ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harish Kera Column: ಕಾಣಿಸಿದರೆ ಭಾಗ್ಯ, ಕಾಣಿಸದಿದ್ದರೆ ಬೆರಗು!

ಕಳೆದ ವರ್ಷ ಯಾರೋ ನ್ಯಾಚುರಲಿಸ್ಟ್‌ಗಳು ಮತ್ತು ಬಯಾಲಜಿಸ್ಟ್‌ಗಳು ಸೇರಿ ಅದನ್ನು ಪತ್ತೆ ಮಾಡಿ ದ್ದರು. ಅದಕ್ಕೆ ‘ಡೊಲೊ‌ ಮಿಡಿಸ್ ಇಂಡಿಕಸ್’ (Dolomedes indicus) ಎಂದು ಹೆಸರು ಕೊಟ್ಟಿದ್ದಾರೆ. ಡೊಲೊಮಿಡಿಸ್ ಕುಲಕ್ಕೆ(genus) ಸೇರಿದ ಈ ಜೇಡ ಭಾರತದಲ್ಲಿ ಕಂಡಿರುವುದು ಇದೇ ಮೊದಲ ಬಾರಿ. ಅದರಲ್ಲೂ ಇದು ಭಾರತದಲ್ಲಿ, ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬಂದಿರುವ ಹೊಸ ಜಾತಿ (Species).

ಕಾಡುದಾರಿ

ಮಲಯಾಳಂ ಮತ್ತು ಇಂಗ್ಲಿಷ್ ಬೆರೆಸಿ ಮಾತನಾಡುತ್ತಿದ್ದ ಆ ಗಾರ್ಡ್ ‘ವರು ಸಾರೆ, ಐ ವಿಲ್ ಶೋ ಯು ನ್ಯೂ ಸ್ಪೀಶಿಸ್ ಆಫ್ ಸ್ಪೈಡರ್’ ಎಂದು ಹೇಳಿದಾಗ ಅಚ್ಚರಿಯೇ ಆಯಿತು. ಕೇರಳದ ವಯನಾಡಿನ ನಡುವಿನ ಕಾಡಿನ ಮೂಲೆಯ ಇರುವ ರೆಸಾರ್ಟು. ಅವರಂದಿಷ್ಟು ಗಾರ್ಡುಗಳು, ನ್ಯಾಚುರಲಿಸ್ಟುಗಳೂ ಹೌದು.

ಸಾಂಪ್ರದಾಯಿಕ ಪುಟ್ಟು ಇತ್ಯಾದಿ ಖಾದ್ಯ ಹೇಗೂ ಆಯ್ತಲ್ಲ. ಈ ನಡುವೆ ಆಸಕ್ತಿ ಮೂಡಿಸಿದ ಆ ವ್ಯಕ್ತಿ ಕಾಡಿನ ನಡುವಿನ ಒಂದು ನೀರಿನ ಮಡುವಿನಲ್ಲಿ ಒಂದು ಜಾತಿಯ ಜೇಡ ಉಂಟೆಂದೂ, ನೀರಿನಲ್ಲಿ ಕ್ರಿಮಿಕೀಟಗಳನ್ನು ಹಿಡಿದು ಭಕ್ಷಿಸುತ್ತದೆ ಎಂದೂ, ಅದು ಹೊಸದಾಗಿ ಸಂಶೋಧನೆ ಆಗಿzಂದೂ, ತನ್ನ ಜೊತೆ ಬಂದರೆ ತೋರಿಸುತ್ತೇನೆ ಎಂದೂ ಹೇಳಿಕೊಂಡ. ಗಿಡಮರಗಳ ನಡುವೆ, ಬಂಡೆಗಳ ಸಂದಿಯಲ್ಲಿ ಬಲೆ ಹೆಣೆದು ಬೇಟೆಯಾಡುವ ಜೇಡ ನಮಗೆ ಗೊತ್ತು. ಆದರೆ ನೀರಿನಲ್ಲಿ ಬೇಟೆಯಾಡುವ ಜೇಡ? ಊಹೂಂ ಇದು ಹೊಸ ವಿಷಯವೇ ಸರಿ. ಕುತೂಹಲದಿಂದ ಇಂಟರ್ನೆಟ್ ತಡಕಿದರೆ ಅವನು ಹೇಳಿದ್ದು ನಿಜವಿತ್ತು.

