ವಿದೇಶವಾಸಿ
ಈ ಜೋಕರ್‌ಗಳು ತಮ್ಮ ಹಾಸ್ಯವೇ ಮಹಾಪ್ರಸಾದ, ಅದನ್ನು ಎಲ್ಲರೂ ಸ್ವೀಕರಿಸುತ್ತಾರೆ, ಸ್ವೀಕರಿಸ ಬೇಕು ಎಂದು ಯಾಕೆ ಯೋಚಿಸುತ್ತಾರೋ ಗೊತ್ತಿಲ್ಲ. ಅಷ್ಟಕ್ಕೂ ಇವರ ಮಾತಿನಲ್ಲಿ ಸಮಾಜಕ್ಕೆ ಒಳಿತಾಗುವ, ದೇಶ ಸುಧಾರಿಸುವ ಯಾವ ವಿಚಾರಗಳೂ ಇರುವುದಿಲ್ಲ. ಆದ್ದರಿಂದ ಇಂಥವರ ಮಾತುಗಳನ್ನು ಯಾರೂ ಸೀರಿಯಸ್ ಆಗಿ ಪರಿಗಣಿಸುವುದೂ ಇಲ್ಲ.
Educated Idiots ಎಂಬ ಇಂಗ್ಲೀಷ್ ಪದಕ್ಕೆ ಒಳ್ಳೆಯ ಉದಾಹರಣೆ ಯಾರು ಎಂದರೆ ಇಂಥವರು. ಕನ್ನಡದಲ್ಲಿ ಬೇಕಾದರೆ ಇವರನ್ನು ‘ವಿದ್ಯಾವಂತ ಮೂರ್ಖರು’ ಎಂದು ಕರೆಯಬಹುದು.
ಇಂಥವರಿಗೆ ಇಂಗ್ಲಿಷ್ ಪದವೇ ಹೆಚ್ಚು ಸೂಕ್ತ ಏಕೆಂದರೆ ಇವರ ಬಹುತೇಕ ಕಾರ್ಯಕ್ರಮಗಳು ಇಂಗ್ಲಿಷ್‌ನಲ್ಲಿಯೇ ಇರುತ್ತವೆ. ಕನ್ನಡದಲ್ಲಿ ಇದುವರೆಗೆ ‘ಸ್ಟ್ಯಾಂಡ್‌ಅಪ್ ಕಾಮಿಡಿ’ ಹೆಸರಿನಲ್ಲಿ ಇಂಥ ಜೋಕರ್‌ಗಳು ತಯಾರಾಗಲಿಲ್ಲ ಎನ್ನುವ ಸಮಾಧಾನ ಇದೆ.
ಇತ್ತೀಚೆಗೆ ರಾಷ್ಟ್ರದಾದ್ಯಂತ ಸುದ್ದಿಯಾದ ಒಂದು ಹಾಸ್ಯಾಸ್ಪದ ಘಟನೆ ನಿಮಗೆ ತಿಳಿದಿರಬಹುದು. ಅವರ ಹೆಸರು ಹೇಳದೆಯೇ, ವಿಷಯದ ಕುರಿತು ಹೇಳಿ ಮುಂದುವರಿಯುತ್ತೇನೆ. ಹಾಸ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಎಂದು ತಿಳಿದುಕೊಂಡವರ ಹೆಸರು ಹೇಳಿ, ನಮ್ಮ ಪಾವಿತ್ಯ್ರತೆ ಯನ್ನು ಕೆಡಿಸಿಕೊಳ್ಳುವುದು ಬೇಡ. ಹಾಗೆಯೇ, ಅಂಥವರ ಹೆಸರು ಹೇಳಿ ಅವರಿಗೆ ಇನ್ನಷ್ಟು ಪ್ರಚಾರ ಕೊಡುವುದೂ ಬೇಡ.
