ಪದಸಾಗರ
ಎಲ್ಲಿದ್ದೀರಾ ಯಶ್?
ಏಳೆಂಟು ವರ್ಷಗಳ ಹಿಂದೆ ಟ್ರೆಂಡಿಂಗ್ ಆದ ಡೈಲಾಗ್ ಇದು! ಮಹದಾಯಿ ಹೋರಾಟ ಕ್ಕೋ ಕಾವೇರಿ ಹೋರಾಟಕ್ಕೋ ಬರಲಿಲ್ಲ ಎಂಬ ಕಾರಣಕ್ಕೆ ಪಬ್ಲಿಕ್ ಟಿವಿ ಗುಟುರು ಹಾಕಿತ್ತು. ಯಶ್ ಮತ್ತು ಪಬ್ಲಿಕ್ ಟಿವಿ ರಂಗಣ್ಣ ನಡುವೆ ಮಾತಿನ ಚಕಮಕಿಯ ಸರಣಿಯೇ ನಡೆದಿತ್ತು. ಆನಂತರದಲ್ಲಿ ಯಶ್ ಮತ್ತು ರಂಗಣ್ಣ ನಡುವೆ ಸೌಹಾರ್ದ ಏರ್ಪಟ್ಟಿತು. ಪ್ರಕರಣ ಸುಖಾಂತ್ಯವೂ ಆಯ್ತು. ಆದರೆ ಕಾವೇರಿ ಮತ್ತು ಮಹದಾಯಿ ಸಮಸ್ಯೆ ಬಗೆಹರಿ ಯಿತಾ? ಇಲ್ಲ. ಅದು ಎಲ್ಲಿತ್ತೋ ಅಲ್ಲಿಯೇ ಇದೆ. ಬಹುಶಃ ಅಲ್ಲಿಯೇ ಇರುತ್ತದೆ.
ಈ ಘಟನೆಯ ನಂತರ ಯಶ್ ವೃತ್ತಿಜೀವನದ ಗ್ರಾಫ್ ಯದ್ವಾತದ್ವಾ ಏರುಗತಿಯಲ್ಲಿ ಸಾಗಿಬಿಟ್ಟಿತು. ಕನ್ ಫ್ಯೂಸ್ ಆಗಬೇಡಿ; ಈ ಘಟನೆಯಿಂದಾಗಿ ಯಶ್‌ಗೆ ಯಶಸ್ಸು ಸಿಕ್ಕಿತು ಅಂತ ಹೇಳ್ತಿಲ್ಲ. ಯಶ್ ಯಾವ ಮೀಡಿಯಾಗೂ ಕೇರ್ ಮಾಡದಷ್ಟು, ಯಾವ ಮೀಡಿಯಾ ಗೂ ಅಗ್ಗಕ್ಕೆ ಸಿಗದಷ್ಟು ಬೆಳೆದದ್ದೂ ಆಯ್ತು.
ಸಿನಿಮಾರಂಗಕ್ಕೆ ಸಂಬಂಧಿಸದ ಸಂಗತಿಗಳಿಗೆ, ಯಾವ್ಯಾವುದೋ ಹೋರಾಟಗಳಿಗೆ ಸಿನಿಮಾ ನಟ-ನಟಿಯರು ಬರಬೇಕು ಎಂಬ ನಿರೀಕ್ಷೆಯೇ ತಪ್ಪು. ಅಂದಿಗೆ ರಾಜ್‌ಕುಮಾರ್ ನಮ್ಮ ಸಾಂಸ್ಕೃತಿಕ ರಾಯಭಾರಿ ಎಂಬಂತಿದ್ದರು. ಅವರ ಸಿನಿಮಾಗಳು, ಅವರ ಸಾರ್ವಜನಿಕ ನಡವಳಿಕೆ, ಅವರ ಭಾಷಾಶುದ್ಧತೆ ಇವೆಲ್ಲವೂ ರಾಜ್ಯದ ಹಿರಿಮೆ ಹೆಚ್ಚಿಸುವಂತಿದ್ದವು.
ಹೀಗಾಗಿ ಅವರು ಗೋಕಾಕ್ ಚಳವಳಿಯ ನೇತೃತ್ವ ವಹಿಸಲಿ ಅಂತ ನಿರೀಕ್ಷಿಸೋದ್ರಲ್ಲೂ ಅರ್ಥವಿತ್ತು. ಅವರು ಮುಂದಾಳತ್ವ ವಹಿಸಿದ್ದೂ ಸರಿಯಾಗಿಯೇ ಇತ್ತು. ಆ ಹೋರಾಟಕ್ಕೆ ಗೆಲುವೂ ಸಿಕ್ಕಿತು. ಆದರೆ ಅದನ್ನೇ ಉದಾಹರಣೆಯಾಗಿಟ್ಟುಕೊಂಡು ಇಂದಿನ ಸಿನಿಮಾ ನಟರನ್ನು ನದಿ ಉಳಿಸೋಕೆ, ಗಡಿವಿವಾದ ಬಗೆಹರಿಸೋಕೆ, ಇನ್ಯಾವುದೋ ಭಾಷೆ ವಿರುದ್ಧ ಹರಿಹಾಯೋಕೆ ಬನ್ನಿ ಅಂತ ಕರೆಯೋದು ನಾನ್ ಸೆನ್ಸ್.
ಇದನ್ನೂ ಓದಿ: Naveen Sagar Column: ಪ್ಲೀಸ್ ಗೆಟ್ ವೆಲ್ ಸೂನ್ ರೆಹಮಾನ್
ಸಿನಿಮಾದವರನ್ನು ನೆಟ್ಟಗೆ ಸಿನಿಮಾ ಮಾಡ್ಕೊಂಡ್ ಇರಿ ಅಂತಷ್ಟೇ ಹೇಳಿ ಬಿಡಬೇಕೇ ಹೊರತು ಅವರನ್ನು ಅದರಾಚೆಗೆ ಯಾವುದಕ್ಕೂ ಎಳೆಯಕೂಡದು. ಅವರಿಗೆ ಯೋಗ್ಯತೆ, ತಿಳಿವಳಿಕೆ, ಆಸಕ್ತಿ ಇದ್ದು ಬಂದರೆ ಬರಲಿ. ಅಷ್ಟೇಆದರೆ, ಸಿನಿಮಾರಂಗ ಸಮಸ್ಯೆ ಎದುರಿಸು ತ್ತಿರುವಾಗ ಸಿನಿಮಾರಂಗದವರು ಜವಾಬ್ದಾರಿ ಹೊತ್ತು ಬರಲೇಬೇಕು. ಎಲ್ಲಿದ್ದೀರಾ ಯಶ್ ಸ್ಲೋಗನ್ ಇಂದು ನೆನಪಾಗೋಕೆ ಕಾರಣ ಇದೆ.
ಇಂದು ನಾನು ಎಲ್ಲಿದ್ದೀರಾ ಯಶ್ ಎಂದು ಕೇಳುವುದಿಲ್ಲ. ಯಶ್ ಎಲ್ಲಿದ್ದಾರೆ ಅಂತ ಇಡೀ ಭಾರತಕ್ಕೆ ಗೊತ್ತಿದೆ. ಭಾರತೀಯ ಚಿತ್ರರಂಗವೇ ಯಶ್‌ರ ‘ಟಾಕ್ಸಿಕ್’ ಚಿತ್ರಕ್ಕಾಗಿ ಕಾಯುತ್ತಿದೆ. ಎಲ್ಲಿದ್ದೀರಾ ದರ್ಶನ್ ಅಂತಲೂ ನಾನು ಕೇಳುವುದಿಲ್ಲ. ಯಾಕಂದ್ರೆ ದರ್ಶನ್ ಎಲ್ಲಿದ್ದಾರೆ ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಅ ಇರಲಿ ಬಿಡಿ. ಆದರೆ ‘ಎಲ್ಲಿದ್ದೀರಾ ಸುದೀಪ್’ ಎಂದು ನಾನು ಗಟ್ಟಿಯಾಗಿ ಕೂಗಿ ಕೇಳುತ್ತೇನೆ.
ಸಿಸಿಎಲ್ ಗ್ರೌಂಡ್‌ಗೆ ರೀಚ್ ಆಗುವಷ್ಟು ಜೋರಾಗಿ ಕೂಗಿ ಕೇಳುತ್ತೇನೆ. ಯಾಕಂದ್ರೆ ಇದೇ ಸುದೀಪ್ ಕಳೆದ ತಿಂಗಳಲ್ಲಿ ಸಿನಿಮಾರಂಗದ ಉದ್ಧಾರಕರಂತೆ ಅಬ್ಬರಿಸಿದ್ದರು. ಇಂದು ಕ್ರಿಕೆಟ್ ಅಂಗಣದಲ್ಲಿ ಕುಣಿಯುತ್ತಾ ಬ್ಯುಸಿಯಾಗಿದ್ದಾರೆ.
ಎಲ್ಲಿದ್ದೀರಿ ಸುದೀಪ್?
