ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Vijay Darda Column: ಧೈರ್ಯವಿದ್ದರೆ ರಾಜನನ್ನು ಕಡೆಗಣಿಸಿ.. ನಿಮ್‌ ಹಣೆಬರಹ !

ಟ್ರಂಪ್ ಜೊತೆಗೆ ಸ್ನೇಹ ಮಾಡಿದವರೆಲ್ಲ ಒಂದಲ್ಲಾ ಒಂದು ದಿನ ಕಷ್ಟಕ್ಕೆ ಸಿಲುಕುತ್ತಾರೆ ಎಂದು ಅನೇಕರು ಹೇಳುತ್ತಾರೆ. ಇದನ್ನೂ ನಾನು ಸ್ವಲ್ಪ ಭಿನ್ನವಾಗಿ ನೋಡುತ್ತೇನೆ. ಜಗತ್ತಿನ ನಂಬರ್ 1 ಬಲಾಢ್ಯ ರಾಷ್ಟ್ರ ಅಮೆರಿಕ ಎಂಬುದರಲ್ಲಿ ಯಾರಿಗಾದರೂ ಅನುಮಾನವಿದೆಯೇ? ಖಂಡಿತ ಇಲ್ಲ. ಹಾಗಿದ್ದರೆ ಸಮಕಾಲೀನ ಜಗತ್ತಿಗೆ ಟ್ರಂಪ್ ಚಕ್ರವರ್ತಿಯಿದ್ದಂತೆ.

ಸಂಗತ

ಕಳೆದ ವಾರ ಎರಡು ದೇಶಗಳಿಗೆ ಬಹಳ ಕಷ್ಟಕರ ವಾರವಾಗಿತ್ತು. ಒಂದು ಪಾಕಿಸ್ತಾನ, ಇನ್ನೊಂದು ಒಮಾನ್. ಕಾರಣ ಸರಳ: ಈ ಎರಡೂ ದೇಶಗಳ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಟ್ಟಾಗಿ ಒಂದಷ್ಟು ಷರತ್ತುಗಳನ್ನು ವಿಧಿಸಿದ್ದರು. ಅವುಗಳನ್ನು ಒಪ್ಪಿಕೊಳ್ಳುವುದು ಕಷ್ಟ, ಕಡೆಗಣಿಸುವುದು ಇನ್ನೂ ಕಷ್ಟ ಎಂಬಂತಹ ಇಕ್ಕಟ್ಟಿನ ಸ್ಥಿತಿಗೆ ಪಾಕ್ ಮತ್ತು ಒಮಾನ್ ಸಿಲುಕಿದವು. ಆದರೆ ನಾನು ಈ ಪರಿಸ್ಥಿತಿಯನ್ನು ಬೇರೆಯದೇ ದೃಷ್ಟಿಯಿಂದ ನೋಡುತ್ತೇನೆ.

ಆಸ್ಥಾನದಲ್ಲಿ ನೃತ್ಯ ಮಾಡಲು ನೀವು ಬಯಸುವುದಾದರೆ ಅದರಿಂದಾಗುವ ಸುಸ್ತನ್ನು ಅನುಭವಿಸು ವುದಕ್ಕೂ ಸಿದ್ಧರಿರಬೇಕು. ಹಾಗಂತ ನಿಮ್ಮ ನೃತ್ಯ ಕಳಪೆಯಾಗಿದ್ದರೆ ರಾಜನಿಗೆ ಖುಷಿಯಾಗುವುದಿಲ್ಲ. ಅವನು ಯಾವಾಗಲೂ ಸುಂದರವಾದ ನೃತ್ಯವನ್ನೇ ನೋಡಲು ಬಯಸುತ್ತಾನೆ. ನೃತ್ಯ ಚೆನ್ನಾಗಿಲ್ಲ ದಿದ್ದರೆ ಅವನ ಅಸಮಾಧಾನವನ್ನು ಎದುರಿಸುವುದು ಅನಿವಾರ್ಯ.

