ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kayarga Column: ಆಯೋಗದ ಮೇಲೆ ಆಯೋಗ, ಸಂತ್ರಸ್ತರಿಗಿಲ್ಲ ಪರಿಹಾರ ಯೋಗ

ಚಾಮರಾಜನಗರದ ನೆಲದಲ್ಲಿಯೇ ವಿಶೇಷ ಸಂಪುಟ ಸಭೆ ನಡೆಸಲು ಸರಕಾರ ಸಜ್ಜಾಗಿದೆ. ಶುಕ್ರವಾರ (ಏಪ್ರಿಲ್ 17) ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಾದರೂ ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿರುವ ಗಡಿ ಜಿಲ್ಲೆಯ ಜನರ ದೀರ್ಘ ಕಾಲದ ಬೇಡಿಕೆಗಳಿಗೆ ಸರಕಾರ ಸ್ಪಂದಿಸಬೇಕು. ಆಕ್ಸಿಜನ್ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಆಗಬೇಕು. ಸಂತ್ರಸ್ತರಿಗೆ ಕೊಡಲು ಸರಕಾರದ ಬಳಿ ದುಡ್ಡಿಲ್ಲ ಎಂದಾದರೆ ಕೋವಿಡ್ ಕಾಲದ ಹಗರಣಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸಿ ದುಡ್ಡು ಪೋಲು ಮಾಡುವ ಪ್ರಹಸನವನ್ನಾದರೂ ಕೈ ಬಿಡಬೇಕು.

ಆಯೋಗದ ಮೇಲೆ ಆಯೋಗ, ಸಂತ್ರಸ್ಥರಿಗೆಲ್ಲ ಪರಿಹಾರ ಆಯೋಗ

ಲೋಕಮತ

kaayarga@gmail.com

ನಮ್ಮ ದೇಶದಲ್ಲಿ ಯಾವುದೇ ಹಗರಣ, ದುರಂತ, ಗದ್ದಲಕ್ಕೆ ಕಾರಣವಾದ ಪ್ರಕರಣಗಳು ನಡೆದ ಬಳಿಕ ವಿಚಾರಣಾ ಆಯೋಗ, ತನಿಖಾ ತಂಡ, ಸಮಿತಿ, ಸಂಸ್ಥೆ ರಚಿಸಿದರೆ ಸಾಕು. ಅಲ್ಲಿಗೆ ಎಲ್ಲವೂ ಸಮಾಪ್ತಿ, ಸಮಾಧಿ. ಆಯೋಗ, ತನಿಖಾ ತಂಡ ರಚನೆ ಆಗುವವರೆಗೂ ಹುಯಿಲೆಬ್ಬಿಸುವವರ ಆಗ್ರಹ, ಆಕ್ರೋಶ ಅಥವಾ ರಾಜಕೀಯ ಒತ್ತಾಸೆಗಳು ಆಯೋಗದ ವರದಿ ಬರುವಷ್ಟರಲ್ಲಿ ತಣ್ಣಗಾಗಿರುತ್ತದೆ. ಒಂದು ವೇಳೆ ಇನ್ನೂ ಒಂದಷ್ಟು ಕಾವು ಉಳಿದಿದ್ದರೆ ಆಯೋಗದ ವರದಿ ಅಧ್ಯಯನದ ನೆಪದಲ್ಲಿ ಇನ್ನೊಂದು ಉಪ ಸಮಿತಿ ರಚಿಸಿದರಾಯಿತು. ಆಳುವ ಪಕ್ಷಕ್ಕೆ ವರದಿ ಇಷ್ಟ ಆಗಲಿಲ್ಲ ಎಂದರೆ ವರದಿಯನ್ನು ನೇರವಾಗಿ ಶೈತ್ಯಾಗಾರಕ್ಕೆ ತಳ್ಳಬಹುದು. ಇಲ್ಲವೇ ಮತ್ತೊಂದು ಆಯೋಗ ರಚಿಸಿ ಕಾಲ ಹರಣ ಮಾಡಿದರಾಯಿತು. ಒಟ್ಟಾರೆ ಆಯೋಗ, ತನಿಖಾ ತಂಡಗಳೆಂದರೆ ನಮ್ಮಲ್ಲಿ ಆಳುವವರಿಗೆ ಬೇಕಿರುವುದನ್ನು ಹೊರ ತೆಗೆಯಲು, ಬೇಡವಿಲ್ಲದಿರುವುದನ್ನು ಮುಚ್ಚಲು ಬಳಸುವ ಹಾರೆ, ಗುದ್ದಲಿ ಇದ್ದಂತೆ.

