ಪದಸಾಗರ
ಕಳೆದ ವಾರ ತೆರೆ ಕಂಡಿರುವ ‘ವಲವಾರ’ ಚಿತ್ರದಲ್ಲಿ ಒಂದು ಮುಗ್ಧ ಹಾಗೂ ಮುದ್ದಾದ ಕಥೆಯಿದೆ. ಕೊನೆತನಕ ಹಿಡಿದಿಟ್ಟುಕೊಳ್ಳುವ ಕಥನಶೈಲಿಯಿದೆ. ಸೂಕ್ಷ್ಮವಾಗಿ ಹೆಣೆದಿರುವ ದೃಶ್ಯಗಳಿವೆ. ಕಣ್ಣಂಚು ಒದ್ದೆಯಾಗಿಸುವ, ತುಟಿಯಂಚು ಅರಳಿಸುವ ಅಭಿನಯವಿದೆ. ಚಿತ್ರದಲ್ಲಿ ಇಂದಿನ ದಿನಕ್ಕೆ ಅಪರೂಪ ಅನಿಸುವಂಥ ಸರಳತೆಯಿದೆ. ಇಂಥ ಚಿತ್ರವನ್ನು ಕನ್ನಡ ಪ್ರೇಕ್ಷಕ ನೋಡಿ ಗೆಲ್ಲಿಸಬೇಕಿದೆ.
ಒಂದು ಪುಟ್ಟ ಹಳ್ಳಿ. ಪಟ್ಟಣದ ಸಂಪರ್ಕವಿಲ್ಲ. ಆ ಹಳ್ಳಿಯಂದು ಕೇರಿ. ಅಲ್ಲಿ ಕೂಲಿ ಕಾರ್ಮಿಕ ಕುಟುಂಬಗಳು ವಾಸ ಮಾಡುತ್ತಿವೆ. ಆ ಹಳ್ಳಿಗೆ ಆಗೊಮ್ಮೆ ಈಗೊಮ್ಮೆ ಪಟ್ಟಣದಿಂದ ಸೈಕಲ್ ಗಾಡಿ ಯಲ್ಲಿ ವ್ಯಾಪಾರಕ್ಕೆ ವರ್ತಕರು ಬರುತ್ತಾರೆ. ಆಟದ ಸಾಮಾನು ಮಾರುವವ ಬಂದನೆಂದರೆ ಹಳ್ಳಿಯ ಮಕ್ಕಳಿಗೆ ಹಬ್ಬದ ಸಂಭ್ರಮ. ಅವನ ಸೈಕಲ್ ಹಿಂದುಗಡೆ ಗುಂಪು ಗುಂಪು ಹುಡುಗರು ಓಡುತ್ತಾರೆ.
ಕೈಲಿ ಕಾಸಿಲ್ಲದಿದ್ದರೂ, ಆ ವ್ಯಾಪಾರಿ ತಮಗೇನಾದರೂ ಆಟದ ಸಾಮಾನು ಕೊಡಬಹುದೆಂಬ ಆಸೆ. ತಮ್ಮ ಕೈಲಿರೋ ಎಂಟಾಣೆ-ನಾಲ್ಕಾಣೆ ಇಟ್ಟುಕೊಂಡು ಅವನೊಂದಿಗೆ ಚೌಕಾಸಿ. ಅವನಿಂದ ಗದರಿಕೆ. ಹಾಗೂ ಏನಾದರೂ ಆಟದ ಸಾಮಾನು ಖರೀದಿಸಿಬಿಟ್ಟರೆ ಆ ಆನಂದಕ್ಕೆ ಪಾರವೇ ಇಲ್ಲ. ಹಳ್ಳಿಯ ರಾಜಕುಮಾರ ಆತ.
ಇಂಥ ಹಳ್ಳಿಗೆ ಆಗೊಮ್ಮೆ ಈಗೊಮ್ಮೆ ಬಲೂನು ಮಾರುವವ ಸೈಕಲ್‌ನಲ್ಲಿ ಬರುತ್ತಾನೆ. ಸೈಕಲ್ಲಿಗೆ ಬಣ್ಣಬಣ್ಣದ ಬಲೂನು ಕಟ್ಟಿಕೊಂಡು ಬಂದು ‘ಬಲೂನ್ ಬಲೂನ್’ ಎಂದು ಕೂಗುತ್ತಾನೆ. ಅವನ ಸೈಕಲ್ ಸುತ್ತ ಮಕ್ಕಳು ನೆರೆಯುತ್ತಾರೆ. ಬೆಲೆ ಕೇಳುತ್ತಾರೆ. ಅವನು ಕೇಳುವಷ್ಟು ಹಣ ಮಕ್ಕಳ ಬಳಿ ಇಲ್ಲ. ಮಕ್ಕಳ ಕೈಲಿರುವಷ್ಟು ಪುಡಿಗಾಸಿಗೆ ಅವನು ಬಲೂನ್ ಕೊಡುವುದಿಲ್ಲ. ಮಕ್ಕಳು ಬಲೂನ್ ನೋಡಿಯೇ ಖುಷಿಪಟ್ಟು ಅವನ ಸೈಕಲ್ ಹಿಂದೆ ಓಡಿ ತಮ್ಮ ಕನಸು ಮುಗಿಸಿಕೊಳ್ಳುತ್ತಾರೆ.