ಟ್ರಂಪ್ ಜೊತೆಗೆ ಸ್ನೇಹ ಮಾಡಿದವರೆಲ್ಲ ಒಂದಲ್ಲಾ ಒಂದು ದಿನ ಕಷ್ಟಕ್ಕೆ ಸಿಲುಕುತ್ತಾರೆ ಎಂದು ಅನೇಕರು ಹೇಳುತ್ತಾರೆ. ಇದನ್ನೂ ನಾನು ಸ್ವಲ್ಪ ಭಿನ್ನವಾಗಿ ನೋಡುತ್ತೇನೆ. ಜಗತ್ತಿನ ನಂಬರ್ 1 ಬಲಾಢ್ಯ ರಾಷ್ಟ್ರ ಅಮೆರಿಕ ಎಂಬುದರಲ್ಲಿ ಯಾರಿಗಾದರೂ ಅನುಮಾನವಿದೆಯೇ? ಖಂಡಿತ ಇಲ್ಲ. ಹಾಗಿದ್ದರೆ ಸಮಕಾಲೀನ ಜಗತ್ತಿಗೆ ಟ್ರಂಪ್ ಚಕ್ರವರ್ತಿಯಿದ್ದಂತೆ.

ದೇಶಗಳು ಚಕ್ರವರ್ತಿಯ ಮಾತನ್ನೇ ಕೇಳದಿದ್ದರೆ ಇನ್ನಾರ ಮಾತು ಕೇಳುತ್ತವೆ? ಅದರಲ್ಲೂ ಟ್ರಂಪ್ ಸಿಡುಕಿನ ಮನುಷ್ಯ. ಅವರು ಕುಳಿತಿರುವ ಸ್ಥಾನಕ್ಕೆ ಆ ಸಿಟ್ಟು ದೊಡ್ಡ ವಿಷಯವಲ್ಲ. ರಷ್ಯಾ ಮತ್ತು ಚೀನಾದಂತಹ ದೈತ್ಯ ಶಕ್ತಿಗಳನ್ನೇ ಎದುರು ಹಾಕಿಕೊಳ್ಳಲು ಟ್ರಂಪ್ ಹಿಂಜರಿಯುವುದಿಲ್ಲ ಅಂತಾ ದರೆ ಪಾಕಿಸ್ತಾನ ಅಥವಾ ಒಮಾನ್ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತಾರೆ? ಆದರೆ ಪಾಪ, ಆ ದೇಶಗಳಾ ದರೂ ಏನು ಮಾಡಬೇಕು? ಟ್ರಂಪ್ ವಿಧಿಸಿರುವ ಷರತ್ತುಗಳು ಆ ದೇಶಗಳನ್ನು ಆತಂಕಕ್ಕೆ ತಳ್ಳಿವೆ.

ಇದನ್ನೂ ಓದಿ: Dr Vijay Darda Column: ಯಾರಾದರೂ ಜಿರಳೆ ಸಾಕುವುದನ್ನು ನೋಡಿದ್ದೀರಾ ?

ಪಾಕಿಸ್ತಾನದಲ್ಲಂತೂ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಆಸಿಂ ಮುನೀರ್‌ಗೆ ನೇರವಾಗಿಯೇ ಬಿಸಿ ತಟ್ಟಿದೆ. ಚಕ್ರವರ್ತಿಯ ಮಾತು ಕೇಳಬೇಕೋ ಅಥವಾ ತಮ್ಮ ದೇಶದ ಜನರ ಮಾತು ಕೇಳಬೇಕೋ ಎಂಬ ಗೊಂದಲದಲ್ಲಿ ಅವರು ಮುಳುಗಿದ್ದಾರೆ. ಹಾಗೆ ನೋಡಿದರೆ ಪಾಕಿಸ್ತಾ ನದ ಇಡೀ ಆಡಳಿತ ವ್ಯವಸ್ಥೆಯೇ ಈಗ ಒತ್ತಡಕ್ಕೆ ಸಿಲುಕಿದೆ.