ಹಾಗೆಯೇ ಒಮ್ಮೆ ಹಿಂದಕ್ಕೆ ತಿರುಗಿ ನೋಡಿ. ಕಳೆದ 50 ವರ್ಷಗಳಲ್ಲಿ ರಾಜೀವ್ ಗಾಂಧಿ ಸರಕಾರ ಪತನಕ್ಕೆ ಕಾರಣವಾದ ಬೊಫೋರ್ಸ್ ಹಗರಣದಿಂದ ಇಂದಿನವರೆಗೆ ನಾವು ಅದೆಷ್ಟು ರಾಜಕೀಯ ಮತ್ತು ಹಗರಣ, ಅವಾಂತರಗಳಿಗೆ ಸಾಕ್ಷಿಯಾಗಿಲ್ಲ ? ಆದರೆ ಆಯೋಗದ ವಿಚಾರಣಾ ವರದಿ ಇಲ್ಲವೇ ತನಿಖಾ ತಂಡದ ವರದಿಯನ್ನು ಆಧರಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿದ, ತಪ್ಪಿತಸ್ಥರಿಗೆ ಶಿಕ್ಷೆಯಾದ ಉದಾಹರಣೆಗಳು ಇವೆಯೇ ಎಂದರೆ ನಮಗೆ ಬೆರಳೆಣಿಕೆಯಷ್ಟು ಉದಾಹರಣೆಗಳೂ ಸಿಗುವುದಿಲ್ಲ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ಚಾಮರಾಜನಗರ ಅಕ್ಸಿಜನ್ ದುರಂತ.

ಇದನ್ನೂ ಓದಿ: Lokesh Kaayarga Column: ನಮ್ಮವರ ಹೊರೆ ಮಧ್ಯೆ ಟ್ರಂಪಾಸ್ತ್ರ ಏನು ಮಹಾ ?

ಇನ್ನೆರಡು ವಾರ ಕಳೆದರೆ ಈ ಘಟನೆಗೆ ಭರ್ತಿ ನಾಲ್ಕು ವರ್ಷ. 2021ರ ಮೇ 2ರಂದು ಚಾಮರಾಜಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಘೋರ ದುರಂತ ಜನರ ನೆನಪಿನಿಂದ ಇನ್ನೂ ಮಾಸಿಲ್ಲ. 30ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಈ ಘಟನೆ ಸುಲಭವಾಗಿ ಮರೆಯುವಂಥದಲ್ಲ. ಸಂತ್ರಸ್ತರ ನೋವಿಗೆ ಸರಕಾರ ಸರಿಯಾಗಿ ಸ್ಪಂದಿಸಿದ್ದರೆ ಈ ನೋವು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದಿತ್ತು. ಆದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಇನ್ನೂ ದೊರೆತಿಲ್ಲ. ಉದ್ಯೋಗ ಅವಕಾಶದ ಭರವಸೆಯೂ ಪೂರ್ತಿಯಾಗಿ ಈಡೇರಿಲ್ಲ. ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ಪರಿಹಾರ ಪೂರ್ತಿಯಾಗಿ ಸಿಕ್ಕಿಲ್ಲ ಎನ್ನುವುದು ಸಂತ್ರಸ್ತರ ನೋವನ್ನೂ ಇನ್ನಷ್ಟು ಹೆಚ್ಚಿಸಿದೆ.

