ಪದಸಾಗರ
ಹೀಗೊಂದು ಆಲೋಚನೆ ಆಗಾಗ ಬರ್ತಾ ಇರುತ್ತೆ. ಇದ್ದಕ್ಕಿದ್ದಂತೆ ಕಿವುಡಾಗಿ ಬಿಟ್ಟರೆ ಜಗತ್ತು ಬದುಕು ಆ ಕ್ಷಣದಿಂದ ಹೇಗನಿಸಬಹುದು? ಇದ್ದಕ್ಕಿದ್ದಂತೆ ಅಂಧತ್ವ ಬಂದುಬಿಟ್ಟರೆ, ಸಡನ್ನಾಗಿ ಮೂಗನಾಗಿ ಬಿಟ್ಟರೆ ಆ ಫೀಲಿಂಗ್ ಹೇಗಿರುತ್ತದೆ? ಇಷ್ಟು ವರ್ಷದಿಂದ ಮಾತನಾಡುತ್ತಿರುವ ಕನ್ನಡ ಪೂರ್ತಿಯಾಗಿ ಮರೆತು ಹೋಗಿ ಬಿಟ್ಟರೆ, ಈ ಭಾಷೆ ಹೇಗೆ ಸೌಂಡ್ ಆಗಬಹುದು? ಅರ್ಥವಾಗದ ವಿದೇಶಿ ಭಾಷೆಯಂತನಿಸಬಹುದಾ? ಈತನಕ ಬರೆದು ಓದಿ ಮಾಡಿರುವ ಕನ್ನಡ ಲಿಪಿ ಏಕಾಏಕಿ ಅಪರಿಚಿತ ವಾಗಿಬಿಟ್ಟರೆ, ಅಕ್ಷರಗಳು ಹೇಗೆ ಕಾಣಿಸಬಹುದು? ಮಲಯಾಳಂ ತಮಿಳುಗಳ ಥರ ಯಾವುದೋ ಆಕೃತಿಗಳಂತಷ್ಟೇ ಕಾಣಬಹುದಾ? ಒಂದೇ ಸಲ ನಾಲಗೆ ರುಚಿ ಕಳ್ಕೊಂಡುಬಿಟ್ಟಿದೆ ಅಂತ ಕೊರೋನಾ ಟೈಮಲ್ಲಿ ಸೋಂಕಿತರು ಹೇಳುತ್ತಿದ್ದಾಗ, ಆ ಅನುಭವಕ್ಕಾದರೂ ಒಮ್ಮೆ ಕೊರೋನಾ ಬರಬಾರದೇ ಅಂತ ಹಪಹಪಿಸಿದ್ದೆ.
ಕುರುಡು ಕಿವುಡು ಮತ್ತು ಮೂಗನಾದರೆ ಆ ಫೀಲಿಂಗ್ ಹೇಗಿರುತ್ತದೆ ಎಂಬುದನ್ನು ಪ್ರಾಯೋಗಿಕ ವಾಗಿ ಅನುಭವಿಸಬಹುದು. ಕಿವಿಗೆ ಹತ್ತಿ ತುರುಕಿಕೊಂಡು ಏನೂ ಕೇಳಿಸದಂತೆ ನಿಶ್ಶಬ್ದವಾಗಿಸಿ ಕೊಳ್ಳಬಹುದು. ಕಣ್ಣು ಮುಚ್ಚಿಕೊಂಡರಾಯ್ತು. ಮಾತನಾಡುವುದಿಲ್ಲ ಅಂದುಕೊಂಡರಾಯ್ತು. ಆದರೆ ಆ ಸ್ಥಿತಿ ಬದುಕಿನ ಅನಿವಾರ್ಯವಾಗಿ ಹೋದರೆ? ಅನಿರೀಕ್ಷಿತವಾಗಿ ಆ ಪರಿಸ್ಥಿತಿಗೆ ಬಲಿಯಾದರೆ? ಆ ಬದುಕನ್ನು ಊಹಿಸಲೂ ಅಸಾಧ್ಯ ಅಲ್ಲವಾ?ಹಿರಿಯ ನಟ ಬಾಲಕೃಷ್ಣನಿಗೆ ಕಿವಿ ಕೇಳಿಸುತ್ತಿರಲಿಲ್ಲವಂತೆ.
