ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ಯುದ್ಧ ಎಂದರೆ ಎಲ್ಲರಿಗೂ ಬಹಳ ಇಷ್ಟ !

ಇರಾನ್-ಇಸ್ರೇಲ್-ಅಮೆರಿಕ ಯುದ್ಧದಿಂದ ನೇರ ಲಾಭ ಮಾಡಿಕೊಂಡವರು ಯಾರು ಎಂಬು ದನ್ನು ತಿಳಿಯಲು ಹೆಚ್ಚು ತಿಣುಕಾಡಬೇಕಿಲ್ಲ. ಕೊಲ್ಲಿ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ. ಹೀಗಾಗಿ ಈ ವರ್ಷ ಅಮೆರಿಕದ ತೈಲ ಉತ್ಪಾದಕರು ಹೆಚ್ಚುವರಿ 63 ಶತಕೋಟಿ ಡಾಲರ್ ಲಾಭ ಗಳಿಸಲಿದ್ದಾರೆ ಎಂದು ಇಂಧನ ಸಂಶೋಧನಾ ಸಂಸ್ಥೆ ರಿಸ್ಟಾಡ್ ಎನರ್ಜಿ ಲೆಕ್ಕ ಹಾಕಿದೆ.

ಕಾಡುದಾರಿ

ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ‘Everybody Loves a Good Drought’ ಎಂಬ ಹೆಸರಿನ ಪುಸ್ತಕವೊಂದಿದೆ. ಬರ ಪರಿಸ್ಥಿತಿಗಳು ಸಾಮಾನ್ಯ ಜನರನ್ನು ಸುಲಿದು ಹಾಕುತ್ತವೆ. ಆದರೆ ಶ್ರೀಮಂತರು, ಆಯಕಟ್ಟಿನ ತಾಣಗಳಲ್ಲಿರುವವರು, ಉದ್ಯಮಿಗಳು, ರಾಜಕಾರಣಿ ಗಳು ಹೀಗೆ ಎಲ್ಲರೂ ಈ ಬರದಿಂದ ತಮಗೆ ಸಾಧ್ಯವಾದಷ್ಟು ಲಾಭವನ್ನು ಗೆಬರಿಕೊಳ್ಳು ತ್ತಾರೆ.

ಬರದ ಹೆಸರಿನಲ್ಲಿ ಯೋಜನೆಗಳ ಅನುದಾನ ಸ್ಯಾಂಕ್ಷನ್ ಮಾಡುವ ಮೇಲಿನವರಿಂದ ಹಿಡಿದು, ಕೂಲಿಗೆ ಅದನ್ನು ಹಂಚಬೇಕಾದ ಮೇಸ್ತ್ರಿಯವರೆಗೆ ಎಲ್ಲರೂ ಬರದಿಂದಾಗಿ ದುಂಡಗಾಗುತ್ತಾರೆ. ಆದ್ದರಿಂದ ಇಂಥ ಜನರಿಗೆ ಬರ ಎಂದರೆ ಒಂಥರಾ ಪ್ರೀತಿ. ಭಾರತದ ನಾನಾ ಕಡೆ ನಡೆಸಿದ ವಿಸ್ತಾರ ಕ್ಷೇತ್ರ ಕಾರ್ಯ ಆಧರಿಸಿ ಬರೆದ ಪುಸ್ತಕವಿದು.

ಈ ಪುಸ್ತಕದ ಶೀರ್ಷಿಕೆಯನ್ನೂ ಪರಿಕಲ್ಪನೆಯನ್ನೂ ತುಸು ಎತ್ತಿಕೊಂಡು, ಬದಲಾಯಿಸಿ ನಾವು ಈಗ ‘ಒಳ್ಳೆಯ ಯುದ್ಧ ಅಂದರೆ ಎಲ್ಲರಿಗೂ ಇಷ್ಟ’ ಎಂದು ಹೇಳಬಹುದು.

