Ganesh Bhat Column: ಚೀನಾದೊಂದಿಗೆ ಭಾರತವನ್ನೇಕೆ ಹೋಲಿಸಬೇಕು ?
“ಚೀನಾದಲ್ಲಿ 11000 ಕಿ.ಮೀ. ಉದ್ದದ ಮೆಟ್ರೋ ರೈಲು ಸಂಪರ್ಕವಿದೆ, ಭಾರತದಲ್ಲಿ ಮೆಟ್ರೋ ಕೇವಲ 1000 ಕಿ.ಮೀ. ಉದ್ದವಿದೆ; ಚೀನಾದಲ್ಲಿ 48000 ಕಿ.ಮೀ. ಉದ್ದದ ಬುಲೆಟ್ ಟ್ರೇನ್ ಸಂಪರ್ಕವಿದೆ, ಭಾರತ ದಲ್ಲಿ ಬುಲೆಟ್ ಟ್ರೇನು ಶುರುವಾಗೋದು ಯಾವಾಗಲೋ?!" ಹೀಗೆ ಕೆಲವರ ಟೀಕಾಸರಣಿ ಬೆಳೆಯುತ್ತಲೇ ಹೋಗುತ್ತದೆ.
ನೆರೆಹೊರೆ
ಗಣೇಶ್ ಭಟ್, ವಾರಣಾಸಿ
ಚೀನಾ ದೇಶವು ಇತ್ತೀಚೆಗೆ 6ನೇ ತಲೆಮಾರಿನ ಯುದ್ಧವಿಮಾನವನ್ನು ಹಾರಿಸಿದ್ದನ್ನು ಕಂಡು, “ಭಾರ ತವು 5ನೇ ತಲೆಮಾರಿನ ತಂತ್ರಜ್ಞಾನದ ಯುದ್ಧವಿಮಾನವನ್ನೂ ತಯಾರಿಸಿಲ್ಲ" ಎಂದು ತೆಗಳಲಾ ಯಿತು. ಅಮೆರಿಕದ ಕೃತಕ ಬುದ್ಧಿಮತ್ತೆ ಸಂಸ್ಥೆ ‘ಓಪನ್ ಎಐ’ ಹೊರತಂದಿದ್ದ ‘ಚ್ಯಾಟ್ ಜಿಪಿಟಿ’ಗೆ ಪ್ರತಿಯಾಗಿ ಚೀನಾ ಇತ್ತೀಚೆಗೆ ‘ಡೀಪ್ ಸೀಕ್’ ತಂತ್ರಾಂಶವನ್ನು ಬಿಡುಗಡೆ ಮಾಡುತ್ತಿದ್ದಂತೆ, “ಅಮೆ ರಿಕದಲ್ಲಿ ಚ್ಯಾಟ್ ಜಿಪಿಟಿ ಇದೆ, ಚೀನಾದಲ್ಲಿ ಡೀಪ್ ಸೀಕ್ ಇದೆ, ಭಾರತದಲ್ಲೇನಿದೆ?!" ಎಂದು ಕಟಕಿ ಯಾಡಿ, “ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಭಾರತವಿನ್ನೂ ಹಿಂದುಳಿದಿದೆ" ಎಂದು ಕಾಲೆಳೆಯ ಲಾಯಿತು. ಇದು ಇಷ್ಟಕ್ಕೇ ನಿಲ್ಲುವುದಿಲ್ಲ.
“ಚೀನಾದಲ್ಲಿ 11000 ಕಿ.ಮೀ. ಉದ್ದದ ಮೆಟ್ರೋ ರೈಲು ಸಂಪರ್ಕವಿದೆ, ಭಾರತದಲ್ಲಿ ಮೆಟ್ರೋ ಕೇವಲ 1000 ಕಿ.ಮೀ. ಉದ್ದವಿದೆ; ಚೀನಾದಲ್ಲಿ 48000 ಕಿ.ಮೀ. ಉದ್ದದ ಬುಲೆಟ್ ಟ್ರೇನ್ ಸಂಪರ್ಕ ವಿದೆ, ಭಾರತದಲ್ಲಿ ಬುಲೆಟ್ ಟ್ರೇನು ಶುರುವಾಗೋದು ಯಾವಾಗಲೋ?!" ಹೀಗೆ ಕೆಲವರ ಟೀಕಾ ಸರಣಿ ಬೆಳೆಯುತ್ತಲೇ ಹೋಗುತ್ತದೆ.
