ವಿದೇಶವಾಸಿ
ಒಂದು ತಿಂಗಳ ಹಿಂದೆ ಹುಟ್ಟಿಕೊಂಡ ಕೆಲವು ಜಿರಳೆಗಳ ಬಗ್ಗೆ ಗೊತ್ತಲ್ಲ? ಅದೇ, ನಕಲಿ ಪ್ರಮಾಣ ಪತ್ರಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯೊಬ್ಬರು ನಕಲಿ ಪ್ರಮಾಣ ಪತ್ರಗಳ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ, ನಿರುದ್ಯೋಗಿ ಯುವಕರು ಮತ್ತು ಸಂಘರ್ಷ ಕ್ಕಾಗಿಯೇ ಇರುವ ಕೆಲವು ಕಾರ್ಯಕರ್ತರನ್ನು ಜಿರಳೆಗೆ ಹೋಲಿಸಿದ್ದರು. ಅದಕ್ಕೆ ಕೆಲವು ಜೆನ್ ಜಿ (1997ರಿಂದ 2012ರ ನಡುವೆ ಜನಿಸಿದವರು) ಯುವಕರು ಸೇರಿ ಅಭಿಜಿತ್ ದಿಪ್ಕೆ ನೇತೃತ್ವ ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ‘ನಾವು ಜಿರಳೆಗಳು’ ಎಂಬ ಅಭಿಯಾನ ಆರಂಭಿಸಿದರು.
ಮೇ 16ರಂದು ಅದನ್ನು ರಾಜಕೀಯ ಪಕ್ಷ ಎಂದು ಕರೆದುಕೊಂಡರು. ಜಿರಳೆಗಳ ಪಕ್ಷ ಭಾರತದಲ್ಲಿ ಇನ್ನೂ ನೋಂದಣಿಯಾಗಲಿಲ್ಲ, ಆ ಮಾತು ಬೇರೆ. ಜೂನ್ 6ರಂದು ಅಭಿಜಿತ್ ದಿಪ್ಕೆ ಎಂಬ ದೊಡ್ಡ ಜಿರಳೆ, ಅಮೆರಿಕದಿಂದ ಹಾರಿ ದೆಹಲಿಯ ಭೂಮಿಗೆ ಬಂದು ಇಳಿಯಿತು. ಇಳಿದದ್ದೇ ನೇರವಾಗಿ ಜಂತರ್ ಮಂತರ್ ತಲುಪಿ ಭಾಷಣವನ್ನೂ ಮಾಡಿತು. ಸ್ವಲ್ಪ ಹೊತ್ತು ಕುಳಿತು, ಅನಾರೋಗ್ಯದ ಕಾರಣ ಹೇಳಿ ಅಲ್ಲಿಂದ ಹೊರಟು ಹೋಯಿತು.
ಅಲ್ಲ, ಯಾವ ವಾತಾವರಣಕ್ಕಾದರೂ ಹೊಂದಿಕೊಳ್ಳುವ ಗುಣವುಳ್ಳ, ಯಾವ ಪರಿಸ್ಥಿತಿಯದರೂ ಬದುಕಬಹುದಾದ ಕೀಟ ಎಂದರೆ ಜಿರಳೆ, ನಮಗೆ ಜಿರಳೆ ಒಂದು ಮಾದರಿ ಎಂದು ಕೆಲವರು ಹೇಳಿ ಕೊಂಡಿದ್ದಿದೆ. ನನಗೆ ಉತ್ತರ ದೊರಕದ ಪ್ರಶ್ನೆಯೆಂದರೆ ಕೇವಲ ಬದುಕಿದರೆ ಸಾಕೆ? ಅದರಿಂದ ಯಾರಿಗಾದರೂ, ಏನಾದರೂ ಪ್ರಯೋಜನವಿದೆಯೇ? ಇರಲಿ, ಆ ತರ್ಕಗಳೆಲ್ಲ ಈಗ ಬೇಡ.
