R T Vittalmurthy Column: ಡಿಕೆಶಿ ಅಂದ್ರೆ ಅಮಿತ್ ಶಾ ಅವರಿಗಿಷ್ಟ
ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸಿದ್ದು-ಡಿಕೆಶಿ ಬಣದ ಮಧ್ಯೆ ನಡೆಯು ತ್ತಿರುವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಸಿಗಬೇಕಿರುವುದು ನವೆಂ ಬರ್ ಹೊತ್ತಿಗೇ ಹೊರತು ಈಗಲ್ಲ. ಹೀಗಿರುವಾಗ ಕೊಯಮತ್ತೂರಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಕಾಂಗ್ರೆಸ್ ವರಿಷ್ಠ ರಿಗೆ ಬೆದರಿಕೆಯ ಸಂದೇಶ ಕಳುಹಿಸುವಷ್ಟು ತರಾತುರಿಯಲ್ಲಿ ಡಿಕೆಶಿ ಇಲ್ಲ

ಅಂಕಣಕಾರ ಆರ್.ಟಿ.ವಿಠ್ಠಲಮೂರ್ತಿ

ಕಳೆದ ವಾರ ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿ ದ್ದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತುಕತೆ ನಡೆಯಲಿಲ್ಲವಾದರೂ ಅದು ಕರ್ನಾ ಟಕದ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವುದು ಮಾತ್ರ ನಿಜ. ಅದರ ಪ್ರಕಾರ, ನಿಗದಿತ ಸಮಯಕ್ಕೆ ಸರಿಯಾಗಿ ತಮಗೆ ಸಿಎಂ ಹುದ್ದೆ ಸಿಗದಿದ್ದರೆ ಪಕ್ಷ ತೊರೆದು ಬಿಜೆಪಿ ಪಾಳಯ ಸೇರುವುದಾಗಿ ಕಾಂಗ್ರೆಸ್ ವರಿಷ್ಠರಿಗೆ ಡಿಕೆಶಿ ಮೆಸೇಜು ಕೊಟ್ಟಿದ್ದಾರೆ. ಕರ್ನಾಟಕ ದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ತಮಗೆ ಸಿಎಂ ಹುದ್ದೆ ಸಿಗದಿದ್ದರೆ, ಅ ಜಾಗ ದಲ್ಲಿ ಸಿದ್ದರಾಮಯ್ಯ ಕೂಡಾ ಮುಂದುವರಿಯುವುದು ಬೇಡ ಅನ್ನು ವುದು ಡಿಕೆಶಿ ಹಠ ಎಂಬುದು ಇಂಥ ಸಂಚಲನದ ಸಾರ.
ಇದನ್ನೂ ಓದಿ: R T Vittalmurthy Column: ಬಿಜೆಪಿಯ ಚಾಣಾಕ್ಷ ಅಮಿತ್ ಶಾ ಆಟವನ್ನು ಬಲ್ಲವರಾರು ?
ಹಾಗಂತ ಇದರ ಎಳೆ ಹಿಡಿದು ಹೊರಟರೆ ಅಮಿತ್ ಶಾ-ಡಿಕೆಶಿ ವೇದಿಕೆ ಹಂಚಿಕೊಂಡ ಬೆಳವಣಿಗೆಯ ಹಿಂದೆ ಬೇರೆ ಬೇರೆ ಅಂಶಗಳು ಕೆಲಸ ಮಾಡಿರುವುದು ಗೋಚರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕೊಯಮತ್ತೂರಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾಂಗ್ರೆಸ್ ವರಿಷ್ಠರಿಗೆ ಮೆಸೇಜು ಕೊಡುವ ಅಗತ್ಯವೇ ಡಿ.ಕೆ.ಶಿವಕುಮಾರ್ ಅವರಿಗಿರಲಿಲ್ಲ. ಬದಲಿಗೆ ಅವರು ತಮ್ಮ ಕುಟುಂಬದ ಸದಸ್ಯರೊಬ್ಬರ ಮಾತಿಗೆ ಮನ್ನಣೆ ನೀಡಿ ಈ ಕಾರ್ಯಕ್ರಮ ದಲ್ಲಿ ಭಾಗಿಯಾದರೇ ಹೊರತು ಬೇರೆ ಉದ್ದೇಶವೇ ಅವರಿಗಿರಲಿಲ್ಲ.
