ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ಆ ನಿರಾಶ್ರಿತೆಯ ಕಣ್ಣೀರ ಕತೆ ಹಲವರಿಗೆ ಆಶ್ರಯ ದಕ್ಕಿಸಿ ಕೊಟ್ಟಿತು

ಆಶ್ರಯ ಯೋಜನೆ ಜಾರಿಗೆ ತರಲು ನಿಮಗಿದ್ದ ಪ್ರೇರಣೆ ಏನು ಅನ್ನುವುದು ಗೊತ್ತಾಯಿತು. ಆದರೆ ಅದರ ವಿವರ ಗೊತ್ತಾಗಲಿಲ್ಲ ಎಂದೆ. ಅಂದ ಹಾಗೆ ಅವತ್ತು ನನ್ನ ಕುತೂಹಲದ ಪ್ರಶ್ನೆಗೆ ನೀರಿನ ಕಾರಂಜಿಯಂತೆ ಉತ್ತರ ಹೊರ ಹೊಮ್ಮಿಸಿದವರು ಬಂಗಾರಪ್ಪ. ‌ತೊಂಭತ್ತರಿಂದ ತೊಂಭತ್ತೆರಡರ ತನಕ ಕರ್ನಾಟಕದ ಮುಖ್ಯ ಮಂತ್ರಿಯಾಗುವ ಅವಕಾಶ ಅವರಿಗೆ ದಕ್ಕಿತ್ತು.

ಆ ನಿರಾಶ್ರಿತೆಯ ಕಣ್ಣೀರ ಕತೆ ಹಲವರಿಗೆ ಆಶ್ರಯ ದಕ್ಕಿಸಿ ಕೊಟ್ಟಿತು

-

ಸ್ಮರಣೆ

ಅ.26 ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ನವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಬಂಗಾರಪ್ಪನವರ ಕುರಿತು ವಿಶೇಷ ಲೇಖನ.

ವಿಠ್ಠಲಮೂರ್ತಿ, ಮಲೆನಾಡಿನ ಮಳೆಯಲ್ಲಿ ನೀವೂ ನೆನೆದಿರುತ್ತೀರಿ. ಆದರೆ ಎಷ್ಟು ಹೊತ್ತು ನೆನೆದಿದ್ದೀರಿ? ಅಂತ ಅವರು ಕೇಳಿದರು. ಅಬ್ಬಬ್ಬಾ ಎಂದರೂ ಎರಡು ಅಥವಾ ಮೂರು ಗಂಟೆ ನೆನೆದು ಸುಸ್ತಾಗಿ ಬಕಾಬರಲೆ ಮಲಗಿದ ದಿನಗಳಿವೆ ಸಾರ್ ಎಂದೆ. ಅದಕ್ಕವರು ಸೀರಿಯಸ್ಸಾಗಿ, ಇದೇ ರೀತಿ ಇಪ್ಪತ್ನಾಲ್ಕು ಗಂಟೆ ಮಳೆಯಲ್ಲಿ ನೆನೆದು, ಆ ಮಳೆಯ ಮಲಗಿದವರನ್ನು ನೋಡಿದ ನೆನಪೇ ನಾದರೂ ಇದೆಯಾ? ಎಂದರು.

ನೋ ಚಾ ಸಾರ್. ನಾನು ಹಾಗೇನಾದರೂ ಮಲೆನಾಡಿನ ಬಿರುಮಳೆಗಾಗಲೀ, ಜಿಟಿ ಜಿಟಿ ಮಳೆಗಾಗಲೀ ಇಪ್ಪತ್ನಾಲ್ಕು ಗಂಟೆ ನೆನೆದಿದ್ದರೆ ನೆಗೆದು ಬಿದ್ದೇ ಹೋಗುತ್ತಿದ್ದೆ ಎಂದೆ. ಅರೆಕ್ಷಣ ಅವರು ಮೌನವಾ ದರು. ಆನಂತರ ಉದ್ವೇಗದಿಂದೆಂಬಂತೆ ಹೇಳತೊಡಗಿದರು.

