ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌R T Vittalmurthy Column: ಗಡ್ಕರಿ-ಸಿಂಗ್, ಬಿಜೆಪಿಯ ಹೊಸ ವಿಂಗ್

ಹೀಗೆ ಸಾವಂತ್ ಮತ್ತು ಫಡ್ನವೀಸ್ ಅವರ ಆಪರೇಷನ್ನಿಗೆ ಬ್ರೇಕ್ ಬೀಳಬಹುದು ಎಂಬ ಕಾರಣಕ್ಕಾಗಿ ಯೇ ಮೋದಿ- ಅಮಿತ್ ಶಾ ಈಗ ಹೊಸ ವಿಂಗನ್ನು ಆಪರೇಷನ್ನಿಗೆ ಇಳಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಈ ವಿಂಗ್ ನಲ್ಲಿರುವವರು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್.

ಗಡ್ಕರಿ-ಸಿಂಗ್, ಬಿಜೆಪಿಯ ಹೊಸ ವಿಂಗ್

ಮೂರ್ತಿಪೂಜೆ

ಮೊನ್ನೆ ದಿಲ್ಲಿಯ ಬಿಜೆಪಿ ಕಂಪೋಂಡಿನಿಂದ ತೇಲಿ ಬಂದ ಸುದ್ದಿ ಕರ್ನಾಟಕದ ಕಮಲ ಪಾಳಯ ದಲ್ಲಿ ಸಂಚಲನ ಮೂಡಿಸಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರನ್ನು ಹೊಸ ಆಪರೇಷನ್ನಿಗೆ ನಿಯೋಜಿಸಲಾಗಿದೆ ಎಂಬುದು ಈ ಸುದ್ದಿ. ಅಂದ ಹಾಗೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿನ ಬೆಳವಣಿಗೆಗಳ ಮೇಲೆ ಕಣ್ಣಿಡಲು, ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲು ಬಿಜೆಪಿ ವರಿಷ್ಠರು ಇಬ್ಬರು ನಾಯಕರಿಗೆ ಸೂಚಿಸಿದ್ದರು. ಈ ಪೈಕಿ ಒಬ್ಬರು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮತ್ತೊಬ್ಬರು ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್.

ಹೀಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಡಲು ಈ ಇಬ್ಬರು ನಾಯಕರನ್ನು ನೇಮಿಸಲು ಒಂದು ಕಾರಣವಿತ್ತು. ಅದೆಂದರೆ ಇಬ್ಬರೂ ನಾಯಕರು ಕರ್ನಾಟಕಕ್ಕೆ ಆತುಕೊಂಡ
ರಾಜ್ಯದವರು ಮತ್ತು ಇಲ್ಲಿನ ಎಲ್ಲ ಪಕ್ಷಗಳ ಮುಖಂಡರೊಂದಿಗೆ ಸಂಪರ್ಕ ಇದ್ದವರು ಎಂಬುದು. ಕುತೂಹಲದ ಸಂಗತಿ ಎಂದರೆ ಬಿಜೆಪಿ ವರಿಷ್ಠರ ಈ ಲೆಕ್ಕಾಚಾರ ಹುಸಿಯಾಗಲಿಲ್ಲ. ಅದರಲ್ಲೂ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕರ್ನಾಟಕದ ರಾಜಕಾರಣದ ಒಂದು ಮಹತ್ವದ ಅಂಶವನ್ನು ಹಿಡಿದುಕೊಂಡು ವಿವರವಾಗಿ ಅಧ್ಯಯನ ಮಾಡಿದರು.

