ವಿದೇಶವಾಸಿ
ಒಂದು ನಗರದಲ್ಲಿ ನೀವು ಯಾವುದೋ ಕಡೆ ಲಕ್ಷ್ಯ ಹರಿಸಿ ರಸ್ತೆಯ ಬದಿಯಲ್ಲಿ ನಡೆಯುತ್ತಿರುವಾಗ, ನಿಮ್ಮ ಹಿಂದೆ ಸೈಕಲ್ ಬೆಲ್‌ನ ಸದ್ದು ಕೇಳಿ ನೀವು ಹಿಂತಿರುಗಿ ನೋಡಿದಾಗ, ಆ ಸೈಕಲ್ ನಡೆಸು ತ್ತಿರುವವರು ಯುವಕ-ಯುವತಿ ಅಥವಾ ಮುದುಕ-ಮುದುಕಿ ಆಗಿದ್ದರೆ, ನೀವು ನೆದರ್ಲ್ಯಾಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡಾಮ್ ನಗರದಲ್ಲಿ ಇದ್ದೀರಿ ಅಂದುಕೊಳ್ಳಬಹುದು. ಈ ನಗರದಲ್ಲಷ್ಟೇ ಅಲ್ಲ, ಈ ದೇಶದ ಯಾವುದೇ ನಗರದದರೂ ಅಷ್ಟೇ, ನಿಮಗೆ ವಾಹನದ ಸದ್ದಿಗಿಂತ ಸೈಕಲ್ ಬೆಲ್ ಸದ್ದೇ ಹೆಚ್ಚು ಕೇಳಿಸುತ್ತದೆ.
ಒಂದು ವರ್ಷದ ಹಿಂದಿನ ಮಾತು, ಜರ್ಮನಿಯ ಹ್ಯಾಂಬರ್ಗ್‌ನಿಂದ ಆಮ್‌ಸ್ಟರ್‌ಡಾಮ್‌ಗೆ ಪ್ರಯಾಣ ಮಾಡುತ್ತಿದೆ. ತೀರಾ ಅಪರೂಪಕ್ಕೆ ಎಂಬಂತೆ ರೈಲು ಪ್ರಯಾಣವನ್ನು ಆರಿಸಿಕೊಂಡಿದ್ದೆ. ಸಾಮಾನ್ಯವಾಗಿ ವಿದೇಶಕ್ಕೆ ಹೋದಾಗ ವಿಮಾನ ನಿಲ್ದಾಣದಿಂದಲೇ ಕಾರು ತೆಗೆದುಕೊಂಡು, ಕೆಲಸ ಮುಗಿದ ನಂತರ ಊರು ಸುತ್ತಾಡಿ, ಹಿಂತಿರುಗಿ ಬರುವಾಗ ವಿಮಾನ ನಿಲ್ದಾಣದಲ್ಲಿ ಕಾರನ್ನು ಹಿಂತಿರುಗಿಸಿ ಬರುವುದು ವಾಡಿಕೆ. ಆದರೆ ಈ ಬಾರಿ ಕಾರು ತೆಗೆದುಕೊಳ್ಳದೇ ರೈಲು ಪ್ರಯಾಣ ಮಾಡಿದ್ದೆ.
ಕಾರಣ ಏನೆಂದರೆ, ನಾನು ಹೋದ ಸಂದರ್ಭದಲ್ಲಿ ಯುರೋಪ್ ತುಂಬ ಘನಘೋರ ಚಳಿ. ಜತೆಗೆ ಹಿಮಪಾತ ಬೇರೆ ಆಗುತ್ತಿತ್ತು. ಚಳಿಗಾಲವಾದುದರಿಂದ ಸಾಯಂಕಾಲ ಮೂರೂವರೆ ನಾಲ್ಕು ಗಂಟೆಗೆಲ್ಲ ಕತ್ತಲಾಗುತ್ತಿತ್ತು. ಆ ರೀತಿಯ ಮಬ್ಬು ವಾತಾವರಣದಲ್ಲಿ ಮೈ ಜಡ್ಡು ಹಿಡಿದಂತಾಗು ವುದು, ಕಣ್ಣು ಮಂಜಾಗುವುದು, ಬೇಗ ನಿದ್ರೆ ಆವರಿಸಿಕೊಳ್ಳುವುದು ಸ್ವಾಭಾವಿಕ.
