Ramanand Sharma Column: ಬ್ಯಾಂಕ್ ರಾಷ್ಟ್ರೀಕರಣದ ಐವತ್ತಾರು ವರ್ಷಗಳು
ರಾಷ್ಟ್ರೀಕರಣಕ್ಕೆ ಸಹಮತವಿರದಿದ್ದರೆ ಹಣಕಾಸು ಇಲಾಖೆ ಬಿಟ್ಟು ಕೇವಲ ಉಪಪ್ರಧಾನಿಯಾಗಿ ಮುಂದುವರಿಯುವಂತೆ ಮೊರಾರ್ಜಿಯವರಿಗೆ ಇಂದಿರಾ ಖಡಕ್ಕಾಗಿ ಸೂಚಿಸುವಷ್ಟು ವಿಷಯ ಗಂಭೀರ ವಾಗಿತ್ತಂತೆ. ಈ ಸುಗ್ರೀವಾಜ್ಞೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ವಕೀಲ ನಾನಿ ಪಾಲ್ಕೀ ವಾಲಾ ಇದನ್ನು ವಿರೋಧಿಸಿ ಸುದೀರ್ಘವಾಗಿ ವಾದಿಸಿದ್ದರು. ಆರಂಭದಲ್ಲಿ 34 ತಿಂಗಳ ಮಧ್ಯಂತರ ತಡೆಯಾಜ್ಞೆಯೂ ಬಂದಿತ್ತು.


ವಿತ್ತಲೋಕ
ರಮಾನಂದ ಶರ್ಮಾ
1969ರ ಜುಲೈ 19ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಸುಗ್ರೀವಾಜ್ಞೆಯ ಮೂಲಕ, 50 ಕೋಟಿ ರುಪಾಯಿಗೂ ಮಿಕ್ಕಿದ ಠೇವಣಿಯಿರುವ 14 ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದರು. ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಸದರಿ ರಾಷ್ಟ್ರೀಕರಣದ ಹಿಂದಿನ ಉದ್ದೇಶ ಮತ್ತು ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದರು.
ರಾಷ್ಟ್ರೀಕರಣದ ಮಹತ್ವ ಮತ್ತು ಉದ್ದೇಶವನ್ನರಿಯದ ಜನಸಾಮಾನ್ಯರು, ಕೆಲ ಮಾಧ್ಯಮದವರು ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದರು. ತಮ್ಮೆಲ್ಲಾ ಠೇವಣಿಯನ್ನು ಸರಕಾರ ತೆಗೆದು ಕೊಂಡಿತೇ? ಎಂದು ಠೇವಣಿದಾರರು ಭಯಪಟ್ಟಿದ್ದರು. ತಾವಿನ್ನು ಸರಕಾರಿ ನೌಕರರೆಂದು ಬ್ಯಾಂಕ್ ಸಿಬ್ಬಂದಿಗಳು ಸಂತಸಪಟ್ಟರು. ‘ಇದೊಂದು ರಾಜಕೀಯ ಮಸಲತ್ತು, ಆಡಳಿತದ ವೈಫಲ್ಯವನ್ನು ಮರೆಮಾಚಿಸಲು ತೆಗೆದುಕೊಂಡ ಕ್ರಮ’ ಎಂದು ವಿಪಕ್ಷಗಳು ಇಂದಿರಾರನ್ನು ತರಾಟೆಗೆ ತೆಗೆದು ಕೊಂಡಿದ್ದವು. ಪಕ್ಷದಲ್ಲಿ ಕೃಷ್ಣಕಾಂತರಂಥ ಹಲವು ಸೋಷಲಿಸ್ಟ್ ‘ಯಂಗ್‌ಟರ್ಕ್’ಗಳು ಇದ್ದರೂ, ಕೆಲವು ಹಿರಿಯ ನಾಯಕರಿಗೆ ಇಂದಿರಾರ ಈ ಕ್ರಾಂತಿಕಾರಿ ಆರ್ಥಿಕ ಸುಧಾರಣೆಯ ವಿಷಯದಲ್ಲಿ ಸಹಮತವಿರಲಿಲ್ಲ.
