ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr B S KrishnaKumar Column: ಜನಪಾಲರಾಗಿಯೂ ಸೇವಾನಿರತರಾಗಿರುವ ರಾಜ್ಯಪಾಲ ಸಿ.ಎಚ್.ವಿಜಯಶಂಕರ್

ಮೇಘಾಲಯದ ಕಾರ್ಯಭಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ, ‘ರಾಜಭವನ’ವನ್ನು ‘ಜನಭವನ’ವನ್ನಾಗಿಸಿದ ಅಪರೂಪದ ರಾಜ್ಯಪಾಲರು ಎಂಬುದಾಗಿ ವಿಜಯ ಶಂಕರ್ ಅಲ್ಪಾವಧಿ ಯಲ್ಲೇ ಜನಜನಿತರಾಗಿದ್ದಾರೆ. ಇದು ಕರ್ನಾಟಕದ ನಮಗೆಲ್ಲಾ ಹೆಮ್ಮೆ ತರುವಂಥ ಸಂಗತಿಯೇ ಆಗಿದೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ಸ್ಥಾಪನಾ ದಿನಾಚರಣೆಗಳಲ್ಲಿ ಜನಸಾಮಾನ್ಯರು ರಾಜಭವನದಲ್ಲಿ ಮುಕ್ತವಾಗಿ, ಹೆಮ್ಮೆಯಿಂದ ಬೀಗುತ್ತಾ ನಡೆಯುವುದನ್ನು ನೋಡಿಯೇ ಆನಂದಿಸ ಬೇಕು.

ಜನಪಾಲರಾಗಿಯೂ ಸೇವಾನಿರತರಾಗಿರುವ ರಾಜ್ಯಪಾಲ ಸಿ.ಎಚ್.ವಿಜಯಶಂಕರ್

-

Ashok Nayak Ashok Nayak Oct 22, 2025 11:05 AM

ಗುಣಗಾನ

ಡಾ.ಬಿ.ಎಸ್.ಕೃಷ್ಣಪ್ರಸಾದ್

ಸಾರ್ವಜನಿಕ ಸೇವೆ’ ಎಂಬುದು ವ್ಯಾಪಕವಾದ ಹರಹನ್ನು ಹೊಂದಿರುವ, ಶ್ರಮದಾಯಕವಾದ ಹಾಗೂ ವಿಶಿಷ್ಟ ಕಸುವನ್ನು ನಿರೀಕ್ಷಿಸುವ ಕ್ಷೇತ್ರವಾಗಿದೆ. ಹಾಗಾಗಿಯೇ ಇದು ಎಲ್ಲರಿಗೂ ದಕ್ಕುವಂಥ ದ್ದಲ್ಲ; ದಕ್ಕಿಸಿಕೊಂಡ ಎಷ್ಟೋ ಜನರು ಸಾರ್ಥಕ ಸೇವೆಯನ್ನು ಸಲ್ಲಿಸಲೂ ಇಲ್ಲ. ಆದರೆ, ಇಂಥ ಸೇವಾಜೀವನವನ್ನು ವೃತ್ತಿಯನ್ನಾಗಿ ಸ್ವೀಕರಿಸಿ, ಎಲ್ಲರ ಗಮನ ಸೆಳೆದ ಅನೇಕರಿದ್ದಾರೆ. ಅಂಥವರಲ್ಲಿ ಸಿ.ಎಚ್. ವಿಜಯಶಂಕರ್ ಅವರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ.

ಅತ್ಯಂತ ಸಂಭಾವಿತ, ಸಜ್ಜನ ಹಾಗೂ ಸುಶಿಕ್ಷಿತ ರಾಜಕಾರಣಿಯಾಗಿ ಇವರು ಸಮಾಜದ ಎಲ್ಲ ಮಜಲುಗಳನ್ನೂ ಒಳಹೊಕ್ಕು, ಸೇವಾತತ್ಪರತೆಯನ್ನೇ ಉಸಿರಾಗಿಸಿಕೊಂಡು ಬೆಳೆದು, ಪ್ರಸ್ತುತ ಮೇಘಾಲಯ ರಾಜ್ಯದ ಘನತೆವೆತ್ತ ರಾಜ್ಯಪಾಲರಾಗಿ ಒಂದು ಪ್ರತಿಷ್ಠಿತ ಸಾಂವಿಧಾನಿಕ ಹುದ್ದೆ ಯನ್ನು ಅಲಂಕರಿಸಿದ್ದಾರೆ. ಈ ಹುದ್ದೆಗೆ ತಮ್ಮ ಬಹುಆಯಾಮದ ಚಿಂತನೆಯ ಮೂಲಕ ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ.

ರಾಜಕೀಯ ಕ್ಷೇತ್ರವನ್ನು ತಮ್ಮ ಸೇವಾಜೀವನದ ಪವಿತ್ರ ಹೊಣೆಗಾರಿಕೆಯೆಂದು ಸ್ವೀಕರಿಸಿ, ಉತ್ತುಂಗದ ಪದವಿಯನ್ನು ಏರಿದ್ದರೂ, ನೆಲಮೂಲದ ಆಶಯವನ್ನು ಬಿಟ್ಟುಕೊಡದ ಇವರ ವ್ಯಕ್ತಿತ್ವ ಎಂದೆಂದಿಗೂ ಅನುಕರಣೀಯ.

