Ramanand Sharma Column: ಇಂದಲ್ಲ ನಾಳೆ ಪ್ರಹಸನಕ್ಕೆ ಕೊನೆಯೆಂದು ?
ನಮ್ಮ ರಾಜಕೀಯ ವ್ಯವಸ್ಥೆಯ ದುರಂತವೆಂದರೆ- ರಾಷ್ಟ್ರೀಯ ಪಕ್ಷಗಳಲ್ಲಿರುವ ಹೈ ಕಮಾಂಡ್. ಇದರ ಒಪ್ಪಿಗೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. “ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ಎಲ್ಲವೂ ಹೈಕಮಾಂಡ್ ಹೇಳಿದಂತೆ" ಎಂದು ಕಾರ್ಯಕರ್ತರು, ಧುರೀಣರು ನಿರಂತರವಾಗಿ ಹೇಳುತ್ತಲೇ ಇರುತ್ತಾರೆ. ಇದನ್ನು ಒಂದು ರೀತಿಯ ‘ದಾಸ್ಯ’ ಎನ್ನಬಹುದೇನೋ ?


ವಿಶ್ಲೇಷಣೆ
ರಮಾನಂದ ಶರ್ಮಾ
ಕರ್ನಾಟಕದಲ್ಲಿ ಸಂಪುಟ ಸರ್ಜರಿ, ಕೆಪಿಸಿಸಿ ಪುನಾರಚನೆ ಅಥವಾ ಅಧ್ಯಕ್ಷರ ನೇಮಕಾತಿಯ ಪ್ರಹಸನ ಇನ್ನೂ ಮುಂದುವರಿದಿದೆ. ಸಚಿವರ ಕಾರ್ಯವೈಖರಿ ಮತ್ತು ಸಾಧನೆಯನ್ನು ಪರಿಶೀಲಿಸಿ, ಕೆಲವರನ್ನು ಕೈಬಿಟ್ಟು ಹೊಸಬರಿಗೆ ಮಣೆಹಾಕಿ ‘ಸಂಪುಟ-ಸರ್ಜರಿ’ ಮಾಡಲಾಗುವುದು ಎನ್ನುವ ಸುದ್ದಿ ಸಾಕಷ್ಟು ತಿಂಗಳಿಂದ ಹರಿದಾಡುತ್ತಿತ್ತು. ತೀರಾ ಇತ್ತೀಚಿನ ಮಾಹಿತಿಯಂತೆ ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕಮಾಂಡ್ ಸೂಚಿಸಿದೆಯಂತೆ. ಹೀಗಾಗಿ ಡಿಸೆಂಬರ್ ವರೆಗೂ ಈ ಪರಿಸ್ಥಿತಿ ಮುಂದುವರಿಯುವ ಲಕ್ಷಣ ನಿಖರವಾಗಿ ಗೋಚರಿಸುತ್ತಿದೆ. ಈ ‘ಇಂದಲ್ಲ ನಾಳೆ’ ಪ್ರಹಸನವನ್ನು ನೋಡಿ ಪಕ್ಷದ ಕಾರ್ಯಕರ್ತರು ಮತ್ತು ಧುರೀಣರು ಬೇಸತ್ತಿದ್ದಾರೆ, ಹೈಕಮಾಂಡ್‌ನ ಈ ಕಾರ್ಯ ವೈಖರಿಯ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಬಿಜೆಪಿ ಅಧಿಕಾರ ದಲ್ಲಿದ್ದಾಗ ಇಂಥದೇ ನಾಟಕ ನಡೆದಿದ್ದನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ.