ಇದನ್ನೂ ಓದಿ: Shashidhara Halady Column: ದೆಹಲಿಯಲ್ಲೊಂದು ಆನೆಯ ಮೆರವಣಿಗೆ !
ಹೀಗೆ, ಚೀನಾ ಯಾವುದೋ ಒಂದು ಸಾಧನೆ ಮಾಡಿದಾಗ ಅದರೊಂದಿಗೆ ಭಾರತದ ಕ್ಷಮತೆಯನ್ನು ಹೋಲಿಸಿ ನಮ್ಮ ದೇಶವನ್ನು ಕೆಟ್ಟದಾಗಿ ಬಿಂಬಿಸಿ ಸಂತಸ ಪಡುವವರು ನಮ್ಮಲ್ಲಿ ಸಾಕಷ್ಟಿದ್ದಾರೆ. ಗುಣಮಟ್ಟವನ್ನು ಕಾಪಿಟ್ಟುಕೊಳ್ಳಲು, ಸಾಧನೆ ಮೆರೆಯಲು ಹೋಲಿಕೆಯು ಅಗತ್ಯವೇ; ಆದರೆ ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಉದ್ದೇಶದಿಂದಲೇ ಹೋಲಿಸುವುದು ತರವಲ್ಲ.
‘ಎಲ್‌ಸಿಎ ತೇಜಸ್’ ಲಘು ಯುದ್ಧವಿಮಾನ ನಿರ್ಮಾಣದ ಯೋಜನೆಯು ಕಳೆದ 3 ದಶಕಗಳಲ್ಲಿ ಎದುರಿಸಿದ ಅಡೆತಡೆಗಳನ್ನು ಅಧ್ಯಯನ ಮಾಡಿದರೆ, ಭಾರತವೇಕೆ ಆಧುನಿಕ ಯುದ್ಧವಿಮಾನಗಳ ತಯಾರಿಯಲ್ಲಿ ಹಿಂದುಳಿದಿದೆ ಎಂಬುದರ ಅರಿವಾಗುತ್ತದೆ. ‘ಎಲ್‌ಸಿಎ’ ತಯಾರಿಯ ಪ್ರಸ್ತಾವನೆ 80ರ ದಶಕದಲ್ಲೇ ಆಗಿತ್ತು. ಆದರೆ ಸರಕಾರಗಳ ನಿರ್ಲಕ್ಷ್ಯ, ಅಧಿಕಾರಿಗಳ ಉದಾಸೀನತೆಯಿಂದಾಗಿ ಈ ಯೋಜನೆ ಮುಂದಿನ 20 ವರ್ಷಗಳವರೆಗೆ ಕಡತಗಳಲ್ಲೇ ಉಳಿಯುವಂತಾಯಿತು.
ಅಟಲ್ ಬಿಹಾರಿ ವಾಜಪೇಯಿ ಸರಕಾರದ ಅವಧಿಯಲ್ಲಿ ದೇಶೀಯ ಯುದ್ಧವಿಮಾನ ನಿರ್ಮಾಣದ ಯೋಜನೆಗೆ ವೇಗವು ದಕ್ಕಿ, ‘ತೇಜಸ್’ ಲಘು ಯುದ್ಧವಿಮಾನವು 2001ರಲ್ಲಿ ಯಶಸ್ವಿ ಹಾರಾಟವನ್ನು ನಡೆಸಿತು. ಆದರೆ, 2004ರಲ್ಲಿ ಅಧಿಕಾರಕ್ಕೆ ಬಂದ ಮನಮೋಹನ್ ಸಿಂಗ್ ಸರಕಾರವು ಸ್ವದೇಶಿ ಯುದ್ಧ ವಿಮಾನ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷಿಸಿ, ಅದರ ಹಿನ್ನಡೆಗೆ ಕಾರಣವಾಯಿತು. ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರಕಾರವು ಎಲ್‌ಸಿಎ ತೇಜಸ್ ಯೋಜನೆಗೆ ಮರು ಜೀವ ನೀಡಿ ಆ ವಿಮಾನವನ್ನು ವಾಯುಪಡೆಗೆ ಸೇರಿಸಿತು. ಈ ಯುದ್ಧ ವಿಮಾನವು ಸಂಪೂರ್ಣ ದೇಶೀಯ ಉತ್ಪನ್ನವಾದರೂ ಎಂಜಿನ್‌ಗಾಗಿ ಅಮೆರಿಕದ ಜನರಲ್ ಇಲೆಕ್ಟ್ರಿಕ್ ಸಂಸ್ಥೆಯನ್ನು ನೆಚ್ಚ ಬೇಕಾಗಿದೆ.