ಆದರೆ ಅವತ್ತು, ಈ ರೀತಿ ಇಪ್ಪತ್ನಾಲ್ಕು ಗಂಟೆಗೂ ಹೆಚ್ಚು ಕಾಲ ಮಳೆಗೆ ನೆನೆದು, ಅದೇ ಮಳೆಯಲ್ಲಿ ಮರದ ಕೆಳಗೆ ಮಲಗಿದ ಆ ಹಣ್ಣು ಹಣ್ಣು ಮುದುಕಿಯನ್ನು ನೋಡಿ ನಾನು ಅತ್ತುಬಿಟ್ಟಿದ್ದೆ ವಿಠ್ಠಲ ಮೂರ್ತಿ. ಮುಂದೆ ನಾನು ಮುಖ್ಯಮಂತ್ರಿಯಾದಾಗ ಆಶ್ರಯ ಯೋಜನೆ ಜಾರಿಗೆ ತರಲು ಅದು ಕಾರಣವಾಯಿತು ಎಂದು ಹೇಳಿ ಮತ್ತವರು ಮೌನ ತಾಳಿದರು.

ಅಷ್ಟರಲ್ಲಾಗಲೇ ಕಾರು ವಿಂಡ್ಸರ್ ಮ್ಯಾನರ್ ಹೋಟೆಲ್‌ನ ಅಂಡರ್ ಬ್ರಿಡ್ಜ್ ಕೆಳಗಿತ್ತು. ನಾನು ಕೇಳಿದ ಪ್ರಶ್ನೆಗೆ ಸ್ಥೂಲವಾಗಿ ಉತ್ತರವೇನೋ ಸಿಕ್ಕಿತ್ತು. ಆದರೆ ಅದರ ವಿವರ ಸಿಕ್ಕಿರಲಿಲ್ಲ. ಹಾಗಂತಲೇ, ಸಾರ್, ಈ ಘಟನೆಯನ್ನು ವಿವರವಾಗಿ ಹೇಳಿ ಸಾರ್. ಆಶ್ರಯ ಯೋಜನೆ ಜಾರಿಗೆ ತರಲು ನಿಮಗಿದ್ದ ಪ್ರೇರಣೆ ಏನು ಅನ್ನುವುದು ಗೊತ್ತಾಯಿತು. ಆದರೆ ಅದರ ವಿವರ ಗೊತ್ತಾಗಲಿಲ್ಲ ಎಂದೆ. ಅಂದ ಹಾಗೆ ಅವತ್ತು ನನ್ನ ಕುತೂಹಲದ ಪ್ರಶ್ನೆಗೆ ನೀರಿನ ಕಾರಂಜಿಯಂತೆ ಉತ್ತರ ಹೊರ ಹೊಮ್ಮಿಸಿದವರು ಬಂಗಾರಪ್ಪ. ‌ತೊಂಭತ್ತರಿಂದ ತೊಂಭತ್ತೆರಡರ ತನಕ ಕರ್ನಾಟಕದ ಮುಖ್ಯ ಮಂತ್ರಿಯಾಗುವ ಅವಕಾಶ ಅವರಿಗೆ ದಕ್ಕಿತ್ತು.

ಈ ಕಾಲದ ಅವರು ಬಡವರಿಗೆ ಸೂರು ಒದಗಿಸುವ ಮಹತ್ವದ ಆಶ್ರಯ ಯೋಜನೆಯನ್ನು ಜಾರಿಗೆ ತಂದರು. ಇದು ಕೂಡಾ ದೇವರಾಜ ಅರಸರು ಜಾರಿಗೆ ತಂದ ಉಳುವವನೇ ಭೂ ಒಡೆಯ ಎಂಬಷ್ಟೇ ಕ್ರಾಂತಿಕಾರಿ ನಿರ್ಣಯವಾಗಿತ್ತು. ಯಥಾ ಪ್ರಕಾರ ಈ ಯೋಜನೆಯ ದುರ್ಲಾಭ ಪಡೆದವರು ಇರಬಹುದು. ಅದು ಬೇರೆ ವಿಷಯ. ಆದರೆ ಅಷ್ಟು ವರ್ಷಗಳಾದರೂ ಇಂತಹದೊಂದು ಮಹತ್ವದ ಯೋಜನೆಯನ್ನು ಜಾರಿಗೆ ತರಲು ಅವರಿಗಿದ್ದ ಪ್ರೇರಣೆ ಏನು? ಅನ್ನುವುದು ಎಲ್ಲೂ ಬಹಿರಂಗ ವಾಗಿರಲಿಲ್ಲ. ಹೀಗಾಗಿಯೇ ಈ ವಿಷಯ ತಿಳಿದುಕೊಳ್ಳಲು ನಾನು ಅವತ್ತು ಸದಾಶಿವನಗರದಲ್ಲಿದ್ದ ಅವರ ಮನೆಗೆ ಹೋಗಿದ್ದೆ.