ಸಿದ್ದರಾಮಯ್ಯ ಸರಕಾರ ನಾಲ್ಕು ವರ್ಷಗಳ ಬಳಿಕ ಘಟನೆಯ ಬಗ್ಗೆ ಮತ್ತೊಮ್ಮೆ ತನಿಖೆ ನಡೆಸಲು ಮುಂದಾಗಿದೆ. ಕೋವಿಡ್ ಕಾಲದ ಖರೀದಿ ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ಮೈಕೆಲ್ ಡಿ’ಕುನ್ನಾ ನೇತೃತ್ವದ ಆಯೋಗಕ್ಕೆ ಆಕ್ಸಿಜನ್ ದುರಂತದ ಬಗ್ಗೆಯೂ ವರದಿ ನೀಡಲು ಸರಕಾರ ಸೂಚಿಸಿದೆ. ಈ ಮಧ್ಯೆ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ನೇತೃತ್ವದ ಆಯೋಗ ಈ ಸಂಬಂಧ ನೀಡಿದ ವರದಿಯನ್ನು ಸರಕಾರ ತಿರಸ್ಕರಿಸಿದೆ. ಬಿಜೆಪಿ ಸರಕಾರ ನೇಮಿಸಿದ ಈ ಆಯೋಗದ ವರದಿಯಲ್ಲಿ ಏನಿದೆ ಎಂಬುವುದು ಹಾಲಿ ಸರಕಾರಕ್ಕಷ್ಟೇ ಗೊತ್ತು. ಈ ಪ್ರಕರಣದ ಬಗ್ಗೆ ಎಷ್ಟಾದರೂ ತನಿಖೆ ನಡೆಯಲಿ, ನಮ್ಮ ಜೀವನೋಪಾಯಕ್ಕೆ ಅವಕಾಶ ಕಲ್ಪಿಸಿ ಕೊಡಿ ಎನ್ನುವುದು ಸಂತ್ರಸ್ತರ ಆಗ್ರಹ. ಆದರೆ ಬಿಜೆಪಿ ಸರಕಾರ ಅವಧಿಯ ಈ ದುರಂತದ ಬಗ್ಗೆ ತನಿಖೆ ನಡೆಸುವಲ್ಲಿ ಸರಕಾರಕ್ಕಿರುವ ಆಸಕ್ತಿ ಸಂತ್ರಸ್ತರ ಮೇಲೆ ಇದ್ದಂತಿಲ್ಲ.

ಅಧಿಕಾರಿ, ಆಡಳಿತದ ನಿರ್ಲಕ್ಷ್ಯದ ಸಾವು

ಜನಮಾನಸದಿಂದ ತುಸು ಮರೆಯಾಗಿರುವ ಈ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಕೊರೊನಾ ಹಾವಳಿಯಿಂದ ತತ್ತರಿಸಿದ್ದ ಕಾಲಘಟ್ಟವದು. ಜಿಲ್ಲಾಸ್ಪತ್ರೆಗಳನ್ನು ಕೊರೊನಾ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿತ್ತು. 2021ರ ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳೂ ಭರ್ತಿಯಾಗಿದ್ದವು. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇರುವ ಬಗ್ಗೆ ವೈದ್ಯರಿಗೆ ಮತ್ತು ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇತ್ತು. ಮೈಸೂರಿನಿಂದ ಬರಬೇಕಾದ ಆಮ್ಲಜನಕ ಸಿಲಿಂಡರ್ ಇನ್ನೂ ಬಂದಿರಲಿಲ್ಲ. ಆದರೆ ಆಕ್ಸಿಜನ್ ಖಾಲಿಯಾದರೆ ಆಗಬಹುದಾದ ದುರಂತಗಳ ಬಗ್ಗೆ ಅರಿವಿದ್ದ ಅಧಿಕಾರಿಗಳು,ವೈದ್ಯರು ಯಾವುದೇ ಆತಂಕವಿಲ್ಲದೆ ಮನೆಗೆ ತೆರಳಿದ್ದರು.