ಅದೇ ರೀತಿ ಅದೊಂದು ಶುಕ್ರವಾರ ಹಳ್ಳಿಗೆ ಬಲೂನ್ ಮಾರುವವ ಬರುತ್ತಾನೆ. ಮಕ್ಕಳೆಲ್ಲರೂ ಅವನನ್ನು ಸುತ್ತುವರಿಯುತ್ತಾರೆ. ಅವನಿಗದು ನಿತ್ಯದ ದೃಶ್ಯ. ಎಲ್ಲರನ್ನೂ ಬಯ್ದು ಕಳಿಸುತ್ತಾನೆ. “ಕೈಲಿ ಕಾಸಿಲ್ಲ ಅಂದ್ರೆ ಯಾಕೆ ಬರ್ತೀರ. ಎರಡು ರುಪಾಯಿಗೆ ಒಂದು ಪೈಸ ಕಮ್ಮಿ ಇದ್ರೂ ಬಲೂನ್ ಕೊಡಲ್ಲ, ನಡೀರಿ ನಡೀರಿ" ಎಂದು ಗದರುತ್ತಾನೆ.
ಇದನ್ನೂ ಓದಿ: Naveen Sagar Column: ಅಲೆಕ್ಸ್ ಅಂದ್ರೆ ಕೋಟಿ, ಜ್ಯೋತಿರಾಜ ಅಂದ್ರೆ ಕೇವಲ ಕೋತಿ !
ಮುಂದಿನ ಹಳ್ಳಿಗೆ ಹೊರಡಲು ಸೈಕಲ್ ಹತ್ತುತ್ತಾನೆ. ಅಷ್ಟರಲ್ಲಿ ಅ ಕೊಂಚ ದೂರದಲ್ಲಿ ನಿಂತಿರುವ ಒಬ್ಬ ಪುಟ್ಟ ಹುಡುಗ ಕಾಣ್ತಾನೆ. ಆಸೆಗಣ್ಣಿನಿಂದ ಬಲೂನನ್ನೇ ನೋಡ್ತಿದಾನೆ. ಬಲೂನ್ ವ್ಯಾಪಾರಿ ಅವನತ್ತ ನೋಡಿ, “ಏನೋ ಮರಿ? ಅ ನಿಂತ್ಕೊಂಡ್ ಏನ್ ನೋಡ್ತಿದೀಯ? ಬಲೂನ್ ಬೇಕಾದ್ರೆ ಬೇಗ ದುಡ್ಡುಕೊಟ್ಟು ತಗೊಂಡ್ ಹೋಗು" ಅಂತಾನೆ. ಪುಟ್ಟ ಹುಡುಗ ಚೂರು ಧೈರ್ಯ ತಗೊಂಡು, “ಆ ಬಲೂನಿಗೆಷ್ಟು" ಅಂತ ಕೇಳ್ತಾನೆ. ಚಿಕ್ಕ ಚಿಕ್ಕ ಬಲೂನ್‌ಗಳನ್ನು ಮುಟ್ಟಿ ತೋರಿಸಿ, “ಇದು ಎರಡು ರೂಪಾಯಿ" ಅಂತಾನೆ ವ್ಯಾಪಾರಿ.
“ಅದಲ್ಲ ಅಣ್ಣಾ... ನಾನು ಕೇಳಿದ್ದು ಆ ಹಸಿರು ಬಲೂನು.. ದೊಡ್ಡದು.."
“ಓಹ್ ಅದಾ.. ಅದ್ಕೆ ಐದು ರುಪಾಯಿ. ಕೊಡ್ಲಾ?"