ಅಷ್ಟಕ್ಕೂ ಇವರು ಕಡಿದು ಕೊಮಟೆ ಹಾಕಿದ್ದು ಅಷ್ಟರಲ್ಲಿಯೇ ಇದೆ. ಅದೊಂದು ಕಾಮಿಡಿ ಎಂಬ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮ. ಹಾಸ್ಟೆಲ್ ರೂಮಿನ ಒಳಗೆ ಆಡುವ ಮಾತುಗಳನ್ನು ದೊಡ್ಡ ಹಾಲಿನಲ್ಲಿ ಮಾತಾಡುವ, ಅದನ್ನು ನೋಡಲು, ಕೇಳಲು ಜನ ದುಡ್ಡು ಕೊಟ್ಟು ಬರುವ ಅಂಥ ಕಾರ್ಯಕ್ರಮಗಳಿಗೆ ಸ್ಟ್ಯಾಂಡ್ ಅಪ್ ಕಾಮಿಡಿ ಅಂತ ಹೆಸರು. ಸಾಮಾಜಿಕ ಜಾಲತಾಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ನೋಡಿದ ನನಗೆ, ಇಂತಹ ಕಾರ್ಯಕ್ರಮಗಳಿಗೆ ಹೋಗುವ ಧೈರ್ಯ ಬರಲಿಲ್ಲ.
ಇದನ್ನೂ ಓದಿ: Kiran Upadhyay Column: ಮೋರಿಯಿಂದೆದ್ದು ಗೋರಿ ಸೇರಲಿರುವ ಜೆನ್ ಜಿರಳೆ
ದುಡ್ಡು ಕೊಟ್ಟು, ಕೆಟ್ಟ ಜೋಕಿನ ಹೆಸರಿನಲ್ಲಿ ಮರ್ಯಾದೆ ತೆಗೆಯುವ, ತೆಗೆಸಿಕೊಳ್ಳುವ ಕೆಲಸ ಯಾಕೆ ಬೇಕು? ಇಂತಹ ಕಾರ್ಯಕ್ರಮ ನೋಡಿದಾಗೆಲ್ಲ, ಬಂದವರಲ್ಲಿ ಬಹುತೇಕರು ದುಡ್ಡು ಕೊಟ್ಟು ಬಂದ ಉರಿಗೆ ನಗುತ್ತಿರಬೇಕು ಎಂದೇ ಅನ್ನಿಸುತ್ತಿತ್ತು. ಯೂಟ್ಯೂಬ್'ನಲ್ಲಿ ಬೇಡ ಬೇಡ ಎಂದರೂ ಆಗಾಗ ಎದ್ದು ಬರುವ ಕೆಲವು ತುಣುಕು ಕಣ್ಣಿಗೆ ಬೀಳದಿದ್ದರೆ ಹಾಸ್ಯದ ಖುಷಿಗಿಂತಲೂ ಹೆಚ್ಚು ಖುಷಿ. ಮೊನ್ನೆಯೂ ಅಷ್ಟೇ, ಇಂಥ ಒಂದು ಕಾರ್ಯಕ್ರಮದಲ್ಲಿ ಎರಡು ಎಡವಟ್ಟುಗಳಾಗಿವೆ ಎಂದು ಸುದ್ದಿವಾಹಿನಿಗಳಲ್ಲಿ ಬಂದಾಗಲೇ ಈ ವಿಷಯ ಗೊತ್ತಾದದ್ದು. ಇಲ್ಲವಾದರೆ ನನ್ನ ಪ್ರಪಂಚಕ್ಕೆ ಇವರು ಅಪರಿಚಿತರು, ಆಗಂತುಕರು, ಕೆಲವೊಮ್ಮೆ ಆತಂಕವಾದಿಗಳೂ ಹೌದು.
ಈ ಘಟನೆ ನಡೆದು ಈಗಾಗಲೇ ಎರಡು-ಮೂರು ತಿಂಗಳಾಗಿದೆಯಂತೆ, ಗಮನಕ್ಕೆ ಬಂದದ್ದು ಇತ್ತೀಚೆಗೆ. ಆದದ್ದೇನೆಂದರೆ, ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ಪ್ರೀತಿಯಿಂದ ‘ಮಂಗ್ಯಾನ ಮುಸುಡಿಯವ’ ಅನ್ನುತ್ತೇವಲ್ಲ, ಅಂಥವನೊಬ್ಬ ಕಾಮಿಡಿ ಮಾಡುವ ಹೆಸರಿನಲ್ಲಿ ವೇದಿಕೆಯಲ್ಲಿ ಕುಳಿತಿದ್ದ. ಅವನ ಕಾರ್ಯಕ್ರಮದ ತುಣುಕನ್ನು ಈ ಮೊದಲೂ ನೋಡಿದ್ದ ನನಗೆ ಅನಿಸಿದ್ದೇ ನೆಂದರೆ, ಆತ ಕಾಮಿಡಿ ಮಾಡಿ ಜನರನ್ನು ನಗಿಸುವುದಕ್ಕಿಂತ ದುಡ್ಡು ಕೊಟ್ಟು ನೋಡಲು ಬಂದ ಜನರಿಗೇ ಪ್ರಶ್ನೆ ಕೇಳಿ, ಅವರು ಕೆಟ್ಟ ಉತ್ತರ ಕೊಟ್ಟರೆ, ಅದನ್ನು ಇನ್ನಷ್ಟು ವಿವರಿಸಲು ಹೇಳಿ, ಅವರಿಗಿಂತ ಹೆಚ್ಚು ನಗುತ್ತಿದ್ದ.