ಅದರ ಪ್ರಕಾರ, 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಕಾಂಗ್ರೆಸ್ ಶೇ.42.88ರಷ್ಟು ಮತಗಳನ್ನು ಪಡೆದಿದ್ದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಶೇ.49.29 ರಷ್ಟು ಮತಗಳನ್ನು ಹಂಚಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳನ್ನು ಕನ್‌ಸಾಲಿಡೇಟ್ ಮಾಡಿದರೆ ಕಾಂಗ್ರೆಸ್ ಓಟಕ್ಕೆ ಕಡಿವಾಣ ಹಾಕಬಹುದು ಎಂಬುದು ಪ್ರಮೋದ್ ಸಾವಂತ್ ಲೆಕ್ಕಾಚಾರ. ಈ ಲೆಕ್ಕಾಚಾರಕ್ಕೆ ಪೂರಕವಾಗಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ರಿಪೋರ್ಟು ಕಳಿಸಿಕೊಟ್ಟ ಪ್ರಮೋದ್ ಸಾವಂತ್, “ಕರ್ನಾಟಕದ ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಸಾಧಿತವಾದರೆ 2024ರ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತು ಪ್ಲಸ್ ಸೀಟು ಗಳನ್ನು ಗೆಲ್ಲಬಹುದು. ಇಲ್ಲದಿದ್ದರೆ ಬಿಜೆಪಿಯ ಗಳಿಕೆ ಪ್ರಮಾಣ ಆರರಿಂದ ಎಂಟಕ್ಕೆ ಸೀಮಿತವಾಗ ಬಹುದು" ಎಂದು ವಿವರಿಸಿದ್ದರು.

ಇದನ್ನೂ ಓದಿ: R T VittalMurthy Column: ಶುರುವಾಗಲಿದೆ ನಿಖಿಲ್‌ ಪಟ್ಟಾಭಿಷೇಕ ಯಾತ್ರೆ

ಯಾವಾಗ ಪ್ರಮೋದ್ ಸಾವಂತ್ ಇಂಥದೊಂದು ರಿಪೋರ್ಟು ಕಳಿಸಿಕೊಟ್ಟರೋ, ಅಮಿತ್ ಶಾ ಕೂಡ ಈ ವಿಷಯದಲ್ಲಿ ಆಸ್ಥೆ ವಹಿಸಿ ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜತೆ ಮಾತುಕತೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರ ಇಶಾರೆಯ ಮೇಲೆ ಬಿಜೆಪಿ-ಜೆಡಿಎಸ್ ಮೈತ್ರಿ ವಿಷಯವನ್ನು ಫೈನಲೈಸ್ ಮಾಡಿದರು. ಮುಂದೆ ಈ ಮೈತ್ರಿ ಎಷ್ಟು ಪವರ್ ಫುಲ್ಲಾಗಿ ವರ್ಕ್‌ಔಟ್ ಆಯಿತೆಂದರೆ ಲೋಕಸಭಾ ಚುನಾವಣೆಯಲ್ಲಿ ಅದು ಹತ್ತೊಂಬತ್ತು ಕ್ಷೇತ್ರ ಗಳಲ್ಲಿ ಗೆಲುವು ಸಾಧಿಸಿತು. ಗಮನಿಸಬೇಕಾದ ಸಂಗತಿ ಎಂದರೆ ಅವತ್ತು ಕರ್ನಾಟಕದ 28 ಲೋಕ ಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರ ಕಾಂಗ್ರೆಸ್ಸಿಗಿತ್ತಾದರೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅದನ್ನು ವಿಫಲಗೊಳಿಸಿತ್ತು. ಯಾವಾಗ ಇದು ಸಾಧ್ಯವಾಯಿತೋ, ಆಗ ಎರಡನೇ ಹಂತದ ಆಪರೇಷನ್ನಿಗೆ ಇಳಿದ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಮತ್ತೊಂದು ಅಂಶವನ್ನು ಮುಂದಿಟ್ಟುಕೊಂಡು ವರ್ಕ್‌ಔಟ್ ಮಾಡ ತೊಡಗಿದರು.

ಅದೆಂದರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಮಧ್ಯೆ ಶೀತಲ ಸಮರವಾಗಿ ಮಾರ್ಪಟ್ಟಿದ್ದ ಅಧಿಕಾರ ಹಂಚಿಕೆ ಒಪ್ಪಂದ. ಅದರ ಪ್ರಕಾರ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ, ಎರಡೂವರೆ ವರ್ಷಗಳ ಕಾಲ ಡಿ.ಕೆ. ಶಿವಕುಮಾರ್ ಸಿಎಂ ಅಂತ ಒಂದು ಬಣ ಹೇಳತೊಡಗಿದರೆ, “ನೋ, ನೋ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ" ಅಂತ ಮತ್ತೊಂದು ಬಣ ವಾದಿಸತೊಡಗಿತ್ತು.

