Ravi Sajangadde Column: ಕಸ್ತೂರಿ ರಂಗನ್ ಎಂಬ ಬಹುರಂಗ ಪಾರಂಗತ
ಪರಿಸರ ತಜ್ಞ, ಶಿಕ್ಷಣ ತಜ್ಞ, ವಿಜ್ಞಾನಿ, ಸಂಶೋಧನಾ ಚತುರ, ರಾಜ್ಯಸಭಾ ಸದಸ್ಯ, ಉತ್ತಮ ನಾಯಕ, ವಾಗ್ಮಿ, ಸಜ್ಜನಬಂಧು ಹೀಗೆ ಎಲ್ಲವೂ ಆಗಿದ್ದ ಕಸ್ತೂರಿ ರಂಗನ್ ಓರ್ವ ಮಹಾನ್ ಮಾನವ ತಾವಾ ದಿಯೂ ಆಗಿದ್ದರು ಎಂಬುದು ಗಮನಾರ್ಹ ಸಂಗತಿ. ತಮಿಳುನಾಡು ಮೂಲದ ಕೃಷ್ಣಸ್ವಾಮಿ ಅಯ್ಯರ್ ಮತ್ತು ವಿಶಾಲಾಕ್ಷಿ ದಂಪತಿಯ ಮಗನಾಗಿ ಕೇರಳದ ಎರ್ನಾಕುಲಂನಲ್ಲಿ 1940ರ ಅಕ್ಟೋಬರ್ 24ರಂದು ಜನಿಸಿದ ಕಸ್ತೂರಿ ರಂಗನ್, ಪ್ರಾಥಮಿಕ-ಪ್ರೌಢ-ಪದವಿ-ಸ್ನಾತಕೋತ್ತರ-ಪಿಎಚ್‌ಡಿ ಶಿಕ್ಷಣಗಳನ್ನು ಮುಂಬೈಯಲ್ಲಿ ಮುಗಿಸಿದರು. ಖಗೋಳಶಾಸ್ತ್ರ, ಬಾಹ್ಯಾಕಾಶ ಸಂಶೋಧನೆ, ವಿಜ್ಞಾನ ಮತ್ತು ತಂತ್ರ ಜ್ಞಾನದ ಕುರಿತಾಗಿ 240 ವೈಚಾರಿಕ ಹಾಗೂ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಕೀರ್ತಿ ಇವರದ್ದು


ನುಡಿನಮನ
ರವೀ ಸಜಂಗದ್ದೆ
ಯಾವುದೋ ಒಂದು ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ, ತನ್ಮೂಲಕ ಅಗ್ರಮಾನ್ಯರೆನಿಸಿಕೊಂಡ ಹಲವು ಸಾಧಕರು ಜಗತ್ತಿನಾದ್ಯಂತ ಕಾಣ ಸಿಗುತ್ತಾರೆ. ಇಂಥ ಮಹಾನುಭಾವರ ನಡುವೆ, ಅನ್ಯಾನ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು, ಅಂಥ ಎಲ್ಲ ಕ್ಷೇತ್ರಗಳಲ್ಲೂ ಮಹತ್ತರ ಸಾಧನೆ ಮಾಡಿದ ಕೆಲವೇ ಕೆಲವು ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ರಾರಾಜಿಸುವವರು ಡಾ. ಕೃಷ್ಣಮೂರ್ತಿ ಕಸ್ತೂರಿ ರಂಗನ್. ಸುಮಾರು 6 ದಶಕಗಳ ದೇಶಸೇವೆಯ ಸಂತೃಪ್ತಿ ಮತ್ತು ಸಾತತ್ಯ ದೊಂದಿಗೆ ಮೊನ್ನೆ ಏಪ್ರಿಲ್ 25ರಂದು ಇಹಲೋಕದ ಪಯಣ ಮುಗಿಸಿದ ಅವರ ಸೇವೆ, ಸಾಧನೆ, ಸತ್ಕಾರ್ಯಗಳ ಮೇಲೆ ಬೆಳಕು ಚೆಲ್ಲುವ ನುಡಿನಮನವಿದು. ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ಈವರೆಗಿನ ದೀರ್ಘಕಾಲಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಗರಿಮೆ ಇವರದ್ದು.
ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಜತೆಜತೆಗೆ ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ, ಸಂವಹನ, ಪರಿಸರ ಸಂರಕ್ಷಣೆ, ಆಡಳಿತ ಮುಂತಾದ ವಿಭಿನ್ನ ಮತ್ತು ಸಂಕೀರ್ಣ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿ ತಮ್ಮ ಬಹುಮುಖಿ ಸಾಮರ್ಥ್ಯವನ್ನು ಸಾಬೀತು ಮಾಡಿದವರು ಕಸ್ತೂರಿ ರಂಗನ್.
ಇವರ ಸೇವೆಯನ್ನು ವಿವಿಧ ಕ್ಷೇತ್ರಗಳಲ್ಲಿ ಸೂಕ್ತವಾಗಿ ಉಪಯೋಗಿಸುವಂತೆ ಆದದ್ದು ನಮ್ಮೆಲ್ಲರ ಸೌಭಾಗ್ಯ ಮತ್ತು ಅದು ಹೆಮ್ಮೆಯ ಸಂಗತಿ. ಪರಿಸರ ತಜ್ಞ, ಶಿಕ್ಷಣ ತಜ್ಞ, ವಿಜ್ಞಾನಿ, ಸಂಶೋಧನಾ ಚತುರ, ರಾಜ್ಯಸಭಾ ಸದಸ್ಯ, ಉತ್ತಮ ನಾಯಕ, ವಾಗ್ಮಿ, ಸಜ್ಜನಬಂಧು ಹೀಗೆ ಎಲ್ಲವೂ ಆಗಿದ್ದ ಕಸ್ತೂರಿ ರಂಗನ್ ಓರ್ವ ಮಹಾನ್ ಮಾನವ ತಾವಾದಿಯೂ ಆಗಿದ್ದರು ಎಂಬುದು ಗಮನಾರ್ಹ ಸಂಗತಿ. ತಮಿಳುನಾಡು ಮೂಲದ ಕೃಷ್ಣಸ್ವಾಮಿ ಅಯ್ಯರ್ ಮತ್ತು ವಿಶಾಲಾಕ್ಷಿ ದಂಪತಿಯ ಮಗನಾಗಿ ಕೇರಳದ ಎರ್ನಾಕುಲಂನಲ್ಲಿ 1940ರ ಅಕ್ಟೋಬರ್ 24ರಂದು ಜನಿಸಿದ ಕಸ್ತೂರಿ ರಂಗನ್, ಪ್ರಾಥಮಿಕ-ಪ್ರೌಢ-ಪದವಿ-ಸ್ನಾತಕೋತ್ತರ-ಪಿಎಚ್‌ಡಿ ಶಿಕ್ಷಣಗಳನ್ನು ಮುಂಬೈಯಲ್ಲಿ ಮುಗಿಸಿದರು. ಖಗೋಳಶಾಸ್ತ್ರ, ಬಾಹ್ಯಾಕಾಶ ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾಗಿ 240 ವೈಚಾರಿಕ ಹಾಗೂ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ ಕೀರ್ತಿ ಇವರದ್ದು.
ಇದನ್ನೂ ಓದಿ: Ravi Sajangadde Column: ಇದು ನಂಬಿಕೆಗೆ, ಆಚರಣೆಗೆ ಆದ ಘಾಸಿ
ಪ್ರೊ.ಯು.ಆರ್.ರಾವ್ ಅವರು 1972ರಲ್ಲಿ ಭಾರತದ ಮೊದಲ ಉಪಗ್ರಹ ಯೋಜನೆಗೆ ಬೆಂಗಳೂರಿ ನಲ್ಲಿ ಚಾಲನೆ ಕೊಟ್ಟಾಗ, ಅವರ ತಂಡದಲ್ಲಿದ್ದ ವಿಜ್ಞಾನಿಗಳ ಪೈಕಿ ‘ರಂಗನ್’ ಪ್ರಮುಖರಾಗಿದ್ದರು. ಭಾರತದ ಪ್ರಥಮ ಕೃತಕ ಉಪಗ್ರಹ ‘ಆರ್ಯಭಟ’ದ ತಂಡದಲ್ಲಿ ಕೆಲಸ ಮಾಡಿದ ಇವರು, 1979 ಮತ್ತು 1981ರಲ್ಲಿ ಉಡಾಯಿಸಲಾದ ‘ಭಾಸ್ಕರ’ ಸರಣಿಯ ಎರಡು ಉಪಗ್ರಹಗಳ ನಿರ್ಮಾಣದ ನೇತೃತ್ವವನ್ನು ವಹಿಸಿದ್ದರು.