ಸಂವಿಧಾನದಲ್ಲಿನ ಯಾವ ಹುದ್ದೆಯೂ ಶ್ರೇಷ್ಠ ಅಥವಾ ಕನಿಷ್ಠ ಎಂಬ ತರತಮವನ್ನು ಹೊಂದಿ ರುವುದಿಲ್ಲ; ಆದರೆ ಜನರು ಅದನ್ನು ತಂತಮ್ಮ ಮನೋಭಾವಕ್ಕೆ ಅನುಗುಣವಾಗಿ ಕಾಣುತ್ತಿರುತ್ತಾರೆ. ಅಭಿಪ್ರಾಯಗಳೇನೇ ಇರಲಿ, ಆಯಾ ಸ್ಥಾನದಲ್ಲಿರುವವರು ತಾವು ಹೊತ್ತಿರುವ ಜವಾಬ್ದಾರಿಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಾರೆ ಎಂಬುದರಲ್ಲಿ ಸಾರ್ವಜನಿಕ ಸೇವಕರ ಕಾರ್ಯಕ್ಷಮತೆ ಮತ್ತು ದಕ್ಷತೆಯು ನಿರ್ಧಾರವಾಗುವುದಂತೂ ನಿಜ.

ಪ್ರಸ್ತುತ ವಿಜಯಶಂಕರ್ ಅವರು ತಮ್ಮ ಅಪೂರ್ವ ಕಾರ್ಯದಕ್ಷತೆಯ ಮೂಲಕ ಮೇಘಾಲಯ ದಲ್ಲಿ ಜನಾನುರಾಗಿ ರಾಜ್ಯಪಾಲರೆಂದು ಬಿರುದು ಪಡೆದಿರುವುದು, ಅವರ ತವರುರಾಜ್ಯದವರಾದ ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯವೇ ಆಗಿದೆ.

ಇದನ್ನೂ ಓದಿ: Raghav Sharma Nidle Column: ಮಹಾಮೈತ್ರಿಯೊಳಗೆ ಅಪನಂಬಿಕೆಯ ಅಪಸ್ವರ

ಈ ಹಿಂದೆ, ಕರ್ನಾಟಕದಲ್ಲಿ ಹುಣಸೂರು ಕ್ಷೇತ್ರದ ಶಾಸಕರಾಗಿ, ಮೈಸೂರಿನ ಸಂಸದರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಅರಣ್ಯಮಂತ್ರಿಗಳಾಗಿ ಅನನ್ಯ ಸೇವೆ ಸಲ್ಲಿಸಿದ ಕೀರ್ತಿಯನ್ನು ಹೊತ್ತಿರುವ ವಿಜಯಶಂಕರ್ ಅವರು, ಶ್ರೀಸಾಮಾನ್ಯರೊಡನೆ ಸರಳವಾಗಿ ಸ್ನೇಹಪರವಾಗಿ ಬೆರೆಯುವ ತಮ್ಮ ವೈಶಿಷ್ಟ್ಯದಿಂದಾಗಿ ಇಂದಿಗೂ ಹಳ್ಳಿಗಳಲ್ಲಿ ಶ್ಲಾಘನೆಗೆ ಒಳಗಾಗಿದ್ದಾರೆ. ಅವರ ವ್ಯಕ್ತಿತ್ವದ ಭಾಗವೇ ಆಗಿರುವ ಸರಳತೆ, ಸಜ್ಜನಿಕೆ ಹಾಗೂ ಪ್ರಾಮಾಣಿಕತೆಗಳು, ಅವರು ಅಲಂಕರಿಸಿದ ಎಲ್ಲ ಪದವಿ ಗಳಿಗೂ ವ್ಯಾಪಿಸಿ, ಅವುಗಳ ಗೌರವವನ್ನು ಮತ್ತಷ್ಟು ಹೆಚ್ಚಿತು ಎಂಬುದರಲ್ಲಿ ಉತ್ಪ್ರೇಕ್ಷೆಯಿಲ್ಲ.

ಅವರ ವೈಯಕ್ತಿಕ ಮತ್ತು ಸಾರ್ವಜನಿಕ ನಡವಳಿಕೆಗಳು ತೆರೆದ ಪುಸ್ತಕದಂತೆ ನೈಜತೆಯುಳ್ಳದ್ದಾಗಿವೆ. ಕರ್ನಾಟಕದ ಉದ್ದಗಲದ ಅನೇಕ ಸಂಘ-ಸಂಸ್ಥೆಗಳು, ಮಠ-ಮಾನ್ಯಗಳು, ಸಾರ್ವಜನಿಕರು ಇಂದಿಗೂ ಅವರನ್ನು ಸಭೆ-ಸಮಾರಂಭಗಳಿಗೆ ನಿರಂತರವಾಗಿ ಪ್ರೀತ್ಯಾಭಿಮಾನಗಳಿಂದ ಆಮಂತ್ರಿಸು ತ್ತಿರುವುದನ್ನು ಕಂಡಾಗ, ಅವರ ಜನಪ್ರಿಯತೆ ಮತ್ತು ವರ್ಚಸ್ಸು ಅಗಾಧವಾಗಿ ಬೆಳೆಯುತ್ತಲೇ ಇರುವುದು ರುಜುವಾತಾಗುತ್ತದೆ.

C H v

ತಿಂಗಳಿಗೊಂದೆರಡು ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಮೇಘಾಲಯದ ಶಿಲ್ಲಾಂಗ್‌ನ ರಾಜ ಭವನಕ್ಕೆ ಭೇಟಿನೀಡಿ, ಒಂದಿಲ್ಲೊಂದು ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸುವುದು ವಾಡಿಕೆ ಯೇ ಆಗಿ ಬಿಟ್ಟಿದೆ. ಎಷ್ಟೋ ಬಾರಿ, ಮೇಘಾಲಯದ ಕಾರ್ಯಭಾರದಷ್ಟೇ ಕರ್ನಾಟಕದ ಕಡೆಗೂ ಅವರು ಗಮನಹರಿಸುವುದು ಅನಿವಾರ್ಯವೆನಿಸಿರುವುದನ್ನು ನೋಡಿದ್ದೇವೆ.

