ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ ಸುನಿತಾ ವಿಲಿಯಮ್ಸ್​

Roopa Gururaj Column: ಒಳ್ಳೆತನ ಅತಿಯಾದರೆ ನಮ್ಮ ಪ್ರಾಣಕ್ಕೇ ಕಂಟಕ

ನಮ್ಮ ಸ್ನೇಹ ವಲಯದಲ್ಲಿ ಇರುವ ಕೆಲವರು ಮತ್ತೆ ಮತ್ತೆ ನಮಗೆ ನೋವುಂಟು ಮಾಡಿ ಕ್ಷಮೆ ಕೇಳಿದಾಗ ನಾವು ಕೂಡ ಜಾಗೃತರಾಗಬೇಕು. ಒಂದು ಬಾರಿ ತಪ್ಪಿಗೆ ಕ್ಷಮೆ ಇದೆ ಮತ್ತೆ ಮತ್ತೆ ತಿಳಿದು ತಿಳಿದು ಮಾಡಿದ ತಪ್ಪಿಗೆ ಕ್ಷಮೆ ಇಲ್ಲ. ಅತಿಯಾಗಿ ಕ್ಷಮಿಸಿದರೆ ನಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತೇವೆ.

ಒಳ್ಳೆತನ ಅತಿಯಾದರೆ ನಮ್ಮ ಪ್ರಾಣಕ್ಕೇ ಕಂಟಕ

ಒಂದೊಳ್ಳೆ ಮಾತು

rgururaj628@gmail.com

ಒಂದು ಚೇಳು ಪ್ರವಾಹದಿಂದ ಹರಿಯುತ್ತಿದ್ದ ನದಿಯ ದಡದಲ್ಲಿ ಕುಳಿತು ದಡದಾಚೆ ಹೋಗಲು ಕಾಯುತ್ತಿತ್ತು. ನದಿಯ ದಂಡೆಯ ಮೇಲೆ ಕುಳಿತ ಆಮೆಯನ್ನು ನಾನು ಆಚೆ ದಡಕ್ಕೆ ಹೋಗಬೇಕಾ ಗಿದೆ, ನಿನ್ನ ಬೆನ್ನ ಮೇಲೆ ಕುಳಿತುಕೊಳ್ಳುತ್ತೇನೆ ನನ್ನನ್ನು ಸ್ವಲ್ಪ ಆಚೆಯ ದಡಕ್ಕೆ ತಲುಪಿಸುವೆಯಾ? ಎಂದು ಅಂಗಲಾಚಿತು. ದಡವನ್ನೇನೊ ತಲುಪಿಸ ಬಹುದು, ಆದರೆ ನನ್ನನ್ನು ನಾನು ಹೇಗೆ ನಂಬಲಿ? ನೀನು ನನ್ನ ಬೆನ್ನ ಮೇಲೆ ಕುಳಿತು ನಾನು ನದಿ ಮಧ್ಯಕ್ಕೆ ಬಂದಾಗ ನೀನು ನನ್ನನ್ನು ಕುಟುಕಿ ಬಿಟ್ಟರೆ? ನಾನಲ್ಲೇ ಸಾಯಬೇಕಾಗಬಹುದು. ನಿನ್ನನ್ನು ನಂಬುವುದು ಕಷ್ಟ. ಕುಟುಕುವುದೇ ನಿನ್ನ ಮೂಲ ಗುಣವಲ್ಲವೇ? ಎಂದು ಆಮೆ ಹೇಳಿತು.

ಆಗ ಚೇಳು, ಅಲ್ಲಪ್ಪಾ! ನದಿಯ ಮಧ್ಯದಲ್ಲಿದ್ದಾಗ, ನಾನು ನಿನ್ನನ್ನು ಕುಟುಕಿದರೆ ನಿನ್ನ ಜೊತೆಗೆ ಈಜು ಬಾರದ ನಾನು ಕೂಡ ನದಿಯಲ್ಲಿ ಬಿದ್ದು ಸಾಯುತ್ತೇನೆಲ್ಲವೇ, ನಾನೇಕೆ ಹಾಗೆ ಮಾಡಲಿ? ದಯಮಾಡಿ ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದಿತು.