ಇರಾನ್-ಇಸ್ರೇಲ್-ಅಮೆರಿಕ ಯುದ್ಧದಿಂದ ನೇರ ಲಾಭ ಮಾಡಿಕೊಂಡವರು ಯಾರು ಎಂಬುದನ್ನು ತಿಳಿಯಲು ಹೆಚ್ಚು ತಿಣುಕಾಡಬೇಕಿಲ್ಲ. ಕೊಲ್ಲಿ ಸಂಘರ್ಷದಿಂದಾಗಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ. ಹೀಗಾಗಿ ಈ ವರ್ಷ ಅಮೆರಿಕದ ತೈಲ ಉತ್ಪಾದಕರು ಹೆಚ್ಚುವರಿ 63 ಶತಕೋಟಿ ಡಾಲರ್ ಲಾಭ ಗಳಿಸಲಿದ್ದಾರೆ ಎಂದು ಇಂಧನ ಸಂಶೋಧನಾ ಸಂಸ್ಥೆ ರಿಸ್ಟಾಡ್ ಎನರ್ಜಿ ಲೆಕ್ಕ ಹಾಕಿದೆ.

ಇದನ್ನೂ ಓದಿ : Harish Kera Column: ಬೆಳಕು ಮತ್ತು ಬೆಂಕಿ: ಇದು ಪೆಟ್ರೋಲಿಯಂ

ಈ ವರ್ಷ ಅಮೆರಿಕದ ದೈತ್ಯ ತೈಲ ಕಂಪನಿಗಳ ಷೇರು ಬೆಲೆಗಳು ಸುಮಾರು 30%ರಷ್ಟು ಏರಿಕೆಯಾಗಿವೆ. ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ ನಂತರ ಈ ಏರಿಕೆ ಶುರುವಾಗಿದೆ. ಇರಾನ್ ಮೇಲಿನ ದಾಳಿಯ ಬಳಿಕ ಇದು ಇನ್ನಷ್ಟು ಏರಿದೆ. ದ್ರವೀಕೃತ ನೈಸರ್ಗಿಕ ಅನಿಲ ( LNG) ಬೆಲೆ ಸಹ ಗಗನಕ್ಕೇರಿದೆ. ಹಾಗೇ ಗ್ಯಾಸೋಲಿನ್, ಡೀಸೆಲ್ ಮತ್ತು ಜೆಟ್ ಇಂಧನದ ದರ ಕೂಡ ಹೆಚ್ಚಾಗಿದೆ. ‌

ಎಕ್ಸಾನ್, ಚೆನಿಯರ್ ಎನರ್ಜಿ, ವೆಂಚರ್ ಗ್ಲೋಬಲ್, ವ್ಯಾಲೆರೊ ಎನರ್ಜಿ, ಮ್ಯಾರಥಾನ್ ಪೆಟ್ರೋಲಿಯಂ, ಫಿಲಿಪ್ಸ್ 66 ಇವರೆ ಲಾಭ ಮಾಡಿಕೊಂಡವರು. ಅತ್ತ ರಷ್ಯಾದ ತೈಲ ಕಂಪನಿಗಳು ಕೂಡ ಸಾಕಷ್ಟು ಬಾಚಿಕೊಳ್ಳುತ್ತಿವೆ. ತೈಲ ಬೆಲೆಗಳಲ್ಲಿ 14%-30% ಹೆಚ್ಚಳ ದಿಂದಾಗಿ ರಷ್ಯಾ ದಿನಕ್ಕೆ ಅಂದಾಜು 15 ಕೋಟಿ ಡಾಲರ್‌ನಿಂದ 59 ಕೋಟಿ ಡಾಲರ್‌ನಷ್ಟು ಹೆಚ್ಚುವರಿ ಬಜೆಟ್ ಆದಾಯ ಗಳಿಸುತ್ತಿದೆ.

ಮಧ್ಯಪ್ರಾಚ್ಯದಿಂದ ಬರುವ ತೈಲಕ್ಕೆ ಅಡ್ಡಿಯಾದಾಗ ಖರೀದಿದಾರರು ಹುಡುಕಿದ ಮೊದಲ ಪರ್ಯಾಯ ರಷ್ಯಾ. ಬೇಡಿಕೆ ಹೆಚ್ಚಾಯಿತು. ಜಾಗತಿಕ ಬೆಲೆಗಳನ್ನು ಸ್ಥಿರಗೊಳಿಸುವ ಪ್ರಯತ್ನದಲ್ಲಿ ಅಮೆರಿಕ ಕೂಡ ಇದಕ್ಕೆ ತಾತ್ಕಾಲಿಕ ವಿನಾಯಿತಿ ನೀಡಿತು. ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕದ ಅನುಮತಿ ಬೇಕು ಎಂಬುದೇ ಇದುವರೆಗೆ ಕಂಡು ಕೇಳರಿಯದ ವಿಷಯ. ಆದರೂ ಎಲ್ಲ ಕಡೆಯೂ ತನ್ನದೂ ಒಂದಿರಲಿ ಎಂದು ತೂರಿಸುವ ಅಮೆರಿಕದ ಬುದ್ಧಿ ಇದರಿಂದ ರುಜುವಾತಾಗುತ್ತದೆ ಅಷ್ಟೇ.

