Ganesh Bhat Column: ಭಾರತದಲ್ಲಿ ಆಗುತ್ತಿರುವ ಬಡತನ ನಿವಾರಣೆ ಆಕಸ್ಮಿಕವೇ ?
ಅಗತ್ಯವುಳ್ಳವರಿಗೆ ಸರಕಾರವು ಕೊಡುವ ಸಹಾಯಧನ, ಪಿಂಚಣಿ, ಸಬ್ಸಿಡಿ, ಪ್ರೋತ್ಸಾಹಧನಗಳು ಅವರ ಬ್ಯಾಂಕ್ ಖಾತೆಗಳನ್ನು ನೇರವಾಗಿ ಸೇರುತ್ತಿವೆ. ಸರಕಾರದ ಮುದ್ರಾ ಲೋನ್, ಸ್ಟಾರ್ಟಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಯೋಜನೆಗಳು ‘ಉದ್ಯಮ’ದ ಅವಕಾಶಗಳನ್ನೂ, ‘ಉದ್ಯೋಗ’ದ ಅವಕಾಶ ಗಳನ್ನೂ ಹೆಚ್ಚಿಸಿವೆ.


ವಿಶ್ಲೇಷಣೆ
ಗಣೇಶ್ ಭಟ್, ವಾರಣಾಸಿ
ಚುನಾವಣಾ ಕಾಲದಲ್ಲಿ ರಾಜಕಾರಣಿಗಳು ಬಡತನ ನಿರ್ಮೂಲನೆಯ ಬಗ್ಗೆ ಬಣ್ಣ ಬಣ್ಣದ ಭರವಸೆಗಳನ್ನು ನೀಡಿ ಜನರನ್ನು ಮಂಕುಮಾಡುತ್ತಿದ್ದುದು ಭಾರತದಲ್ಲಿ ಸಾಮಾನ್ಯವೇ ಆಗಿತ್ತು. ತಮ್ಮದು ಬಡವರ ಪಕ್ಷ ಎಂದು ಬಿಂಬಿಸಿಕೊಳ್ಳಲು ರಾಜಕಾರಣಿಗಳು ಬಡವರ ಮುರುಕಲು ಗುಡಿಸಲುಗಳಿಗೆ ಭೇಟಿ ನೀಡಿದ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. 60-70ರ ದಶಕಗಳಲ್ಲಿ ಇಂದಿರಾ ಗಾಂಧಿಯವರ ಚುನಾವಣಾ ಪ್ರಚಾರದಲ್ಲಿ, ತಮ್ಮ ಪಕ್ಷವು ಗೆದ್ದರೆ ಡಜನರಿಗೆ ‘ಅಶನ-ವಸನ-ವಸತಿ’ಗಳನ್ನು ಒದಗಿಸಿಕೊಡುತ್ತದೆ ಎಂಬ ಭರವಸೆಯನ್ನು ಒಳಗೊಂಡಿದ್ದ ‘ರೋಟಿ, ಕಪ್ಡಾ ಔರ್ ಮಕಾನ್’ ಎನ್ನುವ ಘೋಷಣೆ ಬಹಳ ಪ್ರಚಲಿತದಲ್ಲಿತ್ತು.
1971ರಲ್ಲಿ ಇಂದಿರಾ ಗಾಂಧಿಯವರು ಬಳಸಿದ್ದ, ‘ಬಡತನವನ್ನು ನಿವಾರಿಸಿ, ದೇಶವನ್ನು ರಕ್ಷಿಸಿ’ ಎಂಬರ್ಥದ ‘ಗರೀಬಿ ಹಟಾವೋ, ದೇಶ್ ಕೋ ಬಚಾವೋ’ ಎಂಬ ಘೋಷಣೆಯೂ ಬಹಳ ಜನಪ್ರಿಯವಾಗಿತ್ತು. ಈ ಎಲ್ಲಾ ಘೋಷಣೆಗಳನ್ನು ಕೂಗಿ ಇಂದಿರಾ ಚುನಾವಣೆಗಳನ್ನು ಗೆದ್ದರಾ ದರೂ, ದೇಶದ ಜನರಿಗೆ ‘ಅನ್ನ-ಬಟ್ಟೆ-ವಸತಿ’ಗಳನ್ನು ಒದಗಿಸಲು ಅವರಿಗೆ ಸಾಧ್ಯವಾಗಲಿಲ್ಲ, ಬಡತನವನ್ನು ನಿವಾರಿಸಲೂ ಆಗಲಿಲ್ಲ.
