ಕಾಡುದಾರಿ
ಕೊಲ್ಲಿ ಕಲಹ ಮುಕ್ತಾಯದ ಹಂತಕ್ಕೆ ಬಂದಿದೆ. ಇರಾನ್ ಮತ್ತು ಅಮೆರಿಕ ಪರಸ್ಪರರ ಶರತ್ತು ಗಳನ್ನು ಒಪ್ಪಿಕೊಂಡರೆ ಯುದ್ಧ ನಿಲ್ಲುತ್ತದೆ. ನಿಜಕ್ಕೂ ನಿಲ್ಲುತ್ತದೋ? ಹೇಳುವುದು ಕಷ್ಟ. ಇಸ್ರೇಲ್ ಎಂಬ ದೇಶ ಮಧ್ಯಪ್ರಾಚ್ಯದ ನಟ್ಟ ನಡುವೆ ಇರುವವರೆಗೆ ಯಾವ ಸಾಧ್ಯತೆಯನ್ನೂ ನಿರಾಕರಿಸು ವಂತಿಲ್ಲ. ಈ ಯುದ್ಧಕ್ಕೆ ಬರೀ ಮೂರು ತಿಂಗಳು. ಆದರೆ ಹನ್ನೊಂದು ವರ್ಷಗಳಿಂದ ಒಂದು ಯುದ್ಧ ನಡೆಯುತ್ತಿದೆ. ಅದು ನಿಲ್ಲುವ ಯಾವ ಸೂಚನೆಯನ್ನೂ ಇದುವರೆಗೆ ತೋರಿಸಿಲ್ಲ. ಯಾವುದದು?
ಅದನ್ನು ನೋಡುವುದಕ್ಕೂ ಮೊದಲು, ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಹೇಳಿದ ಮಾತೊಂ ದನ್ನು ಗಮನಿಸಿ. ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬಳು ಬಾಲಕಿ ‘ನಾವು ಮಿಲಿಯಾಂತರ ವರ್ಷಗಳಿಂದ ವಿಕಾಸಗೊಂಡಿದ್ದೇವೆ..’ ಎಂದು ಆರಂಭಿಸುತ್ತಿದ್ದಾಗ ನಡುವೆ ತಡೆದ ಕೃಷ್ಣಮೂರ್ತಿ, ‘ನಿಜಕ್ಕೂ ನಾವು ವಿಕಾಸವಾಗಿದ್ದೇವಾ?’ ಎಂದು ಪ್ರಶ್ನೆ ಎಸೆಯುತ್ತಾರೆ. ನಾನು ಮುಂದೆ ಹೇಳಲು ಹೊರಟಿರುವ ಸಂಗತಿ, ಈ ಮಾತಿಗೆ ಸಮರ್ಥನೆಯಾಗಿ ನಿಲ್ಲುವಂಥದು.
ಖ್ಯಾತ ಪ್ರಾಣಿಶಾಸ್ತ್ರಜ್ಞೆ ಜೇನ್ ಗುಡಾಲ್ ಎಂಬಾಕೆ ತಾಂಜಾನಿಯಾದ ಗೊಂಬೆ ರಾಷ್ಟ್ರೀಯ ಉದ್ಯಾ ನವನದಲ್ಲಿ ಚಿಂಪಾಂಜಿಗಳ ಕುರಿತು ದಶಕಗಳ ಕಾಲ ಸಂಶೋಧನೆ ನಡೆಸಿದಳು. ಜೇನ್ ಗುಡಾಲ್ ಸಂಶೋಧನೆ, ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಸಂಬಂಧದ ಬಗ್ಗೆ ಜನರ ಕಲ್ಪನೆಯನ್ನೆ ಬದಲಿಸಿತು. ಚಿಂಪಾಂಜಿಗಳು ಈಕೆಯನ್ನು ತಮ್ಮಲ್ಲಿ ಒಬ್ಬಳೆಂದೇ ಪರಿಗಣಿಸಿದ್ದವು. ಆದರೆ 1970ರ ದಶಕದ ಮಧ್ಯಭಾಗದಲ್ಲಿ ಆಕೆಯನ್ನೂ ಬೆಚ್ಚಿ ಬೀಳಿಸಿದ ಘಟನೆಯೊಂದು ನಡೆಯಿತು.