ಇದನ್ನರಿತಿದ್ದ ಇಂದಿರಾ, ತಮ್ಮ ನಂಬುಗೆಯ ಹಲವು ಹಿರಿಯ ಅಧಿಕಾರಿಗಳು, ರಾಜಕಾರಣಿ ಗಳನ್ನಷ್ಟೇ ವಿಶ್ವಾಸಕ್ಕೆ ತೆಗೆದುಕೊಂಡಿದ್ದರಂತೆ. ಇಂಥ ಮಹತ್ವದ ಕ್ರಮದ ಬಗ್ಗೆ ರಿಸರ್ವ್ ಬ್ಯಾಂಕ್ ಗವರ್ನರ್‌ಗೂ ಸುಳಿವು ನೀಡಿರಲಿಲ್ಲವಂತೆ. ಇಂದಿರಾ ಮತ್ತು ಮೊರಾರ್ಜಿ ದೇಸಾಯಿಯವರ ನಡುವೆ ಶೀತಲ ಸಮರ ಶುರುವಾಗಿ ಕಾಂಗ್ರೆಸ್ ಇಬ್ಭಾಗವಾಗಲು ಇದೂ ಒಂದು ಕಾರಣ ಎನ್ನಲಾಗುತ್ತದೆ.
ಇದನ್ನೂ ಓದಿ:Dr Vijay Darda Column: ವಯಸ್ಸೆಂಬುದು ಬರೀ ಸಂಖ್ಯೆಯಷ್ಟೆ, ಬಿಡಿ !
ರಾಷ್ಟ್ರೀಕರಣಕ್ಕೆ ಸಹಮತವಿರದಿದ್ದರೆ ಹಣಕಾಸು ಇಲಾಖೆ ಬಿಟ್ಟು ಕೇವಲ ಉಪಪ್ರಧಾನಿಯಾಗಿ ಮುಂದುವರಿಯುವಂತೆ ಮೊರಾರ್ಜಿಯವರಿಗೆ ಇಂದಿರಾ ಖಡಕ್ಕಾಗಿ ಸೂಚಿಸುವಷ್ಟು ವಿಷಯ ಗಂಭೀರವಾಗಿತ್ತಂತೆ. ಈ ಸುಗ್ರೀವಾಜ್ಞೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ವಕೀಲ ನಾನಿ ಪಾಲ್ಕೀವಾಲಾ ಇದನ್ನು ವಿರೋಧಿಸಿ ಸುದೀರ್ಘವಾಗಿ ವಾದಿಸಿದ್ದರು. ಆರಂಭದಲ್ಲಿ 34 ತಿಂಗಳ ಮಧ್ಯಂತರ ತಡೆಯಾಜ್ಞೆಯೂ ಬಂದಿತ್ತು.
ರಾಷ್ಟ್ರೀಕರಣವು ಉದ್ದೇಶಿತ ಸಾಫಲ್ಯ ನೀಡುತ್ತಿರುವುದನ್ನು ಕಂಡ ಇಂದಿರಾ, ತುರ್ತು ಪರಿಸ್ಥಿತಿಯ ನಂತರದ ಸೋಲಿನ ಬಳಿಕ 1980ರಲ್ಲಿ ಪುನಃ ಅಧಿಕಾರಕ್ಕೆ ಬಂದಾಗ 200 ಕೋಟಿ ರು.ಗೂ ಮಿಕ್ಕಿ ಠೇವಣಿಯಿರುವ 6 ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದರು. ಮೊದಲನೇ ಸುತ್ತಿನಲ್ಲಿ ದೇಶದ ಶೇ.85 ರಷ್ಟು ಬ್ಯಾಂಕಿಂಗ್ ವ್ಯವಹಾರವು ಸರಕಾರಿ ಬ್ಯಾಂಕುಗಳಿಗೆ ದಕ್ಕಿದರೆ, ಎರಡನೇ ಸುತ್ತಿನಲ್ಲಿ ಶೇ.91 ರವರೆಗೆ ದಕ್ಕಿತು.