1990-2000ದ ಚುನಾವಣಾ ಪ್ರಣಾಳಿಕೆಗಳಲ್ಲಿ ಕಾಣಿಸಿಕೊಂಡ ಪ್ರಮುಖ ಆಶ್ವಾಸನೆ ‘ನೀರು, ವಿದ್ಯುತ್ ಮತ್ತು ರಸ್ತೆ’. ದೇಶದ ಹಳ್ಳಿಗಳಿಗೆ ರಸ್ತೆಗಳು ಇರಲಿಲ್ಲ, ಬಹುದೊಡ್ಡ ಪ್ರಮಾಣದ ಜನರಿಗೆ ಕುಡಿಯುವ ನೀರು ಮತ್ತು ವಿದ್ಯುತ್ತಿನ ಸೌಲಭ್ಯ ಇರಲಿಲ್ಲ. ‘ನಾವು ಅಧಿಕಾರಕ್ಕೆ ಬಂದರೆ ನೀರು-ವಿದ್ಯುತ್ -ರಸ್ತೆ ಯನ್ನು ಒದಗಿಸುತ್ತೇವೆ ಎಂಬ ಹೊಸ ಆಶ್ವಾಸನೆಯನ್ನು ರಾಜಕೀಯ ಪಕ್ಷಗಳು ಕೊಡಲಾರಂಭಿಸಿ ದವು.
ಇದನ್ನೂ ಓದಿ: Ganesh Bhat Column: ಚೀನಾದೊಂದಿಗೆ ಭಾರತವನ್ನೇಕೆ ಹೋಲಿಸಬೇಕು ?
‘ಅನ್ನ-ಬಟ್ಟೆ-ವಸತಿ’ಯಂಥ ಪೊಳ್ಳು ಆಶ್ವಾಸನೆಗಳನ್ನು ಕೇಳಿ ಕೇಳಿ ಬೇಸತ್ತಿದ್ದ ಜನರು ಇಂಥ ರಾಜಕೀಯ ಭರವಸೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಭಾರತದ ಆಧಾರ್ ಪ್ರಾಧಿಕಾರದ ಮುಖ್ಯಸ್ಥರಾಗಿದ್ದ ನಂದನ್ ನಿಲೇಕಣಿಯವರು ಬಡತನ ನಿವಾರಣೆಯ ಕುರಿತು 2010ರಲ್ಲಿ ಮಾತನಾಡಿ, “ನೀರು, ರಸ್ತೆ, ವಿದ್ಯುತ್ ಘೋಷಣೆಗಳು ಹಳತಾದವು. ಈಗೇನಿದ್ದರೂ ವಿಶಿಷ್ಟ ಗುರುತಿನ ಸಂಖ್ಯೆ (ಆಧಾರ್ ನಂಬರ್), ಬ್ಯಾಂಕ್ ಅಕೌಂಟ್ ನಂಬರ್ ಹಾಗೂ ಮೊಬೈಲ್ ನಂಬರ್ ಅನ್ನು ಬೆಸೆಯುವ ಕಾಲ" ಎಂದು ಹೇಳಿದ್ದರು.
ಆದರೆ 2014ರವರೆಗೆ ಈ ‘ಕಾರ್ಯಭಾರ’ ನೆರವೇರಲೇ ಇಲ್ಲ. ಇದಕ್ಕೆ ಪ್ರಮುಖವಾಗಿ ಮೂರು ಕಾರಣಗಳಿದ್ದವು. ಆಧಾರ್ ಕಾರ್ಡ್ ವಿತರಣೆಯಲ್ಲಿ ಕಂಡುಬಂದ ನಿಧಾನಗತಿ ಮೊದಲನೆಯದು. ಕಾರ್ಡ್ ವಿತರಣೆಯನ್ನು 2009ರಲ್ಲೇ ಆರಂಭಿಸಿದ್ದರೂ 2013ರ ಅಂತ್ಯಕ್ಕೆ ಕೇವಲ ಶೇ.28ರಷ್ಟು ಜನರಿಗಷ್ಟೇ ಆಧಾರ್ ಗುರುತಿನ ಚೀಟಿಗಳನ್ನು ನೀಡಲು ಸರಕಾರಕ್ಕೆ ಸಾಧ್ಯವಾಗಿತ್ತು.
