ವಿದೇಶವಾಸಿ
ಈ ಕಚ್ಚಾ ತೈಲಾ ಅಥವಾ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಸುಮಾರು 5000 ವರ್ಷದ ಹಿಂದಿನದ್ದು. ಆಗಿನಿಂದ ಜನ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಆದರೆ, ಅದನ್ನು ಬಳಸುವ ವಿಧಾನ ಬೇರೆಯದಾಗಿತ್ತು. ಆ ಕಾಲದಲ್ಲಿ ಭೂಮಿ ಕೊರೆದು ತೈಲವನ್ನು ಸಂಸ್ಕರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕಿದ್ದು ಉದ್ಯಮಿ ಎಡ್ವಿನ್ ಡ್ರೇಕ್, ಕಚ್ಚಾತೈಲ ಹೊರತೆಗೆಯಲು ಶುರು ಮಾಡಿದ. ಅಲ್ಲಿಂದ ಶುರುವಾಯಿತು ನೋಡಿ ತೈಲದ ಹಾರಾಟ.
ಈ ಕೃಷ್ಣಸುಂದರಿಯ ಮುಂದೆ ಯಾವ ವಿಶ್ವಸುಂದರಿಯೂ ನಿಲ್ಲುವುದಿಲ್ಲ. ಯಾವ ವಿಶ್ವಸುಂದರಿ ಯೇ ಆದರೂ ಕೆಲ ವರ್ಷಗಳ ನಂತರ ಬೇಡಿಕೆ ಕಳೆದುಕೊಳ್ಳುತ್ತಾಳೆ. ವರ್ಷ ಕಳೆದಂತೆ ಮುಪ್ಪು ಆವರಿಸುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ, ದೇಹ ಭಾರವಾಗುತ್ತದೆ, ಮುಖ ಬಿಳಿಚಿಕೊಳ್ಳು ತ್ತದೆ. ಬೇಡಿಕೆಯೂ ಕಡಿಮೆಯಾಗುತ್ತದೆ. ಆದರೆ ಈ ಕೃಷ್ಣಸುಂದರಿ ಎಲ್ಲ ವಿಶ್ವ ಸುಂದರಿಯರನ್ನು ಮೀರಿಸಿ, ವರ್ಷದಿಂದ ವರ್ಷಕ್ಕೆ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾಳೆ.
ಬಣ್ಣ ನೋಡಿದರೆ ಕಪ್ಪು, ಹತ್ತಿರ ಹೋದರೆ ಕೆಟ್ಟ ವಾಸನೆ ಬೇರೆ. ಆದರೂ ಜನಸಾಮಾನ್ಯರು ನಿತ್ಯ ಬಯಸುವ, ಕೆಲವರು ಆರಾಧಿಸುವ, ಇಡೀ ವಿಶ್ವಕ್ಕೇ ಅವಶ್ಯಕವಾಗಿರುವ ಕೃಷ್ಣಸುಂದರಿಯ ಮಹಿಮೆ ಮಾತ್ರ ಅಪಾರ. ಈ ಸುಂದರಿಯ ಇತಿಹಾಸ ತುಂಬಾ ಹಳೆಯದು. ಲಕ್ಷಾಂತರ ವರ್ಷಗಳ ಹಿಂದೆ, ಪ್ರಾಣಿ ಪಕ್ಷಿ ಗಿಡ, ಇತ್ಯಾದಿ ಸಾವಯವ ಪದಾರ್ಥಗಳು ಭೂಮಿಯ ಅಡಿಯಲ್ಲಿ ಹೂತು ಹೋಗಿ, ಹೈಡ್ರೋಕಾರ್ಬನ್‌ಗಳಾಗಿ ರೂಪಾಂತರ ಗೊಳ್ಳುವುದರಿಂದ ಈ ಕೃಷ್ಣಸುಂದರಿ ಜನ್ಮ ತಾಳುತ್ತಾಳೆ.