ನಮ್ಮಲ್ಲೇ ಅಭಿವೃದ್ಧಿಪಡಿಸಲಾದ ಎಂಜಿನ್ ‘ಕಾವೇರಿ’ಯು ಯುದ್ಧವಿಮಾನಕ್ಕೆ ಅಪೇಕ್ಷಿತ ‘ಥ್ರಸ್ಟ್’ (ಒತ್ತಡ) ತಂದುಕೊಡಲು ವಿಫಲವಾಯಿತು. ಯುದ್ಧವಿಮಾನದ ಎಂಜಿನ್‌ನ ತಂತ್ರಜ್ಞಾನವು ಅತ್ಯಂತ ಕ್ಲಿಷ್ಟಕರವಾದುದು. ‘ಡಿಆರ್‌ಡಿಒ’ ಸಂಸ್ಥೆಯ ‘ಗ್ಯಾಸ್ ಆಂಡ್ ಟರ್ಬೈನ್ ರಿಸರ್ಚ್ ಎಸ್ಟಾ ಬ್ಲಿಷ್‌ಮೆಂಟ್’ (ಜಿಟಿಆರ್‌ಇ) ಯೋಜನೆಯಡಿ ಮುಂದೆ ಮೇಲ್ದರ್ಜೆಗೇರಿಸಲಾಗುವ ಕಾವೇರಿ ಎಂಜಿ ನ್, ಯುದ್ಧವಿಮಾನಕ್ಕೆ ಅಗತ್ಯವಿರುವ 90 ಕೆಎನ್ ಥ್ರಸ್ಟ್ ಒತ್ತಡವನ್ನು ಕೊಡಲಿದೆ ಎಂದು ಅಂದಾ ಜಿಸಲಾಗಿದೆ.
ಸದ್ಯದ ಸ್ಥಿತಿಯ ಕಾವೇರಿ ಎಂಜಿನ್ ಅನ್ನು ದೇಶದ ಮಾನವರಹಿತ ಯುದ್ಧವಿಮಾನ ‘ಘಾತಕ್’ಗೆ ಬಳಸುವುದೆಂದು ತೀರ್ಮಾನಿಸಲಾಗಿದೆ. ಮುಂದಿನ ಹಂತದ ಆಧುನಿಕ ಮಧ್ಯಮಗತಿಯ ಯುದ್ಧ ವಿಮಾನದಲ್ಲಿ (ಎಂಎಂಸಿಎ) ಭಾರತವು ಫ್ರಾನ್ಸ್‌ನ ‘ಸಾಫ್ರಾನ್’ ಸಹಯೋಗದಲ್ಲಿ ನಿರ್ಮಿಸುವ ಎಂಜಿನ್ ಅನ್ನು ಬಳಸಲಿದೆ.
ಟೀಕಾಕಾರರು ಇದಾವುದನ್ನೂ ಗಮನಿಸುವುದೇ ಇಲ್ಲ. ಯುದ್ಧವಿಮಾನದ ಎಂಜಿನ್ ತಯಾರಿಯಲ್ಲಿ ಭಾರತ ವಿಫಲವಾಗಿರುವುದೇಕೆ ಎಂದು ಪ್ರಶ್ನಿಸುವ ಇದೇ ರಾಜಕೀಯ ಪಕ್ಷಗಳು ದಶಕದ ಹಿಂದೆ ತಾವು ಅಧಿಕಾರದಲ್ಲಿದ್ದಾಗ ಕಮಿಷನ್ ಆಸೆಗೆ ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ತರಿಸುತ್ತಾ, ಸ್ವದೇಶಿ ತಂತ್ರಜ್ಞಾನದ ಅಭಿವೃದ್ಧಿಗೆ ತಣ್ಣೀರೆರಚಿದ್ದವು.