ಆಧಾರ್ ಜಾರಿಯ ವಿಷಯವಾಗಿ ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿರದ ಯುಪಿಎ ಸರಕಾರವು, ಈ ವಿಷಯದಲ್ಲಿ ಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳಲು ವಿಫಲವಾಗಿತ್ತು. ಆಧಾರ್‌ಗೆ ಕಾನೂನಾತ್ಮಕವಾದ ಚೌಕಟ್ಟನ್ನು ಒದಗಿಸದಿದ್ದುದು ಈ ಯೋಜನೆಯು ಹಿಂದೆ ಬೀಳಲು ಕಾರಣವಾದ ಇನ್ನೊಂದು ಅಂಶವಾಗಿತ್ತು. ದೇಶದ ಶೇ.35ರಷ್ಟು ಮಂದಿಗೆ ಮಾತ್ರ ಬ್ಯಾಂಕ್ ಖಾತೆಗಳಿದ್ದುದು, ಆಧಾರ್, ಬ್ಯಾಂಕ್ ಖಾತೆ, ಮೊಬೈಲ್ ನಂಬರ್‌ಗಳನ್ನು ಬೆಸೆಯುವ ಕಾರ್ಯಕ್ಕೆ ಅಡ್ಡಿಯಾದ ಮೂರನೇ ಅಂಶವಾಗಿತ್ತು.
2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ದೇಶದ ಎಲ್ಲಾ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ‘ಜನಧನ್’ ಯೋಜನೆಯ ಅಡಿಯಲ್ಲಿ ಪ್ರೋತ್ಸಾಹವನ್ನು ನೀಡಿತು. ಇದರ ಫಲವಾಗಿ ದೇಶದಲ್ಲಿ 55 ಕೋಟಿ ಜನಧನ್ ಖಾತೆಗಳು ಹೊಸದಾಗಿ ತೆರೆಯಲ್ಪಟ್ಟವು. ಇದರ ಪರಿಣಾಮವಾಗಿ ಇಂದು ಭಾರತದ ಶೇ.90ರಷ್ಟು ‘ಪ್ರಾಯಪ್ರಬುದ್ಧರು’ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ.
‘ಆಧಾರ್ ಕಾಯಿದೆ 2016’ ಅನ್ನು ಜಾರಿಗೆ ತರುವ ಮೂಲಕ ಆಧಾರ್ ಕಾರ್ಡಿಗೆ ಕಾನೂನಾತ್ಮಕ ವಾದ ಮಾನ್ಯತೆಯನ್ನು ತಂದುಕೊಡಲಾಯಿತು. ಈ ಮೂಲಕ ‘ಜೆಎಎಂ’ ಅಥವಾ ‘ಜ್ಯಾಮ್’ (ಜನಧನ್ ಖಾತೆ, ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್‌ಗಳನ್ನು ಬೆಸೆಯುವ) ಯೋಜನೆ ಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಯಿತು.