ರಾತ್ರಿ 10:30ರ ಬಳಿಕ ಆಸ್ಪತ್ರೆಯಲ್ಲಿ ಮರಣ ಮೃದಂಗ ಆರಂಭವಾಗಿತ್ತು. ವೆಂಟಿಲೇಟರ್‌ನಲ್ಲಿದ್ದ ರೋಗಿಗಳು ಉಸಿರಾಡಲು ಒದ್ದಾಟ ನಡೆಸುತ್ತಿದ್ದರು. ಅಷ್ಟರಲ್ಲಿ ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಕೆಲಸ ಆರಂಭವಾಗಿತ್ತು. ಮೈಸೂರಿನಿಂದ ಹೆಚ್ಚುವರಿಯಾಗಿ ಆಕ್ಸಿಜನ್ ಸಿಲಿಂಡರ್‌ ಗಳನ್ನು ಪೂರೈಸುವ ಕೆಲಸ ನಡೆಯಿತಾದರೂ ತೀವ್ರ ನಿಗಾ ಘಟಕದಲ್ಲಿದ್ದ ಹಲವು ರೋಗಿಗಳು ಅಷ್ಟರಲ್ಲಿ ಉಸಿರು ಚೆಲ್ಲಿದ್ದರು. ಕೆಲವರನ್ನು ರೋಗಿಗಳ ಸಂಬಂಧಿಕರು ಕರೆದೊಯ್ದು ಬೇರೆ ಆಸ್ಪತ್ರೆಗೆ ಸೇರಿಸಿದ್ದರು. ಇನ್ನು ಕೆಲವರು ಬೆಡ್ ಬಿಟ್ಟು ಏದುಸಿರು ಬಿಡುತ್ತಲೇ ಆಸ್ಪತ್ರೆ ಆವರಣಕ್ಕೆ ಬಂದು ಪ್ರಾಣ ಬಿಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಲು ಬಂದವರಿಗೂ ಚಿಕಿತ್ಸೆ ಸಿಗಲಿಲಲ್ಲ.

ಮುಚ್ಚಿ ಹಾಕುವ ಯತ್ನ

ಮರುದಿನ ಈ ಘಟನೆ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದ್ದಂತೆಯೇ ಸಚಿವರು, ಹಿರಿಯ ಅಧಿಕಾರಿಗಳು ಓಡೋಡಿ ಬಂದರು. ಆಕ್ಸಿಜನ್ ಕೊರತೆಯಿಂದ ಕೇವಲ ಮೂವರು ಮೃತಪಟ್ಟಿದ್ದಾರೆಂದು ಸಚಿವರು ಮಾಹಿತಿ ನೀಡಿದರು. ಮೃತರ ಸಂಬಂಧಿಕರನ್ನು ಭೇಟಿಯಾಗಿ ಸಾಂತ್ವನ ಹೇಳುವ, ಪರಿಹಾರ ನೀಡುವ ಕನಿಷ್ಠ ಸೌಜನ್ಯವನ್ನೂ ತೋರಿಸಲಿಲ್ಲ. ಐಎಎಸ್ ಅಧಿಕಾರಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿ ಬೊಮ್ಮಾಯಿ ಸರಕಾರ ಸುಮ್ಮನಾಯಿತು.

ಆದರೆ ಮರುದಿನವೇ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಹೈಕೋರ್ಟ್ ಇದರ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ನೇತೃತ್ವದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತ್ತು. ಅದೇ ದಿನ ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ನೇತೃತ್ವದ ಆಯೋಗಕ್ಕೆ ತನಿಖೆ ನಡೆಸಿ ಒಂದು ತಿಂಗಳ ಒಳಗೆ ವರದಿ ನೀಡಲು ಸರಕಾರ ಸೂಚಿಸಿತ್ತು. ಆರಂಭದಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಸಮಿತಿ ಸರಕಾರಕ್ಕೆ ವರದಿ ನೀಡಿತ್ತು. ದುರ್ಘಟನೆ ನಡೆದ ದಿನದಂದೇ ಮೃತಪಟ್ಟ ಕೋವಿಡ್‌ಯೇತರ ರೋಗಿಗಳನ್ನು, ಆಸ್ಪತ್ರೆಯಿಂದ ಬಿಡುಗಡೆಯಾಗಿ ಬೇರೆ ಆಸ್ಪತ್ರೆಗೆ ಸೇರಿಸುವ ಹಂತದಲ್ಲಿ ಮೃತಪಟ್ಟವರನ್ನು ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಬಳಿಕ ಒಟ್ಟು 36 ರೋಗಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಹೈಕೋರ್ಟ್ ಮಧ್ಯ ಪ್ರವೇಶಿಸದೇ ಇದ್ದರೆ ಜಗತ್ತಿಗೆ ನಿಖರ ಸಾವಿನ ಸಂಖ್ಯೆ ತಿಳಿಯುತ್ತಿರಲಿಲ್ಲ ಎನ್ನುವುದು ಸ್ಪಷ್ಟ.