ಚೀನಾ ಇಂದು ‘ಚೆಂಗ್ಡು ಜೆ-20’ರಂಥ ಯುದ್ಧವಿಮಾನಗಳ ಎಂಜಿನ್ ಅನ್ನು ತಯಾರಿಸುತ್ತಿರುವುದರ ಹಿಂದೆ 30-40 ವರ್ಷಗಳ ನಿರಂತರ ಯತ್ನವಿದೆ. ಜತೆಗೆ, ಅಮೆರಿಕ-ರಷ್ಯಾಗಳ ವೈಮಾನಿಕ ತಂತ್ರ ಜ್ಞಾನವನ್ನು ನಕಲು ಮಾಡುವಲ್ಲಿ ಅಥವಾ ರಿವರ್ಸ್ ಎಂಜಿನಿಯರಿಂಗ್ ಮಾಡುವ ಬಗ್ಗೆ (ಎಂಜಿನ್ ಅನ್ನು ಕಳಚಿ, ಬಿಡಿಭಾಗಗಳನ್ನು ಅಧ್ಯಯನ ಮಾಡಿ, ಅಂಥದೇ ಎಂಜಿನ್ ಗಳನ್ನು ರೂಪಿಸುವಿಕೆ) ಚೀನಾಕ್ಕೆ ಯಾವುದೇ ನಾಚಿಕೆಯಿಲ್ಲ.
2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನ್‌ನನ್ನು ಅಮೆ ರಿಕ ಪಡೆಯು ಹತ್ಯೆಮಾಡಿ ಹಿಂದಿರುಗುವ ವೇಳೆ, ಅದರ ಒಂದು ಯುದ್ಧ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಅಲ್ಲೇ ಉಳಿದಿತ್ತು. ಈ ಸಂದರ್ಭದ ದುರುಪಯೋಗಕ್ಕೆ ಮುಂದಾದ ಚೀನಾ, ಹೆಲಿ ಕಾಪ್ಟರ್‌ನ ರಚನೆಯ ಬಗ್ಗೆ ಅಧ್ಯಯನ ಮಾಡಲು ತನ್ನ ತಂತ್ರಜ್ಞರನ್ನು ಕಳಿಸಿತ್ತು.
ಹೀಗಾಗಿ ಡೀಪ್ ಸೀಕ್ ರಚನೆಯಲ್ಲೂ ಚೀನಾ ವಾಮಮಾರ್ಗ ಹಿಡಿದಿರುವ ಸಾಧ್ಯತೆಯಿದೆ ಎಂದು ಅಮೆರಿಕ ಗುಮಾನಿ ವ್ಯಕ್ತಪಡಿಸಿದೆ. ಭಾರತದಲ್ಲಿ ಬುಲೆಟ್ ರೈಲು ಅಥವಾ ಮೆಟ್ರೋ ರೈಲು ಯೋಜ ನೆಗಳು ಚೀನಾದಷ್ಟು ಕ್ಷಿಪ್ರವಾಗಿ ಕಾರ್ಯಗತವಾಗದಿರುವುದಕ್ಕೆ, ನಮ್ಮ ರಾಜ್ಯಗಳ ರಾಜಕೀಯ ಪ್ರತಿರೋಧ ವ್ಯವಸ್ಥೆ ಮತ್ತು ಯೋಜನೆಗೆ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಳ್ಳುವಲ್ಲಿನ ಕಾನೂನು ತೊಡಕುಗಳು ಕಾರಣವಾಗಿವೆ.
ಮಹಾರಾಷ್ಟ್ರದಲ್ಲಿ 2019ರಿಂದ 2022ರವರೆಗೆ ಅಧಿಕಾರದಲ್ಲಿದ್ದ ಉದ್ಧವ್ ಠಾಕ್ರೆ ನೇತೃತ್ವದ ಸರಕಾ ರವು ಅಹ್ಮದಾಬಾದ್ -ಮುಂಬೈ ನಡುವಿನ ಬುಲೆಟ್ ಟ್ರೇನ್ ಯೋಜನೆಗೆ ಬೇಕಾದ ಭೂಮಿ ಯನ್ನು ಒದಗಿಸದೆ ಸಾಕಷ್ಟು ತೊಂದರೆಗಳನ್ನೊಡ್ಡಿತ್ತು. ಇದರಿಂದಾಗಿ ಸದರಿ ಯೋಜನೆ 3 ವರ್ಷಗಳ ಕಾಲ ಹಿಂದೆ ಬಿತ್ತು.