ಆದರೂ ನೂರಾರು ಚಿತ್ರಗಳಲ್ಲಿ ಎದುರಿನವರ ನಟನೆ, ತುಟಿಚಲನೆ ನೋಡಿ ಅರ್ಥ ಮಾಡಿಕೊಂಡು ಭಾವಪೂರ್ಣವಾಗಿ ಅಭಿನಯಿಸುತ್ತಿದ್ದರಂತೆ ಎಂಬ ವಿಷಯ ಗೊತ್ತಾದಾಗ ಅಚ್ಚರಿಯ ಜತೆಗೆ ಮನಸು ಭಾವುಕವಾಗಿತ್ತು. ಬಾಲಣ್ಣನನ್ನು ಅಂದಿನ ತನಕ ನೋಡಿದಂತೆ ಕೇವಲ ನಟನಾಗಿ ನೋಡಲಾಗಲೇ ಇಲ್ಲ.
ಇದನ್ನೂ ಓದಿ: Naveen Sagar Column: ವೈಲ್ಡ್ ಕಾರ್ಡ್ ಪಡೆದು ರೊಚ್ಚಿಗೆದ್ದು ಆಡಿದ ಹುಚ್ಚ !
ರವಿ ಬೆಳಗೆರೆ ತಮ್ಮ ಖಾಸ್ ಬಾತ್ ಅಂಕಣದಲ್ಲಿ ‘ಮಣಿಕಾಂತನ ನಿಶ್ಶಬ್ದ ಲೋಕದಂದು ಸ್ಫೋಟ’ ಎಂಬ ನಿಜಕಥೆಯೊಂದನ್ನು ಬರೆದಾಗ, ಕಣ್ತುಂಬಿಕೊಂಡು ಓದಿದ್ದೆ. ಮಣಿಕಾಂತನ ಜೀವನ ಚಿತ್ರವನ್ನು ಕಲ್ಪಿಸಿಕೊಂಡಿದ್ದೆ. ಕೋಶಿಶ್, ಶೋರ್, ಖಾಮೋಷಿ ಚಿತ್ರಗಳು ಕಣ್ಮುಂದೆ ಬಂದಿದ್ದವು.
ಮಣಿಕಾಂತ್- ಪುಟ್ಟಿ ಪಾತ್ರಗಳು ಸಂಜೀವ್ ಕುಮಾರ್ ಜಯಾ ಬಚ್ಚನ್ ಆಗಿ ಕಾಣಿಸಿದ್ದವು. ಮಣಿಕಾಂತನನ್ನೊಮ್ಮೆ ನೋಡಬೇಕು ಎಂದು ತೀವ್ರವಾಗಿ ಅನಿಸಿಬಿಟ್ಟಿತ್ತು. ನಂತರ ಬದುಕು ಅವರನ್ನು ನನಗೆ ಅಣ್ಣನಂಥ ಗೆಳೆಯನನ್ನಾಗಿಸಿತು. ಅವರ ನಿಶ್ಶಬ್ದ ಪ್ರಪಂಚವನ್ನು ಹತ್ತಿರದಿಂದ ನೋಡುವ ಅನುಭವಿಸುವ ಅವಕಾಶ ಒದಗಿಸಿತು. ಅವರ ಜಗತ್ತಿನ ಸುಖಗಳು, ಕಷ್ಟಗಳು ಎಲ್ಲವೂ ತಕ್ಕಮಟ್ಟಿಗೆ ಅರ್ಥವಾಗುತ್ತಾ ಹೋಯ್ತು. ಆದರೆ ಕೆಲವು ಬಾರಿ ಜಗತ್ತಿನ ಕ್ರೌರ್ಯ ಮತ್ತು ಸೌಂದರ್ಯಗಳಿರುವುದೇ ಅದರಲ್ಲಿ ಅನಿಸಿಬಿಡುತ್ತದೆ. ಹಾಡು ಕೇಳಿಸಿಕೊಳ್ಳಲಾಗದ ಮಣಿಕಾಂತ್ ಕೈಲಿ ಹಾಡು ಹುಟ್ಟಿದ ಸಮಯ ಎಂಬ ಅದ್ಭುತ ಪುಸ್ತಕ ಬರೆಸಿ ಬಿಡುತ್ತದೆ.