ಅಂದ ಹಾಗೆ, ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸಿದ್ದು-ಡಿಕೆಶಿ ಬಣದ ಮಧ್ಯೆ ನಡೆಯುತ್ತಿರುವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಸಿಗಬೇಕಿರುವುದು ನವೆಂ ಬರ್ ಹೊತ್ತಿಗೇ ಹೊರತು ಈಗಲ್ಲ. ಹೀಗಿರುವಾಗ ಕೊಯಮತ್ತೂರಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಕಾಂಗ್ರೆಸ್ ವರಿಷ್ಠರಿಗೆ ಬೆದರಿಕೆಯ ಸಂದೇಶ ಕಳುಹಿಸುವಷ್ಟು ತರಾತುರಿಯಲ್ಲಿ ಡಿಕೆಶಿ ಇಲ್ಲ.
ಇವತ್ತು ಡಿ.ಕೆ.ಶಿವಕುಮಾರ್ ಅವರಿಗೂ ಗೊತ್ತಿರುವ ಸರಳ ಸತ್ಯವೆಂದರೆ, ಅವರ ಜತೆ ಕಾಂಗ್ರೆಸ್‌ನ ಮೂರನೇ ಎರಡು ಭಾಗದಷ್ಟು ಶಾಸಕರು ಇಲ್ಲ. ಇಪ್ಪತ್ತೋ, ಮೂವತ್ತೋ ಶಾಸಕರು ಅವರ ಜತೆಗಿದ್ದರೂ ಅಷ್ಟು ಜನರನ್ನು ಹೊರಗೆ ಕರೆದುಕೊಂಡು ಹೋಗಿ ಸರಕಾರ ಬೀಳಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಇಷ್ಟು ಸಂಖ್ಯೆಯ ಶಾಸಕರು ಅವ ರೊಂದಿಗೆ ಹೊರಹೋಗಲು ತಯಾರಿದ್ದರೂ, ಹೊರಗೆ ಹೋದ ಕೂಡಲೇ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನ ಕಳೆದುಕೊಳ್ಳುತ್ತಾರೆ.
ಹೀಗೆ ಡಿಕೆಶಿ ಹಿಂದೆ ಹೋದವರು ಶಾಸಕ ಸ್ಥಾನ ಕಳೆದುಕೊಂಡರೆ ವಿಧಾನಸಭೆಯ ಅವತ್ತಿನ ಬಲಾಬಲವನ್ನು ಗಮನದಲ್ಲಿಟ್ಟುಕೊಂಡರೆ ಸಿದ್ದರಾಮಯ್ಯ ಸರಕಾರಕ್ಕೆ ಬಹುಮತ ಇರುತ್ತದೆ. ಈ ಸರಳ ಸತ್ಯ ಗೊತ್ತಿರುವುದರಿಂದ ಡಿಕೆಶಿ ತಮ್ಮ ಬೆಂಬಲಿಗ ಶಾಸಕರ ಸಂಖ್ಯೆ ಯನ್ನು ಹಿಗ್ಗಿಸಿಕೊಳ್ಳುತ್ತಾ ನಡೆದಿದ್ದಾರೆ.
ಅವರ ಆಪ್ತರ ಪ್ರಕಾರ ಇನ್ನು ಕೆಲ ತಿಂಗಳಲ್ಲಿ ಅವರ ಬೆಂಬಲಿಗ ಶಾಸಕರ ಸಂಖ್ಯೆ ಅರವ ತ್ತರ ಗಡಿ ತಲುಪಲಿದೆ. ಹೀಗೆ ತಮ್ಮ ಬೆಂಬಲಿಗ ಶಾಸಕರ ಪಡೆಯನ್ನು ಹಿಗ್ಗಿಸಿ ಕೊಂಡರೆ ನವೆಂಬರ್ ಹೊತ್ತಿಗೆ ಎದುರಾಗಲಿರುವ ಸವಾಲನ್ನು ಅವರು ಸಮರ್ಥವಾಗಿ ಎದುರಿಸ ಬಲ್ಲರು. ಅರ್ಥಾತ್, ಸಿದ್ದರಾಮಯ್ಯರು ಕೆಳಗಿಳಿಯುವುದೇ ಆದರೆ ಅವರ ಜಾಗಕ್ಕೆ ನಾವು ಬರಬೇಕು ಅಂತ ಪಟ್ಟು ಹಿಡಿದವರ ಎದುರು ಸ್ಪರ್ಧಿಸಿ ಗೆಲ್ಲಲು ಅವರಿಗೆ ಸಾಧ್ಯ ವಾಗುತ್ತದೆ.