ಬಹುಶ: ಕೆಲವರು ಕಾರ್ಯಕ್ರಮ ಏರ್ಪಡಿಸುವುದು, ಜನರನ್ನು ನಗಿಸುವುದಕ್ಕಿಂತ ತಮ್ಮ ಸಮಸ್ಯೆ ಮರೆತು ಕೆಲವು ಗಂಟೆಗಳ ಕಾಲ ನಕ್ಕು ಹಗುರಾಗಬೇಕು ಎನ್ನುವ ಕಾರಣಕ್ಕೇ ಇರಬೇಕು. ಇರಲಿ, ಆ ಕಾರ್ಯಕ್ರಮಕ್ಕೆ ಬಂದವರಲ್ಲಿ ನಮ್ಮಲ್ಲಿ ಪ್ರೀತಿಯಿಂದ ಕರೆಯುವ ‘ಪಿಂಡರಿಕಿ’ಯಂಥವನೂ ಒಬ್ಬನಿದ್ದ. ಆ ಪಿಂಡರಿಕಿಯ ಪ್ರಕಾರ, ಒಂದು ದಿನ ರಾತ್ರಿ ಆತ ಒಬ್ಬ ಯುವತಿಯನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದನಂತೆ. ಅಲ್ಲಿ ಅವಳಿಗೆ ಒಂದು ಪ್ಲೇಟ್ ಚಿಕನ್ ಬಿರಿಯಾನಿ ಕೊಡಿಸಿದ ನಂತೆ. ಅದಕ್ಕೆ ಮುನ್ನೂರ ಎಪ್ಪತ್ತು ರೂಪಾಯಿ ಖರ್ಚು ಮಾಡಿದನಂತೆ. ಊಟದ ನಂತರ ಆಕೆ ತನ್ನನ್ನು ಮನೆಗೆ ಬಿಡುವಂತೆ ಪಿಂಡರಿಕಿಯನ್ನು ಕೇಳಿಕೊಂಡಳಂತೆ.
ತಾನು ಖರ್ಚು ಮಾಡಿದ ಹಣ ವಸೂಲಿ ಮಾಡಬೇಕು ಎಂದರೆ ಮನೆಯವರೆಗೆ ಬಿಡುವುದಷ್ಟೇ ಅಲ್ಲ, ಇನ್ನಷ್ಟು ಬೇಕು (ಅವಳಿಗೆ ಇಷ್ಟವಿಲ್ಲದಿದ್ದರೂ) ಎಂದು ಆತನಿಗೆ ಅನ್ನಿಸಿತಂತೆ. ಇದನ್ನೆಲ್ಲ ಇನ್ನೂ ವಿಸ್ತಾರವಾಗಿ ಪ್ರಶ್ನೋತ್ತರದ ಮೂಲಕ ಅವರಿಬ್ಬರೂ ಮಾತಾಡಿ ಕೊಳ್ಳುತ್ತಿದ್ದರು, ನಗುತ್ತಿದ್ದರು.
ನೋಡಲು ಬಂದ ಜನರೂ ಇವರನ್ನು ಪ್ರೋತ್ಸಾಹಿಸುತ್ತಿದ್ದರು. ಅಷ್ಟಕ್ಕೂ ಈ ಪಿಂಡರಿಕಿ ಅವಿದ್ಯಾ ವಂತನೂ ಅಲ್ಲ, ನಿರುದ್ಯೋಗಿಯೂ ಅಲ್ಲ. ಆತ ಪ್ರತಿಷ್ಠಿತ ಕಂಪನಿಯಲ್ಲಿ ವೆಬ್ ಡಿಸೈನರ್. ವಿಷಯ ತಿಳಿಯುತ್ತಿದ್ದಂತೆ ಸಂಸ್ಥೆಗೆ ಸಾಕಷ್ಟು ದೂರವಾಣಿ ಕರೆ ಮಾಡಿ, ಇಮೇಲ್ ಕಳಿಸಿ ಇವನನ್ನು ಉಗಿದು ಉಪ್ಪಿನಕಾಯಿ ಹಾಕಿದ್ದರಿಂದ, ಸಂಸ್ಥೆ ಈಗ ಅವನನ್ನು ಕೆಲಸದಿಂದ ಕಿತ್ತು ಹಾಕಿದೆ.
