ವಿದೇಶವಾಸಿ
ಇತ್ತೀಚೆಗೆ ನೆಹಾ ಮೇಧಾವಿ... ಅಲ್ಲ, ಅಲ್ಲ, ಮಹಾ ಮೇಧಾವಿ ಎಂದು ಕರೆಸಿಕೊಳ್ಳುವ, ತನ್ನಷ್ಟು ಬುದ್ಧಿವಂತರು ಈ ಲೋಕದ ಯಾರೂ ಇಲ್ಲ ಎಂಬಂತೆ ನಟಿಸುವ, ಕೊಳೆತ ತಲೆಯನ್ನು ಭುಜದ ಮೇಲೆ ಹೊತ್ತು ಓಡಾಡುತ್ತಿರುವವರೊಬ್ಬರು ಆಡುತ್ತಿದ್ದ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆ. ಅವರ ಬಹುತೇಕ ಮಾತುಗಳು ಸತ್ಯಕ್ಕೆ ದೂರ ಎಂದು ತಿಳಿದಿದ್ದರೂ ಆ ಕುರಿತಾಗಿ ಏನೂ ಹೇಳುವುದಿಲ್ಲ, ಏಕೆಂದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಇತ್ತೀಚಿನ ದಿನಗಳಲ್ಲಿ ಯಾರು ಏನೇ ಹೇಳಿದರೂ ಅದಕ್ಕೆ ‘ಪ್ರಜಾಪ್ರಭುತ್ವ’, ‘ವಾಕ್ ಸ್ವಾತಂತ್ರ್ಯ’ದ ಕವಚ ಬೇರೆ.
ಪ್ರತಿಯೊಬ್ಬರಿಗೂ ಭಾರತದ ಸಂವಿಧಾನ ಆ ಹಕ್ಕನ್ನು ಕೊಟ್ಟಿದೆ. ಹಾಗೆಯೇ ಯಾರಾದರೂ ಆಡಿದ ಮಾತನ್ನು ಖಂಡಿಸುವ, ಕೃತಿಯನ್ನು ವಿರೋಧಿಸುವ ಹಕ್ಕನ್ನೂ ಅದೇ ಸಂವಿಧಾನ ನೀಡಿದೆ. ಆದರೆ ಅರ್ಥವಿಲ್ಲದ ಮಾತಾಡುವುದೇ ಚಾಳಿಯಾಗಬಾರದು. ಮಾತಿನಲ್ಲಿ ಸತ್ಯಾಂಶ, ತತ್ತ್ವಾಂಶ, ಸಿದ್ಧಾಂತ, ಏನಾದರೂ ಒಂದು ಅಂಶವಾದರೂ ಇರಬೇಕು.
ಇಲ್ಲವಾದರೆ ಅದು ಸಂತೆಯಲ್ಲಿ ಅಪಾನವಾಯು ಬಿಟ್ಟು, ತಾವೇ ಮೂಸಿ, ಖುಷಿಪಟ್ಟಂತೆ. ಹಾಗೆ ತನ್ನದನ್ನೇ ಆಘ್ರಾಣಿಸಿ, ಪರಿಮಳ ಎಂದು ಹೇಳಿಕೊಳ್ಳುವ ಆ ವ್ಯಕ್ತಿಯ ಹೆಸರು ತಿಳಿದಿದ್ದರೂ, ಅಂಥವರಿಗೆ ಪ್ರಚಾರ ಕೊಡುವುದು ಬೇಡ, ಅಥವಾ ಸ್ವತಃ ಅವರೇ ರಸ್ತೆಯಲ್ಲಿ ಬಿದ್ದು ಹೊರಳಾಡಿ ದರೂ, ಅವರ ಮರ್ಯಾದೆಯನ್ನು ನಾವು ಚರಂಡಿಗೆ ಸುರಿಯುವುದು ಬೇಡ ಎಂಬ ಉದ್ದೇಶದಿಂದ, ಆ ವ್ಯಕ್ತಿಯ ಹೆಸರನ್ನು ಇಲ್ಲಿ ಹೇಳುತ್ತಿಲ್ಲ.