ಅತ್ಯಂತ ಸಂಕೀರ್ಣವಾದ ಮತ್ತು ನಿಯೋಜಿತ ಕಾರ್ಯವನ್ನು ಅನೇಕ ವರ್ಷಗಳವರೆಗೆ ನಿರಂತರ ನಿರ್ವಹಿಸಬಲ್ಲ ಬೃಹತ್ ‘ಕಾರ್ಯವಾಹಿ’ (operational) ಉಪಗ್ರಹಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಎರಡು ಉಪಗ್ರಹ ಯೋಜನೆಗಳು ವಿಜ್ಞಾನಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದವು.
1988ರಲ್ಲಿ ಉಡಾಯಿಸಲಾದ ಭಾರತದ ಮೊದಲ ಕಾರ್ಯವಾಹಿ ಭೂವೀಕ್ಷಣಾ ಉಪಗ್ರಹ ‘ಐಆರ್ ಎಸ್-1ಎ’ ಯೋಜನೆಯ ನೇತೃತ್ವವನ್ನು ‘ರಂಗನ್’ ವಹಿಸಿದ್ದರು. ಈ ಎಲ್ಲಾ ಯೋಜನೆಗಳಿಗೆ ವಿನಿಯೋಗಿಸಿದ ಕಠಿಣ ಶ್ರಮ ಮತ್ತು ಅದರಿಂದ ದಕ್ಕಿದ ಯಶಸ್ಸಿನಿಂದಾಗಿ ‘ರಂಗನ್’ ಪದೋನ್ನತಿ ಪಡೆದು, 1990ರ ದಶಕದಲ್ಲಿ ಇಸ್ರೋ ಉಪಗ್ರಹ ಕೇಂದ್ರದ (ಈಗಿನ ಯು.ಆರ್.ರಾವ್ ಉಪಗ್ರಹ ಕೇಂದ್ರದ) ನಿರ್ದೇಶಕರಾಗಿ ಆಯ್ಕೆಯಾದರು. ನಂತರ 1994ರಲ್ಲಿ ಇಸ್ರೋ ಸಂಸ್ಥೆಯ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದರು.
ಅವರ 9 ವರ್ಷಗಳ ಅಧಿಕಾರಾವಧಿಯಲ್ಲಿ ಉಡಾಯಿಸಲಾದ ಎಲ್ಲ ಉಪಗ್ರಹಗಳು ಯಶಸ್ವಿ ಕಾರ್ಯನಿರ್ವಹಣೆಯಲ್ಲಿ ತೊಡಗಿ, ಇವೆಲ್ಲ ‘ಕಸ್ತೂರಿ ರಂಗನ್ ಚಮತ್ಕಾರ’ ಎಂಬ ಮಾತು ಇಸ್ರೋ ವಲಯದಲ್ಲಿ ಜನಜನಿತವಾಗುವುದಕ್ಕೆ ಕಾರಣವಾದವು. ಮಾತ್ರವಲ್ಲ, ಇಸ್ರೋದ ವಿವಿಧ ಉಡಾ ವಣಾ ವಾಹನ ಮತ್ತು ತಂತ್ರಜ್ಞಾನಗಳು ಮಹತ್ತರ ಪ್ರಗತಿಯನ್ನು ದಾಖಲಿಸಿದವು ಹಾಗೂ ‘ಇಸ್ರೋ’ ದೇಶದ ಹೆಮ್ಮೆಯ ಸಂಸ್ಥೆಯಾಗಿ ಹೊರಹೊಮ್ಮಿತು.