ಅದೇ ಕಾರ್ಯಕ್ರಮದಲ್ಲಿ, ನಮ್ಮಲ್ಲಿ ಪ್ರೀತಿಯಿಂದ ’ಬಿಲಾಂಡರ್’ ಎಂದು ಕರೆಯುತ್ತೇವಲ್ಲ, ಅಂಥವಳೂ ಒಬ್ಬಳಿದ್ದಳು. ಆಕೆಯೂ ಸಾಮಾನ್ಯಳಲ್ಲ. ಮುಂಬೈನ ಹೆಸರಾಂತ ವೈದ್ಯಕೀಯ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿನಿ. ವರ್ಷಒಪ್ಪತ್ತಿನಲ್ಲಿ ವೈದ್ಯೆಯಾಗಿ ಜನರ ಪ್ರಾಣ ಉಳಿಸಬೇಕಾದವಳು. ಆಕೆ ಹೇಳುತ್ತಾಳೆ, ಪುರುಷರ ಶವಗಳ ಮೇಲೆ ಪ್ರಯೋಗ ನಡೆಸುವಾಗ, ಅವರ ಮರ್ಮಾಂಗದ ಗಾತ್ರ, ಆಕಾರ ನೋಡಿ ಸಹಪಾಠಿಗಳು ಸೇರಿಕೊಂಡು ತಮಾಷೆ ಮಾಡುತ್ತಿದ್ದರಂತೆ.
ಇದನ್ನೇ ಇನ್ನಷ್ಟು ವಿಸ್ತರಿಸಿ ಕೇಳಿ-ಹೇಳಿ ನಗುವುದು. ಇದು ಯಾವ ಸೀಮೆಯ ಕಾಮಿಡಿ ಎಂದು ನನಗಂತೂ ಅರ್ಥವಾಗಲಿಲ್ಲ. ಅದೇ ಶವ ಹೆಣ್ಣಾಗಿದ್ದು, ಪ್ರಯೋಗ ಮಾಡುವವರು ಗಂಡಾಗಿದ್ದು, ಈ ರೀತಿ ತಮಾಷೆ ಮಾಡಿದರೆ? ಶವ ಎಂದರೆ ಜೀವ-ಭಾವ ಇಲ್ಲದ್ದು ಅದಕ್ಕೇನು ತಿಳಿಯುತ್ತದೆ ಎನ್ನುವುದು ಕೆಲವರ ವಾದವಿರಬಹುದು.
ಆದರೆ ನಮ್ಮಲ್ಲಿ ಜೀವ ಇದ್ದವನಿಗೆ ಕೈಮುಗಿಯದೇ ಇರಬಹುದು, ಒಮ್ಮೆ ಆತ ಸತ್ತು ಶವವಾದರೆ ಒಮ್ಮೆಯಾದರೂ ಕೈ ಮುಗಿಯುತ್ತಾರೆ. ಯಾವ ಧರ್ಮಕ್ಕೆ ಸೇರಿದವನಾದರೂ, ಸತ್ತ ನಂತರ ತನ್ನ ಅಂತ್ಯ ಸಂಸ್ಕಾರವೊಂದು ಸಾಂಗವಾಗಿ ಆಗಲಿ ಎಂದು ಬಯಸುತ್ತಾನೆ. ಅಂಥದ್ದರಲ್ಲಿ, ಸತ್ತ ನಂತರ ಶವವನ್ನು ಪ್ರಯೋಗಕ್ಕಾಗಿ ಬಳಸಿಕೊಳ್ಳಿ ಎಂದು ಒಬ್ಬ ದಾನ ಮಾಡುತ್ತಾನೆ ಎಂದರೆ ಆತ ಹುಚ್ಚನೂ ಅಲ್ಲ, ಅನಾಥನೂ ಅಲ್ಲ. ಅದಕ್ಕೆ ಅವನ ಮನೆಯವರು ಸಮ್ಮತಿಸುತ್ತಾರೆ ಎಂದಾದರೆ, ಅಂತ್ಯ ಸಂಸ್ಕಾರ ಮಾಡಲಾಗದಷ್ಟು ಬಡತನ ಎಂದೂ ಅಲ್ಲ.