ಇದನ್ನೂ ಓದಿ; Kiran Upadhyay Column: ಸ್ಯಾಡಿಯೋ ಮಾನೆ- ಗೋಲಲ್ಲೇ ಸ್ಫೂರ್ತಿಯ ಸೆಲೆ
ಅಷ್ಟರ ಮಟ್ಟಿಗಿನ ಸಂಸ್ಕಾರ ನಮಗಂತೂ ನಮ್ಮ ಹಿರಿಯರಿಂದ ಸಿಕ್ಕಿದೆ. ತಂದೆ ಭಾರತದ ಸೇನೆಗೆ ಸೇವೆ ಸಲ್ಲಿಸಿದ್ದರು, ಈ ವ್ಯಕ್ತಿ ತನ್ನ ಸಂತಾನವೇ ಅಲ್ಲ ಅನ್ನುವಷ್ಟು ಅವರಿಗೆ ಬೇಜಾರಾಗಿದೆ, ಇತ್ಯಾದಿ ಮಾತುಗಳು ಕೇಳಿ ಬರುತ್ತಿದೆ. ಆದರೆ ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾಯಿಸಿದ ಹಿಂಸಾ ಮಾದರಿ ನಮಗೆ ಸ್ಫೂರ್ತಿ, ಅವರಿಗೆ ಧನ್ಯವಾದ ಎಂದು ಹೇಳುವ ತಂಡದ ವಿತಂಡ ನಾಯಕಿಯಾಗಿರುವ ಇವರು, ಸೊಂಟದ ಮೇಲೆ ಒಂದು ಕೈ ಇಟ್ಟು, ಇನ್ನೊಂದು ಕೈಯನ್ನು ಮೇಲಕ್ಕೆತ್ತಿ, ಆತ್ಮವಿಶ್ವಾಸ ತುಂಬಿದವರಂತೆ, ಅಧಿಕಾರಯುತ ವಾಗಿ ‘ಭಾರತದ ಹಿಂದೂಗಳು ತ್ರಿವರ್ಣದ ರಾಷ್ಟ್ರಧ್ವಜವನ್ನು ತಮ್ಮದು ಎಂದು ಒಪ್ಪಿಕೊಳ್ಳುವುದಿಲ್ಲ, ಏಕೆಂದರೆ ಹಿಂದೂಗಳು ಮೂರರ ಸಂಖ್ಯೆಯನ್ನು ಅಶುಭ ಎಂದು ಪರಿಗಣಿಸುತ್ತಾರೆ’ ಎಂದು ಹೇಳುತ್ತಿದ್ದುದನ್ನು ಕೇಳಿಸಿಕೊಂಡಾಗ ಇವರ ಬುದ್ಧಿ ಮೇಲಿನ ಮನೆಯಿಂದ ಜಾರಿ ರಸ್ತೆಗೆ ಬಿದ್ದಿದೆ ಎಂದೆನಿಸಿತು.
ಸತ್ಯದ ತಲೆಯ ಮೇಲೆ ಸುಳ್ಳಿನ ಸುತ್ತಿಗೆ ಏಟು ಕೊಡುವುದು ಹೇಗೆ ಎನ್ನುವುದನ್ನು ಇವರನ್ನು ನೋಡಿ ಕಲಿಯಬೇಕು. ವಿಪರ್ಯಾಸ ಎಂದರೆ, ನಮ್ಮ ದೇಶದಲ್ಲಿ ಈ ರೀತಿಯ ಮಾತುಗಳನ್ನು ಆನಂದಿಸುವ, ಸತ್ಯ ಎಂದು ನಂಬುವ ಜನರೂ ಇದ್ದಾರೆ. ನಮಗೆ ಯಾವುದೋ ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ, ಒಂದು ಪಕ್ಷ, ಒಂದು ಸನ್ನಿವೇಶ, ಒಂದು ಘಟನೆ, ಇಷ್ಟವಾಗದಿದ್ದಾಗ, ಅದನ್ನು ವಿರೋಧಿಸಿ ಯಾರಾದರೂ ಏನೇ ಮಾತಾಡಿದರೂ ಇಷ್ಟಪಡುವ ಜನರಿಗೆ ಏನು ಹೇಳಬೇಕೋ ಗೊತ್ತಿಲ್ಲ.