ಸ್ವದೇಶಿ ನಿರ್ಮಿತ ಉಡಾವಣಾ ಸಾಧನಗಳಿಂದ ಪರದೇಶಗಳ ಉಪಗ್ರಹಗಳನ್ನು ಉಡಾಯಿಸುವ ಕಾರ್ಯಯೋಜನೆ ಶುರುವಾಗಿದ್ದೇ ‘ರಂಗನ್’ ಅವರ ಕಾಲಘಟ್ಟದಲ್ಲಿ. 1999ರಲ್ಲಿ ಕೊರಿಯಾ ಮತ್ತು ಜರ್ಮನಿಯ ಒಂದೊಂದು ಉಪಗ್ರಹಗಳು ಪಿಎಸ್‌ಎಲ್‌ವಿ ವಾಹಕದ ಮೂಲಕ ಭೂಕಕ್ಷೆಗೆ ಯಶಸ್ವಿ ಯಾಗಿ ಸೇರಿಕೊಂಡಿದ್ದು ಇದಕ್ಕೆ ಸಾಕ್ಷಿ. ಈ ಯಶಸ್ಸಿನ ನಂತರ ಕಾರ್ಯವೈಖರಿ ಹಂತಹಂತವಾಗಿ ಅಭಿವೃದ್ಧಿಯಾಗಿದ್ದರ ಫಲವಾಗಿ ಇಂದು ಶ್ರೀಹರಿಕೋಟಾದಿಂದ ಭಾರತದ ಮತ್ತು ವಿವಿಧ ದೇಶಗಳ ಹಲವಾರು ಉಪಗ್ರಹಗಳು ಬಾಹ್ಯಾಕಾಶಕ್ಕೆ ಉಡಾವಣೆಯಾಗಿವೆ, ಆಗುತ್ತಿವೆ ಮತ್ತು ಈ ಕೇಂದ್ರವು ವಿಶ್ವದಲ್ಲೇ ಗರಿಷ್ಠ ಯಶಸ್ಸಿನ ಪ್ರಮಾಣವನ್ನು ಹೊಂದಿದೆ.
ಪರಿಸರ ಸಂರಕ್ಷಣೆ ವಿಚಾರದಲ್ಲಿ ‘ರಂಗನ್’ ಕೊಡುಗೆ ಅಪಾರ. ಪಶ್ಚಿಮ ಘಟ್ಟಗಳ ಸಂರಕ್ಷಣೆ ದೃಷ್ಟಿ ಯಿಂದ ಕೇಂದ್ರ ಸರಕಾರವು ನೇಮಿಸಿದ ಪರಿಸರ ತಜ್ಞ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿಯು 2011ರ ಆಗಸ್ಟ್ 31ರಂದು ವರದಿ ನೀಡಿ, “ಪಶ್ಚಿಮ ಘಟ್ಟದ ಶೇ.94ರಿಂದ 97ರಷ್ಟು ಭೂ ಭಾಗವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಜನವಸತಿಗೆ ನಿರ್ಬಂಧ ಹೇರಬೇಕು" ಎಂದು ಶಿಫಾರಸು ಮಾಡಿತು.
ಇದು ಆ ಪ್ರದೇಶದ ಜನರ ಆಕ್ರೋಶಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಕಸ್ತೂರಿ ರಂಗನ್‌ರ ಸಾರಥ್ಯದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಿತು. ಈ ಸಮಿತಿಯು ಗಾಡ್ಗೀಳ್ ವರದಿ ಯಲ್ಲಿನ ಲೋಪದೋಷಗಳನ್ನು ಪರಾಮರ್ಶಿಸಿ 2013ರ ಏಪ್ರಿಲ್ 15ರಂದು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿತು. ಈ ವರದಿಯೂ ವಿವಾದಕ್ಕೊಳಗಾಯಿತು.
ಏಕೆಂದರೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಗಣಿಗಾರಿಕೆ, ಮರಳು ಗಣಿಗಾರಿಕೆ/ಕ್ವಾರಿ, ಕೈಗಾರಿಕೆಗಳು, ಜಲವಿದ್ಯುತ್/ಪವನ ವಿದ್ಯುತ್ ಯೋಜನೆ ಸೇರಿದಂತೆ ಎಲ್ಲಾ ರೀತಿಯ ಕಾರ್ಯ ಯೋಜನೆಗಳನ್ನು ಸ್ಥಗಿತಗೊಳಿಸಬೇಕೆಂಬುದು ಈ ವರದಿಯ ಬಹುಮುಖ್ಯ ಶಿಫಾರಸು ಆಗಿತ್ತು; ಇದು ಕೆಲ ರಾಜಕಾರಣಿ ಗಳ ಮತ್ತು ಉದ್ಯಮಿಗಳ ಹಿತಾಸಕ್ತಿಗಳಿಗೆ ಪೂರಕವಾಗಿರಲಿಲ್ಲ!