ಈಗ ಕೇಂದ್ರ ಅಥವಾ ರಾಜ್ಯ ಸರಕಾರಗಳು ಜನರಿಗೆ ಕೊಡುವ ಸಹಾಯಧನ, ಪ್ರೋತ್ಸಾಹಧನ, ಪಿಂಚಣಿ, ಸಬ್ಸಿಡಿ, ವಿದ್ಯಾರ್ಥಿ ವೇತನ, ರೈತರ ಪ್ರೋತ್ಸಾಹಧನ, ಬೆಳೆವಿಮೆ ಪರಿಹಾರ ಮುಂತಾದವು ಯಾವುದೇ ಸೋರಿಕೆಯಿಲ್ಲದೆ ‘ಜ್ಯಾಮ್’ ವ್ಯವಸ್ಥೆಯಡಿಯಲ್ಲಿ ಜನರ ಬ್ಯಾಂಕ್ ಖಾತೆಗಳನ್ನು ನೇರವಾಗಿ ಸೇರುತ್ತಿವೆ. ಕಳೆದ 10 ವರ್ಷಗಳಲ್ಲಿ ಸುಮಾರು 55 ಲಕ್ಷ ಕೋಟಿ ರುಪಾಯಿಗಳು ‘ಡೈರೆಕ್ಟ್ ಟ್ರಾನ್ಸ್ ಫರ್ ಆಫ್ ಬೆನಿಫಿಟ್’ ಪರಿಕಲ್ಪನೆಯ ಮೂಲಕ, ಯಾವುದೇ ಸೋರಿಕೆ/ಭ್ರಷ್ಟಾಚಾರ ಇಲ್ಲದೆ, ಮಧ್ಯವರ್ತಿಗಳ ಪಾಲಾಗದೆ ಫಲಾನುಭವಿಗಳ ಖಾತೆಗಳನ್ನು ಸೇರಿವೆ.
ಸರಕಾರಗಳು ಜನರಿಗಾಗಿ ವ್ಯಯಿಸುವ ಮೊತ್ತವು ಫಲಾನುಭವಿಗಳಿಗೆ ನೇರವಾಗಿ ಸಿಕ್ಕಾಗ ಯೋಜನೆ ಗಳ ಉದ್ದೇಶವೂ ಪರಿಪೂರ್ಣವಾಗಿ ಸಾಧಿಸಲ್ಪಡುತ್ತದೆ. ದೇಶವೊಂದರಲ್ಲಿ ಲಭ್ಯವಾಗುವ ವಿದ್ಯುತ್ ಮತ್ತು ಅದರ ಬಳಕೆಯ ಆಧಾರದಲ್ಲಿ ಆ ದೇಶದ ಆರ್ಥಿಕತೆಯನ್ನು ಅರಿಯಬಹುದು. 2014ರ ಹೊತ್ತಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷಗಳೇ ಕಳೆದಿದ್ದರೂ, ದೇಶದ ಎಲ್ಲಾ ಪ್ರಜೆ ಗಳಿಗೆ ವಿದ್ಯುಚ್ಛಕ್ತಿಯ ಸೌಲಭ್ಯ ಲಭ್ಯವಿರಲಿಲ್ಲ; 2013ರ ಅಂತ್ಯದ ಹೊತ್ತಿಗೆ ದೇಶದ ಶೇ.83ರಷ್ಟು ಮನೆ ಗಳಿಗೆ ಮಾತ್ರವೇ ವಿದ್ಯುತ್ ಸಂಪರ್ಕವಿತ್ತು.
ಸುಮಾರು 18 ಸಾವಿರ ಹಳ್ಳಿಗಳಿಗೆ ಮತ್ತು 2.86 ಕೋಟಿ ಮನೆಗಳಿಗೆ ಇದು ಅಲಭ್ಯವಾಗಿತ್ತು. ದೇಶ ದಲ್ಲಿನ ಮನೆಗಳಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ದಿನದಲ್ಲಿ ಸರಾಸರಿ 12 ತಾಸುಗಳಷ್ಟು ಮಾತ್ರವೇ ವಿದ್ಯುತ್ ಪೂರೈಕೆಯಾಗುತ್ತಿತ್ತು. 2015ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆ ಯಲ್ಲಿ ನಿಂತು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಮುಂದಿನ ಸಾವಿರ ದಿನದೊಳಗಾಗಿ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವುದಾಗಿ ಭರವಸೆ ನೀಡಿದರು.