ಈಗ ಮೂರನೇ ಸುತ್ತಿನ ರಾಷ್ಟ್ರೀಕರಣದ ಕುರಿತು ಕೂಗು ಕೇಳತೊಡಗಿದ್ದು, ಆಯಾ ಬ್ಯಾಂಕುಗಳ ಸಿಬ್ಬಂದಿಗಳು ಮುಷ್ಕರದ ಚಿಂತನೆಯಲ್ಲಿದ್ದಾರೆ. ಇಂದಿರಾರು 14 ಬ್ಯಾಂಕುಗಳನ್ನು ರಾಷ್ಟ್ರೀಕರಿಸು ವಾಗ, ದೇಶಾದ್ಯಂತ 73 ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳಿದ್ದು 8262 ಶಾಖೆಗಳನ್ನು ಹೊಂದಿದ್ದವು.
4646 ಕೋಟಿ ರು. ಠೇವಣಿ ಹೊಂದಿದ್ದ ಅವು 3599 ಕೋಟಿ ರು.ನಷ್ಟು ಸಾಲ ನೀಡಿದ್ದವು. ಆಗ ಬ್ಯಾಂಕಿಂಗ್ ವಲಯದಲ್ಲಿ 2.20 ಲಕ್ಷದಷ್ಟು ಸಿಬ್ಬಂದಿಯಿದ್ದರು. ಇಂದು ದೇಶಾದ್ಯಂತ 1,65,501 ಬ್ಯಾಂಕ್ ಶಾಖೆಗಳಿದ್ದು, ಅವುಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪಾಲು 85,116ರಷ್ಟಿದೆ. ಠೇವಣಿಯು 225.70 ಲಕ್ಷ ಕೋಟಿ ರು.ನಷ್ಟಿದ್ದರೆ, ಸಾಲನೀಡಿಕೆಯ ಪ್ರಮಾಣ 182.40 ಲಕ್ಷ ಕೋಟಿ ರು.ನಷ್ಟಿದೆ.
ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ 7.56 ಲಕ್ಷ, ಖಾಸಗಿ ಬ್ಯಾಂಕುಗಳಲ್ಲಿ 8.45 ಲಕ್ಷ ಉದ್ಯೋಗಿ ಗಳಿದ್ದಾರೆ. ರಾಷ್ಟ್ರೀಕರಣದ ಮೊದಲು ಖಾಸಗಿ ಒಡೆತನದಲ್ಲಿದ್ದ ಬ್ಯಾಂಕುಗಳು, ಜನಸಾಮಾನ್ಯರಿಂದ ಠೇವಣಿಯನ್ನು ಸ್ವೀಕರಿಸಿ ಪ್ರಭಾವಿಗಳಿಗೆ ಮತ್ತು ಸಮಾಜದ ಕೆಲವೇ ವರ್ಗದವರಿಗೆ ಅದರ ಪ್ರಯೋಜನವನ್ನು ನೀಡುತ್ತಿವೆ ಎಂಬ ಆರೋಪವಿತ್ತು.
ದೇಶದ ಸಂಪತ್ತು ಹೀಗೆ ಕೆಲವೇ ವರ್ಗದಲ್ಲಿ ಕೇಂದ್ರೀಕೃತವಾಗುವುದು ರಾಷ್ಟ್ರದ ಹಿತದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂಬು ಚಿಂತನೆಯಿದ್ದ ಚಂದ್ರಶೇಖರ್, ಕೃಷ್ಣಕಾಂತ್ ಮತ್ತು ಮೋಹನ್ ಧಾರಿಯಾ ಮುಂತಾದ ಪಕ್ಷದ ಯುವನೇತಾರರು ಇಂದಿರಾರ ಮೇಲೆ ಒತ್ತಡ ಹಾಕುತ್ತಿದ್ದರು. ಖಾಸಗಿ ಒಡೆತನವನ್ನು ವಿರೋಧಿಸುವ ಕಮ್ಯುನಿಸ್ಟರು ತಮ್ಮ ಅಜೆಂಡಾ ಪೂರೈಸಿಕೊಳ್ಳಲು ಇಂದಿರಾರಿಗೆ ಸಾಥ್ ನೀಡಿದರು; ಕಾಂಗ್ರೆಸ್‌ನಲ್ಲಿ ‘ಸಿಂಡಿಕೇಟ್’ ಎಂದು ಕರೆಯಲ್ಪಡುತ್ತಿದ್ದ, ತಮಗೆ ಅಡಚಣೆ ನೀಡುತ್ತಿದ್ದ ಕೆಲವು ಹಿರಿಯ ಕಾಂಗ್ರೆಸ್ಸಿಗರನ್ನು ನಿಯಂತ್ರಿಸಲು ಇಂದಿರಾರಿಗೆ ತುರ್ತಾಗಿ ಒಂದು ಜನಪರ ಆರ್ಥಿಕ ಕಾರ್ಯಕ್ರಮ ಬೇಕಿತ್ತು.