‘ಅಬ್ರಹಾಂ ಒಪ್ಪಂದ’ಕ್ಕೆ ಸಹಿ ಹಾಕುವಂತೆ ಟ್ರಂಪ್ ಬಿಗಿ ಪಟ್ಟು ಹಿಡಿದು ಕುಳಿತಿದ್ದಾರೆ. ಅರಬ್ ದೇಶಗಳು ಕೂಡ ಈ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಟ್ರಂಪ್ ಕೇಳುತ್ತಿದ್ದಾರೆ. ಅಬ್ರಹಾಂ ಒಪ್ಪಂದ ಅಂದರೇನು? ೨೦೨೦ರಲ್ಲಿ ಅಮೆರಿಕವೇ ಯಜಮಾನಿಕೆ ವಹಿಸಿಕೊಂಡು ಈ ಒಪ್ಪಂದಕ್ಕೆ ಯುಎಇ ಸಹಿ ಹಾಕುವಂತೆ ನೋಡಿಕೊಂಡಿತ್ತು.

ಇಸ್ರೇಲ್ ದೇಶವನ್ನು ಸಾರ್ವಭೌಮ ಸ್ವತಂತ್ರ ದೇಶವೆಂದು ಗುರುತಿಸಬೇಕು ಎಂಬುದೇ ಈ ಒಪ್ಪಂದದ ಸಾರ. ಯುಎಇ ಬಳಿಕ ಮೊರಕ್ಕೋ ಮತ್ತು ಸುಡಾನ್ ದೇಶಗಳು ಅದಕ್ಕೆ ಸಹಿ ಹಾಕಿ ದ್ದವು. ಅದಕ್ಕೂ ಮೊದಲು 1979ರಲ್ಲೇ ಈಜಿಪ್ಟ್ ಮತ್ತು 1994ರಲ್ಲಿ ಜೋರ್ಡಾನ್ ದೇಶಗಳು ಇಸ್ರೇಲ್‌ಗೆ ಸಾರ್ವಭೌಮ ದೇಶದ ಮಾನ್ಯತೆ ನೀಡಿವೆ.

ದಶಕಗಳ ಬಳಿಕ ಕೆಲ ಕೊಲ್ಲಿ ದೇಶಗಳು ಇಸ್ರೇಲ್‌ಗೆ ರಾಷ್ಟ್ರದ ಮಾನ್ಯತೆ ನೀಡಿದ್ದವು. ಆದರೆ ಇಸ್ರೇಲ್ ಒಂದು ರಾಷ್ಟ್ರವೆಂದು ಒಪ್ಪಿಕೊಳ್ಳಲು ಪಾಕಿಸ್ತಾನ ನಿರಾಕರಿಸಿತ್ತು. ಕಾರಣ ಅದು ಬಹಳ ವರ್ಷ ಗಳಿಂದ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುತ್ತಾ ಬಂದಿತ್ತು. ಇಸ್ರೇಲ್ ನಂಬಿಕಸ್ತ ದೇಶವಲ್ಲ ಎಂಬುದು ಅದರ ನಂಬಿಕೆಯಾಗಿತ್ತು. ಪಾಕಿಸ್ತಾನವನ್ನು ಆಳಿದ ನಾಯಕರು ಕಾಲಕಾಲಕ್ಕೆ ಕಠಿಣವಾದ ಇಸ್ರೇಲ್ ವಿರೋಧಿ ಧೋರಣೆಗಳನ್ನೇ ಅನುಸರಿಸಿದ್ದರು.