ಇದನ್ನೂ ಓದಿ: Harish Kera Column: ಅಲೋಕ ಮತ್ತು ಭೈರವ: ಬುದ್ಧ ಮತ್ತು ಶಿವ
ಅವರು ಅಧ್ಯಯನ ಮಾಡುತ್ತಿದ್ದ ಚಿಂಪಾಂಜಿಗಳ ಗುಂಪು ಎರಡು ಬಣಗಳಾಗಿ ವಿಭಜನೆಯಾಗಿ ಪರಸ್ಪರ ವಿರುದ್ಧ ತಿರುಗಿ ಬಿದ್ದವು. ಅದು ಸಣ್ಣ ಮಟ್ಟದ ಪ್ರಾಣಿಗಳ ಜಗಳದಂತಿರಲಿಲ್ಲ. ನಾಗರಿಕ ಯುದ್ಧದಂತೆಯೇ ಇತ್ತು. ಹಿಂದೆ ಒಟ್ಟಿಗೆ ಬೆರೆತು ಜೊತೆಯಾಗಿ ಬೆಳೆದಿದ್ದ, ಶಾಂತಿಯುತವಾಗಿ ಬದುಕಿದ್ದ ಚಿಂಪಾಂಜಿಗಳು ಯೋಜಿತ ರೀತಿಯಲ್ಲಿ ಪರಸ್ಪರರ ಗುಂಪುಗಳ ಮೇಲೆ ದಾಳಿ ಮಾಡಿ ಕ್ರೂರವಾಗಿ ಒಬ್ಬರನ್ನೊಬ್ಬರು ಬಡಿದು ಕೊಲ್ಲಲು ಆರಂಭಿಸಿದವು.
ಪ್ರಾಣಿಗಳಲ್ಲಿ ಹಸಿವಿಗಾಗಿ ಬೇಟೆ ಇದೆ. ಚಿಂಪಾಂಜಿಗಳಲ್ಲಿ ಅದೂ ಇಲ್ಲ. ಅವು ಸಸ್ಯಾಹಾರಿಗಳು. ಆದರೆ ಅವು ಕೂಡ ಎದುರಾಳಿ ಗುಂಪಿನ ಮೇಲೆ ದಾಳಿ ಮಾಡುವಾಗ ತಲೆ ಜಜ್ಜಿ ಕೊಲ್ಲುವ ಕ್ರೌರ‍್ಯ ಮೆರೆದವು. ಈ ಘಟನೆ, ಮಾನವನ ಅತ್ಯಂತ ಹತ್ತಿರದ ಸಂಬಂಧಿಗಳೆಂದು ಪರಿಗಣಿಸಲ್ಪಡುವ ಚಿಂಪಾಂಜಿಗಳ ಬಗ್ಗೆ ಜೇನ್ ಗುಡಾಲ್ ಅವರ ದೃಷ್ಟಿಕೋನವನ್ನೆ ಬದಲಿಸಿತು.
1993ರಲ್ಲಿ ಅವರು ಒಂದು ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ಹಿಂದೆ ನಾನು ಚಿಂಪಾಂಜಿಗಳು ಮನುಷ್ಯರಂತೆಯೇ ಇರುತ್ತವೆ, ಆದರೆ ಮನುಷ್ಯರಿಗಿಂತ ಸಜ್ಜನಿಕೆಯುಳ್ಳ ಜೀವಿ ಗಳು ಎಂದು ಭಾವಿಸಿದ್ದೆ. ಆದರೆ ಅವಕಾಶ ಸಿಕ್ಕಾಗ ಅವುಗಳಲ್ಲಿಯೂ ನಮ್ಮಂತೆಯೇ ಕ್ರೌರ‍್ಯ ಮತ್ತು ಹಿಂಸಾತ್ಮಕ ಸ್ವಭಾವ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಅರಿತುಕೊಂಡೆ’ ಎಂದು ಹೇಳಿದರು.