ಎಷ್ಟೇ ಆದರೂ ಡಿಕೆಶಿ ಅವರಿಗೆ ಸಿಎಂ ಪಟ್ಟ ಕೊಡಿಸುವ ಆಸೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗಿದೆ. ಹೀಗಿರುವಾಗ ಅವಸರಕ್ಕೆ ಬಿದ್ದು ಆಟ ಕೆಡಿಸಿಕೊಳ್ಳಲು ಡಿಕೆಶಿ ತಯಾರಿಲ್ಲ ಎಂಬುದು ಅವರ ಆಪ್ತರ ಮಾತು. ಅರ್ಥಾತ್ ಕರ್ನಾಟಕದಲ್ಲಿ ನಡೆ ಯುತ್ತಿರುವ ಅಧಿಕಾರ ಹಂಚಿಕೆಯ ಸಂಘರ್ಷಕ್ಕೂ ಕೊಯಮತ್ತೂರಿನ ಕಾರ್ಯಕ್ರಮದಲ್ಲಿ ಅಮಿತ್ ಶಾ-ಡಿಕೆಶಿ ಭಾಗಿಯಾಗಿದ್ದಕ್ಕೂ ಸಂಬಂಧ ಕಲ್ಪಿಸುವ ಅಗತ್ಯವೇ ಇಲ್ಲ.
ಅಮಿತ್ ಶಾ-ಡಿಕೆಶಿ ಆಪ್ತರಾಗಿದ್ದು ಹೇಗೆ?
ಇನ್ನು ಅಮಿತ್ ಶಾ ಅವರ ಜತೆ ವೇದಿಕೆ ಹಂಚಿಕೊಂಡರು ಅಂದ ಮಾತ್ರಕ್ಕೆ ಕಾಂಗ್ರೆಸ್ ವರಿಷ್ಠರು ಡಿಕೆಶಿ ವಿರುದ್ದ ಕೆಂಡಾಮಂಡಲಗೊಳ್ಳುತ್ತಾರೆ ಎಂಬುದು ಸುಳ್ಳು. ಯಾಕೆಂದರೆ ಅಮಿತ್ ಶಾ ಮತ್ತು ಡಿಕೆಶಿ ಅತ್ಯಾಪ್ತರು ಎಂಬ ಮೆಸೇಜು ಸೋನಿಯಾ, ರಾಹುಲ್ ಅವರಿಗೆ ಯಾವತ್ತೋ ರವಾನೆಯಾಗಿದೆ ಮತ್ತು ಇಬ್ಬರ ನಡುವೆ ಇಂಥ ಆಪ್ತತೆ ಬೆಳೆಯಲು ವೈಯಕ್ತಿಕ ಕಾರಣಗಳಿವೆ ಎಂಬುದೂ ಗೊತ್ತಿದೆ.
ಹೀಗೆ ಅಮಿತ್ ಶಾ ಹಾಗೂ ಡಿಕೆಶಿ ನಡುವೆ ಆಪ್ತತೆ ಬೆಳೆಯಲು ಒಂದು ಘಟನೆ ಕಾರಣ. ಮೂಲಗಳ ಪ್ರಕಾರ, ಕೆಲ ಕಾಲದ ಹಿಂದೆ ಅಮಿತ್ ಶಾ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಅವರ ಪರಿಸ್ಥಿತಿ ಹೇಗಿತ್ತೆಂದರೆ ಕೆಲ ಕಾಲ ಅವರು ಹೊರಗೆ ಕಾಣಿಸಿಕೊಳ್ಳುವ ಸ್ಥಿತಿಯ ಇರಲಿಲ್ಲ.
