ಸಂಗತ
ನಿಮಗೆ ಕವಿ ಪ್ರದೀಪ್ ಗೊತ್ತು. ಅವರು ಬರೆದ ಪ್ರಸಿದ್ಧ ಕವಿತೆಯೊಂದರ ಈ ಸಾಲನ್ನು ಕೂಡ ನೀವು ಕೇಳಿರಬಹುದು. ‘ಹಮ್ ಲಾಯೇ ಹೈ ತೂಫಾನ್ ಸೇ ಕಶ್ತಿ ನಿಕಾಲ್ ಕೇ, ಇಸ್ ದೇಶ್ ಕೋ ರಖನಾ ಮೇರೆ ಬಚ್ಚೋಂ ಸಂಭಾಲ್ ಕೇ. (ನಾವು ದೋಣಿಯನ್ನು ಬಿರುಗಾಳಿ ಯಿಂದ ರಕ್ಷಿಸಿ ಸುರಕ್ಷಿತವಾಗಿ ತಂದಿದ್ದೇವೆ ಮಕ್ಕಳೇ. ಇನ್ನು ಈ ದೇಶವನ್ನು ಜೋಪಾನ ವಾಗಿ ರಕ್ಷಿಸಿಕೊಳ್ಳಿ). ಅವರು ನೀಡಿದ ಸಂದೇಶ ಸ್ಪಷ್ಟವಾಗಿದೆ.
‘ಭಾರತದ ಭವಿಷ್ಯ ಮುಂದಿನ ತಲೆಮಾರಿನವರಿಗೆ ಸೇರಿದೆ. ಹೊಸ ತಲೆಮಾರಿನವರ ದೃಷ್ಟಿ ಕೋನ ಹಾಗೂ ಯೋಚನಾ ಲಹರಿಯೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಇದೇ ಕಾರಣಕ್ಕೆ ನಾನು ಕೂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ‘ಜೆನ್‌ಜೀ ಮಕ್ಕಳ ಪ್ರತಿಭಟನೆ ದೇಶ ವಿರೋಧಿ ಕೃತ್ಯವಲ್ಲ’ ಎಂಬ ಹೇಳಿಕೆ ಯನ್ನು ನೂರಕ್ಕೆ ನೂರು ಬೆಂಬಲಿಸುತ್ತೇನೆ.
ಆ ಮಕ್ಕಳು ನಮ್ಮವರು. ಅವರೇ ನಮ್ಮ ಮುಂದಿನ ತಲೆಮಾರಿನ ಧ್ವಜಧಾರಿಗಳು. ಅವರಿಗೆ ನಮ್ಮಂತಹ ಹಳೆಯ ತಲೆಮಾರಿನ ಹಿರಿಯರು ಅಥವಾ ಆಡಳಿತಗಾರರೊಂದಿಗೆ ಕೇವಲ ಚರ್ಚಿಸುವುದಷ್ಟೇ ಬೇಕಿಲ್ಲ. ‘ನಾವೂ ಇಲ್ಲಿಯವರು. ಈ ದೇಶ ನಮಗೆ ಸೇರಿದ್ದು. ಇಲ್ಲಿನ ಸರಕಾರ ನಮಗಾಗಿ ಇದೆ’ ಎಂಬ ಭರವಸೆ ಅವರಿಗೆ ಸಿಗಬೇಕಿದೆ.
ಇದನ್ನೂ ಓದಿ: Dr Vijay Darda Column: ಮುತ್ತಿನ ಕಣಿವೆ ಮೃತ್ಯುವಿನ ಕಣಿವೆ ಆಗಿದ್ದು ಏಕೆ?
