ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghav Sharma Nidle Column: ಅಧಿಕಾರದ ಚದುರಂಗದಾಟದಲ್ಲಿ ಡಿಕೆಶಿಗೆ ಮತ್ತೆ ಹಿನ್ನಡೆಯೇ ?

‘ರಾಜ್ಯ ಕಾಂಗ್ರೆಸ್‌ನ ಪರಮೋಚ್ಚ ನಾಯಕ ನಾನೇ ಮತ್ತು ಶಾಸಕರೂ ನನ್ನೊಂದಿಗಿದ್ದಾರೆ’ ಎನ್ನುವ ಮೂಲಕ ಶಿವಕುಮಾರ್ ಪಕ್ಷದೊಳಗಿನ ವಿಶ್ವಾಸಾರ್ಹ ನಾಯಕ ಅಲ್ಲ ಎಂಬುದನ್ನೂ ಅವರೂ ಪರೋಕ್ಷವಾಗಿ ತಿಳಿಸಿದ್ದಾರೆ. ಸಿಎಂ ಸ್ಥಾನದ ಕನಸು ಕಾಣಬಹುದು. ಆದರೆ, ‘ಅದಕ್ಕೆ ನಾ ಬಿಡಲಾರೆ’ ಎಂದಿರುವ ಸಿದ್ದರಾಮಯ್ಯ, ‘ಶಿವಕುಮಾರ್ ಕನಸು ನನಸಾಗದು’ ಎಂಬ ಸಂದೇಶ ಕೊಟ್ಟಿದ್ದಾರೆ.

ಅಧಿಕಾರದ ಚದುರಂಗದಾಟದಲ್ಲಿ ಡಿಕೆಶಿಗೆ ಮತ್ತೆ ಹಿನ್ನಡೆಯೇ ?

Profile Ashok Nayak Jul 14, 2025 8:43 AM

ಚದುರಂಗ

ರಾಘವ ಶರ್ಮ ನಿಡ್ಲೆ

‘ಪೂರ್ಣಾವಧಿಗೆ ನಾನೇ ಮುಖ್ಯಮಂತ್ರಿ. 2029ರಲ್ಲೂ ನಾನೇ ಸಿಎಂ’ ಎಂಬ ಸಿದ್ದರಾಮಯ್ಯನರ ಮಾತುಗಳನ್ನು ನಾವು ಹಲವು ಆಯಾಮಗಳಲ್ಲಿ ನೋಡಬೇಕು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದ ಮಹತ್ವಾಕಾಂಕ್ಷಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ, ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರ ಸಾಧ್ಯವೇ ಇಲ್ಲ ಎಂಬ ಸಂದೇಶ ರವಾನಿಸುವ ಜತೆಗೆ, ಶಿವಕುಮಾರ್‌ರ ನಾಯಕತ್ವ ಮತ್ತು ಸಾಮರ್ಥ್ಯವನ್ನು ಕೂಡ ಸಿದ್ದರಾಮಯ್ಯ ಬದಿಗೆ ಸರಿಸಿದ್ದಾರೆ.

‘ರಾಜ್ಯ ಕಾಂಗ್ರೆಸ್‌ನ ಪರಮೋಚ್ಚ ನಾಯಕ ನಾನೇ ಮತ್ತು ಶಾಸಕರೂ ನನ್ನೊಂದಿಗಿದ್ದಾರೆ’ ಎನ್ನುವ ಮೂಲಕ ಶಿವಕುಮಾರ್ ಪಕ್ಷದೊಳಗಿನ ವಿಶ್ವಾಸಾರ್ಹ ನಾಯಕ ಅಲ್ಲ ಎಂಬುದನ್ನೂ ಅವರೂ ಪರೋಕ್ಷವಾಗಿ ತಿಳಿಸಿದ್ದಾರೆ. ಸಿಎಂ ಸ್ಥಾನದ ಕನಸು ಕಾಣಬಹುದು. ಆದರೆ, ‘ಅದಕ್ಕೆ ನಾ ಬಿಡಲಾರೆ’ ಎಂದಿರುವ ಸಿದ್ದರಾಮಯ್ಯ, ‘ಶಿವಕುಮಾರ್ ಕನಸು ನನಸಾಗದು’ ಎಂಬ ಸಂದೇಶ ಕೊಟ್ಟಿದ್ದಾರೆ.