‘ಮಾರ್ಕ್’ ಬಿಡುಗಡೆಯಾಗುವ ಸಮಯದಲ್ಲಿ ಕನ್ನಡ ಚಿತ್ರರಂಗವನ್ನು ತಲೆ ಮೇಲೆ ಹೊತ್ತ ವರಂತೆ ಮಾತನಾಡುತ್ತಿದ್ದವರು, ಎರಡು ವಾರಗಳಲ್ಲಿ ಸಿನಿಮಾ ಇಂಡಸ್ಟ್ರಿಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ, ತಾವು ವೃತ್ತಿಪರ ಕ್ರಿಕೆಟ್ ಆಟಗಾರರೇನೋ ಎಂಬಂತೆ ಮೈದಾನದಲ್ಲಿ ಆಡಿ ಹಾಡಿ ಕುಣಿಯುತ್ತಿದ್ದಾರೆ ಸುದೀಪ್. ಸುದೀಪ್‌ಗೆ ಮತ್ತೆ ತಾವು ಸಿನಿಮಾ ನಟ ಅಂತ ನೆನಪಾಗೋಕೆ ಬಹುಶಃ ಸಿಸಿಎಲ್ ಮುಗಿದು, ಬಿಗ್ ಬಾಸ್ ಮುಗಿದು ಇನ್ನೊಂದು ಡಿಸೆಂಬರ್ ಬರಬೇಕೇನೋ!
ಕಳೆದ ಡಿಸೆಂಬರ್ ಇಪ್ಪತ್ತೈದಕ್ಕೆ ‘ಮಾರ್ಕ್’ ಬಿಡುಗಡೆಯಾಯ್ತು. ಸುದೀಪ್ ವೃತ್ತಿ ಜೀವನದ ಹಲವು ಆವರೇಜ್ ಅಥವಾ ಬಿಲೋ ಆವರೇಜ್ ಸಿನಿಮಾಗಳಲ್ಲಿ ಮಾರ್ಕ್ ಕೂಡಾ ಒಂದು. ಅದರ ಜತೆಜತೆಗೆ ಬಿಡುಗಡೆಯಾದ ‘45’ ಸಿನಿಮಾ ಬಗ್ಗೆ ಮಾತನಾಡುವಂತೆಯೇ ಇಲ್ಲ.
ಅಷ್ಟು ಅದ್ಭುತ ಸಿನಿಮಾ. ಇವೆರಡಕ್ಕೂ ಹೋಲಿಸಿ ನೋಡಿದರೆ ದರ್ಶನ್ ಅಭಿನಯದ ‘ಡೆವಿಲ್’ ಎಷ್ಟೋ ಬೆಟರ್ ಅನ್ನೋದು ನೈಜ ಚಿತ್ರಪ್ರೇಮಿಗಳ ಅಭಿಪ್ರಾಯ. ವರ್ಷಾಂತ್ಯ ದಲ್ಲಿ ಈ ಮೂರು ಸಿನಿಮಾಗಳನ್ನು ನೋಡಿದ ಪ್ರೇಕ್ಷಕ ಎಷ್ಟು ಹತಾಶನಾಗಿದ್ದ ಅಂದರೆ ಕನ್ನಡ ಸಿನಿಮಾಗಳ ಸಹವಾಸವೇ ಬೇಡ ಎಂಬಂತಾಗಿದ್ದ.
ಇಂಥ ಚಿತ್ರಗಳಿಂದ ದುಷ್ಪರಿಣಾಮ ಆಗಿದ್ದು ಯಾರಿಗೆ? ಮಾರ್ಕ್, 45 ಬಿಡುಗಡೆಯಾದ ಮರುವಾರ ಬಿಡುಗಡೆಯಾದ ‘ತೀರ್ಥರೂಪ ತಂದೆಯವರಿಗೆ’ ಎಂಬ ಹೃದಯಸ್ಪರ್ಶಿ ಚಿತ್ರಕ್ಕೆ. ‘ಕನ್ನಡ ಸಿನಿಮಾನಾ? ಬೇಡ ಗುರೂ ಮೊನ್ನೆ ಮಾರ್ಕ್, 45, ಡೆವಿಲ್ ನೋಡಿ ಸುಧಾರಿಸಿಕೊಳ್ತಾ ಇದೀವಿ.
ಇನ್ನು ಸದ್ಯ ಥಿಯೇಟರ್ ಕಡೆ ತಲೆ ಹಾಕಲ್ಲ’ ಎಂದುಬಿಟ್ಟ ಪ್ರೇಕ್ಷಕ. ಸ್ಟಾರ್ ಸಿನಿಮಾಗಳಿಗೆ ಹೇಗಾದ್ರೂ ಇರಲಿ ಮೊದಲ ದಿನ ನೋಡಿಬಿಡೋಣ ಅಂತ ನುಗ್ಗುವ ಪ್ರೇಕ್ಷಕ ಸ್ಟಾರ್ ಗಳಿಲ್ಲದ ಒಳ್ಳೆಯ ಸಿನಿಮಾಗೆ ಕಾಲಿಗೆ ಬಿದ್ದು ಕರೆದರೂ ಬರೋದಿಲ್ಲ. ಸುತ್ತಲಿನ ಜನ ಚೆನ್ನಾಗಿದೆ ಅಂತ ಹೇಳಿದರೂ ಬರೋದಿಲ್ಲ.
