ಕಾಡುದಾರಿ
ನೀನು ಹುಡುಕುತ್ತಿರುವ ಬೆಳಕು ನಿನ್ನೊಳಗೇ ಉರಿಯುತ್ತಿದೆ. ಬಾಗಿಲು ತಟ್ಟುತ್ತಾ ತಟ್ಟುತ್ತಾ ನೀನು ಹೊರಗೇ ಓಡಾಡುತ್ತೀ. ಆದರೆ ಒಳಗೆ ಕುಳಿತಿರುವವನು ನಿನ್ನ ಬರುವಿಕೆಗೆ ಕಾಯುತ್ತಾನೆ. ಗಾಯದ ಬಿರುಕಿಲ್ಲದೆ ಯಾರೂ ಬೆಳಕನ್ನು ಪಡೆಯ ಲಾರರು. ಒಡೆದ ಪಾತ್ರೆಯ ನಕ್ಷತ್ರದ ಪ್ರತಿಬಿಂಬ ಮೂಡುತ್ತದೆ.
ಈ ಸಲ ಕವಿಗಳ ಬಳಿಗೆ ಹೋದಾಗ ಮುಂಜಾನೆ ಬಿಸಿಲು ಇನ್ನೂ ಏರಿರಲಿಲ್ಲ. ಅವರು ಕೈ ತೋಟದಲ್ಲಿದ್ದ ಹೂವಿನ ಗಿಡಗಳಿಗೆ ನೀರು ಹಾಕುತ್ತಿದ್ದರು. ಅವರು ನೀರು ಹಾಕುವುದನ್ನು ನೋಡುವುದೊಂದು ಚಂದ. ಸಣ್ಣದಾಗಿ ಧಾರೆ ಬರುವ ಪೈಪ್. ಅದನ್ನು ಹಿಡಿದು ಇಡೀ ಗಿಡ ಒzಯಾಗುವ ಹಾಗೆ ಒಮ್ಮೆ ನೀರು ಸಿಂಪಡಿಸುವರು. ನಂತರ ಅದರ ಬುಡಕ್ಕೆ. ಈ ಕ್ರಿಯೆ ಎಷ್ಟು ಹೊತ್ತು ನಡೆಯುವುದೋ ಅವರಿಗೇ ಗೊತ್ತು. “ಗಿಡ ನನಗೆ ಸಾಕು ಅಂತ ಹೇಳಬೇಕು. ಆಗ ನಿಲ್ಲಿಸುವೆ" ಎನ್ನುತ್ತಾರೆ.
ನನ್ನನ್ನು ನೋಡಿ “ಏನು ಸುದ್ದಿ?" ಎಂದು ಕೇಳಿದರು. “ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ಮಾಡಿವೆ. ಯುದ್ಧ ಇನ್ನೂ ಕೆಲವು ವಾರ ಮುಂದುವರಿಯಬಹುದು" ಎಂದೆ. “ನಿಂಗೆ ಇರಾನ್ ಅಂದರೆ ನೆನಪಿಗೆ ಬರೋದು ಏನು?" ಎಂದು ಕೇಳಿದರು.
“ಪೆಟ್ರೋಲ್, ಖಮೇನಿ, ಚಾಬಹಾರ್, ಹಿಜಾಬ್, ಫತ್ವಾ ಇತ್ಯಾದಿ..." ಎಂದೆ. ಅವರು ಸುಮ್ಮನೆ ತಲೆಯಾಡಿಸುತ್ತಾ ಮನೆಯೊಳಗೆ ಕರೆದರು. ಪುಸ್ತಕದ ಶೆಲ್ಫಿನಿಂದ ಕೆಂಪು ರಟ್ಟಿನ ಒಂದು ಸಣ್ಣ ಪುಸ್ತಕ ತೆರೆದರು. “ಇವನು ಜಲಾಲುದ್ದೀನ್ ರೂಮಿ, ಕವಿ, ದಾರ್ಶನಿಕ. ಈಗ ನೀವು ಇರಾನ್ ಅಂತ ಹೇಳುವ ಪ್ರದೇಶದಲ್ಲಿದ್ದ. ಅದು ಅವನ ಕಾಲದಲ್ಲಿ ಪರ್ಷಿಯಾ ಆಗಿತ್ತು.