ಆಗ ವಿಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಲೇವಡಿ ಮಾಡುತ್ತಿತ್ತು. ‘ಒಂದು ಸಂಪುಟ ವಿಸ್ತರಣೆ/ಪುನಾರಚನೆ ಮಾಡಲಾಗದವರು ರಾಜ್ಯದ ಆಡಳಿತವನ್ನು ಹೇಗೆ ನಿಭಾಯಿಸಬಲ್ಲರು?’ ಎಂದು ಲಭ್ಯವಿರುವ ಎಲ್ಲ ವೇದಿಕೆಗಳಲ್ಲಿ ಅದು ಟೀಕಿಸುತ್ತಿತ್ತು. ಆಡಳಿತ-ವಿರೋಧಿ ಅಲೆಯಲ್ಲಿ ಮತ್ತು ಕಾಂಗ್ರೆಸ್‌ನ ಪಂಚ ಗ್ಯಾರಂಟಿಗಳ ಪ್ರವಾಹದಲ್ಲಿ ಬಿಜೆಪಿಯು ತೆರೆಮರೆಗೆ ಸರಿದಿದ್ದು ಈಗ ಇತಿಹಾಸ. ಅದೀಗ ಮರುಕಳಿಸುತ್ತಿದೆ ಹಾಗೂ ಕಾಂಗ್ರೆಸ್ ತಾನು ಮಾಡಿದ್ದ ಟೀಕೆಯನ್ನು ಹಿಂಪಡೆಯ ಬೇಕಾಗಿ ಬಂದಿದೆ.
ಇದನ್ನೂ ಓದಿ: Ramanand Sharma Column: ವಿಪರ್ಯಾಸಗಳ ಬೀಡು!
ನಮ್ಮ ಸಂವಿಧಾನದ ಪ್ರಕಾರ, ಸಚಿವ ಸಂಪುಟ ರಚನೆ, ಪುನಾರಚನೆ, ವಿಸ್ತರಣೆಗಳು ಮುಖ್ಯಮಂತ್ರಿ ಗಳ ಪರಮಾಧಿಕಾರಕ್ಕೆ/ವಿವೇಚನೆಗೆ ಬಿಟ್ಟಂಥವು. ಆದರೆ, ವಾಸ್ತವದಲ್ಲಿ ನಮ್ಮ ಪಕ್ಷ ಪದ್ಧತಿಯ ರಾಜಕೀಯ ವ್ಯವಸ್ಥೆಯಲ್ಲಿ ಇದು ಅಗೋಚರವಾಗಿ ಪಕ್ಷದ ಹೈಕಮಾಂಡ್‌ನ ಪರಮಾಧಿಕಾರ/ವಿವೇಚನೆಗೆ ಬಿಟ್ಟ ವಿಷಯ. ಆದರೆ ಈ ನಿಟ್ಟಿನಲ್ಲಿ ಹೈಕಮಾಂಡ್ ಅನ್ನು ಪ್ರಶ್ನಿಸಿದರೆ ಅವರು ಮುಖ್ಯಮಂತ್ರಿಗಳ ಪರಮಾಧಿಕಾರ/ ವಿವೇಚನೆಯನ್ನು ಉಲ್ಲೇಖಿಸುತ್ತಾರೆ; ಮುಖ್ಯಮಂತ್ರಿಗಳನ್ನು ಕೇಳಿದರೆ ಹೈಕಮಾಂಡ್‌ನತ್ತ ಬೆರಳು ತೋರಿಸುತ್ತಾರೆ!
ನಮ್ಮ ರಾಜಕೀಯ ವ್ಯವಸ್ಥೆಯ ದುರಂತವೆಂದರೆ- ರಾಷ್ಟ್ರೀಯ ಪಕ್ಷಗಳಲ್ಲಿರುವ ಹೈಕಮಾಂಡ್. ಇದರ ಒಪ್ಪಿಗೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ. “ನಾವು ಪಕ್ಷದ ಶಿಸ್ತಿನ ಸಿಪಾಯಿಗಳು, ಎಲ್ಲವೂ ಹೈಕಮಾಂಡ್ ಹೇಳಿದಂತೆ" ಎಂದು ಕಾರ್ಯಕರ್ತರು, ಧುರೀಣರು ನಿರಂತರವಾಗಿ ಹೇಳುತ್ತಲೇ ಇರುತ್ತಾರೆ. ಇದನ್ನು ಒಂದು ರೀತಿಯ ‘ದಾಸ್ಯ’ ಎನ್ನಬಹುದೇನೋ? ಹೈಕಮಾಂಡ್‌ನ ಕಾರ್ಯವೈಖರಿಯಿಂದ ಮುಜುಗರವಾಗುತ್ತಿದ್ದರೂ/ಬೇಸರವಾದರೂ ಅದನ್ನು ದಿಟ್ಟವಾಗಿ ಹೊರಗೆಡಹಲಾಗದ ದೌರ್ಬಲ್ಯವಿದು.