ಆಗ ಈ ಆಮೆಯ ಜೊತೆಗಾರರು ಚೇಳಿನ ಮಾತನ್ನು ಕೇಳಿಸಿಕೊಂಡು ಇದರ ಸಹವಾಸ ಬಹಳ ಕಷ್ಟ. ಇದರ ಮಾತು ನಂಬಿಕೊಂಡು ಈ ಕೆಲಸಕ್ಕೆ ಮಾತ್ರ ಕೈ ಹಾಕಬೇಡ, ಕುಟುಕುವುದು ಅದರ ಹುಟ್ಟು ಗುಣ ಎಂದು ಬುದ್ಧಿ ಹೇಳಿದವು. ಅವುಗಳು ಎಷ್ಟೇ ಬುದ್ಧಿ ಹೇಳಿದರೂ ಈ ಆಮೆ ಅವುಗಳ ಮಾತನ್ನು ಕೇಳದೇ ಚೇಳಿನ ಮಾತನ್ನು ನಂಬಿತು.

ಇದನ್ನೂ ಓದಿ:Roopa Moudgil: ಸೇವಾ ಬಡ್ತಿ; ಐಪಿಎಸ್‌ ಅಧಿಕಾರಿ ಡಿ.ರೂಪಾ ಮನವಿ ಪರಿಗಣಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ನನ್ನನ್ನು ಅದು ಹೇಗೆ ಕುಟುಕೀತು? ನಾನು ಅದಕ್ಕೆ ಸಹಾಯ ಮಾಡುತ್ತಿಲ್ಲವೇ, ಎಂದು ಮರು ಪ್ರಶ್ನೆ ಹಾಕಿತು. ನಾವೆಲ್ಲಾ ಹೇಳುವಷ್ಟು ಹೇಳಿದ್ದೇವೆ, ಇಷ್ಟರ ಮೇಲೆ ನಿನ್ನಿಷ್ಟ, ಎಂದು ಅವು ಬೇಸರ ಗೊಂಡು ಸುಮ್ಮನಾಗಿ ಅಲ್ಲಿಂದ ಹೊರಟು ಹೋದವು. ಆಗ ಈ ಆಮೆ, ನಾನಿಲ್ಲೇ ಅದನ್ನು ಬಿಟ್ಟು ಹೋದರೆ, ಪಾಪ ಅದು ಈ ಪ್ರವಾಹದಲ್ಲಿ ಬಿದ್ದು ಸತ್ತೇ ಹೋಗುತ್ತದೆ ಎಂದುಕೊಂಡು, ನನ್ನ ಸ್ನೇಹಿತರು ಬೇಡವೆಂದರೂ ಕೂಡ ಕೇಳದೆ ಆಚೆ ದಡಕ್ಕೆ ಅದನ್ನು ದಾಟಿಸಲು ನಿರ್ಧರಿಸಿತು.

ಆಮೆಯ ಬೆನ್ನೇರಿ ಕುಳಿತ ಚೇಳು ನೀರಿನ ಪ್ರವಾಹ ನೋಡಿ ಬಹಳವಾಗಿ ಹೆದರಿಕೊಂಡಿತು. ಸ್ವಲ್ಪ ದೂರ ಹೋಗುವಾಗಲೇ ಭಯದಿಂದ ಆಮೆಯನ್ನು ಕುಟುಕಿ ಬಿಟ್ಟಿತು. ವಿಷವೇರಿ ಆಮೆ, ನದಿಯಲ್ಲಿ ಸಾವು ಬದುಕಿನ ಕ್ಷಣಗಳನ್ನು ಎಣಿಸುತ್ತಾ ಕೇಳಿತು ಈ ಮೊದಲು ನೀನು ನನ್ನನ್ನು ಕುಟುಕುವುದಿಲ್ಲ ಎಂದು ಹೇಳಿದ್ದೆ ತಾನೆ? ನಿನ್ನ ಮಾತನ್ನು ನಂಬಿ ನನ್ನ ಗೆಳೆಯರ ವಿರೋಧ ಕಟ್ಟಿಕೊಂಡು ನಿನಗೆ ಸಹಾಯ ಮಾಡಲು ಬಂದೆ. ಆದರೆ ನೀನು ಮಾಡಿ ದ್ದೇನು? ನಿನ್ನ ಬುದ್ಧಿಯನ್ನು ನೀನು ತೋರಿಸಿಯೇ ಬಿಟ್ಟೆಯಲ್ಲ.