ಇದನ್ನೂ ಓದಿ: Kiran Upadhyay Column: ಇರಾಣ...ಯಾಕಿಷ್ಟು ಹೈರಾಣ...!?
ಅಂಥ ಸಂದರ್ಭ ವಾಹನ ಚಾಲನೆಗೆ ಉತ್ತಮವಾದದ್ದಲ್ಲ. ಅಲ್ಲದೇ, ಕಾರು ಓಡಿಸಿಕೊಂಡು ಹೋಗುವ ಮೂಲ ಉದ್ದೇಶವೇ ಊರು ನೋಡಬೇಕು ಎನ್ನುವುದು. ಕತ್ತಲಾದ ಮೇಲೆ ಊರು ನೋಡುವುದಕ್ಕಂತೂ ಸಾಧ್ಯವಿಲ್ಲ. ಆಗ ಕಾರು ನಡೆಸುವುದೇ ಮುಖ್ಯ ಕೆಲಸವಾಗಿ ಬಿಡುತ್ತದೆ. ಅದೂ ಅಲ್ಲದೇ, ಯುರೋಪಿನ ರೈಲಿನ ವ್ಯವಸ್ಥೆಯ ಕುರಿತು ಸಾಕಷ್ಟು ಕೇಳಿದ್ದೆ.
ಮೊದಲು ಒಂದೆರಡು ಬಾರಿ ಪ್ರಯಾಣಿಸಿದ್ದೂ ಇದೆ. ಈ ಬಾರಿ ರೈಲಿನಲ್ಲಿಯೇ ಓಡಾಡುವುದು ಸೂಕ್ತ ಎಂಬ ಸ್ನೇಹಿತರ ಸೂಚನೆಯನ್ನು ಮನ್ನಿಸಿ ರೈಲು ಹತ್ತಿದ್ದೆ. ನನ್ನ ಬೋಗಿಯಲ್ಲಿ ಜರ್ಮನ್ ದೇಶದ ಒಬ್ಬ ಮಹಿಳೆ ಬಂದು ಕುಳಿತಳು. ಅಸಲಿಗೆ ಆ ಬೋಗಿಯಲ್ಲಿ ನಾನು ಮತ್ತು ಆ ಮಹಿಳೆಯನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಅರ್ಧ ಪ್ರಯಾಣ ನಾವಿಬ್ಬರೂ ನಮ್ಮ ನಮ್ಮ ಕೆಲಸದಲ್ಲಿ ವ್ಯಸ್ತರಾಗಿದ್ದೆವು. ನಂತರದ ಪ್ರಯಾಣದಲ್ಲಿ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು ಮಾತಿಗೆ ತೊಡಗಿದೆವು. ಅವರೂ ಆಮ್‌ಸ್ಟರ್‌ಡಾಮ್‌ಗೇ ಹೋಗುತ್ತಿರುವುದಾಗಿ ಹೇಳಿದರು.
ಆಮ್‌ಸ್ಟರ್‌ಡಾಮ್ ಎಂಬ ಹೆಸರು ಬಂದಾಕ್ಷಣ ಅವರು ಹೇಳಿದ್ದು ಒಂದೇ ವಿಷಯ ಏನೆಂದರೆ, “ಆ ನಗರದಲ್ಲಿ ಸೈಕಲ್‌ಗಳೇ ತುಂಬಿಹೋಗಿವೆ. ಎಲ್ಲಿ ನೋಡಿದರೂ ನಿಮಗೆ ಸೈಕಲ್ ಕಾಣುತ್ತದೆ. ಕೆಲವೊಮ್ಮೆ ಅತಿ ಎನಿಸುವಷ್ಟು ಕಾಣಿಸುತ್ತದೆ. ನನಗೆ ವೈಯಕ್ತಿಕವಾಗಿ ಅದು ಇಷ್ಟವಾಗುವುದಿಲ್ಲ. ಏಕೆಂದರೆ ಸೈಕಲ್ ಹಿಂದುಗಡೆ ದೊಡ್ಡ ಪೆಟ್ಟಿಗೆಗಳನ್ನೂ ಇಟ್ಟುಕೊಂಡು, ಪ್ರಮುಖ ರಸ್ತೆಯ ಪಕ್ಕದ ಚಲಿಸುತ್ತಿರುತ್ತಾರೆ. ಆದರೆ ಅದು ಅಲ್ಲಿಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅವರು ಕಾರು ಅಥವಾ ಇನ್ಯಾವುದೇ ವಾಹನಕ್ಕಿಂತಲೂ ಸೈಕಲನ್ನೇ ಹೆಚ್ಚು ಇಷ್ಟಪಡುತ್ತಾರೆ" ಎಂದರು.