ಎರಡು ವಾರದ ಹಿಂದಿನ ಅಂಕಣದಲ್ಲಿ ನಾನು ‘ನಮ್ಮ ಮಕ್ಕಳಿಗೆ ರಾಜಕೀಯ ಬೇಕಿಲ್ಲ, ಅವರಿಗೆ ಪಾರದರ್ಶಕ ಹಾಗೂ ವಿಶ್ವಾಸಾರ್ಹವಾದ ಶಿಕ್ಷಣ ವ್ಯವಸ್ಥೆ ಬೇಕು. ಯುವಕರು ನಂಬಿಕೆ ಕಳೆದುಕೊಂಡರೆ ದೇಶವು ತನ್ನ ಅಮೂಲ್ಯ ಸಂಪತ್ತನ್ನೇ ಕಳೆದುಕೊಳ್ಳುತ್ತದೆ’ ಎಂದು ಬರೆದಿದ್ದೆ. ಯುವಕರಲ್ಲಿ ನಂಬಿಕೆ ಉಳಿಸಬೇಕು ಅಂದರೆ ನಾವು ಅವರ ಭಾಷೆ ಯನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಆತಂಕಗಳು, ಅವರ ನಿರೀಕ್ಷೆಗಳು, ಅವರ ಯೋಚನೆಗಳು ಹಾಗೂ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು.
ತಾಯಿಯೊಬ್ಬ ಳಿಗೆ ತನ್ನ ಮಗು ಏನನ್ನೂ ಬಾಯಿಬಿಟ್ಟು ಹೇಳದಿದ್ದರೂ ಆ ಮಗುವಿನ ಅಗತ್ಯಗಳು ಹೇಗೆ ಅರ್ಥವಾಗುತ್ತವೆಯೋ ಹಾಗೆ ಈ ಯುವಜನತೆಯ ಭಾವನೆಗಳು ಸರಕಾರ ಕ್ಕೆ ಅರ್ಥವಾಗಬೇಕು. ಇಂದಿನ ಬಹುತೇಕ ರಾಜಕೀಯ ನಾಯಕರು ಹಳೆಯ ತಲೆಮಾರಿ ನವರು. ಇವರಿಗೆ ಹಿರಿಯರನ್ನು ಗೌರವಿಸಬೇಕು ಎಂದು ಬಾಲ್ಯದಲ್ಲಿ ಹೇಳಿಕೊಡಲಾಗಿತ್ತು. ಅದನ್ನು ಇವರು ಮರುಪ್ರಶ್ನೆ ಮಾಡದೆ ಒಪ್ಪಿಕೊಂಡಿದ್ದರು. ನಾನು ಕೂಡ ಇದೇ ತಲೆಮಾರಿಗೆ ಸೇರಿದವನು. ಆದರೆ ಇಂದಿನ ಯುವಕರು ಯಾವುದನ್ನೂ ಬೇಷರತ್ತಾಗಿ ಒಪ್ಪಿಕೊಳ್ಳುವುದಿಲ್ಲ.
‘ನಾವು ಹಿರಿಯರನ್ನು ಗೌರವಿಸುತ್ತೇವೆ, ಆದರೆ ಅದಕ್ಕೂ ಮೊದಲು ಆ ಹಿರಿಯ ವ್ಯಕ್ತಿ ಗೌರವಕ್ಕೆ ಯೋಗ್ಯ ಎಂಬುದು ನಮಗೆ ಮನವರಿಕೆಯಾಗಬೇಕು!’ ಎಂದು ಜೆನ್ ಝೀಗಳು ಹೇಳುತ್ತಾರೆ. ಅಂದರೆ, ನಮ್ಮ ರಾಜಕೀಯ ನಾಯಕರು ಮೊದಲು ಜೆನ್ ಝೀಗಳ ಗೌರವವನ್ನು ಸಂಪಾದನೆ ಮಾಡಬೇಕು. ಅದಕ್ಕಾಗಿ ಅವರು ಆ ಮಕ್ಕಳ ಜೊತೆಗೆ ಅವರದೇ ಭಾಷೆಯಲ್ಲಿ ಸಂವಹನ ನಡೆಸಬೇಕು. ನಮ್ಮ ಯುವಕರು ಯಾವುದೇ ಬ್ರ್ಯಾಂಡ್‌ಗೆ ಜೋತುಬಿದ್ದವರಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ನನಗೆ ಸಂತೋಷ ಕೊಟ್ಟ ಸಂಗತಿ ಏನೆಂದರೆ, ಮೋಹನ ಭಾಗವತ್ ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಅವರು ಮುಂಬೈನಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನ 15ನೇ ವಾರ್ಷಿಕೋತ್ಸವದಲ್ಲಿ ಇತ್ತೀಚೆಗೆ ಮಾತನಾಡುವಾಗ ಈ ಬಗ್ಗೆ ಪ್ರಜ್ಞಾ ಪೂರ್ವಕವಾಗಿ ಉಲ್ಲೇಖಿಸಿದರು. ಅಲ್ಲಿ ‘ಇಂಡಿಯಾಸ್ ಇಂಟರ್‌ನ್ಯಾಷನಲ್ ಮೂವ್ ಮೆಂಟ್ ಟು ಯುನೈಟ್ ನೇಶನ್ಸ್’ (ಐಐಎಂಯುಎನ್) ಸಂಸ್ಥೆಯವರು ಭಾಗವತ್ ಜೊತೆ ಸಂವಾದ ಏರ್ಪಡಿಸಿದ್ದರು. ಅಲ್ಲಿ ಅವರು ಆಡಿದ ಮಾತುಗಳು ಪ್ರಜಾಪ್ರಭುತ್ವ ರಾಷ್ಟ್ರದ ನಾಯಕತ್ವಕ್ಕೆ ಪ್ರಮುಖ ಪಾಠದಂತಿದ್ದವು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಕೂಡ ಜನಾಭಿಪ್ರಾಯವನ್ನು ರೂಪಿಸುವ ಒಂದು ನ್ಯಾಯಯುತವಾದ ಮಾರ್ಗ. ಜೆನ್ ಝೀಗಳ ಬೇಡಿಕೆ ಸರಿಯಾಗಿದೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ಸಾಕಷ್ಟು ಕೆಲಸ ಆಗಬೇಕಿದೆ. ಆದರೆ ಆ ಕೆಲಸ ನಡೆಯು ತ್ತಿಲ್ಲ. ಯುವಕರು ಅದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅವರ ಜೊತೆಗೆ ಮಾತುಕತೆ ನಡೆಸುವ ಅಗತ್ಯವಿದೆ. ಆದರೆ ಆ ಮಾತುಕತೆಯ ಉದ್ದೇಶ ಒಮ್ಮತವನ್ನು ಮೂಡಿಸುವುದಾಗಿರಬೇಕೇ ಹೊರತು ಸಮಾಜದಲ್ಲಿ ಇರುವ ಅಂತರವನ್ನು ಇನ್ನಷ್ಟು ಹೆಚ್ಚಿಸುವುದಾಗಬಾರದರು. ಯಾವುದೇ ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯಭೇದಗಳು, ಬೇರೆ ಬೇರೆ ದೃಷ್ಟಿಕೋನಗಳು ಇದ್ದೇ ಇರುತ್ತವೆ. ಪ್ರತಿಭಟನೆಯ ವೇಳೆ ಅಂತಹ ಭಿನ್ನಾಭಿಪ್ರಾಯ ಗಳು ಬಹಿರಂಗವಾಗಿ ವ್ಯಕ್ತವಾಗುತ್ತವೆ. ಆಗ ಚರ್ಚೆಯ ಮೂಲಕವೇ ಒಮ್ಮತ ಮೂಡಲು ಸಾಧ್ಯ. ಅಂದರೆ, ಎಲ್ಲಕ್ಕಿಂತ ಮುಖ್ಯವಾದುದು ಒಮ್ಮತ.
ಭಾಗವತ್ ಅವರ ಅಭಿಪ್ರಾಯ ಸಂಪೂರ್ಣ ಸರಿಯಾಗಿದೆ. ಯಾವುದೇ ಸಮಸ್ಯೆ ಬಗೆಹರಿಸಲು ಅರ್ಥ ಪೂರ್ಣವಾದ ಚರ್ಚೆ ನಡೆಯಲೇಬೇಕು. ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನೇ ನೋಡಿ. ಉಭಯ ದೇಶಗಳ ನಡುವೆ ಇರುವ ಗಡಿ ಜಗಳ ಆಗಾಗ ಉಲ್ಬಣಗೊಂಡು ಅತಿರೇಕಕ್ಕೆ ಹೋಗುತ್ತದೆ. ಆದರೂ ಉಭಯ ಪಕ್ಷಗಾರರು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ. ಕಳೆದ ವಾರ ಕೂಡ ಭಾರತ ಮತ್ತು ಚೀನಾದ ಅಽಕಾರಿಗಳು ಗಡಿ ವಿವಾದದ ಬಗ್ಗೆ ಸಭೆ ನಡೆಸಿದ್ದರು.