ಈ ಚಿಂಪಾಂಜಿಗಳ ನಡುವಿನ ಯುದ್ಧಕ್ಕೆ ಕಾರಣವೇನು? ಅದನ್ನು ಖಚಿತವಾಗಿ ಹೇಳುವುದು ಕಷ್ಟ ಎಂದರು ಜೇನ್ ಗುಡಾಲ್. ಏಕೆಂದರೆ ಸಂಶೋಧಕರು ಇಂತಹ ಘಟನೆಯನ್ನು ಮೊದಲ ಬಾರಿಗೆ ನೋಡಿದ್ದರು. ಇಂತಹದ್ದು ಮತ್ತೊಮ್ಮೆ ನಡೆದಾಗ ಮಾತ್ರ ಅದರ ನಿಜವಾದ ಕಾರಣವನ್ನು ಹೆಚ್ಚು ಖಚಿತವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದರು.
ಈಗ ಸೈನ್ಸ್ ಜರ್ನಲ್‌ನಲ್ಲಿ ಒಂದು ಹೊಸ ಅಧ್ಯಯನ ಪ್ರಕಟವಾಗಿದೆ. ಅದು ಉಗಾಂಡಾದ ಕಾಡಿ ನಲ್ಲಿ ವಾಸಿಸುವ ವಿಶ್ವದ ಅತಿ ದೊಡ್ಡ ಚಿಂಪಾಂಜಿ ಸಮೂಹದಲ್ಲಿ ನಡೆದಿರುವ, ಹನ್ನೊಂದು ವರ್ಷಗಳಿಂದ ನಡೆಯುತ್ತಿರುವ ಮತ್ತೊಂದು ಕ್ರೂರ ಯುದ್ಧವನ್ನು ದಾಖಲಿಸಿದೆ. ಉಗಾಂಡಾದ ಪಶ್ಚಿಮ ಕಾಡುಗಳಲ್ಲಿ ವಾಸಿಸುವ ನ್ಗೋಗೊ ಚಿಂಪಾಂಜಿ ಸಮೂಹದ ಮೇಲೆ 30 ವರ್ಷಗಳಿಗಿಂತ ಈ ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಇದು ಕೂಡ ಬರೀ ಕಲಹವಲ್ಲ. ವ್ಯವಸ್ಥಿತ ಗುಂಪುಗಾರಿಕೆ, ತಂಡ ಕಟ್ಟಿ ದಾಳಿ ಎಸಗುವುದು, ಹೊಂಚು ಹಾಕಿ ಸಾಯಿಸುವುದು, ಹೊಸ ಹೊಸ ಹಿಂಸೆಯ ವಿಧಾನಗಳ ಶೋಧ- ಹೀಗೆ ಎಲ್ಲ ಮನುಷ್ಯರ ಥರವೇ. ಇದೊಂದು ‘ಚಿಂಪಾಂಜಿಗಳ ಸಿವಿಲ್ ವಾರ್’ ಎನ್ನುತ್ತಾರೆ ತಜ್ಞರು.