ಇಂಥ ವಾದಗಳ ಎಳೆ ಹಿಡಿದ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಒಂದು ತೀರ್ಮಾನಕ್ಕೆ ಬಂದಿದ್ದರು. ಅದರ ಪ್ರಕಾರ, ಅಧಿಕಾರ ಹಂಚಿಕೆಯ ಹೆಸರಿನಲ್ಲಿ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯನ್ನು ತೊರೆಯುವುದು ಅನಿವಾರ್ಯವಾದರೆ ಕಾಂಗ್ರೆಸ್ಸಿನ ಬಹುತೇಕ ಶಾಸಕರು ಪಕ್ಷ ತೊರೆಯಲು ಸಜ್ಜಾಗುತ್ತಾರೆ ಎಂಬುದು. ಹೀಗಾಗಿ ಈಗಿನಿಂದಲೇ ಕಾಂಗ್ರೆಸ್ಸಿನಲ್ಲಿರುವ ಸಿದ್ದರಾಮಯ್ಯ ಬಣದ ಶಾಸಕರೊಂದಿಗೆ ಸಂಪರ್ಕದಲ್ಲಿದ್ದರೆ ದೊಡ್ಡ ಬಣವನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಕಡೆ ಸೆಳೆದುಕೊಳ್ಳಬಹುದು ಎಂಬ ಲೆಕ್ಕಾಚಾರಕ್ಕಿಳಿದ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ವಿಧ್ಯುಕ್ತವಾಗಿಯೇ ಆ ಕಾರ್ಯಕ್ಕಿಳಿದರು.

Gad-singh

ಇದರ ಪರಿಣಾಮವಾಗಿ ಈ ಜೋಡಿಯ ಸಂಪರ್ಕಕ್ಕೆ ಬಂದವರು ಕರ್ನಾಟಕದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ. ಅಂದ ಹಾಗೆ, ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರ ಮಧ್ಯೆ ಹೊಯ್ದಕ್ಕಿ ಬೇಯುವುದಿಲ್ಲ ಎಂಬುದು ರಹಸ್ಯವೇನಲ್ಲ. ಹೀಗಾಗಿ ಡಿಕೆಶಿ ಮುಖ್ಯಮಂತ್ರಿ ಯಾಗುವುದನ್ನು ಜಾರಕಿಹೊಳಿ ಸಹಿಸುವುದೂ ಇಲ್ಲ.

ಪರಿಣಾಮ? ಸಾವಂತ್ ಮತ್ತು ಫಡ್ನವೀಸ್ ಅವರ ಲಿಂಕಿಗೆ ಬಂದ ಜಾರಕಿಹೊಳಿ ದಿನಕಳೆದಂತೆ ತಮ್ಮ ಬಣದ ಶಾಸಕರ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಂಡರು. ಹೀಗೆ ಅವತ್ತಿನಿಂದ ಬೆಳೆಯುತ್ತಾ ಹೋದ ಜಾರಕಿಹೊಳಿ ಬಣದ ಶಾಸಕರ ಸಂಖ್ಯೆ ನಲವತ್ತಕ್ಕೇರಿ ಅ ನಿಂತಿದೆ. ಈ ಕ್ಷಣಕ್ಕೂ ಇರುವ ಮಾಹಿತಿಯೆಂದರೆ ಡಿಕೆಶಿ ಕರ್ನಾಟಕದ ಸಿಎಂ ಆಗುವುದು ನಿಕ್ಕಿಯಾದರೆ ಸತೀಶ್ ಜಾರಕಿಹೊಳಿ ಆಂಡ್ ಟೀಮು ಕಾಂಗ್ರೆಸ್ ತೊರೆದು ಪ್ರತ್ಯೇಕ ಗುಂಪಾಗಿ ನಿಲ್ಲುವುದು ಖಚಿತ.

ಹಾಗಂತಲೇ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಇಂಥ ಸಾಧ್ಯತೆಗಳ ಮೇಲೆ ಕಣ್ಣು ನೆಟ್ಟು ಕುಳಿತಿದ್ದಾರೆ. ಆದರೆ ಅವರ ಪ್ಲಾನು ವರ್ಕ್‌ಔಟ್ ಆಗಬೇಕು ಎಂದರೆ ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಅಧಕಾರ ಹಸ್ತಾಂತರ ಮಾಡುವ ಒತ್ತಡಕ್ಕೆ ಸಿಲುಕಬೇಕು. ಒಂದು ವೇಳೆ ಇದು ಸಾಧ್ಯವಾಗದೆ ಸಿದ್ದರಾಮಯ್ಯ ಅವರೇ ಮುಂದುವರಿದರೆ ಸತೀಶ್ ಜಾರಕಿಹೊಳಿ ಆಂಡ್ ಗ್ಯಾಂಗು ಸುಮ್ಮನಾಗುತ್ತದೆ. ಒಂದು ವೇಳೆ ಹಾಗಾದರೆ ಪ್ರಮೋದ್ ಸಾವಂತ್ ಮತ್ತು ದೇವೇಂದ್ರ ಫಡ್ನವೀಸ್ ಅಸಹಾಯಕರಾಗುತ್ತಾರೆ ಮತ್ತು ಅವರ ಆಪರೇಷನ್‌ಗೆ ಬ್ರೇಕ್ ಬೀಳುತ್ತದೆ.

