ಎನ್ನ ಬಸವಣ್ಣನ ಮಲಿನಗೊಳಿಸದಿರಿ
ಸಂಬಂಧಿಸಿದ ಎಲ್ಲ ಮಠಾಧೀಶರಲ್ಲಿ, ಮುಖಂಡರಲ್ಲಿ, ವಿದ್ವಾಂಸರಲ್ಲಿ ನನ್ನ ವಿನಂತಿ ಇಷ್ಟೇ: ನಾನು ನಂಬಿರುವ ಬಸವಣ್ಣ, ಜೀವನಾದರ್ಶವನ್ನು ಸರಳವಾಗಿ ತಿಳಿಸಿ ಕೊಟ್ಟ, ರೂಪಿಸಿಕೊಟ್ಟ, ಪ್ರತಿಪಾದಿಸಿದ ಶರಣ ಮಹಾನುಭಾವ. ಆತನನ್ನು ಕುಗ್ಗಿಸಿ, ತಿರುಚಿ, ನಿಮ್ಮ ನಿಮ್ಮ ಮೂಗಿನ ನೇರಕ್ಕೆ ಹೊಂದಿಸಬೇಡಿ. ನಿಮ್ಮ ನಿಮ್ಮ ಉದ್ದೇಶಸಾಧನೆಗಾಗಿ ಆತನನ್ನು ಮಲಿನಗೊಳಿಸಬೇಡಿ. ಆತನು ಮಾನವಕುಲಕ್ಕೆ ಜೀವನಾ ದರ್ಶವನ್ನು ತೋರಿದ-ಸಾರಿದ ಶರಣನಾಗಿ ಉಳಿಯಲು ಬಿಡಿ.


ಕಳಕಳಿ
ಎಚ್.ಆನಂದರಾಮ ಶಾಸ್ತ್ರೀ
ವೀರಶೈವ-ಲಿಂಗಾಯತ ಮತದ ಚಟುವಟಿಕೆಗಳ ಕೇಂದ್ರಸ್ಥಾನವೆನ್ನಬಹುದಾದ ದಾವಣಗೆರೆಯಲ್ಲಿ ಹುಟ್ಟಿ ಬೆಳೆದವನು ನಾನು. ನನಗೀಗ 74ರ ಇಳಿ ವಯಸ್ಸು. ಹಳೆ ಊರಿನ ಪ್ರತಿಷ್ಠಿತ ಬೀದಿಯಾದ ಚೌಕಿಪೇಟೆಯಲ್ಲಿ ವಾಸವಾಗಿದ್ದ ನಾನು ಬಾಲ್ಯದಿಂದಲೂ ವೀರಶೈವರ-ಲಿಂಗಾಯತರ ಗೆಳೆತನ ಹೊಂದಿದ್ದವನು. ಆ ಮತದವನಲ್ಲವಾದರೂ ಅವರ ಮನೆಗಳಲ್ಲಿ ಉಂಡು-ಆಡಿ ಬೆಳೆದವನು. ಅವರ ವಿವಿಧ ಮಠಾಧೀಶರ ಪಾದಗಳಿಗೆ ಎರಗಿದವನು.
ಶ್ರಾವಣ ಮಾಸದಲ್ಲಿ ಬಕ್ಕೇಶ್ವರ ದೇವಸ್ಥಾನದಲ್ಲಿ-ವಿರಕ್ತಮಠದಲ್ಲಿ ಪ್ರವಚನ ಕೇಳುವುದು, ಬಸವ ಜಯಂತಿಯ ಸಂದರ್ಭದಲ್ಲಿ ಹಿರಿಯರೊಬ್ಬರ ನೇತೃತ್ವದಲ್ಲಿ ಪ್ರತಿದಿನ ಬೆಳಗ್ಗೆ ವಚನ ಕೀರ್ತನೆ ಗಳನ್ನು ಹಾಡುತ್ತ ನಡೆಯುತ್ತಿದ್ದ ಪ್ರಭಾತ ಫೇರಿಯಲ್ಲಿ ಪಾಲ್ಗೊಳ್ಳುವುದು, ಬಸವ ಜಯಂತಿ ಯಂದು ಊರಿನ ಹಲವೆಡೆ ನಡೆಯುತ್ತಿದ್ದ ವಚನ ಕಂಠಪಾಠ ಸ್ಪರ್ಧೆಗಳಲ್ಲಿ ಭಾಗವಹಿಸುವದು, ಮುಂತಾದ ಅರ್ಥಪೂರ್ಣ ಚಟುವಟಿಕೆಗಳಲ್ಲಿ ಬಾಲಕನಾಗಿ ಪ್ರತಿ ವರ್ಷ ಭಾಗವಹಿಸುತ್ತಿದ್ದವನು.