ಉಗಾಂಡದ ಕಾಡಿನಲ್ಲಿ ಮೂವತ್ತು ವರ್ಷಗಳ ಹಿಂದೆ ಒಂದೇ ಸಮೂಹವಾಗಿ ಬದುಕುತ್ತಿದ್ದ ಈ ಗುಂಪಿನಲ್ಲಿ ಆಗ ಸುಮಾರು ೨೦೦ ಚಿಂಪಾಂಜಿಗಳಿದ್ದವು. ಅವು ಸಣ್ಣ ಸಣ್ಣ ಉಪಗುಂಪುಗಳಲ್ಲಿ ವಾಸಿಸುತ್ತಿದ್ದರೂ, ಎಲ್ಲವೂ ಒಗ್ಗಟ್ಟಿನಿಂದ ಬದುಕುತ್ತಿದ್ದವು. ಸಂಶೋಧಕರು ಈ ಉಪಗುಂಪು ಗಳನ್ನು ಕ್ಲಸ್ಟರ್‌ಗಳು ಎಂದು ಕರೆಯುತ್ತಾರೆ. ವಿಭಿನ್ನ ಕ್ಲಸ್ಟರ್‌ಗಳ ಗಂಡು ಮತ್ತು ಹೆಣ್ಣು ಚಿಂಪಾಂಜಿಗಳು ಪರಸ್ಪರ ಬೆರೆತು ಬದುಕುತ್ತಿದ್ದವು. ಒಟ್ಟಿಗೆ ಬೇಟೆ ಆಡುತ್ತಿದ್ದವು, ಬೆರೆತು ಸಂತಾನೋತ್ಪತ್ತಿ ಮಾಡುತ್ತಿದ್ದವು ಮತ್ತು ಹೊರಗಿನ ಶತ್ರು ಗುಂಪುಗಳ ವಿರುದ್ಧ ಸೇರಿ ಹೋರಾಡು ತ್ತಿದ್ದವು. ಕೆಲವೊಮ್ಮೆ ಬೇರೆ ಕ್ಲಸ್ಟರ್‌ಗಳ ಗಂಡು ಚಿಂಪಾಂಜಿಗಳು ಕೈಕೈ ಹಿಡಿದುಕೊಂಡಿರುವ ದೃಶ್ಯ ಗಳನ್ನೂ ಸಂಶೋಧಕರು ದಾಖಲಿಸಿದ್ದರು.
ಆದರೆ 2015ರಲ್ಲಿ ಪರಿಸ್ಥಿತಿ ಬದಲಾಗತೊಡಗಿತು. ಸಮೂಹದಲ್ಲಿ ಎರಡು ಪ್ರಧಾನ ಗುಂಪು ಗಳಾದವು. ಸಂಶೋಧಕರು ಇವನ್ನು ಕೇಂದ್ರ ಕ್ಲಸ್ಟರ್ ಮತ್ತು ಪಶ್ಚಿಮ ಕ್ಲಸ್ಟರ್ ಎಂದು ಕರೆದರು. ಈ ಅಧ್ಯಯನದ ಮುಖ್ಯ ಲೇಖಕ ಹಾಗೂ ಟೆಕ್ಸಾಸ್ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರಜ್ಞ ಆರನ್ ಸ್ಯಾಂಡಲ್ ಹೇಳುವಂತೆ, 2015ರ ಜೂನ್ ತಿಂಗಳ ಒಂದು ದಿನ ದೊಡ್ಡ ಬದಲಾವಣೆ ಸಂಭವಿಸಿತು. ಸ್ಯಾಂಡಲ್ ಪಶ್ಚಿಮ ಕ್ಲಸ್ಟರ್‌ನ ಚಿಂಪಾಂಜಿಗಳನ್ನು ಗಮನಿಸುತ್ತಿದ್ದರು. ಆಗ ತುಸು ದೂರದಲ್ಲಿ ಬೇರೆ ಚಿಂಪಾಂಜಿಗಳ ಧ್ವನಿ ಕೇಳಿಸಿತು. ಅವು ಕೇಂದ್ರ ಕ್ಲಸ್ಟರ್‌ನ ಸದಸ್ಯರಾಗಿದ್ದವು.