ಕೆಲವೇ ಗಂಟೆಗಳಲ್ಲಿ ಅವರು ಹೇಳಿದ ಮಾತು ನನ್ನ ಅನುಭವಕ್ಕೂ ಬಂತು. ಆ ದೇಶದಲ್ಲಿ ಎಲ್ಲಿ ನೋಡಿದರೂ ಸೈಕಲ, ಸೈಕಲ, ಸೈಕಲ.... ಆಮ್ʼಸ್ಟರ್‌ಡಾಮ್‌ನಲ್ಲಂತೂ ಕೇಳುವುದೇ ಬೇಡ. ಅಲ್ಲಿರುವ ಸೈಕಲ್ ಸಂಖ್ಯೆಯಷ್ಟು ಕಾರುಗಳೇನಾದರೂ ಇದ್ದಿದ್ದರೆ ದಿನಕ್ಕೆ ಒಂದು ಕಿಲೋಮೀಟರ್ ಕೂಡ ಚಲಿಸಲಾಗದಷ್ಟು ‘ಸಂಚಾರ ಸ್ತಂಭನ’ ಆಗುತ್ತಿತ್ತೇನೋ! ಇನ್ನು ಪಾರ್ಕಿಂಗ್ ಅಂತೂ ಕೇಳಲೇ ಬೇಡಿ.
ಸೈಕಲ್ ನಿಲ್ಲಿಸಲು ಜಾಗ ಇಲ್ಲದೇ ಕೆರೆಯ ಕೆಳಗೆ, 7000 ಸೈಕಲ್ ನಿಲ್ಲಿಸಲು ಅನುಕೂಲವಾಗಿರುವ ‘ಪಾರ್ಕಿಂಗ್’ ನಿರ್ಮಿಸಿದ ದೇಶದಲ್ಲಿ ಕಾರು ನಿಲ್ಲಿಸಲು ಜಾಗ ಎಲ್ಲಿಂದ ಸಿಗಬೇಕು? ಈ ದೇಶದಲ್ಲಿ ಇರುವ ಜನರ ಸಂಖ್ಯೆಗಿಂತಲೂ ಸೈಕಲ್ ಸಂಖ್ಯೆ ಹೆಚ್ಚು. ಅಂಕಿ-ಅಂಶಗಳ ಪ್ರಕಾರ, ನೆದರ್ಲ್ಯಾಂಡ್ಸ್ ದೇಶದ ಜನಸಂಖ್ಯೆ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ. ದೇಶದಲ್ಲಿರುವ ಸೈಕಲ್ ಸಂಖ್ಯೆ ಸುಮಾರು ಎರಡು ಕೋಟಿ ನಲವತ್ತು ಲಕ್ಷ. ಪ್ರಮುಖ ನಗರದ ಗಲ್ಲಿ-ಗಲ್ಲಿಗಳಲ್ಲಿ ಮಾರು-ಮಾರಿಗೆ ಸೈಕಲ್ ಮಾರುವ ಅಂಗಡಿಗಳು ಅಥವಾ ಸೈಕಲ್ ಬಾಡಿಗೆಗೆ ಪಡೆಯಬಹುದಾದ ಸ್ಥಳಗಳು, ಸೈಕಲ್ ನಿಲ್ಲಿಸುವ ಸ್ಥಳಗಳು ಇಲ್ಲಿಯ ಸೈಕಲ್ ಸಂಸ್ಕೃತಿಯನ್ನು ಬಿಂಬಿಸುತ್ತವೆ.