ಇದನ್ನೂ ಓದಿ: Basavaraj Shivappa Giraganvi Column: ಅನಾರೋಗ್ಯದತ್ತ ತಳ್ಳುವ ಮೊಬೈಲ್ ಮಾಯಾಂಗನೆ
ನನ್ನ ಬಾಲ್ಯದ ಈ ಜೀವನ ಕ್ರಮವು ಬಸವಣ್ಣನವರು ಮತ್ತು ಇತರ ಶರಣರು ವಚನಗಳಲ್ಲಿ ಸಾರಿದ ತತ್ತ್ವ-ಆದರ್ಶಗಳಿಂದ ಪ್ರೇರಿತವಾದಂಥವು. ಅನಂತರದಲ್ಲೂ ನಾನು, ವಚನಗಳು ಹೇಳುವ ತತ್ತ್ವ-ಆದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ.
ವೀರಶೈವ-ಲಿಂಗಾಯತ ಮತೀಯರಲ್ಲೂ, ಅನ್ಯಮತೀಯರಲ್ಲೂ ನನ್ನಂತಹ ಲಕ್ಷಾಂತರ ಮಂದಿ ಇದ್ದಾರೆ. ಅವರೆಲ್ಲರ ನಂಬಿಕೆಗಳಿಗೆ ಪೆಟ್ಟು ಬೀಳುವಂತಹ ಬೆಳವಣಿಗೆಗಳು ಈಚೆಗೆ ನಡೆಯುತ್ತಿರು ವುದು ಬಹಳ ದುಃಖದ ಸಂಗತಿ. ‘ವೀರಶೈವ-ಲಿಂಗಾಯತ’ ಒಂದೇ, ಬೇರೆ ಬೇರೆ, ಎಂಬ ವಿವಾದ, ಅದು ಪ್ರತ್ಯೇಕ ಧರ್ಮ, ಪ್ರತ್ಯೇಕ ಧರ್ಮವಲ್ಲ, ಎಂಬ ವಿವಾದ, ಮೀಸಲಾತಿ ಬೇಕು, ಬೇಡ, ಎಂಬ ವಿವಾದ, ಇವುಗಳು ಸಮಾಜದಲ್ಲಿ ಇಂದು ನಿರ್ಮಿಸುತ್ತಿರುವ ಗೋಜಲುಗಳನ್ನು ಕಂಡಾಗ ನನ್ನಂ ತಹ ಸಾಮಾನ್ಯರಿಗೆ, ‘ಹಾಗಾದರೆ ಬಸವಣ್ಣ ನಾನು ನಂಬಿದಂತಹ ರೀತಿಯಲ್ಲಿ ಇರಲಿಲ್ಲವೇ?’ ಎಂದು ಅನುಮಾನ ಹುಟ್ಟುವಂತಾಗಿದೆ!
ಸಂಬಂಧಿಸಿದ ಎಲ್ಲ ಮಠಾಧೀಶರಲ್ಲಿ, ಮುಖಂಡರಲ್ಲಿ, ವಿದ್ವಾಂಸರಲ್ಲಿ ನನ್ನ ವಿನಂತಿ ಇಷ್ಟೇ: ನಾನು ನಂಬಿರುವ ಬಸವಣ್ಣ, ಜೀವನಾದರ್ಶವನ್ನು ಸರಳವಾಗಿ ತಿಳಿಸಿ ಕೊಟ್ಟ, ರೂಪಿಸಿಕೊಟ್ಟ, ಪ್ರತಿಪಾದಿಸಿದ ಶರಣ ಮಹಾನುಭಾವ. ಆತನನ್ನು ಕುಗ್ಗಿಸಿ, ತಿರುಚಿ, ನಿಮ್ಮ ನಿಮ್ಮ ಮೂಗಿನ ನೇರಕ್ಕೆ ಹೊಂದಿಸಬೇಡಿ. ನಿಮ್ಮ ನಿಮ್ಮ ಉದ್ದೇಶಸಾಧನೆಗಾಗಿ ಆತನನ್ನು ಮಲಿನಗೊಳಿಸಬೇಡಿ. ಆತನು ಮಾನವಕುಲಕ್ಕೆ ಜೀವನಾದರ್ಶವನ್ನು ತೋರಿದ-ಸಾರಿದ ಶರಣನಾಗಿ ಉಳಿಯಲು ಬಿಡಿ.
(ಹಿರಿಯ ಸಾಹಿತಿ, ಅಂಕಣಕಾರ)