ಆ ಧ್ವನಿ ಕೇಳುತ್ತಿದ್ದಂತೆಯೇ ಪಶ್ಚಿಮ ಕ್ಲಸ್ಟರ್‌ನ ಚಿಂಪಾಂಜಿಗಳು ಹಠಾತ್ತನೆ ಮೌನವಾದವು. ಅವು ಪರಸ್ಪರ ಸ್ಪರ್ಶಿಸಿಕೊಂಡು ಧೈರ್ಯ ತುಂಬಿಕೊಳ್ಳುವಂತೆ ವರ್ತಿಸುತ್ತಿದ್ದವು. ಅವುಗಳಿಗೆ ಎದುರು ಗಡೆಯವರು ತಮ್ಮದೇ ಸಮೂಹದ ಸದಸ್ಯರಲ್ಲ, ಅಪರಿಚಿತರು ಎಂಬ ಭಯ ಹುಟ್ಟಿಕೊಂಡಂತಿತ್ತು. ಸಾಮಾನ್ಯವಾಗಿ ಆಗುತ್ತಿದ್ದಂತೆ ಎರಡೂ ಗುಂಪುಗಳು ಬೆರೆಯುವ ಬದಲು, ಪಶ್ಚಿಮ ಕ್ಲಸ್ಟರ್‌ನ ಚಿಂಪಾಂಜಿಗಳು ಅಲ್ಲಿಂದ ಓಡಿಹೋದವು. ಕೇಂದ್ರ ಕ್ಲಸ್ಟರ್‌ನವು ಅವುಗಳನ್ನು ಬೆನ್ನಟ್ಟಿದವು. ಇಂತಹ ವರ್ತನೆ ಹಿಂದೆಂದೂ ಕಂಡುಬಂದಿರಲಿಲ್ಲ.
ನಂತರ ಆರು ವಾರ ಕಾಲ ಎರಡೂ ಗುಂಪುಗಳು ಪರಸ್ಪರ ದೂರವೇ ಉಳಿದವು. ಯಾವುದೋ ದೊಡ್ಡ ಬದಲಾವಣೆ ಸಂಭವಿಸಿದೆ ಎಂಬುದು ಸ್ಪಷ್ಟವಾಯಿತು. ಮುಂದಿನ ಕೆಲವು ವರ್ಷಗಳಲ್ಲಿ ಈ ವಿಭಜನೆ ಮತ್ತಷ್ಟು ಗಾಢವಾಯಿತು. ೨೦೧೮ರ ವೇಳೆಗೆ ಎರಡೂ ಕ್ಲಸ್ಟರ್‌ಗಳು ಸಂಪೂರ್ಣವಾಗಿ ಪ್ರತ್ಯೇಕ ಗುಂಪುಗಳಾಗಿ ಮಾರ್ಪಟ್ಟಿದ್ದವು. ನಂತರ ಹತ್ಯೆಗಳು ಆರಂಭವಾದವು.
ಮೊದಲ ಬಲಿಯಾದವನು ಕೇಂದ್ರ ಕ್ಲಸ್ಟರ್‌ನ ಎರೋಲ್ ಎಂಬ ಯುವ ಗಂಡು ಚಿಂಪಾಂಜಿ. ಸ್ಯಾಂಡಲ್ ಅವನನ್ನು ಬಾಲ್ಯದಿಂದಲೇ ಬೆಳೆಯುವುದನ್ನು ನೋಡಿದ್ದರು. ‘ನಾನು ಸಾಧ್ಯವಾದಷ್ಟು ನಿಷ್ಪಕ್ಷಪಾತವಾಗಿ ಎಲ್ಲವನ್ನೂ ದಾಖಲಿಸುತ್ತಿದ್ದೇನೆ. ಕೆಲವೊಮ್ಮೆ ನಾನು ಯುದ್ಧ ವರದಿಗಾರ ಅನಿಸುತ್ತದೆ. ಇಷ್ಟು ಅಪರೂಪದ ಹಿಂಸಾ ವರ್ತನೆಗೆ ಕಾರಣವೇನು ಎಂಬುದನ್ನು ಅರ್ಥ ಮಾಡಿ ಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ’ ಎನ್ನುತ್ತಾರೆ ಸ್ಯಾಂಡಲ. ಮುಂದಿನ ಏಳು ವರ್ಷಗಳಲ್ಲಿ ಪಶ್ಚಿಮ ಗುಂಪು, ಕೇಂದ್ರ ಗುಂಪಿನ ಕನಿಷ್ಠ ಆರು ವಯಸ್ಕ ಚಿಂಪಾಂಜಿಗಳನ್ನು ಮತ್ತು 17 ಮರಿ ಚಿಂಪಾಂಜಿಗಳನ್ನು ಕೊಂದಿತು. ಈ ಹೋರಾಟ ಇಂದಿಗೂ ಮುಂದುವರಿದಿದೆ.