ರೂಮಿಯಂತೆಯೇ ಇನ್ನೊಬ್ಬನಿದ್ದ- ಉಮರ್ ಖಯಾಮ್. ಇವನೂ ಅವನಂತೆಯೇ ತೇಲುಗಣ್ಣಿನ ಕವಿ. ಸುಮ್ಮನೇ ರೂಮಿ ಬರೆದ ಕೆಲವು ಸಾಲುಗಳನ್ನು ಓದುತ್ತೇನೆ, ಕೇಳಿಸಿಕೋ" ಎಂದು ಸಣ್ಣ ದನಿಯಲ್ಲಿ ಹೇಳತೊಡಗಿದರು. ಆ ಪದ್ಯಗಳು ಇಂಗ್ಲಿಷ್ ನಲ್ಲಿದ್ದವು. ಕೇಳುತ್ತಾ ಅವು ಕನ್ನಡದಲ್ಲಿ ಪ್ರತಿಫಲಿಸಿದವು.
***
ನೀನು ಹುಡುಕುತ್ತಿರುವ ಬೆಳಕು ನಿನ್ನೊಳಗೇ ಉರಿಯುತ್ತಿದೆ. ಬಾಗಿಲು ತಟ್ಟುತ್ತಾ ತಟ್ಟುತ್ತಾ ನೀನು ಹೊರಗೇ ಓಡಾಡುತ್ತೀ. ಆದರೆ ಒಳಗೆ ಕುಳಿತಿರುವವನು ನಿನ್ನ ಬರುವಿಕೆಗೆ ಕಾಯು ತ್ತಾನೆ. ನಿನ್ನ ಹೃದಯವೇ ದೇವಾಲಯ. ಅದರ ದೀಪ ಹೊತ್ತಿಸು.
ಗಾಯದ ಬಿರುಕಿಲ್ಲದೆ ಯಾರೂ ಬೆಳಕನ್ನು ಪಡೆಯಲಾರರು. ಒಡೆದ ಪಾತ್ರೆಯ ನಕ್ಷತ್ರದ ಪ್ರತಿಬಿಂಬ ಮೂಡುತ್ತದೆ. ನಿನ್ನ ನೋವನ್ನು ಶಾಪವೆಂದುಕೊಳ್ಳಬೇಡ- ಅದೇ ದ್ವಾರ, ಅದೇ ದೀಪ, ಅದೇ ದೇವರ ಸ್ಪರ್ಶ.
***
ನದಿ ಸಮುದ್ರವನ್ನು ಕೇಳಿತು- “ನಾನು ನಿನ್ನಲ್ಲಿ ಕರಗಿದರೆ ನನ್ನ ಹೆಸರು ಉಳಿಯು ತ್ತದೆಯೇ?". ಸಮುದ್ರ ನಕ್ಕು ಹೇಳಿತು- “ನೀನು ಕಳೆದುಕೊಳ್ಳುವುದು ನಿನ್ನ ಹೆಸರು ಮಾತ್ರ; ಪಡೆಯುವುದು ಅಪಾರ ಅನಂತತೆ".
***
ಈ ಹಾಡುಗಳ ಉಳಿಸಿಕೊಳ್ಳಲು ಕಷ್ಟಪಡಬೇಡ. ಇಂದು ವಾದ್ಯ ಒಡೆದುಹೋದರೂ ಚಿಂತಿಸಬೇಡ. ಎಲ್ಲಿ ಎಲ್ಲವೂ ಸಂಗೀತವೋ ಆ ತಾಣದಲ್ಲಿದ್ದೇವೆ ನಾವು. ಇಲ್ಲಿ ಕೊಳಲ ದನಿಗಳು ವಾತಾವರಣದ ಇವೆ. ಜಗದ ಎಲ್ಲ ಸಂಗೀತೋಪಕರಣಗಳು ಸುಟ್ಟು ಹೋದರೂ ಇಂದು ಗುಪ್ತ ಸಂಗೀತವಿದೆ. ಮೊಂಬತ್ತಿ ಉರಿದು ಕರಕಾದರೂ ಒಂದು ಕಿಡಿ ಉಳಿದಿದೆ.
ನಾದದ ಅಲೆ ಕಡಲ ತೆರೆಯಂತೆ ದಂಡೆಗೆ ಬಂದು ಬಡಿದರೂ ಅದರ ಸುಪ್ತ ಕಂಪನ ಕಡಲಿ ನಾಳದ ಮುತ್ತಿನ ಒಳಗೆ ಇದೆ. ಈ ಕಂಗಳಿಂದ ಕಾಣಲಾಗದ ಸುಪ್ತ, ನಿಧಾನ ಆದರೆ ಬಲಿಷ್ಠ ಬೇರುಗಳಿಂದ ಅದು ಹೊರಟಿದೆ. ಪದಗಳ ಚೆಲ್ಲುವುದ ನಿಲ್ಲಿಸು. ಎದೆಯ ಕಿಡಕಿಯ ತೆರೆ, ಚೈತನ್ಯ ಒಳಹೊರಗು ಚಲಿಸುವುದ ನೋಡು.
***
ಚೈತನ್ಯಗಳ ಗುಂಪೊಂದಿದೆ ಅಲ್ಲಿ, ಸೇರಿಕೋ ಅದನ್ನು. ಗದ್ದಲದ ಬೀದಿಯಲ್ಲಿ ನಡೆಯುತ್ತ ನೀನೇ ದನಿಯಾಗು. ಎಲ್ಲ ಮೋಹಗಳ ಕುಡಿದು ನೀನೆ ಗೌರವದ ಕಟ್ಟು ಕಳಚಿಕೋ. ಕೈಗಳ ತೆರೆ, ಸ್ಪರ್ಶ ಬೇಕಿದ್ದರೆ. ಎರಡೂ ಕಂಗಳನು ಮುಚ್ಚು, ಇನ್ನೊಂದು ಕಣ್ಣಿಂದ ನೋಡು. ಕುರಿಗಾಹಿಯ ಪ್ರೀತಿಯ ಅನುಭವಿಸು. ಇರುಳಲ್ಲಿ ನಿನ್ನಿನಿಯ ಇಲ್ಲಿ ತಿರುಗಾಡುವನು. ನಿನ್ನ ಬಾಯಿ ಭಕ್ಷ್ಯಗಳಿಗಲ್ಲ, ಅದು ಮೀಸಲಾಗಿರಲಿ ಪ್ರಿಯಕರನ ತುಟಿಗಳಿಗೆ. ಅವನೋ ಇವಳೋ ಬಿಟ್ಟುಹೋದರೆ ಬಂದಾರು ಇನ್ನೂ ಇಪ್ಪತ್ತು ಮಂದಿ. ಚಿಂತೆಗೆ ಕಟ್ಟು ಚಟ್ಟ. ದ್ವಾರಗಳು ತೆರೆದೇ ಇದ್ದರೂ ಜೈಲುಕೋಣೆಯಲಿ ಇರುವೆಯೇಕೆ? ಮೌನದ ಈ ಅಗಾಧ ಬಯಲಲ್ಲಿ ನಡೆ, ಕುಪ್ಪಳಿಸು, ಹಾರು- ನಿನ್ನಿರುವಿಕೆಯ ವೃತ್ತಗಳ ವಿಸ್ತರಿಸು.
ಇದನ್ನೂ ಓದಿ: Harish Kera Column: ರಬ್ಬರ್: ಅಬ್ಬರ ಮತ್ತು ಅವನತಿ
***
ಈ ಹೊಸತನದ ಪ್ರೇಮದೊಳಗೆ ಬಿಡು ನಿನ್ನ ಜೀವ. ಅದರ ಆ ಬದಿಯಲ್ಲಿ ಇನ್ನೊಂದು ದಾರಿ ತೊಡಗುವುದು. ಆಕಾಶವಾಗಬೇಕಿದ್ದರೆ, ಜೈಲಿನ ಗೋಡೆಗಳ ಒಡೆದು ಹೊರಬೀಳು. ಬಣ್ಣಗಳ ನಡುವೆ ಈ ಕ್ಷಣ ಹುಟ್ಟಿಕೊಂಡಂತೆ ಹೊರನಡೆ. ಆವರಿಸಿದೆ ನಿನ್ನ ಆ ದಪ್ಪ ಮೋಡ. ಅಂಚಿನಿಂದಾಚೆ ಸದ್ದಿಲ್ಲದೇ ಸರಿದು ಮೌನದ ಮೊರೆಯಲ್ಲಿ ಅಸುನೀಗು. ನಿನ್ನಾ ಹಳೆ ಬದುಕು ಈ ಮೌನದಿಂದ ತಪ್ಪಿಸಿಕೊಳ್ಳುತ್ತಿದ್ದ ಬರಿ ದೌಡು. ಈಗದೋ ಬಂದಿದೆ ನೋಡು ಮಾತಿಲ್ಲದ ಹುಣ್ಣಿಮೆ ಚಂದ್ರ.