ಸರ್ವೇಂದ್ರಿಯಗಳು ಅದ್ಭುತವಾಗಿದ್ದರೂ ಬರೆಯಲಾಗದಂಥ ಅದ್ಭುತ ಬರಹಗಳನ್ನು ತಮ್ಮ ಕಲ್ಪನಾಶಕ್ತಿ ಬಳಸಿ, ತಮ್ಮ ಭಾವುಕತೆ ಬಳಸಿ, ಯಾವುದೋ ಅತೀಂದ್ರಿಯ ಶಕ್ತಿಯಿಂದೆಂಬಂತೆ ಬರೆದು ರಾಜ್ಯದ ಬೆಸ್ಟ್ ಸೆಲ್ಲರ್ ಪುಸ್ತಕಗಳ ಕರ್ತೃ ಆಗಿಬಿಡುತ್ತಾರೆ ಮಣಿಕಾಂತ್. ಆದರೂ ನಮ್ಮಂಥ ವರ ಕೊರಗು, ದೇವರೆಡೆಗಿನ ಕಂಪ್ಲೇಂಟ್ ತೀರುವುದಿಲ್ಲ. ಮಣಿಕಾಂತ್‌ಗೆ ಇದೊಂದು ವಿಷಯದಲ್ಲಿ ದೇವರು ಹೀಗೆ ಮಾಡಬಾರದಿತ್ತು ಎಂದು ಅನಿಸುತ್ತಲೇ ಇರುತ್ತದೆ.
ಇವೆಲ್ಲವೂ ಮನಸಿನ ಒರಳುಕಲ್ಲಿನಲ್ಲಿ ರುಬ್ಬಲಾರಂಭಿಸಿದ್ದು ಮೊನ್ನೆ ಅಲ್ಕಾ ಯಾಜ್ಞಿಕ್‌ಳನ್ನು ಪದ್ಮಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಡಾಗ. ಹಿನ್ನೆಲೆ ಗಾಯಕಿಯರು ಅಂದರೆ ಅವರು ನೋಡೋಕೆ ಅಷ್ಟರಲ್ಲೇ ಇರ್ತಾರೆ ಅನಿಸಿದ್ದ ಕಾಲವದು. ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಎಸ್ ಜಾನಕಿ, ಎಲ್ಲರೂ ನಮಗೆ ಧ್ವನಿಯಿಂದಷ್ಟೇ ಇಷ್ಟವಾಗಿದ್ದರು.