ನ್ಗೋಗೊ ಸಮೂಹ ಏಕೆ ವಿಭಜನೆಯಾಯಿತು, ಏಕೆ ವೈರಿ ಗುಂಪುಗಳಾಗಿ ಹೋಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಂಶೋಧಕರು ಕೆಲವು ಸಂಭಾವ್ಯ ಕಾರಣಗಳನ್ನು ಸೂಚಿಸಿದ್ದಾರೆ. ಅವು ಗಳಲ್ಲಿ ಗುಂಪಿನ ಅತಿದೊಡ್ಡ ಗಾತ್ರ, ಆಹಾರಕ್ಕಾಗಿ ಸ್ಪರ್ಧೆ ಮತ್ತು ಗಂಡುಗಳ ನಡುವಿನ ಪೈಪೋಟಿ ಸೇರಿವೆ. ಇದು ಇತರ ಪ್ರಾಣಿಗಳಲ್ಲೂ ಆಗುತ್ತದೆ. ಇದು ಪ್ರಕೃತಿ ಸಹಜ. ಆದರೆ ಅದು ತಮ್ಮ ಅವಶ್ಯ ಕತೆ ಪೂರೈಸಿದಲ್ಲಿಗೆ ಮುಗಿಯುತ್ತದೆ. ಆದರೆ ಈ ಕಲಹ ಇಸ್ರೇಲ್- ಪ್ಯಾಲೆಸ್ತೀನ್ ಕದನದಂತೆ ಕೊನೆ ಯಿಲ್ಲದಂತೆ ವಿಸ್ತರಿಸಿದೆ.
ಇದಕ್ಕೆ ಕಾರಣಗಳಲ್ಲಿ ಇನ್ನೂಕೆಲವಷ್ಟು ಅಂಶಗಳಿವೆ. ಮೊದಲನೆಯದಾಗಿ, 2014ರಲ್ಲಿ ಐದು ವಯಸ್ಕ ಗಂಡು ಚಿಂಪಾಂಜಿಗಳು ಮತ್ತು ಒಂದು ಹೆಣ್ಣು ಚಿಂಪಾಂಜಿ ಅಜ್ಞಾತ ಕಾರಣಗಳಿಂದ ಸಾವನ್ನಪ್ಪಿದವು. ಈ ಚಿಂಪ್‌ಗಳು ವಿವಿಧ ಉಪಗುಂಪುಗಳ ನಡುವಿನ ಸಾಮಾಜಿಕ ಕೊಂಡಿಯಾಗಿ ದ್ದವು. ಇವುಗಳ ಸಾವು, ಗುಂಪುಗಳ ಸಂಪರ್ಕಗಳನ್ನು ಅಸ್ತವ್ಯಸ್ತಗೊಳಿಸಿರಬಹುದು. ನಡುವಿನ ಬಾಂಧವ್ಯವನ್ನು ದುರ್ಬಲಗೊಳಿಸಿರಬಹುದು. ಎರಡನೆಯದಾಗಿ, ಅದೇ ನಂತರದ ವರ್ಷದಲ್ಲಿ (2015) ಗುಂಪಿನ ಮುಖ್ಯ ನಾಯಕ ಅಥವಾ ಆಲಾ ಗಂಡು ಬದಲಾಯಿತು. ಈ ನಾಯಕತ್ವ ಬದಲಾವಣೆಯು ಪಶ್ಚಿಮ ಮತ್ತು ಕೇಂದ್ರ ಗುಂಪುಗಳ ನಡುವಿನ ಮೊದಲ ಪ್ರತ್ಯೇಕತೆಯ ಬಿಂದು ಆಗಿತ್ತು. ಮೂರನೆಯದಾಗಿ, 2017ರಲ್ಲಿ ಉಸಿರಾಟದ ಸಾಂಕ್ರಾಮಿಕ ಕಾಯಿಲೆಯಿಂದ 25 ಚಿಂಪಾಂಜಿಗಳು ಮೃತಪಟ್ಟವು. ಈ ಘಟನೆ ಅಂತಿಮ ವಿಭಜನೆ ಸಂಭವಿಸುವ ಒಂದು ವರ್ಷದ ಮೊದಲು ನಡೆದಿತ್ತು. ಸಂಶೋಧನೆಯ ಪ್ರಕಾರ, ಆ ಸಾಂಕ್ರಾಮಿಕದಲ್ಲಿ ಮೃತಪಟ್ಟ ವಯಸ್ಕ ಗಂಡುಗಳಲ್ಲಿ ಒಬ್ಬ, ಎರಡೂ ಗುಂಪುಗಳನ್ನು ಸಂಪರ್ಕಿಸುವ ಕೊನೆಯ ಪ್ರಮುಖ ಸದಸ್ಯನಾಗಿದ್ದ. ಅವನ ಸಾವು ಎರಡು ಗುಂಪುಗಳ ನಡುವೆ ಉಳಿದಿದ್ದ ಕೊನೆಯ ಸೇತುವೆಯನ್ನೂ ಮುರಿದಿರ ಬಹುದು.
ಜಿಡ್ಡು ಕೃಷ್ಣಮೂರ್ತಿ ಹೇಳಿದ ಮಾತಿಗೆ ಈ ಸಂಶೋಧನೆಯ ಫಲಿತಾಂಶಗಳು ತಾಳೆಯಾಗುತ್ತವೆ. ಚಿಂಪಾಂಜಿಗಳೂ ನಮ್ಮ ಹಾಗೇ ಅಥವಾ ನಾವೂ ಚಿಂಪ್‌ಗಳ ಹಾಗೆಯೇ. ಹೊರನೋಟದಲ್ಲಿ ಬದಲವಾಣೆಯಾಗಿದೆ, ಬಟ್ಟೆ ಧರಿಸುತ್ತೇವೆ, ಮದುವೆ ಕುಟುಂಬ ಗೋತ್ರ ಜಾತಿ ಧರ್ಮ ಮೊದಲಾದ ಸಾಮಾಜಿಕ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದೇವೆ. ಆದರೆ ಒಳಗಿನಿಂದ ಇನ್ನೊಂದು ಗುಂಪನ್ನು ಕಂಡರೆ ಭಯಪಡುವ, ಹಲ್ಲು ಮಸೆಯುವ ಅದೇ ಚಿಂಪ್‌ಗಳೇ ಆಗಿದ್ದೇವೆ.