ಇನ್ನು, ಮೇಘಾಲಯದ ಕಾರ್ಯಭಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ, ‘ರಾಜಭವನ’ವನ್ನು ‘ಜನಭವನ’ವನ್ನಾಗಿಸಿದ ಅಪರೂಪದ ರಾಜ್ಯಪಾಲರು ಎಂಬುದಾಗಿ ವಿಜಯ ಶಂಕರ್ ಅಲ್ಪಾವಧಿಯಲ್ಲೇ ಜನಜನಿತರಾಗಿದ್ದಾರೆ. ಇದು ಕರ್ನಾಟಕದ ನಮಗೆಲ್ಲಾ ಹೆಮ್ಮೆ ತರುವಂಥ ಸಂಗತಿಯೇ ಆಗಿದೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮತ್ತು ಸ್ಥಾಪನಾ ದಿನಾಚರಣೆಗಳಲ್ಲಿ ಜನಸಾಮಾನ್ಯರು ರಾಜಭವನದಲ್ಲಿ ಮುಕ್ತವಾಗಿ, ಹೆಮ್ಮೆಯಿಂದ ಬೀಗುತ್ತಾ ನಡೆಯುವುದನ್ನು ನೋಡಿಯೇ ಆನಂದಿಸಬೇಕು. ಅಂತೆಯೇ ಶಾಲಾ ಮಕ್ಕಳು ವರ್ಷವಿಡೀ ಮುಕ್ತವಾಗಿ ಭೇಟಿ ಮಾಡಲು ರಾಜಭವನದ ಮಹಾದ್ವಾರ ತೆರೆದಿರುವುದು ಇದೇ ಮೊದಲು ಎನ್ನಬಹುದು.

ಹೀಗೆ ಬಂದವರಿಗೆ, 150 ವರ್ಷಗಳ ಇತಿಹಾಸವನ್ನು ಹೊಂದಿರುವ, ಮರಮುಟ್ಟುಗಳಿಂದಲೇ ನಿರ್ಮಿತವಾದ ಈ ಐತಿಹಾಸಿಕ ರಾಜಭವನದ ಕಟ್ಟಡದ ಸೌಂದರ್ಯವನ್ನು ಸವಿಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ; ಅಲ್ಲಿನ ಸಿಬ್ಬಂದಿಯ ಆದರಾತಿಥ್ಯ, ಸಹಕಾರ ಮತ್ತು ಶಿಷ್ಟಾಚಾರ ಗಳನ್ನಂತೂ ಎಷ್ಟು ಹೊಗಳಿದರೂ ಸಾಲದು. ರಾಜಭವನವನ್ನು ಆವರಿಸಿರುವ ನಂದನವನದಂಥ ಸುಂದರ ಉದ್ಯಾನ, ಅಲ್ಲಿನ ಪುಷ್ಪ ಪ್ರದರ್ಶನ ನೋಡುಗರ ಕಂಗಳಿಗೆ ರಸದೂಟವನ್ನೇ ಉಣಬಡಿಸುತ್ತವೆ. ಕರ್ನಾಟಕದಿಂದ ಬಂದವರಿಗೆ ಮೇಘಾಲಯದ ರಾಜಭವನ ತೆರೆದ ಮನೆ ಯಾಗಿದ್ದು, ಹೀಗೆ ಭೇಟಿ ನೀಡಿದವರು ‘ನಂದನದ ತುಣುಕೊಂದು ಬಿದ್ದಿದೆ, ನೋಟ ಸೇರದು ಯಾರಿಗೆ’ ಎಂಬ ಬೇಂದ್ರೆಯವರ ಸಾಲನ್ನು ನೆನೆಯದಿರಲು ಸಾಧ್ಯವಿಲ್ಲವೇನೋ!

ಇಂಥ ಸ್ವರ್ಗಸದೃಶ ಸಸ್ಯಸಂಕುಲ ಅಲ್ಲಿ ಸೃಷ್ಟಿಯಾಗಲು ಮಾನ್ಯ ರಾಜ್ಯಪಾಲರೇ ಕಾರಣಕರ್ತ ರೆಂದರೆ ಅಚ್ಚರಿಯಾಗಬಹುದು. ಕೆಲವೊಂದು ಮೇರುವ್ಯಕ್ತಿತ್ವಗಳು ಕಾರ್ಯದೊತ್ತಡಗಳಿಂದ ತಮ್ಮನ್ನು ಹಗುರಾಗಿಸಿಕೊಳ್ಳುವುದು ಕೂಡ ಜಗತ್ತನ್ನು ಹಸಿರಾಗಿಸಿಬಿಡುತ್ತದೇನೋ!