ಹೀಗೆ ಸಾವಂತ್ ಮತ್ತು ಫಡ್ನವೀಸ್ ಅವರ ಆಪರೇಷನ್ನಿಗೆ ಬ್ರೇಕ್ ಬೀಳಬಹುದು ಎಂಬ ಕಾರಣ ಕ್ಕಾಗಿಯೇ ಮೋದಿ- ಅಮಿತ್ ಶಾ ಈಗ ಹೊಸ ವಿಂಗನ್ನು ಆಪರೇಷನ್ನಿಗೆ ಇಳಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಈ ವಿಂಗ್ ನಲ್ಲಿರುವವರು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ರಾಜನಾಥ್ ಸಿಂಗ್.

ಡಿಕೆಶಿಗೆ ಸಿಎಂ ಪಟ್ಟ ಸಿಗದಿದ್ದರೆ?

ಅಂದ ಹಾಗೆ, ಸಾವಂತ್ ಮತ್ತು ಫಡ್ನವೀಸ್ ಅವರು, ಸಿಎಂ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸನ್ನಿವೇಶ ನಿರ್ಮಾಣವಾದರೆ ಏನು ಮಾಡಬೇಕು? ಎಂಬ ಆಪರೇಷನ್ನಿನ ಭಾಗವಾಗಿದ್ದರೆ, ಈಗ ಫೀಲ್ಡಿಗಿಳಿದಿರುವ ಗಡ್ಕರಿ ಮತ್ತು ಸಿಂಗ್ ಅವರು, ಸಿದ್ದು ಸಿಎಂ ಹುದ್ದೆಯಿಂದ ಕೆಳಗಿಳಿಯದೆ ಹೋದರೆ ಏನು ಮಾಡಬಹುದು? ಎಂಬ ಆಪರೇಷನ್ನಿಗೆ ಕೈ ಹಾಕಿದ್ದಾರೆ. ಅವರ ಪ್ರಕಾರ, ನಿಗದಿತ ಸಮಯಕ್ಕೆ ಸರಿಯಾಗಿ ಸಿದ್ದರಾಮಯ್ಯ ತಮಗೆ ಕುರ್ಚಿ ಬಿಟ್ಟುಕೊಡದಿದ್ದರೆ ಡಿ.ಕೆ.ಶಿವಕುಮಾರ್ ಕನಲುವುದು ನಿಶ್ಚಿತ.

ಹೀಗೆ ಕನಲುವ ಅವರು ಕನಿಷ್ಠ ನಲವತ್ತರಷ್ಟು ಶಾಸಕರ ಜತೆಗೂಡಿ ಕಾಂಗ್ರೆಸ್ ತೊರೆಯಲು ಸಜ್ಜಾಗಬಹುದು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಮೂಲಗಳ ಪ್ರಕಾರ, ಇಂಥ ಸಾಧ್ಯತೆಗಳ ಬಗ್ಗೆ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಮೂರು ಬಾರಿ ಅಜ್ಞಾ ಮೂಲಗಳ ಜತೆ ಚರ್ಚಿಸಿ ದ್ದಾರೆ. ಅಷ್ಟೇ ಅಲ್ಲ, ದೇಶದ ಪವರ್-ಲ್ ಇಂಡಸ್ಟ್ರಿಯಲಿ ಅವರ ಮೂಲಕ ದುಬೈನಲ್ಲಿ ಇಂಥದೇ ಅಜ್ಞಾತ ಮೂಲಗಳ ಜತೆ ರಾಜನಾಥ್ ಸಿಂಗ್ ಚರ್ಚಿಸಿದ್ದಾರೆ. ಈ ಚರ್ಚೆಯ ಸಂದರ್ಭದಲ್ಲಿ ಪರ್ಯಾಯ ಸರಕಾರವನ್ನು ಕರ್ನಾಟಕದಲ್ಲಿ ಮೇಲೆಬ್ಬಿಸಬಹುದೇ?ಎಂಬ ವಿಷಯದ ಬಗ್ಗೆಯೂ ಮಾತುಕತೆಯಾಗಿದೆ.