“ಅಣ್ಣಾ.. ಈಗ ನನ್ನತ್ರ ಕಾಸಿಲ್ಲ. ನನ್ನಮ್ಮ ಕೆಲಸಕ್ಕೆ ಹೋಗಿದಾಳೆ. ಅವ್ಳು ಬಂದಕೂಡ್ಲೆ ಇಸ್ಕೊಂಡ್ ತಂದುಕೊಡ್ತೀನಿ. ಬಲೂನ್ ಕೊಡ್ತೀಯಾ?" ಅಂತ ಅಮಾಯಕತೆಯೊಂದಿಗೆ ಕೇಳುತ್ತೆ ಮಗು.
“ಓ ಅಮ್ಮ ಬಂದ ಮೇಲೆ ಇಸ್ಕೊಂಡ್ ಕೊಡ್ತೀಯಾ? ಹಾಗಾದ್ರೆ ನಿಮ್ಮಮ್ಮ ಬಂದ ಮೇಲೆ ನಂಗೆ ಲೆಟರ್ ಹಾಕು. ಆಗ ಬರ್ತೀನಿ"
ಅಂತ ವ್ಯಂಗ್ಯವಾಗಿ ಹೇಳಿ ಸೈಕಲ್ ಹತ್ತಿ ಹೊರಟೇ ಬಿಡ್ತಾನೆ ವ್ಯಾಪಾರಿ. ಹುಡುಗ ಕೂಗಿ ಕೇಳ್ತಾನೆ. “ಅಣ್ಣಾ ಮತ್ತೆ ಯಾವಾಗ ಬರ್ತೀಯಾ. ಮುಂದಿನ ವಾರ ಬರ್ತೀಯಾ?"
“ನೋಡೋಣ... ಮುಂದಿನ ಶುಕ್ರವಾರವೋ ಶನಿವಾರವೋ ಬರ್ತೀನಿ. ನೀನು ಕಾಸು ರೆಡಿ ಮಾಡ್ಕೊ" ಎಂದು ಹೇಳಿ ಸೈಕಲ್ ತುಳಿಯುತ್ತಾ ಮಾಯವಾಗಿಬಿಡ್ತಾನೆ. ಹುಡುಗ ಆ ಕ್ಷಣದಿಂದಲೇ ಕನಸು ಕಾಣಲು ಆರಂಭಿಸುತ್ತಾನೆ. ಸೀದಾ ಮನೆಗೆ ಬರ್ತಾನೆ. ಅಮ್ಮ ಗುಡಿಸಲ ಎದುರಲ್ಲಿ ಉರಿ ಒಲೆಗೆ ಊದುಗೊಳವೆ ತಗೊಂಡು ಊದ್ತಾ ಕೂತಿದಾಳೆ.
“ಅಮ್ಮಾ ನಂಗೆ ಐದು ರುಪಾಯಿ ಕೊಡು ಅಮ್ಮಾ.." ಅಂತ ದೈನ್ಯದಿಂದ ಕೇಳ್ತಾನೆ ಹುಡುಗ. ಆ ಬಡತಾಯಿಗೆ ಐದು ರುಪಾಯಿ ಅಂದ್ರೆ ಐದು ಸಾವಿರಕ್ಕೆ ಸಮ. “ಯಾಕಪ್ಪಾ ಐದು ರುಪಾಯಿ?" ಅಂತ ಕೇಳ್ತಾಳೆ.
“ಅಮ್ಮಾ ನಂಗೆ ಹಸಿರು ಬಲೂನ್ ಬೇಕಮ್ಮ. ಎಷ್ಟು ಚೆಂದ ಇದೆ ಆ ಹಸಿರು ಬಲೂನ್. ನಾನ್ ಆಟ ಆಡ್ಬೇಕಮ್ಮಾ.. ಪ್ಲೀಸ್ ನಂಗೆ ಐದು ರುಪಾಯಿ ಕೊಡಮ್ಮಾ" ಅಂತ ಮುದ್ದಾಗಿ ಕೇಳ್ಕೋತಾನೆ.
“ನಿಂಗೇನ್ ಬೇಕಂದ್ರೂ ಕೊಡ್ಸೋದಕ್ಕೆ... ನಿಮ್ಮಪ್ಪ ಕೋಟಿ ಕೋಟಿ ಸಂಪಾದಿಸಿಟ್ಟು ಹೋಗಿಲ್ಲ ಕಂದಾ.. ಹೋಗು ಓದ್ಕೋ ನಡಿ...." ಅಂತ ಸಿಡಿಗುಟ್ತಾಳೆ. ಮರುಕ್ಷಣವೇ ಮಗು ಮೇಲಿನ ಮಮತೆ ಕಾಡುತ್ತೆ. “ಎಷ್ಟು ರುಪಾಯಿ ಅಂದೆ?" ಅಂತ ಕೇಳ್ತಾಳೆ. ಮಗು ಕಣ್ಣಲ್ಲಿ ಮತ್ತೆ ಆಸೆ ಚಿಗುರುತ್ತೆ. “ಐದೇ ರುಪಾಯಿ ಅಮ್ಮಾ" ಅನ್ನುತ್ತೆ ಮಗು.