***
ಈ ಮೊಂಬತ್ತಿಯನ್ನು ಮಾಡಿದ್ದು ಸಂಪೂರ್ಣವಾಗಿ ಉರಿಯಲೆಂದು. ಉರಿದು ನಾಶ ವಾಗುವ ಕ್ಷಣದಲ್ಲಿ ಅದಕ್ಕೆ ನೆರಳು ಇಲ್ಲ. ಅದು ಕೇವಲ ಬೆಳಕಿನ ನಾಲಗೆ. ಆಶ್ರಯವನ್ನು ವರ್ಣಿಸುವ ಜ್ಯೋತಿ ಮಾತ್ರ. ಇಲ್ಲಿ ಕೊನೆಗೊಳ್ಳುತ್ತಿರುವ ಈ ಚಿಕ್ಕ ಮೇಣದ ತುಂಡನ್ನು ನೋಡು- ಪಾಪ ಮತ್ತು ಪುಣ್ಯಗಳಿಂದ, ಅವುಗಳಿಂದ ಹುಟ್ಟುವ ಹೆಮ್ಮೆ ಮತ್ತು ಲಜ್ಜೆ ಯಿಂದ, ಕೊನೆಗೂ ಸಂಪೂರ್ಣವಾಗಿ ಮುಕ್ತನಾದ, ಸುರಕ್ಷಿತನಾದ ವ್ಯಕ್ತಿಯ ಹಾಗಿದೆ.
***
ನಾನು ಕ್ರೈಸ್ತನಲ್ಲ, ಯಹೂದಿಯಲ್ಲ, ಮುಸ್ಲಿಮನಲ್ಲ, ಹಿಂದೂ ಅಲ್ಲ, ಬೌದ್ಧನಲ್ಲ, ಸೂಫಿ ಯಲ್ಲ, ಜೆನ್ ಅಲ್ಲ. ಯಾವ ಧರ್ಮಕ್ಕೂ, ಯಾವ ಸಂಸ್ಕೃತಿಗೂ ಸೇರಿರುವವನಲ್ಲ. ನಾನು ಪೂರ್ವದವನಲ್ಲ, ಪಶ್ಚಿಮದವನಲ್ಲ, ಸಮುದ್ರದಿಂದ ಬಂದವನಲ್ಲ, ಭೂಮಿ ಯಿಂದ ಮೇಲೆದ್ದವನಲ್ಲ. ನಾನು ಸಹಜವಲ್ಲ, ಅಲೌಕಿಕವೂ ಅಲ್ಲ, ಯಾವುದೇ ಮೂಲ ಭೂತ ಅಂಶಗಳಿಂದ ಕೂಡಿದವನೂ ಅಲ್ಲ. ನಾನು ಈ ಲೋಕದಿಂದದಲೂ, ಪರಲೋಕ ದಿಂದಲೂ ಬಂದಿಲ್ಲ. ಆದಮ್ ಮತ್ತು ಈವ್ ನಿಂದಲೋ ಇನ್ಯಾವ ಮೂಲಕಥೆ ಯಿಂದಲೋ ಇಳಿದವನಲ್ಲ. ನನ್ನ ಸ್ಥಳವು ಸ್ಥಳವಿಲ್ಲದದ್ದು.