ಇನ್ನು, ಪಾಕಿಸ್ತಾನದ ಜೊತೆಗೂ ಭಾರತದ ಸಂಬಂಧ ಸುದೀರ್ಘ ಕಾಲದಿಂದ ಚೆನ್ನಾಗಿಲ್ಲ. ಆದರೂ ಎರಡೂ ಕಡೆಯಿಂದ ಮಾತುಕತೆಯ ಪ್ರಸ್ತಾಪ ಆಗುತ್ತಲೇ ಇರುತ್ತದೆ. ಆಪರೇಷನ್ ಸಿಂದೂರ್ ಸಮಯ ದಲ್ಲೂ ಕೂಡ ಭಾರತ-ಪಾಕ್ ನಡುವಿನ ಸಂವಹನವೇ ಕೊನೆಗೆ ಸಂಘರ್ಷವನ್ನು ನಿಲ್ಲಿಸಿತು. ಇದರ ಅರ್ಥವೇನು? ಎಂತಹುದೇ ಸಂದರ್ಭದಲ್ಲೂ ಪರಸ್ಪರ ಮಾತುಕತೆ ನಡೆಸುವುದು ಅತ್ಯಂತ ಅವಶ್ಯಕ. ಮಾತುಕತೆಯೇ ನಿಂತುಹೋದರೆ ಸಮಸ್ಯೆ ಯಾವುದೇ ಕಾರಣಕ್ಕೂ ಬಗೆಹರಿಯುವುದಿಲ್ಲ. ಪರಿಸ್ಥಿತಿ ಏನಿದೆಯೋ ಅದು ಅಲ್ಲಿಗೇ ನಿಂತುಬಿಡುತ್ತದೆ.
ಈ ನಡುವೆ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವ ಸಮಸ್ಯೆ ನಮ್ಮ ದೇಶದ ಯುವಕರ ಭವಿಷ್ಯಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಇತ್ತೀಚಿನ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೂ ಮೊದಲೇ 125ಕ್ಕೂ ಹೆಚ್ಚು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದೇಶದಲ್ಲಿ ನಡೆದಿದ್ದವು. ಭ್ರಷ್ಟಾಚಾರದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನುಸರಿಸುತ್ತಿರುವ ಶೂನ್ಯ ಸಹಿಷ್ಣುತೆಯ ನೀತಿ ನಮಗೆಲ್ಲರಿಗೂ ಗೊತ್ತೇ ಇದೆ. ಆದರೂ ಕೆಲ ಶಿಕ್ಷಣ ಸಂಸ್ಥೆಗಳ ಹಾಗೂ ಪರೀಕ್ಷಾ ಪ್ರಾಧಿಕಾರಗಳ ಕಾರ್ಯ ನಿರ್ವಹಣೆಯ ಬಗ್ಗೆ ಮೇಲಿಂದ ಮೇಲೆ ಕಳವಳ ಹಾಗೂ ಅಪನಂಬಿಕೆ ವ್ಯಕ್ತವಾಗುತ್ತಿದೆ. ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದ ತಕ್ಷಣವೇ ಕೇಂದ್ರ ಸರಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೆ ಪರಿಸ್ಥಿತಿ ಈಗಿನಷ್ಟು ವಿಕೋಪಕ್ಕೆ ಹೋಗುತ್ತಲೇ ಇರಲಿಲ್ಲ.
