ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kiran Upadhyay Column: ಇರಾಣ...ಯಾಕಿಷ್ಟು ಹೈರಾಣ...!?

ಸೌದಿ ಅರೇಬಿಯಾಕ್ಕೆ ಬಂದ ಮೇಲೆ ನಾನು ಇರಾಣದ ರಾಜಕೀಯದ ಕುರಿತು ಹೆಚ್ಚಿನ ಮಾಹಿತಿ ಪಡೆಯ ಲಾರಂಭಿಸಿದೆ. ಅಬ್ಬಾಸ್ ಭಾರತದಲ್ಲಿ ಓದಲು ಬಂದಾಗ ‘ಇಂಪೆರಿಯಲ್ ಸ್ಟೇಟ್ ಆಫ್ ಇರಾಣ’ದಲ್ಲಿ ಶಾ ಮೊಹಮ್ಮದ್ ರೆಜಾ ಪಹಲಾವಿ ರಾಜಾಡಳಿತ ನಡೆಸುತ್ತಿದ್ದ. ಸುಮಾರು 4 ದಶಕಗಳ ಆಡಳಿತ ನಡೆಸಿದ್ದ ಆತ ಇರಾಣಿನ ‘ಶಹನ್ಶಾ’ (ರಾಜರ ರಾಜ) ಎಂದೇ ಖ್ಯಾತನಾಗಿದ್ದ.

ವಿದೇಶ ವಾಸಿ

ಅದು 1979-80ರ ಕಾಲ. ಆಗ ನಾನು ನಾಲ್ಕು ಮತ್ತು ಐದನೆಯ ತರಗತಿಯಲ್ಲಿದ್ದೆ. ಇರಾಣ (ಇರಾನ್) ದೇಶದಿಂದ ಬಂದಿದ್ದ ನಾಲ್ಕು ಜನರು ಶಿರಸಿಯ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಅದರಲ್ಲಿ, ಅಬ್ಬಾಸ್ ಮತ್ತು ಅಲಿ ಹೆಸರಿನ ಇಬ್ಬರು ನಮ್ಮ ಮುಂದಿನ ಮನೆಯಲ್ಲಿ ಬಾಡಿಗೆಗೆ ಉಳಿದುಕೊಂಡಿದ್ದರು. ಆ ಕಾಲದಲ್ಲಿ ಶಿರಸಿಯಲ್ಲಿದ್ದ ಬೆರಳೆಣಿಕೆಯಷ್ಟು ‘ಯಜ್ಡಿ’ ಮೋಟರ್ ಬೈಕ್‌ನಲ್ಲಿ ಅಲಿಯದ್ದೂ ಒಂದಾಗಿತ್ತು.

ಅದರಲ್ಲೂ ನಮ್ಮ ಬೀದಿಯಲ್ಲಿ ಯಜ್ಡಿ ಬೈಕ್ ಸದ್ದು ಮಾಡಿದರೆ, ಅಲಿ ಬಂದ ಅಂತಲೇ ಲೆಕ್ಕ. ಆದರೆ ಆತ ಇನ್ನಿಬ್ಬರ ಜತೆಯೇ ಹೆಚ್ಚು ಓಡಾಡುತ್ತಿದ್ದ. ಆಗೆಲ್ಲ ಮನೆಯಲ್ಲಿ ಅಬ್ಬಾಸ್ ಒಬ್ಬನೇ ಇರುತ್ತಿದ್ದ ದಿನಗಳೇ ಹೆಚ್ಚು.

ಪಿಯುಸಿವರೆಗಿನ ಓದನ್ನು ಇರಾಣದಲ್ಲಿಯೇ ಮುಗಿಸಿದ್ದ ಅಬ್ಬಾಸ್, ಬಿಎ ಮೊದಲನೆಯ ವರ್ಷಕ್ಕೆ ಬಂದು ಸೇರಿಕೊಂಡಿದ್ದ. 6 ಅಡಿ ಎತ್ತರ ಇದ್ದ ಅಬ್ಬಾಸ್ ಇರಾಣಿನ ಸೇಬು ಹಣ್ಣಿನಂತೆ ಕೆಂಪು ಕೆಂಪಾ ಗಿದ್ದ. 30 ವರ್ಷದ ಆಸುಪಾಸಿನಲ್ಲಿದ್ದ ಅಬ್ಬಾಸ್ ತಲೆ ಮಾತ್ರ ಆಗಲೇ ಅರ್ಧ ಬೋಳಾಗಿತ್ತು.

ಆ ದಿನಗಳಲ್ಲಿ ಇರಾಣ ಸರಕಾರದಿಂದ ವಿದ್ಯಾರ್ಥಿವೇತನ ಪಡೆದು ವಿದ್ಯಾರ್ಥಿಗಳು ಭಾರತಕ್ಕೆ, ಅಂತೆಯೇ ಇತರ ದೇಶಗಳಿಗೂ ಕಲಿಯಲು ಹೋಗುತ್ತಿದ್ದರು. ನನಗೆ ತಿಳಿದಂತೆ ಅಬ್ಬಾಸ್‌ಗೆ ಬಡತನ ವೇನೂ ಇರಲಿಲ್ಲ, ಆದರೂ ಅಲ್ಲಿಯ ಸರಕಾರದಿಂದ ವಿದ್ಯಾರ್ಥಿವೇತನ ಸಿಗುತ್ತಿತ್ತು.