ಸ್ಟಾರ್‌ಗಳ ಕೆಟ್ಟ ಚಿತ್ರಗಳಿಂದ ಒದೆ ತಿನ್ನೋದು ಹೊಸಬರ ಉತ್ತಮ ಚಿತ್ರಗಳು. ಕಡೇಪಕ್ಷ ಈ ನೈತಿಕ ಹೊಣೆಯನ್ನಾದರೂ ಸ್ಟಾರ್‌ಗಳು ಹೊರಬೇಕಲ್ವಾ? ಅದಕ್ಕೇ ನಾನು ‘ಎಲ್ಲಿದ್ದೀರಾ ಸುದೀಪ್?’ ಎಂದು ಪ್ರಶ್ನಿಸುತ್ತಿದ್ದೇನೆ.
ಸುದೀಪ್‌ಗೆ ಸಿನಿಮಾ ಪಾರ್ಟ್ ಟೈಂ ಎಂಬಂತಾಗಿದೆ. ವರ್ಷದ ನಾಲ್ಕು ತಿಂಗಳು ಬಿಗ್ ಬಾಸ್, ಇನ್ನು ನಾಲ್ಕು ತಿಂಗಳು ಕ್ರಿಕೆಟ್, ಮಿಕ್ಕಿರೋ ನಾಲ್ಕು ತಿಂಗಳಲ್ಲಿ ಟೈಂ ಸಿಕ್ಕರೆ ಸಿನಿಮಾ ಎಂಬಂತಿದ್ದಾರೆ. ಉಪೇಂದ್ರರಿಗೆ ‘ಪ್ರಜಾಕೀಯ’ದ ಮೂಲಕ ರಾಜಕೀಯದನೋ ಗಳಿಸುವ ಹಂಬಲ, ಅದಕ್ಕೆ ಸಿನಿಮಾ ಮೆಟ್ಟಿಲಷ್ಟೆ.
ಶಿವಣ್ಣನಂಥ ಅಪ್ಪಟ ಸಿನಿಮಾಜೀವಿಯನ್ನು ರಿಯಾಲಿಟಿ ಶೋಗಳಿಗೆ ಎಳಕೊಂಡು ಹೋಗಿ ಮುಗಿಸಲಾಗುತ್ತಿದೆ. ರವಿಚಂದ್ರನ್ ಏಕಾಂಗಿಯಾಗಿ ಪ್ರೇಮಲೋಕದೊಳಗೆ ಮುಳುಗಿ ಹೋಗಿದ್ದಾರೆ. ಒಂದಷ್ಟು ಕಿಡಿ ಇರುವ ಜಗ್ಗೇಶ್ ಮಾತಿಗೆ ಇಂಡಸ್ಟ್ರಿ ಬೆಲೆ ಕೊಡುವುದಿಲ್ಲ. ಎಲ್ಲರೂ ತಮ್ಮ ಸುತ್ತಲೇ ಸುತ್ತಿಕೊಳ್ಳುತ್ತಿದ್ದಾರೆ.
ತಾವು ಗೆದ್ದರೆ ಮಾತ್ರ ಇಂಡಸ್ಟ್ರಿ ಗೆದ್ದಂತೆ ಎಂದು ಭಾವಿಸುತ್ತಾರೆ. ಚಿತ್ರರಂಗದಲ್ಲಿ ಬರುತ್ತಿರುವ ಹೊಸ ಸಿನಿಮಾಗಳನ್ನು ಗೆಲ್ಲಿಸಿಕೊಳ್ಳುವ ಮನಸ್ಥಿತಿ ಇಲ್ಲ. ಹೊಸಬರನ್ನು ಬೆಳೆಸುವ ಗುಣಗಳೂ ಇಲ್ಲ. ತಮ್ಮದೇ ‘ಇಗೋ’ ಕೋಟೆಯೊಳಗೆ, ಅಭದ್ರತೆಯ ಭಾವ ಗಳೊಂದಿಗೆ ತೊಳಲಾಡುತ್ತಿದ್ದಾರೆ.
ಈ ಸ್ಟಾರ್ ನಟರು ತಾವಾಗಿ ಥಿಯೇಟರ್‌ಗೆ ಹೋಗಿ ನೋಡಿ ಎಂದಾದರೂ ಹೊಸಬರ ಒಳ್ಳೆಯ ಸಿನಿಮಾಗಳನ್ನು ಪ್ರೋತ್ಸಾಹಿಸಿದ ಉದಾಹರಣೆ ಇದೆಯಾ? ಸ್ಟಾರ್ ನಟರಿಗೆ ಸಿನಿಮಾ ತೋರಿಸಬೇಕು ಅಂದ್ರೆ ಬಹುಶಃ ಒಂದು ಚಿಕ್ಕ ಬಜೆಟ್ ಸಿನಿಮಾದಷ್ಟೇ ಖರ್ಚು ಮಾಡಬೇಕು. ಅವರು ಕೈಗೆ ಸಿಗೋದಿಲ್ಲ.