ಇರಲಿ, ವಿಷಯ ಅದಲ್ಲ. ಯಾರಾದರೂ ಏನಾದರೂ ಹೇಳಿದರೆ ಅದನ್ನು ಹಾಗೆಯೇ ನಂಬಬೇಕೇ? ಅಥವಾ ಅದರ ಹಿಂದಿನ ಸತ್ಯಾಸತ್ಯತೆಯನ್ನು ತಿಳಿಯಬೇಕೇ? ಹಿಂದೂಗಳಿಗೆ ‘ಮೂರು’ ಅಶುಭ ಎನ್ನುವ ಮಾತಿನ ಹಿಂದೆ ನಿಜಾಂಶ ಎಷ್ಟಿದೆ? ಹಾಗೆ ನೋಡಿದರೆ ಹಿಂದೂ ಧರ್ಮದಲ್ಲಿ ಮೂರರ ಸಂಖ್ಯೆ ಮಹತ್ವದ್ದೇ ಆಗಿದೆ. ಮೂರರ ಸಂಖ್ಯೆಗೆ ವಿಶೇಷವಾದ ಸ್ಥಾನ ಮರ್ಯಾದೆ, ಪಾವಿತ್ರ್ಯ ಇದೆ.
ಹಿಂದೂ ಧರ್ಮದಲ್ಲಿ ಮೂರರ ಪರಿಕಲ್ಪನೆ ಪುನಃ ಪುನಃ ಕಾಣಿಸಿಕೊಳ್ಳುತ್ತದೆ. ಸನಾತನ ಮತ್ತು ಹಿಂದೂ ತತ್ತ್ವಶಾಸ್ತ್ರದ ವಿವಿಧ ಹಂತಗಳಲ್ಲಿ ಮೂರರ ಔಚಿತ್ಯ ಎದ್ದು ಕಾಣಿಸುತ್ತದೆ. ಉದಾಹರಣೆಗೆ, ಹಿಂದೂ ಧರ್ಮದ ಪ್ರಕಾರ, ಈ ಜಗತ್ತಿಗೆ ಮೂಲ ಕಾರಣಗಳು ಮೂರು. ಸೃಷ್ಟಿ, ಸ್ಥಿತಿ ಮತ್ತು ಲಯ. ಈ ಮೂರೂ ಇಲ್ಲದಿದ್ದರೆ ಜಗತ್ತೇ ನಡೆಯುವುದಿಲ್ಲ. ಈ ಮೂರರಲ್ಲಿ ಯಾವುದೇ ಒಂದು ಇಲ್ಲದಿದ್ದರೂ ಜಗತ್ತು ನಡೆಯುವುದಿಲ್ಲ ಅನ್ನಿ, ಆದರೆ ಈ ಮೂರು ಜಗತ್ತು ನಡೆಯಲು ಅನಿವಾರ್ಯ. ಈ ಮೂರನ್ನು ನಿರ್ವಹಿಸುವ, ಕಾಪಾಡುವ ದೇವರುಗಳು ತ್ರಿಮೂರ್ತಿಗಳು.