ನಾಯಕತ್ವದ ವಿಷಯಕ್ಕೆ ಸಂಬಂಧಿಸಿ ದಿಲ್ಲಿಯಲ್ಲಿ ರಾಹುಲ್ ಗಾಂಧಿಯವರಿಂದ ಖಚಿತತೆ ಪಡೆದು ವಾಪಸಾಗುವ ಉದ್ದೇಶ ಹೊಂದಿದ್ದ ಸಿದ್ದರಾಮಯ್ಯರಿಗೆ ರಾಹುಲ್ ಭೇಟಿ ಸಾಧ್ಯವಾಗಲಿಲ್ಲ. ಆದರೆ, ದಿಲ್ಲಿ ಅಂಗಳದಲ್ಲಿ ನಿಂತು ಪಕ್ಷ, ಶಾಸಕರು, ಮುಖಂಡರು, ಕಾರ್ಯಕರ್ತರಿಗೆ ‘ನಾಯಕತ್ವ ಬದಲಾವಣೆ ಸಾಧ್ಯವಿಲ್ಲ’ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಇದರಿಂದಾಗಿ, ಈ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಗಾದಿಗೇರುವ ಲಕ್ಷಣ ಕ್ಷೀಣಿಸಲಾ ರಂಭಿಸಿದೆ. ಒಂದೊಮ್ಮೆ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಕಡೆ ಒಲವು ತೋರಬಹುದು ಎಂದು ಭಾವಿಸಿದರೂ, ಬಹುಪಾಲು ಸಚಿವರು, ಶಾಸಕರು ಸಿದ್ದರಾಮಯ್ಯರ ಬೆನ್ನಿಗೆ ನಿಂತಿರುವುದರಿಂದ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ಮುಳ್ಳಿನ ಹಾದಿಯೇ ಸರಿ.

ಇದನ್ನೂ ಓದಿ: Raghava Sharma Nidle Column: ಆಲಮಟ್ಟಿ ಎತ್ತರ: ಇಷ್ಟು ವರ್ಷ ಕಾದಿದ್ದೇ ಮುಳುವಾಯ್ತೇ ?

ಹಾಗಂತ, ಡಿ.ಕೆ.ಶಿವಕುಮಾರ್ ಸುಮ್ಮನೆ ಕೂರಲು ಸನ್ಯಾಸಿಯೇನೂ ಅಲ್ಲ. ಅಕ್ರಮ ಹಣ ಸಂಪಾದನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ತನಿಖೆಗೊಳಗಾಗಿ 55 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದು ಬಂದು, ನಂತರ ರಾಜ್ಯ ಕಾಂಗ್ರೆಸ್ ನೇತೃತ್ವ ವಹಿಸಿ, ಪಕ್ಷವನ್ನು ಅಧಿಕಾರಕ್ಕೇರಿಸಲು ಅವರು ನೀಡಿದ ಕೊಡುಗೆಯನ್ನು ಅಲ್ಲಗಳೆಯುಂತಿಲ್ಲ.

ಅವರು ತನಿಖೆ ಎದುರಿಸಿ, ಜೈಲಿನಲ್ಲಿದ್ದು ಅನುಭವಿಸಿದ ಮಾನಸಿಕ ತುಮುಲ ಅಷ್ಟಿಷ್ಟಲ್ಲ. ದಿಲ್ಲಿಯ ರೌಸ್ ಅವೆನ್ಯೂ ಕೋರ್ಟಿನ ಕಟಕಟೆ ಎದುರು ನಿಂತಾಗ ಅವರ ಮುಖಭಾವ ಸೊರಗಿ ದೈಹಿಕವಾಗಿ ಕುಸಿದಂತೆ ಕಾಣುತ್ತಿದ್ದರು, ಭವಿಷ್ಯದ ಬಗೆಗಿನ ಚಿಂತೆಗಳು ಅವರನ್ನು ಬಾಧಿಸಿದ್ದವು. ಈ ಎಲ್ಲಾ ಸಂದರ್ಭಗಳಲ್ಲಿ ಧೃತಿಗೆಡದೆ ಧೈರ್ಯ ಹೇಳುತ್ತಾ, ಕಾನೂನು ಹೋರಾಟ ಮಾಡಿ, ಶಿವಕುಮಾರ್‌ರ ಬೆನ್ನಿಗೆ ನಿಂತದ್ದು ಅವರ ಸೋದರ ಡಿ.ಕೆ.ಸುರೇಶ್. ಜೈಲು ಸೇರಿದ್ದಾಗ ತನ್ನ ನೋವಿಗೆ ಸ್ಪಂದಿಸುವು ದಕ್ಕಿಂತ ಅದನ್ನು ಪಕ್ಷದ ಹಲವರು ಸಂಭ್ರಮಿಸಿದ್ದೇ ಹೆಚ್ಚು ಎನ್ನುವುದು ಡಿಕೆಶಿಗೆ ಗೊತ್ತಿದೆ.