ಮಧ್ಯವರ್ತಿಗಳನ್ನು ದಾಟಿ ಹೋಗಲಾಗುವುದಿಲ್ಲ. ಅವರಿಗೆ ಶೋ ಅರೇಂಜ್ ಮಾಡಬೇಕು ಅಂದ್ರೆ ಅವರ ಸುತ್ತ ಬೌನ್ಸರ್‌ಗಳನ್ನು ಅರೇಂಜ್ ಮಾಡಬೇಕು. ಅದನ್ನು ಪ್ರಚಾರ ಮಾಡ ಬೇಕು. ಅವರ ಹಿಂಬಾಲಕರಿಗೂ ಎಲ್ಲ ಸೌಕರ್ಯ ಕೊಡಬೇಕು. ಇಷ್ಟೆಲ್ಲದರ ನಂತರವೂ ಆತ ಸಿನಿಮಾದ ಬಗ್ಗೆ ಮಾತನಾಡುವುದಿಲ್ಲ. ತಾನು ಬಂದಿರೋದೇ ಒಂದು ಸುದ್ದಿ. ತಾನು ನೋಡಿದೀನಿ ಅನ್ನೋದೇ ಸಿನಿಮಾದ ಕಲೆಕ್ಷನ್ ಹೆಚ್ಚಿಸುತ್ತೆ ಎಂಬಂತೆ ಆಡುತ್ತಾನೆ.
ಸಿನಿಮಾರಂಗದ ಹಿರಿಯ ಅಂದರೆ ಆತ ಇಂಡಸ್ಟ್ರೀಲಿ ಯಾವ್ ಒಳ್ಳೆ ಸಿನಿಮಾಗಳು ಬರ್ತಾ ಇವೆ. ಅವುಗಳನ್ನು ಗೆಲ್ಲಿಸಿಕೊಳ್ಳೋಕೆ ನಾನೇನು ಮಾಡಬೇಕು ಅಂತ ಸ್ವಯಂಪ್ರೇರಿತನಾಗಿ ಯೋಚಿಸಬೇಕು. ಅದರಿಂದಾಗಿ ಮುಂದೆ ಆತನ ಸಿನಿಮಾಗೂ ಬೆಲೆ ಬರುತ್ತದೆ.
ರಾಮೇನಹಳ್ಳಿ ಜಗನ್ನಾಥ ಈ ಹಿಂದೆ ‘ಹೊಂದಿಸಿ ಬರೆಯಿರಿ’ ಎಂಬ ಚಿತ್ರ ಮಾಡಿದ್ದವರು. ಬಹಳ ಸೆನ್ಸಿಬಲ್ ಮತ್ತು ಕಾವ್ಯಾತ್ಮಕ ನಿರೂಪಣೆಯಿಂದಾಗಿ ಅದು ಪ್ರೇಕ್ಷಕರ ಮನ ಗೆದ್ದಿತ್ತು. ಆದರೆ ಸ್ಟಾರ್ ಕ್ಯಾ ಇಲ್ಲದ ಕಾರಣ ಥಿಯೇಟರ್‌ಗೆ ಜನರನ್ನು ಸೆಳೆಯುವಲ್ಲಿ ಸೋತಿ ತ್ತು. ಅದೇ ಸಿನಿಮಾವನ್ನು ಓಟಿಟಿಯಲ್ಲಿ ಪ್ರೇಕ್ಷಕರು ಮತ್ತೆ ಮತ್ತೆ ನೋಡಿ ಖುಷಿಪಟ್ಟಿದ್ದರು.
ಇಂಥ ಚಿತ್ರವನ್ನು ನಾವ್ಯಾಕೆ ಥಿಯೇಟರ್‌ನಲ್ಲಿ ನೋಡಲಿಲ್ಲ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡಿದ್ದರು. ಚಿತ್ರಮಂದಿರದ ಕಲೆಕ್ಷನ್‌ಗಿಂತ ಹೆಚ್ಚು ಕಲೆಕ್ಷನ್ ಓಟಿಟಿಯಿಂದ ಬಂದಿತ್ತು. ಈಗ ಅದೇ ರಾಮೇನಹಳ್ಳಿ ಜಗನ್ನಾಥ್ ‘ತೀರ್ಥರೂಪ ತಂದೆಯವರಿಗೆ’ ಎಂಬ ಚಿತ್ರ ಮಾಡಿದ್ದಾರೆ.