ಯುದ್ಧದಿಂದ ಪರಮಾಯಿಷಿ ಖುಷಿ ಮತ್ತು ಲಾಭ ಯಾರಿಗೆ ಎಂಬುದು ಬಿಡಿಸಿ ಹೇಳಬೇಕಿಲ್ಲ. ಅವು ಶಸ್ತ್ರಾಸ್ತ್ರ ಕಂಪನಿಗಳು. ಈಗಾಗಲೇ ಅಮೆರಿಕ ಹಾಗೂ ಇಸ್ರೇಲ್ʼನ ಹಲವು ದೊಡ್ಡ ಕಂಪನಿಗಳು ಲಾಭದಿಂದ ತುಂಬಿ ತುಳುಕುತ್ತಿವೆ. ಲಾಕ್‌ಹೀಡ್ ಮಾರ್ಟೀನ್ ಕಂಪನಿ ಎಫ್-35 ಯುದ್ಧ ವಿಮಾನಗಳು, ಜಾವೆಲಿನ್ ಕ್ಷಿಪಣಿಗಳನ್ನು ಇಸ್ರೇಲ್‌ಗೆ ಸರಬರಾಜು ಮಾಡುತ್ತಿದೆ. ‌

Screenshot_4 R

ಯುದ್ಧ ಮುಂದುವರಿದರೆ ಹೊಸ ಆರ್ಡರ್‌ಗಳು ಬರುತ್ತವೆ. ಆರ್‌ಟಿಎಕ್ಸ್ ಕಂಪನಿ ಪೇಟ್ರಿಯಟ್ ಕ್ಷಿಪಣಿ, ಐರನ್ ಡೋಮ್ ತಂತ್ರಜ್ಞಾನ, ಏರ್ ಡಿಫೆನ್ಸ್ ಮಿಸೈಲ್ಗಳನ್ನು ಒದಗಿಸುತ್ತಿದೆ. ಇರಾನ್‌ನ ಮಿಸೈಲ್ ದಾಳಿಗಳಿಗೆ ಪ್ರತಿಯಾಗಿ ಇವು ಬೇಕು. ನಾರ್ತ್ರಾಪ್ ಗ್ರುಮ್ಮನ್ ಕಂಪನಿ ಡ್ರೋನ್‌ಗಳು, ಸರ್ವೇಲೆನ್ಸ್ ಸಿಸ್ಟಮ್ಸ್, ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನವನ್ನು ಕೊಡುತ್ತದೆ.

ಬೋಯಿಂಗ್ ಕಂಪನಿ ಅಪಾಚೆ ಹೆಲಿಕಾಪ್ಟರ್‌ಗಳು, ಮಿಲಿಟರಿ ವಿಮಾನಗಳನ್ನು ಒದಗಿಸು ತ್ತದೆ. ದೀರ್ಘಕಾಲದ ನಿರ್ವಹಣೆ, ಪೂರಕ ಬಿಡಿಭಾಗವೆಲ್ಲ ಇದರದೇ. ಎಲ್ಬಿಟ್ ಸಿಸ್ಟಮ್ಸ್ ಕಂಪನಿಯು ರಫೆಲ್ ಯುದ್ಧವಿಮಾನವನ್ನು ಒದಗಿಸುತ್ತದೆ.

ಯುದ್ಧ ನಡೆಯುತ್ತಿರುವಾಗ ಹೇಗೂ ಉಂಟಲ್ಲ, ಯುದ್ಧ ಮುಗಿದ ಮೇಲೂ ಇವರ ವ್ಯಾಪಾರಕ್ಕೆ ಧಕ್ಕೆಯಿಲ್ಲ. ‘ಇರಾನನ್ನು ನಮ್ಮ ಅಸ್ತ್ರಗಳು ಹೇಗೆ ಬಡಿದು ಹಾಕಿದವು ನೋಡಿ’ ಎನ್ನುತ್ತ ಇಡೀ ಯುದ್ಧವನ್ನು ತಮ್ಮ ಜಾಹೀರಾತು ಮಾಡಿಕೊಂಡು ಈ ಕಂಪನಿಗಳು ಇತರ ದೇಶಗಳೊಂದಿಗೆ ವ್ಯಾಪಾರ ಕುದುರಿಸುತ್ತವೆ. ಈಗ ಪಾಕ್-ಆಫ್ಘನ್ ನಡುವೆ ನಡೆಯುತ್ತಿರುವ ಚಿಲ್ಲರೆ ಯುದ್ಧದಲ್ಲೂ ಇವುಗಳು ಲಾಭ ಹಿಂಜುತ್ತವೆ.