ಬಿಜೆಪಿಯಿಂದ ಆಮಿಷಗಳು ಬಂದಾಗಲೂ, ಇ.ಡಿ. ಪ್ರಕರಣದ ಬಿಸಿಗೆ ಬಗ್ಗದೆ ಕಾಂಗ್ರೆಸ್‌ನ ಮುಂದು ವರಿದು, ಹೋರಾಟ ಮಾಡಿರುವ ಡಿಕೆಶಿ, ತಾವು ಪಕ್ಷನಿಷ್ಠರು ಎನ್ನುವುದನ್ನೂ ಸಾಬೀತುಪಡಿಸಿದ್ದಾರೆ. ಇದೇ ಕಾರಣಕ್ಕೆ ಮಾಜಿ ಸಂಸದ, ಸೋದರ ಡಿ.ಕೆ. ಸುರೇಶ್ ಆದಿಯಾಗಿ ಶಿವಕುಮಾರ್ ಹಿಂದೆ ಬಂಡೆಯಂತೆ ನಿಂತಿರುವ ಅನೇಕರು ಈ ಅವಧಿಗೇ ಅವರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ವಾದ ಮುಂದಿಡುತ್ತಿರುವುದು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ, ಸರಕಾರ ರಚಿಸುವ ಮುನ್ನ ದೆಹಲಿಗೆ ಬಂದಿದ್ದ ಶಿವಕುಮಾರ್ ತಮ್ಮನ್ನು ಸಿಎಂ ಮಾಡಲೇಬೇಕೆಂದು ಪಟ್ಟುಹಿಡಿದಿದ್ದರು. “ಸಿದ್ದರಾಮಯ್ಯ 5 ವರ್ಷಕ್ಕೆ ಪೂರ್ಣಾವಧಿ ಸಿಎಂ ಆಗಿದ್ದವರು ಮತ್ತು ಈ ಬಾರಿ ಹೊಸ ನಾಯ ಕತ್ವಕ್ಕೆ ಅವಕಾಶ ನೀಡಬೇಕು. ಗುಜರಾತ್‌ನಲ್ಲಿ ಅಹ್ಮದ್ ಪಟೇಲ್‌ರನ್ನು ರಾಜ್ಯಸಭೆ ಚುನಾವಣೆ ಯಲ್ಲಿ ಗೆಲ್ಲಿಸಲು ಹೋರಾಟ ಮಾಡಿದ್ದರ ಫಲವಾಗಿ ಇ.ಡಿ. ಕೇಸು ನನ್ನ ಮೈ ಗಂಟಿಕೊಂಡು 2 ತಿಂಗಳ ಕಾಲ ತಿಹಾರ್ ಜೈಲಿನಲ್ಲಿದ್ದು ಬಂದೆ.

ಬೇರೆಯವರಾಗಿದ್ದರೆ, ಬಿಜೆಪಿ ಆಮಿಷಕ್ಕೆ ಮಣಿದು ಆ ಪಕ್ಷ ಸೇರುತ್ತಿದ್ದರು. ನಾನು ಹಾಗೆ ಮಾಡಲಿಲ್ಲ. ಮೇಲಾಗಿ, ಈ ಚುನಾವಣೆ ಗೆಲ್ಲಲು ಏನೇ ಮಾಡಿದ್ದೇನೆ ಎಂಬ ಸಂಪೂರ್ಣ ವರದಿ ನಿಮ್ಮ ಮುಂದಿದೆ. ಹೀಗಿದ್ದ ಮೇಲೂ ನೀವು ಸಿದ್ದರಾಮಯ್ಯರನ್ನು ಸಿಎಂ ಮಾಡುವುದನ್ನು ನಾನು ಸ್ವೀಕರಿಸಲಾರೆ" ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ನಿವಾಸ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಿವಾಸಕ್ಕೆ ಹತ್ತಾರು ಬಾರಿ ತೆರಳಿ ಕಟುವಾಗಿ ಹೇಳಿದ್ದರು.