ದಶಕಗಳ ಕಾಲ ಇಸ್ರೇಲನ್ನು ವಿರೋಧಿಸಿಕೊಂಡು ಬಂದ ಪಾಕಿಸ್ತಾನಕ್ಕೆ ಈಗ ಟ್ರಂಪ್ ಬಿಸಿತುಪ್ಪ ವಾಗಿ ಪರಿಣಮಿಸಿದ್ದಾರೆ. ಪಾಕಿಸ್ತಾನ ಕೂಡ ಇಸ್ರೇಲನ್ನು ಅಧಿಕೃತವಾದ ದೇಶವೆಂದು ಗುರುತಿಸ ಬೇಕೆಂದು ವಾಷಿಂಗ್ಟನ್‌ನ ಚಕ್ರವರ್ತಿಗಳು ಕೇಳುತ್ತಿದ್ದಾರೆ. ಅದು ಪಾಕ್‌ನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಆಸಿಂ ಮುನೀರ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಟ್ರಂಪ್ ಹೇಳಿದಂತೆಲ್ಲ ಕೇಳಲು ಸಾಧ್ಯವಿಲ್ಲ ಎಂದು ಅವರಿಬ್ಬರೂ ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ ಟ್ರಂಪ್ ಸಿಟ್ಟಿಗೆದ್ದರೆ ಏನು ಮಾಡುವುದು ಎಂದು ಒಳಗೊಳಗೇ ಬೆವರುತ್ತಿದ್ದಾರೆ. ಇಷ್ಟಕ್ಕೂ ಟ್ರಂಪ್‌ಗೆ ತನ್ನ ಮಾತನ್ನು ಯಾರಾದರೂ ಕೇಳುತ್ತಿಲ್ಲ ಅಂತಾದರೆ ಅದನ್ನು ಹೊಟ್ಟೆಗೆ ಹಾಕಿ ಕೊಳ್ಳುವ ದೊಡ್ಡ ಗುಣ ಕಿಂಚಿತ್ತೂ ಇಲ್ಲ.

ಅದರಲ್ಲೂ, ಇಷ್ಟು ದಿನ ತಾನು ಹೇಳಿದಂತೆ ಕೇಳುತ್ತಿದ್ದ ಸ್ನೇಹಿತ ರಾಷ್ಟ್ರಗಳೇ ಈಗ ತನಗೆ ವಿರುದ್ಧ ವಾಗಿ ನಿಂತಿವೆ ಎಂಬುದನ್ನಂತೂ ಸಹಿಸಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ. ನೂರು ಉಪಕಾರ ಮಾಡಿದರೂ ಒಂದು ಅಪಕಾರ ಮಾಡಿದರೆ ನೀವು ವಿಲನ್ ಆಗುತ್ತೀರಿ. ಅಂತೆಯೇ ಇಷ್ಟು ದಿನ ಅಮೆರಿಕ ಹೇಳಿದಂತೆಲ್ಲಾ ಕೇಳಿ, ಈಗ ಒಂದೇ ಒಂದು ವಿಷಯಕ್ಕೆ ವಿರೋಧ ವ್ಯಕ್ತಪಡಿಸಿ ಪಾಕಿಸ್ತಾನವು ಅಮೆರಿಕದ ಸ್ನೇಹ ಕಳೆದುಕೊಳ್ಳುತ್ತದೆಯೇ? ಆದರೆ ಅಮೆರಿಕದ ಮೇಲೆ ಪಾಕಿಸ್ತಾನ ಬಹಳಷ್ಟು ವಿಷಯಗಳಲ್ಲಿಅವಲಂಬಿತವಾಗಿದೆ.