ಸದ್ಯ ಚಾಲ್ತಿಯಲ್ಲಿರುವುದು ಭಾರತದ ಜೆನ್ ಜಿರಳೆಯ ವಿಷಯ. ದೇಶದ ಸಮಸ್ಯೆಯನ್ನು ಬಗೆಹರಿ ಸಲು ಪಣತೊಟ್ಟ ಜೆನ್ ಜಿರಳೆ ಕುಲತಿಲಕ, ಭಾರತಕ್ಕೆ ಬಂದು ಕೆಲವೇ ತಾಸಿನಲ್ಲಿ ಅಸ್ವಸ್ಥವಾಯಿತು. ಎರಡು ದಿನ ಮೊದಲಷ್ಟೇ ಪತ್ರಿಕಾಗೋಷ್ಠಿ ಕರೆದು, ‘ಪ್ರತಿಭಟನೆ ಮಾಡುವುದಕ್ಕೆ ನಮಗೆ ಸ್ವಾತಂತ್ರ್ಯ ವಿದೆ, ಅದಕ್ಕೆ ಪೊಲೀಸರಿಂದ ಪರವಾನಿಗೆ ಏಕೆ ಪಡೆಯಬೇಕು?’ ಎಂದು ಕೇಳಿದ್ದ ಜಿರಳೆ ಸಂಘದ ಪ್ರಧಾನ ಕಾರ್ಯದರ್ಶಿ, ದೆಹಲಿಯ ತಾಪ ತಾಳಲಾರದೆ ತಂಪು ಪಾನೀಯ ಹೀರುತ್ತಾ ಕುಳಿತಿತ್ತು.
ಇದನ್ನೂ ಓದಿ: Kiran Updhyay Column: ಮೆಲೊಡಿ ಕೊಟ್ಟಿದ್ದಕ್ಕೇ ಹೀಗೆ, ಇನ್ನು ಅದನ್ನು ಕೊಟ್ಟಿದ್ದರೆ...
ಇದರಿಂದ ಏನಾಯಿತು? ಏನಿಲ್ಲ, ಜಂತರ್ ಮಂತರ್‌ನಲ್ಲಿ ಕೆಲವು ತಾಸುಗಳಾದರೂ ನಡೆಯ ಬೇಕಿದ್ದ ಪ್ರತಿಭಟನೆ ಐದೇ ತಾಸಿಗೆ ಮುಗಿದು ಹೋಯಿತು. ಇನ್ನು ಚುನಾವಣಾ ಸಂದರ್ಭದಲ್ಲಿ ಇವೆಲ್ಲ ‘ಎಷ್ಟು ಪ್ರಚಾರ ಮಾಡಿಯಾವು?’, ‘ಹೇಗೆ ಪ್ರಚಾರ ಮಾಡಿಯಾವು?’ ಎಂದು ಕೇಳುವಂತಾ ಯಿತು.
ಇನ್ನು ಜನ ಎಷ್ಟು ಸೇರಿದ್ದರು? ಒಂದು ತಿಂಗಳ ಹಿಂದೆ ಜಾಲತಾಣದಲ್ಲಿ ಆರಂಭವಾದ ಈ ಅಭಿಯಾನವನ್ನು ಎರಡು ಕೋಟಿ ಇಪ್ಪತ್ತೆರಡು ಲಕ್ಷ ಜನ ಹಿಂಬಾಲಿಸಿದ್ದರು. ಅವರ ಪೈಕಿ ಇಪ್ಪತ್ತು ಸಾವಿರವಾದರೂ ಬರುತ್ತಾರೆ ಅಂದುಕೊಂಡರೆ, ಎರಡು ಸಾವಿರವೂ ಬರಲಿಲ್ಲ. ಅವರನ್ನು ನಿಯಂತ್ರಿಸಲು ಬಂದಿದ್ದ ಪೊಲೀಸರೇ ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುವಂತಾಗಿತ್ತು.
ಹೋಗಲಿ ಪ್ರತಿಭಟನೆಗೆ ಬಂದವರಲ್ಲಿ ಎಲ್ಲರೂ ಜೆನ್ ಜಿಗಳಾಗಿದ್ದರೆ ಎಂದರೆ ಅದೂ ಅಲ್ಲ. ಬಂದವ ರಲ್ಲಿ ಸಾಕಷ್ಟು ಜನ ಜನರೇಶನ್ ಎಕ್ಸ್, ಜನರೇಶನ್ ವೈ, ಮಿಲೇನಿಯಲ್ಸ್ ಕೂಡ ಇದ್ದರು. ಈ ಹಿಂದೆ ಎನ್ಸಿಆರ್, ಸಿಐಎ ವಿರೋಧಿಸಿ ದೆಹಲಿಯಲ್ಲಿ ರಸ್ತೆ ತಡೆಗೆ ಕುಳಿತಿದ್ದವರೂ ಇದ್ದರು. ಕೆಲವರಂತೂ ಪ್ರತಿಭಟನೆಗೆ ಎಂದು ಬಂದವರಾಗಿರಲಿಲ್ಲ. ಅಲ್ಲಿ ಏನು ನಡೆಯುತ್ತದೆ, ಹೇಗೆ ನಡೆಯುತ್ತದೆ ಎಂದು ನೋಡಲು ಬಂದವರು, ಯೂಟ್ಯೂಬರ್‌ಗಳು ಇದ್ದರು.