ನುಡಿದಂತೆ ನಡೆದ ಮೋದಿ ಸರಕಾರವು 2018ರ ಏಪ್ರಿಲ್ ಹೊತ್ತಿಗೆ, ವಿದ್ಯುತ್ ಲಭ್ಯತೆಯಿರದ ದೇಶದ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿತು. ಇಲಾಖಾ ಸಿಬ್ಬಂದಿಗಳು ದುರ್ಗಮವಾದ ಬೆಟ್ಟಗಳಲ್ಲಿ, ಕಣಿವೆಗಳಲ್ಲಿ, ನದೀದಡಗಳಲ್ಲಿ, ಅರಣ್ಯಗಳಲ್ಲಿ ಕಂಬಗಳನ್ನು ನೆಟ್ಟು, ತಂತಿ ಎಳೆದು ಈ ಸೌಲಭ್ಯವನ್ನು ಕಲ್ಪಿಸಿದರು. ‘ಪ್ರಧಾನಮಂತ್ರಿ ಹರ್ ಘರ್ ಬಿಜ್ಲಿ’ ಯೋಜನೆಯ ಅಡಿಯಲ್ಲಿ, ದೇಶದಲ್ಲಿ ವಿದ್ಯುತ್ ಸಂಪರ್ಕವಿರದ 2.86 ಕೋಟಿ ಬಡವರ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲಾಯಿತು.
ಇದರಿಂದಾಗಿ ದೇಶವು ಶೇ.100ರ ಪ್ರಮಾಣದಲ್ಲಿ ವಿದ್ಯುತ್ ಸಂಪರ್ಕವನ್ನು ಸಾಧಿಸಿತು. ಇನ್ನು, ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುಚ್ಛಕ್ತಿಯ ಪ್ರಮಾಣವು ಕೂಡ ಬಹುತೇಕ ದ್ವಿಗುಣ ಗೊಂಡಿದೆ. 2014ರಲ್ಲಿ ದೇಶದಲ್ಲಿ 249 ಗಿಗಾವ್ಯಾಟ್‌ನಷ್ಟು ಆಗುತ್ತಿದ್ದ ವಿದ್ಯುತ್ ಉತ್ಪಾದನೆಯ ಪ್ರಮಾಣವು ಇಂದು 469 ಗಿಗಾವ್ಯಾಟ್‌ಗಳಿಗೆ ಏರಿದೆ. ಅದೇ ರೀತಿ, 2014ರಲ್ಲಿ 2.5 ಗಿಗಾ ವ್ಯಾಟ್ ನಷ್ಟಿದ್ದ ಸೌರವಿದ್ಯುತ್ ಉತ್ಪಾದನೆಯು 2025ರ ವೇಳೆಗೆ 105 ಗಿಗಾವ್ಯಾಟ್‌ಗೆ ಏರಿದೆ.
ಜಾಗತಿಕವಾಗಿ ಅತಿಹೆಚ್ಚು ಸೌರವಿದ್ಯುತ್ ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವಿಂದು ಮೂರನೆಯ ಸ್ಥಾನಕ್ಕೇರಿದೆ. ಇನ್ನು, 2014ರಲ್ಲಿ 17 ಗಿಗಾವ್ಯಾಟ್‌ನಷ್ಟಿದ್ದ ಪವನ ವಿದ್ಯುತ್ ಉತ್ಪಾ ದನೆಯು ಈಗ 48.5 ಗಿಗಾವ್ಯಾಟ್ ಮಟ್ಟವನ್ನು ಮುಟ್ಟಿದೆ. ಕಳೆದ 10 ವರ್ಷಗಳಲ್ಲಿ ದೇಶದ ವಿದ್ಯುತ್ ಉತ್ಪಾದನೆಯಲ್ಲಿ ಆಗಿರುವ ಗಮನಾರ್ಹ ಹೆಚ್ಚಳದಿಂದಾಗಿ, ದೇಶದಲ್ಲಿಂದು ಪ್ರತಿದಿನದ ವಿದ್ಯುತ್ ಪೂರೈಕೆಯು ಸರಾಸರಿ 22.5 ಗಂಟೆಗಳಿಗೇರಿದೆ.
ಭಾರತದಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆ ಬಹಳ ಕಡಿಮೆಯಿತ್ತು. ಕುಡಿಯುವ ನೀರಿಗಾಗಿ ಮಹಿಳೆಯರು ಕಿಲೋಮೀಟರ್‌ಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಇತ್ತು. ದೇಶದ ಪ್ರತಿ ಮನೆಗಳಿಗೆ ನಲ್ಲಿಯ ಮೂಲಕ ಶುದ್ಧಜಲವನ್ನು ಪೂರೈಸುವ ನಿಟ್ಟಿನಲ್ಲಿ 2019ರಲ್ಲಿ ‘ಪ್ರಧಾನಮಂತ್ರಿ ಜಲ್ ಜೀವನ್ ಮಿಷನ್’ ಯೋಜನೆಯನ್ನು ಆರಂಭಿಸಲಾಯಿತು. ಈ ಕಾಲಘಟ್ಟದಲ್ಲಿ ದೇಶದಲ್ಲಿರುವ 19.36 ಕೋಟಿ ಮನೆಗಳ ಪೈಕಿ 3.26 ಕೋಟಿ ಮನೆಗಳಿಗೆ ಮಾತ್ರವಷ್ಟೇ ನಲ್ಲಿ ನೀರಿನ ಸಂಪರ್ಕವಿತ್ತು.