ಕಳೆದ ವರ್ಷ ಯಾರೋ ನ್ಯಾಚುರಲಿಸ್ಟ್‌ಗಳು ಮತ್ತು ಬಯಾಲಜಿಸ್ಟ್‌ಗಳು ಸೇರಿ ಅದನ್ನು ಪತ್ತೆ ಮಾಡಿದ್ದರು. ಅದಕ್ಕೆ ‘ಡೊಲೊ‌ ಮಿಡಿಸ್ ಇಂಡಿಕಸ್’ (Dolomedes indicus) ಎಂದು ಹೆಸರು ಕೊಟ್ಟಿದ್ದಾರೆ. ಡೊಲೊಮಿಡಿಸ್ ಕುಲಕ್ಕೆ(genus) ಸೇರಿದ ಈ ಜೇಡ ಭಾರತದಲ್ಲಿ ಕಂಡಿರುವುದು ಇದೇ ಮೊದಲ ಬಾರಿ. ಅದರಲ್ಲೂ ಇದು ಭಾರತದಲ್ಲಿ, ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬಂದಿ ರುವ ಹೊಸ ಜಾತಿ (Species). ಈ ಕುಲದ ಜೇಡಗಳನ್ನು ಸಾಮಾನ್ಯವಾಗಿ ‘ರಾಫ್ಟ್ ಸ್ಪೈಡರ್’ ಅಥವಾ ‘ಫಿಶಿಂಗ್ ಸ್ಪೈಡರ್’ ಎಂದು ಕರೆಯಲಾಗುತ್ತದೆ. ಕೇರಳ ಅರಣ್ಯ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ, ವಯನಾಡು ಜಿಲ್ಲೆಯ ಲಕ್ಕಿಡಿ ಮತ್ತು ಪೆರಿಯಾ ಅರಣ್ಯ ಪ್ರದೇಶ ಗಳಲ್ಲಿ ಇದನ್ನು ಪತ್ತೆ ಹಚ್ಚಲಾಯಿತಂತೆ.

ಇದನ್ನೂ ಓದಿ: Harish Kera Column: ನೆಲ ಕುಸಿಯೆ ಪದವಿಹುದೆ ಮಂಕುತಿಮ್ಮ ?

ನಮ್ಮನ್ನು ಕರೆದುಕೊಂಡು ಹೋದ ಬಿಜು ಎಂಬ ಹೆಸರಿನ ಆ ಗಾರ್ಡ್, ಇನ್ನೂ ಕೆಲವು ವಿಷಯ ತಿಳಿಸಿದ. ಬಲೆ ಹೆಣೆದು ಬೇಟೆಗಾಗಿ ಕಾದು ಕುಳಿತುಕೊಳ್ಳುವ ಜೇಡ ಇದಲ್ಲ. ನೀರಿನಲ್ಲಿ ಹಾಗೂ ನೆಲದ ಮೇಲೆ ಎರಡೂ ಕಡೆ ಇರುತ್ತದೆ. ಕೀಟಗಳು ಅಥವಾ ಸಣ್ಣ ಮೀನುಗಳಿಂದ ಉಂಟಾಗುವ ಅತಿ ಸೂಕ್ಷ್ಮ ಕಂಪನಗಳನ್ನು ತನ್ನ ಕಾಲುಗಳ ಮೂಲಕವೇ ಗ್ರಹಿಸುತ್ತದೆ. ತಕ್ಷಣವೇ ಮಿಂಚಿನ ವೇಗದಲ್ಲಿ ನೀರಿನ ಮೇಲ್ಮೈಯ ದೌಡಾಯಿಸಿ ಬೇಟೆಯನ್ನು ಗಬಕಾಯಿಸುತ್ತದೆ. ಇದು ಉತ್ತಮ ಈಜುಗಾರ. ನೀರಿನೊಳಗೆ ಗಂಟೆಗಟ್ಟಲೆ ಮುಳುಗಿಯೂ ಇರಬಲ್ಲ ಡೈವರ್.