ನೋಡೋಕೆ ಎಂದಿಗೂ ಗ್ಲಾಮರಸ್ ಅನಿಸಿದ್ದೇ ಇಲ್ಲ. ಹೀಗಿದ್ದೂ ಅಷ್ಟೆಲ್ಲ ರೊಮ್ಯಾಂಟಿಕ್ ಆಗಿ ಹಾಡೋಕೆ ಹೇಗೆ ಸಾಧ್ಯ, ಆ ಇಂಪಿನ ಧ್ವನಿ ಹೊರಡಿಸೋಕೆ ಹೇಗೆ ಸಾಧ್ಯ ಎಂಬ ಭಾವ ಮೂಡಿಸಿ ದ್ದರು. ಆ ಹೊತ್ತಲ್ಲಿ ಅನುರಾಧಾ ಪೌಡ್ವಾಲ್ ಬಂದಾಗ, ಧ್ವನಿಯ ಜತೆಗೆ ತನ್ನ ಸಾಂಪ್ರದಾಯಿಕ ಲುಕ್ಕಿನಿಂದ ಒಂದು ಲೆವೆಲ್ಲಿನ ಸುಂದರಿಯೇ ಅನಿಸಿದ್ದಳು. ಆದರೆ ಆಕೆಯ ಬೆನ್ನುಬೆನ್ನ ಬಂದಳಲ್ಲ ಅಲ್ಕಾ ಯಾಜ್ಞಿಕ್, ಧ್ವನಿಯಿಂದ ಪರಿಚಯವಾದಾಕೆಯನ್ನು ಹೀಗಿರಬಹುದು ಅಂತ ಊಹಿಸಿಯೇ ಇರಲಿಲ್ಲ.
ಆ ನೈಸ್ ನೈಸ್ ಜಾರು ತಲೆಗೂದಲು, ಬೆಳ್ಳನೆಯ ಮೈಬಣ್ಣ, ಸಲ್ವಾರ್ ಧರಿಸಿದ ಅಲ್ಕಾ ಯಾಜ್ಞಿಕ್ ನೋಡಿದಾಗ ಸಿಂಗರ್ ಹೀಗೂ ಇರಬಹುದು ಎಂದು ಮೊದಲ ಬಾರಿಗೆ ಅನಿಸಿತ್ತು. ಅಲ್ಲಿ ತನಕ ಸಿನಿಮಾದಲ್ಲಿ ಹಾಡೊಂದನ್ನು ನೋಡಿದಾಗ ಹೀರೋಯಿನ್ ಮಾತ್ರ ಕಾಣುತ್ತಿದ್ದಳು. ಅಲ್ಕಾಳನ್ನು ನೋಡಿದ ನಂತರ ಆಕೆಯ ಗಾಯನದಲ್ಲಿ ಅದ್ಯಾರೇ ಹೀರೋಯಿನ್ ತೆರೆ ಮೇಲಿದ್ದರೂ ತೆರೆ ಹಿಂದಿನ ಅಲ್ಕಾ ಯಾಜ್ಞಿಕ್ ಕೂಡ ಕಣ್ಣೆದುರು ಬಂದು ಬಂದು ಹೋಗುತ್ತಿದ್ದಳು.
ಶ್ರೇಯಾ ಘೋಷಾಲ್ ಎಂಬ ಅದ್ಭುತ ಚೆಲುವೆ ಮತ್ತು ಅತ್ಯದ್ಭುತ ಕಂಠದ ಗಾಯಕಿ ಬರುವ ತನಕವೂ ಅಲ್ಕಾ ಹೀರೋಯಿನ್ ಮಟೀರಿಯಲ್ ಅನಿಸುವ ಗಾಯಕಿಯೇ ಅನಿಸುತ್ತಿದ್ದಳು. ಗಾಯಕಿ ಮೇಲೂ ಕ್ರಶ್ ಆಗುವಂತಿದ್ದಳು ಅಲ್ಕಾ ಯಾಜ್ಞಿಕ್.
ಆಕೆ ಹಾಡಿದ್ದ ಹಾಡುಗಳಾದರೂ ಎಂಥೆಂಥವು. ಏಕ್ ದೋ ತೀನ್.., ಚುರಾ ಕೇ ದಿಲ್ ಮೇರಾ, ಟಿಪ್ ಟಿಪ್ ಬರ್ಸಾ ಪಾನಿ.., ಉಹೂಂ.. ಪಟ್ಟಿ ಮಾಡ್ತಾ ಹೋದ್ರೆ ಇಡೀ ಪೇಪರ್ ಸಾಲಲಿಕ್ಕಿಲ್ಲ. ಎರಡೂವರೆ ಸಾವಿರ ಹಾಡುಗಳಲ್ಲಿ, ಏನಿಲ್ಲ ಅಂದ್ರೂ ಒಂದು ಸಾವಿರ ಹಾಡುಗಳನ್ನು ಇಷ್ಟ ಇಷ್ಟ ಅಂತ ಪಟ್ಟಿ ಮಾಡಬೇಕಾಗುತ್ತದೆ.