ಆಗಷ್ಟೇ ಅವರು ತಮ್ಮ ಬಾಡಿಗೆ ಮನೆಯನ್ನು ಬಿಟ್ಟು ಸ್ವಂತ ಮನೆಗೆ ಹೋಗಿದ್ದರು. ಹೀಗೆ ಅವರನ್ನು ನೋಡಲು ಅಂತ ಹೊರಟಾಗ ಅದಾಗಲೇ ಹೊರಗೆ ಹೊರಡುವ ತಯಾರಿಯಲ್ಲಿದ್ದ ಬಂಗಾರಪ್ಪ, ಮೊಮ್ಮಗನ ಮುತ್ತು ಸ್ವೀಕರಿಸಿ ಕಾರು ಏರುತ್ತಿದ್ದರು. ಅದೇ ಹೊತ್ತಿಗೆ ಸರಿಯಾಗಿ ನಾನವರ ಮನೆಗೆ ಎಂಟ್ರಿಯಾಗಿದ್ದೆ. ಅವರು ತಮ್ಮ ಪತ್ನಿ ಶ್ರೀಮತಿ ಶಕುಂತಲಾ ಅವರ ತೋಳ್ತೆಕ್ಕೆಯಲ್ಲಿದ್ದ ಮಗುವಿ ನಿಂದ ಮುತ್ತು ಸ್ವೀಕರಿಸಿದ್ದು ಈಗಲೂ ಕಣ್ಣ ಮುಂದೆ ನಡೆದಂತಿದೆ. ಹೀಗೆ ಮುತ್ತು ಪಡೆದ ಬಂಗಾರಪ್ಪ ಕಾರು ಹತ್ತುತ್ತಿದ್ದಂತೆಯೇ ನನ್ನನ್ನು ಗಮನಿಸಿ, ಅರೇ ಿಠ್ಠಲಮೂರ್ತಿ. ಕಾರು ಹತ್ತಿ ಎಂದರು.

ನಾನು ಹಿಂದೆ ಮುಂದೆ ನೋಡದೆ ಕಾರು ಹತ್ತಿದೆ. ಸರಿ, ಕಾರು ಹೊರಟ ತಕ್ಷಣ ಕೇಳಿದೆ. ಸಾರ್. ನೀವು ಸಿಎಂ ಆಗಿದ್ದಾಗ ಬಡವರಿಗೆ ಸೂರು ಒದಗಿಸುವ ಆಶ್ರಯದಂತಹ ಮಹತ್ವದ ಯೋಜನೆಯನ್ನು ಜಾರಿಗೆ ತಂದಿರಿ. ಅದನ್ನು ಜಾರಿಗೆ ತರಲು ಇದ್ದ ಹಿನ್ನೆಲೆಯ ಬಗ್ಗೆ ಹೇಳಿ ಎಂದು ಕೇಳಿದಾಗ ಬಂಗಾರಪ್ಪ ಹೇಳುತ್ತಾ ಹೋಗಿದ್ದರು. ಹೀಗೆ ವಿಂಡ್ಸರ್ ಮ್ಯಾನರ್ ಪಕ್ಕದ ಬ್ರಿಡ್ಜಿನ ಬಳಿ ಬರುವ ಹೊತ್ತಿಗೆ ಸ್ಥೂಲವಾಗಿ ಅದರ ಚಿತ್ರವೇನೋ ಸಿಕ್ಕಿತ್ತು. ಆದರೆ ಅದಿನ್ನೂ ಸ್ಪಷ್ವವಾಗಿರದೆ ಮಂಕು, ಮಂಕಾಗಿತ್ತು. ಹಾಗಂತಲೇ ನಾನು ಪಟ್ಟು ಬಿಡದೆ ಮತ್ತೆ ಅದನ್ನೇ ಕೇಳಿದೆ.