ಬಹುಶಃ ಒಂದೆರಡು ವಿಶ್ವವಿದ್ಯಾಲಯದವರು, ಬೇರೆ ಬೇರೆ ಪಕ್ಷದ ಕಾರ್ಯಕರ್ತರು ಇದ್ದರು. ಕೆಲವರು ಸಿಜೆಪಿಯ ಟಿ-ಶರ್ಟ್, ಕಾಗದದ ಮುಖವಾಡ ಇತ್ಯಾದಿಗಳನ್ನು ಮಾರಲು ಬಂದಿದ್ದರು. ಅವರಿಗೂ, ಹೋರಾಟಕ್ಕೂ ಸಂಬಂಧವೇ ಇರಲಿಲ್ಲ. ಅವರದ್ದೇನಿದ್ದರೂ ಪಕ್ಕಾ ವ್ಯಾಪಾರ. ಸ್ವತಃ ಪಕ್ಷ ಕಟ್ಟಿಕೊಂಡ ಪ್ರಮುಖ ಜಿರಳೆಗಳೇ ತಮ್ಮ ಪಕ್ಷದ ಟಿ-ಶರ್ಟ್, ಬ್ಯಾಡ್ಜ್, ಟೋಪಿ, ಇತ್ಯಾದಿಗಳನ್ನು ಮುದ್ರಿಸಿ ಮಾರಾಟ ಮಾಡುತ್ತಿರುವಾಗ ಇದೇನು ಮಹಾ? ಇದನ್ನೆಲ್ಲ ನೋಡಿದಾಗ, ಭ್ರಷ್ಟಾಚಾರದ ವಿರುದ್ಧ ಎರಡು ಹಂತದಲ್ಲಿ ಒಟ್ಟೂ ಹದಿನೈದು ದಿನ ಉಪವಾಸ ಸತ್ಯಾಗ್ರಹ ಮಾಡಿದ ‘ಸೈಲೆಂಟ್ ಜನರೇಶನ್’ನ ಅಣ್ಣಾ ಹಜಾರೆ ನೂರು ಪಾಲು ವಾಸಿ ಅನ್ನಿಸಿತು.
ಪ್ರತಿಭಟನೆ ಅಥವಾ ಸಮಾವೇಶಕ್ಕೆ ಬಂದವರಲ್ಲಿ ಅನೇಕರು ದಫಲಿ ಬಾರಿಸುತ್ತ ಅದೇ ಹಳೆಯ ‘ಆಜಾದಿ’ ಹಾಡು, ‘ಹಿಂದೂ ಮುಸ್ಲಿಂ ನಹೀ ಚಲೇಗಾ’ ಘೋಷಣೆ ಕೂಗಿದರು. ಇವೆಲ್ಲ ಹಳೆಯದಾಗಿ ಅದೆಷ್ಟೋ ವರ್ಷಗಳಾದರೂ ಇವರು ಇನ್ನೂ ಅಲ್ಲಿಯೇ ಇzರಲ್ಲ ಎಂದೆನಿಸಿತು. ಇದನ್ನೇ ಮಾಡು ತ್ತಿದ್ದರೆ, ಜೆನ್ ಜಿ ಅಲ್ಲ, ಜೆನ್ ಆಲಾ, ಜೆನ್ ಬೀಟಾ ಬಂದರೂ ಏನೂ ಬದಲಾವಣೆ ಆಗುವುದಿಲ್ಲ ಎಂದೆನಿಸಿತು.
ನೀಟ್ ಪರೀಕ್ಷೆಯ ಮುನ್ನ ಆದ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಲು ಆರಂಭವಾದ ಸಂಘಟನೆಯ ಇನ್‌ಸ್ಟಾಗ್ರಾಂ ಪುಟವನ್ನು ಎರಡೇ ವಾರದಲ್ಲಿ ಒಂದೂವರೆ ಕೋಟಿ ಜನ ಹಿಂಬಾ ಲಿಸಿದರು. ಮುಂದಿನ ಒಂದು ವಾರದಲ್ಲಿ ನಲವತ್ತು ಲಕ್ಷ ಜನ ಹಿಂಬಾಲಿಸಿದರು. ಆಗಂತೂ ಅದು ಪ್ರತಿನಿತ್ಯದ ಸುದ್ದಿಯಾಗಿತ್ತು. ನಂತರ ಈ ಸಂಘಟನೆ ರಾಜಕೀಯ ಪಕ್ಷವಾಗಿ ಚುನಾವಣೆ ಎದುರಿಸು ತ್ತದೆ ಎಂದಾಯಿತು. ಅಲ್ಲಿಂದ ಮುಂದೆ ಹತ್ತು ಲಕ್ಷ ಜನ ಮಾತ್ರ ಹಿಂಬಾಲಕರಾಗಿ ಸೇರಿಕೊಂಡರು.