ಮಿಸೈಲ್, ಡ್ರೋನ್, ಬಾಂಬ್‌ಗಳ ಬಳಕೆ, ಬಳಸಿದ ಶಸ್ತ್ರಾಸ್ತ್ರಗಳನ್ನು ಮತ್ತೆ ತುಂಬುವುದು, ಇದರಿಂದ ವರ್ಷಗಳವರೆಗೆ ಆದಾಯ. ಯುದ್ಧದ ಭಯದಿಂದ ಮಧ್ಯಪ್ರಾಚ್ಯ, ಯುರೋಪ್ ದೇಶಗಳು ಹೊಸ ಒಪ್ಪಂದ ಮಾಡಿಕೊಂಡು ತಮ್ಮ ರಕ್ಷಣಾ ಖರ್ಚು ಹೆಚ್ಚಿಸುತ್ತವೆ. ಯುದ್ಧ ಎಂಬುದು ಲೈವ್ ಡೆಮೋ. ಒಂದು ಮಿಸೈಲ್ ಅಥವಾ ಡಿಫೆನ್ಸ್ ಸಿಸ್ಟಮ್ ಅಲ್ಲಿ ಯಶಸ್ವಿ ಯಾದರೆ ಬೇರೆ ದೇಶಗಳು ಖರೀದಿಸಲು ಮುಂದೆ ಬರುತ್ತವೆ.

ಹೀಗೆ ಯುದ್ಧರಂಗವು ರಂಗಭೂಮಿಯೂ ಹೌದು. ಇನ್ನು ಇವುಗಳ ಸ್ಟಾಕ್ ಮಾರ್ಕೆಟ್ ಲಾಭ ಹೇಗೂ ಇದೆಯಲ್ಲ. ಸದ್ದಿಲ್ಲದೇ ಲಾಭ ಮಾಡಿಕೊಂಡ ಇನ್ನೊಂದು ವಿಭಾಗ ಎಂದರೆ ವಿಮಾ ಕಂಪನಿಗಳು. ಕೆಲವು ವಿಮಾ ಕಂಪನಿಗಳೇ ಹಗಲು ದರೋಡೆಕೋರರು ಎಂಬುದು ನಿಜ. ಈಗ ಇದು ಇನ್ನೊಂದು ಲೆವೆಲ್‌ಗೆ ಹೋಗಿದೆ. ಹೊರ್ಮುಜ್ ಜಲಸಂಧಿ ಬಿಕ್ಕಟ್ಟಿ ನಿಂದಾಗಿ ವಿಮಾದಾರರು ಹಡಗುಗಳ ಮೇಲಿನ ‘ವಾರ್ ರಿಸ್ಕ್’ ಪ್ರೀಮಿಯಂಗಳನ್ನು 25 ಪಟ್ಟು ಹೆಚ್ಚಿಸಿದ್ದಾರೆ.

ಹೆಚ್ಚಿನ ಅಪಾಯದ ಸಾಗಣೆಯನ್ನು ಹೆಚ್ಚಿನ ಲಾಭದ ವ್ಯವಹಾರವನ್ನಾಗಿ ಪರಿವರ್ತಿಸಿ ಕೊಂಡಿದ್ದಾರೆ. ಈಗಿರುವ ಕಡಿಮೆ-ವೆಚ್ಚದ ಪಾಲಿಸಿಗಳನ್ನು ಹೆಚ್ಚಿನ ಬೆಲೆ ವ್ಯಾಪ್ತಿಗೆ ಏರಿಸಿ ದ್ದಾರೆ. ವಾರ್ ರಿಸ್ಕ್ ಪ್ರೀಮಿಯಂಗಳು ಪ್ರತಿ ಪ್ರಯಾಣಕ್ಕೆ ಸುಮಾರು 2.50 ಲಕ್ಷ ಡಾಲರ್‌ ನಿಂದ 10 ಲಕ್ಷ ಡಾಲರ್‌ವರೆಗೆ ಏರಿವೆ.