‘ತ್ರಿ’ ಎಂದರೆ ಮೂರು ಎಂದರ್ಥ. ಅದರಲ್ಲಿ ಬ್ರಹ್ಮದೇವ ಸೃಷ್ಟಿ ಅಥವಾ ಹುಟ್ಟಿಸುವ ಕಾರ್ಯವನ್ನು ನೋಡಿಕೊಂಡರೆ, ಸ್ಥಿತಿ, ಸಮತೋಲನ, ಅಸ್ತಿತ್ವ ಅಥವಾ ಸಂರಕ್ಷಣೆಯನ್ನು ಮಹಾವಿಷ್ಣು ನೋಡಿಕೊಳ್ಳು ತ್ತಾನೆ. ಇನ್ನು ಲಯ, ಪರಿಹಾರ, ಕರಗುವಿಕೆ, ನಿರ್ಗಮನ, ವಿನಾಶ, ಅಥವಾ ಹಿಂತಿರುಗಿ ಹೋಗುವುದು, ಮೂಲದಲ್ಲಿ ಸೇರಿಕೊಳ್ಳುವುದು, ಲೀನವಾಗುವುದಕ್ಕೆ ಅಧಿಪತಿ ಶಿವ. ಇಲ್ಲಿ ವಿನಾಶ ಎಂದರೆ, ಹಳೆಯ ಸ್ಥಿತಿಯ ಅಂತ್ಯ ಮತ್ತು ಹೊಸ ಸೃಷ್ಟಿಯ ಉತ್ಪನ್ನ ಅಥವಾ ಹೊಸ ಸೃಷ್ಟಿಗೆ ದಾರಿ ಮಾಡಿಕೊಡುವುದು ಎಂಬ ಅರ್ಥ.
ಅಂದರೆ, ಇದೊಂದು ಕಾಲಚಕ್ರದಂತೆ ತಿರುಗುತ್ತಿರುವಂತಹ ಕ್ರಿಯೆ. ‘ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ’ ಎಂಬ ಮಾತಿದೆಯಲ್ಲ, ಹಾಗೆ ಇದನ್ನು ಕಾಪಾಡುತ್ತಿರುವವರು ತ್ರಿಮೂರ್ತಿಗಳು. ಅದಕ್ಕೆ ತಕ್ಕಂತೆ, ಮನುಷ್ಯನ ಬದುಕಿಗೆ ಬೇಕಾದ ಧನ, ವಿದ್ಯೆ ಮತ್ತು ಶಕ್ತಿ, ಇದಕ್ಕೆ ಅಧಿಪತಿಯಾದವರು ತ್ರಿದೇವಿಯಂದಿರು. ಕ್ರಮವಾಗಿ, ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿ. ಇನ್ನೂ ಹೇಳುವುದಾದರೆ, ಮಹಾಲಕ್ಷ್ಮಿ ಸಂಪತ್ತು, ಸೌಂದರ್ಯ ಮತ್ತು ಸಮೃದ್ಧಿಯ ಸಂಕೇತವಾದರೆ, ಸರಸ್ವತಿ ಬುದ್ಧಿವಂತಿಕೆ, ಜ್ಞಾನ ಮತ್ತು ಸೃಜನಶೀಲತೆಯ ಸಂಕೇತವಾಗಿಯೂ, ಪಾರ್ವತಿ ಶಕ್ತಿ, ಸಮಯ ಮತ್ತು ರೂಪಾಂತರದ ಸಂಕೇತವಾಗಿಯೂ ಇದ್ದಾರೆ.
ಲಯಾಧಿಪತಿ ಶಿವನನ್ನು ತ್ರಿನೇತ್ರ ಅಥವಾ ಮೂರು ಕಣ್ಣುಳ್ಳವ ಎನ್ನುತ್ತಾರೆ. ಮೂರು ಕಣ್ಣುಗಳು ಸತ್ಯ, ಪ್ರಜ್ಞೆ ಮತ್ತು ಆನಂದವನ್ನು ಪ್ರತಿನಿಧಿಸುತ್ತವೆ. ಶಿವನ ಕೈಯಲ್ಲಿರುವ ಆಯುಧಕ್ಕೆ ತ್ರಿಶೂಲ ಎಂದು ಹೆಸರು. ಆ ಅಯುಧಕ್ಕೆ ಮೂರು ಮೊನಚುಗಳಿರುವುದರಿಂದ ಅದಕ್ಕೆ ತ್ರಿಶೂಲ ಎಂದು ಹೆಸರು. ಜತೆಗೆ, ಶಿವನ ಅರ್ಚನೆಗೆ ಬಳಸುವ ಬಿಲ್ವ ಪತ್ರೆಗೆ ಮೂರು ದಳಗಳು.