ಕಳೆದ ಹತ್ತು ದಿನದಿಂದ ನೋಡುತ್ತಿದ್ದೇನೆ, ಒಂದು ಲಕ್ಷ ಜನರೂ ಈ ಪುಟವನ್ನು ಹಿಂಬಾಲಿಸಲಿಲ್ಲ. ಮೊನ್ನೆಯ ಪ್ರತಿಭಟನೆಯ ನಂತರ ಮೂರು ಲಕ್ಷ ಜನ ಮತ್ತೆ ಹೊಸ ಹಿಂಬಾಲಕರು ಹುಟ್ಟಿ ಕೊಂಡರು. ಇದನ್ನೆಲ್ಲ ನೋಡಿದಾಗ, ಬಹಳ ದಿನಗಳ ಹಿಂದೆಯೇ ಬಂದ ಒಂದು ವರದಿ ಸರಿ ಇದ್ದಿರಲೂಬಹುದು ಎಂದೆನಿಸುತ್ತಿದೆ. ಆ ವರದಿಯ ಪ್ರಕಾರ, ಆರಂಭದ ದಿನಗಳಲ್ಲಿ, ಈ ಹಿಂಬಾಲಕ ರಲ್ಲಿ ಬಹುತೇಕರು ಪಾಕಿಸ್ತಾನದವರು ಎಂದು ಹೇಳಲಾಗಿತ್ತು.
ಉಳಿದ ಹಿಂಬಾಲಕರಲ್ಲೂ ವಿದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಮೆರಿಕದ ಕಂಸಾಸ್‌ನ ರಾಜಧಾನಿ ಟೊಪೇಕಾದಿಂದ ಎಂಟೂವರೆ ಲಕ್ಷ ಜನ ಹಿಂಬಾಲಕರಿದ್ದರು. ಆದರೆ ಆ ನಗರದ ಜನಸಂಖ್ಯೆಯೇ ಒಂದೂ ಕಾಲು ಲಕ್ಷ. ಅದೇ ರೀತಿ, ಎರಡು ಲಕ್ಷ ಅರವತ್ತು ಸಾವಿರ ಜನಸಂಖ್ಯೆ ಇರುವ ಮೆಕ್ಸಿಕೋದ ಕಾಬೋ ಸಾನ್ಲುಕಾಸ್ ನಗರದಿಂದ ಎಂಟೂವರೆ ಲಕ್ಷ ಜನ ಹಿಂಬಾಲಕರಿದ್ದರು.
ಮಲೇಶಿಯಾ, ಐವರಿ ಕೋಸ್ಟ್, ಪ್ಯಾಲೆಸ್ತೀನ್, ಇತ್ಯಾದಿ ದೇಶಗಳಿಂದ ತಲಾ ಎಂಟು ಲಕ್ಷ ತೊಂಬತ್ತು ಸಾವಿರ ಹಿಂಬಾಲಕರಿದ್ದಾರೆ ಎಂದು ವರದಿ ಹೇಳುತ್ತಿತ್ತು. ಅನುಮಾನ ಬರುವುದು ಇಲ್ಲಿಯೇ. ನಾಲ್ಕು ಬೇರೆ ಬೇರೆ ದೇಶಗಳಿಂದ ಒಂದೇ ಸಂಖ್ಯೆಯಲ್ಲಿ ಹಿಂಬಾಲಕರಾಗುವುದು ಹೇಗೆ? ಒಂದು ಸಾವಿರ ವಾದರೂ ಆಚೆ-ಈಚೆ ಇರಬಹುದಾಗಿತ್ತಲ್ಲ? ಅಷ್ಟಕ್ಕೂ ಈ ಪ್ರದೇಶಗಳಲ್ಲ ಆ ಪ್ರಮಾಣದಲ್ಲಿ ಭಾರತೀಯರೇ ಇಲ್ಲ. ಹಾಗಾದರೆ ಇದೆಲ್ಲ ಖರೀದಿಸಿದ ಹಿಂಬಾಲಕರ ಸಂಖ್ಯೆಯೇ? ಹೌದು ಎಂದಾ ದರೆ ಇದು ಆಘಾತಕಾರಿ ವಿಷಯ.