ಹೈಕೋರ್ಟ್‌ನ ಸೂಚನೆಯಂತೆ 2021ರ ಜೂನ್ ತಿಂಗಳಲ್ಲಿ 24 ರೋಗಿಗಳ ಕುಟುಂಬಕ್ಕೆ ತಲಾ 2 ಲಕ್ಷ, ಬಳಿಕ ಆಗಸ್ಟ್‌ ಎರಡನೇ ವಾರದಲ್ಲಿ 13 ಮಂದಿಗೆ ಹೆಚ್ಚುವರಿಯಾಗಿ ತಲಾ 3 ಲಕ್ಷ ಹಣವನ್ನು ತಾತ್ಕಾಲಿಕ ಪರಿಹಾರವಾಗಿ ಜಿಲ್ಲಾಡಳಿತ ವಿತರಿಸಿತು. ಹೈಕೋರ್ಟ್ ನೇಮಿಸಿದ ತ್ರಿಸದಸ್ಯ ಸಮಿತಿ, ಆಮ್ಲಜನಕ ಪೂರೈಕೆ ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿ. ಆಸ್ಪತ್ರೆಯ ಆಡಳಿತ ಎಚ್ಚರಿಕೆ ವಹಿಸಿದ್ದರೆ, ಸಿಲಿಂಡರ್ ಪೂರೈಕೆದಾರರು ಸಕಾಲಕ್ಕೆ ಸಿಲಿಂಡರ್ ಪೂರೈಸಿದ್ದರೆ ಅಮೂಲ್ಯ ಜೀವ ಹಾನಿ ತಡೆಯಬಹುದಿತ್ತು ಎಂದು ವರದಿ ನೀಡಿತ್ತು.

ಅಂದು ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದ ಎಂ.ಆರ್. ರವಿ ಹಾಗೂ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನಡುವಿನ ಸಮನ್ವಯದ ಕೊರತೆಯಿಂದ ಈ ಘಟನೆ ಸಂಭ ವಿಸಿದೆ ಎನ್ನಲಾಗಿತ್ತು. ರೋಹಿಣಿ ಅವರು ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡುವುದನ್ನು ತಡೆದಿದ್ದರೆನ್ನುವುದು ಎಂ.ಆರ್. ರವಿ ಅವರ ದೂರಾಗಿತ್ತು. ಆದರೆ ಹೈಕೋರ್ಟ್ ನೇಮಿಸಿದ ಸಮಿತಿ ಚಾಮರಾಜನಗರ ಡಿ.ಸಿ ವೈಫಲ್ಯದತ್ತ ಬೊಟ್ಟು ಮಾಡಿತ್ತು. ಈ ಗದ್ದಲಗಳ ಮಧ್ಯೆ ಸಚಿವರಾಗಲಿ, ಅಧಿಕಾರಿಗಳಾಗಲಿ ಸುಮಾರು ಎರಡು ತಿಂಗಳ ಕಾಲ ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ. ಅಂದು ಈ ಪ್ರಕರಣವನ್ನು ಸಮರ್ಥವಾಗಿ ಬಳಸಿಕೊಂಡಿದ್ದು ಪ್ರತಿಪಕ್ಷ ಕಾಂಗ್ರೆಸ್.

ಕಾಂಗ್ರೆಸ್ ಮುತುವರ್ಜಿ

ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಅಂದು ಎಲ್ಲ 36 ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಮೃತರ ಸಂಬಂಧಿಕರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ತಲಾ ಒಂದು ಲಕ್ಷ ರು. ಪರಿಹಾರ ನೀಡ ಲಾಗಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆಗಾಗಿ ಗುಂಡ್ಲುಪೇಟೆಗೆ ಬಂದಾಗ, ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಮೃತರ ಸಂಬಂಧಿಕರಿಗೆ ಸರಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದರು. ರಾಹುಲ್, ಡಿಕೆಶಿ ಆಶಯದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಅಧಿಕಾರಕ್ಕೆ ಬಂತು. ಆದರೆ ಉದ್ಯೋಗ ಮತ್ತು ಪರಿಹಾರ ಹೆಚ್ಚಳದ ನಿರೀಕ್ಷೆ ಇನ್ನೂ ಪೂರ್ತಿಯಾಗಿ ಈಡೇರಿಲ್ಲ.