ಅವನು ಕರೆದುಕೊಂಡು ಹೋದ ನೀರಿನ ತಾಣ ಪ್ರಶಾಂತವಾಗಿತ್ತು. ಸುತ್ತ ಮುತ್ತ ಮುಗಿಲು ಮುಟ್ಟುವ ಮರಗಳು. ನಡುವೆ ಹರಿಯುವ ಸಣ್ಣ ತೊರೆ, ಅಲ್ಲಲ್ಲಿ ನಿಂತ ನೀರಿನ ಮಡುಗಳು. ಸುತ್ತಲಿನ ಗಿಡಮೂಲಿಕೆಗಳ, ಮರದಿಂದ ಬಿದ್ದ ಎಲೆಗಳು ಕೊಳೆತ ಒಂಥರ ಪರಿಮಳ. ಅವನು ಒಂದು ಗುಂಡಿಯಿಂದ ಇನ್ನೊಂದು ಗುಂಡಿಗೆ ನಮ್ಮನ್ನು ಸುತ್ತಾಡಿಸಿದ. ಒಂದರಲ್ಲೂ ಜೇಡ ಕಾಣಿಸಲಿಲ್ಲ. ‘ಎಲ್ಲಾ ಸಂದಿಯಲ್ಲಿ ಅಡಗಿಕೊಂಡಿರುತ್ತದೆ, ಬರಬಹುದು ಕಾಯೋಣ ಸಾರೆ’ ಅಂದ.

ಹಾಗೇ ಕಾಯುತ್ತಿದ್ದಾಗ ಯೋಚನೆಗಳು ಬರತೊಡಗಿದವು. ಈ ಕಾಡುಗಳು, ಸಹ್ಯಾದ್ರಿ, ಶೋಲಾ ಅರಣ್ಯಗಳು ನಮ್ಮನ್ನು ಸದಾ ಚಕಿತಗೊಳಿಸುತ್ತಲೇ ಇರುತ್ತವೆ. ನಾವು ಏನು ಅಂದುಕೊಂಡಿದ್ದೇವೆ ಅಂದರೆ, ಈ ಭೂಮಿಯ ಮೇಲೆ ಮನುಷ್ಯ ಕಾಲಿಡದ ಪ್ರದೇಶವಿಲ್ಲ. ಇಲ್ಲಿರುವ ಎಲ್ಲ ಪ್ರಭೇದ, ಜಾತಿಗಳ ಮೃಗಪಕ್ಷಿ ಗಳನ್ನೂ ಕ್ರಿಮಿಕೀಟಗಳನ್ನೂ ಸಸ್ಯಗಳನ್ನೂ ಆಗಲೇ ಕಂಡು ನೋಡಿ ಅಧ್ಯಯನ ಮಾಡಿ ವರ್ಗೀಕರಿಸಿ ಆಗಿದೆ. ಊಹೂಂ! ಇದು ನಿಜವಲ್ಲ. ನಿಮಗೊಂದು ವಿಷಯ ಗೊತ್ತಿರಲಿ. ಕಳೆದ ವರ್ಷ ಭಾರತದಲ್ಲಿ ಪತ್ತೆಯಾದ ಹೊಸ ಜೀವಜಾತಿ 709!