ಹೆಚ್ಚಿನ ಅಪಾಯದ ವಲಯಗಳಲ್ಲಿ ಅಸ್ತಿತ್ವದಲ್ಲಿರುವ ಕವರೇಜ್‌ಗಳನ್ನೇ ರದ್ದುಗೊಳಿಸಿ ದ್ದಾರೆ. ಲಾಯ್ಡ್ಸ್ ಆಫ್ ಲಂಡನ್ ಇಂಥದೊಂದು ವಿಮಾ ಕಂಪನಿ.‌ ಇನ್ನು ಮೀಡಿಯಾಗಳು. ಇವುಗಳ ವಿಚಾರ ಹೇಳುವ ಮುನ್ನ ಹಳೆ ಕಥೆಯೊಂದನ್ನು ಹೇಳಬೇಕು. ಅಮೆರಿಕದ ಹಳದಿ ಪತ್ರಿಕೋದ್ಯಮದ ಪಿತಾಮಹನೆಂದೇ ಬ್ರಾಂಡ್ ಆಗಿರುವ ವಿಲಿಯಂ ರಾಂಡಾಲ್ ಹರ್ಸ್ಟ್ ( William Randolph Hearst) ಆಗ ನ್ಯೂಯಾರ್ಕ್‌ನಲ್ಲಿ ಮಾರ್ನಿಂಗ್ ಜರ್ನಲ್ ಎಂಬ ಪತ್ರಿಕೆ ನಡೆಸುತ್ತಿದ್ದ.

ಆಗಷ್ಟೇ ಕ್ಯೂಬಾ, ಸ್ಪೇನ್‌ನಿಂದ ಮುಕ್ತಿ ಪಡೆಯಲು ಮುಂದಾಗಿತ್ತು. ಅದಕ್ಕೆ ನೆರವಾಗು ತ್ತಿದ್ದದ್ದು ಅಮೆರಿಕ. ಕ್ಯೂಬಾದಲ್ಲಿ ನಡೆಯುತ್ತಿರುವ ದಂಗೆಯ ವರದಿ ಮಾಡುವುದಕ್ಕೆ ಒಬ್ಬ ವರದಿಗಾರನನ್ನು ಹರ್ಸ್ಟ್ ಕಳಿಸಿದ. ಆ ರಿಪೋರ್ಟರ್ ಅಲ್ಲಿ ಹೋಗಿ, ಯುದ್ಧದ ಯಾವುದೇ ಸುಳಿವಿಲ್ಲದ್ದನ್ನು ಕಂಡು ಕಂಗಾಲಾದ. ಇಲ್ಲಿ ಯಾವುದೇ ದಂಗೆ, ಯುದ್ಧ ನಡೆಯುತ್ತಿಲ್ಲ ಎಂದು ಹರ್ಸ್ಟ್ ಸಂದೇಶ ಬಿಟ್ಟ.

ಹರ್ಸ್ಟ್ ಮರುತಂತಿಯಲ್ಲಿ ಆತನಿಗೆ ನೀನು ಅಲ್ಲಿಂದ ವರದಿ, ಚಿತ್ರ ಕಳಿಸು. ನಾನು ಇಲ್ಲಿಂದ ಯುದ್ಧವನ್ನು ಕಳಿಸುತ್ತೇನೆ ಎಂದು ಬರೆದ. ಸರಿ, ವರದಿಗಾರ ಅಲ್ಲಿಂದ ಕಲ್ಪಿತ, ಪ್ರಚೋ ದನಕಾರಿ ವರದಿಗಳನ್ನು ಕಳಿಸತೊಡಗಿದ. ಇದನ್ನೆಲ್ಲ ಓದಿ ರೊಚ್ಚಿಗೆದ್ದ ಅಮೆರಿಕನ್ನರು, ಕ್ಯೂಬನ್ನರಿಗೆ ಸಹಾಯ ಮಾಡುವಂತೆ ಅಮೆರಿಕ ಸರಕಾರದ ಮೇಲೆ ಒತ್ತಡ ಹಾಕಿದರು. ಅಮೆರಿಕ ಕ್ಯೂಬಾಗೆ ಮಿಲಿಟರಿ ನುಗ್ಗಿಸಿತು.