ನನಗೆ ಗೊತ್ತಿದ್ದ ‘ಯೆಸ್’, ‘ನೋ’ ಇಂಗ್ಲಿಷ್, ಅವನಿಗೆ ಗೊತ್ತಿದ್ದ ‘ಬೇಕು’, ‘ಬೇಡ’ ಕನ್ನಡದಿಂದಲೇ ನಾವಿಬ್ಬರೂ ಸ್ನೇಹಿತ(!?)ರಾಗಿದ್ದೆವು. ನಮ್ಮಿಬ್ಬರ ನಡುವೆ ಭಾಷೆಯ ಬೇಲಿ ಇರಲಿಲ್ಲ. ಕ್ರಮೇಣ ಆತನಿಂದ ನಾನು ಕೆಲವು ಇಂಗ್ಲಿಷ್ ಪದಗಳನ್ನೂ, ನನ್ನಿಂದ ಆತ ಕನ್ನಡದ ಪದಗಳನ್ನೂ ಕಲಿತ. ನನ್ನನ್ನು ಆತ ಒಂದು ಕನ್ನಡ ಸಿನಿಮಾಕ್ಕೂ ಕರೆದುಕೊಂಡು ಹೋಗಿದ್ದ ಎಂದು ನೆನಪು.

ಕೆಲವು ವಿಷಯಗಳಿಗಾಗಿ ಅಬ್ಬಾಸ್ ನನಗೆ ಇಷ್ಟವಾಗುತ್ತಿದ್ದ. ಆತನ ಮುಖದಲ್ಲಿ ಮುಗುಳ್ನಗು ಎಂದಿಗೂ ಮಾಸುತ್ತಿರಲಿಲ್ಲ. ನಾನಾಗಲಿ, ನನ್ನ ಸ್ನೇಹಿತರಾಗಲಿ, ಎಲ್ಲೇ ಕಂಡರೂ ಮುಗುಳ್ನಗೆ ಯೊಂದಿಗೆ ಮಾತನಾಡಿಸುತ್ತಿದ್ದ. ವಯಸ್ಸಿನ ಅಂತರ ಮರೆತು ಕೆಲವೊಮ್ಮೆ ಕ್ರಿಕೆಟ್ ಆಡಲು ಬಂದು ಸೇರಿಕೊಳ್ಳುತ್ತಿದ್ದ. ನಾನು ಅವನ ಮನೆಗೆ ಹೋದರಂತೂ ಆತನಿಗೆ ಸಂಭ್ರಮ. ಬಿಸ್ಕತ್ತು, ಚಾಕಲೇಟ್, ಹಣ್ಣು, ಏನಾದರೂ ತಿನ್ನಿಸಿದರೆ ಮಾತ್ರ ಆತನಿಗೆ ಸಮಾಧಾನ.

ನಾನೂ ಆತನ ಮನೆಗೆ ಹೋದರೆ ಹೆಚ್ಚಾಗಿ ಮೋಸಂಬಿಹಣ್ಣು ಕೊಡುವಂತೆ ಕೇಳುತ್ತಿದ್ದೆ. ಕಾರಣ, ನಾವೆಲ್ಲ ಕೈಯಲ್ಲಿ ಸುಲಿಯುತ್ತಿದ್ದ ಮೋಸಂಬಿಯನ್ನು ಅಬ್ಬಾಸ್ ಚಾಕುವಿನಿಂದ ಚಕಚಕನೆ ನಿಮಿಷಾರ್ಧದಲ್ಲಿ ನುಣ್ಣಗೆ ಕೆತ್ತಿ ಇಡುತ್ತಿದ್ದ. ನನಗೆ ಅದನ್ನು ತಿನ್ನುವುದಕ್ಕಿಂತ ನೋಡುವುದೇ ಖುಷಿಯಾಗುತ್ತಿತ್ತು.

ಒಮ್ಮೆ ‘ನಿಮ್ಮ ದೇಶದ ದುಡ್ಡು ಹೇಗಿರುತ್ತದೆ?’ ಎಂದು ಕೇಳಿದ್ದಕ್ಕೆ, ಒಂದು ನೋಟು, ಕೆಲವು ನಾಣ್ಯ ಗಳನ್ನು ನನ್ನ ಕೈಯಲ್ಲಿಟ್ಟು, ‘ಇದನ್ನು ನೀನೇ ಇಟ್ಟುಕೋ’ ಎಂದಿದ್ದ. ಆಗ ಅದರ ಮೌಲ್ಯ ಎಷ್ಟು ಎಂದು ತಿಳಿಯದಿದ್ದರೂ, ಭಾರತದ ರುಪಾಯಿಗೆ ಹೋಲಿಸಿದರೆ, ಹೆಚ್ಚು ಎಂಬುದು ಗೊತ್ತಿತ್ತು. ಈಗ, ಭಾರತದ ಒಂದು ರುಪಾಯಿ ಕೊಟ್ಟರೆ ಇರಾಣಿನ 11000ಕ್ಕೂ ಹೆಚ್ಚು ರಿಯಾಲ್ ನಮ್ಮ ಕೈಗೆ ಬರುತ್ತದೆ, ಇರಲಿ.