ಇದೀಗ ದೇಶದಲ್ಲಿ, ಮನೆಮನೆಗೆ ಪೈಪುಗಳ ಮೂಲಕ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಜಲ್‌ಜೀವನ್ ಯೋಜನೆಯು ಪ್ರಗತಿಯಲ್ಲಿದ್ದು, ಕಳೆದ 5 ವರ್ಷಗಳಲ್ಲಿ 12.33 ಕೋಟಿ ಮನೆಗಳು ಈ ಸೌಲಭ್ಯವನ್ನು ಪಡೆದಿವೆ. ಇದರಿಂದಾಗಿ ದೇಶದ 15 ಕೋಟಿಗೂ ಹೆಚ್ಚಿನ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿದಂತಾಗಿದೆ. ಈ ಯೋಜನೆಗೆ ಇದುವರೆಗೆ 2 ಲಕ್ಷ ಕೋಟಿ ರುಪಾಯಿ ಗಳನ್ನು ವೆಚ್ಚ ಮಾಡಲಾಗಿದೆ.
2028ರ ಒಳಗಾಗಿ ದೇಶದ ಶೇ.100ರಷ್ಟು ಮನೆಗಳಿಗೆ ನೀರಿನ ಸಂಪರ್ಕವನ್ನು ಒದಗಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಸ್ತೆಗಳು, ಹೆದ್ದಾರಿಗಳು, ರೈಲು, ಮೆಟ್ರೋ, ವಿಮಾನ ನಿಲ್ದಾಣಗಳು ದೇಶದ ಆರ್ಥಿಕತೆಯ ಜೀವನಾಡಿಗಳಾಗಿವೆ. ರಸ್ತೆ ನಿರ್ಮಾಣದ ವಿಷಯದಲ್ಲಿ ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ದೊಡ್ಡ ಮಟ್ಟದ ಕ್ರಾಂತಿಯೇ ನಡೆದಿದೆ. ಈ ಅವಧಿಯಲ್ಲಿ ಹೊಸದಾಗಿ 7.4 ಲಕ್ಷ ಕಿಲೋಮೀಟರ್‌ಗಳಷ್ಟು ಉದ್ದದ ಗ್ರಾಮೀಣ ರಸ್ತೆಗಳು ಹಾಗೂ 70 ಸಾವಿರ ಕಿಲೋಮೀಟರ್ ಗಳಷ್ಟು ಉದ್ದದ ರಾಷ್ಟ್ರೀಯ ಹೆದ್ದಾರಿಗಳು, 44 ಎಕ್ಸ್‌ಪ್ರೆಸ್ ವೇಗಳು ನಿರ್ಮಾಣವಾಗಿವೆ.
ದೇಶದ ಹೆಚ್ಚಿನ ಮಹಾನಗರಗಳಲ್ಲಿ ಮೆಟ್ರೋ ರೈಲುಗಳು ಆರಂಭವಾಗಿವೆ, ವಿಮಾನ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಸ್ವಚ್ಛಭಾರತ ಅಭಿಯಾನದಡಿಯಲ್ಲಿ 11 ಕೋಟಿ ಬಡವರ ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿಕೊಡಲಾಗಿದೆ. ಇದರಿಂದಾಗಿ ಜನರು ಬಯಲು ಪ್ರದೇಶಗಳಲ್ಲಿ ಮಲವಿಸರ್ಜನೆ ಮಾಡುವುದು ಬಹಳಷ್ಟು ಇಳಿಕೆಯಾಗಿದೆ. ಈ ಮೊದಲು ಬಯಲು ಶೌಚದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡಿ ಲಕ್ಷಾಂತರ ಮಕ್ಕಳು ಹಾಗೂ ಮಹಿಳೆಯರು ಸಾವಿಗೀಡಾ ಗುತ್ತಿದ್ದರು.