ಇದನ್ನೆಲ್ಲ ಅರ್ಥಮಾಡಿಕೊಳ್ಳುವ ಸಾಮಾನ್ಯ ಪರಿಜ್ಞಾನವೂ ಭಾವೀ ವೈದ್ಯರಿಗೆ ಬೇಡವೇ? ನಿಜ ಹೇಳಬೇಕೆಂದರೆ, ವೈದ್ಯರಾಗುವವರು ಬದುಕಿದ್ದವರಿಗಿಂತ ಸತ್ತು ಬಿದ್ದ ಶವಕ್ಕೆ ಹೆಚ್ಚು ಮಹತ್ವ ನೀಡಬೇಕು. ವೈದ್ಯಕೀಯ ಕಲಿಯುವ ವಿದ್ಯಾರ್ಥಿಗಳಿಗೆ ಶವವೇ ಮೊದಲ ಗುರು ಎಂದರೂ ತಪ್ಪಲ್ಲ. ನಾನೂ ಸತ್ತ ನಂತರ ನನ್ನ ದೇಹವನ್ನು ವೈದ್ಯಕೀಯ ಪ್ರಯೋಗಕ್ಕೆ ಬಳಸಿಕೊಳ್ಳಲು ದಾನ ಮಾಡು ತ್ತಿದ್ದೇನೆ.
ಮೊನ್ನೆಯ ಘಟನೆ ಆದಾಗಿನಿಂದ ಇತರರಂತೆ ನಾನೂ ವಿಚಾರಕ್ಕೆ ಬಿದ್ದದ್ದು, ನನಗೆ ಬೇಸರವಾ ದದ್ದು ನಿಜ. ಆದರೆ ಯಾರೋ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ವೈದ್ಯರ ಬಳಗವನ್ನೇ ಸೇರಿಸು ವುದು ಸರಿಯಲ್ಲ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೇನೆ. ನಮ್ಮಲ್ಲಿ ಒಂದು ಮಾತಿದೆ.
Once a Soldier is always a Soldier ಹಾಗೆಯೇ, Once a Doctor is always a Doctor ಎನ್ನುವ ಮಾತೂ ಸತ್ಯ. ಸೈನಿಕನಾದವನು, ವೈದ್ಯನಾದವನು ಕರ್ತವ್ಯದ ಕರೆ ಮಧ್ಯರಾತ್ರಿಯ ಬಂದರೂ ಉಳಿದೆಲ್ಲ ವಿಷಯವನ್ನು ಬದಿಗಿಟ್ಟು, ಕರ್ತವ್ಯ ಪಾಲನೆಗಾಗಿ ಎದ್ದು ಹೋಗುತ್ತಾನೆ. ಅದಕ್ಕಾಗಿ ನಮ್ಮ ದೇಶದಲ್ಲಿ ಸೈನಿಕರನ್ನು, ವೈದ್ಯರನ್ನು ದೇವರ ಸ್ಥಾನದಲ್ಲಿ ಇಟ್ಟು ಗೌರವಿಸುತ್ತಾರೆ.
‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತು ಸುಮ್ಮನೇ ಬಂದದ್ದ.ಲ್ಲ. ಅದರೆ ಹಿಂದೆ ಲೆಕ್ಕ ಇಡಲಾರದಷ್ಟು ವೈದ್ಯರ ಶ್ರಮವಿದೆ, ಕೊಡುಗೆ ಇದೆ. ಆ ವೃತ್ತಿಗೆ ಅಪಾರವಾದ ಘನತೆ ಇದೆ. ಸಾವಿರಾರು ವರ್ಷಗಳ ಪರಿಶ್ರಮದಿಂದ, ಬದ್ಧತೆಯಿಂದ ಕ್ರೋಢೀಕರಿಸಿಕೊಂಡು ಬಂದ ಪಾವಿತ್ರ್ಯದ ಕಸುಬು ಕೆಲವು ನಾಲಾಯಕ್ಕುಗಳ ಹಾಸ್ಯದ ಚಟದಲ್ಲಿ ಕೊಚ್ಚಿ ಹೋಗಬಾರದು.