71

ಪ್ರತಿ ಬಾರಿ ಮಳೆಕಾಡು, ಪರ್ವತ, ಕಣಿವೆ, ದ್ವೀಪ, ಹುಲ್ಲುಗಾವಲು, ಹೊಳೆಬಯಲುಗಳತ್ತ ಸಂಶೋ ಧನಾ ತಂಡಗಳು ಹೊರಟಾಗಲೂ ಕೇಳಿಕೊಳ್ಳುವ ಪ್ರಶ್ನೆ ಒಂದೇ. ಇಲ್ಲಿ ವಿಜ್ಞಾನ ಇನ್ನೂ ದಾಖಲಿ ಸದ ಜೀವಿ, ಸಸ್ಯ ಏನಾದರೂ ಅಡಗಿರಬಹುದಾ? 2025ರಲ್ಲಿ ಆ ಪ್ರಶ್ನೆಗೆ ಒಂದಲ್ಲ, ಬರೋಬ್ಬರಿ 709 ಉತ್ತರಗಳು ಸಿಕ್ಕಿದವು. ಕರ್ನಾಟಕದ ಚಾರ್ಮಾಡಿಯಲ್ಲೊಂದು ಜಿಗಿಯುವ ಹೊಸ ಜೇಡ, ಹಿಮಾಲಯದಲ್ಲೊಂದು ಹೊಸ ಬಾವಲಿ, ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಹೊಸ ಹಾವು, ಅರುಣಾಚಲ ಪ್ರದೇಶದಲ್ಲಿ ಎರಡು ವರ್ಣರಂಜಿತ ಹಲ್ಲಿಗಳು... ಹೀಗೆ ಭಾರತದ ವಿವಿಧ ಭಾಗಗಳಲ್ಲಿ ವಿeನಿಗಳು ಇದುವರೆಗೆ ದಾಖಲೆಯಾಗದ ನೂರಾರು ಜೀವಿಗಳನ್ನು ಪತ್ತೆ ಹಚ್ಚಿದರು. ಇದೊಂದು ದಾಖಲೆ. ದೇಶದಲ್ಲಿ ಒಂದೇ ವರ್ಷದಲ್ಲಿ ಪತ್ತೆಯಾದ ಹೊಸ ಪ್ರಾಣಿ ಪ್ರಭೇದಗಳ ಅತ್ಯಧಿಕ ಸಂಖ್ಯೆ ಯಿದು.

ಭಾರತೀಯ ಪ್ರಾಣಿ ಸರ್ವೇಕ್ಷಣಾ ಸಂಸ್ಥೆ (ZSI) ಪ್ರಕಟಿಸಿದ ಮಾಹಿತಿ ಇದು- 2025ರಲ್ಲಿ ಒಟ್ಟು 709 ಪ್ರಾಣಿ ಪ್ರಭೇದಗಳು ಭಾರತದ ಜೀವಿವೈವಿಧ್ಯ ದಾಖಲೆಗೆ ಸೇರ್ಪಡೆಯಾಗಿವೆ. 2024ರಲ್ಲಿ ದಾಖಲಾ ಗಿದ್ದ 683 ಪ್ರಭೇದಗಳ ದಾಖಲೆಯನ್ನು ಇದು ಮೀರಿಸಿದೆ. ಈ 709ರಲ್ಲಿ 483 ಪ್ರಭೇದಗಳು ವಿಜ್ಞಾನಕ್ಕೆ ಸಂಪೂರ್ಣ ಹೊಸದು. ಉಳಿದ 226 ಪ್ರಭೇದಗಳು ಜಗತ್ತಿನ ಬೇರೆಡೆ ಈಗಾಗಲೇ ತಿಳಿದಂಥವು. ಆದರೆ ಭಾರತದಲ್ಲಿ ಮೊದಲ ಬಾರಿಗೆ ದಾಖಲಾಗಿವೆ. ಈ ಹೊಸ ಸೇರ್ಪಡೆಗಳೊಂದಿಗೆ ಭಾರತದಲ್ಲಿ ದಾಖಲಾಗಿರುವ ಒಟ್ಟು ಪ್ರಾಣಿ ವೈವಿಧ್ಯ 1,05,953 ಪ್ರಭೇದಗಳು ಮತ್ತು ಉಪಪ್ರಭೇದ ಗಳಿಗೆ ಏರಿಕೆಯಾಗಿದೆ. ಇದು ಜಗತ್ತಿನಲ್ಲಿ ದಾಖಲಾದ ಒಟ್ಟು ಜೀವಿವೈವಿಧ್ಯದ ಸುಮಾರು 5.3 ಶೇಕಡದಷ್ಟು. ಭಾರತ ವಿಶ್ವದ 17 ಮೆಗಾ-ಡೈವರ್ಸ್ ರಾಷ್ಟ್ರಗಳಲ್ಲಿ ಒಂದಾಗಿದೆ.