ದೇವರಿಗೆ ಯಾಕೆ ಇಂಥದ್ದೊಂದು ಕೆಟ್ಟ ಆಟ ಆಡೋ ಚಟ? ಕಟ್ಟುಕಥೆ ಬರೆಯೋವ್ನಿಗೂ, ಡಾರ್ಕ್ ಸ್ಟೋರಿಗಳನ್ನು ಬರೆಯೋವ್ನಿಗೂ ತನ್ನ ಕಥೆಯ ಕೆಲವು ಪಾತ್ರಗಳ ಮೇಲೆ ದಯೆ, ಕರುಣೆ ಪ್ರೀತಿ ಇರುತ್ತದೆ. ಅವುಗಳಿಗೆ ಕೆಡುಕು ಮಾಡುವುದಿಲ್ಲ. ಆದರೆ ದೇವರ ಲೆಕ್ಕಾಚಾರ ತೀರಾ ಕ್ರೂರ. ಸಾವಿ ರಾರು ಹಾಡುಗಳನ್ನು ಹಾಡಿದಾಕೆಗೆ, ಕೋಟ್ಯಂತರ ಕಿವಿಗಳನ್ನು ಇಂಪುಸ್ವರದಿಂದ ತಂಪು ಮಾಡಿದಾಕೆಗೆ, ಇದ್ದಕ್ಕಿದ್ದಂತೆ ಕಿವಿಯೇ ಕೇಳಿಸದಂತೆ ಮಾಡಿಬಿಡುತ್ತಾನೆ. ಜಗತ್ತು ಆಕೆಯ ಹಾಡು ಗಳನ್ನು ಕೇಳಿ ನಲಿಯುತ್ತಿದ್ದರೆ, ಆಕೆಗೆ ಮಾತ್ರ ಇಡೀ ಜಗತ್ತೇ ನಿಶ್ಶಬ್ದ.
ಹಾಡು ಬಿಡಿ, ಮಾತೂ ಕೇಳಿಸುವುದಿಲ್ಲ. ಅದೊಂದು ದಿನ ವಿಮಾನದಿಂದ ಇಳಿದು ಹೊರಬರುವ ತನಕ ಎಲ್ಲವೂ ಕೇಳುತ್ತಿದ್ದ ಕಿವಿಗಳಿಗೆ ದಿಢೀರ್ ನಿಶ್ಶಬ್ದ ಆವರಿಸುತ್ತದೆ. ಸಂಪೂರ್ಣ ನಿಶ್ಶಬ್ದ. ಮೌನ! ತನಗೇನೂ ಕೇಳುತ್ತಿಲ್ಲ ಅಂತ ಮನಸು ಒಪ್ಪಿಕೊಳ್ಳಲು, ನಂಬಲು ಅಷ್ಟು ಸುಲಭವಾಗಿ ಸಾಧ್ಯವಾ? ಉಹೂಂ. ವೈದ್ಯರು ಆಕೆಯ ಶ್ರವಣ ಸಮಸ್ಯೆಗೆ ಇಟ್ಟ ಹೆಸರು ಸೆನ್ಸರಿನ್ಯೂರೋ ಹಿಯರಿಂಗ್ ಲಾಸ್ ಅಂತ. ಗಾಯಕಿಯೊಬ್ಬಳಿಗೆ ಕೇವಲ ಧ್ವನಿಪೆಟ್ಟಿಗೆ ಮಾತ್ರ ಆಸ್ತಿ ಅಲ್ಲ. ಕಿವಿಗಳು ಅದಕ್ಕಿಂತ ದೊಡ್ಡ ಆಸ್ತಿ. ತಾನೇ ಹಾಡಿದ್ದ ಹಾಡುಗಳನ್ನೂ ಆಕೆ ಕೇಳದಂತಾಗಿಬಿಡುವುದು ಅಂದರೆ, ಹಾಡ ದಂತಾಗುವುದು ಅಂದರೆ, ಅದು ಹೃದಯವನ್ನೇ ಕಳೆದುಕೊಂಡಂತೆ.