ಹೀಗಿರುವಾಗ ಒಂದು ದಿನ ಅಬ್ಬಾಸ್ ಬಹಳ ಬೇಸರದಲ್ಲಿದ್ದ. ಕಣ್ಣಲ್ಲಿ ನೀರು ತುಂಬಿಕೊಂಡಿದ್ದ. ಏನಾಯಿತು ಎಂದು ಕೇಳಿದಾಗ, ‘ನಾನು ಓದುವುದನ್ನು ನಿಲ್ಲಿಸಿ ನನ್ನ ದೇಶಕ್ಕೆ ಹಿಂದಿರುಗಿ ಹೋಗ ಬೇಕಾಗಿದೆ. ನನ್ನ ದೇಶದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಯುದ್ಧದ ವಾತಾವರಣ ಇರುವುದರಿಂದ ಈಗಿನ ಸರಕಾರ ನಮ್ಮನ್ನೆಲ್ಲ ನಮ್ಮ ದೇಶಕ್ಕೆ ಹಿಂದಿರುಗಿ ಬರಲು ಹೇಳುತ್ತಿದೆ’ ಎಂದಿದ್ದ.

ಅಂದು ಅವನ ಬಳಿ ಇದ್ದ ಒಂದೆರಡು ಪುಸ್ತಕ, ಪಟ್ಟಿ, ಮ್ಯಾಗಜಿನ್, ಬಿಸ್ಕತ್ತು ಇತ್ಯಾದಿಗಳನ್ನೆಲ್ಲ ಒಂದು ಚೀಲಕ್ಕೆ ತುಂಬಿಸಿ ನನಗೆ ಕೊಟ್ಟಿದ್ದ. ಮಾರನೇ ದಿನ ನಾನು ಏಳುವುದರ ಒಳಗೇ ಆತ ಊರುಬಿಟ್ಟಿದ್ದ ಎಂದು ತಿಳಿದಾಗ ಬಹಳ ಬೇಸರವಾಗಿತ್ತು. ಅದಾಗಿ ಸುಮಾರು ಒಂದೂವರೆ ದಶಕ ಕಳೆದು, ನಾನು ಸೌದಿ ಅರೇಬಿಯಾಕ್ಕೆ ಬಂದ ನಂತರವೇ ಇರಾಣದ ರಾಜಕೀಯ, ಇರಾಣ ಮತ್ತು ಇರಾಕಿನ ನಡುವಿನ ಯುದ್ಧದ ವಿವರ ಇತ್ಯಾದಿಗಳ ಹೆಚ್ಚಿನ ಮಾಹಿತಿ ತಿಳಿಯಿತು.

ಒಮ್ಮೊಮ್ಮೆ ಕೆಲವು ಸಂಬಂಧಗಳು, ಅದರಲ್ಲೂ ಬಾಲ್ಯದ ನೆನಪುಗಳು ಎಷ್ಟು ಗಟ್ಟಿಯಾಗಿ ಬಿಡುತ್ತವೆ ಎಂದರೆ, ಇಂದಿಗೂ ಯಾವುದೇ ವಿಷಯಕ್ಕೆ ‘ಇರಾಣ’ ಹೆಸರು ಕೇಳಿದರೂ ನನಗೆ ಮೊದಲು ನೆನಪಾಗುವುದೇ ಅಬ್ಬಾಸ್. ಆಗ ಆಡಳಿತ ಹಿಂದಿರುಗಿ ಬರುವಂತೆ ಹೇಳಿತ್ತೋ ಅಥವಾ ಆತನ ಮನೆಯವರು ಕರೆಸಿಕೊಂಡಿದ್ದರೋ ಗೊತ್ತಿಲ್ಲ.

ಒಂದು ವೇಳೆ ಅಬ್ಬಾಸ್ ಅದನ್ನೆಲ್ಲ ವಿವರಿಸಿದ್ದರೂ ನನಗೆ ಎಷ್ಟರ ಮಟ್ಟಿಗೆ ಅರ್ಥವಾಗುತ್ತಿತ್ತೋ ಗೊತ್ತಿಲ್ಲ. ಆತ ಓದು ಮುಗಿಸಲಾಗದೇ ಬೇಸರದಲ್ಲಿ ಹಿಂದಿರುಗಿದ್ದ ಎಂಬುದು ಮಾತ್ರ ನನಗೆ ಅರ್ಥವಾಗಿತ್ತು.