ಈ ದೇಶದಲ್ಲಿ ನಿಮಗೆ ಊಟ-ತಿಂಡಿ, ಹೋಟೆಲು-ಹಾಸ್ಟೆಲು, ಸಿಗದೇ ಇರಬಹುದು, ಸೈಕಲ್‌ಗೆ ಮಾತ್ರ ಯಾವ ಕೊರತೆಯೂ ಇಲ್ಲ. ಈ ದೇಶದಲ್ಲಿ ಸಾಮಾನ್ಯ ಸೈಕಲ್ ಬೆಲೆ 260ರಿಂದ 500 ಯುರೋ ಇದ್ದರೆ, ಉಪಯೋಗಿಸಿದ, ಮರುಮಾರಾಟದ (ಸೆಕೆಂಡ್ ಹ್ಯಾಂಡ್) ಸೈಕಲ್ 50ರಿಂದ 200 ಯುರೋ ಕ್ಕೆ ಸಿಗುತ್ತದೆ.
ಇಂದಿನ ದಿನ ಒಂದು ಯುರೋ 105 ರುಪಾಯಿಗೆ ಸಮ ಎಂದರೆ, ರುಪಾಯಿ ಲೆಕ್ಕದಲ್ಲಿ ಎಷ್ಟಾ ಯಿತು ನೀವೇ ಲೆಕ್ಕ ಮಾಡಿಕೊಳ್ಳಿ. ಆಮ್‌ಸ್ಟರ್‌ಡಾಮ್‌ನ ಸಾಧಾರಣ ಒಂದು ದಿನದ ಹೋಟೆಲ್ ದರ ನೂರರಿಂದ ನೂರ ಐವತ್ತು ಯುರೋ, ಒಂದು ಹೊತ್ತಿನ ಊಟಕ್ಕೆ ಇಪ್ಪತ್ತರಿಂದ ಮೂವತ್ತು ಯುರೋ. ಒಂದು ಕಾಫಿ ಕುಡಿದರೆ ಐದು ಯುರೋ. ಏನಿಲ್ಲ, ಸುಮ್ಮನೆ ಲೆಕ್ಕ ಹೇಳಿದೆ ಅಷ್ಟೇ.
ವಿಶ್ವದ ಅನೇಕ ಕಡೆಗಳಲ್ಲಿ ಬೈಸಿಕಲ್ ಮ್ಯೂಸಿಯಮ್, ಮೋಟರ್‌ಬೈಕ್ ಮ್ಯೂಸಿಯಮ್ ಇದ್ದದ್ದು ಎಲ್ಲರಿಗೂ ತಿಳಿದದ್ದೇ. ಆದರೆ ನೆದರ್ಲ್ಯಾಂಡ್ಸ್‌ಲ್ಲಿ ಸೈಕಲ್ ಮ್ಯೂಸಿಯಮ್ ಅಂತೂ ಇದ್ದೇ ಇದೆ. ಕೆಲವು ಮ್ಯೂಸಿಯಮ್ ಒಳಗೆ ನೀವು ಸೈಕಲ್ ಕೊಂಡು ಹೋಗಬಹುದು, ಮ್ಯೂಸಿಯಮ್ ಒಳಗೆ ಸೈಕಲ್‌ನ ಸುತ್ತಾಡಬಹುದು ಎಂದರೆ ನಂಬುತ್ತೀರಾ? ಆಮ್‌ಸ್ಟರ್‌ಡಾಮ್ ನಗರದ ಅರ್ಧದಷ್ಟು ಜನ ಪ್ರತಿನಿತ್ಯ ಕೆಲಸಕ್ಕೆ ಹೋಗಿ ಬರಲು ಸೈಕಲ್ ಬಳಸುತ್ತಾರೆ, ಈ ನಗರದಲ್ಲಿ ಸೈಕಲ್ ಸವಾರಿಗೆಂದೇ ಸುಮಾರು 500 ಕಿ.ಮೀ. ಪ್ರತ್ಯೇಕ ರಸ್ತೆ ಇದೆ.