ಭಾರತದ ಕತೆಯೊಂದೇ ಅಲ್ಲ ಇದು. ಜಗತ್ತಿನಾದ್ಯಂತ ಹೀಗೆ ಹೊಸ ಹೊಸ ಜೀವಿಪ್ರಭೇದ, ಸಸ್ಯಜಾತಿ ಪ್ರತಿವರ್ಷ ಪತ್ತೆಯಾಗುತ್ತವೆ. ಸರಿಸುಮಾರು ವಾರ್ಷಿಕ 16000ದಷ್ಟು ಹೊಸ ಜೀವಿಗಳು ಕಂಡು ಬರುತ್ತವೆ. ಜೀವವಿಜ್ಞಾನಿಗಳು ತಲೆಕೆಡಿಸಿಕೊಂಡು ಇವುಗಳಿಗೆ ವೈಜ್ಞಾನಿಕ ಹೆಸರು ಕೊಡುತ್ತಾರೆ. ಹಾಗೆ ಹೆಸರು ಕೊಡುವಲ್ಲೂ ಕೆಲವು ತಮಾಷೆಗಳಿವೆ. ಅದನ್ನು ಆಮೇಲೆ ನೋಡೋಣ.

ಇದೊಂದು ಚೋದ್ಯ ಅಲ್ಲವೆ? ಜಗತ್ತಿನಾದ್ಯಂತ ಜೀವಿವೈವಿಧ್ಯ ತೀವ್ರ ಒತ್ತಡಕ್ಕೆ ಒಳಗಾಗಿ ನಶಿಸುತ್ತಿದೆ. ಹಲವು ಪ್ರಭೇದಗಳು ಅಳಿದಿವೆ, ಇನ್ನೊಂದಷ್ಟು ಅಳಿವಿನ ಅಂಚಿನಲ್ಲಿವೆ. ಅಂಥ ಹೊತ್ತಿನಲ್ಲಿ, ಪ್ರಕೃತಿ ಇನ್ನೂ ಅನೇಕ ರಹಸ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ ಎಂದು ನಮ್ಮ ಅರಿವಿಗೆ ಬಂದಾಗ ರೋಮಾಂಚನ ಆಗುತ್ತದೆ. ಆದರೆ ಈ ರೋಮಾಂಚನದಲ್ಲಿ ಒಂದು ವಿಷಾದವೂ ಇದೆ. ಅದೆಂದರೆ ಈ ಹೊಸ ಶೋಧಗಳು ಅಳಿವಿನಂಚಿನ ಜೀವಿಗಳೇ ಆಗಿವೆ ಎಂಬುದು. ಅವು ಯಾವ ಕ್ಷಣದಲ್ಲೂ ನಶಿಸಬಹುದು. ವಿಜ್ಞಾನಿಗಳು ಈಗ ನೋಡಿರುವ ಜೀವಿಗಳೇ ಆ ಪ್ರಭೇದದ ಕೊನೆಯ ಕೊಂಡಿಗಳೂ ಆಗಿರಬಹುದು.