“ನಿಂಗೆ ದಿನಾ ಶಾಲೆಗೆ ಹೋಗುವಾಗ ಎಂಟಾಣೆ ಕೊಡ್ತೀನಲ್ಲ. ಅದನ್ನು ಒಟ್ಟು ಮಾಡಿ ಬಲೂನ್ ತಗೋ ಅಂತಾಳೆ" ಅಮ್ಮ. ಮಗುವಿಗೆ ಕೋಪ.
“ಓ.. ನೀನೇನ್ ದಿನಾ ಕೊಡ್ತೀಯ ನೋಡು. ಒಂದಿನ ಕೊಟ್ರೆ ಇನ್ನೊಂದಿನ ಕೊಡಲ್ಲ". ಅಮ್ಮ ಪ್ರೀತಿಯಿಂದ ಮಗುವಿನ ತಲೆ ಸವರಿ ಹೇಳ್ತಾಳೆ.
“ಇವತ್ತಿಂದ ದಿನಾ ಎಂಟಾಣೆ ಕೊಡ್ತೀನಿ ಪುಟ್ಟ..." ಅಮ್ಮ ಹಾಗೆ ಹೇಳ್ತಾ ಇದ್ದ ಹಾಗೆ, ಮಗು ಕೈ ಬೆರಳಲ್ಲಿ ಲೆಕ್ಕ ಹಾಕೋಕೆ ಶುರುಮಾಡುತ್ತೆ. ಇವತ್ತಿಂದ ಏಳು ದಿನ ಎಂಟಾಣೆ ಎಂಟಾಣೆ ಕೊಟ್ಟರೂ ಮೂರೂವರೆ ರುಪಾಯಿ ಆಗತ್ತೆ. ಬಲೂನಿಗೆ ಐದು ರುಪಾಯಿ. ಮತ್ತೆ ಮಗುವಿಗೆ ಚಿಂತೆ.
“ಎಷ್ಟು ಕಮ್ಮಿ ಬೀಳತ್ತೋ ಅದನ್ನ ಸೇರಿಸಿ ಕೊಡ್ತೀನಿ. ಈಗ ಬಲೂನ್ ಚಿಂತೆ ಬಿಟ್ಟು ಓದ್ಕೊ ಕಂದ" ಅಂತಾಳೆ ಅಮ್ಮ. ಮಗು ಅಮ್ಮನ ಕೈಲಿ ಎಂಟಾಣೆ ಇಸ್ಕೊಂಡು ಅದನ್ನು ಜಾಮಿಟ್ರಿ ಬಾಕ್ಸಿನ ಪೇಪರ್ ಅಡಿಯಲ್ಲಿ ಇಟ್ಟು, ಗೋಡೆಗೆ ತೂಗುಹಾಕಿದ ಕ್ಯಾಲೆಂಡರಲ್ಲಿ ಮಾರ್ಕ್ ಮಾಡುತ್ತೆ. ಅವತ್ತಿಂದ ಏಳು ದಿನಕ್ಕೆ ಸರಿಯಾಗಿ ಬರುವ ಡೇಟಿನ ಮುಂದೊಂದು ಬಲೂನು ಚಿತ್ರ ಬಿಡಿಸಿ ಕನಸು ಕಾಣಲು ಶುರು ಮಾಡುತ್ತೆ. ಅಂದಿನಿಂದ ಮಗುವಿಗೆ ಅದೇ ಧ್ಯಾನ.
ಹೋದಲ್ಲಿ ಬಂದಲ್ಲಿ ಕೈಬೆರಳಲ್ಲಿ ಲೆಕ್ಕ ಹಾಕೋದು. ಇನ್ನೆಷ್ಟು ದಿನ ಇದೆ ಬಲೂನಿನವ ಬರೋಕೆ. ತನ್ನಲ್ಲಿ ಇನ್ನೆಷ್ಟು ಹಣ ಒಟ್ಟಾಗಬೇಕಿದೆ ಅಂತ. ತನ್ನ ಶಾಲೆಯ ಮಕ್ಕಳು ಮಿಠಾಯಿ, ಐಸ್ ಕ್ಯಾಂಡಿ ಎಲ್ಲ ತಿನ್ನುತ್ತಿದ್ದರೂ ಬಲೂನ್‌ಗೋಸ್ಕರ ಕೂಡಿಟ್ಟ ಹಣವನ್ನು ಖರ್ಚು ಮಾಡಬಾರದು ಅಂತ ಮಗು, ಅದೆಲ್ಲ ಆಸೆಯನ್ನು ಅದುಮಿಟ್ಟುಕೊಳ್ಳುತ್ತೆ.