ಆದರೆ, ದಿಲ್ಲಿಯಲ್ಲಿ ಕೂತು ಪಟ್ಟುಬಿಡದ ಸಿದ್ದರಾಮಯ್ಯ, “ಶಾಸಕರು ನನ್ನೊಂದಿಗಿದ್ದಾರೆ. ಶಾಸಕರ ಅಭಿಪ್ರಾಯವೇ ಅಂತಿಮ. ಮೇಲಾಗಿ, ಶಿವಕುಮಾರ್ ವಿರುದ್ಧ ಇ.ಡಿ. ಪ್ರಕರಣವಿದೆ. ಅವರು ಮತ್ತೊಮ್ಮೆ ಬಂಧನಕ್ಕೀಡಾದಲ್ಲಿ ಪಕ್ಷ, ಸರಕಾರ ಎರಡಕ್ಕೂ ಮುಜುಗರ" ಎಂದು ವಾದಿಸಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಒಬಿಸಿ ನಾಯಕ. ಅವರ ವಿರೋಧ ಕಟ್ಟಿಕೊಂಡು, ಮೇಲ್ವರ್ಗದ (ಒಕ್ಕಲಿಗ) ಶಿವಕುಮಾರ್‌ರನ್ನು ಸಿಎಂ ಮಾಡುವುದು ಅಪಾಯಕಾರಿ ಎಂದು ದಿಲ್ಲಿ ನಾಯಕರು ಭಾವಿಸಿದ್ದರು.

ಹಾಗಂತ, ಶಿವಕುಮಾರ್ ತಮ್ಮ ನಿಲುವನ್ನು ಬದಲಿಸಿರಲಿಲ್ಲ. ಡಿಕೆಶಿಗಿಂತ ಹೆಚ್ಚು ಅವರ ಸೋದರ ಡಿ.ಕೆ.ಸುರೇಶ್, “ಸಿಎಂ ಸ್ಥಾನ ಸಿಗದೆ ದಿಲ್ಲಿ ಬಿಡುವುದು ಬೇಡ. ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡುವುದನ್ನು ನಾನಂತೂ ಒಪ್ಪಲಾರೆ" ಎಂದಿದ್ದರು. ಇಷ್ಟೆ ನಡೆಯುತ್ತಿದ್ದಾಗ, ಸೋನಿಯಾ ಗಾಂಧಿ ದೆಹಲಿಯಲ್ಲಿರಲಿಲ್ಲ. ‌

ಹೀಗಾಗಿ, ವಿಡಿಯೋ ಕಾನ್ಫರೆನ್ಸ್ ಮೂಲಕ ಶಿವಕುಮಾರ್ ಜತೆಗೆ ಮಾತನಾಡಿ, “ಅರ್ಹ ಸಂದರ್ಭ ದಲ್ಲಿ ನಿಮಗೆ ಅಧಿಕಾರ ಸಿಗಲಿದೆ. ಈಗ ನೀವು ತಾಳ್ಮೆಯಿಂದಿರಬೇಕು. ಬೆಂಗಳೂರಿಗೆ ಹೋಗಿ, ಸರಕಾರ ರಚನೆ ಮಾಡಿ" ಎಂದು ಸಮಾಧಾನ ಮಾಡಿದ್ದರು. ಅಧಿನಾಯಕಿ ಹೇಳಿದ್ದನ್ನು ವಿರೋಧಿಸಿ ಹೆಜ್ಜೆ ಇಡುವ ಮನಸ್ಸು ಅಂದು ಶಿವಕುಮಾರ್‌ರಲ್ಲಿ ಇರಲಿಲ್ಲ.