ಸೌದಿ ಅರೇಬಿಯಾಕ್ಕೆ ಬಂದ ಮೇಲೆ ನಾನು ಇರಾಣದ ರಾಜಕೀಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲಾರಂಭಿಸಿದೆ. ಅಬ್ಬಾಸ್ ಭಾರತದಲ್ಲಿ ಓದಲು ಬಂದಾಗ ‘ಇಂಪೆರಿಯಲ್ ಸ್ಟೇಟ್ ಆಫ್ ಇರಾಣ’ದಲ್ಲಿ ಶಾ ಮೊಹಮ್ಮದ್ ರೆಜಾ ಪಹಲಾವಿ ರಾಜಾಡಳಿತ ನಡೆಸುತ್ತಿದ್ದ. ಸುಮಾರು 4 ದಶಕಗಳ ಆಡಳಿತ ನಡೆಸಿದ್ದ ಆತ ಇರಾಣಿನ ‘ಶಹನ್ಶಾ’ (ರಾಜರ ರಾಜ) ಎಂದೇ ಖ್ಯಾತನಾಗಿದ್ದ.

ರಾ‌ಜ ಮನೆತನದ ಆಡಳಿತದಲ್ಲಿ ಆತನೇ ಕೊನೆಯವನೂ ಆಗಿ ಹೋದ. ಉದಾರ ಮನೋಭಾವ ಉಳ್ಳವನಾಗಿದ್ದ ಆತನಿಗೆ ಅಮೆರಿಕ ಮತ್ತು ಯುರೋಪ್ ದೇಶಗಳೊಂದಿಗೆ ನಿಕಟ ಸಂಬಂಧವಿತ್ತು. ಆತನ ಅವಧಿಯಲ್ಲಿ ಇರಾಣ ಸಾಕಷ್ಟು ಅಭಿವೃದ್ದಿ ಕಂಡಿತ್ತು. 1960ರ ದಶಕದಲ್ಲಿ ಆತ ‘ವೈಟ್ ರೆವಲ್ಯೂಷನ್’ ಆರಂಭಿಸಿದ್ದ. ಸಾರಿಗೆ ಸಂಪರ್ಕ, ಕೃಷಿಯ ಅಭಿವೃದ್ಧಿಗಾಗಿ ಅಣೆಕಟ್ಟುಗಳ ನಿರ್ಮಾಣ, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು, ಕಾರ್ಖಾನೆಗಳು ಇತ್ಯಾದಿಗಳನ್ನು ಸ್ಥಾಪಿಸಿ, ತನ್ನ ದೇಶವೂ ಪಶ್ಚಿಮದ ದೇಶಗಳಂತೆಯೇ ಮುಂದುವರಿಯಬೇಕು ಎಂದು ಕನಸು ಕಂಡಿದ್ದ.

ತನ್ನ ದೇಶದ ಜನ ವಿದೇಶಕ್ಕೆ ಹೋಗಿ ಓದಲಿ ಎಂದು ವಿದ್ಯಾರ್ಥಿವೇತನ ನೀಡಲು ಆರಂಭಿಸಿದ. ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ, ವಾಹನ ಚಾಲನೆ, ಉಡುಗೆ-ತೊಡುಗೆ, ಹೆಣ್ಣು ಮಕ್ಕಳು ಒಬ್ಬೊಬ್ಬರೇ ಓಡಾಡುವುದು, ಗಂಡು-ಹೆಣ್ಣು ಒಟ್ಟಿಗೇ ಓದುವುದು, ಸಭೆ-ಸಮಾರಂಭಗಳಲ್ಲಿ, ಹೋಟೆಲುಗಳಲ್ಲಿ ಒಟ್ಟಿಗೇ ಸೇರುವುದು, ಹೆಣ್ಣು ಮಕ್ಕಳು ಮದ್ಯಪಾನ ಮಾಡುವುದು, ಸಿಗರೇಟ್ ಸೇದುವುದು ಯಾವುದಕ್ಕೂ ನಿರ್ಬಂಧಗಳಿರಲಿಲ್ಲ.

ಆತ ಅಧಿಕಾರ ಹಿಡಿಯುವಾಗಲೇ ದೇಶದಲ್ಲಿ ತೈಲ ನಿಕ್ಷೇಪ ದೊರೆತು 25 ವರ್ಷಗಳಾಗಿದ್ದರಿಂದ ಹಣದ ಕೊರತೆಯೂ ಇರಲಿಲ್ಲ. ಪಹಲಾವಿಗೆ ಅಮೆರಿಕದೊಂದಿಗೆ ಒಳ್ಳೆಯ ಸ್ನೇಹವಿತ್ತು. ಆ ಕಾಲ ದಲ್ಲಿ ಅಮೆರಿಕಕ್ಕೆ ಉಳಿದ ಮಧ್ಯಪ್ರಾಚ್ಯ ದೇಶಗಳ ಪೈಕಿ ಇರಾಣ ಹೆಚ್ಚು ಆಪ್ತವಾಗಿತ್ತು. ಆದರೆ 1978ರ ವೇಳೆಗೆ ದೇಶದ ಒಳಗೆ ಪಹಲಾವಿ ಸರಕಾರದ ವಿರುದ್ಧ ಪ್ರತಿಭಟನೆಗಳು ಆರಂಭವಾದವು.