ಹೈಕಮಾಂಡ್‌ನ ಅವಕೃಪೆಗೆ ಒಳಗಾಗಿ, ದೊರಕಬಹುದಾದ ಅವಕಾಶಗಳನ್ನು ಕಳೆದುಕೊಳ್ಳುವ ಅವ್ಯಕ್ತ ಭೀತಿಯೇ ಇದಕ್ಕೆ ಕಾರಣ ಎನ್ನುವ ವಿಶ್ಲೇಷಕರ ಅಭಿಮತದಲ್ಲಿ ಅರ್ಥವಿಲ್ಲದಿಲ್ಲ. ಉನ್ನತ ಮಟ್ಟದ ನಾಯಕರುಗಳು ಸಚಿವ ಸಂಪುಟ ಪುನಾರಚನೆ/ವಿಸ್ತರಣೆ ಮತ್ತು ನಿಗಮ-ಮಂಡಳಿಗಳಿಗೆ ನೇಮಕಾತಿ ವಿಷಯದಲ್ಲಿ ದೆಹಲಿಗೆ ತೆರಳುವುದನ್ನೋ, ಒಂದೆರಡು ದಿನ ಅಲ್ಲಿ ಕಾದಿದ್ದು ವರಿಷ್ಠ ರನ್ನು ಭೇಟಿ ಮಾಡಿ ಬರಿಗೈಲಿ ಬರುವುದನ್ನೋ ಅಥವಾ ಅವರಿತ್ತ ಭರವಸೆ/ ಸಮಜಾಯಿಷಿಗಳನ್ನು ನಂಬಿ ವಾಪಸಾಗುವುದನ್ನೋ ನೋಡಿ ಜನರು ಜುಗುಪ್ಸೆಗೊಂಡಿದ್ದಾರೆ.
ಈ ಭಾಗ್ಯಕ್ಕೆ ಚುನಾವಣೆ ಒಂದು ಕೇಡು ಎನ್ನುತ್ತಿದ್ದಾರೆ. ‘ಪ್ರಜಾಪ್ರಭುತ್ವ ಎಂಬುದು ಹೆಸರಿಗೆ ಮಾತ್ರ ಇದ್ದು, ನಾವೀಗ ನೋಡುತ್ತಿರುವುದು ಮತ್ತು ಅನುಭವಿಸುತ್ತಿರುವುದು ಹೈಕಮಾಂಡ್ ಪ್ರಭುತ್ವ’ ಎಂಬ ಹತಾಶೆಯ ಮಾತು ಕೇಳಿಬರುತ್ತಿದೆ. ‘ಯಾರೇ ಬರಲಿ, ಯಾರೇ ಹೋಗಲಿ ನಮಗೆ ರಾಗಿ ಬೀಸುವುದು ಮಾತ್ರ ತಪ್ಪದು’ ಎನ್ನುವಂತೆ ಯಾರೇ ಮಂತ್ರಿಯಾಗಲಿ, ಯಾರನ್ನೇ ತೆಗೆದುಹಾಕಲಿ ಜನಸಾಮಾನ್ಯರಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ.
ಏಕೆಂದರೆ, ಹಣದುಬ್ಬರದ ದಾಳಿಯಲ್ಲಿ ತಿಂಗಳ ಕೊನೆ ನೋಡುವುದರಲ್ಲಿ ಅವರು ಮಗ್ನ ರಾಗಿರುತ್ತಾರೆ. ಆದರೆ, ಸಚಿವ ಸಂಪುಟ ಪುನಾರಚನೆ/ವಿಸ್ತರಣೆ ವಿಳಂಬವಾದಷ್ಟೂ ಆಡಳಿತ ವ್ಯವಸ್ಥೆ ನಿಷ್ಕ್ರಿಯವಾಗುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ. ಹಾಗೆಯೇ, ಸಚಿವರಾಗಲು ಅರ್ಹರಿದ್ದರೂ ಯಾವುದೋ ಕಾರಣಕ್ಕೆ ‘ಬಸ್ಸು ತಪ್ಪಿಸಿಕೊಂಡವರು’ ಈ ವಿಳಂಬದಿಂದ ಪರಿತಪಿಸುವುದು ಬೇರೆ ಮಾತು.