ಕಳೆದ ವರ್ಷ ನಮ್ಮ ರಾಜ್ಯದಲ್ಲಿ ಪತ್ತೆಯಾದ ಒಂದು ಕುತೂಹಲಕಾರಿ ಜೀವಿಯ ಬಗ್ಗೆ ಹೇಳಬೇಕು. ಅದು ಕಂಡುಬಂದುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಒಳಗೆಲ್ಲೋ ಇರುವ ಮಧುಗುಂಡಿ ಎಂಬ ಊರಿನ ಬಳಿ. ಇದೊಂದು ಜಿಗಿಯುವ ಜೇಡ. ಇದಕ್ಕೆ ವಿಜ್ಞಾನಿಗಳು ಈಗ ಇಟ್ಟ ಹೆಸರು ಪಿಲಿಯಾ ಮಲೆನಾಡು! (Pilia malenadu) ಪಿಲಿಯಾ ಎಂಬುದು ಕುಲದ ಹೆಸರು. ‘ಮಲೆನಾಡು’ ಎಂಬುದು ಪಶ್ಚಿಮ ಘಟ್ಟಗಳನ್ನು ಒಳಗೊಂಡ ಕರ್ನಾಟಕದ ಮಲೆನಾಡು ಪ್ರದೇಶದ ಗೌರವಾರ್ಥ ಕೊಟ್ಟ ಜಾತಿಯ (ಪ್ರಭೇದ) ಹೆಸರು. ಅಂದ ಹಾಗೆ ಪಿಲಿಯಾ ಕುಲದಲ್ಲಿ ಇರುವುದು ಮೂರು ಪ್ರಭೇದದ ಜಿಗಿಯುವ ಜೇಡಗಳು. ಅದರಲ್ಲಿ ಇದು ಹೊಸದು.

ಈ ಕುಲದ ಜಿಗಿಯುವ ಜೇಡವೊಂದು ಹೊಸದಾಗಿ ಕಾಣಿಸಿಕೊಂಡೇ 123 ವರ್ಷಗಳಾದವು. ಆದ್ದರಿಂದ ಇದು ಕರ್ನಾಟಕಕ್ಕೂ, ಭಾರತಕ್ಕೂ, ಜೀವವಿಜ್ಞಾನಕ್ಕೂ ಅಚ್ಚರಿಯ, ಮಹತ್ವದ ಸೇರ್ಪಡೆ. ಇದೇ ಮೊದಲ ಬಾರಿಗೆ ಈ ಕುಲದ ಹೆಣ್ಣು ಜೇಡದ ಮಾದರಿಯನ್ನೂ ವಿಜ್ಞಾನಿಗಳು ಅಲ್ಲೇ ದಾಖಲಿಸಿದ್ದಾರೆ. ಪಿಲಿಯಾ ಎಂಬ ಕುಲವನ್ನು ಮೊದಲ ಬಾರಿಗೆ 1902ರಲ್ಲಿ ಫ್ರೆಂಚ್ ಕೀಟಶಾಸ್ತ್ರಜ್ಞ ಯೂಜಿನ್ ಸೈಮನ್ ಗುರುತಿಸಿದ್ದ. ಆ ಬಳಿಕ ಈ ಕುಲದ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿರಲಿಲ್ಲ. ಇದುವರೆಗೆ ಈ ಕುಲದಲ್ಲಿ ಕೇವಲ ಮೂರು ಪ್ರಭೇದಗಳು ತಿಳಿದಿದ್ದವು. ಅವುಗಳಲ್ಲಿಯೂ ಗಂಡು ಜೇಡ ಮಾತ್ರ ವಿಜ್ಞಾನಿಗಳಿಗೆ ಸಿಕ್ಕಿದ್ದವು. ಈ ಬಾರಿ ಸಂಶೋಧಕರಿಗೆ ಗಂಡು- ಹೆಣ್ಣು ಎರಡೂ ದೊರೆತಿವೆ. ನಮ್ಮ ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಶ್ರೀಮಂತಿಕೆ ಎಂಥದು ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ.