ಹೀಗೆ ಇಲ್ಲದ ಯುದ್ಧವನ್ನು ಮೀಡಿಯಾ ಸೃಷ್ಟಿಸಿತು. ಈ ಘಟನೆ ಹೀಗೇ ನಡೆಯಿತೇ ಎಂಬು ದರ ಬಗ್ಗೆ ತಜ್ಞರಲ್ಲಿ ಭಿನ್ನಾಭಿಪ್ರಾಯ ಇದೆ. ಆದರೆ ಆ ಕಾಲದ ಹಳದಿ ಪತ್ರಿಕೋದ್ಯ ಮದ ಸ್ಪ್ಯಾನಿಶ್- ಅಮೆರಿಕನ್ ಯುದ್ಧವನ್ನು ವ್ಯಾಪಕವಾಗಿ ಪ್ರಭಾವಿಸಿದ್ದಂತೂ ನಿಜ.

ಇದನ್ನು ನೋಡಿದರೆ, ಮೀಡಿಯಾಗಳಿಗೆ ಯುದ್ಧ ಯಾಕೆ ಪ್ರಿಯ ಎಂದು ಗೊತ್ತಾಗುತ್ತದೆ. ದೀಪಾವಳಿ ಪಟಾಕಿಗಳಂತೆ ಸಿಡಿಯುವ ಡ್ರೋನ್‌ಗಳು, ಆಕಾಶದಲ್ಲಿ ಹೊಗೆಯ ಗೆರೆಯೆಳೆ ಯುತ್ತಾ ಹೋಗಿ ನರಕ ಸೃಷ್ಟಿಸುವ ಕ್ಷಿಪಣಿಗಳು, ಎಲ್ಲಿಂದ ಎಲ್ಲಿಗೋ ಬೆಂಕಿಯ ಮಳೆ ಸುರಿಸುವ ಯುದ್ಧವಿಮಾನಗಳು, ಭಸ್ಮೀಭೂತ ನಗರಗಳು, ಛಿದ್ರ ಕಟ್ಟಡಗಳು, ಎಲ್ಲವೂ ತೆರೆ ಮೇಲೆ ನೋಡಲು ಬಹಳ ಚಂದ. ಸಮರ ನೇರವಾಗಿ ತಲುಪದ ಜಾಗಗಳಲ್ಲಿ ಕುಳಿತು ಇವನ್ನು ಸಿನಿಮಾ ನೋಡಿದಂತೆ ನೋಡಬಹುದು.

ಇರಾನಿನ ಶಾಲೆ ಮೇಲೆ ಕ್ಷಿಪಣಿ ಬಿದ್ದು ಇಷ್ಟು ಮಕ್ಕಳನ್ನು ಸಾಯಿಸಿತು ಎಂಬುದು ಕೂಡ ನಮಗೆ ಒಂದು ಸೊಗಸಾದ ವರದಿ. ಇಲ್ಲಿ ಎಲ್ಲವೂ ಥಿಯೇಟರ್. ಯಾರು ಹೆಚ್ಚು ರಂಗು ರಂಗಾದ ವಿನಾಶವನ್ನು ಸೃಷ್ಟಿಸುತ್ತಾರೋ ಅವರಿಗೆ ಅಧಿಕ ಲಾಭ. ಮತ್ತು ಈಗ ನಮಗೆ ಇವನ್ನೆಲ್ಲ ನೋಡಲು ಸೋಶಿಯಲ್ ಮೀಡಿಯಾ ಕೂಡ ಇರುವುದರಿಂದ, ಸಾಂಪ್ರದಾಯಿಕ ಮಾಧ್ಯಮವೂ ಅಗತ್ಯವಿಲ್ಲ.

ಯೂಟ್ಯೂಬ್, ಎಕ್ಸ್, ಫೇಸ್‌ಬುಕ್ ಮೊದಲಾದವರ ಲಾಭ ಎಷ್ಟು ಪಟ್ಟು ಹೆಚ್ಚಿತೋ ಯಾರಿಗೆ ಗೊತ್ತು. ಯುದ್ಧ ಎಂಬುದು ಯಾರಿಗೂ ಗೆಲ್ಲುವ ಬಾಬತ್ತಲ್ಲ. ಗೆದ್ದವ ಸೋತ, ಸೋತವ ಸತ್ತ ಎಂಬ ಮಾತೇ ಇದೆ. ಯುದ್ಧಕ್ಕೆ ಮುಂಗಾಲಪುಟಿಕೆಯಲ್ಲಿ ಹೊರಟ ಅಮೆರಿಕ ಕೂಡ ಈಗ ಹೊರ್ಮುಜ್ ಕಾಲುವೆಗೆ ಬನ್ನಿರೋ ಎಂದು ಮಿತ್ರದೇಶಗಳತ್ತ ಬಾಯಿ ಬಡಿದು ಕೊಳ್ಳುತ್ತಿದೆ.