ಇಲ್ಲ ಎಂದಾದರೆ ಇನ್ನೂ ಹೆಚ್ಚಿನ ಆತಂಕಕಾರಿ ವಿಷಯ. ಏಕೆಂದರೆ ಆಗ ‘ಬೇರೆ ದೇಶದಲ್ಲಿರು ವವರಿಗೆ ಭಾರತದ ವಿಷಯದಲ್ಲಿ ಅಷ್ಟು ಆಸಕ್ತಿ ಏಕೆ?’ ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಪೂರಕವಾಗಿ ಇದರ ಸಹಸಂಸ್ಥಾಪಕನೂ ಆಗಿದ್ದ ಪತ್ರಕರ್ತನೊಬ್ಬ ಸಂಘಟನೆಯಲ್ಲಿ ಪಾರದರ್ಶ ಕತೆಯ ಕೊರತೆ ಮತ್ತು ಲಿಂಗ ಭೇದದ ಕಾರಣ ನೀಡಿ ಅದರಿಂದ ಹೊರಗೆ ಬಂದ. ಇದರಿಂದ ಏನಾಯಿತು? ಈ ಜೆನ್ ಜಿರಳೆ ಹುಟ್ಟಿದ ನಂತರ ಇಟ್ಟ ಮೊದಲ ಹೆಜ್ಜೆಯೇ ಮೋಸ ಮತ್ತು ಸುಳ್ಳಿನದ್ದು ಎಂದಾಯಿತು.
ರಾತ್ರಿ ಮನೆಯಲ್ಲಿ ದೀಪ ಆರಿಸಿ, ಜನರೆಲ್ಲ ಮಲಗಿದ ನಂತರ, ತಾನೇ ರಾಜ ಅಂದುಕೊಂಡು ಮನೆ ತುಂಬಾ ಓಡಾಡಿದ ಮಾತ್ರಕ್ಕೆ ಜಿರಳೆ ಆ ಮನೆಯ ಒಡೆಯನಾಗುವುದಿಲ್ಲ. ‘ಇಷ್ಟು ದಿನ ಹೆಣ್ಣು ಮಕ್ಕಳನ್ನು ಮಾತ್ರ ಹೆದರಿಸುತ್ತಿದ್ದೆ, ಇನ್ನು ಮುಂದೆ ಸರಕಾರವನ್ನೂ ಹೆದರಿಸುತ್ತೇನೆ’ ಎಂದರೆ ಅದೂ ಸಾಧ್ಯವಾಗುವುದಿಲ್ಲ.
ಏಕೆಂದರೆ ಈ ಕಾರ್ಯವನ್ನು ಈಗಾಗಲೇ ವಿಪಕ್ಷಗಳು ಮಾಡುತ್ತಿವೆ. ಅದೇ ಕೆಲಸವನ್ನು ಇನ್ನೊಂದು ಹೆಸರಿನಲ್ಲಿ ಮಾಡಬೇಕೆಂದೇನೂ ಇಲ್ಲ. ಅವರ ಮಾತನ್ನೇ ಜೆನ್ ಜಿರಳೆಗಳು ಹೇಳಿಕೊಂಡು ಓಡಾಡಿದರೆ, ಉಳಿದವರು ಮೂರ್ಖರು ಅಂದುಕೊಂಡರೆ, ಅವರಷ್ಟು ಶತಮೂರ್ಖರು ಇನ್ಯಾರೂ ಇಲ್ಲ.
ಅಷ್ಟಕ್ಕೂ ಜೆನ್ ಜಿಗಳು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಗೆದ್ದ ಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಕಡಿಮೆ ಎಂದೇ ಹೇಳಬಹುದು. ಮಾತೆತ್ತಿದರೆ ನೇಪಾಳ, ಬಾಂಗ್ಲಾದೇಶ, ಇರಾನ್ ಇತ್ಯಾದಿ ದೇಶಗಳ ಉದಾಹರಣೆ ನೋಡಿದರೆ ಇದರ ಅರಿವಾಗುತ್ತದೆ.
ಜೆನ್ ಜಿ ಪ್ರತಿಭಟನೆಯಿಂದ ಬಾಂಗ್ಲಾದೇಶದಲ್ಲಿ ಸರಕಾರ ಪತನವಾಯಿತು ನಿಜ. ನಂತರ ನಡೆದ ಚುನಾವಣೆಯಲ್ಲಿ ಆರಿಸಿ ಬಂದದ್ದು ಅದೇ ಹಳೆಯ ಪಕ್ಷ ಮತ್ತು ಅದೇ ಹಳೆಯ ಪಕ್ಷದ ಮಾಜಿ ಪ್ರಧಾನಿಯ ಮಗ ಹೊರತು ಜೆನ್ ಜಿ ಪಕ್ಷವಲ್ಲ. ಇರಾನ್‌ನಲ್ಲಿ ಸರಕಾರದ ವಿರುದ್ಧ ದನಿಯತ್ತಿದ ಜೆನ್ ಜಿಗಳ ಧ್ವನಿ ಯುದ್ಧದ ಸದ್ದಿನಲ್ಲಿ ಅಡಗಿ ಹೋಯಿತು. ನೇಪಾಳದಲ್ಲಿ ಸರಕಾರ ಬದಲಾಗಿ ಜೆನ್ ಜಿ ಸರಕಾರ ಬಂದಿದ್ದು ಹೌದಾದರೂ, ಹೆಚ್ಚಿನ ಬದಲಾವಣೆಯೇನೂ ಕಾಣುತ್ತಿಲ್ಲ.