ಇಂಥ ಕಾಲದ ಒಮ್ಮೆ ಅವರನ್ನು ನೋಡಲು ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಹೋದರು. ಹೀಗೆ ಹೋದವರು ಅಮಿತ್ ಶಾ ಅವರ ಕುಶಲ ವಿಚಾರಿಸಿದ್ದ ಲ್ಲದೇ, “ಸರ್, ನೀವೊಂದು ಸಲ ನೊಣವಿನಕೆರೆ ಅಜ್ಜಯ್ಯನವರ ಗದ್ದುಗೆಯ ದರ್ಶನ ಮಾಡಿ. ಎಲ್ಲ ಒಳ್ಳೆಯದಾಗುತ್ತದೆ" ಅಂತ ಸಲಹೆ ನೀಡಿದರು.
ಆಗೆಲ್ಲ ಬಳಲಿದ್ದ ಅಮಿತ್ ಶಾ ಅವರು, “ದರ್ಶನ ಮಾಡಲು ನಾನು ರೆಡಿ. ಆದರೆ ಇಂಥ ಸ್ಥಿತಿಯಲ್ಲಿ ಕರ್ನಾಟಕಕ್ಕೆ ಹೋಗುವುದು ಹೇಗೆ?" ಎಂದು ಕೇಳಿದರಂತೆ. ಇದಾದ ನಂತರ ಸೋಮಣ್ಣ ಅವರು ನೊಣವಿನಕೆರೆ ಅಜ್ಜಯ್ಯನವರ ಗದ್ದುಗೆಯನ್ನೇ ದೆಹಲಿಗೆ ತರಿಸುವ ವ್ಯವಸ್ಥೆ ಮಾಡಿದ್ದಾರೆ.
ಅದರ ಪ್ರಕಾರ ಅಜ್ಜಯ್ಯನವರ ಗದ್ದುಗೆ ದೆಹಲಿಗೆ ಬಂತಲ್ಲ, ಅದನ್ನು ಇಡುವುದೆಲ್ಲಿ? ಎಂಬ ಪ್ರಶ್ನೆ ಬಂದಾಗ ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಫ್ಲ್ಯಾಟಿನಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗಿದೆ. ಹೀಗೆ ಡಿಕೆಶಿ ಅವರ ಫ್ಲ್ಯಾಟಿನಲ್ಲಿದ್ದ ಅಜ್ಜಯ್ಯನವರ ಗದ್ದುಗೆ ಯನ್ನು ದರ್ಶಿಸಲು ಅಂಥ ನಿತ್ರಾಣ ಸ್ಥಿತಿಯಲ್ಲಿಯೇ ಅಮಿತ್ ಶಾ ಹೋದರಂತೆ.
ಕುತೂಹಲದ ಸಂಗತಿಯೆಂದರೆ ಅವತ್ತು ಡಿಕೆಶಿ ಫ್ಲ್ಯಾಟಿನಲ್ಲಿ ಇಡಲಾಗಿದ್ದ ಅಜ್ಜಯ್ಯನವರ ಗದ್ದುಗೆಯನ್ನು ನೋಡಿ ನಮಸ್ಕರಿಸಿ ಬಂದ ಮರುದಿನದಿಂದಲೇ ಅಮಿತ್ ಶಾ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಶುರುವಾಗಿ, ವಾರವೊಪ್ಪತ್ತಿನಲ್ಲಿ ಅವರು ಸಂಪೂ ರ್ಣ ಗುಣಮುಖರಾಗಿದ್ದಾರೆ. ಯಾವಾಗ ಈ ಬೆಳವಣಿಗೆ ನಡೆಯಿತೋ, ಅಮಿತ್ ಶಾ ಅವರು ಡಿಕೆಶಿ ವಿಷಯದಲ್ಲಿ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ, ಅವರ ಜತೆ ಒಂದು ಆಪ್ತತೆಯೂ ಬೆಳೆದಿದೆ.