ಆಹಾರ, ನಿದ್ರೆ, ಭಯ, ಮೈಥುನ ಎಂಬೀ ನಾಲ್ಕು ಬೇಸಿಕ್ ಇನ್‌ಸ್ಟಿಂಕ್ಟ್‌ಗಳು ಮಾನವನಿಗೂ ಮೃಗಗಳಿಗೂ ಸಾಮಾನ್ಯ. ಈ ನಾಲ್ಕು ವಿಷಯಗಳಲ್ಲಿ ಮನುಷ್ಯನೂ ಮೃಗವೇ. ಆದರೆ ಮನುಷ್ಯ ಯುದ್ಧಕ್ಕೆ ಹೆಚ್ಚು ಉದಾತ್ತವಾದ ಕಾರಣಗಳನ್ನು ಹುಡುಕಿಕೊಳ್ಳುತ್ತಾನೆ. ಪ್ರಾಣಿಶಾಸ್ತ್ರಜ್ಞ ಮೈಕೆಲ್ ವಿಲ್ಸನ್ ಅವರ ಪ್ರಕಾರ, ಇಂತಹ ಸಂಘರ್ಷಗಳು ನಡೆಯಲು ಮಾನವರಲ್ಲಿ ಧರ್ಮ, ರಾಜಕೀಯ ಪಕ್ಷಗಳು, ಸಿದ್ಧಾಂತಗಳು, ಹಣದ ಹಸಿವು ಬೇಕು. ಸಿಂಹಗಳು, ತೋಳಗಳು ಅಥವಾ ಇರುವೆಗಳಲ್ಲಿ ಇವುಗಳಿಲ್ಲ. ಆದರೂ ಅವುಗಳಲ್ಲೂ ಸಂಘರ್ಷಗಳು ಉಂಟಾಗುತ್ತವೆ. ಚಿಂಪಾಂಜಿಗಳಲ್ಲೂ ಧರ್ಮ ಅಥವಾ ರಾಜಕೀಯ ಇಲ್ಲ. ಆದರೂ ಅವುಗಳ ನಡುವೆ ಯುದ್ಧ ನಡೆಯುತ್ತದೆ. ಕಾರಣ, ಭಯ ಮತ್ತು ಅಧಿಕಾರದ ಹಸಿವು. ಟ್ರಂಪ್ ಕೂಡ ಭಯ ಮತ್ತು ಅಧಿಕಾರದ ಹಸಿವು ಹೊತ್ತ ದೊಡ್ಡ ಚಿಂಪಾಂಜಿ, ಅಷ್ಟೆ.
ಈ ಅಧ್ಯಯನ ಒಂದು ಆಶಾವಾದದ ಸಂದೇಶವನ್ನೂ ನೀಡಿದೆ ಎಂದು ಸಂಶೋಧಕರ ಭಾವನೆ. ಅವರ ಪ್ರಕಾರ, ಮಾನವರಲ್ಲಿ ದೊಡ್ಡ ಮಟ್ಟದ ಹಿಂಸಾಚಾರವನ್ನು ತಡೆಯಬಹುದು. ಅದಕ್ಕೆ ಸಾಮಾಜಿಕ ಬಾಂಧವ್ಯಗಳನ್ನು ಬಲಪಡಿಸುವುದು, ಹಳೆಯ ದ್ವೇಷಗಳನ್ನು ಬಿಡುವುದು ಬಹಳ ಮುಖ್ಯ. ‘ಚಿಂಪಾಂಜಿಗಳಲ್ಲಿ ನೋಡಿದಂತೆ, ನೀವು ಯಾರನ್ನಾದರೂ ಅಪರಿಚಿತರಂತೆ ನಡೆಸಿ ಕೊಂಡರೆ, ಅವರು ನಿಜವಾಗಿಯೂ ಅಪರಿಚಿತರಾಗುತ್ತಾರೆ’. ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎನ್ನಬೇಕು ಎಂದು ಬಸವಣ್ಣನವರು ಹೇಳಿದ್ದು ಇದಕ್ಕೇ. ಈ ಉದಾತ್ತತೆ, ಈ ವಿವೇಕ- ಇದೇ ವಿಕಾಸಕ್ರಮದಲ್ಲಿ ಮನುಷ್ಯ ರೂಢಿಸಿಕೊಂಡ ಬಲ. ಇದೇ ಮನುಷ್ಯನನ್ನೂ ಚಿಂಪಾಂಜಿಯನ್ನೂ ಬೇರೆಯಾಗಿಸಿರುವುದು.