ಶಿವನನ್ನು ಪೂಜಿಸುವಾಗ ಹಣೆಗೆ ಲೇಪಿಸಿಕೊಳ್ಳುವ ಭಸ್ಮವೂ ಮೂರು ಪಟ್ಟಿಯದ್ದು. ದೇವರನ್ನು ಭಜಿಸುವಾಗ, ಜಪಿಸುವಾಗ ಪಠಿಸುವ ‘ಓಂ’ಕಾರದ ಹಿಂದೆಯೂ ಮೂರರ ಮಹತ್ವವಿದೆ. ‘ಓಮ’ ಪದ ‘ಅ’, ‘ಉ’ ಮತ್ತು ‘ಮ’ ಎಂಬ ಮೂರು ಅಕ್ಷರಗಳು ಅಥವಾ ಮೂರು ಸ್ವರಗಳಿಂದ ಆದದ್ದು. ಇವೆಲ್ಲವೂ ಮೂರರ ಮಹತ್ವವನ್ನು ಸಾರಿ ಹೇಳುತ್ತದೆ. ಮೂರರ ಮಹತ್ವ ಇನ್ನೂ ಇದೆಯೇ ಎಂದರೆ, ಇದೆ. ಮನುಷ್ಯನಲ್ಲಿರುವ ಗುಣಗಳನ್ನು ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ ಎಂದು ವಿಂಗಡಿಸಿದ್ದಾರೆ. ಈ ಮೂರು ಪ್ರಮುಖ ಗುಣಗಳಲ್ಲಿ, ಒಂದೊಂದರಲ್ಲಿಯೂ ಮತ್ತೆ ಮೂರು ಗುಣಗಳು ಅಡಕವಾಗಿವೆ.
ಸತ್ವ ಗುಣದಲ್ಲಿ ಶುದ್ಧತೆ, ಸ್ಪಷ್ಟತೆ ಮತ್ತು ಸಾಮರಸ್ಯ ಅಡಕವಾದರೆ, ರಜೋಗುಣದಲ್ಲಿ ಉತ್ಸಾಹ, ಬಯಕೆ ಮತ್ತು ಚಟುವಟಿಕೆಯೂ, ತಮೋ ಗುಣದಲ್ಲಿ ಜಡತ್ವ, ಅಜ್ಞಾನ ಮತ್ತು ಕತ್ತಲೆ ಒಳಗೊಂಡಿವೆ. ಕಾಲವನ್ನೂ ಭೂತ, ವರ್ತಮಾನ ಮತ್ತು ಭವಿಷ್ಯಕಾಲ, ಹೀಗೆ ಮೂರು ಕಾಲಗಳನ್ನಾಗಿ ವಿಂಗಡಿಸಿದ್ದಾರೆ. ಅದರ ಪ್ರಕಾರ, ಸಂಧ್ಯಾವಂದನೆಯೂ, ದೇವಸ್ಥಾನಗಳಲ್ಲಿ ದೇವರಿಗೆ ತ್ರಿಕಾಲ ನೈವೇದ್ಯ, ಪೂಜೆ ಇತ್ಯಾದಿಗಳೂ ನಡೆಯುತ್ತವೆ. ಆಚರಣೆಯನ್ನು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ, ಹೀಗೆ ಮೂರು ವಿಧದಲ್ಲಿ ವಿಂಗಡಿಸಲಾಗಿದೆ. ಸ್ಥಳಗಳ ವಿಂಗಡಣೆಯಲ್ಲಿಯೂ ಮೂರರ ಅಂಕಿ ಮಹತ್ವದ್ದಾಗಿದ್ದು, ಭೂಲೋಕ, ಸ್ವರ್ಗ ಲೋಕ ಅಥವಾ ಊರ್ಧ್ವಲೋಕ, ಪಾತಾಳಲೋಕ ಅಥವಾ ಅಧೋ ಲೋಕ ಎಂದು ವಿಂಗಡಿಸಿದ್ದಾರೆ.