ಆದರೆ ಅಲ್ಲೀಗ ಬದಲಾದ ರಾಜಕೀಯ ವಾತಾವರಣದಿಂದಾಗಿ ಯೋಜನೆಯು ಪುನಃ ಹಳಿಗೆ ಬಂದು ವೇಗವನ್ನು ಪಡೆದುಕೊಂಡಿದೆ, 2008ರೊಳಗಾಗಿ ಬುಲೆಟ್ ಟ್ರೇನ್ ಸೇವೆ ಆರಂಭವಾಗಲಿದೆ. ಮುಂಬೈ ಮೆಟ್ರೋ ಯೋಜನೆಗೂ ಅಡ್ಡಗಾಲು ಹಾಕಿದ್ದ ಉದ್ಧವ್ ಸರಕಾರ, ಅರಣ್ಯನಾಶವಾಗುತ್ತದೆ ಎಂಬ ನೆಪವೊಡ್ಡಿ ಮೆಟ್ರೋ ಕಾರು ಶೆಡ್ ನಿರ್ಮಾಣಕ್ಕೂ ತಡೆಯೊಡ್ಡಿತ್ತು.
ಕಮ್ಯುನಿಸ್ಟ್ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯಿರುವ ಚೀನಾದಲ್ಲಿ ಬುಲೆಟ್ ರೈಲು, ಮೆಟ್ರೋ, ವಿಮಾನ ನಿಲ್ದಾಣ, ಹೆದ್ದಾರಿಗಳಂಥ ಯೋಜನೆಗಳನ್ನು ಕಾರ್ಯಗತಗೊಳಿಸುವ ವಿಚಾರದಲ್ಲಿ ರಾಜ ಕೀಯ ಪ್ರತಿರೋಧವಿಲ್ಲ. ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ಅಲ್ಲಿಯ ಸರಕಾರ ಜನ ರಿಂದ ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಳ್ಳುತ್ತದೆ. ಬೀಜಿಂಗ್ ವಿಮಾನ ನಿಲ್ದಾಣ ವಿಸ್ತರಣೆಯ ವೇಳೆ 10000 ಮನೆಗಳನ್ನು ರಾತ್ರೋ ರಾತ್ರಿ ಕೆಡವಲಾಗಿತ್ತು. ಅಲ್ಲಿ ಜನರ ಪರವಾಗಿ ಮಾತನಾಡುವ ಮಾನವ ಹಕ್ಕುಗಳ ಸಂಘಟನೆಗಳಿಲ್ಲ.
ಕೋರ್ಟ್‌ಗಳೂ ಕಮ್ಯುನಿಸ್ಟ್ ಸರಕಾರದ ಅಡಿಯಲ್ಲಿ ಬರುವುದರಿಂದ, ಅವಕ್ಕೆ ಸರಕಾರವನ್ನು ವಿಮರ್ಶಿಸುವ ಸ್ವಾಯತ್ತತೆ ಇಲ್ಲ. ಭಾರತ ಸೇರಿದಂತೆ ಜಾಗತಿಕವಾಗಿ ಉಪಯೋಗಿಸಲ್ಪಡುತ್ತಿರುವ ವಾಟ್ಸಾಪ್, ಫೇಸ್‌ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್, ಎಕ್ಸ್ (ಟ್ವಿಟರ್), ಗೂಗಲ್ ಈ ಎಲ್ಲ ಸಾಮಾ ಜಿಕ ಮಾಧ್ಯಮಗಳ ಮೇಲೆ ನಿಷೇಧ ಹೇರಿರುವ ಚೀನಾ, ತನ್ನ ಪ್ರಜೆಗಳ ಬಳಕೆಗಾಗಿ ಪ್ರತ್ಯೇಕ ಸಾಮಾ ಜಿಕ ಮಾಧ್ಯಮಗಳನ್ನು ರೂಪಿಸಿದೆ.