ಐದು ದಿನ ಕಳೆಯುತ್ತೆ. ಮಗುವಿನ ಜಾಮಿಟ್ರಿ ಬಾಕ್ಸಲ್ಲಿ ಎರಡೂವರೆ ರುಪಾಯಿ ಜಮೆಯಾಗಿದೆ. ಅಮ್ಮನಿಗೆ ತರಕಾರಿಗೆ ಅರ್ಜೆಂಟಾಗಿ ಚಿಲ್ಲರೆ ಬೇಕಾಗಿದೆ. ಕೈಲಿ ಕಾಸಿಲ್ಲ. ಬೇರೆ ದಾರಿ ಕಾಣದೆ, ಮಗುವಿನ ಬಳಿ ತಾನೇ ಕೊಟ್ಟ ಹಣ ವಾಪಸ್ ಕೇಳ್ತಾಳೆ. “ಅರ್ಜೆಂಟ್ ಬೇಕು, ಕೊಡು ನಿಂಗೆ ಆಮೇಲೆ ಕೊಡ್ತೀನಿ" ಅಂತ.
ಮಗುವಿಗೆ ಆಕಾಶವೇ ಕಳಚಿ ಬಿದ್ದಷ್ಟು ದುಃಖ. “ನಾನು ಕೊಡಲ್ಲ" ಅಂತ ಕಾಲು ಬಡ್ಕೊಂಡು ಅಳುತ್ತೆ. ಅಮ್ಮ ಎರಡು ಏಟುಕೊಟ್ಟು ಕಾಸು ಕಸಿದುಕೊಂಡು ಹೋಗ್ತಾಳೆ. ರಾತ್ರಿ ನಿದ್ದೆಯಲ್ಲೂ ಹಸಿರು ಬಲೂನಿನದೇ ಕನವರಿಕೆ. ಸಣ್ಣ ಜ್ವರ. ಮಗುವಿಗೆ ಹೊಡೆದೆ, ಕಾಸು ಕಸಿದುಕೊಂಡೆ ಅಂತ ಅಮ್ಮ ಒಬ್ಬಳೇ ಸಂಕಟಪಡುತ್ತಾಳೆ.
ಮರುದಿನ ಮಗು ಶಾಲೆಗೆ ಹೋಗುವ ಮುನ್ನ ದುಃಖದಿಂದಲೇ ಜಾಮಿಟ್ರಿ ಬಾಕ್ಸ್ ತೆಗೆದರೆ, ಅಚ್ಚರಿ ಕಾದಿರುತ್ತದೆ. ಜಾಮಿಟ್ರಿಯಲ್ಲಿ ಐದು ರುಪಾಯಿ ನೋಟು. ಅಮ್ಮ ತನ್ನ ಅಂದಿನ ಕೂಲಿಯ ದುಡ್ಡಲ್ಲಿ ಐದು ರುಪಾಯಿ ತೆಗೆದು ಮಗುವಿನ ಬಾಕ್ಸಲ್ಲಿಟ್ಟಿದ್ದಾಳೆ.
ಮಗುವಿನ ಸಂತೋಷಕ್ಕೆ ಪಾರವೇ ಇಲ್ಲ. ಒಂದು ದಿನ ಮೊದಲೇ ಬಲೂನಿಗೆ ಬೇಕಿರೋ ಹಣ ಒಟ್ಟಾಗಿದೆ. ಖುಷಿಯಿಂದ ಕುಣಿದು ಅಮ್ಮನಿಗೆ ಮುತ್ತಿಕ್ಕುತ್ತಾನೆ. ಮಗುವಿನ ಖುಷಿ ನೋಡಿ ತಾಯಿಗೆ ಸಮಾಧಾನ. ಆದರೆ ಈ ಖುಷಿ ಹೆಚ್ಚು ಹೊತ್ತು ಉಳಿಯುವುದಿಲ್ಲ. ಸಂಜೆ ಪೆಚ್ಚು ಮೋರೆ ಹಾಕಿ ಕೊಂಡು ಬರುವ ಮಗು, ಬ್ಯಾಗೆಲ್ಲ ತಡಕಾಡುತ್ತೆ.