ಒಂದು ಪರಿಶುದ್ಧ, ಪರಿಪೂರ್ಣ ಕಾರ್ಯಕ್ಕೆ ಕಾಯಾ- ವಾಚಾ-ಮನಸಾ ಮೂರೂ ಒಟ್ಟಿಗೆ ಸೇರಬೇಕು ಎಂಬ ನಂಬಿಕೆಯಿದೆ. ಹಿಂದೂ ಧರ್ಮದ ಪ್ರಕಾರ, ಮನುಷ್ಯನ ಸಂಬಂಧಗಳೂ ಮೂರು ವಿಧವಾದದ್ದು. ಒಂದು, ಈ ಭೌತಿಕ ಜಗತ್ತಿನೊಂದಿಗಿನ ಸಂಬಂಧ, ಆದಿ ಭೌತಿಕ. ದೇವರು, ದೈವದ ಜತೆಯ ಸಂಬಂಧ, ಆದಿ ದೈವಿಕ ಮತ್ತು ಮನುಷ್ಯ ತನ್ನ ಆತ್ಮದೊಂದಿಗೆ ಮಾಡಿಕೊಳ್ಳುವ ಸಂಬಂಧ, ಆಧ್ಯಾತ್ಮಿಕ. ಇದರೊಂದಿಗೆ ಮನುಷ್ಯನ ಅವಸ್ಥೆಗಳು ಅಥವಾ ಮನಸ್ಸು ಅನುಭವಿಸುವ ಸ್ಥಿತಿಗಳೂ ಮೂರು.
ಕಣ್ಣು, ಕಿವಿ, ಮೂಗು ಇತ್ಯಾದಿಗಳಿಂದ ಹೊರಗಿನ ಜಗತ್ತಿನ ವಸ್ತು, ವಿಷಯಗಳನ್ನು ಅನುಭವಿಸುವ ಜಾಗೃತ ಅವಸ್ಥೆ, ಹೊರಜಗತ್ತು ಇಲ್ಲದೇ, ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಂಡು ಮತ್ತು ಹಿಂದಿನ ಅನುಭವಗಳ ಮೂಲಕ ಕನಸು ಕಾಣುವ ಸ್ವಪ್ನ ಅವಸ್ಥೆ, ಜಾಗೃತವೂ ಅಲ್ಲದ, ಕನಸನ್ನೂ ಕಾಣದ, ಸುಖಕರವಾದ ಗಾಢ ನಿದ್ರೆಯ ಸುಷುಪ್ತಿ ಅವಸ್ಥೆ. ಯೋಗಶಾಸ್ತ್ರದಲ್ಲಿಯೂ ಮೂರಕ್ಕೆ ಅಷ್ಟೇ ಮಹತ್ವವಿದೆ.