ಹಾಗೆಯೇ, ಅಸಮರ್ಥರು, ಶೂನ್ಯ ಸಾಧನೆಯವರು ಕುರ್ಚಿಯಲ್ಲಿ ಮುಂದುವರಿದು ಸರಕಾರಕ್ಕೆ ಕೆಟ್ಟ ಹೆಸರನ್ನು ತರುವುದು ಇನ್ನೊಂದು ದುರಂತ. ಸದರಿ ‘ಇಂದಲ್ಲ ನಾಳೆ’ ಪ್ರಹಸನವು ಡಿಸೆಂಬರ್ ವರೆಗೂ ಮುಂದುವರಿಯಲಿದೆ; ಅಲ್ಲಿಯವರೆಗೂ ಸುಮ್ಮನಿರುವಂತೆ ಹೈಕಮಾಂಡ್ ಖಡಕ್ ಸೂಚನೆ ಯನ್ನು ನೀಡಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಷ್ಟು ಹೊತ್ತಿಗೆ ಸಿದ್ದರಾಮಯ್ಯ ನವರು ತಮ್ಮ ಅಧಿಕಾರಾವಧಿಯ ಅರ್ಧದಷ್ಟನ್ನು ಮುಗಿಸುತ್ತಿದ್ದು, ಒಂದು ವೇಳೆ ಅಧಿಕಾರ ಹಂಚಿಕೆಗೆ ಸಂಬಂಧಿಸಿ ಏನಾದರೂ ಒಳ-ಒಡಂಬಡಿಕೆಯಾಗಿದ್ದರೆ ಆಗ ಅವರು ತ್ಯಾಗಮೂರ್ತಿ ಗಳಾಗಬೇಕಾಗುತ್ತದೆ.
ಇದೇ ಸಂದರ್ಭದಲ್ಲಿ ಮೇಜರ್ ಸರ್ಜರಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಸರ್ಜರಿಯು ಸಂಪುಟ ಪುನಾರಚನೆಗೆ ಸೀಮಿತವಾಗದೆ, ಮೇಲ್ಮಟ್ಟದಲ್ಲಿ ಆಗುವ ಸಾಧ್ಯತೆಯನ್ನು ವಿಶ್ಲೇಷಕರು ಅಂದಾಜು ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಕ್ರಾಂತಿಯಾಗಲಿದೆ ಎಂಬ ವದಂತಿಯನ್ನು ಕೇಳಿಸಿಕೊಂಡಾಗ ಇಂಥ ಸಂದೇಹ ಮೂಡುವುದು ಸ್ವಾಭಾವಿಕ.
ಸಚಿವ ಸಂಪುಟ ಪುನಾರಚನೆ/ ವಿಸ್ತರಣೆ ಸುಲಭವಾಗಿರದೆ ಅದರಲ್ಲಿ ನಾನಾ ಸಿಕ್ಕುಗಳು ಮತ್ತು ಸಮೀಕರಣಗಳಿವೆ. ಅವನ್ನು ಬಿಡಿಸಿಕೊಂಡು ಮುಂದೆ ಸಾಗುವುದೇ ಹರಸಾಹಸದ ಕೆಲಸ. ಒಬ್ಬರನ್ನು ಸಚಿವ ಸಂಪುಟದೊಳಗೆ ತೆಗೆದುಕೊಳ್ಳುವುದು ಸುಲಭ, ಆದರೆ ಒಬ್ಬರನ್ನು ಕೈಬಿಡು ವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಮತ್ತು ಭಿನ್ನಮತಕ್ಕೆ ಆಸ್ಪದ ನೀಡಿದಂತೆ.