ಈ ಮಾತಿಗೆ ಪೂರ್ವನಿದರ್ಶನವೆಂಬಂತೆ, ರಾಷ್ಟ್ರಪತಿ ಭವನದ ಉದ್ಯಾನವನ್ನು ಜನಸಾಮಾನ್ಯರಿಗೆ ಮುಕ್ತವಾಗಿ ತೆರೆದಿಟ್ಟ ಮಹಾನ್ ವ್ಯಕ್ತಿ ಡಾ. ಎಪಿಜೆ ಅಬ್ದುಲ್ ಕಲಾಂ ಎಂಬುದನ್ನು ಈ ಸಂದರ್ಭ ದಲ್ಲಿ ಸ್ಮರಿಸಲೇಬೇಕಾಗುತ್ತದೆ. ಅವರು ತಾವು ಹೋದಲ್ಲೆಲ್ಲಾ ಮಕ್ಕಳನ್ನು ಪ್ರೀತಿಸಿದ್ದು ಪ್ರೇರೇಪಿಸಿದ್ದು ಇಂದಿಗೂ ಎಲ್ಲರ ಮನದಲ್ಲಿ ಹಸಿರಾಗಿದೆ. ಅದೇ ಮೇಲ್ಪಂಕ್ತಿಯನ್ನು ಅನುಸರಿಸು ತ್ತಿರುವ ವಿಜಯಶಂಕರ್ ಅವರು ಮೇಘಾಲಯದ ಮಕ್ಕಳ ಪಾಲಿಗೆ ಸ್ಪೂರ್ತಿಯಾಗಿ ಬೆರೆತು ಹೋಗಿರುವುದು ಜನರಾಡುವ ಮಾತುಗಳಲ್ಲಿ ನಿಚ್ಚಳವಾಗಿ ಕಾಣಿಸುತ್ತದೆ.

ಮೇಘಾಲಯದ 20ರ ಹರೆಯದ ರಿಫಿನೆಸ್ ವಾರ್ಜರಿ ಎಂಬಾಕೆಯು ಇತ್ತೀಚೆಗೆ ಮೌಂಟ್ ಎವರೆಸ್ಟ್ ಪರ್ವತಾರೋಹಣ ಮಾಡಿದ ಸುದ್ದಿ ಕೇಳಿದ ಕೂಡಲೇ ರಾಜ್ಯಪಾಲರು ಆಕೆಗೆ ರಾಜಾತಿಥ್ಯ ನೀಡಿ, ಒಂದು ಲಕ್ಷ ರು. ಕೊಡುಗೆಯಿತ್ತು, ಅವರ ಕುಟುಂಬಿಕರಿಗೆ ರಾಜಭವನದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ ಸಂಭ್ರಮಿಸಿದ ಗಳಿಗೆಯನ್ನಂತೂ ನಾನು ಮರೆಯಲಾರೆ.

ಹಾಗೆಯೇ, ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ ಈಶಾನ್ಯ ರಾಜ್ಯಗಳ ಎಲ್ಲ ಮಕ್ಕಳನ್ನೂ ಅವರು ಆಮಂತ್ರಿಸಿ, ಆತ್ಮೀಯವಾಗಿ ಗೌರವಿಸಿದ ಕ್ಷಣಗಳು ನನ್ನ ಕಣ್ಣಿಗೆ ಕಟ್ಟಿದ ಸಾರ್ಥಕ ದೃಶ್ಯವೇ ಆಗಿವೆ. ವಿಜಯಶಂಕರ್ ಅವರು ಆ ಮಕ್ಕಳನ್ನು ಆತ್ಮೀಯವಾಗಿ ಆಲಿಂಗಿಸಿ ಅಭಿನಂದಿಸಿದ ರೀತಿ ಅನನ್ಯ. ರಾಜ್ಯಪಾಲರಂಥ ಉನ್ನತ ಹುದ್ದೆಯಲ್ಲಿದ್ದುಕೊಂಡು ಇಂಥ ಮನುಷ್ಯ ಸಹಜ ಪ್ರೀತಿಯನ್ನು ತೋರುವ ಸದ್ಗುಣ ಅವರಲ್ಲಿ ದಟ್ಟೈಸಿದೆ.

ಅವರ ಹಸನ್ಮುಖ, ಸರಳತೆ, ಆತ್ಮೀಯತೆಗಳು ಜನರೊಂದಿಗೆ ಅಂತರವನ್ನು ನಿರ್ಮಿಸದೆ ಸಾಮೀಪ್ಯ ವನ್ನು ದಕ್ಕಿಸಿಕೊಡುತ್ತಿರುವುದರಿಂದಲೇ ಜನಸಾಮಾನ್ಯರು ವಿಜಯಶಂಕರ್ ಅವರ ಕುರಿತು ಹೆಮ್ಮೆ ಪಡುತ್ತಿರುವುದು ದಿನೇ ದಿನೆ ವೃದ್ಧಿಸುತ್ತಲೇ ಇದೆ. ರಾಜ್ಯದ ಪ್ರಥಮ ಪ್ರಜೆ ಎನಿಸಿರುವ ರಾಜ್ಯಪಾಲರೇ, ಮೇಘಾಲಯದಂಥ ಗುಡ್ಡಗಾಡು ಪ್ರದೇಶದ, ‘ಖಾಸಿ, ಗಾರೋ ಮತ್ತು ಜೇಂಟಿ’ ಎಂಬ ಪರಿಶಿಷ್ಟ ಪಂಗಡದವರು ನೆಲೆಸಿರುವ ಗ್ರಾಮಗಳಿಗೆ ಸ್ವತಃ ತೆರಳಿ, ಅವರ ಕಷ್ಟ-ಸುಖಗಳನ್ನು ಆಲಿಸಿ ಸ್ಪಂದಿಸುತ್ತಿರುವುದು ಅವರ ನಿಷ್ಕಪಟತೆಗೆ ಸಾಕ್ಷಿಯಾಗಿದೆ.