ನಮ್ಮ ಪಾಲಿಗೆ ಎಸ್ಪಿಬಿ ಹೇಗೋ, ಆಕೆಯ ಜಮಾನದ ಹಿಂದಿ ಕೇಳುಗರಿಗೆ ಅಲ್ಕಾ ಯಾಜ್ಞಿಕ್ ಹಾಗೆ. ಆಕೆ ಕೇವಲ ಗಾಯಕಿ ಅಲ್ಲ. ಆಕೆ ಹಲವರ ಬಾಲ್ಯ ಯೌವ್ವನಗಳ ಹಿನ್ನೆಲೆ ಸಂಗೀತ, ಅಲ್ಕಾ ಅಂದರೆ ಸ್ಕೂಲ್ ಡೇ ಡ್ಯಾನ್ಸಿನ ಸಾಂಗು, ಅಲ್ಕಾ ಅಂದರೆ ಕೊಳ್ಳುವ ಕ್ಯಾಸೆಟ್ʼಗೊಂದು ಗ್ಯಾರಂಟಿ ಕಾರ್ಡ್, ಅಲ್ಕಾ ಅಂದರೆ ಚಿತ್ರಹಾರ್, ಅಲ್ಕಾ ಅಂದ್ರೆ ಅಂತ್ಯಾಕ್ಷರಿ, ಅಲ್ಕಾ ಅಂದರೆ ರೇಡಿಯೋದಲ್ಲಿ ಬಯಸುವ ಅಚ್ಚರಿ ಗೀತೆ, ಅಲ್ಕಾ ಅಂದ್ರೆ ಮಾಧುರಿ, ಅಲ್ಕಾ ಅಂದ್ರೆ ಜೂಹಿ, ಕಾಜೋಲ್, ಶಿಲ್ಪಾ ಶೆಟ್ಟಿ, ಮನಿಷಾ ಕೊಯಿರಾಲ... ಅಲ್ಕಾ ಅಂದ್ರೆ ವೆಡ್ಡಿಂಗ್ ಸಾಂಗ್, ಅಲ್ಕಾ ಅಂದ್ರೆ ರೊಮ್ಯಾಂಟಿಕ್ ಸಾಂಗ್. ರೊಮಾ ಅಂದರೇನು ಅಂತ ಗೊತ್ತಿಲ್ಲದ ವಯಸ್ಸಿನಲ್ಲಿ ಧ್ವನಿಯಿಂದಲೇ ರೊಮ್ಯಾಂಟಿಕ್ ಭಾವ ಹುಟ್ಟಿಸಿದವಳು, ಲವ್ವಂದ್ರೇನು ಅಂತ ಗೊತ್ತಿಲ್ಲದ ವಯಸ್ಸಿನಲ್ಲಿ ಬ್ರೇಕಪ್ ನೋವನ್ನು ಅರ್ಥ ಮಾಡಿಸಿದವಳು.