ಹಾಗೆ ನೋಡಿದರೆ, ಕಸ್ತೂರಿ ರಂಗನ್ ವರದಿಯನ್ನು ಅಪಾರ್ಥಮಾಡಿಕೊಂಡು ತಿರಸ್ಕರಿಸಿದವರ/ವಿರೋಧಿಸಿದವರ ಸಂಖ್ಯೆ ದೊಡ್ಡದಿದೆ. ‘ಪಶ್ಚಿಮ ಘಟ್ಟದ ತಪ್ಪಲಿನ ಜನರನ್ನು ಒಕ್ಕಲೆಬ್ಬಿಸುವ ವರದಿ ಇದು’ ಎಂದು ಅನೇಕ ಪ್ರತಿಭಟನೆಗಳು/ ಮೆರವಣಿಗೆಗಳು ನಡೆದಿದ್ದಿದೆ, ಇರಲಿ. ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ರಾಗಿಯೂ ಸೇವೆ ಸಲ್ಲಿಸಿದ ಕಸ್ತೂರಿ ರಂಗನ್ ಅವರು, ಜೀವಿತಾವಧಿಯ ಕೊನೆಯ ದಿನಗಳವರೆಗೂ ರಾಜಸ್ಥಾನದ ಕೇಂದ್ರೀಯ ವಿಶ್ವ ವಿದ್ಯಾಲಯ ಮತ್ತು ಎನ್‌ಐಐಟಿ ವಿಶ್ವವಿದ್ಯಾಲಯಗಳ ಕುಲಪತಿ ಗಳಾಗಿದ್ದರು.
ಇಸ್ರೋದಿಂದ ನಿವೃತ್ತರಾದ ಬಳಿಕ 2003ರಿಂದ 2008ರವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿ, ದೇಶದ ಶ್ರೇಯೋಭಿವೃದ್ಧಿಗೆ ಮಹತ್ವಪೂರ್ಣ ನೀತಿಗಳು ರೂಪುಗೊಳ್ಳುವಂತಾಗುವಲ್ಲಿ ಕೊಡುಗೆ ನೀಡಿದರು. 2020ರಲ್ಲಿ ಕೇಂದ್ರ ಸರಕಾರವು ರಚಿಸಿದ, ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಯನ್ನು ರೂಪಿಸುವ ಸಮಿತಿಯ ನೇತೃತ್ವವನ್ನು ‘ರಂಗನ್’ ವಹಿಸಿ ಶಿಕ್ಷಣ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ.
ಸನಾತನ ಸಂಸ್ಕೃತಿಯ ಹೆಗ್ಗುರುತಾದ ಚತುರ್ವೇದಗಳಲ್ಲಿ ಅಡಕವಾಗಿರುವ ವೈಜ್ಞಾನಿಕ ಚಿಂತನೆ ಗಳು ಮತ್ತು ಸುವಿಚಾರಗಳ ಬಗ್ಗೆ ಅವರಿಗೆ ಆಳವಾದ ತಿಳಿವಳಿಕೆಯಿತ್ತು. 1999ರ ವರ್ಷದಲ್ಲಿ, ಚಂದ್ರಯಾನದ ಕನಸನ್ನು ದೇಶದೆದುರು ಮೊದಲು ಬಿತ್ತಿದ ಕನಸುಗಾರ ಕಸ್ತೂರಿ ರಂಗನ್ ಅವರು, ಡಾ.ಅಬ್ದುಲ್ ಕಲಾಂರ ನಂತರ ದೇಶವು ಕಂಡ ಅಪ್ರತಿಮ ವಿಜ್ಞಾನಿ ಮತ್ತು ತತ್ವಜ್ಞಾನಿ. ಇಂಥ ಬಹುರಂಗ ಪಾರಂಗತರು ಇನ್ನಷ್ಟು ಸಂಖ್ಯೆಯಲ್ಲಿ ನಮ್ಮ ದೇಶದಲ್ಲಿ ಹುಟ್ಟಿ ಬರಲಿ. ಅವರ ಸಾಧನೆ ಗಳು, ಕೊಡುಗೆಗಳು ಮುಂದಿನ ತಲೆಮಾರುಗಳಿಗೆ ಮಾದರಿಯಾಗಲಿ ಎಂದು ಆಶಿಸೋಣ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)