ಅರ್ಥಾತ್, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ಸಿಗದಿದ್ದರೆ ಏನೇನಾಗಬಹುದು? ಎಂಬ ಸಾಧ್ಯತೆಗಳ ಬಗ್ಗೆ ನಿತಿನ್ ಗಡ್ಕರಿ ಮತ್ತು ರಾಜ್‌ನಾಥ್ ಸಿಂಗ್ ಮಾಡುತ್ತಿರುವ ವರ್ಕ್‌ಔಟ್ ಪ್ರಗತಿ ಯಲ್ಲಿದೆ. ಅಲ್ಲಿಗೆ ಬಿಜೆಪಿ ವರಿಷ್ಠರು ಏಕಕಾಲಕ್ಕೆ ಸಿದ್ದರಾಮಯ್ಯ ಬಣ ಮತ್ತು ಡಿಕೆಶಿ ಬಣಗಳ ಮೇಲೆ ಬಲೆ ಹಾಸಿ ಆಟ ಮುಂದುವರಿಸಿzರೆ. ಇದು ಮುಂದೇನು ಸ್ವರೂಪ ಪಡೆಯಲಿದೆಯೋ? ಕಾದು ನೋಡಬೇಕು.

ಆಂಧ್ರದಲ್ಲಿ ಧೂಳೆಬ್ಬಿಸಿದ ಕರ್ನಾಟಕ

ಈ ಮಧ್ಯೆ ಕರ್ನಾಟಕದ ರಾಜಕಾರಣವು ನೆರೆಯ ಆಂಧ್ರದಲ್ಲಿ ಧೂಳೆಬ್ಬಿಸಿದೆ. ಕಾರಣ? ಕರ್ನಾಟಕ ವಿಧಾನಸಭೆಗೆ ತಕ್ಷಣವೇ ಚುನಾವಣೆ ನಡೆದರೆ ಫಲಿತಾಂಶ ಏನಾಗಲಿದೆ ಎಂಬ ಚರ್ಚೆ. ಈ ಕುರಿತಂತೆ ಆಂಧ್ರ ಮೂಲದ ‘ಪೀಪಲ್ಸ್ ಪಲ್ಸ್’ ನಡೆಸಿರುವ ಸರ್ವೆ ರಿಪೋರ್ಟು ಕಳೆದ ಶನಿವಾರ ‌ಆಂಧ್ರ ಪ್ರದೇಶದ ಟಿವಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದ ಪ್ರಸಕ್ತ ಸನ್ನಿವೇಶವನ್ನು ಅಧ್ಯಯನ ಮಾಡಿ ಪೀಪಲ್ಸ್ ಪಲ್ಸ್ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಇಲ್ಲಿ ತಕ್ಷಣವೇ ವಿಧಾನ ಸಭೆ ಚುನಾವಣೆ ನಡೆದರೆ ಬಿಜೆಪಿ ಬಹುಮತ ಗಳಿಸಿ ಅಧಿಕಾರ ಹಿಡಿಯಲಿದೆಯಂತೆ. ಅದರ ಪ್ರಕಾರ ಬಿಜೆಪಿ 136ರಿಂದ 159 ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದ್ದು, ಕಾಂಗ್ರೆಸ್ ಪಕ್ಷ 62ರಿಂದ 882 ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ. ಈ ಮಧ್ಯೆ ಬಿಜೆಪಿಯ ಮಿತ್ರಪಕ್ಷ ಜೆಡಿಎಸ್ ಮೂರರಿಂದ ಆರು ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ ಎಂದಿರುವ ವರದಿ, ಜಾತಿವಾರುಮತಗಳು ಹೇಗೆ ಚಲಾವಣೆ ಯಾಗಲಿವೆ ಅಂತ ವಿವರಿಸಿದೆ.

ಅದರ ಪ್ರಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.36ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ ಈಗ ಶೇ.51 ರಷ್ಟು ಮತಗಳನ್ನು ಗಳಿಸಲಿದೆ. ಇದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.42.88ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್ ಈಗ ಚುನಾವಣೆ ನಡೆದರೆ ಶೇ.40.3ರಷ್ಟು ಮತಗಳನ್ನು ಗಳಿಸಲಿದೆ.