ಹುಡುಕಿ ತೆಗೆಯುವವರೆಗೂ ಭೂಮಿಯ ಅಡಿಯಲ್ಲಿ ನಿಕ್ಷೇಪಗಳ ರೂಪದಲ್ಲಿ ಅಡಗಿ ಕುಳಿತಿರು ತ್ತಾಳೆ. ಕೆಲವೊಮ್ಮೆ ಭೂಮಿಯ ಮೇಲ್ಮೈನಲ್ಲಿ ಕಾಣಿಸಿಕೊಳ್ಳುತ್ತಾಳೆ. ಪ್ರಾಚೀನ ಕಾಲದಿಂದಲೂ ಕೆಲವು ನಾಗರಿಕತೆಗೆ ಕೃಷ್ಣಸುಂದರಿಯ ಬಗ್ಗೆ ತಿಳಿದಿತ್ತು. ಸಾವಿರಾರು ವರ್ಷಗಳ ಹಿಂದೆ, ಈಜಿಪ್ಟ್ ದೇಶದ ಜನರು ಔಷಧಕ್ಕಾಗಿ ಬಳಸುತ್ತಿದ್ದರು.
ಈ ಕೃಷ್ಣಸುಂದರಿಯನ್ನು ವಿಶ್ವಕ್ಕೆ ಪರಿಚಯಿಸಿ ಒಳ್ಳೆಯದಾಯಿತು ಎನ್ನುವವರು ಇಗ್ನಸಿ ಲುಕಾ ಸವಿಚ್, ಎಡ್ವಿನ್ ಡ್ರೇಕ್ ಮತ್ತು ಅಬ್ರಹಾಂ ಜೆಸ್ನೆರ್ ಅವರನ್ನು ಅಭಿನಂದಿಸಬೇಕು. ಅದರಿಂದಾ ಗಿಯೇ ಇಂದು ವಿಶ್ವದಲ್ಲಿ ತೊಂದರೆಗಳಾಗುತ್ತಿವೆ ಎನ್ನುವವರು ಇವರನ್ನೇ ಬೈಯ್ಯಬೇಕು.
ಇದನ್ನೂ ಓದಿ: Kiran Upadhyay Column: ಎಣ್ಣೆ ನಮ್ದು...ಸುಂಕ ನಿಮ್ದು...!
ಏಕೆಂದರೆ, ಇವರು ಹುಟ್ಟುವುದಕ್ಕಿಂತ ಮೊದಲಿನಿಂದಲೂ ಅಸ್ತಿತ್ವದಲ್ಲಿದ್ದ ಕೃಷ್ಣಸುಂದರಿಯನ್ನು ನಮ್ಮ ಪ್ರಪಂಚಕ್ಕೆ ಈ ರೀತಿಯಲ್ಲಿ ಪರಿಚಯಿಸಿದವರು ಇವರುಗಳು. ಈಗಂತೂ ಅವಳಿಲ್ಲದೇ ಮನುಕುಲದ ಒಂದು ದಿನವೂ ಕಳೆಯುವುದಿಲ್ಲ. ಒಂದಂತೂ ನಿಜ, ದೊಡ್ಡ ಹೆಸರು ಮಾಡಿದ ವಿಶ್ವಸುಂದರಿಯರೂ ಕೃಷ್ಣಸುಂದರಿಯ ಮುಂದೆ ಫಲ. ಯಾರಪ್ಪಾ ಈ ಕೃಷ್ಣಸುಂದರಿ ಎಂದು ತಲೆಕೆಡಿಸಿಕೊಳ್ಳಬೇಡಿ. ನಮ್ಮ ನಿತ್ಯದ ಆಗುಹೋಗುಗಳಿಗೆ ಅವಶ್ಯಕವಾದ ಈ ಸುಂದರಿಗೆ ಇನ್ನೊಂದು ಹೆಸರು ಕಚ್ಚಾ ತೈಲ.
ನಮ್ಮ ನಿತ್ಯದ ಬೇಡಿಕೆಯ ಪೆಟ್ರೋಲ, ಡೀಸೆಲ್, ಸೀಮೆ ಎಣ್ಣೆ, ಪ್ಲಾಸ್ಟಿಕ್ ಹೀಗೆ ಸುಮಾರು ಆರು ಸಾವಿರ ಶಿಶುಗಳಿಗೆ ಜನ್ಮದಾತೆ ಇದೇ ಕೃಷ್ಣಸುಂದರಿ, ಅಲಿಯಾಸ್ ಕ್ರೂಡ್ ಆಯಿಲ್ ಉರುಫ್ ಕಚ್ಚಾ ತೈಲ. ಈ ಕಚ್ಚಾ ತೈಲಾ ಅಥವಾ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಇಂದು ನಿನ್ನೆಯದಲ್ಲ.