ಇದೇ ಮೂಲಗಳ ಪ್ರಕಾರ, ಅಮಿತ್ ಶಾ ಜತೆ ಡಿಕೆಶಿ ಆಪ್ತರಾಗುವ ಕಾಲದಲ್ಲಿ ಡಿಕೆಶಿ ವಿರೋಧಿಗಳ ಪಡೆ ಒಂದು ಕನಸು ಕಾಣುತ್ತಿತ್ತು. ಅದೆಂದರೆ ಹಲವು ಅರೋಪಗಳನ್ನು ಹೊತ್ತಿರುವ ಡಿಕೆಶಿ ಅವರನ್ನು ಕೇಂದ್ರದ ಬಿಜೆಪಿ ಸರಕಾರ ಬಲಿ ಹಾಕುತ್ತದೆ, ಜೈಲಿಗೆ ತಳ್ಳುತ್ತದೆ ಎಂಬುದು. ಆದರೆ ಎಷ್ಟು ದಿನ ಕಳೆದರೂ ಡಿಕೆಶಿ ಜೈಲು ಪಾಲಾಗಲಿಲ್ಲ. ಅವರಿ ಗಿದ್ದ ಪವರ್ರೂ ಕಡಿಮೆಯಾಗಲಿಲ್ಲ. ಇದೇಕೆ ಹೀಗೆ ಅಂತ ಡಿಕೆಶಿ ವಿರೋಧಿಗಳು ವಿಸ್ಮಯ ಪಡುತ್ತಿದ್ದ ಸಂದರ್ಭದ ಈ ಕತೆ ಹೊರಬಿದ್ದಿದೆ ಮತ್ತು ರಾಜಕೀಯ ಮಹಲುಗಳ ಉತ್ತುಂಗ ದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಅರ್ಥಾತ್, ಅಮಿತ್ ಶಾ ಮತ್ತು ಡಿಕೆಶಿ ಅತ್ಯಾಪ್ತರಾಗಲು ಏನು ಕಾರಣ ಎಂಬ ಕತೆ ಸೋನಿ ಯಾ, ರಾಹುಲ್ ಕಿವಿಗೆ ತಲುಪಿ ಹಲವು ಕಾಲವೇ ಆಗಿದೆ. ಹೀಗಿರುವಾಗ ಕೊಯಮತ್ತೂರು ಕಾರ್ಯಕ್ರಮದಿಂದ ವರಿಷ್ಠರ ಜತೆಗಿನ ಡಿಕೆಶಿ ಬಾಂಧವ್ಯ ಹದಗೆಡುತ್ತದೆ ಎಂಬುದು ಕೇವಲ ಭ್ರಮೆ.
ರಾಷ್ಟ್ರಪತಿ ಆಳ್ವಿಕೆ ಮೇಲೆ ಕಣ್ಣು
ಹಾಗಂತ, ಡಿಕೆಶಿ ಕಾಂಗ್ರೆಸ್‌ನ ಸುಖವಾಗಿರಲಿ ಅಂತ ಮೋದಿ-ಅಮಿತ್ ಶಾ ಜೋಡಿ ಬಯಸು ತ್ತಿಲ್ಲ. ಅದೇ ರೀತಿ, ಪರ್ಯಾಯ ಸರಕಾರ ರಚಿಸೋಣ, ನೀವೇ ಸಿಎಂ ಆಗಿ ಅಂತ ಹೇಳುವ ಸ್ಥಿತಿಯಲ್ಲೂ ಅವರಿಲ್ಲ. ಕಾರಣ? ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ಉರುಳಿದರೆ ಪರ್ಯಾಯ ಸರಕಾರ ರಚಿಸುವ ಉತ್ಸುಕತೆ ಅವರಲ್ಲಿಲ್ಲ. ಯಾಕೆಂದರೆ ಇವತ್ತಿನ ಸ್ಥಿತಿಯಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಡಿಕೆಶಿ ನೇತೃತ್ವದಲ್ಲಿ ಸರಕಾರ ರಚಿಸಲು ಒಪ್ಪುವುದಿಲ್ಲ. ಹಾಗೊಂದು ವೇಳೆ ಅಂಥ ಸನ್ನಿವೇಶ ಸೃಷ್ಟಿಸಲು ಮುಂದಾದರೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಯೂ-ಟರ್ನ್ ಹೊಡೆದು ಸಿದ್ದರಾಮಯ್ಯ ಸರಕಾರದ ರಕ್ಷಣೆಗೆ ನಿಲ್ಲಬಹುದು. ಹೀಗಾಗಿ ಡಿಕೆಶಿ ನೇತೃತ್ವದಲ್ಲಿ ಪರ್ಯಾಯ ಸರಕಾರ ರಚಿಸುವ ಬದಲು ಅವರ ಮುಂದಾಳತ್ವದಲ್ಲಿ ಕರ್ನಾಟಕ ಸರಕಾರ ಉರುಳಲಿ ಎಂಬ ಇಚ್ಛೆ ಮೋದಿ-ಅಮಿತ್ ಶಾ ಅವರಿಗಿದೆ. ಹಾಗೇನಾದರೂ ಆದರೆ ಕರ್ನಾಟಕದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವುದು, ರಾಜಕೀಯ ಧ್ರುವೀಕರಣಕ್ಕೆ ದಾರಿ ಮಾಡಿಕೊಟ್ಟು ಬಿಜೆಪಿ ಬಲ ಹಿಗ್ಗುವಂತೆ ಮಾಡುವುದು, ಆ ಮೂಲಕ ಮಧ್ಯಂತರ ವಿಧಾನಸಭಾ ಚುನಾವಣೆಗೆ ಅಣಿ ಯಾಗುವುದು ಈ ಜೋಡಿಯ ಲೆಕ್ಕಾಚಾರ.