ಗುರುತು ಇಲ್ಲದ ಗುರುತು. ನಾನು ದೇಹವಲ್ಲ, ಆತ್ಮವೂ ಅಲ್ಲ. ನಾನು ನನ್ನ ಪ್ರಿಯನಿಗೆ ಸೇರಿದವನು. ಎರಡು ಲೋಕಗಳನ್ನು ಒಂದಾಗಿ ಕಂಡಿದ್ದೇನೆ. ಆ ಒಂದೇ ಸತ್ಯವನ್ನು ಕರೆಯುತ್ತೇನೆ. ಮೊದಲಿನದು, ಕೊನೆಯದು, ಹೊರಗಿನದು, ಒಳಗಿನದು- ಆ ಒಂದೇ ಉಸಿರನ್ನು ಅರಿತವನು, ಉಸಿರಾಡುತ್ತಿರುವ ಮಾನವನು ನಾನು.
***
ಮರಗಳನ್ನು ಬೇರು ಸಹಿತ ಕಿತ್ತು ಹಾಕುವ ಅದೇ ಗಾಳಿ, ಹುಲ್ಲುಗಳನ್ನು ಮಿನುಗುವಂತೆ ಮಾಡುತ್ತದೆ. ಆ ಗರ್ವಭರಿತ ಗಾಳಿ, ಹುಲ್ಲಿನ ದೌರ್ಬಲ್ಯವನ್ನೂ, ಅದರ ವಿನಮ್ರತೆಯನ್ನೂ ಪ್ರೀತಿಸುತ್ತದೆ. ನೀನು ಬಲಿಷ್ಠನೆಂದು ಎಂದಿಗೂ ಗರ್ವಿಸಬೇಡ. ಕೊಚ್ಚುವ ಕೊಡಲಿ ಕೊಂಬೆ ಗಳು ಎಷ್ಟು ದಪ್ಪ ಎಂದು ಚಿಂತಿಸುವುದಿಲ್ಲ. ಅವುಗಳನ್ನು ತುಂಡುಗಳಾಗಿ ಕತ್ತರಿಸುತ್ತದೆ. ಆದರೆ ಎಲೆಗಳನ್ನು ಅದಕ್ಕೆ ಕತ್ತರಿಸಲಾಗುವುದಿಲ್ಲ. ಹಾಗೆಯೇ ಬಿಡುತ್ತದೆ. ಕಟ್ಟಿಗೆಯ ರಾಶಿ ಎಷ್ಟು ದೊಡ್ಡದು ಎಂದು ಜ್ವಾಲೆ ಯೋಚಿಸುವುದಿಲ್ಲ. ಒಬ್ಬ ಕಟುಕ, ಕುರಿಗಳ ಹಿಂಡೇ ಬಂದರೂ ಓಡಿ ಹೋಗುವುದಿಲ್ಲ. ರೂಪ-ಗಾತ್ರಗಳೆಲ್ಲ ನಿಜದ ಸಮ್ಮುಖ ದಲ್ಲಿ ಬಹಳ ದುರ್ಬಲ. ನಿಜವೇ ನಮ್ಮ ಮೇಲಿರುವ ಆಕಾಶವನ್ನು ಒಂದು ಬುಗುರಿಯಂತೆ ತಿರುಗಿಸು ತ್ತಿರುತ್ತದೆ. ಆ ಆಕಾಶದ ಚಕ್ರವನ್ನು ತಿರುಗಿಸುವವರು ಯಾರು? ಸರ್ವವ್ಯಾಪಿ ಪ್ರಜ್ಞೆ.
***
ನನ್ನ ಮೊದಲ ಪ್ರೇಮಕಥೆಯನ್ನು ಕೇಳಿದ ಕ್ಷಣದಿಂದಲೇ ನಿನ್ನನ್ನು ಹುಡುಕಲು ಆರಂಭಿಸಿದೆ- ಅದು ಎಷ್ಟು ದಡ್ಡತನ ಎಂಬುದೇ ತಿಳಿಯದೆ. ಪ್ರೇಮಿಗಳು ಅಂತಿಮವಾಗಿ ಯಾವುದೋ ಒಂದು ಸ್ಥಳದಲ್ಲಿ ಭೇಟಿ ಮಾಡುವುದಿಲ್ಲ. ಅವರು ಸದಾಕಾಲವೂ ಒಬ್ಬ ರೊಳಗೆ ಮತ್ತೊಬ್ಬರು ನೆಲೆಸಿರುವವರು.