ಅಮೆರಿಕದಿಂದ ಪಾಕ್‌ಗೆ ಸಾಕಷ್ಟು ನೆರವು ಹರಿದು ಬರುತ್ತಿದೆ. ಇತಿಹಾಸದುದ್ದಕ್ಕೂ ಪಾಕಿಸ್ತಾನವು ಅಮೆರಿಕದ ಋಣದಲ್ಲೇ ಬದುಕಿದೆ. ಹೀಗಾಗಿ ಪರಿಣಾಮ ಸ್ಪಷ್ಟವಾಗಿದೆ: ನೆರವು ಪಡೆದವರು ಅಗತ್ಯ ಬಿದ್ದಾಗ ತಮ್ಮ ರಾಜನಿಷ್ಠೆಯನ್ನು ಸಾಬೀತು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ದೊಡ್ಡ ಬೆಲೆ ತೆರುವಂತೆ ಚಕ್ರವರ್ತಿಯೇ ನೋಡಿಕೊಳ್ಳುತ್ತಾನೆ.

ಈಗ ಒಮಾನ್‌ನ ಸಮಸ್ಯೆಗೆ ಬರೋಣ. ಒಮಾನ್ ಮತ್ತು ಅಮೆರಿಕದ ನಡುವಿನ ಸಿಟ್ಟು, ಸೆಡವು, ಸಹಕಾರದ ಸಂಬಂಧಗಳು 1790ರಷ್ಟು ಹಿಂದಕ್ಕೆ ಹೋಗುತ್ತವೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕವು ಅತ್ಯಂತ ಹಳೆಯ ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶಗಳಲ್ಲಿ ಒಮಾನ್ ಕೂಡ ಒಂದು. ಇಸ್ರೇಲ್ ಅಸ್ತಿತ್ವಕ್ಕೆ ಬಂದಿದ್ದು ಬಹಳ ತಡವಾಗಿ, 1948ರಲ್ಲಿ. ಒಮಾನ್ ಯಾವತ್ತೂ ಅದನ್ನು ಅಧಿಕೃತವಾಗಿ ಗುರುತಿಸಲೇ ಇಲ್ಲ.

ಆದರೆ ಚಕ್ರವರ್ತಿಯ ಸಿಟ್ಟಿಗೆ ಕಾರಣ ಅದಲ್ಲ. ಹೊರ್ಮುಜ್ ಜಲಸಂಧಿಯನ್ನು ದಾಟುವ ಹಡಗು ಗಳಿಗೆ ನಾವಿಬ್ಬರೂ ಹೇಗೆ ಜಂಟಿಯಾಗಿ ಸೇವಾ ಶುಲ್ಕ ವಿಧಿಸೋಣ ಎಂಬ ಬಗ್ಗೆ ಇರಾನ್ ಮತ್ತು ಒಮಾನ್ ದೇಶಗಳು ಮಾತುಕತೆ ನಡೆಸುತ್ತಿವೆಯಂತೆ. ಅದನ್ನು ಕೇಳಿ ಟ್ರಂಪ್ ಕೆರಳಿದ್ದಾರೆ.

ಇರಾನ್ ಮತ್ತು ಒಮಾನ್ ನಡುವಿನ ಮಾತುಕತೆಯ ವಿವರ ಹೇಗೋ ವಾಷಿಂಗ್ಟನ್‌ಗೆ ತಲುಪಿದೆ. ಅದನ್ನು ಕೇಳಿ ಚಕ್ರವರ್ತಿಗೆ ಸುಮ್ಮನಿರಲು ಸಾಧ್ಯವಾಗುತ್ತಿಲ್ಲ.

ಏಕೆಂದರೆ ಒಮಾನ್ ಕೂಡ ಬಹಳ ವರ್ಷಗಳಿಂದ ಅಮೆರಿಕದ ಋಣದಲ್ಲಿ ಬದುಕುತ್ತಿದೆ. ಅದು ಅಮೆರಿಕದಿಂದ ಸಾಕಷ್ಟು ನೆರವು ಪಡೆದಿದೆ. ಅಮೆರಿಕದ ನಾಯಕರು ಒಮಾನ್‌ನ ಆಡಳಿತಗಾರ ರನ್ನು ಬಹಳ ಪ್ರೀತಿಯಿಂದ, ತಮ್ಮದೇ ಕುಟುಂಬದ ನಂಬಿಕಸ್ಥ ಸದಸ್ಯರಂತೆ ನಡೆಸಿಕೊಂಡಿದ್ದಾರೆ. ಈ ದೃಷ್ಟಿಯಿಂದ ನೋಡಿದಾಗ, ಒಮಾನ್ ಈಗ ತನ್ನ ಹಿತೈಷಿಯ ಹಿತಾಸಕ್ತಿಗೇ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.