ಏಕೆಂದರೆ, ‘ಅಸಮರ್ಥ’ ಎಂಬ ಹಣೆಪಟ್ಟಿಯನ್ನು ಧರಿಸಲು ಯಾರೂ ಸಿದ್ಧರಿರುವುದಿಲ್ಲ. ಇದೇ ಕಾರಣಕ್ಕೆ, ಲೇವಡಿ/ಟೀಕೆಗಳ ಹೊರತಾಗಿಯೂ ಈ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಿರುತ್ತದೆ. ಧರ್ಮ, ಜಾತಿ, ಜಿಲ್ಲೆ, ನಿಷ್ಠರು, ವಲಸಿಗರು, ಅವರ ಕುಟುಂಬದವರು, ಇವರ ಕುಟುಂಬದವರು, ಪಕ್ಷದ ಕಚೇರಿಯಲ್ಲಿ ಬಹುಕಾಲ ಕೆಲಸ ಮಾಡಿದವರು, ವರಿಷ್ಠರ ಆಪ್ತರು ಹೀಗೆ ಹಲವಾರು ಸಮೀಕರಣ ವನ್ನು ದಾಟಿ ಸಂಪುಟ ಪುನಾರಚನೆ ಮಾಡುವುದು ಸುಲಭವಲ್ಲ.
ಅಂತೆಯೇ ಕುರುಡು ನೆಪದ ಹೆಸರಿನಲ್ಲಿ ಇದನ್ನು ಮುಂದಕ್ಕೆ ಹಾಕುತ್ತಾ ಹೋಗುವುದು ವಾಡಿಕೆ. ‘ಚುನಾವಣೆ ಮುಗಿದು ಅಧಿಕಾರದ ಗದ್ದುಗೆ ಹಿಡಿಯುತ್ತಿರುವಾಗ, ಒಂದೇ ಕಂತಿನಲ್ಲಿ ಪೂರ್ಣ ಸಂಪುಟವನ್ನು ರಚಿಸಬೇಕು; ಚುನಾವಣೆ ಗೆದ್ದ ಹುಮ್ಮಸ್ಸು ಮತ್ತು ಉತ್ಸಾಹದಲ್ಲಿ ಭಿನ್ನಮತ ಹಾಗೂ ಮಂತ್ರಿಗಿರಿಗಾಗಿನ ಪೈಪೋಟಿ ತೀವ್ರವಾಗಿರುವುದಿಲ್ಲ. ದಿನಗಳೆದಂತೆ ಆಕಾಂಕ್ಷಿಗಳ ಒತ್ತಡ, ಪೈಪೋಟಿ ಹೆಚ್ಚುತ್ತಾ ಹೋಗುತ್ತದೆ.
ಆಡಳಿತವನ್ನು ಕಡೆಗಣಿಸಿ ಅವರನ್ನು ತೃಪ್ತಿಪಡಿಸುವುದರಲ್ಲಿ, ಅವರಿಗೆ ಸಮಾಧಾನ ಹೇಳುವುದರಲ್ಲಿ ಸಮಯ ವ್ಯರ್ಥವಾಗುತ್ತದೆ’ ಎಂಬ ಅನುಭವಿ ರಾಜಕಾರಣಿಯೊಬ್ಬರ ಮಾತಿನಲ್ಲಿ ಸತ್ಯವಿದೆ. ಹಾಗೆಯೇ, ಒಂದೆರಡು ಮಂತ್ರಿ ಪದವಿಗಳನ್ನು ಹಾಗೆಯೇ ಬಿಟ್ಟು, ಆಕಾಂಕ್ಷಿಗಳಿಗೆ ಅದನ್ನು ತೋರಿಸಿ ಹಿಡಿತದಲ್ಲಿ ಇಟ್ಟುಕೊಳ್ಳುವ ತಂತ್ರ ಇತ್ತೀಚೆಗೆ ಡಿವಿಡೆಂಡ್ ನೀಡುತ್ತಿಲ್ಲ. ಸಂಪುಟ ಪುನಾರಚನೆ ಮತ್ತು ವಿಸ್ತರಣೆ ಆಗುತ್ತಿಲ್ಲ ಎಂದು ಮುಖ್ಯಮಂತ್ರಿಗಳನ್ನು ಸುಲಭವಾಗಿ ಆಕ್ಷೇಪಿಸ ಬಹುದು.
ಆದರೆ, ‘ಹೆರುವವರಿಗಷ್ಟೇ ಗೊತ್ತು ಹೆರಿಗೆ ನೋವು’ ಎಂಬ ಗಾದೆಯ ಅರ್ಥ ತಿಳಿದವರಿಗೆ ಮಾತ್ರ ಮುಖ್ಯಮಂತ್ರಿಗಳ ಸಂಕಷ್ಟ ಅರ್ಥವಾಗುತ್ತದೆ.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)