ಸುಮಾರು 5000 ವರ್ಷದ ಹಿಂದಿನಿಂದ ಜನ ಪೆಟ್ರೋಲಿಯಂ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಆಗೆಲ್ಲ ಬಳಕೆದಾರರು ಬಳಸುವ ಕಾರಣ, ವಿಧಾನ ಬೇರೆಯದಾಗಿತ್ತು. ಆ ಕಾಲದಲ್ಲಿ ಭೂಮಿಯನ್ನು ಅಗೆದು ಅಥವಾ ಕೊರೆದು ತೈಲವನ್ನು ಸಂಸ್ಕರಿಸಲು ಸಾಧ್ಯವಾಗುತ್ತಿರಲಿಲ್ಲ. ಅವರ ಬಳಿ ಆ ತಂತ್ರಜ್ಞಾನ ಇರಲಿಲ್ಲ. ಆದ್ದರಿಂದ ಅವರು ತೈಲ ಸೋರಿಕೆಯನ್ನು ಅವಲಂಬಿಸಿದ್ದರು.
ಅಂದರೆ, ಭೂಮಿಯ ಕೆಲವು ಭಾಗಗಳಲ್ಲಿ ಕಚ್ಚಾ ತೈಲ ತಾನಾಗಿಯೇ ಮೇಲೆ ಬರುತ್ತಿತ್ತು. ಅಂಥ ಸ್ಥಳಗಳಲ್ಲಿ ಮೊದಲಾಗಿ ಗುರುತಿಸಲ್ಪಟ್ಟದ್ದು ಇರಾಕ್‌ನ ಹೀತ್ ಎಂಬ ಪ್ರದೇಶ. ಭೂಮಿಯಿಂದ ಮೇಲೆ ಒಸರಿ ಬರುತ್ತಿದ್ದ ಕಚ್ಚಾ ತೈಲ ಕೆಲವೊಮ್ಮೆ ಕಪ್ಪು ಜಿಗುಟಾದ ದ್ರವದಂತೆ ಕಂಡರೆ ಕೆಲವೊಮ್ಮೆ ಉಂಡೆಯಂತೆ, ಇನ್ನು ಕೆಲವೊಮ್ಮೆ ಘನ ದ್ರವ್ಯರಾಶಿಯಾಗಿ ದೊರಕುತ್ತಿತ್ತು.
ಪ್ರಾಚೀನ ನಾಗರಿಕತೆಯಲ್ಲಿ ಇದನ್ನು ಹಲವು ಕಡೆಗಳಲ್ಲಿ ಬಳಸಿದ ದಾಖಲೆಗಳಿವೆ. ನೂರಾರು ವರ್ಷ ಗಳ ಹಿಂದೆ ಈಜಿಪ್ಟ್‌ನಲ್ಲಿ ಜನರು ಕಚ್ಚಾತೈಲವನ್ನು ಔಷಧವಾಗಿ ಬಳಸುತ್ತಿದ್ದರು. ದೇಹದ ಮೇಲೆ ಗಾಯಗಳಾದರೆ ಅದಕ್ಕೆ ಈ ಕಚ್ಚಾತೈಲವನ್ನು ಸವರುವುದರಿಂದ ಗಾಯ ಬೇಗನೆ ವಾಸಿಯಾಗುತ್ತದೆ ಎಂದು ಅವರು ನಂಬಿದ್ದರು.
ಇದರಲ್ಲಿಯೇ ಸ್ವಲ್ಪ ಗಟ್ಟಿಯಾಗಿರುವ ತೈಲವನ್ನು ಅವರು ವಸ್ತುಗಳನ್ನು ಜೋಡಿಸಲು ಅಂಟಿನಂತೆ ಬಳಸುತ್ತಿದ್ದರು. ಪಿರಮಿಡ್ ಳನ್ನು ಕಟ್ಟುವಾಗಲೂ ಇದನ್ನು ಬಳಸಿದ ದಾಖಲೆಗಳಿವೆ. ಬ್ಯಾಬಿಲೋ ನಿಯನ್ನರು ತಮ್ಮ ಹಡಗುಗಳಲ್ಲಿ ಸೋರಿಕೆಯನ್ನು ಸರಿಪಡಿಸಲು ಇದನ್ನು ಬಳಸುತ್ತಿದ್ದರು. ಒಟಾಮನ್ ಕಾಲದಲ್ಲಿ ಆಭರಣಗಳನ್ನು ಸರಿಪಡಿಸಲು ಇದರ ಬಳಕೆಯಾಗಿದೆ. ಮೆಸಪಟೊಮಿ ಯನ್ ಕಾಲದಲ್ಲಿಯೂ ಇದನ್ನು ಅಂಟಿನ ರೂಪದಲ್ಲಿ ಬಳಸುತ್ತಿದ್ದರು ಎಂಬ ಪುರಾವೆಗಳಿವೆ.