ಈ ವರ್ಷದ ಪ್ರಮುಖ ಶೋಧಗಳಲ್ಲಿ ಇನ್ನೊಂದು, ಉತ್ತರಾಖಂಡದಲ್ಲಿ ಪತ್ತೆಯಾದ ಮಯೋಟಿಸ್ ಹಿಮಾಲಯೈಕಸ್ ಎಂಬ ಉದ್ದಬಾಲದ ಬಾವಲಿ. ಇದರ ಕಣ್ಣುಗಳ ಸುತ್ತ ಕೂದಲಿಲ್ಲದ ಚರ್ಮದ ವಲಯವಿದೆ. ಅದರ ಬಾಲ ದೇಹದಷ್ಟೇ ಉದ್ದ. ಇನ್ನೊಂದು ಗಮನಾರ್ಹ ಪತ್ತೆ ಇರ್ವಿನ್ ವುಲ್ ಸ್ನೇಕ್. ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಪತ್ತೆಯಾದ ಇದು ವಿಷರಹಿತ ಹಾವು. ಖ್ಯಾತ ವನ್ಯಜೀವಿ ಸಂರಕ್ಷಣಾವಾದಿ, ಸ್ಟೀವ್ ಇರ್ವಿನ್ ಅವರ ಗೌರವಾರ್ಥ ಈ ಹಾವಿಗೆ ಅವರ ಹೆಸರು. ಸಾಹಸಿ ಸ್ಟೀವ್ ಇರ್ವಿನ್, ಸ್ಟಿಂಗ್ ರೇ ಮೀನಿನಿಂದ ಕಡಿಸಿಕೊಂಡು ಸಮುದ್ರದಾಳದಲ್ಲಿ ಮೃತಪಟ್ಟಿದ್ದರು.

2025ರಲ್ಲಿ ಕೇರಳದಲ್ಲಿ ಅತಿ ಹೆಚ್ಚು ಹೊಸ ಪ್ರಾಣಿ ಪ್ರಭೇದಗಳು ದಾಖಲಾಗಿವೆ. ಕೇರಳದ ನಂತರದ ಸ್ಥಾನ ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ಅರುಣಾಚಲ ಪ್ರದೇಶಗಳದು. ಈ ಎಲ್ಲ ಪ್ರದೇಶಗಳಲ್ಲಿ ಹಲವು ದಶಕಗಳಿಂದ ಸಂಶೋಧನೆ ನಡೆಯುತ್ತಿದ್ದರೂ, ವಿಜ್ಞಾನಕ್ಕೆ ತಿಳಿದಿರದ ಹೊಸ ಜೀವಿಗಳು ಇನ್ನೂ ಪತ್ತೆಯಾಗುತ್ತಲೇ ಇವೆ. ಜೀವಿವೈವಿಧ್ಯ ನಿರಂತರವಾಗಿ ರೂಪಾಂತರಗೊಳ್ಳುತ್ತಿದ್ದು, ಇನ್ನೂ ಅನೇಕ ಸಂಗತಿಗಳು ಅನ್ವೇಷಣೆಗೆ ಕಾಯುತ್ತಿವೆ ಎಂಬುದನ್ನು ಈ ಪತ್ತೆಗಳು ತೋರಿಸಿವೆ.