ಹಾಗಂತ ಪ್ರತಿಭಟನೆ ಮಾಡಲೇಬಾರದು, ಆಂದೋಲನ ನಡೆಯಲೇಬಾರದು ಎಂದು ನಾನು ಹೇಳುವುದಿಲ್ಲ. ನೀಟ್ ಅಥವಾ ಸಿಬಿಎಸ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯ ವಿಷಯ ದೊಡ್ಡ ಅಪರಾಧವೇ. ಲಕ್ಷ-ಲಕ್ಷ ಸಂಖ್ಯೆಯಲ್ಲಿ ನಮ್ಮದೇ ದೇಶದ ಮಕ್ಕಳು, ಪಾಲಕರು, ಮನೆಯವರು ಇದರಿಂದ ನೋವು ಅನುಭವಿಸಿದ್ದಾರೆ.
ಈ ನೆನಪು ಎಲ್ಲರ ಮನಸ್ಸಿನಲ್ಲಿ ಬಿಸಿ ಬರೆಯಾಗಿ ಬಹುಕಾಲ ಇರುತ್ತದೆ. ಅದರಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು, ಇನ್ನು ಮುಂದೆ ಈ ರೀತಿ ಆಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು. ಇಷ್ಟು ಹೇಳಿದ ಮಾತ್ರಕ್ಕೆ ಕೆಲಸ ಆಗುವುದಿಲ್ಲ ಎನ್ನುವುದೂ ನನಗೆ ಗೊತ್ತು. ಏಕೆಂದರೆ ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರುವ ಇತಿಹಾಸ ಇಂದು ನಿನ್ನೆಯದಲ್ಲ. ಇದು ಏಕಮೇವವೂ ಅಲ್ಲ.
ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತಂತೆ. ತಿಜೋರಿಯಲ್ಲಿ ಭದ್ರವಾಗಿ ಇರಬೇಕಿದ್ದ ಪ್ರಶ್ನೆ ಪತ್ರಿಕೆಗಳನ್ನೇ ಕದ್ದು ಮಾರಿದರಂತೆ ಎಂಬ ಕಥೆಗಳನ್ನು ನಾವೂ ನಮ್ಮ ಬಾಲ್ಯ ದಲ್ಲಿ ಕೇಳಿದ್ದೇವೆ. ಅದರ ನಂತರವೂ ಸಾಕಷ್ಟು ಸಲ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ.
ಕಳೆದ ಇಪ್ಪತ್ತು ವರ್ಷದ ಇತಿಹಾಸ ತೆಗೆದು ನೋಡಿದರೆ, ಸಿಬಿಎಸ್ಸಿ ಹನ್ನೆರಡನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ, AIIEE, PMT, AIIIMS, CBSC ಯ ಹತ್ತು ಮತ್ತು ಹನ್ನೆರಡನೇ ತರಗತಿಗಳ ಪ್ರಶ್ನೆಪತ್ರಿಕೆಗಳು, ನಮ್ಮ ರಾಜ್ಯವೂ ಸೇರಿದಂತೆ ಇತರ ರಾಜ್ಯಗಳ ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಗಳು, ಅಷ್ಟೇ ಏಕೆ, ನಮ್ಮ ರಾಜ್ಯದ ಪೋಲಿಸ್ ಹುದ್ದೆಗೆ ನಡೆಯಬೇಕಾದ ಪರೀಕ್ಷೆಯ ಪ್ರಶ್ನೆಪತ್ರಿಕೆ ಗಳೂ ಸೋರಿಕೆಯಾಗಿವೆ.