ರಾಜೇಶ್ ನಟರಂಗ, ಹಿರಿಯ ನಟಿ ಸಿತಾರಾ, ರವೀಂದ್ರ ವಿಜಯ್ ಅದ್ಭುತ ಅಭಿನಯ ನೀಡಿzರೆ. ನಿಹಾರ್ ಮುಕೇಶ್ ಮತ್ತು ರಚನಾ ಇಂದರ್ ಜೋಡಿಯ ಅಭಿನಯವೂ ಹಿತಕರ. ಎಲ್ಲಕ್ಕಿಂತ ಹೆಚ್ಚಾಗಿ, ಇಂದಿನ ಪ್ರೇಕ್ಷಕ ನಿರೀಕ್ಷಿಸುವ ಸೋ ಕಾಲ್ಡ್ ‘ಕಂಟೆಂಟ್’ ಈ ಚಿತ್ರ ದಲ್ಲಿದೆ. ಚಿತ್ರ ನಗಿಸುತ್ತದೆ, ಅಳಿಸುತ್ತದೆ, ಆಲೋಚನೆಗೆ ಹಚ್ಚುತ್ತದೆ.
ಕುಟುಂಬ ಸಮೇತ ನೋಡುವಂತಿದೆ. ರಕ್ತಪಾತ, ಲಾಂಗುಮಚ್ಚು, ಗನ್ನು, ಅತಿಮಾನುಷ ಕ್ಯಾರೆಕ್ಟರ್‌ಗಳು ಇಂಥವುಗಳಿಂದ ಹೊರತಾಗಿದೆ. ಇಂಥ ಚಿತ್ರಕ್ಕೆ ಸಿನಿರಂಗದ ಬೆಂಬಲವೇ ಇಲ್ಲ. ನಿರ್ದೇಶಕ ಮತ್ತು ನಿರ್ಮಾಪಕರಿಗೆ ಇಂಡಸ್ಟ್ರಿಯ ಕಾಂಟ್ಯಾಕ್ಟ್ ಗಳಿಲ್ಲ. ಸ್ಟಾರ್ ನಟರ ಸಂಪರ್ಕ ಇಲ್ಲ. ಪ್ರಾಮಾಣಿಕ ಪ್ರಚಾರ ಮಾಡಿ ಸಾಧ್ಯವಾದಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತಂದಿದ್ದಾರೆ.
ಇದು ಬೇರೆ ಯಾವುದಾದರೂ ಭಾಷೆಯಲ್ಲಿ ಬಂದಿದ್ದರೆ ಸುದೀಪ್ ಅಥವಾ ಇತರ ನಟರಿಗೆ ರೀಮೇಕ್ ಮಾಡಬಲ್ಲ ಸರಕಾಗಿ ಕಂಡಿರುತ್ತೇನೋ. ಹಿತ್ತಲ ಗಿಡವಾಗಿದ್ದಕ್ಕೆ ಈ ಮದ್ದು ಕಾಣುತ್ತಿಲ್ಲ. ನಾನು ಸ್ಟಾರ್‌ಗಳನ್ನು ಕೇಳುತ್ತೇನೆ..... ನಿಮ್ಮ ಸಿನಿಮಾ ಸೋತಾಗಿದೆ. ಅಥವಾ ನಿಮ್ಮ ಖುಷಿಗಾಗಿ ಹೇಳುತ್ತೇನೆ.
ನಿಮ್ಮ ಸಿನಿಮಾ ಗೆದ್ದಿದೆ. ಅಷ್ಟೇ ಸಾಕಾ? ಈ ವರ್ಷ ಇನ್ನು ನಿಮ್ಮ ಸಿನಿಮಾ ಬರೋ ತನಕ ನಿಮಗೂ ಇಂಡಸ್ಟ್ರಿಗೂ ಸಂಬಂಧವೇ ಇಲ್ವಾ? ನಿಮ್ಮ ಸಿನಿಮಾಗಳು ಮಾತ್ರ ಇಂಡಸ್ಟ್ರಿಯ ಅಸ್ಮಿತೆಯಾ? ನಿಮ್ಮ ಸಿನಿಮಾ ಗೆದ್ದರೆ ಮಾತ್ರ ಕನ್ನಡ ಚಿತ್ರರಂಗ, ಭಾಷೆ, ನೆಲ ಜಲ ಉಳಿಸಿ ಬೆಳೆಸಿದಂತೆಯಾ? ಕೆಟ್ಟ ಸಿನಿಮಾ ಮಾಡಿದವರನ್ನು ಕರೆದು ಬಯ್ದು ತಿದ್ದುವ, ಒಳ್ಳೇ ಸಿನಿಮಾ ಮಾಡಿದಾಗ ನೀವಾಗಿ ಅವರ ಪ್ರಾಡಕ್ಟ್ ಮತ್ತು ಕೆಲಸ ನೋಡಿ ಕರೆದು ಬೆನ್ತಟ್ಟುವ ಕೆಲಸ ಮಾಡಿದರೆ ಹೊಸಬರು ಬೆಳೆಯುತ್ತಾರೆ.