ಹೀಗೆ ರಾಜ್ಯಪಾಲರು ಜನಪಾಲಕರಂತೆ ನಡೆದುಕೊಳ್ಳುತ್ತಿರುವುದು ಅಲ್ಲಿನ ಅಧಿಕಾರಸ್ಥರಲ್ಲೂ ಅಚ್ಚರಿ ಮೂಡಿಸಿರುವುದು, ರಾಜ್ಯದ ಮಂತ್ರಾಲಯ ಮತ್ತು ಜನಪ್ರತಿನಿಧಿಗಳು ಅವರನ್ನು ಗೌರವಿಸು ವಂತಾಗಿರುವುದು ಸತ್ಯಸಂಗತಿ. ಆಡಳಿತ ಪಕ್ಷದವರನ್ನು, ವಿಪಕ್ಷದವರನ್ನು, ಹಾಗೆಯೇ ವಿವಿಧ ಸ್ತರದ ಅಧಿಕಾರಿಗಳನ್ನು ಸಮಭಾವದಿಂದ ನಡೆಸಿಕೊಳ್ಳುವ ವಿಜಯಶಂಕರ್ ಅವರ ಮನೋಧರ್ಮವು ರಾಜ್ಯಾಡಳಿತವನ್ನು ತಿಳಿಯಾಗಿಸಿರುವುದರ ಜತೆಗೆ, ಸಾಮರಸ್ಯದ ವಾತಾವರಣ ವನ್ನೂ ಸೃಷ್ಟಿಸಿದೆ.

ಇಂಥ ಔದಾರ್ಯದಿಂದಾಗಿ, ಅನುಸರಿಸಲೇಬೇಕಾದ ‘ಶಿಷ್ಟಾಚಾರ ನಿಯಮ’ಗಳನ್ನು ಎಷ್ಟೋ ಬಾರಿ ಮೀರಿದ್ದೂ ಇದೆ. ರಾಜಭವನದ ಕಾರ್ಯಕ್ರಮ, ಸರಕಾರಿ ಅಥವಾ ಧಾರ್ಮಿಕ ಕಾರ್ಯಕ್ರಮ ಹೀಗೆ ಯಾವುದೇ ಇರಲಿ, ಈ ರಾಜ್ಯಪಾಲರು ಭಾಗವಹಿಸುತ್ತಾರೆಂದರೆ, ಸದ್ಭಾವನಾ ವಾತಾವರಣ, ಸಂತೃಪ್ತಿಯ ಭಾವ ಅಲ್ಲಿ ಆವರಿಸಿಬಿಡುತ್ತದೆ. ಈ ಎಲ್ಲ ಗುಣ-ವೈಶಿಷ್ಟ್ಯಗಳು, ವಿಜಯಶಂಕರ್ ಅವರ ಕಠಿಣ ಪರಿಶ್ರಮದ ಫಲಶ್ರುತಿ ಎಂದರೆ ಅತಿಶಯೋಕ್ತಿಯಲ್ಲ.

ರಾಜ್ಯಪಾಲರಾಗಿ ತಾವು ಮೆರೆಯುತ್ತಿರುವ ಕಾರ್ಯದಕ್ಷತೆಯಿಂದಾಗಿ ವಿಜಯಶಂಕರ್ ಅವರು ರಾಜ್ಯದ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಕಾಪಾಡುತ್ತಾ, ಕೇಂದ್ರ ಸರಕಾರದ ಆಶಯದಂತೆ ಮೇಘಾಲಯವನ್ನು ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ತಮ್ಮ ಹುದ್ದೆಯ ಸಾಂಪ್ರದಾಯಿಕ ಕಾರ್ಯಭಾರದ ಜತೆಜತೆಗೆ, ಜನಪರ ಕಾರ್ಯಕ್ರಮಗಳನ್ನೂ ಕೈಗೆತ್ತಿಕೊಂಡಿರುವ ರಾಜ್ಯಪಾಲರಾಗಿದ್ದಾರೆ.

ಕ್ಷೇತ್ರಾಧಿಕಾರಿಯಂತೆ ಕಾರ್ಯನಿರ್ವಹಿಸುತ್ತಾ ಮೇಘಾಲಯದ ಮೂಲೆಮೂಲೆಗೂ ತಲುಪುವ ಅರಿವಿನ ಅಭಿಯಾನವನ್ನು ನಡೆಸುತ್ತಿರುವ ಇವರು, ಪ್ರಧಾನ ಮಂತ್ರಿಯವರ ಅನೇಕ ಮಹತ್ವಾ ಕಾಂಕ್ಷೆಯ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು, ಸೃಜನಾತ್ಮಕವಾಗಿ ಅನುಷ್ಠಾನ ಗೊಳಿಸಿದ್ದಾರೆ. ವಿಶ್ವವಿದ್ಯಾಲಯದ ಚಾನ್ಸಲರ್ ಆಗಿ ಯುವಶಕ್ತಿಯನ್ನು ಹುರಿದುಂಬಿಸುವುದು, ತಮ್ಮ ಭಾಷಣಗಳಲ್ಲಿ ಸ್ವಾಮಿ ವಿವೇಕಾನಂದರ ವಾಣಿಯನ್ನು ತಪ್ಪದೆ ಪುನರುಚ್ಚರಿಸುವುದು ವಿಜಯಶಂಕರ್ ಅವರ ವೈಶಿಷ್ಟ್ಯ.

‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಭಾವನೆಯನ್ನು ಬಿತ್ತುವ, ‘ಮೈ ಯಂಗ್ ಇಂಡಿಯಾ’, ‘ಏಕ್ ಪೇಡ್ ಮಾ ಕೆ ನಾಮ್’ ಆಂದೋಲನಗಳ ಕುರಿತು ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸು ತ್ತಿರುವ ಇವರು, ಇದಕ್ಕಾಗಿ ಎನ್‌ಸಿಸಿ, ಎನ್‌ಎಸ್‌ಎಸ್, ನೆಹರು ಯುವಕ ಕೇಂದ್ರ, ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಮುಂತಾದ ವಿಭಾಗಗಳಿಗೆ ಕರೆನೀಡಿ ಒಗ್ಗೂಡಿಸುವಲ್ಲಿ ಕಾರ್ಯೋನ್ಮುಖ ರಾಗಿದ್ದಾರೆ.

‘ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಭಿಯಾನ’ ಯೋಜನೆಯಡಿಯಲ್ಲಿ ‘ಬುಡಕಟ್ಟು ಸಮುದಾಯಗಳ ಹೆಮ್ಮೆಯ ದಿನ’ವನ್ನು ಆಚರಿಸುವ ಮೂಲಕ ಬುಡಕಟ್ಟು ಪಂಗಡಗಳು ಪ್ರಧಾನವಾಗಿರುವ ಮೇಘಾಲಯದಲ್ಲಿ ಚೈತನ್ಯವನ್ನು ತುಂಬುತ್ತಿದ್ದಾರೆ. ಇದರಿಂದಾಗಿ ಕುಗ್ರಾಮದ ನಿವಾಸಿಗಳಲ್ಲೂ ಜಾಗೃತಿ ಮೂಡಿದೆ.

‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂಬ ಪಂಪನ ವಾಣಿಯಂತೆ, ಮೇಘಾಲಯದಲ್ಲಿದ್ದರೂ ಕರ್ನಾಟಕದ ಜತೆಗಿನ ‘ಕರುಳು-ಬಳ್ಳಿ’ ಸಂಬಂಧವನ್ನು ಬಿಟ್ಟುಕೊಡಲಾಗದ ಆಪ್ಯಾಯತೆ ವಿಜಯಶಂಕರ್ ಅವರದ್ದು. ಮೇಘಾಲಯದ ಬುಡಕಟ್ಟಿನ ಸಂಪ್ರದಾಯಗಳೊಂದಿಗೆ ಸಾದೃಶವಾಗಿರುವ ಅನ್ಯರಾಜ್ಯಗಳ ಸಾಂಸ್ಕೃತಿಕ ವಿಚಾರಗಳನ್ನು ಮನದಟ್ಟು ಮಾಡಿಕೊಟ್ಟು, ಸಾಂಸ್ಕೃತಿಕ ವಿನಿಮಯಕ್ಕೆ ಅನುವು ಮಾಡಿಕೊಡಲು ವಿಜಯಶಂಕರ್ ಸಂಕ್ಪಲಿಸಿದರು.

ಇದರನ್ವಯ, ಕರ್ನಾಟಕದ ಶಿಳ್ಳೇಕ್ಯಾತರು ಮತ್ತು ಜೋಗತಿ ನೃತ್ಯ ತಂಡಗಳನ್ನು ಶಿಲ್ಲಾಂಗ್‌ಗೆ ಕರೆಸಿಕೊಂಡು, ರಾಜಭವನದಲ್ಲಿ ಅವರ ನೃತ್ಯ ಪ್ರದರ್ಶನಕ್ಕೆ ಅನುವುಮಾಡಿಕೊಟ್ಟು, ಮೇಘಾಲಯದ ನಾಗರಿಕರಿಗೆ ಕರ್ನಾಟಕದ ಜನಪದ ಕಲೆಯನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇನ್ನು, ಮೇಘಾಲಯ-ಬಾಂಗ್ಲಾ ಗಡಿಪ್ರದೇಶಗಳಿಗೆ ಭೇಟಿಯಿತ್ತು, ಅಲ್ಲಿನ ಜನರ ಕಷ್ಟನಷ್ಟ ಗಳನ್ನರಿತು, ಅವರು ನೆಮ್ಮದಿಯ ಜೀವನ ನಡೆಸುವಂತಾಗಲೆಂದು, ಸಂಬಂಧಿತ ಅಧಿಕಾರಿಗಳು, ಬಿಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್ ಅಧಿಕಾರಿಗಳೊಡನೆ ಸಭೆಗಳನ್ನು ನಡೆಸಿ, ಶೀಘ್ರ ಪರಿಹಾರ ಕ್ಕಾಗಿ ವಿಜಯಶಂಕರ್ ಅವರು ಶ್ರಮಿಸುತ್ತಿರುವುದು ಸಾಧಾರಣ ವಿಷಯವಲ್ಲ.

ಜತೆಗೆ, ಸಮಾಜದ ವಿವಿಧ ಕ್ಷೇತ್ರಗಳ ನಾಗರಿಕ ಮುಖಂಡರನ್ನು, ರೈತರನ್ನು, ಉದ್ದಿಮೆದಾರರನ್ನು, ಸ್ವಯಂಸೇವಾ ಸಂಘಗಳ ವರನ್ನು ಹಾಗೂ ಮಹಿಳಾ ಮುಖಂಡರನ್ನು ಕರೆಸಿ, ರಾಷ್ಟ್ರನಿರ್ಮಾಣದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗುವಂತೆ ಇವರು ಉತ್ತೇಜಿಸುತ್ತಿದ್ದಾರೆ. ಈ ಸಂಬಂಧವಾಗಿ ಔಪಚಾರಿಕ ಸಭೆಗಳನ್ನು ಆಯೋಜಿಸಿ, ಸಲಹೆ-ಸೂಚನೆ ನೀಡುವ ಮುಖಾಂತರ ಸಮಾಜದಲ್ಲಿ ಆಶಾದಾಯಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿದ್ದಾರೆ.