ಅಧಿಕಾರದ ಭರವಸೆ ನೀಡಿದ್ದನ್ನು ಒಪ್ಪಿ, ನಂತರ ತಮ್ಮ ಸೋದರ ಸುರೇಶ್ ಗೂ ಸಾಂತ್ವನ ಹೇಳಿ ದಿಲ್ಲಿಯಿಂದ ಬೆಂಗಳೂರಿಗೆ ಮುಖ ಮಾಡಿದ್ದರು. ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ಆಗಲಿದೆ ಎಂಬ ಸಂದೇಶ ಸಿಕ್ಕರೂ, ಛತ್ತೀಸ್‌ಗಢ ಮತ್ತು ಪಂಜಾಬ್‌ನ ಉದಾಹರಣೆಗಳು ಕಣ್ಣಮುಂದಿದ್ದರಿಂದ ಡಿ.ಕೆ.ಸುರೇಶ್ ಮತ್ತವರ ಬೆಂಬಲಿಗ ಪಡೆಗೆ ಸೋನಿಯಾ ಗಾಂಧಿ ಭರವಸೆ ಸಮಾಧಾನ ತಂದಿರಲಿಲ್ಲ.

“ಎರಡೂವರೆ ವರ್ಷದ ಬಳಿಕ ಅಧಿಕಾರ ಬಿಟ್ಟುಕೊಡಲು ಸಿದ್ದರಾಮಯ್ಯನವರು ಸನ್ಯಾಸಿಯೇ? ಮೇಲಾಗಿ, ಅವರ ಬೆಂಬಲಿಗ ಶಾಸಕರು ಅದಕ್ಕೆ ಒಪ್ಪುತ್ತಾರಾ? ಇದು ಕೇವಲ ಕಣ್ಣೊರೆಸುವ ತಂತ್ರ" ಎಂದೇ ಡಿಕೆಶಿ ಆಪ್ತರು, ಅಂದು ದಿಲ್ಲಿಯಲ್ಲಿ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾ ಡುತ್ತಾ ಬೇಸರ ಹೊರ ಹಾಕಿದ್ದರು. ಈಗ ಅಧಿಕಾರ ಸಿಗದಿದ್ದರೆ, 5 ವರ್ಷದಲ್ಲಿ ಎಂದಿಗೂ ಸಿಗದು ಎನ್ನುವುದು ಅವರ ಖಚಿತ ವಾದವಾಗಿತ್ತು. ಈಗಿನ ಬೆಳವಣಿಗೆಗಳನ್ನು ನೋಡಿದರೆ, 2 ವರ್ಷಗಳ ಹಿಂದಿನ ಡಿಕೆಶಿ ಬೆಂಬಲಿಗರ ವಾದವೇ ನಿಜವಾಗುವ ಲಕ್ಷಣ ಗೋಚರಿಸಿದೆ.

ಅದೇನೇ ಇರಲಿ, ಕರ್ನಾಟಕದಲ್ಲಿ ಡಿಕೆ-ಸಿದ್ದರಾಮಯ್ಯ, ಮತ್ತವರ ಬೆಂಬಲಿಗರ ಗುzಟಗಳು ಪಕ್ಷಕ್ಕೆ ವಿಪರೀತ ಹಾನಿ ಮಾಡುತ್ತಿವೆ. ಛತ್ತೀಸ್‌ಗಢ, ಪಂಜಾಬ್, ರಾಜಸ್ಥಾನಗಳಲ್ಲಿನ ಕಾಂಗ್ರೆಸ್ಸಿಗರ ಅಧಿಕಾರ ಕ್ಕಾಗಿನ ಕಿತ್ತಾಟಗಳು ಕೂಡ ಚುನಾವಣಾ ಸೋಲಿಗೆ ಕಾರಣವಾಗಿದ್ದವು ಎನ್ನುವುದಿಲ್ಲಿ ಉಲ್ಲೇಖಾರ್ಹ.

ಪಂಜಾಬ್‌ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್‌ರಿಂದ ರಾಜೀನಾಮೆ ಪಡೆದುಕೊಂಡ ಪ್ರಹಸನ ಅಂದು ಪಕ್ಷವನ್ನೇ ಬುಡಮೇಲು ಮಾಡಿತ್ತು. ಆಗಿನ ಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಠಕ್ಕೆ ಕಟ್ಟುಬಿದ್ದ ದಿಲ್ಲಿ ನಾಯಕರು, ಕ್ಯಾಪ್ಟನ್‌ರನ್ನು 2021ರ ಸೆಪ್ಟೆಂಬರ್ ತಿಂಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಸಿ, ಸಿಧು ಆಪ್ತ, ದಲಿತ ಮುಖಂಡ ಚರಣ್‌ಜಿತ್ ಸಿಂಗ್ ಚನ್ನಿಯವರನ್ನು ಕೊನೆಯ ಆರೆಂಟು ತಿಂಗಳುಗಳಿಗೆ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದರು.