ಅಂಗಿ ಜೇಬು, ಚೆಡ್ಡಿ ಜೇಬು ಎಲ್ಲ ಹುಡುಕಾಡುತ್ತೆ. ಅಮ್ಮನಿಗೆ ಮಗುವಿನ ವರ್ತನೆ ಅರ್ಥ ವಾಗೋ ದಿಲ್ಲ. ಯೂನಿ-ರ್ಮೂ ಬಿಚ್ಚದೇ ಇದೇನು ಮಾಡ್ತಿದಾನೆ ಎಂದು ಗದರುತ್ತಾಳೆ. ಮಗು ಮತ್ತೊಮ್ಮೆ ಮನೆಯಿಂದ ಶಾಲೆಯ ದಾರಿಯ ತನಕ ಓಡುತ್ತದೆ. ಕಣ್ಣೀರು ತುಂಬಿಕೊಂಡು ಅಮ್ಮನೆದುರು ಬಂದು ನಿಲ್ಲುತ್ತದೆ. ಏನಾಯ್ತೋ ಕಂದಾ ಅಂತ ಕೇಳಿದ್ರೆ.. “ಅಮ್ಮಾ ಹೇಗ್ ಕಳ್ದೋಯ್ತು, ಎಲ್ಲಿ ಕಳ್ದೋಯ್ತು ಒಂದೂ ಗೊತ್ತಿಲ್ಲ.
ಜೋಪಾನವಾಗಿ ಬಾಕ್ಸಲ್ಲಿ ಇಟ್ಕೊಂಡಿದ್ದೆ ಅಮ್ಮಾ.. ನೀನ್ ಅ ಪ್ರೀತಿಯಿಂದ ಕೊಟ್ಟು ಕಳ್ಸಿದ್ದೆ. ನಾನು ಕಳ್ಕೊಂಡ್ ಬಿಟ್ಟೆ ಅಮ್ಮಾ.."
ಅಮ್ಮನ ಸಿಟ್ಟಿನ ಮುಖ ನೋಡಿ, “ನಂಗೆ ಹಸಿರು ಬಲೂನ್ ಬೇಡ ಅಮ್ಮಾ... ಏನಿದ್ಯೋ ಅದ್ರ ನಾನ್ ಆಟ ಆಡ್ಕೋತೀನಿ. ಇನ್ಯಾವತ್ತೂ ಬಲೂನ್ ಬೇಕು ಅಂತ ಕೇಳಲ್ಲ ಅಮ್ಮಾ" ಅಂತ ದುಃಖದ ಮೂತಿಯ ಹೇಳುತ್ತೆ ಮಗು. ತಾಯಿಮನಸು ತಡೆಯುತ್ತಾ? “ಎಲ್ಲೂ ಕಳ್ದೋಗಿರೋದಿಲ್ಲ.
ಬ್ಯಾಗ ಇನ್ನೊಂದ್ ಸಲ ಹುಡುಕು ಹೋಗು" ಅಂತಾಳೆ ಅಮ್ಮ. ಅವನು ಆ ಕಡೆ ತಿರುಗಿ ಹೋಗ್ತಾ ಇರುವಾಗ, ತನ್ನ ಬಳಿ ಇರುವ ಐದು ರುಪಾಯಿಯನ್ನು ಮಡತೆ ಮಾಡಿ ಅ ಮೂಲೆಯಲ್ಲಿ ಎಸೀತಾಳೆ. “ಇ ಬೀಳಿಸ್ಕೊಂಡಿದೀಯ. ಎಲ್ಲಾ ಕಳ್ಕೊಂಡ್ ಎ ಹುಡುಕ್ತೀಯ... ದಡ್ಡಾ" ಅಂತಾಳೆ.
ಮಗು ಅಮಾಯಕತೆಯಿಂದ ದುಡ್ಡೆತ್ತಿಕೊಂಡು “ಆಹಾ ನನ್ನ ದುಡ್ಡು ಸಿಕ್ಕಿಬಿಡ್ತು" ಅಂತ ಕುಣಿದಾಡಿ ಬಿಡುತ್ತೆ. ಶುಕ್ರವಾರ.. ಬಲೂನ್ ಮಾರೋವ್ನು ಬರೋ ದಿನ. ಮಗುವಿನ ಚಡಪಡಿಕೆ ಹೇಳತೀರದು. ಬಲೂನಿನವ ಬರೋ ಮಾರ್ಗಕ್ಕೆ ಹೋಗಿ ಒಂದೇ ಕಾಯ್ತಾ ಕೂತಿದೆ. ದಾರೀಲಿ ಬರೋವ್ರನ್ನೆಲ್ಲ ಕೇಳುತ್ತೆ- “ಅಣ್ಣಾ ಬಲೂನಣ್ಣ ಸಿಕ್ಕಿದ್ನಾ? ಬರ್ತಿದಾನಾ?" ಅಂತ.