ಇತ್ತ ಚೀನಾದಲ್ಲಿ ಸಹ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಕಚ್ಚಾತೈಲವನ್ನು ಬಳಸಿದ ದಾಖಲೆ ಇದೆ. ಬಿದಿರಿನ ಕೊಳವೆಗಳ ಮೂಲಕ ತಮ್ಮ ಮನೆಯಲ್ಲಿ ಬೆಳಕು ಮತ್ತು ಶಾಖಕ್ಕೋಸ್ಕರ ಇದನ್ನು ಬಳಸಿದ್ದರು. ಈ ಕಚ್ಚಾತೈಲವನ್ನು ಸುಲಭವಾಗಿ ಸುಡಬಹುದು ಎಂಬು ದನ್ನು ಅವರು ಕಂಡುಕೊಂಡಿದ್ದರು. ಆ ಕಾಲದಲ್ಲಿ ಅವರು ಸುಮಾರು ಇನ್ನೂರ ಐವತ್ತು ಮೀಟರ್ ಆಳದ ಬಾವಿಯನ್ನು ತೋಡಿದ್ದರು.
ಏಳನೇ ಶತಮಾನದಲ್ಲಿ ಜಪಾನ್ ದೇಶದವರು ಕಚ್ಚಾತೈಲವನ್ನು ಗುರುತಿಸಿದರು. ಹದಿಮೂರನೆಯ ಶತಮಾನದಲ್ಲಿ ಇಟಲಿಯ ಮಾರ್ಕೊ ಪೋಲೊ ಜಗತ್ತನ್ನು ಸುತ್ತುತ್ತಿದ್ದಾಗ ಕ್ಯಾಸ್ಪಿಯನ್ ಸಮುದ್ರದ ತೀರದಲ್ಲಿರುವ ಬಾಕು (ಅಜರ್ಬೈಜಾನ್ ದೇಶದ ರಾಜಧಾನಿ, ಒಂದು ಕಾಲದಲ್ಲಿ ರಷ್ಯಾದ ಭಾಗ ವಾಗಿತ್ತು) ಸುತ್ತಮುತ್ತ ಇದೇ ರೀತಿಯ ಕಚಾತೈಲವನ್ನು ಕಂಡಿದ್ದನಂತೆ. ಇದೆಲ್ಲದರ ಹೊರತಾಗಿ ಯೂ ಕಚ್ಚಾ ತೈಲವನ್ನು ಹದಿನೈದನೇ ಶತಮಾನದವರೆಗೂ ದೊಡ್ಡ ಪ್ರಮಾಣದಲ್ಲಿ ಎಲ್ಲಿಯೂ ಬಳಸುತ್ತಿರಲಿಲ್ಲ.
ಅಲ್ಲಿಯವರೆಗೂ ಜನರು ಸಾಲ್ಮನ್ ಮೀನು ಮತ್ತು ಪೆಟ್ರಲ್ ಪಕ್ಷಿಗಳನ್ನು ಹಿಡಿದು ತಂದು, ಅದನ್ನು ಹಲವಾರು ದಿನಗಳ ವರೆಗೆ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳುತ್ತಿದ್ದರು. ಬೆಳಕು ಬೇಕು ಎಂದಾಗ ಇದನ್ನೇ ಮೇಣದಬತ್ತಿಯಂತೆ ಸುಡುತ್ತಿದ್ದರು.