ಅದಕ್ಕವರು ಮತ್ತೆ ವಿಷಾದದ ಧ್ವನಿಯಲ್ಲಿ ಹೇಳತೊಡಗಿದರು. ವಿಠ್ಠಲಮೂರ್ತಿ. ನನ್ನ ಕ್ಷೇತ್ರ ಕುಬಟೂರಿನ ಹತ್ತಿರ ಬಂಕಸಾಣ ಎಂಬ ಗ್ರಾಮವಿದೆ. ಪ್ರತಿ ವರ್ಷ ಅಲ್ಲಿ ಸಾಮೂಹಿಕ ವಿವಾಹ ನಡೆಸುವುದು ನಮ್ಮ ರೂಢಿ. ಹೀಗೇ ಒಂದು ಸಲ ಬಂಕಸಾಣಕ್ಕೆ ಹೋಗಿದ್ದೇನೆ. ಇನ್ನೇನು ಬಂಕಸಾಣ ತಲುಪಬೇಕು.

ಮಳೆ ಅಂದರೆ ಮಳೆ. ಎಂತಹ ಮಳೆ ಎನ್ನುತ್ತೀರಿ? ಇನ್ನೇನು ಆ ಮಳೆಯ ಹೊಡೆತಕ್ಕೆ ಪ್ರಳಯವೇ ಆಗಿ ಬಿಡುತ್ತದೆ ಎನ್ನಬೇಕು ಆ ಥರ. ಮರಗಳಿಂದ ಹನಿ ತೊಟ್ಟಿಕ್ಕುವ ಬದಲು ನೀರು ಸುರಿಯುತ್ತಿದೆ ಎಂದರೆ ಅದಿನ್ನೆಂತಹ ಮಳೆ ಇರಬೇಕು ಊಹಿಸಿ? ಆ ಮಳೆಯ ಚಂಡಿತನ ನೋಡಿ ಕಾರಿನಲ್ಲಿ ಕೂತ ನಾನೇ ದಿಗಿಲು ಬಿದ್ದು ಹೋದೆ.

ಅದರ ನಡುವೆಯೇ ಅದೇಕೋ ಆಯಾಚಿತವಾಗಿ ನನ್ನ ಗಮನ ಹೊರಗೆ ಸರಿಯಿತು. ನೋಡಿದರೆ ಆ ರೀತಿ ಭರ್ರೋ ಅಂತ ಯಮಗಾಳಿಯ ಜತೆ ಮಳೆ ಸುರಿಯುತ್ತಿದ್ದರೂ ಒಂದು ಮರದ ಕೆಳಗೆ ವಯಸ್ಸಾದ ಹಣ್ಣು ಹಣ್ಣು ಮುದುಕಿಯೊಬ್ಬಳು ಕುಳಿತಿದ್ದಾಳೆ.

ಅರೇ, ಕಾರಿನಲ್ಲಿ ಕೂತ ನಾನೇ ಆ ಮಳೆಯ ಹೊಡೆತಕ್ಕೆ ದಿಗಿಲಾಗಿದ್ದೇನೆ. ಆ ಮುದುಕಿಯ ಕತೆ ಏನಾಗಿರಬೇಕು? ಅಂತ ಯೋಚಿಸುವಷ್ಟರಲ್ಲಿ ಕಾರು ಮುಂದೆ ಹೋಗಿತ್ತು. ಬಂಕಸಾಣದ ದೀಪಗಳು ಝೀರೋ ಕ್ಯಾಂಡಲ್ ಬಲ್ಬ ನಂತೆ ಚಿಳ್ಕಿ-ಪಿಳ್ಕಿ ಎನ್ನುತ್ತಿದ್ದವು. ಸರಿ, ಅದ್ಹೇಗೋ ಬಂಕಸಾಣದಲ್ಲಿ ಮದುವೆ ಕಾರ್ಯಕ್ರಮವನ್ನು ಮುಗಿಸಿದ್ದಾಯಿತು.