ಆಸ್ಥಾನದ ವಿದ್ವಾಂಸರಲ್ಲಿ ಯಾರಾದರೂ ಒಬ್ಬರು ಟ್ರಂಪ್‌ಗೆ ಒಮಾನ್‌ನ ವಿದೇಶಾಂಗ ಸಚಿವ ಸಯ್ಯಿದ್ ಬದರ್ ಬಿನ್ ಹಮದ್ ಅಲ್ ಬುಸೈದಿ ಆಡಿದ ಮಾತುಗಳ ಬಗ್ಗೆ ಕಿವಿ ಕಚ್ಚಿರಬಹುದು. ಅಲ್ ಬುಸೈದಿ ಬರೆದ ಒಂದು ಲೇಖನದಲ್ಲಿ ‘ಅಮೆರಿಕ ಮಿಲಿಟರಿ ಸಂಘರ್ಷಗಳನ್ನು ನಡೆಸಿ ತನ್ನದೇ ವಿಶ್ವಾಸಾರ್ಹತೆಯನ್ನು ಕೆಡಿಸಿಕೊಂಡಿದೆ. ಅದರಿಂದಾಗಿ ಕ್ರಮೇಣ ತನ್ನ ವಿದೇಶಾಂಗ ನೀತಿಯ ಮೇಲೂ ಹಿಡಿತ ಕಳೆದುಕೊಳ್ಳುತ್ತಿದೆ ಎಂದು ಹೇಳಿದ್ದರು.

ಇರಾನ್‌ನಿಂದ ಅಮೆರಿಕಕ್ಕೆ ಯಾವ ತೊಂದರೆಯೂ ಇಲ್ಲ ಎಂದು ಅವರು ಹೇಳಿರುವುದು ಸಾಮಾ ಜಿಕ ಜಾಲತಾಣಗಳಲ್ಲೂ ಹರಿದಾಡಿತ್ತು. ವಸ್ತುಸ್ಥಿತಿ ಹೀಗಿರುವಾಗ ಚಕ್ರವರ್ತಿಗೆ ಸಿಟ್ಟು ಬರದೆ ಇರುತ್ತದೆಯೇ? ವಾಷಿಂಗ್ಟನ್‌ನಿಂದ ಬಂದಿರುವ ಸಂದೇಶ ಸ್ಪಷ್ಟವಾಗಿದೆ: ಒಮಾನ್ ಕೂಡ ಬೇರೆಲ್ಲಾ ದೇಶಗಳಂತೆ ನಡೆದುಕೊಳ್ಳಬೇಕು, ಇಲ್ಲದಿದ್ದರೆ ಕಠಿಣ ಕ್ರಮಗಳನ್ನು ಎದುರಿಸಬೇಕು. ಇದನ್ನು ಗಮನಿಸಿದ ಬಳಿಕ ನಮ್ಮೆಲ್ಲರ ಮನಸ್ಸಿಗೂ ಬರಬಹುದಾದ ಹಾಡು ‘ಅಲ್ಲಾ ಜಾನೇ ಕ್ಯಾ ಹೋಗಾ ಆಗೇ!’ (ಮುಂದೇನಾಗುತ್ತದೆಯೋ ದೇವರೇ ಬಲ್ಲ!)

ಡಾ.ವಿಜಯ್‌ ದರಡಾ

View all posts by this author