ದೇಶದಲ್ಲಿ ಸುಮಾರು 35000 ಕಿ.ಮೀ. ಸೈಕಲ್ ರಸ್ತೆಯಿದೆ. ಆಮ್‌ಸ್ಟರ್ʼಡಾಮ್ ನಗರದಲ್ಲಿ ಪ್ರತಿನಿತ್ಯ ಸುಮಾರು ನಾಲ್ಕೂಮುಕ್ಕಾಲರಿಂದ ಐದು ಲಕ್ಷ ಜನ, ಇಪ್ಪತ್ತು ಲಕ್ಷ ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡುತ್ತಾರೆ ಎಂದರೆ ಒಪ್ಪುತ್ತೀರಾ? ನಂಬದೆ, ಒಪ್ಪದೆ ಬೇರೆ ದಾರಿ ಇಲ್ಲ.
ನೆದರ್ಲ್ಯಾಂಡ್ಸ್‌ನ ಜನರು ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಸೈಕಲ್ ಸವಾರಿ ಮಾಡಲು ತರಬೇತಿ ನೀಡುತ್ತಾರೆ. ಕೆಲವು ಕಡೆ ಇದು ಶಾಲೆಯ ಪಠ್ಯಕ್ರಮದ ಭಾಗವೂ ಹೌದು. ಮಕ್ಕಳು ಪ್ರೌಢಶಾಲೆಗೆ ಹೋಗುವ ಮೊದಲೇ ಅವರಿಗೆ ತರಬೇತಿ ನೀಡಿ, ಪ್ರಮಾಣ ಪತ್ರವನ್ನು ನೀಡಲಾಗು ತ್ತದೆ.
ನಿಜ, ಸೈಕಲ್ ಸವಾರಿ ಮಾಡುವುದಕ್ಕೂ ನೆದರ್ಲ್ಯಾಂಡ್ಸ್‌ನಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ಸುಮಾರು 12-13 ವರ್ಷ ವಯಸ್ಸಿನ ಮಕ್ಕಳಿಗೆ ಸೈಕಲ್ ಸವಾರಿಯ ತರಬೇತಿ ನೀಡಿ, ಪರೀಕ್ಷೆ ನಡೆಸಲಾಗುತ್ತದೆ. 25 ಅಂಕಗಳ ಪರೀಕ್ಷೆಯಲ್ಲಿ 15ಕ್ಕಿಂತ ಹೆಚ್ಚು ಅಂಕ ಪಡೆದರೆ ಅವರು ಉತ್ತೀರ್ಣ ರೆಂದು ಪರಿಗಣಿಸಿ, ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಇದರಿಂದ ಅವರಲ್ಲಿ ಆತ್ಮವಿಶ್ವಾಸ ತುಂಬಿದಂತಾಗುತ್ತದೆ. ಇದು ಏಕೆ ಅವಶ್ಯಕ ಎಂದರೆ, ನೆದರ್ಲ್ಯಾಂಡ್ಸ್‌ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಶೇ.90ಕ್ಕೂ ಹೆಚ್ಚು ಜನ ಸೈಕಲ್ ಸವಾರಿ ಮಾಡಿ ಶಾಲೆಗೆ ಹೋಗುತ್ತಾರೆ. ಮುಂದೆ ಇದೇ ಮಕ್ಕಳು, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸೈಕಲ್ ಸವಾರಿ ಮಾಡುತ್ತಾರೆ. ಈ ದೇಶದ ಪ್ರಧಾನಿಯೂ ಸೈಕಲ್ ಸವಾರಿ ಮಾಡುವ ವಿಷಯ ನೀವು ಕೇಳಿರಬಹುದು, ನೋಡಿರಬಹುದು.