ಅದಕ್ಕೆ ಕಾರಣ ನಿರುದ್ಯೋಗ ಸಮಸ್ಯೆಯಾಗಿತ್ತು. ದೇಶದಲ್ಲಿ ಒಮ್ಮೆಲೇ ಶಿಕ್ಷಣ ಸಂಸ್ಥೆಗಳು ಹೆಚ್ಚಾದ್ದ ರಿಂದ, ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಓದಿಕೊಂಡು ಬಂದದ್ದರಿಂದ ಶಿಕ್ಷಿತರ ಸಂಖ್ಯೆ ಶೇ. 75ರಷ್ಟು ಹೆಚ್ಚಾಗಿತ್ತು. ಆದರೆ ಅವರಿಗೆ ದೇಶದಲ್ಲಿ ಅಷ್ಟು ಉದ್ಯೋಗವೇ ಇರಲಿಲ್ಲ. ಅವರೆಲ್ಲ ಪ್ರತಿಭಟನೆಗೆ ಇಳಿದಿದ್ದರು. ಅವರೊಂದಿಗೆ ಉದಾರತೆಯನ್ನು ಸಹಿಸಲಾಗದ ಇಸ್ಲಾಮ್ ಧರ್ಮಗುರು ಗಳು, ತೀವ್ರಗಾಮಿಗಳು ಕೈಜೋಡಿಸಿದರು.

ಇವರಿಗೆ ಪರದೆಯ ಹಿಂದಿನಿಂದ ಬ್ರಿಟನ್ ಸಹಾಯ ಮಾಡುತ್ತಿದ್ದುದರಿಂದ ಇದು ದಂಗೆಯಾಗಿ ಮಾರ್ಪಾಡಾಯಿತು. ಜನ ಖೊಮೇನಿಯನ್ನು ದೇವಮಾನವನಂತೆ ಕಾಣತೊಡಗಿದರು. ಆತ “ಪಹಲಾವಿ ಅಮೆರಿಕದ ಏಜೆಂಟ್, ಅಮೆರಿಕ ಇಸ್ಲಾಂ ವಿರೋಧಿ ದೇಶ’ ಎನ್ನುವುದರೊಂದಿಗೆ ಅಮೆರಿಕವನ್ನು The Great Satan (ಮಹಾ ರಾಕ್ಷಸ) ಎಂದು ಕರೆದ. ಜನ ಅದನ್ನು ನಂಬಿದರು.

ದಂಗೆ ತೀವ್ರವಾದಾಗ, ದಂಗೆಯನ್ನು ನಿಗ್ರಹಿಸಲು ಪಹಲಾವಿ ಅಮೆರಿಕದ ಸಹಕಾರ ಕೇಳಿದ. ಇರಾಣ ದಲ್ಲಿರುವ ಅಮೆರಿಕದ ಗುಪ್ತಚರರು ದಂಗೆ ತೀವ್ರವಾಗಿಲ್ಲವೆಂದೂ, ಇನೂ ಹತ್ತು ವರ್ಷ ಪಹಲಾವಿಯೇ ಆಡಳಿತ ನಡೆಸುತ್ತಾನೆಂದೂ ವರದಿ ನೀಡಿದ್ದರಿಂದ ಜಿಮ್ಮಿ ಕಾರ್ಟರ್ ನೇತೃತ್ವದ ಅಮೆರಿಕ ಸರಕಾರ ಅಷ್ಟೊಂದು ಆಸಕ್ತಿ ವಹಿಸಲಿಲ್ಲ, ಸಹಕರಿಸಲಿಲ್ಲ. ಆ ವೇಳೆಗಾಗಲೇ ಪಹಲಾವಿಗೆ ಕ್ಯಾನ್ಸರ್ ಆವರಿಸಿಕೊಂಡು 5 ವರ್ಷವಾಗಿತ್ತು.

ಇನ್ನು ಒಂದು ವರ್ಷ ಮಾತ್ರ ಬದುಕಬಹುದು ಎಂದು ವೈದ್ಯರು ಹೇಳಿದ್ದರು. ಶಾ ಪಹಲಾವಿ ತನ್ನ ಹೆಂಡತಿ ಮಕ್ಕಳ ಸಮೇತ ಇರಾಣ ಬಿಟ್ಟು ಅಮೆರಿಕಕ್ಕೆ ಹೋದ. ಒಂದು ವರ್ಷದೊಳಗೆ ಪ್ರಾಣ ವನ್ನೂ ಬಿಟ್ಟ.