ಅಂದ ಹಾಗೆ ಈ ಮೂವರೂ ‘ನಾವು ಮಾತನಾಡಿದ್ದು ಬೇಕಂತಲೇ ಅಲ್ಲ, ಆ ಕ್ಷಣದಲ್ಲಿ ಅದು ನಮ್ಮ ಬಾಯಿಂದ ಬಂದು ಹೋಯಿತು, ನಮ್ಮನ್ನು ಕ್ಷಮಿಸಿ’ ಎಂದು ಸಾರ್ವಜನಿಕವಾಗಿ ಕೇಳಿಕೊಂಡಿ ದ್ದಾರೆ. ಮಾತನಾಡಿದ್ದು ತಪ್ಪು, ಆದರೆ ಮಾಡಿದ್ದು? ಒಂದೊಮ್ಮೆ ಮಾತನಾಡದಿದ್ದರೆ ಮಾಡಿದ್ದು ಸರಿಯಾಗಿರುತ್ತಿತ್ತೇ? ಇಲ್ಲವಲ್ಲ.
ಇವರೆಲ್ಲ ಹೆಬ್ಬೆಟ್ಟು ಒತ್ತುವ ಗಿರಾಕಿಗಳಲ್ಲವಲ್ಲ. ಕಾಮಿಡಿ ಶೋಗಳಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲನೆಯ ಬಾರಿ ಏನೂ ಅಲ್ಲವಲ್ಲ. ಈ ಮೊದಲೂ ಇಂತಹ ಘಟನೆಗಳು ನಡೆದಿವೆ. ಹೆತ್ತ ತಂದೆ-ತಾಯಂದಿರ ಬಗ್ಗೆ, ಅವರ ಅಂಗಗಳ ಬಗ್ಗೆ, ಇಂತಹ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಅದು ನಮ್ಮ ವಾಕ್ ಸ್ವಾತಂತ್ರ್ಯ ಎಂದದ್ದು, ಪ್ರತಿರೋಧ ಹೆಚ್ಚಾದಾಗ ಕೆಲವು ದಿನ ತಲೆಮರೆಸಿ ಕೊಂಡಿದ್ದು, ಅಂಥವರ ಪರವಾಗಿಯೂ ಕೆಲವರು ಮಾತನಾಡಿದ್ದು, ಯಾವುದೂ ನಡೆಯದಿದ್ದಾಗ, ಎಲ್ಲೋ ಕುಳಿತು ತಪ್ಪಾಯಿತು ಎಂದು ಕ್ಷಮೆ ಕೇಳಿದ್ದು, ಇವೆಲ್ಲ ಭಾರತದಲ್ಲಿ ಮೊದಲನೆಯ ಸಲ ಅಲ್ಲ.
ಯಾರದ್ದೋ ಬೆಡ್‌ರೂಮ್‌ನಲ್ಲಿ ನಡೆಯುವ ಸಂಭಾಷಣೆ, ಘಟನೆಯನ್ನು ಜೋಕರ್‌ಗಳು ಈಗಾಗಲೇ ಬಾಲ್‌ರೂಮ್‌ಗೆ ತಂದಾಗಿದೆ. ಇದು ಬೀದಿಗೆ ಬಂದು ಬೀಳುವುದಕ್ಕೂ ಮುನ್ನ ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳಲಿ. ಕೆಲವು ವರ್ಷಗಳ ಹಿಂದಿನವರೆಗೂ ಹಾಸ್ಯವು ಸಿನಿಮಾ, ನಾಟಕ, ಯಕ್ಷಗಾನ ಗಳಲ್ಲಿ ಬರುವ ಸನ್ನಿವೇಶಗಳಾಗಿರುತ್ತಿತ್ತು.