ಮನೆಮನೆಗೂ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದರಿಂದಾಗಿ ಪ್ರತಿ ವರ್ಷ ಗಣನೀಯ ಸಂಖ್ಯೆ ಯಲ್ಲಿ ಮಕ್ಕಳು ಸಾವಿಗೀಡಾಗುವುದನ್ನು ತಡೆಗಟ್ಟಿದಂತಾಗಿದೆ ಎಂದು ಜಾಗತಿಕ ವಿಜ್ಞಾನ ಪತ್ರಿಕೆಯಾದ ‘ನೇಚರ್’ ತಿಳಿಸಿದೆ. ಇನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 10 ಕೋಟಿ ಬಡವರ ಮನೆಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಕಲ್ಪಿಸಿಕೊಡಲಾಗಿದೆ. ಈ ಮೊದಲು ಭಾರತದಲ್ಲಿ ಅಡುಗೆ ಮನೆಯಲ್ಲಿ ಕಟ್ಟಿಕೊಳ್ಳುವ ಹೊಗೆಯಿಂದಾಗಿ ಶ್ವಾಸಕೋಶದ ಸೋಂಕಿಗೆ ಒಳಗಾಗಿ ಪ್ರತಿವರ್ಷ 1.5 ಲಕ್ಷ ಮಹಿಳೆಯರು ಸಾವಿಗೀಡಾಗುತ್ತಿದ್ದು, ‘ಉಜ್ವಲ’ ಯೋಜನೆಯ ಪರಿಣಾಮವಾಗಿ ಇದಕ್ಕೆ ತಡೆ ಹಾಕಿದಂತಾಗಿದೆ ಎಂದು ಅಧ್ಯಯನಗಳು ಹೇಳಿವೆ.
2014ರ ನಂತರದಲ್ಲಿ, ದೇಶದಲ್ಲಿ 2.75 ಕೋಟಿ ಮನೆಗಳನ್ನು ‘ಪ್ರಧಾನಮಂತ್ರಿ ಆವಾಸ್’ ಯೋಜ ನೆಯಡಿಯಲ್ಲಿ ಕಟ್ಟಿಸಿಕೊಡಲಾಗಿದೆ. ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ 25 ಕೋಟಿ ಯಷ್ಟು ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಜನರಿಗೆ ನೀರು, ರಸ್ತೆ, ವಿದ್ಯುತ್, ಮನೆಗಳು, ಶೌಚಾಲಯಗಳು, ಅಡುಗೆ ಅನಿಲದ ಸಂಪರ್ಕ ಮುಂತಾದವನ್ನು ಒದಗಿಸಿರುವುದರಿಂದಾಗಿ ಅವರ ಜೀವನ ಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿದೆ.
ಅಗತ್ಯವುಳ್ಳವರಿಗೆ ಸರಕಾರವು ಕೊಡುವ ಸಹಾಯಧನ, ಪಿಂಚಣಿ, ಸಬ್ಸಿಡಿ, ಪ್ರೋತ್ಸಾಹಧನಗಳು ಅವರ ಬ್ಯಾಂಕ್ ಖಾತೆಗಳನ್ನು ನೇರವಾಗಿ ಸೇರುತ್ತಿವೆ. ಸರಕಾರದ ಮುದ್ರಾ ಲೋನ್, ಸ್ಟಾರ್ಟಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಯೋಜನೆಗಳು ‘ಉದ್ಯಮ’ದ ಅವಕಾಶಗಳನ್ನೂ, ‘ಉದ್ಯೋಗ’ ದ ಅವಕಾಶಗಳನ್ನೂ ಹೆಚ್ಚಿಸಿವೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ದಾಗ, ಭಾರತದಲ್ಲಿ ಬಡತನವು ನಿರ್ಮೂಲನೆಯಾ ಗುತ್ತಿರುವುದು ಆಕಸ್ಮಿಕವಲ್ಲ ಎಂಬುದು ಅರ್ಥವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)