ಜಿಲ್ಲಾಡಳಿತ ಕಳೆದ ವರ್ಷ 10 ಮಂದಿಗೆ ಹೊರಗುತ್ತಿಗೆ ಆಧಾರದಲ್ಲಿ ‘ಡಿ’ ಗ್ರೂಪ್ ನೌಕರಿ ನೀಡಿದೆ. ಆದರೆ ಇವರಿಗೆ ಉದ್ಯೋಗ ಭದ್ರತೆಯ ಖಾತರಿ ಇರಲಿಲ್ಲ. ಸಂತ್ರಸ್ತರ ಸಂಬಂಧಿಕರಲ್ಲಿ ಡಿಗ್ರಿ ಪಾಸಾದ ಪದವೀಧರರು ಇದ್ದರು. ಇವರು ಗುತ್ತಿಗೆ ಆಧಾರದ ‘ಡಿ’ ಗ್ರೂಪ್ ಹುದ್ದೆ ಸ್ವೀಕರಿಸಲು ಮುಂದೆ ಬರಲಿಲ್ಲ. ಈಗ ಸಂತ್ರಸ್ತ ಕುಟುಂಬದ ಬಹುತೇಕ ಸದಸ್ಯರು ಗುತ್ತಿಗೆ ಆಧಾರದ ಕೆಲಸ ತೊರೆದಿದ್ದಾರೆ. ಒಂದೋ ಕಾಯಂ ನೌಕರಿ ನೀಡಬೇಕು. ಇಲ್ಲವೇ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆನ್ನುವುದು ಇವರ ಆಗ್ರಹ.

ರಾಜಕೀಯ ಗಲಭೆಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರಕಾರ 25 ಲಕ್ಷ ರು. ಪರಿಹಾರ ನೀಡುತ್ತದೆ. ಆದರೆ ಸರಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಭವಿಸಿದ ಈ ಸಾವಿಗೆ ಸಂತ್ರಸ್ತರು ಹೆಚ್ಚಿನ ಪರಿಹಾರ ಕೇಳುವುದರಲ್ಲಿ ತಪ್ಪೇನೂ ಇಲ್ಲ. ಈ ಬಗ್ಗೆ ಜಿಲ್ಲಾಡಳಿತದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಚಿವ ಸಂಪುಟದಲ್ಲಿ ಚರ್ಚಿಸಿ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಸಂತ್ರಸ್ತರ ಮನೆಗೆ ಖುದ್ದಾಗಿ ಭೇಟಿ ನೀಡಿರುವ ಮೈಸೂರು ಭಾಗದವರೇ ಆದ ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ಇಂತಹ ಮಾನವೀಯ ನಿರ್ಧಾರ ತೆಗೆದುಕೊಳ್ಳಲು ನಾಲ್ಕು ವರ್ಷಗಳು ಬೇಕೇ ಎನ್ನುವುದು ಎಲ್ಲರೂ ಕೇಳುವ ಪ್ರಶ್ನೆ.

ಇದೀಗ ಚಾಮರಾಜನಗರದ ನೆಲದಲ್ಲಿಯೇ ವಿಶೇಷ ಸಂಪುಟ ಸಭೆ ನಡೆಸಲು ಸರಕಾರ ಸಜ್ಜಾಗಿದೆ. ಶುಕ್ರವಾರ (ಏಪ್ರಿಲ್ 17) ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಾದರೂ ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿರುವ ಗಡಿ ಜಿಲ್ಲೆಯ ಜನರ ದೀರ್ಘ ಕಾಲದ ಬೇಡಿಕೆಗಳಿಗೆ ಸರಕಾರ ಸ್ಪಂದಿಸಬೇಕು. ಆಕ್ಸಿಜನ್ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಆಗಬೇಕು. ಸಂತ್ರಸ್ತರಿಗೆ ಕೊಡಲು ಸರಕಾರದ ಬಳಿ ದುಡ್ಡಿಲ್ಲ ಎಂದಾದರೆ ಕೋವಿಡ್ ಕಾಲದ ಹಗರಣಗಳ ಬಗ್ಗೆ ಇನ್ನಷ್ಟು ತನಿಖೆ ನಡೆಸಿ ದುಡ್ಡು ಪೋಲು ಮಾಡುವ ಪ್ರಹಸನವನ್ನಾದರೂ ಕೈ ಬಿಡಬೇಕು.