1979ರಲ್ಲಿ ರುಹೊ ಖೊಮೇನಿ ನೇತೃತ್ವದಲ್ಲಿ ‘ಇಸ್ಲಾಮಿಕ್ ರೆವಲ್ಯೂಷನ್’ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಖೊಮೇನಿ ಹೊಸ ಸಂವಿಧಾನ ರಚಿಸಿದ. ತನ್ನನ್ನು ‘ಸರ್ವೋಚ್ಚ ನಾಯಕ’ ಎಂದು ಕರೆದುಕೊಂಡ. ಜನ ಒಪ್ಪಿದರು. ಅಧಿಕಾರಕ್ಕೆ ಬರುತ್ತಿದ್ದಂತೆ ಆತನ ಸರಕಾರ ಟೆಹರಾನ್‌ ನಲ್ಲಿರುವ ಅಮೆರಿಕದ ದೂತವಾಸದಲ್ಲಿದ್ದ 50 ಜನರನ್ನು ಬಂದಿಯಾಗಿಸಿತು.

ಇದರಿಂದ ರೊಚ್ಚಿಗೆದ್ದ ಅಮೆರಿಕ ಮೊದಲ ಬಾರಿಗೆ ಇರಾಣದ ಮೇಲೆ ನಿರ್ಬಂಧ ಹೇರಿತು. ಆದರೆ ಖೊಮೇನಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಸಾಲದು ಎಂಬಂತೆ, ಆ ಪ್ರದೇಶಗಳಲ್ಲಿ ಹುಟ್ಟಿ ಕೊಂಡ ಹಿಜಬುಲ್ಲ, ಐಆರ್‌ಜಿಸಿ ಮುಂತಾದ ಮೂಲಭೂತವಾದಿ, ತೀವ್ರಗಾಮಿ ಸಂಘಟನೆಗಳಿಗೆ ಸರಕಾರ ಸಹಾಯ ಮಾಡತೊಡಗಿತು.

ಇದರಿಂದಾಗಿ ಮಧ್ಯಪ್ರಾಚ್ಯದ ಮುಸ್ಲಿಂ ದೇಶಗಳ ಅಶಾಂತಿ ಹರಡುವಂತಾಯಿತು. ಅಧಿಕಾರ ಹಿಡಿದು ಒಂದು ವರ್ಷವಾಗುತ್ತಿದ್ದಂತೆ ಪಕ್ಕದ ಇರಾಕ್ ದೇಶದೊಂದಿಗೆ ಯುದ್ಧಕ್ಕೆ ಇಳಿದ. 1989ರಲ್ಲಿ ಖೊಮೇನಿ ಹೃದಯಾಘಾತದಿಂದ ತೀರಿ ಹೋದ. ಕೆಲವು ವರ್ಷ ಅವನ ಮಗ, ಈಗ ಅವನ ಮೊಮ್ಮಗ ಅಲಿ ಖೊಮೇನಿ ಇರಾಣದಲ್ಲಿ ಅಧಿಕಾರ ನಡೆಸುತ್ತಿದ್ದಾರೆ.

ಇರಾಣದಲ್ಲಿ ಶರಿಯಾ ಕಾನೂನು ಜಾರಿಗೆ ಬಂದದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆ ಸಂಚಾರಗಳಲ್ಲಿ, ಹೋಟೆಲುಗಳಲ್ಲಿಯೂ ಪುರುಷರು ಮತ್ತು ಮಹಿಳೆಯರಿಗೆ ಬೇರೆ ಬೇರೆ ಸ್ಥಳ ನಿಗದಿಯಾಯಿತು. ಜನರ ಮೇಲೆ ನಿಗಾ ಇಡಲು ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಯಿತು. ಮಾರಲ್ ಪೊಲೀಸರ ಪಡೆ ತಯಾರಾಯಿತು.

ಕಾನೂನು ಮೀರಿ ನಡೆದವರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಯಿತು. ನಾಲ್ಕೂವರೆ ದಶಕಗಳ ವರೆಗೆ ಉದಾರವಾಗಿದ್ದ ದೇಶ ಇದ್ದಕ್ಕಿದ್ದಂತೆ ಈ ರೀತಿ ನಿರ್ಬಂಧಕ್ಕೊಳಗಾಗುವುದನ್ನು ಅಲ್ಲಿಯ ಜನ ಸಹಿಸದಾದರು. ಪರಿಣಾಮವಾಗಿ, ದೇಶದಾದ್ಯಂತ 50000 ಕ್ಕೂ ಹೆಚ್ಚು ಮಸೀದಿಗಳು ಮುಚ್ಚಲ್ಪಟ್ಟಿವೆ, ಮದರಸಾಗಳು ಕಡಿಮೆಯಾಗುತ್ತಿವೆ.

