ಯೋಜನೆಯೊಂದರ ಅವಶ್ಯಕತೆಯಂತೂ ಇದೆ. ಕಾನೂನು ಏನು ಹೇಳುತ್ತದೆ?: ಬೀದಿನಾಯಿಗಳು ಮತ್ತು ಸಾಕುನಾಯಿಗಳೆರಡಕ್ಕೂ ಭಾರತೀಯ ಕಾನೂನು ಬಲವಾದ ರಕ್ಷಣೆ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ.

ಮೊದಲಿಗೆ, ನಮ್ಮ ಸಂವಿಧಾನದ 51ಎ (ಜಿ) ವಿಧಿಯು ಪ್ರಾಣಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವೆಂದು ಪ್ರತಿಪಾದಿಸುತ್ತದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 (ಪಿಸಿಎ) ಸಾಕುಪ್ರಾಣಿ ಮತ್ತು ಬೀದಿನಾಯಿ ಸೇರಿದಂತೆ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ನಿಷೇಧಿಸುತ್ತದೆ ಮತ್ತು ನಿಂದನೆ, ನಿರ್ಲಕ್ಷ್ಯ ಅಥವಾ ಅನಗತ್ಯ ನೋವು ಉಂಟುಮಾಡುವುದಕ್ಕೆ ಶಿಕ್ಷೆಯನ್ನು ಕಡ್ಡಾಯಗೊಳಿಸುತ್ತದೆ.

2023ರ ಪಶುಜನ್ಮ ನಿಯಂತ್ರಣ ನಿಯಮಗಳ ಅನುಸಾರ ಪುರಸಭೆಗಳು ಬೀದಿನಾಯಿಗಳ ಸಂಖ್ಯೆ ಯನ್ನು ಮಾನವೀಯವಾಗಿ ನಿರ್ವಹಿಸಬೇಕಾಗುತ್ತದೆ. ಅಂದರೆ, ನಾಯಿಗಳನ್ನು ಸೆರೆಹಿಡಿದು, ಸಂತಾನಶಕ್ತಿಹರಣಗೊಳಿಸಿ, ರೇಬಿಸ್ ಲಸಿಕೆ ನೀಡಿ ಮತ್ತು ನಂತರ ಅವುಗಳ ಮೂಲಪ್ರದೇಶಕ್ಕೆ ಹಿಂದಿರುಗಿಸಬೇಕು.

ಅವುಗಳು ಅನಾರೋಗ್ಯದಿಂದ ಕೂಡಿದ್ದರೆ ಮತ್ತು ಆಕ್ರಮಣಕಾರಿಯಾಗಿದ್ದರೆ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಬೀದಿನಾಯಿಗಳನ್ನು ಕೊಲ್ಲುವುದನ್ನು ಈ ನಿಯಮಗಳು ಸ್ಪಷ್ಟವಾಗಿ ನಿಷೇಧಿಸುತ್ತವೆ. ಆದರೆ, ಸಾರ್ವಜನಿಕ ಸುರಕ್ಷತೆಗಾಗಿ ನ್ಯಾಯಾಲಯ ಆಗ 11ರಂದು ನೀಡಿದ ಆದೇಶವು ಪ್ರಸ್ತುತ ಅಸ್ತಿತ್ವದಲ್ಲಿರುವ ಪಶುಜನ್ಮ ನಿಯಂತ್ರಣ ನಿಯಮಗಳ ಅಗತ್ಯವನ್ನು ತಾತ್ಕಾಲಿಕವಾಗಿ ರದ್ದುಗೊಳಿಸುತ್ತದೆ. ಅಂದರೆ, ಲಸಿಕೀಕರಣ ಮತ್ತು ಸಂತಾನಶಕ್ತಿ ಹರಣವಾದ ನಾಯಿಗಳನ್ನು ಅವುಗಳ ಮೂಲಸ್ಥಾನಕ್ಕೆ ಸೇರಿಸಬೇಕು ಎಂದಿದ್ದ ಹಿಂದಿನ ನಿಯಮ ಈಗ ಇಲ್ಲದಂತಾಗಿದೆ.

ಮುಂದಿನ ದಾರಿ: ಗಂಭೀರ ಸಮಸ್ಯೆಗಳು ಶೀಘ್ರ ಮತ್ತು ಗಂಭೀರ ಕ್ರಮವನ್ನೇ ಬೇಡುತ್ತವೆ. ಅದೇ ಕಾರಣಕ್ಕೆ ನ್ಯಾಯಾಲಯವು 8 ವಾರಗಳ ಗಡುವು ವಿಧಿಸಿರುವಂಥದ್ದು. ಬೆಳೆಯಬೇಕಾದ ಪುಟ್ಟ ಕಂದಮ್ಮಗಳು, ಮನೆಯಲ್ಲಿನ ಹಿರಿಯರು ಬೀದಿನಾಯಿಯ ಆಕ್ರಮಣಕ್ಕೆ ತುತ್ತಾಗುವುದನ್ನು ಯಾರಿಗೂ ಸಹಿಸಲು ಸಾಧ್ಯವಿಲ್ಲ. ಹಾಗೆಂದು ತಕ್ಷಣದ ಪರಿಹಾರಕ್ಕೆ ಬೀದಿನಾಯಿಗಳ ಹರಣವಾದರೆ ಅದನ್ನೂ ಒಪ್ಪಲು ಸಾಧ್ಯವಿಲ್ಲ. ಹಂತ ಹಂತವಾಗಿ ಸಮರ್ಪಕ ಪಶು ವೈದ್ಯಕೀಯ ಸೌಲಭ್ಯ ಗಳಿರುವ ಆಶ್ರಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ, ಎಲ್ಲಾ ಬೀದಿನಾಯಿಗಳಿಗೆ ಲಸಿಕೆಯಿತ್ತು, ಪ್ರಾಣಿ ದತ್ತು ಕ್ರಿಯೆಗೆ ನೆರವು ನೀಡಿ, ಜವಾಬ್ದಾರಿಯುತವಾಗಿಯೇ ಪ್ರಾಣಿಗಳನ್ನು ಬೀದಿಯಿಂದ ಅದರ ‘ಮನೆ’ ಸೇರಿಸುವ ಕಾರ್ಯ ನಡೆಯಬೇಕಾಗಿದೆ.

ಇದು ದೀರ್ಘಕಾಲಿಕ ದೃಷ್ಟಿಕೋನದಿಂದ ಮಾತ್ರ ಬಗೆಹರಿಸಬಹುದಾದಂಥ ಒಂದು ಸಮಸ್ಯೆ. ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿಹಿತಾಸಕ್ತಿ ಸಮತೋಲನ ಕಾಯುವ ರಾಷ್ಟ್ರೀಯ ನೀತಿಗೆ ಕಾರಣವಾಗುವಂಥ ವಿಷಯವಿದು. ಭಾರತದ ಮಕ್ಕಳು ಮತ್ತು ಅದರ ಪ್ರಾಣಿ-ಸಂಪತ್ತು, ಎರಡನ್ನೂ ಉಳಿಸುವ ಕ್ರಮ ಮಾತ್ರವೇ ನಿಜವಾದ ಪರಿಹಾರವಾಗಬಲ್ಲದು.

(ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗ್ರಾಂಟ್ಸ್ ಮ್ಯಾನೇಜರ್)