ನಂತರದ ದಿನಗಳಲ್ಲಿ ತಿಮಿಂಗಲಗಳನ್ನು ಹಿಡಿದು ಅದರಿಂದ ಎಣ್ಣೆ ತೆಗೆಯಲು ಆರಂಭಿಸಿದರು. ಒಂದೇ ಸಮನೆ ತಿಮಿಂಗಿಲದಿಂದ ಎಣ್ಣೆ ತೆಗೆಯುವ ಕಾರ್ಖಾನೆಗಳು ತಲೆಯೆತ್ತಿದವು. ಈ ಎಣ್ಣೆ ಯನ್ನು ದೀಪ ಬೆಳಗಿಸಲು ಮತ್ತು ಸುಗಂಧದ ದ್ರವ್ಯಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. ಆ ಕಾಲದಲ್ಲಿ ಅಮೆರಿಕದ ಹೆಚ್ಚಿನ ಹಡಗುಗಳು ಸಮುದ್ರದಲ್ಲಿ ತಿಮಿಂಗಲಗಳನ್ನು ಹುಡುಕುವುದರಲ್ಲಿ ನಿರತವಾಗಿರುತ್ತಿದ್ದವು.
ಹತ್ತೊಂಬತ್ತನೇ ಶತಮಾನದ ಮಧ್ಯ ಭಾಗದಲ್ಲಿ ಕೆನಡಾದ ಭೂವಿeನಿ ಅಬ್ರಹಾಮ್ ಜಸ್ನರ್ ದೀಪ ಬೆಳಗಲು ಹೊಸ ತೈಲವನ್ನು ಕಂಡುಹಿಡಿಯುವವರೆಗೂ ಇದು ಅಮೆರಿಕದ ಐದನೇ ಅತಿ ದೊಡ್ಡ ಉದ್ಯಮವಾಗಿತ್ತು. 1854ರ ಹೊತ್ತಿಗೆ ಪೋಲೆಂಡಿನ ಇಗ್ನಸಿ ಲುಕಾಸವಿಚ್ ವ್ಯಾಪಾರಕ್ಕಾಗಿ ಮೊದಲ ತೈಲ ಸಂಸ್ಕರಣಾ ಕೇಂದ್ರವನ್ನು ಸ್ಥಾಪಿಸಿದ. ಆದರೆ ತೈಲವನ್ನು ಭೂಮಿಯಿಂದ ಹೊರಗೆ ತೆಗೆಯು ವುದು ಮಾತ್ರ ದೊಡ್ಡ ಸಮಸ್ಯೆಯಾಗಿಯೇ ಉಳಿದಿತ್ತು.
ಕೆಲವೇ ವರ್ಷಗಳಲ್ಲಿ ಸಾಕಷ್ಟು ತೈಲ ಸಂಸ್ಕರಿಸುವ ಕಾರ್ಖಾನೆಗಳು ಹುಟ್ಟಿಕೊಂಡಿದ್ದವು. ಹತ್ತು-ಇಪ್ಪತ್ತು ಫೂಟುಗಳವರೆಗೆ ಕೊರೆಯುವುದಕ್ಕೆ ತೊಂದರೆ ಇರಲಿಲ್ಲ. ಆದರೆ ಅದಕ್ಕಿಂತ ಹೆಚ್ಚು ಆಳಕ್ಕೆ ಹೋಗಲು ಎಲ್ಲರೂ ವಿಧಾನಗಳನ್ನು ಹುಡುಕುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಹುಡುಕಿದವ ಎಡ್ವಿನ್ ಡ್ರೇಕ್. ಮೂಲತಃ ಉದ್ಯಮಿಯಾಗಿದ್ದ ಡ್ರೇಕ್ ಕಚ್ಚಾ ತೈಲದ ಬಗ್ಗೆ ಸಾಕಷ್ಟು ತಿಳುವಳಿಕೆ ಇತ್ತು. ಆದರೆ ಕಾರಣಾಂತರಗಳಂದ ಆತ ಕಚ್ಚಾ ತೈಲದ ವ್ಯಾಪಾರ ಮಾಡುವಂತಿರಲಿಲ್ಲ.