ರೆಡ್ ಕ್ರಾಸ್ ಮತ್ತು ರಾಜ್ಯ ಆರೋಗ್ಯ ಇಲಾಖೆಯವರ ಜತೆಗೂಡಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಮತ್ತು ಸಸಿ ನೆಡುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ‘ವಿಕಸಿತ ಭಾರತ’ ದಾರ್ಶನಿಕ ಉಪನ್ಯಾಸಗಳ ಮೂಲಕ ಯುವಕರಿಗೆ, ಮಹಿಳೆಯರಿಗೆ ಮತ್ತು ಸಮಾಜದ ಇತರೆ ಜನತೆಗೆ ಅರಿವುಮೂಡಿಸುವ ಅಭಿಯಾನವನ್ನು ರೂಪಿಸಿದ್ದಾರೆ.

ಮೇಘಾಲಯದಲ್ಲಿ ಮಾದಕದ್ರವ್ಯದ ವ್ಯಸನಿಗಳ ಶೇಕಡಾವಾರು ಪ್ರಮಾಣವು ಹೆಚ್ಚಾಗಿರುವುದನ್ನು ಗಮನಿಸಿ, ‘ನಿಶಾಮುಕ್ತ ಭಾರತ’ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಆರೋಗ್ಯ ತಜ್ಞರಿಂದ ನಿರಂತರ ಅರಿವಿನ ಕಾರ್ಯಕ್ರಮ ಗಳನ್ನು ರೂಪಿಸುವುದಕ್ಕೆ ಮತ್ತು ಪರಿಹಾರ ವ್ಯವಸ್ಥೆಗೆ ಒತ್ತು ನೀಡಿದ್ದಾರೆ.

ರಾಜ್ಯ ಸರಕಾರ, ವಿಶ್ವವಿದ್ಯಾಲಯಗಳು, ಬ್ರಹ್ಮಕುಮಾರಿ ಸಮಾಜ ಮತ್ತು ಇತರ ಧಾರ್ಮಿಕ ಸಂಘಟನೆಗಳು ಕೈಜೋಡಿಸುವುದರಿಂದ ಈ ಮಹತ್ತರ ಕಾರ್ಯವು ಯಶಸ್ಸಿನ ದಡ ಸೇರುವ ಆಶಾಭಾವನೆಯನ್ನು ಇಟ್ಟುಕೊಂಡಿದ್ದಾರೆ. ವಿಜಯಶಂಕರ್ ಅವರು ತಮ್ಮ ಬಿಡುವಿಲ್ಲದ ಕಾರ್ಯಗಳ ನಡುವೆಯೂ, ಅರಣ್ಯೀಕರಣ, ಸುಸ್ಥಿರ ಅಭಿವೃದ್ಧಿ ಮತ್ತು ಕೃಷಿ ಅಭಿವೃದ್ಧಿಯಂಥ ತಮಗೆ ಪ್ರಿಯವಾದ ಕ್ಷೇತ್ರಗಳಿಗೆ ಸಂಬಂಧಿಸಿ, ತಮ್ಮ ಅನುಭವದ ಹಿನ್ನೆಲೆಯಲ್ಲಿ ರಾಜ್ಯ ಸರಕಾರಕ್ಕೆ ಮೌಲ್ಯಯುತ ಸಲಹೆ-ಸೂಚನೆ ನೀಡಿರುವುದು ಸ್ತುತ್ಯರ್ಹ.

ಜೀವವೈವಿಧ್ಯಗಳ ಅಭಿವೃದ್ಧಿಯನ್ನು ಉತ್ತೇಜಿಸುವಂಥ ಸ್ಥಳೀಯ ಪ್ರಭೇದದ ಸಸ್ಯಗಳನ್ನು ನೆಡಿಸುವಲ್ಲಿ, ಸಾಂಬಾರ ಪದಾರ್ಥಗಳು ಮತ್ತು ಔಷಧಿಯ ಗಿಡಮೂಲಿಕೆ ಪ್ರಭೇದಗಳನ್ನು ಹೆಚ್ಚಿಸುವಲ್ಲಿ ಶ್ರೀಯುತರು ಸಫಲರಾಗಿದ್ದಾರೆ.

ರಾಜಭವನದಲ್ಲಿಯೂ ಸಾವಯವ ಕೃಷಿ ಮಾಡಿಸಿ, ರಾಜ್ಯದ ಎಲ್ಲಾ ಸಂಸ್ಥೆ ಮತ್ತು ಇಲಾಖಾ ಆವರಣಗಳಿಗೂ ಅದನ್ನು ವಿಸ್ತರಿಸಲು ಉದ್ದೇಶಿಸಿದ್ದಾರೆ, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಸ್ವಚ್ಛತಾ ಆಂದೋಲನದಲ್ಲಿ ತೊಡಗುವಂತೆ ಪ್ರೇರೇಪಿಸಿದ್ದಾರೆ.

ಇನ್ನು, ಮೇಘಾಲಯದ ಅನೇಕ ಕರಕುಶಲ ವಸ್ತುಗಳು, ಪುರಾತನ ಐತಿಹಾಸಿಕ ಸ್ಥಳಗಳು, ಗಿಡ-ಮರಗಳು, ಜಾನಪದ ಕಲೆ, ಪಾರಂಪರಿಕ ಆಚರಣೆಗಳಿಗೆ ‘ಜಿಐ ಟ್ಯಾಗ್’ ದೊರಕಿಸಿ ಕೊಡುವ ಸಲುವಾಗಿ, ತಜ್ಞರಾದ ಪದ್ಮಶ್ರೀ ರಜನಿಕಾಂತ್ ಅವರನ್ನು ಆಮಂತ್ರಿಸಿ, ಸಮಾಲೋಚಿಸಿ ಕಾರ್ಯೋನ್ಮುಖರಾಗಿರುವ ರಾಜ್ಯಪಾಲರ ನಡೆ ಶ್ಲಾಘನೀಯ.