ಕಳೆದ ಕೆಲವು ವರ್ಷಗಳಿಂದ ಇರಾಣದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಅತಿ ಎನಿಸುವ ಕಾನೂನಿಗೆ ಪ್ರತಿಭಟನೆಯ ರೂಪದಲ್ಲಿ ಮಹಿಳೆಯರು ಹಿಜಾಬ್ ಕಿತ್ತೆಸೆಯುವುದು, ಬುರ್ಖಾ ಸುಡುವುದು, ಕೂದಲು ಕತ್ತರಿಸಿಕೊಳ್ಳುವುದು, ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಮೌಲ್ವಿಗಳ ಪೇಟ ಕೆಡಹುವುದು ಇತ್ಯಾದಿಗಳು ಆಗಾಗ ನಡೆಯುತ್ತಿವೆ.

ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮಿತಿಮೀರಿದೆ. ವ್ಯಾಪಾರಸ್ಥರು ಧಾನ್ಯವನ್ನು ಬೀದಿಗೆ ತಂದು ಸುರಿಯುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಶಾಮೀಲಾಗಿದ್ದಾರೆ. ಇರಾಣದ ಜನ ಸದ್ಯದ ಪರಿಸ್ಥಿತಿಯಲ್ಲಿ ಹೈರಾಣಾಗಿದ್ದಾರೆ..

ಈಗ ಇರಾಣದಿಂದ ಬರುತ್ತಿರುವ ಸುದ್ದಿ ನಿಜವಾದರೆ, ದೇಶದಲ್ಲಿರುವ ಮೂವತ್ತೊಂದೂ ಪ್ರಾಂತ್ಯದ 180ಕ್ಕೂ ಹೆಚ್ಚು ನಗರ, ಪಟ್ಟಣಗಳಲ್ಲಿ ಜನ ದಂಗೆ ಎದ್ದು ಬೀದಿಗೆ ಇಳಿದಿದ್ದಾರೆ. ರಾಜಧಾನಿ ಟೆಹರಾನ್‌ ನಲ್ಲಿಯೇ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸ್ ಮತ್ತು ಪ್ರದರ್ಶನಕಾರರು ಮುಖಾಮುಖಿ ಯಾಗುತ್ತಿದ್ದಾರೆ.

ಸರ್ವೋಚ್ಚ ನಾಯಕ ಖೊಮೇನಿಯ ಹುಟ್ಟೂರಾದ ಮಶಾದ್ ನಲ್ಲಿಯೂ ಹೆಚ್ಚಿನ ಪ್ರತಿಭಟನೆ ನಡೆಯುತ್ತಿದ್ದು, ಜನ ಆತನ ಪ್ರತಿಕೃತಿ, ಬ್ಯಾನರ್‌ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ವರದಿ ನಿಜವಾದರೆ, 200ಕ್ಕೂ ಹೆಚ್ಚು ಪ್ರತಿಭಟನಾಕಾರರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇವರನ್ನೆಲ್ಲ ನಿಯಂತ್ರಿಸುವುದಕ್ಕಾಗಿ ಸರಕಾರ ಇಂಟರ್ನೆಟ್ ಅನ್ನು ಸ್ತಬ್ಧಗೊಳಿಸಿದೆ.

ಮೊಬೈಲ್ ನೆಟ್‌ವರ್ಕ್, ಸಾಮಾಜಿಕ ಜಾಲತಾಣ, ಲೈವ್ ವಿಡಿಯೋ, ಗ್ರೌಂಡ್ ಫೂಟೇಜ್ ಎಲ್ಲವೂ ನಿಂತುಹೋಗಿವೆ. ಆದರೂ ಜನರ ವಿರೋಧ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿಭಟನಾ ಕಾರರು ಸರಕಾರಿ ಕಟ್ಟಡಗಳು, ವಾಹನಗಳು, ಖಾಸಗಿ ಬ್ಯಾಂಕ್‌ಗಳಿಗೆ ಬೆಂಕಿ ಇಡುತ್ತಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಪ್ರತಿಭಟನಾಕಾರರ ಮೇಲೆ ಉಗ್ರಕ್ರಮ ಕೈಗೊಳ್ಳುವುದಾಗಿ ಖೊಮೇನಿ ಹೇಳಿದರೆ, ಅವರ ಮೇಲೆ ಗುಂಡು ಹಾರಿಸಿದರೆ ಇರಾನ್ ಮೇಲೆ ಕ್ರಮ ಜರುಗಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ ಟ್ರಂಪ್ ಹೇಳಿಕೆ ನೀಡಿದ್ದಾರೆ. ಈ ನಡುವೆ ಖೊಮೇನಿಯೇ ದೇಶ ಬಿಟ್ಟು ರಷ್ಯಾಕ್ಕೆ ಹೋಗುವ ತಯಾರಿ ನಡೆಸಿದ್ದಾರೆ ಎಂಬ ವದಂತಿ ಇದೆ.