ಮರು ದಿನ ಸಂಜೆ, ಬೆಂಗಳೂರಿಗೆ ಹೊರಟೆ. ಯಥಾ ಪ್ರಕಾರ ಒಂದೇ ಸಮನೆ ಮಳೆ ಸುರಿಯುತ್ತಿದೆ. ಹೋಗುತ್ತಾ ಹೋಗುತ್ತಾ ನನ್ನ ದೃಷ್ಟಿಯನ್ನು ಒಂದು ಬಗೆಯ ಆತಂಕದಿಂದಲೇ ಕಾರಿನ ಎಡಭಾಗ ದ ಮೇಲಿಟ್ಟು ಹೋದೆ. ಹಿಂದಿನ ದಿನ ಸಂಜೆ ಮರದ ಕೆಳಗೆ ನೆನೆಯುತ್ತಾ ಕುಂತಿದ್ದ ಮುದುಕಿ, ಅದೇ ಮಳೆಯಲ್ಲಿ ಮುದುರಿ ಮರದ ಕೆಳಗೆ ಮಲಗಿದ್ದಾಳೆ.

ತಡೆಯಲಾಗದೆ ನಾನು ಕಾರಿನಿಂದ ಇಳಿದು ಆ ಮುದುಕಿಯ ಬಳಿ ಹೋದೆ. ಕನಿಷ್ಟ ಪಕ್ಷ ಒಂದು ಸೂರಿನ ಕೆಳಗಾದರೂ ಇರದೆ ಮರದ ಕೆಳಗೆ ಮುದುಕಿ ಮಲಗಿzಳೆ ಎಂದರೆ ಸಹಜವಾಗಿಯೇ ಮುನಿಸಾಗುತ್ತದೆ ಅಲ್ಲವಾ ವಿಠ್ಠಲಮೂರ್ತಿ? ನನಗೂ ಹಾಗೇ ಆಯಿತು. ಹಾಗಂತಲೇ ಆ ಮಳೆಯ ನಡುವೆಯೇ ಮುದುಕಿಯ ಹತ್ತಿರ ಹೋಗಿ, ಅಜ್ಜಿ,ಅಜ್ಜಿ ಎಂದು ಕೂಗಿದೆ. ಅದಕ್ಕಾಕೆ ಕಣ್ಣು ತೆರೆದಳು.

ನಾನು ಸ್ವಲ್ಪ ಮುನಿಸಿನಿಂದಲೇ, ಅದೇನಜ್ಜಿ? ನಿನ್ನೆ ಸಂಜೆ ನೋಡಿದ್ದು. ಇವತ್ತು ಸಂಜೆ ನೋಡಿ ದರೂ ಹಾಗೇ ಮಲಗಿದ್ದೀ. ಯಾವುದಾದರೂ ಒಂದು ಸೂರಿನ ಕೆಳಗಾದರೂ ಆಶ್ರಯ ಪಡೆಯಬಾರ ದಿತ್ತೇ? ಎಂದು ಹೇಳಿದೆ. ಅದಕ್ಕೆ ಆ ಮುದುಕಿ ಕಣ್ಣೀರಿಡುತ್ತಾ, ಎಲ್ಲಿದೆ ಮಗೂ ನನಗೆ ಆಶ್ರಯ ಕೊಡುವ ಸೂರು? ನನ್ನವರು ಅಂತ ನನಗ್ಯಾರು ಇದ್ದಾರೆ? ಯಾರೂ ಇಲ್ಲ ಕಣಪ್ಪಾ ಎಂದಳು. ಹೀಗೆ ಹೇಳುವಾಗ ಆಕೆಯ ಮೈ-ಕೈ ನಡುಗುತ್ತಿತ್ತು.