ಯೋಗ, ಅಂಗರಚನಾ ಶಾಸ್ತ್ರದಲ್ಲಿ ಬೆನ್ನುಹುರಿಯಿಂದ ಹಾದು ಹೋಗುವ ಪ್ರಾಣದಲ್ಲಿ ಇಡಾ, ಪಿಂಗಳಾ ಮತ್ತು ಸುಶುಮ್ನ ಎಂದು ಮೂರು ನಾಡಿಗಳನ್ನು ಗುರುತಿಸಲಾಗಿದೆ. ಇಡಾ ಅಥವಾ ಚಂದ್ರನಾಡಿ ತಂಪನ್ನೂ, ಪಿಂಗಳಾ ಅಥವಾ ಸೂರ್ಯ ಉಷ್ಣತೆಯನ್ನೂ, ಸುಶುಮ್ನ ನಾಡಿ ಸಮತೋಲನವನ್ನೂ ಕಾಪಾಡುತ್ತವೆ. ಒಂದು ವೇಳೆ ಹಿಂದೂಗಳಿಗೆ ಮೂರು ಅಶುಭವೇ ಆಗಿದ್ದರೆ, ತ್ರಿಮೂರ್ತಿಗಳನ್ನೂ, ತ್ರಿದೇವಿಯರನ್ನೂ ಪೂಜಿಸಬಾರದಿತ್ತು. ಅದರಲ್ಲೂ, ತ್ರಿನೇತ್ರ, ತ್ರಿಶೂಲಧಾರಿಯಾದ ಶಿವನನ್ನಂತೂ ಹತ್ತಿರಕ್ಕೆ ಸೇರಿಸಲೇಬಾರದಿತ್ತು.
ಆತನನ್ನು ಪೂಜಿಸುವಾಗ ಬಿಲ್ವಪತ್ರೆ ಬಳಸಬಾರದಿತ್ತು, ವಿಭೂತಿಯಲ್ಲಿ ಮೂರು ಪಟ್ಟಿ ಇರಬಾರದಾಗಿತ್ತು. ‘ಓಂ’ ಮಂತ್ರದ ಜತೆಗೆ, ಮೂರು ಆವೃತ್ತಿಯ ಕೆಲವು ಮಂತ್ರಗಳು ವರ್ಜ್ಯವಾಗಬೇಕಾಗಿತ್ತು. ಭಜನೆ ಮಾಡುವಾಗ ತಾಳವನ್ನೋ, ಕೈಯನ್ನೋ ಮೂರು ಬಾರಿ ತಟ್ಟಬಾರದಾಗಿತ್ತು. ತ್ರಿಕಾಲ ಪೂಜೆ, ತ್ರಿಕರ್ಣ ಶುದ್ಧಿ ಇವನ್ನೆಲ್ಲ ಬಿಡಬೇಕಿತ್ತು. ಮೂರು ಕಾಲ, ಮೂರು ಲೋಕ, ಯಾವುದನ್ನೂ ನಂಬಬಾರದಿತ್ತು.
ಪ್ರತಿನಿತ್ಯ ಗಡಿಯಾರದಲ್ಲಿ ಎರಡು ಬಾರಿ ಆಗುವ ಮೂರು ಗಂಟೆಗೆ ಹಿಂದೂಗಳು ಕೆಲಸ ಮಾಡಬಾರದಾಗಿತ್ತು, ತಿಂಗಳಿಗೆ ಒಮ್ಮೆ ಬರುವ ಮೂರನೆಯ ತಾರೀಖು, ವರ್ಷಕ್ಕೊಮ್ಮೆ ಬರುವ ಮೂರನೆಯ ತಿಂಗಳು, ಎಲ್ಲವೂ ಅಶುಭವೆಂದು ಪರಿಗಣಿಸಿ, ಆ ಸಮಯದಲ್ಲಿ ಯಾವ ಕೆಲಸವನ್ನೂ ಮಾಡಬಾರದಿತ್ತು. ಮೂರನೆಯ ರಸ್ತೆಯಲ್ಲಿ, ಮೂರರ ಸಂಖ್ಯೆಯ ಸೈಟಿನಲ್ಲಿ ಮನೆ ಕಟ್ಟಬಾರದಾಗಿತ್ತು.