ಸ್ನೇಹಿತರು, ಮನೆಯವರು ಕುಳಿತು ಪಟ್ಟಾಂಗ ಹೊಡೆಯುವಾಗ ಮಾತಿನಲ್ಲಿ ಹಾಸ್ಯದ ತುಣುಕುಗಳು ಬಂದು ಹೋಗುತ್ತಿದ್ದವು. ಒಂದು ಕಾಲದಲ್ಲಿ ಮಿಮಿಕ್ರಿಯನ್ನೂ ಕೂಡ ಹಾಸ್ಯ ಎಂದು ಪರಿಗಣಿಸ ಲಾಗುತ್ತಿತ್ತು. ಏಕೆಂದರೆ, ಕೇವಲ ಪ್ರಾಣಿ, ಪಕ್ಷಿಗಳ ಸ್ವರ ಅಷ್ಟೇ ಅಲ್ಲ, ಕೆಲವು ವ್ಯಕ್ತಿಗಳ ಧ್ವನಿಯನ್ನು ಮಿಮಿಕ್ರಿ ಮಾಡುವವರು ಅಳವಡಿಸಿ ಕೊಂಡು, ಆ ವ್ಯಕ್ತಿಗಳ ಹಾಸ್ಯದ ಸಂಭಾಷಣೆಯನ್ನು ಜನರ ಮುಂದೆ ತೋರಿಸುತ್ತಿದ್ದರಿಂದ ಜನ ನಗುತ್ತಿದ್ದರು.
ನಿಧಾನವಾಗಿ ಸಾಹಿತ್ಯ ಸಮ್ಮೇಳನ, ಕವಿ ಸಮ್ಮೇಳನಗಳಂತೆ ಹಾಸ್ಯ ಸಮ್ಮೇಳನಗಳೂ ಆರಂಭ ವಾದವು. ಟಿವಿಯಲ್ಲೂ ಹಾಸ್ಯಕ್ಕೆಂದೇ ಮೀಸಲಾದ ಸಮಯ ದೊರಕಿತು. ಅವು ಜನಪ್ರಿಯವೂ ಆದವು. ಗಂಗಾವತಿ ಪ್ರಾಣೇಶ್, ಪ್ರೊಫೆಸರ್ ಕೃಷ್ಣೇಗೌಡ ಮೊದಲಾದವರು ತಮ್ಮ ಮಾತಿನ ಶೈಲಿ ಯಿಂದ ಜನರನ್ನು ರಂಜಿಸುವಲ್ಲಿ, ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು.
ಹಾಗೆ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ, ಹಾಸ್ಯ ಸಮ್ಮೇಳನಗಳಲ್ಲಿ, ಯಾವತ್ತೂ ದ್ವಂದ್ವಾರ್ಥ ವಾಗಲಿ, ಅಸಂಬದ್ಧ-ಅಶ್ಲೀಲ ಜೋಕುಗಳಾಗಲಿ ಇರುತ್ತಿರಲಿಲ್ಲ. ಸಂಸಾರ ಸಮೇತ ಕುಳಿತು ಎಲ್ಲರೂ ನೋಡಬಹುದಾಗಿದ್ದ, ಕೇಳಬಹುದಾಗಿದ್ದ ಸಂಸ್ಕಾರಯುಕ್ತ ಕಾರ್ಯಕ್ರಮ ಅದಾಗಿರುತ್ತಿತ್ತು.
ಅದೆಷ್ಟೇ ಸ್ಟ್ಯಾಂಡ್ ಅಪ್ ಜೋಕರ್‌ಗಳು ಬಂದು ಹೋದರೂ ಇಂದಿಗೂ ಹಾಸ್ಯ ಎಂದಾಕ್ಷಣ ನಮಗೆ ಚಾರ್ಲಿ ಚಾಪ್ಲಿನ್ ಯಾಕೆ ನೆನಪಾಗುತ್ತಾರೆ? ಮಿಸ್ಟರ್ ಬೀನ್ ಯಾಕೆ ನೆನಪಾಗುತ್ತಾರೆ? ಯಾಕೆಂದರೆ ಇವರ‍್ಯಾರೂ ಕೀಳು ಮಟ್ಟದ ಹಾಸ್ಯಕ್ಕೆ ಇಳಿಯಲಿಲ್ಲ.