ನಾನಿಲ್ಲಿ ರಾಹುಲ್ ಗಾಂಧಿಯವರ ಹೆಸರು ಪ್ರಸ್ತಾಪಿಸಿದರೆ ಕೆಲವರು ಇದನ್ನು ರಾಜಕೀಯದ ಕನ್ನಡಕದಲ್ಲಿ ನೋಡಲು ಆರಂಭಿಸುತ್ತಾರೆ. ಪರವಾಗಿಲ್ಲ. ಆದರೆ ಗಮನಿಸಬೇಕಾದ ಸಂಗತಿ ಏನೆಂದರೆ, ರಾಹುಲ್ ಗಾಂಧಿ ಕೂಡ ವಿದ್ಯಾರ್ಥಿಗಳ ನ್ಯಾಯ ಯುತ ಕಳವಳವನ್ನೇ ವ್ಯಕ್ತಪಡಿಸುತ್ತಿದ್ದಾರೆ. ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ನಮ್ಮಲ್ಲಿ ಶಾಸ್ತ್ರಾರ್ಥ ಅಥವಾ ವಾಕ್‌ಪ್ರತಿಯೋಗಿತಾ ಎಂಬ ಬೌದ್ಧಿಕ ಚರ್ಚೆಯ ಸಂಪ್ರದಾಯವಿದೆ ಎಂದು ಮೋಹನ್ ಭಾಗವತ್ ಹೇಳಿದರು. ಅದರಲ್ಲಿ ಎರಡೂ ಪಕ್ಷಗಾರರ ವಾದ ಮಂಡನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅಂತಿಮವಾಗಿ ಸೂಕ್ತ ನಿರ್ಧಾರಕ್ಕೆ ಬರಲಾಗುತ್ತದೆ. ಇಂತಹ ಶಾಸ್ತ್ರಾರ್ಥದ ಫಲಿತಾಂಶವನ್ನು ಯಾವತ್ತೂ ಒಬ್ಬರ ಜಯ ಅಥವಾ ಇನ್ನೊಬ್ಬರ ಸೋಲು ಎಂದು ಪರಿಗಣಿಸಬಾರದು.
ಸರಿಯಾದ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿದೆ ಎಂದು ಧನಾತ್ಮಕವಾಗಿ ಅದನ್ನು ಸ್ವೀಕರಿಸ ಬೇಕು. ಹಿಂದೊಮ್ಮೆ ಓದಿದ್ದ ಕವಿತೆಯೊಂದರ ಸಾಲು ನೆನಪಾಗುತ್ತಿದೆ. ‘ಹರ್ ಪೀಡಿ ಕೋ ಅಗಲೇ ಪೀಡಿ ಬಿಗಡಿ ಸಿ ಲಗತೀ ಹೈ, ಕ್ಯೋಂಕಿ ಉಸೇ ಬದಲಾವ್ ಸೇ ಜ್ಯಾದಾ ಅಪನಿ ಆದತೋಂ ಸೇ ಪ್ರೇಮ್ ಹೋತಾ ಹೈ. (ಪ್ರತಿಯೊಂದು ತಲೆಮಾರಿನವರಿಗೂ ತಮ್ಮ ಮುಂದಿನ ತಲೆಮಾರಿನವರು ಕೆಟ್ಟುಹೋಗಿದ್ದಾರೆ ಎಂದೇ ಅನ್ನಿಸುತ್ತದೆ. ಏಕೆಂದರೆ ಅವರು ಬದಲಾವಣೆಗಿಂತ ಹೆಚ್ಚಾಗಿ ತಮ್ಮ ಅಭ್ಯಾಸಗಳನ್ನೇ ಹೆಚ್ಚು ಪ್ರೀತಿಸುತ್ತಾರೆ.)
ವಿಕಾಸವಾದದ ಮೂಲಭೂತ ಸಿದ್ಧಾಂತವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತಲೆಮಾರಿನಿಂದ ತಲೆಮಾರಿಗೆ ಮನುಷ್ಯನ ಮೆದುಳು ಚುರುಕಾಗುತ್ತಾ ಹೋಗುತ್ತದೆ. ಹೀಗಾಗಿ ನಮಗಿಂತ ನಮ್ಮ ಮುಂದಿನ ತಲೆಮಾರಿನವರು ಹೆಚ್ಚಿನ ಬುದ್ಧಿಶಕ್ತಿ ಹೊಂದಿರುತ್ತಾರೆ. ಆ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು. ಜೆನ್ ಝೀಗಳ ಮುಂದೆ ಜಗತ್ತು ವಿಸ್ತಾರವಾಗಿ ಹರಡಿಕೊಂಡಿದೆ. ಅದನ್ನು ವಿಶಾಲವಾದ ದೃಷ್ಟಿಕೋನದಿಂದ ನಮ್ಮ ಮಕ್ಕಳು ನೋಡುತ್ತಿದ್ದಾರೆ. ಆದರೆ ಆ ಮಕ್ಕಳು ಸರಿಯಾದ ದಾರಿಯಲ್ಲಿ ಹೋಗುವುದಕ್ಕೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನಮ್ಮ ಮೇಲಿದೆ.
ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅವರು ವಿಮರ್ಶೆ ಮಾಡುವುದಕ್ಕೆ ಅಡ್ಡಿಯಿಲ್ಲ. ಆದರೆ ತರಾತುರಿಯಲ್ಲಿ ‘ಹಳೆಯದೆಲ್ಲವೂ ಅಸಂಬದ್ಧ’ ಎಂದು ತಿರಸ್ಕರಿಸ ಬಾರದು. ಅವರೂ ಕೂಡ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಅರ್ಥ ಮಾಡಿಕೊಂಡ ಮೇಲೂ ಅದರಿಂದ ಏನೂ ಪ್ರಯೋಜನವಿಲ್ಲ ಎಂದು ಅವರಿಗೆ ಅನ್ನಿಸಿದರೆ ಬಿಟ್ಟುಬಿಡಲಿ, ನಮ್ಮದೇನೂ ತಕರಾರಿಲ್ಲ.
ಒಂದಂತೂ ನಿಜ; ದೇಶದ ನೀತಿ ನಿರೂಪಕರು ಇದನ್ನು ನೆನಪಿಡಬೇಕು. ಯಾವ ದೇಶ ಅಥವಾ ಸಂಸ್ಥೆಯು ಯುವಕರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತದೆ ಯೋ ಅದು ಗಂಭೀರ ದುಷ್ಪರಿಣಾಮ ಗಳನ್ನು ಎದುರಿಸುವುದು ಅನಿವಾರ್ಯವಾಗುತ್ತದೆ.
ಚಿಕನ್ ನೆಕ್ ಅಲ್ಲ, ಎಲಿಫೆಂಟ್ ಟ್ರಂಕ್!
ಈಶಾನ್ಯ ರಾಜ್ಯಗಳನ್ನು ಭಾರತದ ಮುಖ್ಯ ಭೂಮಿಯ ಜೊತೆಗೆ ಬೆಸೆಯುವ ಸಿಲಿಗುರಿ ಕಾರಿಡಾರ್ ಅನ್ನು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗಿನಿಂದಲೂ ಚಿಕನ್ ನೆಕ್ ಎಂದು ಕರೆಯುವುದು ರೂಢಿಯಲ್ಲಿ ಬಂದಿದೆ. ಅತ್ಯಂತ ಕಿರಿದಾದ ಪಾಯಿಂಟ್‌ನಲ್ಲಿ ಈ ಭಾಗ ಕೇವಲ 22 ಕಿಲೋಮೀಟರ್ ಅಗಲವಿದೆ. ಚೀನಾ ಮತ್ತು ಪಾಕಿಸ್ತಾನ ದೇಶಗಳು ಬಹಳ ವರ್ಷಗಳಿಂದ ಈ ಚಿಕನ್ ನೆಕ್ ಪ್ರದೇಶವನ್ನು ಭಾರತದಿಂದ ಕತ್ತರಿಸಿ ಕಬಳಿಸಬೇಕು ಎಂಬ ಹೊಂಚು ಹಾಕುತ್ತಿವೆ. ಆದರೆ ಭಾರತ ಇತ್ತೀಚೆಗೆ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಈಗ ಈ ಪ್ರದೇಶವನ್ನು ಚಿಕನ್ ನೆಕ್ ಎಂದು ಕರೆಯುವುದರ ಬದಲು ಎಲಿಫೆಂಟ್ ಟ್ರಂಕ್ ಎಂದು ಕರೆಯಲಾರಂಭಿಸಿದೆ. ಅಂದರೆ, ಕೋಳಿಯ ಕುತ್ತಿಗೆ ಬದಲು ಆನೆಯ ಸೊಂಡಿಲು.