ಬ್ಯಾಂಕ್ ಕಾರ್ಮಿಕ ಸಂಘಗಳು ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಒತ್ತಾಯಿಸುತ್ತಲೇ ಇದ್ದವು. ‘ಶ್ರೀಸಾಮಾನ್ಯರ ಉಳಿತಾಯದ ಹಣವು ಬ್ಯಾಂಕ್ ಮೂಲಕ ಉಳ್ಳವರ ಉದ್ಧಾರಕ್ಕೆ ಸೀಮಿತವಾಗದೆ, ಶ್ರೀಸಾಮಾನ್ಯರ ಆರ್ಥಿಕ ಬೆಳವಣಿಗೆಗೆ ಬಳಕೆಯಾಗುವಂತಾಗಲು ರಾಷ್ಟ್ರೀಕರಣವೊಂದೇ ಮಾರ್ಗ’ ಎಂದು ಅವು ಮುಷ್ಕರ ನಡೆಸುತ್ತಿದ್ದವು. ಆ ಕಾಲಕ್ಕೆ lucrative job ಎನ್ನಲಾಗುತ್ತಿದ್ದ ಬ್ಯಾಂಕ್ ಉದ್ಯೋಗಗಳು ಪ್ರಭಾವಿಗಳ, ಸಂಪರ್ಕ ಉಳ್ಳವರ ಸ್ವತ್ತಾಗಿ, ಶ್ರೀಸಾಮಾನ್ಯರಿಗೆ ಮರೀಚಿಕೆ ಯಾಗಿದ್ದವು.
‘ಟ್ರೇಡ್ ಫೈನಾನ್ಸ್’ನಲ್ಲಿ ತೊಡಗಿದ್ದ ಬಹುತೇಕ ಬ್ಯಾಂಕುಗಳು ದೇಶದ ಸರ್ವೋನ್ನತ ಅಭಿವೃದ್ಧಿಗೆ ಅವಶ್ಯವಾದ ಕೃಷಿ ಮತ್ತು ಸಣ್ಣ ಉದ್ದಿಮೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದವು. ಈ ವಾಸ್ತವವೇ ಬ್ಯಾಂಕ್ ರಾಷ್ಟ್ರೀಕರಣಕ್ಕೆ ಪ್ರೇರಣೆ ಎನ್ನಲಾಗುತ್ತದೆ.
ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಬ್ಯಾಂಕ್ ಶಾಖೆಗಳ ಜಾಲವು ರಾಷ್ಟ್ರೀಕರಣದಿಂದಾಗಿ ದೇಶದ ಮೂಲೆಮೂಲೆಗೂ ಪಸರಿಸಿತು. ಅಲ್ಲಿಯವರೆಗೆ ನಿರ್ಲಕ್ಷಿಸಲ್ಪಟ್ಟಿದ್ದ ಗ್ರಾಮೀಣ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ದೊರಕುವಂತೆ ಮಾಡಲು, ಬ್ಯಾಂಕ್ ಶಾಖೆಯನ್ನು ತೆರೆಯುವ ನಿಯಮಾ ವಳಿಗೆ ತಿದ್ದುಪಡಿ ಮಾಡಿ, ‘ಗ್ರಾಮಾಂತರದಲ್ಲಿ 3 ಶಾಖೆಗಳನ್ನು ತೆರೆದರೆ ಮಾತ್ರ ಒಂದು ಶಾಖೆಯನ್ನು ಪಟ್ಟಣ-ನಗರಗಳಲ್ಲಿ ತೆರೆಯಬಹುದು’ ಎಂಬ ನಿಬಂಧನೆ ವಿಧಿಸಲಾಯಿತು.