ನಿನ್ನ ಮಾತನ್ನು ನಂಬಿದ್ದಕ್ಕೆ ಈಗ ನನಗೆ ತಕ್ಕ ಶಾಸ್ತಿಯಾಯಿತು. ಈಗ ನಾನೂ ಸಾಯುತ್ತಿರುವೆ ನೀನು ಹೀಗೆ ಮಾಡಿದ್ದು, ನಿನಗೆ ನ್ಯಾಯ ಎನಿಸುತ್ತಿದೆಯೇ? ಎಂದಿತು. ಆಗ ಚೇಳು ಹೌದು ನಾನು ನಿನಗೆ ಮಾತು ಕೊಟ್ಟಿದ್ದೆ, ಯಾವುದೇ ಕಾರಣಕ್ಕೂ ಕುಟುಕಬಾರದು ಎಂದು ಮನಸ್ಸಿನಲ್ಲಿ ಅಂದು ಕೊಂಡಿದ್ದೆ, ಆದರೆ ಏನು ಮಾಡಲಿ? ಕೆಲವು ಸಂದರ್ಭದಲ್ಲಿ ನನ್ನ ಸ್ವಭಾವವೇ ಹಾಗೆ ಬದಲಾಗಿ ಬಿಡುತ್ತದೆ. ಏನು ಮಾಡಲಿ ಗೆಳೆಯ ಅದು ನನ್ನ ದೌರ್ಬಲ್ಯ. ಹುಟ್ಟುಗುಣ ಸುಟ್ಟರೂ ಹೋಗುವು ದಿಲ್ಲ. ನನ್ನನ್ನು ಕ್ಷಮಿಸಿ ಬಿಡು ಎಂದಿತು.

ನಿನ್ನ ಬದಲಾಗದ ಸ್ವಭಾವದಿಂದ ಈಗ ನಾವಿಬ್ಬರೂ ಸಾಯುತ್ತಿದ್ದೇವೆ. ಕೊನೆಗೂ ನನ್ನ ಜೊತೆಗಾ ರರು ಹೇಳಿದ ಮಾತು ಸತ್ಯವಾಯಿತು ಎಂದು ಆಮೆ ಅಸುನೀಗಿತು. ನಮ್ಮ ಸ್ನೇಹ ವಲಯದಲ್ಲಿ ಇರುವ ಕೆಲವರು ಮತ್ತೆ ಮತ್ತೆ ನಮಗೆ ನೋವುಂಟು ಮಾಡಿ ಕ್ಷಮೆ ಕೇಳಿದಾಗ ನಾವು ಕೂಡ ಜಾಗೃತರಾಗಬೇಕು. ಒಂದು ಬಾರಿ ತಪ್ಪಿಗೆ ಕ್ಷಮೆ ಇದೆ ಮತ್ತೆ ಮತ್ತೆ ತಿಳಿದು ತಿಳಿದು ಮಾಡಿದ ತಪ್ಪಿಗೆ ಕ್ಷಮೆ ಇಲ್ಲ. ಅತಿಯಾಗಿ ಕ್ಷಮಿಸಿದರೆ ನಮ್ಮ ಬದುಕನ್ನೇ ಹಾಳು ಮಾಡಿಕೊಳ್ಳುತ್ತೇವೆ.