ಸರಕಾರದ ವಿರುದ್ಧ ಯಾವುದೇ ಅಪಸ್ವರಗಳು ಅಥವಾ ವರದಿಗಳು ಅಲ್ಲಿ ಪ್ರಕಟವಾಗದಂತೆ ಕಣ್ಣಿಡ ಲಾಗುತ್ತದೆ. ಸರ್ವಾಧಿಕಾರಿ ಕಮ್ಯುನಿಸ್ಟ್ ಸರಕಾರದ ವಿರುದ್ಧ ಜನರು ತಿರುಗಿಬೀಳಬಾರ ದೆಂಬುದೇ ಇದರ ಹಿಂದಿನ ಉದ್ದೇಶ. ಒಟ್ಟಾರೆ, ಅಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದೇ ಇಲ್ಲ. ಜನರ ಚಲನ ವಲನಗಳ ಮೇಲೆ ನಿಗಾ ಇಡಲು ಚೀನಾ ಸರಕಾರವು ದೇಶಾದ್ಯಂತ 70 ಕೋಟಿಯಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಜನರು ಸರಕಾರದ ವಿರುದ್ಧ ದನಿಯೆತ್ತುವುದನ್ನು ತಡೆಯಲು ಇಷ್ಟೆಲ್ಲಾ ಹರಸಾಹಸ!
ಅಲ್ಲಿ ಸರಕಾರಕ್ಕೆ ವಿಪಕ್ಷವೆಂಬುದೇ ಇಲ್ಲ, ಯಾವ ಮಾಧ್ಯಮಗಳೂ ಸರಕಾರವನ್ನು ಟೀಕಿಸು ವಂತಿಲ್ಲ. ತನ್ನ ವಿರುದ್ಧ ಸಣ್ಣದಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಅಲೀಬಾಬ ಸಂಸ್ಥೆಯ ಸಂಸ್ಥಾ ಪಕ ಜ್ಯಾಕ್ ಮಾ ಎಂಬಾತನಿಂದ ಸಂಸ್ಥೆಯ ಮಾಲೀಕತ್ವವನ್ನೇ ಕಿತ್ತುಕೊಂಡ ಚೀನಾ ಸರಕಾರ, ಉಯಿಘರ್ ಮುಸ್ಲಿಮರ ಮಸೀದಿಗಳನ್ನು ನಾಶಪಡಿಸಿದೆ. ಅತಿಹೆಚ್ಚು ಮರಣದಂಡನೆಗಳು ವಿಧಿಸ ಲ್ಪಡುವ ದೇಶಗಳಲ್ಲಿ ಚೀನಾ ಮುಂಚೂಣಿಯಲ್ಲಿದೆ.
ಇಂಥ ಅತಿರೇಕಗಳೇನೂ ಇಲ್ಲದ ಭಾರತದಲ್ಲಿ ಆರ್ಥಿಕ ಪ್ರಗತಿಯ ಯುಗ ಆರಂಭವಾಗಿದೆ. ನಮ್ಮ ಜಿಡಿಪಿ ಅಭಿವೃದ್ಧಿ ದರವು ಚೀನಾಕ್ಕಿಂತಲೂ ಮೇಲಿರುವುದು ಮಾತ್ರವಲ್ಲದೆ, ಜಗತ್ತಿನಲ್ಲೇ ಅತಿವೇಗ ವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ ಭಾರತ. ಇಂದು ಜಾಗತಿಕವಾಗಿ 5ನೇ ಅತಿದೊಡ್ಡ ಆರ್ಥಿಕತೆ ಎನಿಸಿಕೊಂಡಿರುವ ಭಾರತ, ಮೊಬೈಲ್ ಫೋನ್, ಸೌರ ಉಪಕರಣಗಳು, ಇಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಉಪಗ್ರಹ ಉಡಾವಣೆ, ರಕ್ಷಣಾ ಸಲಕರಣೆಗಳ ಉತ್ಪಾದನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗುತ್ತಿದೆ,