ಇನ್ನು ತನಿಖೆಯ ವಿಚಾರಕ್ಕೆ ಬಂದರೆ ಕೋವಿಡ್ ಸಮಯದಲ್ಲಿ ನೂರಾರು ಕೋಟಿ ರು. ಅವ್ಯವ ಹಾರ ನಡೆದಿರುವುದು ಮೇಲ್ನೋಟಕ್ಕೆ ತಿಳಿಯುವ ಸಂಗತಿ. ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 84 ಲಕ್ಷ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿ 502 ಕೋಟಿ ಬಿಲ್ ಮಾಡಿರುವ, ಕಿದ್ವಾಯಿ ಸಂಸ್ಥೆಯೊಂದರಲ್ಲೇ 24 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು 146 ಕೋಟಿ ಬಿಲ್ ಮಾಡಿರುವ ವರದಿಗಳಿವೆ.

ಕೋವಿಡ್ ಕಾಲ ಘಟ್ಟದಲ್ಲಿ ನಡೆದ ಸಾವಿನ ಬಗ್ಗೆಯೂ ತಕರಾರುಗಳಿವೆ. 2021ರ ಜನವರಿಯಿಂದ ಜುಲೈವರೆಗಿನ ಕಾಲಾವಧಿಯಲ್ಲಿ ರಾಜ್ಯದಲ್ಲಿ ಆರ್ಥಿಕ ಹಾಗೂ ಸಾಂಖ್ಯಿಕ ನಿರ್ದೇಶನಾಲಯವು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ 4,26,943 ಸಾವುಗಳು ದಾಖಲಾಗಿವೆ. ಇದರ ಹಿಂದಿನ ವರ್ಷ ಇದೇ ಕಾಲಾವಧಿಯಲ್ಲಿ 2,69,069 ಸಾವುಗಳು ಮಾತ್ರ ದಾಖಲಾಗಿದ್ದವು. 2021ರ ಆಗಸ್ಟ್‌ 25ರವರೆಗೆ 37,206 ಮಂದಿ ಮಾತ್ರ ಸಾವಿಗೀಡಾಗಿರುವುದು ಮರಣ ದಾಖಲೆಯಲ್ಲಿ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮಿತಿಗೆ ತಿಳಿಸಿದ್ದಾರೆ. ಸುಮಾರು 1.20 ಲಕ್ಷದಷ್ಟು ಸಾವುಗಳ ಸಂಖ್ಯೆಯನ್ನು ಕಡಿಮೆ ತೋರಿಸುವ ಪ್ರಯತ್ನಗಳು ನಡೆದಿವೆ ಎಂಬ ದೂರುಗಳಿವೆ.

ಒಂದು ವೇಳೆ ಇವೆಲ್ಲವೂ ತನಿಖೆಯಲ್ಲಿ ದೃಢಪಟ್ಟರೆ ಅಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತ ಪಟ್ಟ ಸಾವಿರಾರು ಅಮಾಯಕರ ಕುಟುಂಬಕ್ಕೆ ಸರಕಾರ ಪರಿಹಾರ ನೀಡಲಿದೆಯೇ ಎಂದು ನಾವು ಕೇಳಬೇಕಾಗಿದೆ. ಪರಿಹಾರ ಕೊಡದೇ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸದೇ, ಕೆಲವರ ತಪ್ಪುಗಳತ್ತ ಬೊಟ್ಟು ಮಾಡುವುದಷ್ಟೇ ಸರಕಾರದ ಆದ್ಯತೆಯಾದರೆ ತನಿಖೆಯನ್ನು ಇಲ್ಲಿಗೆ ನಿಲ್ಲಿಸಿ ಬಿಡುವುದು ಒಳ್ಳೆಯದು.