ನಾನು ಆಮ್‌ಸ್ಟರ್‌ಡಾಮ್‌ನಲ್ಲಿದ್ದಾಗ ಮದುಮಕ್ಕಳು ಸವಾರಿ ಮಾಡಲೆಂದು ಸಿಂಗಾರಗೊಂಡ ಸೈಕಲ್ಲನ್ನೂ ಕಂಡಿದ್ದೇನೆ. ಇದೆಲ್ಲ ರಾತ್ರಿ ಬೆಳಗಾಗುವುದರೊಳಗೆ ಆದದ್ದಲ್ಲ. ಇದಕ್ಕೆ ಶತಮಾನದ ಇತಿಹಾಸವಿದೆ. 1880ರ ದಶಕದಲ್ಲಿ ಅಮೆರಿಕ, ಬ್ರಿಟನ್, ಡೆನ್ಮಾರ್ಕ್ ನಂತರ ನೆದರ್ಲ್ಯಾಂಡ್ಸ್‌ನಲ್ಲಿ ಸೈಕ್ಲಿಂಗ್ ಜನಪ್ರಿಯವಾಯಿತು. ಆದರೆ 1890ರ ಹೊತ್ತಿಗೆ ಡಚ್ಚರು ಸೈಕಲ್ ಸವಾರಿಗೆಂದೇ ಮಾರ್ಗ ವನ್ನು ನಿರ್ಮಿಸಲು ತೊಡಗಿದರು.
ಪರಿಣಾಮವಾಗಿ, 1910ರ ಹೊತ್ತಿಗೆ ಡಚ್ಚರು ಯುರೋಪಿನ ಇತರ ದೇಶಗಳಿಗಿಂತ ಹೆಚ್ಚು ತಲವಾರು ಸೈಕಲ್ ಹೊಂದಿದ್ದರು. 1940ರ ವೇಳೆಗೆ ಜರ್ಮನ್ನರು ಡಚ್ಚರ ಮೇಲೆ ಆಕ್ರಮಣ ಮಾಡಿದಾಗ, ನೆದರ್ಲ್ಯಾಂಡ್ಸ್‌ನ ಬಹುತೇಕ ಸೈಕಲ್‌ಗಳು ಕಣ್ಮರೆಯಾದವು. ಆದರೆ ಯುದ್ಧದ ನಂತರ ಆ ದೇಶದಲ್ಲಿ ಸೈಕಲ್ ಬಳಕೆ ತ್ವರಿತವಾಗಿ ಸಾಮಾನ್ಯ ಸ್ಥಿತಿಗೆ ಮರಳಿತು.
ಎರಡನೇ ಮಹಾಯುದ್ಧದ ನಂತರ, ಕಾರು ಮತ್ತು ಇತರ ವಾಹನಗಳ ಸಂಚಾರಕ್ಕೆ ಅನುಕೂಲ ವಾಗುವಂತೆ ಮಾರ್ಗಗಳನ್ನು ನಿರ್ಮಿಸುವಂತೆ ಅಲ್ಲಿಯ ಎಂಜಿನಿಯರ್‌ಗಳ ತಂಡ ಸರಕಾರವನ್ನು ಒತ್ತಾಯಿಸಿತು. ದೇಶವನ್ನು ಹೆಚ್ಚು ‘ಕಾರು ಸ್ನೇಹಿ’ಯನ್ನಾಗಿಸಲು ಅವರು ಮನವಿ ಸಲ್ಲಿಸಿದರು. ಕಾಲುವೆಗಳನ್ನು ತುಂಬಿಸಿ ಅಥವಾ ಅದರೆ ಮೇಲೆ ಹೈವೇ ಮತ್ತು ಮೊನೋ ರೇಲ್ ನಿರ್ಮಿಸಲು ಸಲಹೆ ಕೊಟ್ಟರು.
ಆದರೆ ಇದಕ್ಕೆ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಏಕೆಂದರೆ ಆ ಕಾಲದಲ್ಲಿ ಕಾರಿನ ಅಪಘಾತಗಳು ಹೆಚ್ಚಾಗಿ ಆಗುತ್ತಿದ್ದವು. ಅದಲ್ಲದೆ, ಸುಮಾರು 500ಕ್ಕೂ ಹೆಚ್ಚು ಮಕ್ಕಳು ಕಾರ್ ಅಪಘಾತದಲ್ಲಿ ಮರಣವನ್ನಪ್ಪಿದ್ದರು. ಇದಕ್ಕೆ ಪರಿಹಾರವಾಗಿ ಬೈಸಿಕಲ್‌ಗಳಿಗೆ ಹೆಚ್ಚು ಉತ್ತೇಜನ ನೀಡಲು ಅಲ್ಲಿಯ ಜನರು ಒತ್ತಾಯಿಸುತ್ತಿದ್ದರು.