ತಮ್ಮ ತುಟಿಯ ಮೇಲಿನ ನಗುವಿನ ಹಿಂದಿರುವ ಕಣ್ಣೀರನ್ನು ತೋರಿಸಿಕೊಟ್ಟರು. ಹೃದಯದ ಒಳಗೆ ಅಡಗಿರುವ ದುಃಖವನ್ನೂ ಹೇಳಿಕೊಂಡರು. ಯಕ್ಷಗಾನದಲ್ಲಿ ಸಣ್ನ ಪಾತ್ರವಾಗಿ ಬಂದು ಹೋಗುವ ಹಾಸ್ಯ ಕಲಾವಿದರೊಬ್ಬರು ಹೇಳಿದ್ದು ನನಗೆ ಇನ್ನೂ ನೆನಪಿದೆ, ‘ಹಾಸ್ಯ ಪಾತ್ರವೇ ಆದರೂ, ಜನರನ್ನು ನಗಿಸಿ ಹೋಗುವುದಕ್ಕೆ ಮುನ್ನ ಒಂದು ಸಂದೇಶವನ್ನು ಕೊಟ್ಟು ಹೋಗಬೇಕು. ಆಗ ಆತ ನಿಜವಾದ ಹಾಸ್ಯಗಾರನಾಗುತ್ತಾನೆ.’ ಹಿಂದಿಯ ಖ್ಯಾತ ನಟ-ನಿರ್ದೇಶಕ, ರಾಜ್ ಕಪೂರ್ ’ಮೇರಾ ನಾಮ್ ಜೋಕರ್’ ಸಿನಿಮಾ ಮಾಡಿದರು.
ಸುಮಾರು ನಾಲ್ಕು ತಾಸಿನ ಸಿನಿಮಾದಲ್ಲಿ ಹಾಸ್ಯಕ್ಕಿಂತ ದುಃಖ ಮತ್ತು ಸಮಾಜಕ್ಕೆ ನೀಡಬೇಕಾಗಿದ್ದ ಸಂದೇಶವೇ ಹೆಚ್ಚಾಗಿತ್ತು. ಅದೇ ಇಂದಿನ ಜೋಕರ್ʼಗಳದ್ದು, ಸಂದೇಶ ಏನೂ ಇಲ್ಲ, ವಿವಾದವೇ ಹೆಚ್ಚು.ಕನ್ನಡದಲ್ಲಿ ಮಾಸ್ಟರ್ ಹಿರಣ್ಣಯ್ಯನಂಥವರು, ಹಿಂದಿಯಲ್ಲಿ ಜಸ್ಪಾಲ್ ಭಟ್ಟಿಯಂಥವರು ತಮ್ಮ ಹಾಸ್ಯದಿಂದಲೇ ಆಡಳಿತದಲ್ಲಿರುವ ನ್ಯೂನತೆಯನ್ನು ತಿಳಿಸಿ ಕೊಡುತ್ತಿದ್ದರು.
ಜೇನುತುಪ್ಪದಲ್ಲಿ ಅದ್ದಿದ ಚಾಟಿ ಏಟು ಕೊಡುತ್ತಿದ್ದರು. ಹಿರಣ್ಣಯ್ಯನವರಂತೂ ತಮ್ಮ ನಾಟಕ ನೋಡಲು ಬಂದ ಅಧಿಕಾರಿಗಳ ಮುಂದೆಯೇ ಅವರ ಇಲಾಖೆಯಲ್ಲಿ, ಕಚೇರಿಯಲ್ಲಿ ಇರುವ ಲೋಪದ ಕುರಿತು ಮಾತನಾಡುತ್ತಿದ್ದರು. ಅದು ನಿಜವಾದ ಸ್ಟ್ಯಾಂಡ್ ಅಪ್ ಕಾಮಿಡಿಯೇ ಹೊರತು, ಅಶ್ಲೀಲವಾಗಿ ಮಾತನಾಡುತ್ತ, ಯಾರನ್ನೋ ಅವಮಾನಿಸುತ್ತ ತಾವೇ ನಗುವುದಲ್ಲ.
ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಹಿಂಬಾಲಿಸುವವರು, ಲೈಕ್ ಮಾಡುವವರು ನ್ಯಾಯಾಲಯ ದವರೆಗೂ ಹಿಂಬಾಲಿಸುತ್ತಾರೆ, ಅಲ್ಲಿಯೂ ಲೈಕ್ ಮಾಡುತ್ತಾರೆ ಎನ್ನುವ ತಪ್ಪು ಕಲ್ಪನೆ ಸ್ಟ್ಯಾಂಡ್ ಅಪ್ ಜೋಕರ್‌ಗಳಿಗೆ ಇದ್ದರೆ, ಅದಕ್ಕಿಂತ ದೊಡ್ಡ ಹಾಸ್ಯ ಮತ್ತೊಂದಿಲ್ಲ.