***
ಮನುಷ್ಯ ಆಗಿರುವುದು ಎಂದರೆ ಅತಿಥಿಗೃಹದಂತೆ. ಪ್ರತಿ ಬೆಳಗ್ಗೆ ಹೊಸ ಅತಿಥಿಯೊಬ್ಬ ಬರುತ್ತಾನೆ. ಒಂದು ಸಂತೋಷ, ಒಂದು ವಿಷಾದ, ಒಂದು ಕೀಳು ಭಾವನೆ, ಒಂದು ಕ್ಷಣಿಕ ಅರಿವು- ಎಲ್ಲಾ ನಿರೀಕ್ಷಿಸದ ಅತಿಥಿಗಳಾಗಿ ಬರುತ್ತವೆ.
ಎಲ್ಲರನೂ ಸ್ವಾಗತಿಸಿ, ಆತಿಥ್ಯ ನೀಡಿ. ಅದು ದುಃಖಗಳ ಗುಂಪಾಗಿದ್ದರೂ, ಹಿಂಸೆ ನೀಡಿ ನಿನ್ನ ಮನೆಯನ್ನೇ ಖಾಲಿ ಮಾಡುವವರು, ಸಾಮಾನುಗಳನ್ನು ಕಳೆದೊಯ್ಯುವವರು. ಪ್ರತಿ ಅತಿಥಿಯನ್ನೂ ಗೌರವದಿಂದ ನಡೆಸಿಕೊ. ಅವನು ನಿನ್ನನ್ನು ಹೊಸ ಆನಂದಕ್ಕೆ ಸಿದ್ಧಗೊಳಿ ಸಲು ಮನೆಯನ್ನೇ ಖಾಲಿ ಮಾಡಿಸುತ್ತಿದ್ದಾನೆ.
ಕೇಡಿನ ಆಲೋಚನೆ, ಲಜ್ಜೆ, ದ್ವೇಷ- ಇವುಗಳನ್ನು ಬಾಗಿಲಲ್ಲಿ ನಗುತ್ತಾ ಒಳಕ್ಕೆ ಆಹ್ವಾನಿಸು. ಯಾರೇ ಬಂದರೂ ಕೃತಜ್ಞತೆಯಿಂದ ಸ್ವೀಕರಿಸು. ಏಕೆಂದರೆ ಪ್ರತಿಯೊಬ್ಬರೂ ಎಲ್ಲೋ ದೂರದಿಂದ ನಿನಗೆ ಮಾರ್ಗದರ್ಶಕರಾಗಿ ಕಳುಹಿಸಲ್ಪಟ್ಟವರೇ.
***
ಯಾರಾದರೂ ನಿನ್ನನ್ನು ಕೇಳಿದರೆ- ನಮ್ಮ ಎಲ್ಲಾ ಕಾಮಾಕಾಂಕ್ಷೆಗಳ ಪರಿಪೂರ್ಣ ತೃಪ್ತಿ ಹೇಗೆ ಕಾಣುತ್ತದೆ ಎಂದು, ನಿನ್ನ ಮುಖವನ್ನು ಎತ್ತಿ ಹೇಳು: ‘ಇದೀಗ ಹೀಗೇ’. ಯಾರಾದರೂ ರಾತ್ರಿಯ ಆಕಾಶದ ಸೌಂದರ್ಯವನ್ನು ಉಲ್ಲೇಖಿಸಿದರೆ, ಮನೆಯ ಮೇಲ್ಚಾವಣಿಗೆ ಏರಿ ನೃತ್ಯ ಮಾಡುತ್ತಾ ಕೇಳು: ‘ಇದೀಗ ಹೀಗೇನಾ?’ ಯಾರಾದರೂ ‘ಆತ್ಮ’ ಎಂದರೇನು ಎಂದು ಅಥವಾ ‘ದೇವರ ಸುಗಂಧ’ ಎಂದರೇನು ಎಂದು ತಿಳಿಯಲು ಬಯಸಿದರೆ, ನಿನ್ನ ಮುಖವ ಅವನತ್ತ ಅಥವಾ ಅವಳತ್ತ ವಾಲಿಸಿ ನೇರ ನೋಡುತ್ತ ‘ಹೀಗೇ’ ಎನ್ನು.
***
ನೀನು ನೀರಿನ ಕಡೆ ಇಳಿಯುತ್ತಿರುವ ಕುರಿಗಳ ಹಿಂಡನ್ನು ಕಂಡಿದ್ದೀಯಲ್ಲ. ಕುಂಟಾಗಿರುವ, ಕನಸಿನಲ್ಲಿ ತೇಲುತ್ತಿರುವ ಆ ಕುರಿ ಹಿಂಡಿನ ಕೊನೆಯ ನಡೆಯುತ್ತದೆ. ಅದರ ಬಗ್ಗೆ ಕೆಲವರ ಮುಖಗಳಲ್ಲಿ ಚಿಂತೆ ಕಾಣಿಸುತ್ತದೆ. ಆದರೆ ನೋಡಿ- ಈಗ ಅವರು ನಗುತ್ತಿದ್ದಾರೆ, ಏಕೆಂದರೆ ಹಿಂದಿರುಗು ವಾಗ ಅದೇ ಕುರಿಯೇ ಹಿಂಡನ್ನು ಮುನ್ನಡೆಸುತ್ತಿದೆ!
ತಿಳಿವಳಿಕೆಯ ಹಲವು ವಿಧಗಳಿವೆ. ಆ ಕುಂಟ ಕುರಿಯ ತಿಳಿವಳಿಕೆ ಉಪಸ್ಥಿತಿಯ ಬೇರುಗಳಿಗೆ ಹಿಂತಿರುಗುವ ಒಂದು ಕೊಂಬೆಯಂತೆ. ಆ ಕುಂಟ ಕುರಿಯಿಂದ ಕಲಿತು, ಹಿಂಡನ್ನು ಮನೆಗೆ ಮುನ್ನಡೆಸು.
***
ನಿನ್ನ ಗಾಯವನ್ನು ಒಬ್ಬ ವೈದ್ಯನ ಶಸ್ತ್ರಚಿಕಿತ್ಸೆಗೆ ಒಪ್ಪಿಸು. ಗಾಯದ ಮೇಲೆ ನೊಣಗಳು ಸೇರುತ್ತವೆ. ಅವು ನಿನ್ನ ಸ್ವರಕ್ಷಣೆಯ ಭಾವನೆಗಳು, ಇದು ನನ್ನದು ಎಂಬ ಅಹಂಕಾರದ ಪ್ರೀತಿ- ಅವು ಗಾಯವನ್ನು ಮುಚ್ಚುತ್ತವೆ. ಗುರು ಅವುಗಳನ್ನು ಓಡಿಸಿ, ಗಾಯದ ಮೇಲೆ ಪಟ್ಟಿಯನ್ನು ಕಟ್ಟಲು ಬಿಡು. ತಲೆಯನ್ನು ತಿರುಗಿಸಬೇಡ. ಪಟ್ಟಿ ಕಟ್ಟಿದ ಆ ಸ್ಥಳವನ್ನೇ ನೋಡು. ಅಲ್ಲಿಯೇ ಬೆಳಕು ನಿನ್ನೊಳಗೆ ಪ್ರವೇಶಿಸುತ್ತದೆ.
***
ಇಂಥ ಮಾರುಕಟ್ಟೆಯನ್ನು ನೀನು ಇನ್ನೆಲ್ಲಿ ಕಾಣಬಲ್ಲೆ? ಒಂದು ಗುಲಾಬಿಯಿಂದಲೇ ನೂರು ಗುಲಾಬಿ ತೋಟಗಳನ್ನು ಖರೀದಿಸಬಹುದಾದ ಸ್ಥಳವನ್ನು? ಒಂದು ಬೀಜಕ್ಕೆ ಒಟ್ಟು ಕಾಡನ್ನೇ ಪಡೆಯಬಹುದಾದ ಜಾಗವನ್ನು? ಒಂದು ದುರ್ಬಲ ಉಸಿರಿಗೆ ದೈವಿಕ ಗಾಳಿ ಯನ್ನು ಪಡೆಯಬಹುದಾದ ಅವಕಾಶವನ್ನು? ಸಮುದ್ರವೇ ಪ್ರೇಮಿಯಾಗಿ ನಿನ್ನ ಬಳಿಗೆ ಬಂದಾಗ, ಅಯ್ಯೋ, ತಡ ಮಾಡಬೇಡ, ಆ ಕ್ಷಣವೇ ವರಿಸು!