ಆ ಕ್ಷಣದಲ್ಲಿ ನನ್ನೆದೆ ಝಂತ ನಡುಗಿ ಹೋಯಿತು ವಿಠ್ಠಲಮೂರ್ತಿ. ಒಬ್ಬ ಮನುಷ್ಯನಿಗೆ ಬಿಸಿಲು, ಗಾಳಿ, ಮಳೆ, ಚಳಿಯ ರಕ್ಷಣೆಗಾಗಿ ಅಂತ ಒಂದು ಸೂರೂ ಇಲ್ಲದಿದ್ದರೆ ಹೇಗೆ? ಅನ್ನಿಸಿ ನೋವಾ ಯಿತು. ಇದೇ ಸ್ಥಿತಿಯಲ್ಲಿ ನಾನಿದ್ದಿದ್ದರೆ ಅಂತ ಯೋಚಿಸಿದೆ.

ತಕ್ಷಣವೇ ಆ ಮುದುಕಿಯನ್ನು ಎಬ್ಬಿಸಿ, ಮುಂದಿನ ಹಳ್ಳಿಯ ತನಕ ಕಾರಿನ ಕರೆದುಕೊಂಡು ಹೋದೆ. ಅಲ್ಲಿದ್ದ ಪರಿಚಿತರೊಬ್ಬರಿಗೆ, ಈಕೆ ನನಗೆ ಬೇಕಾದವಳು. ಈಕೆಯನ್ನು ಜತೆಯಲ್ಲಿಟ್ಟುಕೊಳ್ಳಿ. ಆಕೆಯ ಖರ್ಚು ನನ್ನದೇ ಎಂದೆ. ಮುಂದೆ ಆ ಮುದುಕಿ ಬದುಕಿರುವವರೆಗೆ ಆಕೆಯ ಖರ್ಚನ್ನು ನಾನೇ ಭರಿಸುತ್ತಿದ್ದೆ. ಆದರೆ ಆ ದಿನದ ಘಟನೆ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಹೋಯಿತು ವಿಠ್ಠಲ ಮೂರ್ತಿ.

ಬಂಗಲೆಯೇ ಇರಲಿ, ಗುಡಿಸಲೇ ಇರಲಿ. ಮನುಷ್ಯನಿಗೊಂದು ಸೂರು ಇರಬೇಕು. ಸೂರಿದ್ದರೆ ಗಂಜಿಯೋ? ನೀರೋ ಕುಡಿದುಕೊಂಡು ಇರಬಹುದು. ಆದರೆ ಸೂರಿಲ್ಲದ ಬದುಕನ್ನು ಊಹಿಸಿ ಕೊಳ್ಳುವುದು ನನಗೆ ಕಷ್ಟವಾಯಿತು. ಹೀಗಾಗಿಯೇ, ನನಗೆ ರಾಜಕೀಯವಾಗಿ, ಮಹತ್ವದ ಅಧಿಕಾರ ವೇನಾದರೂ ಸಿಕ್ಕಿದರೆ ಇಂತಹ ಜನರಿಗಾಗಿ ಏನಾದರೂ ಮಾಡಬೇಕು ಅಂತ ಮನಸ್ಸು ತಟಗುಟ್ಟು ತ್ತಿತ್ತು.

ಬಡವರಿಗೆ ಸೂರು ಒದಗಿಸುವ ಆ ಯೋಜನೆಯ ಕನಸಿಗೆ ಬೀಜ ಬಿದ್ದಿದ್ದು ಆ ಸಂದರ್ಭದಲ್ಲಿಯೇ ವಿಠ್ಠಲಮೂರ್ತಿ ಅಂತ ಬಂಗಾರಪ್ಪ ಮೌನವಾದರು. ಅದಾದ ನಂತರ ನಾನು ಮಾತನಾಡಲಿಲ್ಲ. ಯಾಕೆಂದರೆ ಮಾತನಾಡಲು ನನಗೇನೂ ಉಳಿದಿರಲಿಲ್ಲ. ಆಶ್ರಯ ಯೋಜನೆಯ ಕುರಿತು ಹೇಳಲು ಅವರಿಗೇನೂ ಉಳಿದಿರಲಿಲ್ಲ.