ಸೆಮಿಕಂಡಕ್ಟರ್ ಕ್ಷೇತ್ರದಲ್ಲೂ ಮುಂಚೂಣಿಗೆ ಬರಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಡಿಜಿಟಲ್ ಪಾವತಿ ವಿಧಾನದಲ್ಲಿ ಭಾರತವು ಚೀನಾಕ್ಕಿಂತ ಎಷ್ಟೋ ಮುಂದಿದೆ. ವಿಪಕ್ಷಗಳ ಅಡ್ಡ ಗಾಲು ಸೇರಿದಂತೆ ಹತ್ತು ಹಲವು ಅಡೆತಡೆಗಳ ನಡುವೆಯೂ ಕಳೆದ 10 ವರ್ಷಗಳಲ್ಲಿ ದೇಶದ 11 ನಗರಗಳಲ್ಲಿ ಹೊಸದಾಗಿ ಮೆಟ್ರೋ ರೈಲುಸೇವೆ ಆರಂಭವಾಗಿದೆ. 8 ನಗರಗಳಲ್ಲಿ ಮೆಟ್ರೋ ಕಾಮ ಗಾರಿ ನಡೆಯುತ್ತಿದ್ದರೆ, ಇನ್ನೂ 27 ನಗರಗಳಲ್ಲಿ ಕಾಮಗಾರಿಗೆ ಅನುಮತಿ ಸಿಕ್ಕಿದೆ.
ಪರಿಣಾಮವಾಗಿ, 4000 ಕಿ.ಮೀ.ನಷ್ಟು ಉದ್ದದ ಮೆಟ್ರೋಜಾಲವನ್ನು ದೇಶ ಹೊಂದಲಿದೆ. ಕಳೆದ 10 ವರ್ಷಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿದೆ, 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಈ ವರ್ಷಾಂತ್ಯದೊಳಗಾಗಿ ಭಾರತವು ತನ್ನದೇ ಆದ ಕೃತಕ ಬುದ್ಧಿಮತ್ತೆ (ಎಐ) ತಂತ್ರಾಂಶವನ್ನು ಹೊಂದಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ಅಮೆರಿಕದ ನಂತರ ಅತಿಹೆಚ್ಚು ‘ಎಐ’ ತಂತ್ರಜ್ಞರನ್ನು ಹೊಂದಿರುವ ಭಾರತಕ್ಕೆ ತನ್ನದೇ ಆದ
‘ಎಐ’ ತಂತ್ರಜ್ಞಾನವನ್ನು ಹೊಂದುವುದು ಕಷ್ಟವೇನಲ್ಲ. ಚೀನಾ ದೇಶವು ಆಯ್ದ ಅಂಕಿ-ಅಂಶ ಗಳನ್ನು ಮಾತ್ರವೇ ಪ್ರಕಟಿಸಿ ಮಹತ್ವದ ಅಂಶಗಳನ್ನು ಅಡಗಿಸಿಡುತ್ತದೆ. ಭಾರತದ ಸೈನಿಕರೊಡನೆ ನಡೆದ ಸಂಘರ್ಷದಲ್ಲಿ ತನ್ನ ಎಷ್ಟು ಮಂದಿ ಸೈನಿಕರು ಸಾವಿಗೀಡಾಗಿದ್ದಾರೆ ಎಂಬ ಸಂಗತಿಯನ್ನೂ ಚೀನಾ ಮುಚ್ಚಿಟ್ಟಿದೆ. ಕರೋನಾ ಸಾವುಗಳ ವಿಚಾರದಲ್ಲಿ ಚೀನಾ ಹಂಚಿ ಕೊಂಡ ಅಂಕಿ-ಅಂಶ ಗಳನ್ನು ಯಾರೂ ನಂಬುತ್ತಿಲ್ಲ. ಹೀಗಾಗಿ, ಸೀಮಿತ ದೃಷ್ಟಿಕೋನವಿಟ್ಟುಕೊಂಡು ಭಾರತವನ್ನು ಚೀನಾದೊಂದಿಗೆ ಹೋಲಿಸದೆ, ಬಹು ಆಯಾಮಗಳಿಂದ ವಿಶ್ಲೇಷಿಸಬೇಕು.
(ಲೇಖಕರು ಹವ್ಯಾಸಿ ಬರಹಗಾರರು)