ಇದರಿಂದಾಗಿ ಕ್ರಾಂತಿಯೇ ಆಗಿ ಬಹುತೇಕ ‘ಬ್ಯಾಂಕ್-ರಹಿತ’ ಪ್ರದೇಶಗಳು ಬ್ಯಾಂಕುಗಳನ್ನು ಕಂಡವು. ಬ್ಯಾಂಕುಗಳಿಗಿದ್ದ ‘ಕಮರ್ಷಿಯಲ್’ ಹಣೆಪಟ್ಟಿ ಕಳಚಿ ‘ಸೋಷಿಯಲ್’ ಹಣೆಪಟ್ಟಿ ಏರಿಕೊಂಡಿತು. ಬ್ಯಾಂಕುಗಳಿರುವುದು ಕೇವಲ ಲಾಭಗಳಿಕೆಗಷ್ಟೇ ಅಲ್ಲ ಎಂಬ ಪರಿಕಲ್ಪನೆ ಅನಾವರಣಗೊಂಡು ಅವು ಸಾಮಾನ್ಯ ಗ್ರಾಹಕರ ಮನೆಬಾಗಿಲನ್ನು ಬಡಿಯುವಂತಾಯಿತು.
ಅಲ್ಲಿಯವರೆಗೆ ನಿರ್ಲಕ್ಷಿಸಲ್ಪಟ್ಟಿದ್ದ ಕೃಷಿ, ಸಣ್ಣ-ಮಧ್ಯಮ ಗಾತ್ರದ ಉದ್ದಿಮೆಗಳು ಇಂದು ಉಚ್ಛ್ರಾಯ ಸ್ಥಿತಿಯಲ್ಲಿದ್ದರೆ, ತನ್ಮೂಲಕ ಉದ್ಯೋಗ ಸೃಷ್ಟಿಯಾಗುತ್ತಿದ್ದರೆ, ರಾಷ್ಟ್ರೀಕೃತ ಬ್ಯಾಂಕು ಗಳು ಮತ್ತು ಮೈಚಳಿ ಬಿಟ್ಟು ಸಾಲ ನೀಡುವ ಅವುಗಳ ಧೋರಣೆಯೇ ಅದಕ್ಕೆ ಕಾರಣ. ಸರಕಾರದ ಯಾವುದೇ ಜನಪರ ಯೋಜನೆಯನ್ನು ಇವು ನಿಷ್ಠೆಯಿಂದ ಅನುಷ್ಠಾನಕ್ಕೆ ತರುತ್ತವೆ.
ಪ್ರಧಾನ ಮಂತ್ರಿಗಳ ‘ಜನಧನ’ ಯೋಜನೆಯಡಿ ಇವು 55.02 ಕೋಟಿ ಖಾತೆಗಳನ್ನು ತೆರೆದಿದ್ದು ಖಾಸಗಿ ಬ್ಯಾಂಕುಗಳು ಈ ಬಾಬತ್ತಿನಲ್ಲಿ ಭಾರಿ ಹಿಂದಿವೆ. ದೇಶವಿಂದು 4 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿದ್ದು 2026ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್ ಮಟ್ಟವನ್ನು ಮುಟ್ಟುವುದಿದ್ದರೆ, ಅದರಲ್ಲಿ ಈ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ. ಉದ್ಯೋಗ ಸೃಷ್ಟಿಯಲ್ಲೂ ಇವುಗಳ ಕೊಡುಗೆ ಅನನ್ಯವಾದದ್ದು.