ಅಷ್ಟೊತ್ತಿಗೆ ಕಲರ್ ಕಲರ್ ಬಲೂನ್ ಹೊತ್ತ ಸೈಕಲ್ ಬರ್ತಾ ಇರೋದು ಕಾಣ್ಸುತ್ತೆ. ಮಗು ಅವನ ಸೈಕಲ್‌ನತ್ತ ಓಡಿ ಬಂದು ಅಡ್ಡ ಹಾಕುತ್ತೆ. “ಇಲ್ಲಿಬಂದು ಯಾಕೋ ಕಾಯ್ತಾ ಇದೀಯಾ? ನಾನೇನು ನಿಮ್ಮ ಕೇರಿಗೆ ಬರಲ್ವಾ?" ಅಂತ ಬಲೂನಿನವ ಕೇಳ್ತಾ ಇದ್ರೆ.. ಹುಡುಗ ತನ್ನ ಜೇಬಿಂದ ಐದು ರುಪಾಯಿ ತೆಗೆದು “ಅಣ್ಣಾ ಅವತ್ತು ಕೇಳಿದ್ನಲ್ಲ ಆ ಹಸಿರು ಬಲೂನ್ ಕೊಡು" ಅಂತಾನೆ.
ದುರ್ವಿಧಿ ಹೇಗಿದೆ ನೋಡಿ... ಬಲೂನಿನ ಬೆಲೆ ಏರಿ ಬಿಟ್ಟಿದೆ.
“ಹಸಿರು ಬಲೂನಿಗೆ ಆರು ರುಪಾಯಿ ಕಣಪ್ಪಾ" ಅಂತಾನೆ ಬಲೂನಣ್ಣ.
“ಅಣ್ಣಾ ನೀನು ಐದು ರುಪಾಯಿ ಅಂತ ಹೇಳಿದ್ಯಲ್ಲ ಹೋದ ವಾರ. ನಾನು ಅಷ್ಟೇ ತಂದಿದೀನಿ.. ಈಗ ನೋಡಿದ್ರೆ ಆರು ರುಪಾಯಿ ಅಂತಿದೀಯಲ್ಲ ಅಣ್ಣಾ.."
“ಎಲ್ಲ ಬೆಲೆ ಏರ್ತಾ ಇದ್ಯಪ್ಪಾ.. ಇವತ್ತಿದ್ದ ಬೆಲೆ ನಾಳೆ ಇರಲ್ಲ. ಅಷ್ಟಲ್ದೇ ನಿಮ್ ಹಳ್ಳಿಗೆ ಬರೋಕೆ ಹತ್ತು ಮೈಲು ಸೈಕಲ್ ಬೇರೆ ತುಳೀಬೇಕು. ಆರು ರುಪಾಯಿಗೆ ಒಂದು ಪೈಸ ಕಮ್ಮಿ ಇದ್ರೂ ಕೊಡಲ್ಲ" ಅಂದುಬಿಡ್ತಾನೆ ಬಲೂನಣ್ಣ.
“ಅಣ್ಣಾ ಈ ಐದು ರುಪಾಯಿ ಇಟ್ಕೊ ಈಗ. ಮುಂದಿನವಾರ ಹೇಗಾದ್ರೂ ಮಾಡಿ ಒಂದು ರುಪಾಯಿ ಕೊಡ್ತೀನಿ. ಅಲ್ಲಿತಂಕ ಈ ಹಸಿರು ಬಲೂನು ಯಾರಿಗೂ ಕೊಡಬೇಡ ಅಣ್ಣಾ" ಅಂತ ಮುಗ್ಧವಾಗಿ ಕೇಳ್ಕೊಳತ್ತೆ ಮಗು. ಬಲೂನಣ್ಣನ ಮನಸು ಕರಗುತ್ತದೆ.
“ಸರಿ, ಮುಂದಿನವಾರ ಒಂದು ರುಪಾಯಿ ಕೊಡೋದು ಮರೀಬೇಡ. ತಗೋ ಈ ಬಲೂನ್" ಅಂತ ಹಸಿರು ಬಲೂನ್ ಎತ್ತಿಕೊಡ್ತಾನೆ. ಮಗುವಿನ ಸಂತೋಷಕ್ಕೆ ಮೇರೆಯೇ ಇಲ್ಲ. ಹಸಿರು ಬಲೂನು ಕೈಲಿ ಹಿಡಿದು ಮನೆಯತ್ತ ಓಡತೊಡಗುತ್ತದೆ. ಓಡ್ತಾ ಇದ್ದ ಮಗು ಎಡವುತ್ತದೆ. ಹೊಲದ ರಸ್ತೆಯಲ್ಲಿ ಬೀಳುತ್ತಿದ್ದಂತೆ, ಕೈಲಿದ್ದ ಬಲೂನಿಗೆ ಮುಳ್ಳುಚುಚ್ಚಿ ‘ಢಂ’ ಎನ್ನುತ್ತದೆ.