ಆದ್ದರಿಂದ ಒಂದು ಸಾವಿರ ಡಾಲರ್ ಸಂಬಳಕ್ಕೆ ಆತ ತೈಲ ತೆಗೆಯುವ ಸಂಸ್ಥೆಗೆ ಕೆಲಸ ಮಾಡಬೇಕಾ ಯಿತು. 1859 ರ ವೇಳೆಗೆ, ಮೊದಲು ಕಬ್ಬಿಣದ ಕೊಳವೆಗಳನ್ನು ಭೂಮಿಯೊಳಗೆ ಇಳಿಸಿ ಅದರ ಒಳಗೆ ಉಗಿಯಂತ್ರದ ಸಹಾಯದಿಂದ ಸರಳು ಬಳಸಿ ಬಾವಿ ಕೊರೆಯುವ ಪ್ರಯತ್ನ ಮಾಡಿದ. ಆದರೂ ದಿನಕ್ಕೆ ಮೂರು ಅಡಿಗಿಂತ ಹೆಚ್ಚು ಕೊರೆಯಲು ಸಾಧ್ಯವಾಗುತ್ತಿರಲಿಲ್ಲ.
ಕೆಲವರು ಇದನ್ನು ಹುಚ್ಚುತನ ಎಂದರು. ಆದರೆ ಎಪ್ಪತ್ತು ಅಡಿ ಕೊರೆದ ಡ್ರೇಕ್ ನಂತರ ತೈಲ ನಿಕ್ಷೆಪವನ್ನು ತಲುಪಿದ್ದ. ಇದರಿಂದ ಡ್ರೇಕೆಗೆ ಹೆಸರು ಬಂತಾದರೂ ಹಣ ಬರಲಿಲ್ಲ. ಆತನ ಕೊನೆಯ ಕಾಲದಲ್ಲಿ ಕೈಯಲ್ಲಿ ಸ್ವಲ್ಪವೂ ಹಣ ಇರಲಿಲ್ಲ. ಅಲ್ಲಿಂದ ಶುರುವಾಯಿತು ನೋಡಿ ತೈಲದ ಹಾರಾಟ. ಎಲ್ಲರೂ ತೈಲದ ಹಿಂದೆ ಓಡುವವರೇ.
ಅಮೆರಿಕದಲ್ಲಂತೂ ತೈಲವೇ ತೈಲ. ಅದಕ್ಕೆ ಬ್ರಿಟಿಷರೂ ಕಮ್ಮಿ ಇರಲಿಲ್ಲ. ವಿಶ್ವದಾದ್ಯಂತ ತೈಲ ನಿಕ್ಷೇಪದ ಬೇಟೆ ಆರಂಭವಾಯಿತು. ಅಮೆರಿಕ ಮತ್ತು ಯುರೋಪ್ ದೇಶಗಳು ಭೂಪಟದಲ್ಲಿರುವ ಎಲ್ಲ ದೇಶಗಳನ್ನೂ (ರಷ್ಯಾ, ಚೀನಾ ಹೊರತುಪಡಿಸಿ) ಜಾಲಾಡಿದವು. ಎರಡನೇ ಮಹಾಯುದ್ಧದ ಸಮಯದಲ್ಲಂತೂ ಕೇಳುವುದೇ ಬೇಡ. ಸಾವಿರಾರು ವಾಹನಗಳು, ಟ್ಯಾಂಕರ್‌ಗಳು, ನೂರಾರು ಯುದ್ಧ ವಿಮಾನಗಳು, ಫಿರಂಗಿಗಳು, ಎಲ್ಲದಕ್ಕೂ ತೈಲದ ಅವಶ್ಯಕತೆ ಇತ್ತು.
ಅಮೆರಿಕ ಮತ್ತು ಯುರೋಪ್ ರಾಷ್ಟ್ರದ ಕಣ್ಣು ಅರಬ್ ರಾಷ್ಟ್ರಗಳ ಕಡೆಗೆ ತಿರುಗಿತ್ತು. ಕೊಲ್ಲಿ ರಾಷ್ಟ್ರ ಗಳಲ್ಲಿ ಮೊದಲ ಬಾರಿ ಬಹರೈನ್ನಲ್ಲಿ ತೈಲ ನಿಕ್ಷೇಪವನ್ನು ಬ್ರಿಟಿಷರು ಕಂಡುಹಿಡಿದರು. ಪಕ್ಕದಲ್ಲಿ ರುವ ದೊಡ್ಡ ದೇಶವಾದ ಸೌದಿ ಅರೇಬಿಯಾದಲ್ಲೂ ತೈಲ ನಿಕ್ಷೇಪ ಇರಬಹುದೆಂದು ಅಂದಿನ ರಾಜ ಬ್ರಿಟಿಷ್ ಕಂಪನಿಯನ್ನು ಕೇಳಿಕೊಂಡಾಗ, ಹೆಚ್ಚಿನ ಲಾಭದ ಆಸೆಗೆ ಬ್ರಿಟಿಷರು ಕೆಲವು ಬೇಡಿಕೆ ಯನ್ನು ಇಟ್ಟರು.