ಆಟೋ, ಬೀಡಾ ಶಾಪ್, ಬಸ್ಸು, ಕಾರು, ಬ್ಯೂಟಿ ಪಾರ್ಲರ್.. ಆಕೆ ಆವರಿಸಿಕೊಂಡಿರದ ಜಾಗವೇ ಇರಲಿಲ್ಲ. ಜೀವನದ ಭಾಗವೇ ಆಗಿ ಹೋಗಿದ್ದ ಆಕೆಗೆ ಫಿಲ್ಮ್ ಫೇರ್, ರಾಷ್ಟ್ರಪ್ರಶಸ್ತಿ ಏನೆಲ್ಲ ಬಂದಿದ್ದರೂ ಪದ್ಮಭೂಷಣ ಗೌರವ ಸಿಕ್ಕಾಗ, ಆಕೆಯನ್ನು ಕಣ್ತುಂಬಿಕೊಳ್ಳಲೊಂದು ಅವಕಾಶ ಎಂದೇ ಅಭಿಮಾನಿಗಳು ಕಾದಿದ್ದರು. ಆದರೆ ಆಕೆ ವೀಲ್ ಚೇರ್‌ನಲ್ಲಿ ಬಂದಳು. ಯಾರೋ ಕೈ ಹಿಡಿದು ನಡೆಸಿಕೊಂಡು ಬಂದರು.
ನಿಶ್ಶಕ್ತಿಯಲ್ಲಿ, ನಿಶ್ಶಬ್ದದಲ್ಲಿ ಬಂದು ಪ್ರಧಾನಿಗೆ ಕೈಮುಗಿದು ರಾಷ್ಟ್ರಪತಿಗಳತ್ತ ನಡೆದು ಹೋಗು ತ್ತಿದ್ದರೆ, ಆಕೆಗೆ ಚಪ್ಪಾಳೆಗಳೂ ಕೇಳಿಸುತ್ತಿರಲಿಲ್ಲ. ದೇವ್ರು ತನ್ನ ಸ್ಕ್ರಿಪ್ಟ್‌ಗಳಲ್ಲಿ ಯಾಕೆ ಇಂಥ ಕೆಟ್ಟ ಎಮೋಷನಲ್ ದೃಶ್ಯಗಳನ್ನು ಬರೀತಾನೆ? ಒಬ್ಬರಿಗೆ ಅನ್ಯಾಯ ಮಾಡೋದ್ರಲ್ಲಿ, ಅವರನ್ನು ಇಷ್ಟಪಡುವ ಮಂದಿಯನ್ನು ಅಳಿಸುವುದರಲ್ಲಿ ಇಷ್ಟೊಂದು ವಿಕೃತ ಆನಂದವಾ ಅವನಿಗೆ? ಅಲ್ಕಾ ಯಾಜ್ಞಿಕ್‌ಗೆ ಸಿಕ್ಕ ಗೌರವಗಳು, ಪ್ರಶಸ್ತಿಗಳು, ಆಕೆ ಬರೆದ ದಾಖಲೆಗಳು, ಹಾಡಿದ ಹಿಟ್ ಸಾಂಗ್‌ಗಳ ಪಟ್ಟಿ, ಆಕೆ ಹುಟ್ಟಿದ್ದು, ಬೆಳೆದಿದ್ದು ಎಲ್ಲ ಕಥೆಗಳೂ ಗೂಗಲ್ಲಲ್ಲಿ, ವಿಕಿಪಿಡಿಯಾಗಳಲ್ಲಿ ಸಿಕ್ಕುತ್ತವೆ.
ನಾನು ಬರೆದು ಹೇಳಬೇಕಿರೋದೇನೂ ಇಲ್ಲ. ಆದರೆ ಆಕೆಗೆ ದೇವರಿಂದ ಯಾಕಿಂಥ ಅನ್ಯಾಯ ಆಯ್ತು ಅಂತ ಮಾತ್ರ ಯಾವ ವಿಕಿಪಿಡಿಯಾ ಗೂಗಲ್ ಎಐಗಳೂ ಹೇಳಲಾರವು. ಆಕೆ ಕೂಡ ತನ್ನ ನೋವನ್ನು ಹೇಳಿಕೊಳ್ಳುವ ಬದಲು, ಜಗತ್ತಿಗೆ ಜಾಗ್ರತೆ ಹೇಳಿದ್ದಳು. ಇಯರ್ ಫೋನ್ ಬಳಸಬೇಡಿ ಅಂತ. ಇಯರ್ ಫೋನ್ ಬಳಸಿದ್ದಕ್ಕೆ ಆಕೆಗೆ ಹಾಗಾಯ್ತಾ? ಗೊತ್ತಿಲ್ಲ.