ಇವೆಲ್ಲವೂ ಅಪರಾಧಗಳೇ ಅಲ್ಲವೇ? ಆದರೆ ಪ್ರತಿ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗಲೂ ಕೇಳಿ ಬರುವ ಮಾತು ಎಂದರೆ, ‘ಇದನ್ನು ನಾವು ಖಂಡಿಸುತ್ತೇವೆ’, ‘ತಪ್ಪಿತಸ್ಥರಿಗೆ ಶಿಕ್ಷೆ ಕೊಡುತ್ತೇವೆ’, ‘ಮುಂದೆ ಈ ರೀತಿ ಆಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ’. ಇಷ್ಟೇ ಬಿಟ್ಟರೆ ಮತ್ತೇನಾದರೂ ಇದೆಯೇ? ಪ್ರಶ್ನೆಪತ್ರಿಕೆಗಳ ಸೋರಿಕೆ ಯಾವುದೋ ಒಂದೇ ಪಕ್ಷ ಅಧಿಕಾರದಲ್ಲಿದ್ದಾಗ ನಡೆದದ್ದಲ್ಲ. ಭಾರತದಲ್ಲಿ ಇದನ್ನು ಒಂದು ಪಿಡುಗು ಎಂದೇ ಹೇಳಬಹುದು.
ಈಗ ಪ್ರಶ್ನೆ ಇರುವುದು, ಮುಂಬರುವ ದಿನಗಳಲ್ಲಿ ಬಿಜೆಪಿಯೇತರ ರಾಜ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಯಾದರೆ ಜೆನ್ ಜಿರಳೆಗಳು ಅದನ್ನೂ ಖಂಡಿಸುತ್ತವೆಯೇ? ಕಷ್ಟ ಎಂದೆನಿಸುತ್ತದೆ. ಏಕೆಂದರೆ ಕೆಲವೇ ತಿಂಗಳುಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಪತ್ರಕರ್ತರ ಮೇಲೆ ಹಯಾದಾಗ, ಅಲ್ಲಿ ಇಡಿ ಅಧಿಕಾರಿ ಗಳನ್ನೇ ಕೂಡಿ ಹಾಕಿ, ಮುಖ್ಯಮಂತ್ರಿ ಸ್ವತಃ ಕಡತಗಳನ್ನು ಎತ್ತಿಕೊಂಡು ಹೋದಾಗ, ತೆಲಂಗಾಣದ ಮುಖ್ಯಮಂತ್ರಿ ಪತ್ರಕರ್ತರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಬೇಕು ಎಂದಾಗ ಯಾವುದೇ ಜಿರಳೆ ಶಬ್ದ ಮಾಡಲಿಲ್ಲ. ಆಗೆಲ್ಲ ಇವೆಲ್ಲ ತೀರಾ ಚಿಕ್ಕದಾಗಿದ್ದವು,
ಇವಕ್ಕೆ ಬುದ್ಧಿ ಬೆಳೆದಿರಲಿಲ್ಲ ಎಂದಲ್ಲ. ಅದು ಅವರ ಆಯ್ಕೆಯಾಗಿರಲಿಲ್ಲ ಅಷ್ಟೇ. ಅದರೊಂದಿಗೆ, ಈಗಾಗಲೇ ಇತರ ಪಕ್ಷಗಳ ಬೆಂಬಲವನ್ನು ಜೆನ್ ಜಿರಳೆಗಳು ಪಡೆದುಕೊಂಡಾಗಿದೆ. ಒಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಜಿರಳೆ ಆಂದೋಲನದ ಟಿ-ಶರ್ಟ್ ಬಿಡುಗಡೆ ಮಾಡಿದರು. ಇನ್ನು ಕೆಲವು ಪಕ್ಷದ ಮುಖಂಡರು, ಚುನಾವಣೆ ಗೆಲ್ಲಲಾಗದ ನಟರು, ಕೆಲವು ರಾಜಕಾರಣಿಗಳು ಇದಕ್ಕೆ ತಮ್ಮ ಬೆಂಬಲ ಸೂಚಿಸಿದರು.
ಇದಕ್ಕೆ ಎನ್‌ಎಸ್‌ಯುಐ, ಎಸ್‌ಎಫ್ಐ ಇತ್ಯಾದಿ ಸಂಸ್ಥೆಗಳು ಬೆಂಬಲ ಸೂಚಿಸಿದವು. ಅಲ್ಲಿಗೆ ಜಿರಳೆ ಪಕ್ಷದ ಇತಿಶ್ರೀ ಬರೆದಾಗಿತ್ತು. ಅದನ್ನು ಅರ್ಥ ಮಾಡಿಕೊಳ್ಳದ ಜಿರಳೆಗಳು, ಅದನ್ನೇ ಆನಂದಿಸಿದವು. ಜಿರಳೆ ಪಕ್ಷದ ಕೆಲವು ಸ್ಥಾಪಕರು ಜಾಲತಾಣದ ತಮ್ಮ ಪರಿಚಯದಲ್ಲಿ ಬಹಳ ದಿನಗಳಿಂದ ಇದ್ದ ಯಾವುದೋ ಒಂದು ಪಕ್ಷದ ಕಾರ್ಯಕರ್ತ ಎನ್ನುವ ಅಂಶವನ್ನು ತೆಗೆದು ಹಾಕಿದರು.