ಆಗ ಅಲ್ಲಿಯ ರಾಜನಾಗಿದ್ದ ಅಬ್ದುಲ್ ಅಜೀಜ್ ಅಮೆರಿಕದ ಕಂಪನಿಯೊಂದಿಗೆ ಮಾತುಕತೆ ನಡೆಸಿ, ಸೌದಿ ಅರೇಬಿಯಾದಲ್ಲಿಯೂ ತೈಲ ಹುಡುಕುವ ಮತ್ತು ಬಾವಿ ಕೊರೆಯುವ ಕೆಲಸಕ್ಕೆ ಅಮೆರಿಕ ದೊಂದಿಗೆ ಒಪ್ಪಂದ ಮಾಡಿಕೊಂಡರು. ಸೌದಿ ಅರೇಬಿಯಾದಲ್ಲಿ ಅಮೆರಿಕಕ್ಕೆ ಹೆಚ್ಚಿನ ಯಶಸ್ಸು ಲಭಿಸಿತು.
ಒಂದೊಂದು ಬಾವಿಯೂ ಸಾವಿರ ಬ್ಯಾರೆಲ್‌ಗಿಂತ ಹೆಚ್ಚು ತೈಲವನ್ನು ಉತ್ಪಾದಿಸುತ್ತಿತ್ತು. ಸೌದಿ ಅರೇಬಿಯಾದ ಪೂರ್ವಭಾಗದಲ್ಲಿ ವರ್ಷ ಒಪ್ಪೊತ್ತಿನಲ್ಲಿಯೇ ನೂರಾರು ತೈಲದ ಬಾವಿಯನ್ನು ಕೊರೆದರು. ಪೈಪ್‌ಲೈನ್ ಮೂಲಕ ಬಂದರಿನ ಹತ್ತಿರದ ಸಂಸ್ಕರಣಾ ಕೇಂದ್ರಕ್ಕೆ ಕೊಂಡೊಯ್ದರು. ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ಈ ಕಪ್ಪು ದ್ರವ ಹೆಚ್ಚಿನ ದ್ರವ್ಯ ತಂದುಕೊಡುತ್ತದೆ ಎಂದು ಎಲ್ಲರಿಗೂ ಸ್ಪಷ್ಟವಾಗಿತ್ತು. ಅಲ್ಲಿ ರಾಜಕೀಯ ಉದ್ದೇಶ, ದುರುದ್ದೇಶಗಳು ಸೇರಿಕೊಂಡವು.
ಆ ಕಾಲದಲ್ಲಿದ್ದ ಪ್ರಸಿದ್ಧ ಭೂವಿಜ್ಞಾನಿ ಎವರೆಟ್ ಡಿ ಗ್ಯಾಲಿಯರ್ ಅಮೆರಿಕಕ್ಕೆ ಒಂದು ವರದಿ ಯನ್ನು ಸಲ್ಲಿಸಿದರು. ಪಶ್ಚಿಮ ಏಷ್ಯಾದಲ್ಲಿ ಇಪ್ಪತ್ತೈದು ಬಿಲಿಯನ್ ಬ್ಯಾರೆಲ್ ಕಚ್ಚಾ ತೈಲದ ನಿಕ್ಷೇಪ ಇದೆ ಎಂದು ಹೇಳಿದರು. ಅಮೆರಿಕಕ್ಕೆ ಅದನ್ನು ಬಿಡಲು ಸಾಧ್ಯವಾಗಲಿಲ್ಲ. ತೈಲದ ಕ್ಷೇತ್ರ ಗಳನ್ನು ನಿಯಂತ್ರಿಸಲು ಅವರು ಎಲ್ಲ ತಂತ್ರಗಳನ್ನೂ ಬಳಸಿದರು. ಆ ಕಾಲದಲ್ಲಿ ಜಾಗತಿಕವಾಗಿ ಏಳು ಕಂಪನಿಗಳು ತೈಲ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದವು.
