Heavy Rain: ರಾಜ್ಯಾದ್ಯಂತ ಭಾರೀ ಮಳೆ; ಶೃಂಗೇರಿ-ಮಂಗಳೂರು ಹೆದ್ದಾರಿ ಬಂದ್, ಹಲವೆಡೆ ಗುಡ್ಡ ಕುಸಿತ
ರಾಜ್ಯಾದ್ಯಂತ ಗಾಳಿ ಸಮೇತ ಮಳೆ ಮುಂದುವರಿದಿದೆ. ಮಳೆ ಆರ್ಭಟದಿಂದಾಗಿ ಹಲವೆಡೆ ಅವಾಂತರಗಳು ಸಂಭವಿಸುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ ರಸ್ತೆಯ ಮೂರು ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ. ಶೃಂಗೇರಿ ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಾಗಿದ್ದು ತುಂಗಾ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ.


ಚಿಕ್ಕಮಗಳೂರು: ರಾಜ್ಯಾದ್ಯಂತ ಗಾಳಿ ಸಮೇತ ಮಳೆ (Heavy Rain) ಮುಂದುವರಿದಿದೆ. ಮಳೆ ಆರ್ಭಟದಿಂದಾಗಿ ಹಲವೆಡೆ ಅವಾಂತರಗಳು ಸಂಭವಿಸುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ ರಸ್ತೆಯ ಮೂರು ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ. ಹೀಗಾಗಿ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಮತ್ತು ಝರಿ ಫಾಲ್ಸ್ ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಚಿಕ್ಕಮಗಳೂರು-ಶೃಂಗೇರಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕೂಡ ಗಾಳಿ ಸಹಿತ ಭಾರಿ ಮಳೆಗೆ ಮರಗಳು ಮುರಿದುಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಬಳಿ ಮರಗಳು ಧರೆಗುರುಳಿದೆ. ಕೊಪ್ಪ, ಮೂಡಿಗೆರೆ, ಶೃಂಗೇರಿ, ಕಳಸ ಮತ್ತು N.R.ಪುರ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದೆ.
ಶೃಂಗೇರಿ ಭಾಗದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಾಗಿದ್ದು ತುಂಗಾ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ. ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕಿಸುವ ಪರ್ಯಾಯ ಮಾರ್ಗ ಜಲಾವೃತವಾಗಿದ್ದು, ಮಠದ ಪಾರ್ಕಿಂಗ್ ಪ್ರದೇಶವಾದ ಗಾಂಧಿ ಮೈದಾನದಲ್ಲಿ ತುಂಗಾ ನದಿ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ತುಂಗಾ, ಭದ್ರೆ ನದಿಗಳು ಉಕ್ಕಿ ಹರಿಯುತ್ತಿದ್ದು, ಶೃಂಗೇರಿಯಲ್ಲಿ ನೆರೆ ಆತಂಕ ಸೃಷ್ಟಿಯಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕೆರೆಕಟ್ಟಿ ಸಮೀಪದ ಶೃಂಗೇರಿ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಗುಡ್ಡ ಕುಸಿದಿದೆ. ರಸ್ತೆಗೆ ಅಡ್ಡಲಾಗಿ ಮಣ್ಣು ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Bengaluru Rains: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ; ಜು.25ರವರೆಗೆ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ!
ಕರ್ನಾಟಕದಾದ್ಯಂತ ಜುಲೈ 31ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಮುಂದಿನ ಐದಾರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ ಭಾಗದಲ್ಲಿ 120 ಮಿಲೀ ಮೀಟರ್ಗೂ ಹೆಚ್ಚು ಮಳೆ ಸುರಿದಿದೆ. ಶರಾವತಿ, ಅಘನಾಶಿನಿ, ಗುಂಡ್ಲಬಾಳ ನದಿಗಳು ಅಪಾಯ ಮಟ್ಟ ಮೀರಿ ಹರಿದು ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿವೆ. ಕುಮಟಾ, ಹೊನ್ನಾವರ, ಸಿದ್ದಾಪುರದಲ್ಲಿ ಮನೆ, ತೋಟಕ್ಕೆ ನೀರು ನುಗ್ಗಿ ಆಹಾರ ಪದಾರ್ಥಗಳು ನೀರು ಪಾಲಾಗಿದೆ.