ಬಿಜೆಪಿಯಲ್ಲಿ ಬೆಂಗಳೂರು ವಾರ್
ಇನ್ನು ರಾಜ್ಯ ಬಿಜೆಪಿಯಲ್ಲಿ ಮೊದಲನೇ ಬೆಂಗಳೂರು ಯುದ್ಧ ಶುರುವಾಗಿದೆ. ಈ ಯುದ್ಧ ದಲ್ಲಿ ಎದುರಾಳಿಗಳಾಗಿರುವವರು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್. ಅಂದ ಹಾಗೆ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿದ ಕಾಲದಿಂದ ರಾಜಧಾನಿ ಬೆಂಗಳೂರಿನ ಮೇಲೆ ನಿಯಂತ್ರಣ ಇಟ್ಟುಕೊಂಡವರು ಅಶೋಕ್ ಮತ್ತು ಇದರ ಪರಿಣಾಮವಾಗಿಯೇ ಪಕ್ಷದಲ್ಲಿ ಅವರಿಗೆ ಯಮಬಲವೂ ಇತ್ತು.
ಆದರೆ ಈಗ ಅಶೋಕ್ ಅವರ ಬಲವನ್ನು ಕುಗ್ಗಿಸಲು, ರಾಜಧಾನಿಯ ಮೇಲೆ ಅವರಿಗಿರುವ ನಿಯಂತ್ರಣವನ್ನು ತಪ್ಪಿಸುವುದು ವಿಜಯೇಂದ್ರ ಅವರ ಲೆಕ್ಕಾಚಾರ. ಎಲ್ಲಿಯವರೆಗೆ ರಾಜಧಾನಿಯ ಮೇಲೆ ತಮಗೆ ಹಿಡಿತ ಇರುವುದಿಲ್ಲವೋ, ಅಲ್ಲಿಯವರೆಗೆ ತಮ್ಮ ನಾಯಕತ್ವ ಪರಿಪೂರ್ಣವಲ್ಲ ಎಂಬ ಲೆಕ್ಕಾಚಾರಕ್ಕೆ ಬಂದಿರುವ ವಿಜಯೇಂದ್ರ ಅವರು, ಇದಕ್ಕಾಗಿ ತಮ್ಮ ತಂದೆ ಯಡಿಯೂರಪ್ಪ ಮಾಡದ ಸಾಹಸವನ್ನು ಮಾಡಲು ನಿರ್ಧರಿಸಿದ್ದಾರೆ.