ಆ ಹೊಸಬರ ನಿಮಗೊಬ್ಬ ಕಥೆಗಾರ, ನಿರ್ದೇಶಕ ಸಿಗಬಹುದು. ಪರಭಾಷಾ ತಂತ್ರಜ್ಞರನ್ನು ಕರೆದು ಸಿನಿಮಾ ಮಾಡುವ ದರ್ದು ಬರುವುದಿಲ್ಲ. ಪರಭಾಷೆಗಳಲ್ಲಿ ತಮ್ಮದೇ ಚಿತ್ರರಂಗದ ಹೊಸಬರನ್ನು ಗುರುತಿಸುವ ಕೆಲಸವಾಗಿದೆ.
ಹೊಸಬರ ಚಿತ್ರಗಳನ್ನು ಸ್ಟಾರ್‌ಗಳು ಯಾವ ಅಜೆಂಡಾ, ಗ್ರೂಪಿಸಂ ಇಲ್ಲದೆ ಮೆಚ್ಚಿ ಪ್ರೋತ್ಸಾಹಿಸುವ ಕಾರ್ಯ ನಡೆದಿದೆ. ರಜನಿಕಾಂತ್ ಥರದ ನಟರು ಪಾ ರಂಜಿತ್ ಥರದ ಹುಡುಗರ ಮೇಲೆ ವಿಶ್ವಾಸವಿಟ್ಟು ಕೋಟಿಗಟ್ಟಲೆ ಬಜೆಟ್ಟಿನ ಸಿನಿಮಾ ಮಾಡಿದ್ದಾರೆ. ಕನ್ನಡದ ಕಥೆಗಾರರು, ನಿರ್ದೇಶಕರು ಮಾತ್ರ ಕೈಲಿ ಕಥೆ ಇಟ್ಕೊಂಡು ಸ್ಟಾರ್‌ಗಳನ್ನು ತಲುಪಲಾಗದೇ, ಹೊಸಬರನ್ನು ಹಾಕಿಕೊಂಡು ಚೆನ್ನಾಗಿಯೇ ಸಿನಿಮಾ ಮಾಡಿದರೂ ಗೆಲ್ಲಲಾಗದೇ ಒಂದು ಎರಡು ಚಿತ್ರಗಳಿಗೆ ಸುಸ್ತಾಗಿ ಸಿನಿಮಾ ಸಹವಾಸವೇ ಬೇಡ ಎಂದು ನಿರ್ಧರಿಸುತ್ತಿದ್ದಾರೆ.
ಸ್ಟಾರ್ ನಟರು ಕೆಟ್ಟ ಸಿನಿಮಾಗಳನ್ನು ಮಾಡಿ ಫೇಕ್ ಓಪನಿಂಗ್ ತೋರಿಸಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡು ಇನ್ನೊಂದು ಸಿನಿಮಾ ಬುಕ್ ಮಾಡಿಕೊಂಡು, ವರ್ಷವಿಡೀ ಅದರ ಲಕ್ಸುರಿಯ ಕಾಲ ಕಳೆಯುತ್ತಾರೆ. ಸ್ಟಾರ್ ನಟನನ್ನು ಹಾಕಿಕೊಂಡು ಕೋಟಿಗಟ್ಟಲೆ ಸುರಿದ ನಿರ್ಮಾಪಕ ದಿಕ್ಕುತೋಚದೇ ಬೀದಿಗೆ ಬರುತ್ತಾನೆ.
ಬುದ್ಧಿ ಕಲಿಯುವುದಿಲ್ಲ. ಮತ್ತೆ ಕೆಟ್ಟ ಚಿತ್ರಗಳ ಮೇಲೆ ಸ್ಟಾರ್‌ಗಳ ಮೇಲೆ ಹಣ ಸುರಿಯ ತ್ತಾನೆ. ಹೊಸಬರು ಒಂದೊಳ್ಳೆ ಸಿನಿಮಾ ಮಾಡಿಕೊಡುತ್ತೇನೆ ಎಂದು ಕಾಲಿಗೆ ಬಿದ್ದರೂ ಅವರಿಗೆ ನಿರ್ಮಾಪಕರು ಸಿಗುವುದಿಲ್ಲ. ಸ್ಟಾರ್ ನಟರಿಗೂ ಕಂಟೆಂಟ್ ಬೇಕಾಗಿಲ್ಲ.
ಫ್ಯಾನ್ ಸಂಖ್ಯೆ ಹೆಚ್ಚಿಸೋ ಬಿಲ್ಡಪ್ ಸಿನಿಮಾಗಳೇ ಬೇಕಾಗಿವೆ. ಅಂಥ ನಿರ್ದೇಶಕರಿಗಷ್ಟೇ ಮಣೆ ಹಾಕುತ್ತಾರೆ. ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ಬಗ್ಗೆ ಒಬ್ಬೇ ಒಬ್ಬ ಸ್ಟಾರ್ ನಟ ಸ್ವಯಂಪ್ರೇರಿತವಾಗಿ ಮೆಚ್ಚಿ ಮಾತನಾಡಿದ್ದಿದ್ದರೆ ಇಷ್ಟೆಲ್ಲ ಬರೆಯಬೇಕಾಗಿರಲಿಲ್ಲ.