ಕೋಳಿಯ ಕುತ್ತಿಗೆ ಬಹಳ ದುರ್ಬಲ, ಆದರೆ ಆನೆಯ ಸೊಂಡಿಲು ತುಂಬಾ ಶಕ್ತಿಶಾಲಿ. ಸೊಂಡಿಲು ಮೃದು ವಾಗಿದ್ದರೂ ಅತ್ಯಂತ ಶಕ್ತಿಶಾಲಿಯಾದ ಶತ್ರುವನ್ನು ಕೂಡ ಅದು ಮಂಡಿಯೂರುವಂತೆ ಮಾಡಬಲ್ಲದು. ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಎಲಿಫೆಂಟ್ಸ್ ಟ್ರಂಕ್ ಪ್ರದೇಶವನ್ನು ವೀಕ್ಷಣೆ ಮಾಡಿದ್ದಾರೆ. ಅಂದರೆ, ಶತ್ರುಗಳಿಗೆ ಭಾರತ ನೀಡಿರುವ ಸಂದೇಶ ಸ್ಪಷ್ಟವಾಗಿದೆ: ನಮಗೆ ಸವಾಲೆಸೆಯುವ ಯೋಚನೆ ಕೂಡ ಮಾಡಬೇಡಿ.. ಇಲ್ಲದಿದ್ದರೆ..!
ನಾವೇಕೆ ಚಿಂತೆ ಮಾಡಬೇಕು?
ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ನ್ಯಾಟೋ ರೀತಿಯ ಒಕ್ಕೂಟ ವೊಂದನ್ನು ರಚಿಸಿಕೊಂಡಿವೆ. ಈ ಮೂರರ ಪೈಕಿ ಯಾವೊಂದು ದೇಶದ ಮೇಲೆ ದಾಳಿ ನಡೆದರೂ ಇನ್ನೆರಡು ದೇಶಗಳು ಅದು ತಮ್ಮ ಮೇಲೆ ನಡೆದ ದಾಳಿಯೆಂದೇ ಭಾವಿಸಿ ಯುದ್ಧಕ್ಕೆ ಧುಮುಕುತ್ತವೆ. ಈ ಮೂರೂ ದೇಶಗಳು ಮುಸ್ಲಿಂ ದೇಶಗಳಾಗಿರುವುದರಿಂದ ಇದನ್ನು ಮುಸ್ಲಿಂ ನ್ಯಾಟೋ ಎಂದು ಮಾಧ್ಯಮಗಳು ಕರೆಯತೊಡಗಿವೆ. ಮುಸ್ಲಿಂ ದೇಶಗಳ ಒಕ್ಕೂಟ ಎಂಬ ಕಾರಣದಿಂದಲೇ ಅದರ ಬಗ್ಗೆ ಸಾಕಷ್ಟು ಗದ್ದಲ, ಊಹಾಪೋಹಗಳೂ ಹುಟ್ಟಿಕೊಂಡಿವೆ. ಆದರೆ ಭಾರತ ಈ ಬಗ್ಗೆ ಕಳವಳ ಪಡುವಂಥದ್ದೇನೂ ಇಲ್ಲ ಎಂದೇ ನನ್ನ ಭಾವನೆ. ಆ ಮೂರೂ ದೇಶಗಳ ಮಿಲಿಟರಿ ಶಕ್ತಿಯನ್ನು ಸೇರಿಸಿದರೆ 14 ಲಕ್ಷ ಸೈನಿಕರಾಗು ತ್ತಾರೆ. ನಮ್ಮ ದೇಶದ ಸಶಸ್ತ್ರ ಪಡೆಗಳ ಬಲವೊಂದೇ ಅದಕ್ಕಿಂತ ಜಾಸ್ತಿಯಿದೆ. ಹೀಗಾಗಿ ಮುಸ್ಲಿಂ ನ್ಯಾಟೋ ಒಕ್ಕೂಟಕ್ಕೂ ಭಾರತಕ್ಕೂ ಯಃಕಶ್ಚಿತ್ ಹೋಲಿಕೆ ಕೂಡ ಮಾಡುವುದಕ್ಕೆ ಆಗದು, ಬಿಡಿ ಸರ್!