ಅದರ ಅವಶ್ಯಕತೆಯೇನೂ ಇರಲಿಲ್ಲ. ಒಂದು ಪಕ್ಷದ ಕಾರ್ಯಕರ್ತರಾಗಿದ್ದವರು ಬೇರೆ ಒಂದು ಸಂಘಟನೆ ಮಾಡಿ ಒಂದು ವಿಷಯದ ಕುರಿತು ಅಥವಾ ಒಂದು ಘಟನೆಯ ವಿರುದ್ಧವಾಗಿ ಹೋರಾಟ ಮಾಡಬಾರದು ಎಂದೇನೂ ಇಲ್ಲ. ಆದರೆ ‘ಕಳ್ಳನ ಮನಸ್ಸು ಹುಳ್ಳ-ಹುಳ್ಳಗೆ’ ಅಂದಂತೆ, ಅವರಿಗೇ ಅನಿಸಿರಬೇಕು.
ಹೋಗಲಿ, ಇನ್ನು ಮುಂದಾದರೂ ಸರಿಯಾದ ವಿಷಯಕ್ಕೆ ಹೋರಾಟ ನಡೆಸಲಿ, ಅದೆಷ್ಟೋ ಜೆನ್ ಜಿಗಳೇ ಮಾದಕ ದ್ರವ್ಯದ ವ್ಯಸನಕ್ಕೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿzರೆ. ರಸ್ತೆ, ಸಾರಿಗೆ ನಿಯಮ ಪಾಲಿಸದೇ ಪ್ರಾಣ ಕಳೆದುಕೊಳ್ಳುತ್ತಿದ್ದರೆ.
ದೇಶದಲ್ಲಿ ಇಂದಿಗೂ ಸಾಮಾಜಿಕ ನ್ಯಾಯ, ಮೀಸಲಾತಿ, ಸ್ವಚ್ಛತೆ, ಭದ್ರತೆ, ಈಗಂತೂ ಕೆಲವು ಪುಕ್ಕಟೆ ಭಾಗ್ಯಗಳು. ಇವೆಲ್ಲದರ ವಿರುದ್ಧ ಪ್ರತಿಭಟನೆ ನಡೆಯುತ್ತದೆಯೇ? ಎಲ್ಲರಿಗೂ ಉಚಿತ ವೈದ್ಯಕೀಯ ಸೌಲಭ್ಯ, ಉಚಿತ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಹೋರಾಟ ನಡೆಯುತ್ತದೆಯೇ? ಈ ಸಮಸ್ಯೆ ಗಳು ಜಿರಳೆ ಪಕ್ಷದ ಕಣ್ಣಿಗೆ ಕಿವಿಗೆ ಬೀಳಲೇ ಇಲ್ಲವೇ? ಮುಂದಾದರೂ ಇಂಥ ವಿಷಯದ ಕುರಿತಾಗಿ ಇವರ ಪ್ರತಿಭಟನೆ ಇರುತ್ತದೆಯೇ? ಸಮಸ್ಯೆಯ ಕುರಿತಾಗಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕು. ಆಗ ಮಾತ್ರ ಇದು ಸರಿಯಾದ ಜೆನ್ ಜಿ ಹೋರಾಟವಾಗುತ್ತದೆ.
ಪಕ್ಷ ಯಾವುದೇ ಇದ್ದರೂ ತಪ್ಪನ್ನು ತಪ್ಪು ಎಂದು ತೋರಿಸಿಕೊಡುವ, ಅದರ ವಿರುದ್ಧ ಧ್ವನಿ ಎತ್ತುವ ಧೈರ್ಯವನ್ನು ರೂಢಿಸಿಕೊಂಡಾಗ ಮಾತ್ರ ಅದು ನಿಜವಾದ ಜೆನ್ ಜಿಹೋರಾಟವಾಗುತ್ತದೆ. ಇಲ್ಲವಾದರೆ ಇದು ಈಗಾಗಲೇ ಹಳತಾಗಿ, ಮುರಿದು ಬಿದ್ದ ಇಂಡಿ ಕಂಪನಿಯ ಹೊಸ ಮಾಡೆಲ್ ಗಾಡಿಯಾಗುತ್ತದೆ. ಮೋರಿಯಿಂದ ಮೇಲೇಳುವುದಕ್ಕಿಂತ ಮೊದಲೇ ಗೋರಿ ಸೇರುತ್ತದೆಯೇ ವಿನಃ ಮತ್ತೇನೂ ಆಗಲು ಸಾಧ್ಯವಿಲ್ಲ.