ಕನ್ನಡ ಸಿನಿರಂಗದ ಕಲಾವಿದರು ಎಷ್ಟರ ಮಟ್ಟಿಗೆ ಕನ್ನಡ ಸಿನಿಮಾಗಳನ್ನು ನೋಡು ತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಅಪರೂಪಕ್ಕೊಂದು ಹೊಸಬರ ಒಳ್ಳೆಯ ಚಿತ್ರ ಯಾವುದೋ ಮ್ಯಾಜಿಕ್‌ನಿಂದಾಗಿ, ಗಿಮಿಕ್ʼನಿಂದಾಗಿ ಓಪನಿಂಗ್ ಪಡೆಯಬಹುದು. ಆದರೆ ಎಲ್ಲ ಚಿತ್ರಗಳಿಗೂ ಅದು ಸಾಧ್ಯವಿಲ್ಲ.
ಅದಕ್ಕೆ ಇಂಡಸ್ಟ್ರಿಯ ದೊಡ್ಡತಲೆಗಳ ಬೆಂಬಲ ಬೇಕಾಗುತ್ತದೆ. ಚಿತ್ರಕ್ಕೆ ಪ್ರಚಾರ ಕೊಡಿಸು ವಲ್ಲಿ, ಚಿತ್ರಮಂದಿರಗಳನ್ನು ಶೋಗಳನ್ನು ಕೊಡಿಸುವಲ್ಲಿ ಇಂಡಸ್ಟ್ರಿಯ ಬೆಂಬಲ ಬೇಕಾ ಗುತ್ತದೆ. ಅದರಲ್ಲೂ ಮಲ್ಟಿಪ್ಲೆಕ್ಸ್ ಜಮಾನದಲ್ಲಿ ಸಿನಿಮಾ ಉಳಿಸಿಕೊಳ್ಳುವುದು ಸುಲಭ ವಿಲ್ಲ.
ಸ್ಟಾರ್‌ಗಳು, ವಾಣಿಜ್ಯಮಂಡಳಿ ಎಲ್ಲರೂ ಹೊಸಬರ ಚಿತ್ರಗಳನ್ನು ಬೆಂಬಲಿಸಿ ಜತೆಗೆ ನಿಲ್ಲದೇ ಹೋದರೆ ಚಿತ್ರರಂಗ ಸಂಪೂರ್ಣ ನಾಶವಾಗುತ್ತದೆ. ಕೆಜಿಎಫ್, ಕಾಂತಾರ ಸಾವಿರ ಕೋಟಿ ಗಳಿಸಿ ಮಿಕ್ಕಿರೋ ಇನ್ನೂರೈವತ್ತು ಚಿತ್ರಗಳಿಂದ ಚಿತ್ರರಂಗಕ್ಕೆ ಒಂದೂವರೆ ಸಾವಿರ ಕೋಟಿ ನಷ್ಟವಾದರೆ, ಅದನ್ನು ಹೆಲ್ದೀ ಇಂಡಸ್ಟ್ರಿ ಅನ್ನುವುದಿಲ್ಲ.
ಹಿರಿಯ ನಟರು ಇಲ್ಲಿ ಮೆಂಟರ್ ಆಗಬೇಕಿದೆ. ನಿರ್ಮಾಪಕರಿಗೆ, ನಿರ್ದೇಶಕರಿಗೆ ಮಾರ್ಗ ದರ್ಶಿಯಾಗಿ ನಿಲ್ಲಬೇಕಿದೆ. ಸ್ಟಾರ್‌ಗಿರಿಯ ಭ್ರಮೆಯಿಂದ ಹೊರ ಬಂದು ಎಲ್ಲರೊಳಗೊಬ್ಬ ರಾಗಿ ಸಿನಿಮಾರಂಗದಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕಿದೆ. ಮೊದಲು ನಮ್ಮ ತಾರೆಗಳು ‘ತೀರ್ಥರೂಪ ತಂದೆಯರಿಗೆ’ ಚಿತ್ರ ನೋಡಲಿ.
‘ಇಗೋ’ ಸೈಡಿಗಿಟ್ಟು ಈ ಬರಹವನ್ನು ಆತ್ಮಾವಲೋಕನದಂತೆ ಓದಿಕೊಂಡಲ್ಲಿ ಕೋಪ ಬರಲಿಕ್ಕಿಲ್ಲ. ಇಲ್ಲವಾದಲ್ಲಿ.. Fine..That's ok.