ಕಟ್ಟಿದ ಮನೆಗೆ ಮೂರನೆಯ ಮಹಡಿ ಇರಬಾರದಾಗಿತ್ತು. ಯಾವ ಹಿಂದೂವಿನ ಮನೆಯಲ್ಲೂ ಮೂರು ವಾಹನ ಇರಬಾರದಾಗಿತ್ತು. ಯಾವ ಮನೆಯಲ್ಲೂ ಮೂರು ತರಕಾರಿ ತರಬಾರದಾಗಿತ್ತು, ಮೂರು ಪದಾರ್ಥ ಮಾಡಬಾರದಾಗಿತ್ತು. ಅದೆಲ್ಲ ಇರಲಿ, ಮೂರನೆಯ ಮಗು ಹುಟ್ಟಿದರೆ, ಕತ್ತು ಹಿಸುಕಿಯೋ, ಕೆರೆಗೆ ತಳ್ಳಿಯೋ ಕೊಂದುಬಿಡಬೇಕಿತ್ತು! ಅಲ್ಲವೇ? ಇದರ ಜತೆಗೇ ಇನ್ನೂ ಒಂದು ವಿಷಯ ಹೇಳಿಬಿಡುತ್ತೇನೆ.
ಬರೀ ಹಿಂದೂ ಧರ್ಮ ಮಾತ್ರವಲ್ಲ, ಇಸ್ಲಾಂ, ಕ್ರಿಶ್ಚಿಯನ್ ಇತ್ಯಾದಿ ಪ್ರಮುಖ ಧರ್ಮಗಳೂ ಸೇರಿದಂತೆ ಬಹುತೇಕ ಧರ್ಮಗಳಲ್ಲಿ ಮೂರನ್ನು ಅಪಶಕುನ ಎಂದು ಪರಿಗಣಿಸಲಾಗುವುದಿಲ್ಲ. ಅಷ್ಟಕ್ಕೂ ಮೂರು ಒಂದು ಸಂಖ್ಯೆ. ಮೂರು ಇಲ್ಲದೇ ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ. ನಾಲ್ಕು ಬರಬೇಕು ಎಂದರೆ ಅದಕ್ಕಿಂತ ಮೊದಲು ಮೂರು ಬರಲೇಬೇಕು. ಅದೂ ಎರಡರ ನಂತರವೇ ಬರಬೇಕು. ಅದು ಸಂಖ್ಯಾಶಾಸ, ಗಣಿತ. ಅದಕ್ಕೂ, ಒಂದು ಧರ್ಮಕ್ಕೂ ತಾಳೆ ಹಾಕಿ, ಗಂಟು ಕಟ್ಟಿ ಹೇಳುವುದಿದೆಯಲ್ಲ, ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ.
ಇದು ಯಾವುದೇ ಧರ್ಮಕ್ಕೆ, ಜನರಿಗೆ ಮಾಡುವ ಅವಮಾನವಲ್ಲ, ನಿತ್ಯ ಬದುಕಿನಲ್ಲಿ ಪ್ರತಿಯೊಬ್ಬರೂ ಬಳಸುವ ಸಂಖ್ಯಾಶಾಸಕ್ಕೆ ಮಾಡುವ ಅವಮಾನ. ಮಂಗಳವಾರವಾದರೇನು? ಶನಿವಾರವಾದರೇನು? ಏಳೂ ದಿನ ದೇವರದ್ದೇ... ಮೂರಾದರೇನು? ಏಳಾದರೇನು? ಎಲ್ಲ ಸಂಖ್ಯೆಗಳೂ ಮಹತ್ವದ್ದೇ... ತಲೆಯೊಳಗೆ ಯಾವ ಸಂಖ್ಯೆಯೂ ಇಲ್ಲದೇ ಸೊನ್ನೆ ಸುತ್ತಿಕೊಂಡಿರುವವರಿಗೆ ಇದು ಅರ್ಥವಾಗುವುದಿಲ್ಲ! ಹಾಗೆಯೇ ಅಂಥವರ ಮಾತುಗಳನ್ನು ನಂಬು ವವರಿಗೂ... ಅಂಥವರನ್ನು ಸಮರ್ಥಿಸಿಕೊಳ್ಳುವವರಿಗೂ...!