ಅರವತ್ತರ ಇಳಿವಯಸ್ಸಿನಲ್ಲಿರುವ ಅಲ್ಕಾ ಯಾಜ್ಞಿಕ್ ಸಿನಿಮಾಗಳಿಗೆ ಹಾಡಲಿ ಅಂತೇನೂ ದುರಾಸೆ ಇಲ್ಲ ನಮಗೆ. ಆಕೆ ಈಗಾಗಲೇ ಕೊಟ್ಟಿರುವ ಹಾಡುಗಳೇ ಸಾಕಷ್ಟಿವೆ. ಅದನ್ನೇ ಸಾವಿರ ಸಾವಿರ ಬಾರಿ ಕೇಳಿ ತಣಿಯಬಹುದು. ಇಷ್ಟು ಹಾಡುಗಳನ್ನು ಕೊಟ್ಟು, ನಮ್ಮ ಭಾವತಂತಿಗಳನ್ನು ಮೀಟಿದಾಕೆಗೆ ಇಂಥ ಅನ್ಯಾಯ ಯಾಕೆ ಅಂತಷ್ಟೇ ಕಂಪ್ಲೇಂಟು. ಅಲ್ಕಾ ತನ್ನ ಹಾಡುಗಳನ್ನು ಕೇಳಿ ಫ್ಲ್ಯಾಶ್ ಬ್ಯಾಕ್ ಅನುಭವಿಸಬೇಕು. ತನ್ನ ಮುಂದಿನ ಪೀಳಿಗೆಯವರು ಹಾಡುವುದನ್ನು ಕೇಳಬೇಕು, ತನ್ನದೇ ಗೀತೆಯನ್ನು ಬೇರೆಯವರು ಹಾಡುವುದು ಕೇಳಿ ಮುದಗೊಳ್ಳಬೇಕು.. ತಾನೇ ಗುನುಗಿಕೊಳ್ಳುವುದನ್ನು ಕೇಳಿಸಿಕೊಳ್ಳಬೇಕು.
ಬದುಕಿನ ಕೊನೆಕ್ಷಣದಲ್ಲೂ ಆಕೆಗೆ ಸಂಗೀತವೆಂಬುದು ಕಿವಿಯಲ್ಲಿ ಅನುರಣಿಸುತ್ತಿರಬೇಕು. ಒಂದು ಕೆಟ್ಟಘಳಿಗೆಯಲ್ಲಿ ಆಕೆಯ ಜಗತ್ತನ್ನು ನಿಶ್ಶಬ್ದಗೊಳಿಸಿದ ಹಾಗೆ, ಒಂದೊಳ್ಳೆ ಘಳಿಗೆ ಬಂದು ದಿಢೀರ್ ಆಕೆಗೆ ಎಲ್ಲವೂ ಕೇಳಿಸುವಂತಾಗಿ ಬಿಡಬಾರದೇ.. ನಮಗೋಸ್ಕರ...? ಕೆಲವರಿಗೆ ದೇವರು ಏನನ್ನೋ ಕಿತ್ತುಕೊಂಡು, ನಂತರ ಸಮಾಧಾನಪಡಿಸಲು ಇನ್ನೇನೋ ಕೊಡುತ್ತಾನೆ. ಕೆಲವರಿಗೆ ಮೊದಲು ಎಲ್ಲ ಕೊಟ್ಟು ನಂತರ ಅತಿಮುಖ್ಯವಾದುದನ್ನೇ ಕಿತ್ತುಕೊಂಡು ಬಿಡುತ್ತಾನೆ. ಎರಡನೆಯದು ಅತಿಘೋರ. ಏನಂತೀರಿ?