ಹೀಗಾಗಿ ಅಶೋಕ್ ಅವರಿಗೆ ಸೆಡ್ಡು ಹೊಡೆಯುವ ಸಲುವಾಗಿ ಬೆಂಗಳೂರಿನ ಬಿಜೆಪಿ ಶಾಸಕರ ಸಭೆ ಕರೆಯುವುದರಿಂದ ಹಿಡಿದು ಮುಖ್ಯಮಂತ್ರಿಗಳನ್ನು ನಿಯೋಗದೊಂದಿಗೆ ಭೇಟಿ ಮಾಡುವ ಮತ್ತಿತರ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ. ಕುತೂಹಲದ ಸಂಗತಿ ಎಂದರೆ ಯಲಹಂಕ ಕ್ಷೇತ್ರದ ಶಾಸಕ ಎಸ್.ಅರ್.ವಿಶ್ವನಾಥ್, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಜಯನಗರದ ಶಾಸಕ ರಾಮಮೂರ್ತಿ ಸೇರಿದಂತೆ ಹಲವು ಶಾಸಕರು ವಿಜ ಯೇಂದ್ರ ಕ್ಯಾಂಪಿನಲ್ಲಿ ಕಾಣಿಸಿಕೊಂಡು ಅವರ ಕೈ ಬಲಪಡಿಸುತ್ತಿದ್ದಾರೆ. ಪರಿಣಾಮ? ವಿಜಯೇಂದ್ರ-ಅಶೋಕ್ ನಡುವೆ ಆರಂಭವಾಗಿರುವ ಮೊದಲ ಬೆಂಗಳೂರು ಯುದ್ಧ ದಿನಗಳೆದಂತೆ ರಂಗೇರತೊಡಗಿದೆ.
ಅಧ್ಯಕ್ಷರ ಆಯ್ಕೆ ಸದ್ಯಕ್ಕಿಲ್ಲ
ಈ ಮಧ್ಯೆ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಒಂದು ತಿಂಗಳ ಮಟ್ಟಿಗೆ ಮುಂದೂಡಿಕೆಯಾಗಿದೆ. ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಅಂತ ಯತ್ನಾಳ್ ಪಡೆ, ವಿಜಯೇಂದ್ರ ಅವರನ್ನೇ ಮುಂದುವರಿಸಬೇಕು ಅಂತ ಮತ್ತೊಂದು ಪಡೆ ಮಾಡುತ್ತಿರುವ ಅಬ್ಬರವನ್ನು ಕೇಳಿ ಕೇಳಿ ಕೇಂದ್ರ ಸಚಿವ ಅಮಿತ್ ಶಾ ಬೇಸತ್ತು ಹೋಗಿದ್ದಾರೆ. ಹೀಗಾಗಿ ಉಭಯ ಬಣಗಳ ವಾದಕ್ಕೆ ಬ್ರೇಕ್ ಹಾಕಿರುವ ಅವರು, “ಕರ್ನಾಟಕದ ಪ್ರತಿಯೊಂದು ಕ್ಷೇತ್ರಗಳಲ್ಲಿ ನಾವೇ ಸರ್ವೆ ಮಾಡಿಸುತ್ತೇವೆ" ಎಂದಿದ್ದಾರೆ.
ಅಷ್ಟೇ ಅಲ್ಲ, “ಯಾರಿಗೆ ಹೆಚ್ಚು ಸಪೋರ್ಟ್ ಇದೆಯೋ, ಅದರ ಆಧಾರದ ಮೇಲೆ ಯಾರು ಅಧ್ಯಕ್ಷರಾಗಬೇಕು ಅಂತ ನಿರ್ಧರಿಸುತ್ತೇವೆ" ಅಂತ ಸ್ಪಷ್ಟವಾಗಿ ಹೇಳಿದ್ದಾರೆ.
ಯಾವಾಗ ಅವರು ಈ ಮಾತು ಹೇಳಿದರೋ, ಮಾತೆತ್ತಿದರೆ ದಿಲ್ಲಿಯ ಕಡೆ ಮುಖ ಮಾಡು ತ್ತಿದ್ದ ರಾಜ್ಯ ಬಿಜೆಪಿಯ ಉಭಯ ಬಣಗಳ ನಾಯಕರು ಮೌನವಾಗಿದ್ದಾರೆ. ಆದರೆ ಅಮಿತ್ ಶಾ ಅವರ ಈ ನಿರ್ಧಾರ ಕೂಡಾ ಹಾಲಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಪ್ಲಸ್ ಆಗಿ ಯತ್ನಾಳ್ ಬಣಕ್ಕೆ ಹಿನ್ನಡೆ ಆಗಲಿದೆ ಎಂಬುದು ಬಿಜೆಪಿ ಮೂಲಗಳ ಅಭಿಪ್ರಾಯ. ಯಾಕೆಂ ದರೆ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಅವರ, ಆ ಮೂಲಕ ವಿಜಯೇಂದ್ರ ಅವರ ಬೆಂಬಲಿಗರ ಸಂಖ್ಯೆ ಹೆಚ್ಚು.