‘ಬರಲಿರುವ ವಿಧಾನಸಭೆ ಚುನಾವಣೆ ಗೆದ್ದು ಪೂರ್ಣಾವಧಿಗೆ ನಾನೇ ಸಿಎಂ ಆಗುತ್ತೇನೆ’ ಎಂಬುದು ಸಿಧು ಮಹತ್ವಾಕಾಂಕ್ಷೆಯಾಗಿತ್ತು. ಆದರೆ, ಆಗಿದ್ದೇನು? ಕ್ಯಾಪ್ಟನ್ ಅಮರಿಂದರ್ ಪಕ್ಷ ಬಿಟ್ಟು, ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿ ಪರೋಕ್ಷವಾಗಿ ಬಿಜೆಪಿ ಜತೆ ಕೈಜೋಡಿಸಿದರು. ದಶಕಗಳ ಕಾಲದ ಸೋನಿಯಾ ಗಾಂಧಿ ಜತೆಗಿನ ಒಡನಾಟವೂ ಅಲ್ಲಿಗೆ ಅಂತ್ಯಗೊಂಡಿತ್ತು. ನವಜೋತ್ ಸಿಧು ಕೂಡ ಅಮೃತಸರ ಪೂರ್ವ ಕ್ಷೇತ್ರದ ಸೋತು ಮನೆ ಸೇರಿದರು. ಆಮ್ ಆದ್ಮಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ, ಕಾಂಗ್ರೆಸ್‌ಗೆ ಮಣ್ಣುಮುಕ್ಕಿಸಿತು.

ಪಂಜಾಬ್ ಕಾಂಗ್ರೆಸ್‌ನ ಹಿಂದೂ ನಾಯಕ ಎಂದು ಗುರುತಿಸಿಕೊಂಡಿದ್ದ ಸುನೀಲ್ ಜಾಖಡ್ ಕೂಡ ಬಿಜೆಪಿಗೆ ಸೇರ್ಪಡೆಯಾದರು. ಛತ್ತೀಸ್‌ಗಢದಲ್ಲೂ ಇದೇ ರೀತಿ ನಾಯಕತ್ವದ ಬಿಕ್ಕಟ್ಟು ತಾರಕ ಕ್ಕೇರಿತ್ತು. 2018ರಲ್ಲಿ ಛತ್ತೀಸ್‌ಗಢ ಸಿಎಂ ಸ್ಥಾನಕ್ಕೆ ಭೂಪೇಶ್ ಬಘೇಲ್‌ರನ್ನು ಆಯ್ಕೆ ಮಾಡುವ ಹೈಕಮಾಂಡ್ ತೀರ್ಮಾನ ರಾಜ್ಯಾಧ್ಯಕ್ಷ ತ್ರಿಭುವನೇಶ್ವರ ಶರಣ್‌ಸಿಂಗ್ ದೇವ್‌ಗೆ (ಟಿ.ಎಸ್.ಸಿಂಗ್ ದೇವ್) ಒಪ್ಪಿಗೆಯಾಗಿರಲಿಲ್ಲ.

ಇದರಿಂದಾಗಿ, ಅಧಿಕಾರ ಹಂಚಿಕೆ ಸೂತ್ರ ಹೆಣೆದಿದ್ದ ಹೈಕಮಾಂಡ್, ಎರಡೂವರೆ ವರ್ಷಗಳ ಬಳಿಕ ಟಿ.ಎಸ್.ಸಿಂಗ್ ದೇವ್‌ಗೆ ಸಿಎಂ ಸ್ಥಾನ ನೀಡುವುದಾಗಿ ಹೇಳಿತ್ತು. ಆದರೆ, ಸಿದ್ದರಾಮಯ್ಯರಂತೆ ಅಧಿಕಾರ ಬಿಡಲು ಒಲ್ಲದ ಭೂಪೇಶ್ ಬಘೇಲ, ಪೂರ್ಣಾವಧಿಗೆ ಸಿಎಂ ಸ್ಥಾನದಲ್ಲಿ ಮುಂದು ವರಿದರು. ಟಿ.ಎಸ್. ಸಿಂಗ್ ಬಂಡಾಯವು 2023ರ ವಿಧಾನಸಭೆ ಚುನಾವಣೆಗೆ ಹಾನಿ ಮಾಡಲಿದೆ ಎಂಬುದನ್ನರಿತ ದಿಲ್ಲಿ ನಾಯಕರು, ಚುನಾವಣೆಗೆ 6 ತಿಂಗಳು ಬಾಕಿ ಇರುವಾಗ ಅವರನ್ನು ರಾಜ್ಯದ ಡಿಸಿಎಂ ಆಗಿ ನೇಮಿಸಿದರು.