ಆದರೆ, ರಾಷ್ಟೀಕರಣವು ಹಲವು ನಕಾರಾತ್ಮಕ ಬೆಳವಣಿಗೆಗಳನ್ನೂ ಹೊತ್ತು ತಂದಿದೆ. ಬ್ಯಾಂಕು ಗಳಲ್ಲಿ ಏರುತ್ತಿರುವ ಸುಸ್ತಿಸಾಲ ಇದಕ್ಕೊಂದು ಉದಾಹರಣೆ. ರಾಷ್ಟ್ರೀಕರಣದ ನಂತರ ಬ್ಯಾಂಕುಗಳು ಉದಾರವಾಗಿ ಸಾಲ ನೀಡಿದ್ದೇ ಈ ಪರಿಸ್ಥಿತಿಗೆ ಕಾರಣ ಎನ್ನುತ್ತಾರೆ ಬ್ಯಾಂಕಿಂಗ್ ವಿಶ್ಲೇಷಕರು. ಸುಮಾರು 15 ಲಕ್ಷ ಕೋಟಿ ರು.ನಷ್ಟು ಸುಸ್ತಿ ಸಾಲವನ್ನು ‘ರೈಟ್ ಆಫ್’ ಮಾಡಲಾಗಿದ್ದು, ‘ಇದು ರಾಷ್ಟ್ರೀಕರಣದ ಫಲಶ್ರುತಿ’ ಎಂದು ಕೆಲವರು ಆಡಿಕೊಳ್ಳುತ್ತಾರೆ.
ಇದು ‘ಸಾಲ ಮನ್ನಾ’ ಅಲ್ಲದಿದ್ದರೂ ಬ್ಯಾಂಕಿಂಗ್ ಉದ್ಯಮವನ್ನೇ ನಡುಗಿಸುತ್ತಿದೆ ಎನ್ನುತ್ತಾರೆ ಬಲ್ಲವರು. ಬ್ಯಾಂಕುಗಳಿಗೆ ಷೇರು ಬಂಡವಾಳ ನೀಡಲು ಏದುಸಿರು ಬಿಡುತ್ತಿರುವ ಸರಕಾರವು, ಮುಂದಿನ ದಿನಗಳಲ್ಲಿ ತನ್ನ ಷೇರು ಬಂಡವಾಳದ ಪ್ರಮಾಣವನ್ನು ಶೇ.51ಕ್ಕಿಂತ ಕಡಿಮೆ ಮಾಡಲು ಚಿಂತನೆ ನಡೆಸುತ್ತಿದೆಯಂತೆ.
‘ಏರುತ್ತಿರುವ ಸುಸ್ತಿ ಸಾಲವನ್ನು ನಿಯಂತ್ರಿಸಲು ಖಾಸಗೀಕರಣದ ಮಾತು ಕೇಳಿಬರುತ್ತಿದೆ’ ಎಂಬುದು ಕಾರ್ಮಿಕ ಸಂಘಗಳ ಆಕ್ರೋಶ (ಸರಕಾರಿ ನಿಯಂತ್ರಿತ ಐಡಿಬಿಐ ಬ್ಯಾಂಕ್‌ನ ಖಾಸಗೀ ಕರಣದ ಮಾತು ವರ್ಷಗಳಿಂದ ಕೇಳಿಬರುತ್ತಿದೆ). ರಾಷ್ಟ್ರೀಕರಣದ 56ನೇ ವರ್ಷದಲ್ಲಿ ಖಾಸಗೀ ಕರಣದ ಮಾತು, ಸರಕಾರಿ ಬಂಡವಾಳವನ್ನು ಕ್ರಮೇಣ ತಗ್ಗಿಸುವ ಹೆಸರಿನಲ್ಲಿ ಆಗಾಗ ಸುದ್ದಿ ಮಾಡುತ್ತಿರುವುದು ವಿಪರ್ಯಾಸ.
ಇದು ರಾಷ್ಟ್ರೀಕರಣವನ್ನು ಸರಿಯಾಗಿ ನಿಭಾಯಿಸಲಾಗದ್ದರ ಫಲಶ್ರುತಿಯೇ ವಿನಾ, ಈ ವೈಫಲ್ಯವು ರಾಷ್ಟ್ರೀಕರಣದ ಪರಿಕಲ್ಪನೆಯದಲ್ಲ ಎನ್ನುತ್ತಾರೆ ಕಾರ್ಮಿಕ ಸಂಘಗಳವರು ಮತ್ತು ಪ್ರಗತಿಪರರು.
(ಲೇಖಕರು ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕರು)