ಸಂಗತ
ನೇಪಾಳದಲ್ಲಿ ಇತ್ತೀಚೆಗಷ್ಟೇ ಮಹಾಪ್ರವಾಹ ಸಂಭವಿಸಿತು. ಅದರ ಬೆನ್ನಲ್ಲೇ ಚೀನಾದ ಡ್ಯಾಮ್ ಗಳಿಂದ ಇರುವ ಅಪಾಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಭಾರತೀಯರು ಎಷ್ಟು ಮುಗ್ಧರು ಅಂದರೆ, ನಮ್ಮ ವಿರುದ್ಧ ಚೀನಾ ‘ಜಲಬಾಂಬ್’ ಪ್ರಯೋಗಿಸುತ್ತಿದೆ ಎಂಬುದೂ ನಮಗೆ ಗೊತ್ತಿಲ್ಲ. ಅವರ ಡ್ಯಾಮ್‌ಗಳು ಪ್ರಕೃತಿ ವಿಕೋಪದಿಂದ ಒಡೆದುಹೋದರೆ ಕತೆ ಏನು? ಭಾರತ ಎಚ್ಚರಿಕೆಯಿಂದ ಇರಬೇಕಾಗಿದೆ.
ನೇಪಾಳದಲ್ಲಿ ಸಂಭವಿಸಿದ ಮಹಾ ಪ್ರವಾಹದಲ್ಲಿ ನೂರಾರು ಮಂದಿ ಜೀವ ತೆತ್ತಿದ್ದಾರೆ. ಆ ಘಟನೆ ನೆನೆದರೆ ಮನಸ್ಸು ಆರ್ದ್ರವಾಗುತ್ತದೆ. ಕೆಸರಿನ ಪ್ರವಾಹ ಉಂಟುಮಾಡಿದ ಹಾನಿಯನ್ನು ಸರಿಪಡಿಸಿ ಕೊಳ್ಳಲು ಬಹಳ ಸಮಯ ಬೇಕು. ಟಿಬೆಟ್‌ನ ಎತ್ತರದ ಪರ್ವತದಲ್ಲಿ ಆ ದಿನ ಏನಾಯಿತು ಎಂಬು ದರ ನಿಜವಾದ ಚಿತ್ರಣ ಇವತ್ತಿಗೂ ನಮ್ಮಲ್ಲಿಲ್ಲ. ನೇಪಾಳದ ಒಂದಿಡೀ ಪ್ರದೇಶವೇ ಆವತ್ತಿನ ದುರಂತದಲ್ಲಿ ಕೊಚ್ಚಿಕೊಂಡು ಹೋಯಿತು ಎಂಬುದಷ್ಟೇ ನಮಗೆ ಗೊತ್ತಿದೆ.
ನೀರ್ಗಲ್ಲುಗಳು ಒಡೆದು ನೇಪಾಳದ ಜುಟ್ಟಿನ ಭಾಗದಲ್ಲಿ ಈ ಹಿಂದೆ ಅಪಾರ ಪ್ರಮಾಣದ ನೀರು ಬಂದು ಸಂಗ್ರಹವಾಗಿತ್ತಂತೆ. ಅದರಿಂದ ನೈಸರ್ಗಿಕ ಅಣೆಕಟ್ಟೆಯ ರೀತಿಯ ರಚನೆ ಉಂಟಾಗಿತ್ತಂತೆ. ಆ ಅಣೆಕಟ್ಟೆ ಒಡೆದು ನೇಪಾಳದಲ್ಲಿ ಕೆಸರಿನ ಪ್ರವಾಹವನ್ನು ಸೃಷ್ಟಿಸಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ವಾದದ ಪ್ರಕಾರ, ಆ ಸರೋವರದ ಕಟ್ಟೆ ಒಡೆಯಲು ಭೂಕಂಪ ಕಾರಣವಂತೆ. ಆದರೆ ಅಮೆರಿಕದ ಭೂಗರ್ಭ ಇಲಾಖೆಯ ಪ್ರಕಾರ ಪ್ರವಾಹ ಸಂಭವಿಸುವುದಕ್ಕೂ ಮೊದಲು ಟಿಬೆಟ್‌ನಲ್ಲಿ ಭೂಕಂಪ ಸಂಭವಿಸಿಲ್ಲ.
ಇದನ್ನೂ ಓದಿ: Vijay Darda Column: ಇಮ್ರಾನ್ ಖಾನ್ ಸಾಹೇಬರ ಅದೃಷ್ಟ ಬದಲಾದೀತೆ ?
ಹಾಗಿದ್ದರೆ ನೈಸರ್ಗಿಕ ಅಣೆಕಟ್ಟೆ ಒಡೆದಿದ್ದು ಹೇಗೆ? ನೀರ್ಗಲ್ಲು ಕುಸಿತದಿಂದಲೇ ಪ್ರವಾಹ ಉಂಟಾ ಯಿತೇ? ಪ್ರವಾಹಕ್ಕೆ ಕಾರಣ ಏನಾದರೂ ಆಗಿರಲಿ, ಇದಕ್ಕಿಂತ ಮುಖ್ಯವಾದ ಸಂಗತಿ ಏನೆಂದರೆ, ನೇಪಾಳದಲ್ಲಿ ಪ್ರವಾಹಕ್ಕೆ ಕಾರಣವಾದ ಘಟನೆ ನಡೆದಿರುವುದು ಚೀನಾದ ವಶದಲ್ಲಿರುವ ಟಿಬೆಟ್ ನಲ್ಲಿ. ತಂತ್ರಜ್ಞಾನದಲ್ಲಿ ಅತ್ಯಂತ ಮುಂದಿರುವ ದೇಶ ಚೀನಾ. ಹಿಮಾಲಯದಲ್ಲಿರುವ ಈ ಪ್ರದೇಶ ದಲ್ಲಿ ನೈಸರ್ಗಿಕ ವಿಕೋಪಗಳು ಯಾವಾಗಲೂ ಸಂಭವಿಸುತ್ತಲೇ ಇರುತ್ತವೆ ಎಂಬುದು ಚೀನಾಕ್ಕೆ ಗೊತ್ತಿದೆ.
ಹೀಗಾಗಿ ಈ ಪ್ರದೇಶದ ಮೇಲೆ ಚೀನಾ ಕಣ್ಣಿಟ್ಟಿರುವುದಿಲ್ಲ ಎಂದು ನಂಬುವುದಕ್ಕೆ ಯಾವ ಕಾರಣ ವೂ ಇಲ್ಲ. ನೈಸರ್ಗಿಕ ಸರೋವರವೊಂದು ಅರೆಕ್ಷಣದಲ್ಲಿ ಒಡೆದು ಹೋಗುವುದಿಲ್ಲ. ಅದಕ್ಕೂ ಮೊದಲು ಸಾಕಷ್ಟು ಸುಳಿವುಗಳು ಸಿಕ್ಕೇ ಸಿಗುತ್ತವೆ. ಆದ್ದರಿಂದ ಚೀನಾಕ್ಕೆ ಈ ದುರಂತದ ಸುಳಿವು ಮೊದಲೇ ಸಿಕ್ಕಿತ್ತು ಎಂದು ಖಂಡಿತ ನಾವು ಊಹಿಸಬಹುದು. ಆದರೂ ನೇಪಾಳಕ್ಕೆ ಅದು ಯಾವುದೇ ಮುನ್ಸೂಚನೆ ನೀಡಲಿಲ್ಲ.
ಚೀನಾದ ಉದ್ದೇಶದ ಬಗ್ಗೆ ಅನುಮಾನ ಮೂಡುವುದಕ್ಕೆ ಇದೇ ಕಾರಣ. ಇಷ್ಟು ದೊಡ್ಡ ದುರಂತ ಸಂಭವಿಸುತ್ತಿದ್ದರೂ ಚೀನಾ ಏಕೆ ಮೌನವಾಗಿ ಕುಳಿತಿತ್ತು? ನೇಪಾಳಕ್ಕೆ ಏಕೆ ಎಚ್ಚರಿಕೆ ನೀಡಲಿಲ್ಲ? ಇಂತಹದ್ದೊಂದು ಪ್ರಶ್ನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬಂದಾಗ ಚೀನಾ ತನ್ನ ಮೇಲಿನ ಆರೋಪ ವನ್ನು ನಿರಾಕರಿಸಿದೆ. ಆದರೆ, ತನ್ನ ಉಪಗ್ರಹಗಳು ಆ ಪ್ರದೇಶದಲ್ಲಿ ಏನಾದರೂ ಅನುಮಾ ನಾಸ್ಪದ ವಿದ್ಯಮಾನಗಳನ್ನು ದಾಖಲಿಸಿವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಿಲ್ಲ.
ನೇಪಾಳ ಕೂಡ ಈ ಘಟನೆಯ ಕಾರಣದ ಬಗ್ಗೆ ಇನ್ನೂ ಮಾತನಾಡಿಲ್ಲ. ಆದರೆ, ‘ದುರಂತದ ಮೂಲ ನೇಪಾಳದಲ್ಲೇ ಇದ್ದಿದ್ದರೆ ನಮ್ಮ ಅಧಿಕಾರಿಗಳಿಗೆ ಖಂಡಿತ ತಿಳಿಯುತ್ತಿತ್ತು. ಅದರ ಮೂಲ ಟಿಬೆಟ್ ನಲ್ಲಿದ್ದುದರಿಂದ ನಮಗೆ ಮುನ್ಸೂಚನೆ ಸಿಗಲಿಲ್ಲ’ ಎಂದು ನೇಪಾಳ ಸರಕಾರದ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಮನಸ್ಸಿನಲ್ಲೊಂದು ಪ್ರಶ್ನೆ ಕೊರೆಯತೊಡಗಿದೆ.
ಟಿಬೆಟ್‌ನ ಮೆಡಾಗ್‌ನಲ್ಲಿ ಚೀನಾ ನಿರ್ಮಿಸುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಅಣೆಕಟ್ಟೆ ಯೇನಾದರೂ ಒಡೆದುಹೋದರೆ ಏನಾಗಬಹುದು? ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟೆಯ ಬಗ್ಗೆ ಕಳೆದ ವರ್ಷ ಮೊದಲ ಸಲ ಸುದ್ದಿ ಪ್ರಕಟವಾದಾಗಲೂ ನಾನು ಈ ವಿಷಯದ ಬಗ್ಗೆ ಬರೆದಿದ್ದೆ. ಆಗಲೂ ಇದೇ ಪ್ರಶ್ನೆ ಕೇಳಿದ್ದೆ. ಈಗ ಈ ಪ್ರಶ್ನೆ ಇನ್ನಷ್ಟು ಮಹತ್ವ ಪಡೆದಿದೆ. ಈ ಅಣೆಕಟ್ಟೆ ಭಾರತದ ಗಡಿಯಿಂದ ಕೇವಲ 30 ರಿಂದ 40 ಕಿ.ಮೀ. ದೂರದಲ್ಲಿದೆ.
ನಾವು ಭಾರತದಲ್ಲಿ ಬ್ರಹ್ಮಪುತ್ರಾ ಎಂದು ಯಾವ ನದಿಗೆ ಕರೆಯುತ್ತೇವೋ ಅದೇ ನದಿಗೆ ಚೀನಾ ಅಣೆಕಟ್ಟೆ ನಿರ್ಮಿಸುತ್ತಿದೆ. ಅದರಲ್ಲಿ ಎಷ್ಟು ನೀರು ಸಂಗ್ರಹಿಸ ಬಹುದು ಎಂಬುದನ್ನು ಚೀನಾ ಈವರೆಗೂ ಹೇಳಿಲ್ಲ.
ಆದರೆ, ತಜ್ಞರ ಪ್ರಕಾರ ಹಲವಾರು ಕೋಟಿ ಕ್ಯೂಬಿಕ್ ಫೀಟ್‌ನಷ್ಟು ನೀರನ್ನು ಆ ಅಣೆಕಟ್ಟೆಯಲ್ಲಿ ಸಂಗ್ರಹಿಸಿಡಬಹುದು. ಹೀಗೊಮ್ಮೆ ಊಹೆ ಮಾಡಿಕೊಳ್ಳಿ. ಆ ಅಣೆಕಟ್ಟೆ ಒಂದು ದಿನ ಒಡೆದು ಹೋಗುತ್ತದೆ. ಆಗ ಏನಾಗುತ್ತದೆ? ಅಥವಾ ಭಾರತದ ಜೊತೆಗೆ ಗಡಿ ವಿಷಯದಲ್ಲಿ ಜಗಳವಾಡುವ ಚೀನಾ ಸರಕಾರ ಬೇಕಂತಲೇ ಒಂದು ದಿನ ಹೇಳದೆ ಕೇಳದೆ ದೊಡ್ಡ ಪ್ರಮಾಣದಲ್ಲಿ ಆ ಅಣೆಕಟ್ಟೆ ಯಿಂದ ನೀರು ಬಿಡುಗಡೆ ಮಾಡುತ್ತದೆ. ಅದು ರಭಸದಲ್ಲಿ ಹರಿಯುವುದು ಭಾರತಕ್ಕೇ.
ಆಗ ಏನು ಮಾಡೋಣ? ಆದರೆ, ನಾವು ಭಾರತೀಯರು ಎಷ್ಟು ಸೌಮ್ಯ ಸ್ವಭಾವದ ಜನರು ಅಂದರೆ, ಇಂತಹ ಸಾಧ್ಯತೆಗಳನ್ನೆಲ್ಲ ನಾವು ಯೋಚಿಸುವುದೇ ಇಲ್ಲ. ನಮ್ಮ ಯೋಚನೆಯೇನಿದ್ದರೂ ನೈಸರ್ಗಿಕ ಕಾರಣಗಳ ಬಗ್ಗೆ ಮಾತ್ರ ಇರುತ್ತದೆ. ಆದರೆ ಟಿಬೆಟ್‌ನ ಡ್ಯಾಂ ಹಿಮಾಲಯದ ಅತ್ಯಂತ ಸೂಕ್ಷ್ಮ ಪ್ರದೇಶ ದಲ್ಲಿದೆ. ಅಲ್ಲಿನ ಭೂಗರ್ಭದೊಳಗೆ ಅತಿಹೆಚ್ಚು ಚಟುವಟಿಕೆಗಳು ನಡೆಯು ತ್ತಿರುತ್ತವೆ.
ಇತ್ತೀಚೆಗೆ, ಅಂದರೆ 2025ರ ಜನವರಿಯಲ್ಲೂ ಅಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿ ಸಿತ್ತು. ಅಂತಹ ಪ್ರಬಲ ಭೂಕಂಪನ ಟಿಬೆಟ್‌ನ ಡ್ಯಾಂ ಕೆಳಗೂ ಸಂಭವಿಸಿದರೆ ನಿಸ್ಸಂಶಯವಾಗಿ ಅದು ಒಡೆಯು ತ್ತದೆ. ಆಗ ಕೋಟಿಗಟ್ಟಲೆ ಕ್ಯೂಬಿಕ್ ಫೀಟ್ ನೀರು ಭಾರತಕ್ಕೆ ಹರಿಯುತ್ತದೆ. ಪರಿಣಾಮ, ಭಯಾನಕ ಪ್ರವಾಹ ಕೇವಲ ಅರುಣಾಚಲ ಪ್ರದೇಶದಲ್ಲಿ ಮಾತ್ರ ಸಂಭವಿಸುವುದಿಲ್ಲ.
ಅಸ್ಸಾಂ ಹಾಗೂ ಇನ್ನಿತರ ಈಶಾನ್ಯ ರಾಜ್ಯಗಳಲ್ಲೂ ಪ್ರಳಯ ಉಂಟಾಗಬಹುದು. ಅಷ್ಟೇಕೆ, ಪಕ್ಕದ ಬಾಂಗ್ಲಾದೇಶಕ್ಕೂ ಡ್ಯಾಂ ನೀರು ನುಗ್ಗಬಹುದು. ಚೀನಾದ ಈ ಬೃಹತ್ ಯೋಜನೆ ಬಗ್ಗೆ ಈಗಾಗಲೇ ಬಾಂಗ್ಲಾದೇಶ ಕಳವಳ ವ್ಯಕ್ತಪಡಿಸಿದೆ. ಅದು ಡ್ಯಾಂ ಕುರಿತು ಹೆಚ್ಚಿನ ಮಾಹಿತಿ ಕೇಳಿ ಚೀನಾಕ್ಕೆ ಪತ್ರ ಬರೆದಿದೆ. ಆದರೆ ಚೀನಾ ಯಾರಿಗೂ ಉತ್ತರದಾಯಿ ಅಲ್ಲ! ಅದು ಅನಭಿಷಿಕ್ತ ಚಕ್ರವರ್ತಿ!
ಹೀಗಾಗಿ ಯಾವುದೇ ಉತ್ತರ ನೀಡಿಲ್ಲ. ಅಣೆಕಟ್ಟೆ ನಿರ್ಮಿಸಲಾಗುತ್ತಿರುವ ಪ್ರದೇಶದಲ್ಲಿ ಬ್ರಹ್ಮಪುತ್ರಾ ನದಿ ಹರಿದ ಮೇಲೆ ಭಾರತವನ್ನು ಪ್ರವೇಶಿಸುವಾಗ ಸಾವಿರಾರು ಅಡಿ ಆಳಕ್ಕೆ ಧುಮುಕುತ್ತದೆ. ಮುಂದಿನ ದಿನಗಳಲ್ಲಿ ಅಣೆಕಟ್ಟೆಯಿಂದ ನೀರು ಬಿಟ್ಟರೆ ಅಥವಾ ಅಣೆಕಟ್ಟೆ ಒಡೆದರೆ ಅಷ್ಟೊಂದು ಎತ್ತರದಿಂದ ಭಾರಿ ಪ್ರಮಾಣದ ಪ್ರವಾಹ ಭಾರತಕ್ಕೆ ನುಗ್ಗುತ್ತದೆ. ಭಾರತಕ್ಕೆ ಅತ್ಯಂತ ಕಳವಳಕಾರಿ ಸಂಗತಿಯೆಂದರೆ ಚೀನಾ ಈ ಅಣೆಕಟ್ಟೆಗೆ ಸಂಬಂಽಸಿದ ಮಾಹಿತಿಗಳನ್ನೆಲ್ಲ ರಹಸ್ಯವಾಗಿಟ್ಟಿದೆ.
ಜಗತ್ತಿನ ಯಾವುದೇ ದೇಶಕ್ಕೂ ಈ ಅಣೆಕಟ್ಟೆಯ ವಿನ್ಯಾಸ ಹೇಗಿರುತ್ತದೆ ಎಂಬುದು ಗೊತ್ತಿಲ್ಲ. ಅಲ್ಲದೆ, ಭಾರತ ಮತ್ತು ಬಾಂಗ್ಲಾದೇಶದ ಮೇಲೆ ಈ ಅಣೆಕಟ್ಟೆಯಿಂದ ಆಗುವ ಪರಿಣಾಮವೇನು ಎಂಬುದೂ ಯಾರಿಗೂ ತಿಳಿದಿಲ್ಲ. ಆದ್ದರಿಂದಲೇ ಇದು ಹೆಚ್ಚು ಅಪಾಯಕಾರಿ. ಇನ್ನೊಂದು ಸಮಸ್ಯೆ ಏನೆಂದರೆ, ಈ ಅಣೆಕಟ್ಟೆಯಿಂದ ಹೊರ ಬಿಡುವ ನೀರಿನ ಮಾಹಿತಿಯ ವಿನಿಮಯಕ್ಕೆ ಹಾಗೂ ಬ್ರಹ್ಮಪುತ್ರಾ ನೀರಿನ ಹಂಚಿಕೆಯ ಬಗ್ಗೆ ಭಾರತ ಮತ್ತು ಚೀನಾ ನಡುವೆ ಯಾವುದೇ ಒಪ್ಪಂದವಾಗಿಲ್ಲ.
ಚೀನಾ ನಮಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಒಂದೇ ಒಂದು ಆಶಾದಾಯಕ ಸಂಗತಿ ಏನೆಂದರೆ, ಚೀನಾದ ಅಣೆಕಟ್ಟೆಯಿಂದ ಬರುವ ನೀರನ್ನು ನಿರ್ವಹಣೆ ಮಾಡಲು ಭಾರತ ಕೂಡ ಅರುಣಾಚಲ ಪ್ರದೇಶದಲ್ಲಿ 11,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಅಪ್ಪರ್ ಸಿಯಾಂಗ್ ಅಣೆಕಟ್ಟು ನಿರ್ಮಿಸುತ್ತಿದೆ.
ಆದರೆ, ಇನ್ನೂ ಒಂದು ಸಮಸ್ಯೆಯಿದೆ. ತನ್ನ ಅಣೆಕಟ್ಟೆಯಿಂದ ಚೀನಾ ನೀರನ್ನೇ ಬಿಡುಗಡೆ ಮಾಡದೆ ಇದ್ದರೆ? ಏಕೆಂದರೆ, ಆ ದೇಶ ಏನು ಬೇಕಾದರೂ ಮಾಡಬಹುದು! ಹೀಗಾಗಿ ಭಾರತ ಸಂಪೂರ್ಣ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಜಗತ್ತಿನಲ್ಲಿ ಸ್ನೇಹಕ್ಕೆ ಪರ್ಯಾಯ ಯಾವುದೂ ಇರಲು ಸಾಧ್ಯವಿಲ್ಲ. ಒಂದು ದೇಶ ಎಷ್ಟೇ ಬಲಿಷ್ಠವಾಗಿದ್ದರೂ ಅದು ಇನ್ನೊಂದು ದೇಶದ ಮೇಲೆ, ಅದು ಎಷ್ಟೇ ಸಣ್ಣದಿದ್ದರೂ, ದಬ್ಬಾಳಿಕೆ ಮಾಡಲು ಸಾಧ್ಯವಿಲ್ಲ. ನಾವು ಇದನ್ನು ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಲ್ಲೇ ನೋಡುತ್ತಿದ್ದೇವೆ. ಕೆಲ ದಶಕಗಳಿಂದ ಚೀನಾ ತನ್ನನ್ನು ತಾನು ಅತ್ಯಂತ ಬಲಿಷ್ಠವಾಗಿ ಕಟ್ಟಿಕೊಂಡಿದೆ. ಈ ಪ್ರಕ್ರಿಯೆಯಲ್ಲಿ ಜಗತ್ತು ತನ್ನ ಮೇಲೆ ಅವಲಂಬಿತ ವಾಗುವಂತೆ ಮಾಡಿಕೊಂಡಿದೆ.
ಇಂದು ಚೀನಾದಿಂದ ಈ ವಸ್ತುವಿನ ಪೂರೈಕೆ ನಿಂತಿತು ಅಂದರೆ ಜಗತ್ತೇ ನಿಂತುಹೋಗುತ್ತದೆ ಎಂಬಂತಹ ವಸ್ತುಗಳು ನೂರಾರಿವೆ. ಇದು ಚೀನಾಕ್ಕೂ ಗೊತ್ತಿದೆ. ಭಾರತ ಕೂಡ ಸಾಕಷ್ಟು ವಸ್ತು ಗಳಿಗಾಗಿ ಚೀನಾ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಒಮ್ಮೆ ಅರುಣಾಚಲ ಪ್ರದೇಶ, ಇನ್ನೊಮ್ಮೆ ಡೋಕ್ಲಾಂ, ಮತ್ತೊಮ್ಮೆ ಲಡಾಖ್ ಹೀಗೆ ಭಾರತವನ್ನು ಚೀನಾ ಪರೀಕ್ಷಿಸುತ್ತಲೇ ಇರುತ್ತದೆ. ಹಾಗಂತ ಚೀನಾವನ್ನು ನಾವು ದೂಷಿಸು ತ್ತಿದ್ದರೆ ಏನೂ ಪ್ರಯೋಜನವಿಲ್ಲ.
ನಮ್ಮ ದೇಶದ ಯುವಕರ ಸಾಮರ್ಥ್ಯ ಮತ್ತು ಜ್ಞಾನವನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ದೇಶ ವನ್ನು ಬಲಿಷ್ಠವಾಗಿ ನಿರ್ಮಿಸಿಕೊಂಡು, ಯಾರೊಬ್ಬರೂ ನಮ್ಮನ್ನು ಕೆಣಕಲು ಸಾಧ್ಯವಿಲ್ಲ ದಂತೆ ಬೆಳೆಯಬೇಕು. ರಷ್ಯಾಕ್ಕೆ ಜೈಶಂಕರ್, ಚೀನಾಕ್ಕೆ ದೋವಲ್ ಕಳೆದ ವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ರಷ್ಯಾಕ್ಕೆ ಎರಡು ದಿನಗಳ ಭೇಟಿಗಾಗಿ ತೆರಳಿದ್ದರು. ಅದೇ ಸಮಯದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಎರಡು ದಿನಗಳ ಭೇಟಿಗಾಗಿ ಚೀನಾಕ್ಕೆ ತೆರಳಿದ್ದರು.
ಇದು ಕಾಕತಾಳೀಯವಷ್ಟೇ ಇರಬಹುದೆ? ಇಬ್ಬರ ಭೇಟಿಯಲ್ಲೂ ಬೇರೆ ಬೇರೆ ರೀತಿಯ ಅನೇಕ ಕಾರ್ಯಕ್ರಮಗಳಿದ್ದವು. ಆದರೆ, ಇಬ್ಬರ ಭೇಟಿಯ ಉದ್ದೇಶವೂ ಒಂದೇ ಆಗಿತ್ತು. ಅದು- ಸೆಪ್ಟೆಂಬರ್ 12 ಮತ್ತು 13ರಂದು ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಕ್ಕೆ ತಯಾರಿ ನಡೆಸುವುದು. ಜೈಶಂಕರ್ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನೇ ನೇರವಾಗಿ ಭೇಟಿಯಾಗಿ, ಪ್ರಧಾನಿ ನರೇಂದ್ರ ಮೋದಿಯವರು ಕಳುಹಿಸಿದ ವೈಯಕ್ತಿಕ ಸಂದೇಶವನ್ನು ಹಸ್ತಾಂತರಿಸಿದರು.
ಬ್ರಿಕ್ಸ್ ಶೃಂಗಕ್ಕಾಗಿ ಪುಟಿನ್ ಭಾರತಕ್ಕೆ ಬರುವುದು ಪಕ್ಕಾ ಎಂದು ರಾಜತಾಂತ್ರಿಕ ವಲಯದಲ್ಲಿ ಈಗಾಗಲೇ ಸುದ್ದಿಯಾಗಿದೆ. ಅದೇ ವೇಳೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬ್ರಿಕ್ಸ್ ಶೃಂಗಕ್ಕೆ ಬರುವ ಸಾಧ್ಯತೆಯೂ ಹೆಚ್ಚೇ ಇದೆ. ಕಳೆದ ಬಾರಿ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಬಂದಿದ್ದು 2019ರ ಅಕ್ಟೋಬರ್ ನಲ್ಲಿ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚೀನಾದ ತಿಯಾಂಜಿನ್‌ನಲ್ಲಿ ನಡೆದ ಶಾಂಘೈ ಕೋ ಆಪರೇಷನ್ ಸಂಘದ ಸಭೆಯಲ್ಲಿ ನರೇಂದ್ರ ಮೋದಿ, ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಒಟ್ಟಿಗೇ ಇದ್ದ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಅದು ಅಮೆರಿಕಕ್ಕೆ ತೀವ್ರ ಇರಿಸುಮುರುಸು ಉಂಟು ಮಾಡಿತ್ತು. ಅಂತಹುದೇ ಫೋಟೋ ದೆಹಲಿಯಿಂದಲೂ ವೈರಲ್ ಆಗಿ ಯಾರಿಗಾದರೂ ಹೊಟ್ಟೆಯುರಿ ಉಂಟುಮಾಡಬಹುದೆ? ಅಂತಹದ್ದೊಂದು ನಿರೀಕ್ಷೆಯನ್ನಂತೂ ಇರಿಸಿಕೊಳ್ಳಬಹುದು.