ಮಗುವಿನ ಒಂದು ವಾರದ ಕನಸು, ತಪಸ್ಸು, ಆತಂಕ, ನಿರೀಕ್ಷೆ, ಸಂತಸ ಎಲ್ಲವೂ ಒಂದೇ ಕ್ಷಣದಲ್ಲಿ ಮುಗಿದುಹೋಗಿಬಿಡುತ್ತವೆ. ಮಗು ಮತ್ತೊಂದು ಬಲೂನ್‌ಗಾಗಿ ಹಣ ಒಟ್ಟುಮಾಡುತ್ತದೆಯಾ? ಬಲೂನಿನ ಕನಸನ್ನೇ ತ್ಯಾಗ ಮಾಡಿಬಿಡುತ್ತದೆಯಾ?
ತಮಿಳಿನಲ್ಲಿ ಹದಿನೈದು ವರ್ಷದ ಹಿಂದೆ ಬಂದಿದ್ದ ‘ಅಂಜಿ ರುಪಾಯ್’ ಎಂಬ ಕಿರುಚಿತ್ರದ ಕಥೆ ಇದು. ಎಂಟು ನಿಮಿಷದಲ್ಲಿ ಎಷ್ಟೆಲ್ಲ ಹೇಳಿತ್ತು ಈ ಪುಟ್ಕತೆ. ಇಂದು ಈ ಕಥೆಯನ್ನು ನೆನಪಿಸಿ ಕೊಳ್ಳಲು ಕಾರಣ, ‘ವಲವಾರ’ ಎಂಬ ಮುದ್ದಾದ ಹೃದಯಸ್ಪರ್ಶಿ ಕನ್ನಡ ಚಿತ್ರ. ಕಳೆದ ವಾರ ತೆರೆ ಕಂಡಿರುವ ಈ ಚಿತ್ರದಲ್ಲಿ ಇಂಥದ್ದೇ ಒಂದು ಮುಗ್ಧ ಹಾಗೂ ಮುದ್ದಾದ ಕಥೆಯಿದೆ.
ಕೊನೆ ತನಕ ಹಿಡಿದಿಟ್ಟುಕೊಳ್ಳುವ ಕಥನಶೈಲಿಯಿದೆ. ಸೂಕ್ಷ್ಮವಾಗಿ ಹೆಣೆದಿರುವ ದೃಶ್ಯಗಳಿವೆ. ಕಣ್ಣಂಚು ಒದ್ದೆಯಾಗಿಸುವ, ತುಟಿಯಂಚು ಅರಳಿಸುವ ಅಭಿನಯವಿದೆ. ಚಿತ್ರದಲ್ಲಿ ಇಂದಿನ ದಿನಕ್ಕೆ ಅಪರೂಪ ಅನಿಸುವಂಥ ಸರಳತೆಯಿದೆ. ಇಂಥ ಚಿತ್ರವನ್ನು ಕನ್ನಡ ಪ್ರೇಕ್ಷಕ ನೋಡಿ ಗೆಲ್ಲಿಸಬೇಕಿದೆ.
ಬಹುಕೋಟಿ ಚಿತ್ರಗಳು, ತಾಂತ್ರಿಕ ಉತ್ಕೃಷ್ಟತೆಯ ಚಿತ್ರಗಳು, ಸ್ಟಾರ್ ಬಿಲ್ಡಪ್‌ಗಳ ಚಿತ್ರಗಳು ಗೆಲ್ಲಲಿ, ತಕರಾರಿಲ್ಲ. ಆದರೆ ಮನಗೆಲ್ಲುವ ಇಂಥ ಕ್ಯೂಟ್ ಚಿತ್ರಗಳು ಸೋಲದಿರಲಿ. ಚಿಕ್ಕ ಚಿತ್ರಗಳೆಂದು ಪ್ರೇಕ್ಷಕ ‘ವಲವಾರ’ ಮಾಡದಿರಲಿ... ವಲವಾರ ಅಂದ್ರೇನು ಅಂತ ಕೇಳ್ತೀರಾ? ಚಿತ್ರ ನೋಡಿ ಗೊತ್ತಾಗತ್ತೆ....