ಇಸ್ರೇಲ್ ಇನ್ನೊಂದಷ್ಟು ಶಾಶ್ವತ ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಆದರೆ ಇದೆಲ್ಲದರ ನಡುವೆಯೇ ಲಾಭ ಮಾಡುವವರು ಇದ್ದಾರೆ. ಇರಾನ್ ಈ ಸಮರದಲ್ಲಿ ಸೋತ, ಸೋಲುವ ದೇಶ ಎನ್ನುವಂತೆಯೂ ಇಲ್ಲ. ನನ್ನೊಂದಿಗೇ ನಿನ್ನನ್ನೂ ಮುಳುಗಿಸುತ್ತೇನೆ ಎನ್ನುವಂತಿ ರುವ ಅದು ಕಳೆದುಕೊಳ್ಳುವುದೇನೂ ಇಲ್ಲ.

ಖಮೇನಿ ಸತ್ತರೂ ಅಲ್ಲಿನ ಆಡಳಿತ ಗಟ್ಟಿಯಾಗಿ ಉಳಿದಿದೆ. ಯುದ್ಧದಲ್ಲಿ ಬದುಕುಳಿಯು ವುದು ಗೆಲುವಿಗೆ ಕಡಿಮೆಯೇನಲ್ಲ. ಅತ್ತ ಚೀನಾ ಮತ್ತು ರಷ್ಯಾ ತಮ್ಮದೇ ಆದ ರೀತಿಯಲ್ಲಿ ಮಿತ್ರರನ್ನು ಮಾಡಿಕೊಂಡು, ವ್ಯಾಪಾರ ವ್ಯವಹಾರ ಗಟ್ಟಿ ಮಾಡಿಕೊಳ್ಳುತ್ತಿವೆ. ಅಮೆರಿಕ- ಇಸ್ರೇಲ್ ಎಸಗಿರುವ ಕ್ರೌರ್ಯದ ಮುಂದೆ ಉಕ್ರೇನ್‌ನ ಮೇಲೆ ರಷ್ಯಾ ಎಸಗಿರುವ ದೌರ್ಜನ್ಯ ಮರೆಯಾಗಿ ಹೋಗಿದೆ. ಆ ಮಟ್ಟಿಗೆ ಪುಟಿನ್-ಟ್ರಂಪ್ ಎಲ್ಲರೂ ಕೈಕುಲುಕಿಕೊಂಡಿದ್ದಾರೆ.

ಅತ್ತ ಇದೇ ಸಮಯ ಎಂದು ಉತ್ತರ ಕೊರಿಯಾ ಉಕ್ಕೇರುತ್ತಿದೆ. ಇತ್ತ ಅಪ್ಪ-ಅಮ್ಮ ಲಡಾಯಿ ಮಾಡುತ್ತಿರುವಾಗ ಅಂಗಳದಲ್ಲಿ ದೊಡ್ಡ ಮಗ ಸಣ್ಣವನನ್ನು ಚಚ್ಚಿದಂತೆ ಅಫ್ಘಾನಿಸ್ತಾನವನ್ನು ಪಾಕ್ ಚಚ್ಚುತ್ತಿದೆ. ಹೊಸ ವರ್ಲ್ಡ್‌ ಆರ್ಡರ್ ಅಥವಾ ಜಾಗತಿಕ ವ್ಯವಸ್ಥೆ ಉಂಟಾಗುವ ಸೂಚನೆ ಕಾಣಿಸುತ್ತಿದೆ. ಎಲ್ಲರೂ ಲಾಭ ಮಾಡಿದವರೇ. ಹಾಗಾದರೆ ಸೋತವರು, ಸತ್ತವರು, ಹತಾಶರಾದವರು ಯಾರು? ಕೇಳಬೇಡಿ.

ಹರೀಶ್‌ ಕೇರ

View all posts by this author