ಸಾಂವಿಧಾನಿಕ ಕರ್ತವ್ಯಗಳು ಸುಲಲಿತವಾಗಿ ಜರುಗುವಂತೆ ಎಚ್ಚರವಹಿಸಿ ನಿರ್ವಹಣೆ ಮಾಡುವು ದರಿಂದ, ಸರಕಾರದೊಡನೆ ಸುಮಧುರ ಬಾಂಧವ್ಯವನ್ನು ವಿಜಯಶಂಕರ್ ಕಾಪಿಟ್ಟು ಕೊಂಡಿದ್ದಾರೆ. ಮಸೂದೆಯೊಂದು ವಿವಾದವಿಲ್ಲದೆ ಅಂಗೀಕೃತವಾಗುವಂತೆ ನೋಡಿಕೊ ಳ್ಳುವ ನೈಪುಣ್ಯ ಮತ್ತು ಸ್ನೇಹಪರತೆಯನ್ನು ಅವರಿಂದ ಕಲಿಯಬೇಕು.

ಹೀಗೆ ಸ್ವತಃ ಹಲವು ಅಭಿವೃದ್ಧಿ ಕಾರ್ಯಯೋಜನೆಗಳನ್ನು ರೂಪಿಸಿ, ಉತ್ಸುಕತೆಯಿಂದ ಮುನ್ನಡೆಸುತ್ತಿರುವ ರಾಜ್ಯಪಾಲರು ಇಂದಿನ ದಿನಮಾನಗಳಲ್ಲಿ ವಿರಳವೆನ್ನಬೇಕು. ಮೇಘಾಲಯದ ಸರ್ವತೋಮುಖ ಅಭಿವೃದ್ಧಿಗಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾಜ್ಯದ ಮುಖ್ಯಮಂತ್ರಿಗಳ ಜತೆಗಿನ ಸುಮಧುರ ಬಾಂಧವ್ಯದಿಂದಾಗಿ, ವಿಜಯಶಂಕರ್‌ರವರ ಕಾರ್ಯಯೋಜನೆಗಳು ಸಾಂಗವಾಗಿ ನಡೆಯುತ್ತಾ ನಿಶ್ಚಿತ ಗುರಿಯನ್ನು ತಲುಪುತ್ತಿವೆ.

ಮಾನ್ಯ ರಾಜ್ಯಪಾಲರು ಅಭಿವೃದ್ಧಿ ಪಥದ ಪ್ರವರ್ತಕರಾಗಿದ್ದು, ತಮ್ಮ ತವರುರಾಜ್ಯ ಕರ್ನಾಟಕದ ಬಗ್ಗೆಯೂ ಸದಾ ಆಲೋಚಿಸುವುದಲ್ಲದೆ, ರಾಜ್ಯದ ಅಭಿವೃದ್ಧಿ ಪ್ರಸ್ತಾವನೆಗಳು ತಮ್ಮ ಗಮನಕ್ಕೆ ಬಂದಾಗ ಪಕ್ಷಾತೀತ ಮನೋಭಾವದೊಂದಿಗೆ ಮುತುವರ್ಜಿ ವಹಿಸಿ, ಕೇಂದ್ರ ಸರಕಾರದೊಡನೆ ಸಂಪರ್ಕಿಸಿ, ಪರಿಹಾರ ದಕ್ಕಿಸಿಕೊಡುವಲ್ಲಿ ನಿರತರಾಗಿರುವುದನ್ನು ಕಾಣಬಹುದು.

ಅವರ ಈ ಅನನ್ಯ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ ಕರ್ನಾಟಕ ರಾಜ್ಯದ ವತಿಯಿಂದ ‘ಕಾವೇರಿ ಪ್ರಶಸ್ತಿ’ ನೀಡಿ ಗೌರವಿಸಿರುವುದು ಅಭಿನಂದನೀಯ ಸಂಗತಿಯೇ ಆಗಿದೆ. ಕರ್ನಾಟಕದವರಾದ ಸಿ.ಎಚ್. ವಿಜಯಶಂಕರ್ ಅವರು ಮೇಘಾಲಯ ರಾಜ್ಯದಲ್ಲಿ ಜನಮೆಚ್ಚುವಂಥ ಕೆಲಸ ಮಾಡುತ್ತಿರು ವುದು ಹೆಮ್ಮೆಯ ವಿಷಯ.

ನಿನ್ನೆಯಷ್ಟೇ (ಅಕ್ಟೋಬರ್ 21) ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಾಗಿದ್ದು, ಈ ಸಂದರ್ಭದಲ್ಲಿ ಕರ್ನಾಟಕದ ಅವರ ಸಮಸ್ತ ಅಭಿಮಾನಿಗಳ ಪರವಾಗಿ ಅವರಿಗೆ ಶುಭ ಹಾರೈಸುವ ಸದವಕಾಶವು ನನಗೆ ದಕ್ಕಿರುವುದು ವೈಯಕ್ತಿಕವಾಗಿ ಧನ್ಯತಾಭಾವವನ್ನೇ ಮೂಡಿಸಿದೆ.