ಗಲ್ಫ್ ಆಯಿಲ್, ಶೆಲ್, ಆಂಗ್ಲೋ ಇರಾನಿಯನ್ ಆಯಿಲ್ ಕಂಪನಿ, ಸ್ಟ್ಯಾಂಡರ್ಡ್ ಆಯಿಲ್, ಕ್ಯಾಲಿಫೋರ್ನಿಯಾ ಆಯಿಲ್, ನ್ಯೂಜೆರ್ಸಿ ಸ್ಟ್ಯಾಂಡರ್ಡ್ ಆಯಿಲ್, ನ್ಯೂಯಾರ್ಕ್ ಆಯಿಲ್, ಹೀಗೆ ಏಳು ಕಂಪನಿಗಳನ್ನು ‘ಸೆವೆನ್ ಸಿಸ್ಟರ್ಸ್’ ಎಂದು ಕರೆಯಲಾಗುತ್ತಿತ್ತು. ಇರಲಿ, ಹೆಚ್ಚಿನ ತೈಲ ದೊರೆತದ್ದರಿಂದ ಕೊಲ್ಲಿ ರಾಷ್ಟ್ರಗಳು ಶ್ರೀಮಂತವಾದವು. ಮರುಭೂಮಿಯ ಮಧ್ಯದಲ್ಲಿ ಮಹಾ ನಗರಗಳು ತಲೆಯೆತ್ತಿದವು.
ಆದರೆ 1950ರ ದಶಕದಲ್ಲಿ ಇರಾನ್ ತನ್ನ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಲು ಪ್ರಯತ್ನಿಸಿತು. ಪಶ್ಚಿಮ ದೇಶಗಳು ಸೇರಿ ಇರಾನ್ ಸರ್ಕಾರವನ್ನೇ ಉರುಳಿಸಿದವು. ಬಹುತೇಕ ಕೊಲ್ಲಿ ರಾಷ್ಟ್ರಗಳು ಅಮೆರಿಕ ಮತ್ತು ಬ್ರಿಟನ್ ಕಂಪನಿಗಳೊಂದಿಗೆ ಪಾಲುದಾರರಾಗಿ ಒಪ್ಪಂದ ಮಾಡಿ ಕೊಂಡವು. ಆದರೆ ಇರಾನ್ ಇದಕ್ಕೆ ಹೊರತಾಗಿತ್ತು.
ನಂತರದ ದಿನಗಳಲ್ಲೂ ಇರಾನ್ ಸ್ವತಂತ್ರವಾಗಿ ಇರಬೇಕೆಂದು ಬಯಸಿತ್ತು. ಆದ್ದರಿಂದ ಇರಾನ್ ಮೇಲೆ ನಿರ್ಬಂಧವನ್ನು ಹೇರಲಾಯಿತು. ಇಂದಿಗೂ ಅಮೆರಿಕಕ್ಕೆ ಕೊಲ್ಲಿ ರಾಷ್ಟ್ರಗಳ ಮೇಲೆ ಯಾಕೆ ಇಷ್ಟು ಆಸಕ್ತಿ ಎಂದು ಈಗ ಅರ್ಥವಾಯಿತು ಅಲ್ಲವೇ? ರಾತ್ರೋರಾತ್ರಿ ವೆನಝುವೇಲಾದ ಅಧ್ಯಕ್ಷ ರನ್ನು ಅಮೆರಿಕ ಏಕೆ ಹಾರಿಸಿಕೊಂಡು ಹೋಯಿತು? ಅಮೆರಿಕ ಮತ್ತು ಇಸ್ರೇಲ್, ಇರಾನ್ ವಿರುದ್ಧ ಯುದ್ಧಕ್ಕೆ ಇಳಿಯಲು ಕಾರಣ ಏನು? ಹೆಚ್ಚು ಬಿಡಿಸಿ ಹೇಳಬೇಕಾಗಿಲ್ಲ. ಏನೇ ಹೇಳಿ, ಈ ಕಪ್ಪು ಬಣ್ಣದ ಕಚ್ಚಾ ತೈಲ ಇಡೀ ಜಗತ್ತಿನ ಕಣ್ಣಿಗೆ ತಂಪನ್ನೂ ನೀಡಿದೆ, ಕಣ್ಣು ಕೆಂಪಾಗು ವಂತೆಯೂ ಮಾಡಿದೆ.