ಈಗಾಗಲೇ 12 ವಿಮಾನದಲ್ಲಿ ತಮ್ಮ ವಸ್ತುಗಳೊಂದಿಗೆ ಹಣ, ಬಂಗಾರವನ್ನೆಲ್ಲ ರಷ್ಯಾಕ್ಕೆ ದಾಟಿಸಿ ದ್ದಾರೆ ಎಂಬ ವದಂತಿಗಳೂ ಕೇಳಿ ಬರುತ್ತಿವೆ. ಮಾಧ್ಯಮಗಳಲ್ಲಂತೂ, ಇನ್ನು ಕೆಲವೇ ಗಂಟೆಗಳಲ್ಲಿ ಇರಾಣದಲ್ಲಿ ಹೊಸ ಸರಕಾರ ಬರುತ್ತದೆ ಎಂಬಂತೆ ಹೇಳಲಾಗುತ್ತಿದೆ. ಅಮೆರಿಕದಲ್ಲಿ ವಾಸವಾಗಿರುವ ಶಾ ಮೊಹಮ್ಮದ್ ಪಹಲಾವಿಯ ಮಗ ರೆಜಾ ಪಹಲಾವಿಯಿಂದ ಹಿಡಿದು, ಇರಾಣದ ವಿರೋಧ ಪಕ್ಷವಾದ ನ್ಯಾಷನಲ್ ಕೌನ್ಸಿಲ್ ಆಫ್ ರೆಸಿಸ್ಟನ್ಸ್ ಆಫ್ ಇರಾನ್ ಪಕ್ಷದ‌ ನಾಯಕಿ ಮರಿಯಮ್ ರಜಾವಿಯವರೆಗೆ ಸರಕಾರ ಬದಲಾಗುವವರೆಗೂ ಹೋರಾಟ ನಿಲ್ಲಿಸದಂತೆ ಕರೆ ಕೊಡುತ್ತಿದ್ದಾರೆ.

ಇರಾಣದ ಜನ ಅವರನ್ನು ಬೆಂಬಲಿಸುವುದರೊಂದಿಗೆ, ‘ಸರ್ವಾಧಿಕಾರಿಗೆ ಮರಣದಂಡನೆ’ ಎಂದು ಕೂಗುತ್ತಿದ್ದಾರೆ. ಭಾರತದ ಟಿವಿ ಚಾನೆಲ್‌ಗಳು, ಯುಟ್ಯೂಬರ್ʼಗಳು ಇರಾಣದಲ್ಲಿ ಸರಕಾರ ಬದಲಾದರೆ ಭಾರತಕ್ಕೆ ಆಗುವ ಲಾಭ-ನಷ್ಟದ ಲೆಕ್ಕ ಹಾಕುತ್ತಿದ್ದಾರೆ.

ಹಾಗಾದರೆ ಈ ಬಾರಿ ಇರಾಣದಲ್ಲಿ ಸರಕಾರ ಬದಲಾಗುತ್ತದೆಯೇ? ಕಾಲಚಕ್ರ ತಿರುಗುತ್ತಿದೆಯೇ? ಅದರ ಕುರಿತು ಈಗ ಹೇಳುವುದು ಕಷ್ಟ. ಏಕೆಂದರೆ ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಎಷ್ಟು ನಂಬಬೇಕು, ಬಿಡಬೇಕು ಗೊತ್ತಿಲ್ಲ. ಅಲ್ಲದೆ, ಖೊಮೇನಿ ಸರಕಾರ ದಂಗೆಯನ್ನು ಹತ್ತಿಕ್ಕಲು ಇದುವರೆಗೆ ಸೇನೆಯನ್ನು ಬಳಸಲಿಲ್ಲ.

ಒಮ್ಮೆ ಸೇನೆ ಬೀದಿಗೆ ಇಳಿದರೆ ಪರಿಣಾಮ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಒಂದು ಕಡೆ ಇರಾಣದಲ್ಲಿ ‘ರೆಸಿಸ್ಟನ್ಸ್ ಯುನಿಟ್’ಗಳು ಸಾಕಷ್ಟು ಕಡೆ ಹರಡಿಕೊಂಡಿವೆ. ಒಂದೊಂದು ಯುನಿಟ್‌ ನಲ್ಲೂ ಸಾವಿರಾರು ಜನರಿದ್ದಾರೆ.

ಅವರನ್ನೆಲ್ಲ ತಡೆಹಿಡಿಯುವುದು ಕಷ್ಟವಾಗಬಹುದು. ಇನ್ನೊಂದು ಕಡೆ ಅಮೆರಿಕದ ನಡೆಯ ಕಡೆಗೂ ಲಕ್ಷ್ಯ ಕೊಡಬೇಕು. ಸದ್ಯ ಯಾವುದೇ ಕೊಲ್ಲಿ ರಾಷ್ಟ್ರಗಳಾಗಲಿ, ಉಳಿದ ಮುಸ್ಲಿಂ ದೇಶವಾಗಲಿ, ಇರಾಣಿನ ಬೆಂಬಲಕ್ಕೆ ಬರುತ್ತಿಲ್ಲ. ಇದರಿಂದ ಸರಕಾರವೂ ಹೈರಾಣಾಗಿದೆ. ಇವುಗಳ ನಡುವೆ ಅಬ್ಬಾಸ್ ಎಲ್ಲಿದ್ದಾನೋ, ಹೇಗಿದ್ದಾನೋ?

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author