ಡಿಸಿಎಂ ಹುದ್ದೆಯನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದ ದೇವ್‌ಗೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ನಂಬಿಕೆಯೂ ಇರಲಿಲ್ಲ. ಅವರಿಬ್ಬರ ಅಧಿಕಾರ ಸಂಘರ್ಷ 2023ರಲ್ಲಿ ಬಿಜೆಪಿಯ ಗೆಲುವಿಗೆ ನಾಂದಿಹಾಡಿತು. ರಾಜಸ್ಥಾನದಲ್ಲೂ ಇಂಥದ್ದೇ ಘಟನಾವಳಿಗಳು ನಡೆದಿದ್ದವು. ಸಿಎಂ ಸ್ಥಾನಕ್ಕಾಗಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಪಿಸಿಸಿ ಅಧ್ಯಕ್ಷ ಸಚಿನ್ ಪೈಲಟ್ ಮಧ್ಯೆ ನಿತ್ಯವೂ ಕಾದಾಟ ನಡೆಯುತ್ತಿತ್ತು.

ಗೆಹ್ಲೋಟ್ ಹಠ ಬಿಡದ ಕಾರಣ ಸಚಿನ್ ಪೈಲಟ್ ಕಾಂಗ್ರೆಸ್ ಸರಕಾರದ ವಿರುದ್ಧವೇ ಪ್ರತಿಭಟನೆ ಗಳನ್ನು ಮಾಡುತ್ತಾ ಮುಜುಗರ ತರುತ್ತಿದ್ದರು. ದಿಲ್ಲಿ ದೊರೆಗಳು ಉಭಯ ಸಂಕಟದಲ್ಲಿ ಸಿಲುಕಿ ದರೂ, ಗೆಹ್ಲೋಟ್ ಪ್ರಭಾವಳಿ ಮುಂದೆ ದುರ್ಬಲ ಹೈಕಮಾಂಡ್‌ಗೆ ಏನೂ ಮಾಡಲಾಗಲಿಲ್ಲ. ಪರಿಣಾಮ- ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಿತು.

ಈಗ ಕರ್ನಾಟಕದಲ್ಲಿ ನಾಯಕತ್ವದ ಬಗ್ಗೆ ಸಿದ್ದರಾಮಯ್ಯರ ಖಚಿತ ನಿಲುವು ಡಿಕೆಶಿ ಮತ್ತವರ ಬೆಂಬಲಿಗರ ನಿದ್ದೆಗೆಡಿಸಿರುವುದಂತೂ ಹೌದು. ಒಕ್ಕಲಿಗ ಸ್ವಾಮೀಜಿಗಳು, ಲಿಂಗಾಯತ ಸಮುದಾ ಯದ ರಂಭಾಪುರಿ ಶ್ರೀಗಳು ಸೇರಿ ಅನೇಕರು ಡಿಕೆಶಿ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಮುಂದಿನ ಅವಧಿಗೂ ನಾನೇ ಸಿಎಂ ಎಂಬ ಸಿದ್ದರಾಮಯ್ಯರ ಮಾತುಗಳಿಗೆ ಡಿಕೆಶಿ ಸುಮ್ಮನಿದ್ದರೂ, ಸೋದರ ಡಿ.ಕೆ.ಸುರೇಶ್ ಮತ್ತವರ ಬೆಂಬಲಿಗರು ಮತ್ತೆಷ್ಟು ದಿನ ಸುಮ್ಮನಿರುತ್ತಾರೆ? ಅವರ ದಾಳಗಳೇನಿರ ಬಹುದು? ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.

(ಲೇಖಕರು ಹಿರಿಯ ಪತ್ರಕರ್ತರು)