ಅದೇ ಸಮಯದಲ್ಲಿ ತೈಲದ ಕೊರತೆ, ಇಂಧನದ ಬೆಲೆ ಏರಿಕೆ ಉಂಟಾದದ್ದರಿಂದ ಅಲ್ಲಿಯ ಸರಕಾರವು ಮೋಟಾರ್ ವಾಹನಗಳ ಬಳಕೆಯನ್ನು ನಿರ್ಬಂಧಿಸಲು ಪ್ರಾರಂಭಿಸಿತು. ನಗರ ನಿರ್ಮಾಣದ ಯೋಜನೆಯ ಪ್ರತಿ ಹಂತದಲ್ಲೂ ಸೈಕಲ್ ತುಳಿಯುವವರ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡಿತು.
ಮೋಟಾರು ಸಂಚಾರಕ್ಕಿಂತ ಸೈಕಲ್ ಮತ್ತು ಪಾದಚಾರಿಗಳಿಗೆ ಆದ್ಯತೆ ನೀಡಿತು. ಒಂದು ಶತಮಾನ ದ ಹಿಂದೆಯೇ, ನೆದರ್ಲ್ಯಾಂಡ್ಸ್‌ನಲ್ಲಿ ಸೈಕಲ್ ಸವಾರಿಯನ್ನು ‘ಡಚ್ಚರ ರಾಷ್ಟ್ರೀಯ ಸಂಸ್ಕೃತಿ’ಯ ಸಂಕೇತವೆಂದು ಪರಿಗಣಿಸಲಾಯಿತು. ಇದರ ಪರಿಣಾಮವಾಗಿ ಇಂದು ನೆದರ್ಲ್ಯಾಂಡ್ಸ್ ನಲ್ಲಿ ಪ್ರತಿ ವರ್ಷ ಆರೂವರೆ ಸಾವಿರ ಸಾವುಗಳು ಕಡಿಮೆಯಾಗಿವೆ. ಜತೆಗೆ ಸೈಕಲ್ ತುಳಿಯುವುದರಿಂದ ಜನರು ಹೆಚ್ಚುವರಿಯಾಗಿ ಆರು ತಿಂಗಳು ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಅಂಕಿ-ಅಂಶ ಹೇಳುತ್ತದೆ.
ಇತ್ತೀಚಿನ ದಿನಗಳಲ್ಲಿ ಅಪಘಾತ, ವಾಯುಮಾಲಿನ್ಯ, ಪೆಟ್ರೋಲ-ಡೀಸೆಲ್ ದರ, ವಾಹನಗಳ ನಿರ್ವ ಹಣಾ ವೆಚ್ಚ ಎಲ್ಲವೂ ಹೆಚ್ಚುತ್ತಿರುವುದು ಯಾರಿಗೂ ತಿಳಿಯದಿರುವುದೇನೂ ಅಲ್ಲ. ನಾವು ವಾಯುಮಾಲಿನ್ಯ, ಪರಿಸರ ಮಾಲಿನ್ಯದಿಂದ ಆಗಬಹುದಾದ ಅಪಾಯಗಳ ಕುರಿತೂ, ಸೈಕಲ್ ತುಳಿ ಯುವುದರಿಂದ ಆಗುವ ಲಾಭದ ಕುರಿತೂ ಮಾತನಾಡುತ್ತೇವೆ.
ಮೈ ಕರಗಿಸಲು, ಆರೋಗ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಿ, ಅಲ್ಲಿ ಸ್ಥಿರವಾಗಿ ನಿಂತಿರುವ ಸೈಕಲ್‌ನ ಪೆಡಲ್ ತುಳಿಯುತ್ತೇವೆ. ಆದರೆ ಜಿಮ್‌ಗೆ ಹೋಗಿ-ಬರಲು ಕಾರು ಬಳಸುತ್ತೇವೆ! ಡಚ್ಚರು ಶತಮಾನದ ಹಿಂದೆಯೇ ಎಚ್ಚೆತ್ತುಕೊಂಡರು! ನಾವು...?