ಬರೀ ಪ್ರಾಣಿಗಳಲ್ಲ. ಭಾರತೀಯ ಸಸ್ಯ ಸರ್ವೇಕ್ಷಣಾ ಸಂಸ್ಥೆ (BSI) ಕೂಡ 2025ರಲ್ಲಿ ಮಹತ್ವದ ಸಾಧನೆ ಮಾಡಿದೆ. ಒಟ್ಟು 353 ಸಸ್ಯ ವೈವಿಧ್ಯಗಳನ್ನು ದಾಖಲಿಸಲಾಗಿದ್ದು, ಅವುಗಳಲ್ಲಿ 221 ವಿಜ್ಞಾನಕ್ಕೆ ಹೊಸ ಪ್ರಭೇದಗಳು. 132 ಸಸ್ಯಗಳನ್ನು ಭಾರತದಲ್ಲಿ ಮೊದಲ ಬಾರಿಗೆ ದಾಖಲಿಸ ಲಾಗಿದೆ. ಸಸ್ಯ ಸಂಶೋಧನೆಗಳಲ್ಲಿ ಅರುಣಾಚಲ ಪ್ರದೇಶ ಮೊದಲ ಸ್ಥಾನ. ನಂತರ ಉತ್ತರಾಖಂಡ ಮತ್ತು ಕೇರಳ. ಪಶ್ಚಿಮ ಘಟ್ಟಗಳಲ್ಲಿ ಕಾಡು ಸೀತಾಫಲದ ಗಿಡ ಕಂಡುಬಂತು.

ಇನ್ನೂ ಅಪರೂಪದ ಜೀವಿಗಳು ಈ ಪ್ರದೇಶದಲ್ಲಿ ಇರಬಹುದಲ್ವಾ? ಖಂಡಿತ ಇರಬಹುದು. ಸಂಶೋಧನೆ ನಡೆಯಬೇಕು. ರಸ್ತೆಗಳು, ರೆಸಾರ್ಟ್‌ಗಳು, ಪೈಪ್‌ಲೈನ್‌ಗಳು, ವಿದ್ಯುತ್ ಕೇಬಲ್‌ಗಳು, ಮಾನವ ಚಟುವಟಿಕೆ ಹೆಚ್ಚಿದಷ್ಟು ಇವು ಕಣ್ಮರೆಯಾಗುತ್ತವೆ. ಭಾರತದ ಕಾಡುಗಳು, ಪರ್ವತಗಳು, ನದಿಗಳು, ದ್ವೀಪಗಳು ಇನ್ನೂ ವಿಜ್ಞಾನಕ್ಕೆ ತಿಳಿದಿರದ ಹೊಸ ಜೀವಿಗಳನ್ನು ಅನಾವರಣ ಗೊಳಿಸುತ್ತಿವೆ. ಪ್ರಕೃತಿಯಲ್ಲಿ ಇನ್ನೂ ಅನ್ವೇಷಿಸಬೇಕಾದ ಹಾಗೂ ಸಂರಕ್ಷಿಸಬೇಕಾದ ಅಪಾರ ಸಂಪತ್ತು ಉಳಿದಿದೆ. ರಕ್ಷಣೆಯೇ ಸವಾಲು.

ಅಂದ ಹಾಗೆ, ವಯನಾಡಿನ ಕಾಡಿನ ನಡುವೆ ಗಾರ್ಡ್ ಜೊತೆಗೆ ಮೌನವಾಗಿ ಕಾದು ಕುಳಿತ ನಮಗೆ ಫಿಶಿಂಗ್ ಸ್ಪೈಡರ್ ಕೊನೆಗೂ ಕಾಣಿಸಲಿಲ್ಲ. ಬೇಸರವಿಲ್ಲ. ಅದು ಮನುಷ್ಯರ ಕಣ್ಣಿಗೆ ಕಾಣಿಸದ ನಿಗೂಢ ತಾಣವನ್ನು ಆರಿಸಿಕೊಂಡಿರಬಹುದು. ಒಳ್ಳೆಯದೇ. ಇನ್ನೊಮ್ಮೆ ಹೋದಾಗ ಕಾಣಿಸಲೂ ಬಹುದು. ಕಾಣಿಸಿದರೆ ಭಾಗ್ಯ. ಕಾಣಿಸದಿದ್ದರೆ ಬೆರಗು.

ಹರೀಶ್‌ ಕೇರ

View all posts by this author