ಇನ್ನು ಕಳೆದ ಚುನಾವಣೆಯಲ್ಲಿ ಶೇ.13.26ರಷ್ಟು ಮತಗಳನ್ನು ಗಳಿಸಿದ್ದ ಜೆಡಿಎಸ್ ಈ ಬಾರಿ ಕುಸಿತ ಕಾಣಲಿದ್ದು ಶೇ.3.6ರಷ್ಟು ಮತಗಳನ್ನಷ್ಟೇ ಗಳಿಸಲಿದೆ ಎಂಬುದು ಪೀಪಲ್ಸ್ ಪಲ್ಸ್ ವರದಿಯ ಸಾರಾಂಶ. ಅರ್ಥಾತ್, ಬಿಜೆಪಿ ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮತಗಳನ್ನು ಸೆಳೆದು ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಲಿದೆ. ಅಂದ ಹಾಗೆ, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ದಲ್ಲಿ ಇದೇ ಸಂಸ್ಥೆ ನೀಡಿದ ವರದಿಯು, ಕಾಂಗ್ರೆಸ್ ಪಕ್ಷವು 99 ಪ್ಲಸ್ ಕ್ಷೇತ್ರಗಳಲ್ಲಿ ಗೆಲುವು ಗಳಿಸಲಿದೆ ಎಂದು ಹೇಳಿತ್ತು. ಈಗ ಅದರ ಲೆಕ್ಕಾಚಾರದ ಪ್ರಕಾರ ಬಿಜೆಪಿಯ ಗ್ರಾಫ್ ಏರಿದೆ.‌

ಹೀಗೆ ಅದು ಕೊಟ್ಟಿರುವ ವರದಿಯ ಬಗ್ಗೆ ಏನೇ ಅಭಿಪ್ರಾಯಗಳಿರಲಿ, ಇಂಥ ವರದಿಗಳನ್ನು ಬಿಜೆಪಿ ವರಿಷ್ಠರು ಬಹುವಾಗಿ ನಂಬಿರುವಂತೆ ಕಾಣುತ್ತಿದೆ. ಹೀಗಾಗಿ ಕರ್ನಾಟಕದಲ್ಲಿ ಪರ್ಯಾಯ ಸರಕಾರ ರಚಿಸುವ ಇಲ್ಲವೇ ಮಧ್ಯಂತರ ಚುನಾವಣೆ ನಡೆಸುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಅಂತ ಅದು ಬಲವಾಗಿ ನಂಬಿರುವಂತೆ ಕಾಣುತ್ತಿದೆ.

ಲಾಸ್ಟ್ ಸಿಪ್: ಅಂದ ಹಾಗೆ, ಕರ್ನಾಟಕ ಬಿಜೆಪಿಯಲ್ಲಿ‌ ಶುರುವಾಗಿದ್ದ ನಾಯಕತ್ವ ವಿವಾದಕ್ಕೆ ಬ್ರೇಕ್ ಬೀಳಲು ಬಿಜೆಪಿ ವರಿಷ್ಠರ ಈ ಲೇಟೆಸ್ಟು ಲೆಕ್ಕಾಚಾರವೇ ಕಾರಣ. ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಿಸಬೇಕು ಅಂತ ಪಟ್ಟುಹಿಡಿದ ಭಿನ್ನರಿಗೆ ವರಿಷ್ಠರು ಮಣೆ ಹಾಕಿಲ್ಲವಾದರೂ, ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕಕ್ಕೆ ಕಳಿಸಿ ವಿಜಯೇಂದ್ರ ಅವರ ಮರುಪಟ್ಟಾಭಿ ಷೇಕಕ್ಕೂ ವರಿಷ್ಠರು ಆಸಕ್ತಿ ತೋರುತ್ತಿಲ್ಲ. ಅವರ ಈ ನಿರಾಸಕ್ತಿಗೆ, ಕರ್ನಾಟಕದ ರಾಜಕೀಯ ಬೆಳವಣಿಗೆಗಳು ದೊಡ್ಡ ತಿರುವು ಪಡೆಯಬಹುದು ಎಂಬ ನಿರೀಕ್ಷೆಯೇ ಕಾರಣ.