Ravi Hunj Column: ಇದು ವರ್ತಮಾನದ ಮತ್ತು ಮುಂದಿನ ಇತಿಹಾಸದ ಅತ್ಯಂತ ನಗೆಪಾಟಲಿನ ಅಂಶ
ಇಂಥ ವಿರಕ್ತ ಪೀಠಗಳನ್ನು ರೂಪಿಸಿದ ತೋಂಟದ ಸಿದ್ದಲಿಂಗೇಶ್ವರರು ರೇಣುಕರನ್ನು ಕೃತಜ್ಞತೆ ಯಿಂದ ಸ್ಮರಿಸಿದ ವಚನವು ಹೀಗಿದೆ: “ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯವಾಗದಿರ್ದಡೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ? ಆ ಶಿವನಲ್ಲಿಯೇ ಹುಟ್ಟಿ ಶಿವನಲ್ಲಿಯೇ ಲಯ ವಾದ ರೇವಣ ಸಿದ್ಧೇಶ್ವರನು, ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ ನಾಯಕ ನರಕ ತಪ್ಪದು.


ಬಸವ ಮಂಟಪ
ರವಿ ಹಂಜ್
ವೀರಶೈವ ಎಂಬುದು ಆಚಾರ-ವಿಚಾರಗಳ ಸಂಗಮ. ಆಚಾರಕ್ಕೆ ಗುರುವರ್ಗ, ಆಚಾರ ಸಂಹಿತೆಗೆ ಶಾಖಾಮಠಗಳ ಶಿವಾಚಾರ್ಯರು. ಶಾಖಾಮಠಗಳಲ್ಲಿ ಸ್ಥಿರಪಟ್ಟ ಮತ್ತು ಚರಪಟ್ಟದ ಸ್ವಾಮಿಗಳು ಇರುತ್ತಿದ್ದರು. ಸ್ಥಿರಪಟ್ಟಾಧ್ಯಕ್ಷರು ಮಠದಲ್ಲಿದ್ದು ಪೂಜೆ, ಪ್ರವಚನ, ಮಠದ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರೆ, ಚರಪಟ್ಟಾಧೀಶರು ಸಂಚಾರದಲ್ಲಿದ್ದು ಭಕ್ತರೊಂದಿಗೆ ಸಂಪರ್ಕದಲ್ಲಿರು ತ್ತಿದ್ದರು.
ಇದಿಷ್ಟು ಸನಾತನವಾಗಿದ್ದ ವೀರಶೈವ ಮಠೀಯ ವ್ಯವಸ್ಥೆಯ ಸ್ವರೂಪ. ಹದಿನೈದನೇ ಶತಮಾನ ದಿಂದ ವೀರಶೈವವು ಯಾವಾಗ ಪುನರುತ್ಥಾನಗೊಂಡಿತೋ ಆಗ ಇದೇ ಮಠೀಯ ವ್ಯವಸ್ಥೆಯ ಅಂಗವಾಗಿ ಎಡೆಯೂರು ತೋಂಟದ ಸಿದ್ದಲಿಂಗೇಶ್ವರರು ವಿರಕ್ತ ಪೀಠಗಳನ್ನು ಸ್ಥಾಪಿಸಿ ವಿಸ್ತರಿಸಿ ದರು.
ಇಂಥ ವಿರಕ್ತ ಪೀಠಗಳನ್ನು ರೂಪಿಸಿದ ತೋಂಟದ ಸಿದ್ದಲಿಂಗೇಶ್ವರರು ರೇಣುಕರನ್ನು ಕೃತಜ್ಞತೆ ಯಿಂದ ಸ್ಮರಿಸಿದ ವಚನವು ಹೀಗಿದೆ: “ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯವಾಗದಿರ್ದಡೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ? ಆ ಶಿವನಲ್ಲಿಯೇ ಹುಟ್ಟಿ ಶಿವನಲ್ಲಿಯೇ ಲಯ ವಾದ ರೇವಣ ಸಿದ್ಧೇಶ್ವರನು, ಅನಾದಿಮುಕ್ತನಲ್ಲ, ಅವಾಂತರ ಮುಕ್ತರೆಂಬ ಅಜ್ಞಾನಿಗಳಿಗೆ ನಾಯಕ ನರಕ ತಪ್ಪದು.
ಇದನ್ನೂ ಓದಿ: Ravi Hunj Column: ಅಷ್ಟಕ್ಕೂ, ಲಿಂಗಾಯತ ಮತ್ತು ಇಸ್ಲಾಂ ಧರ್ಮ ಒಂದೇನಾ ? ಏನಿದರ ಹಕೀಕತ್ ?
ಸಕಲಕೋಟಿ ಬ್ರಹ್ಮಾಂಡಕ್ಕಾಧಾ ರಕಾರಣವಾಗಿಯು ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು ಪರಮೇಶ್ವರನ ನಿಜಚಿನ್ಮಯಮಪ್ಪ ಊರ್ಧ್ವಮುಖದಲ್ಲಿಚಿತ್ಕಲಾ ಸ್ವರೂಪರಪ್ಪ ರುದ್ರಗಣಂಗಳು ದಯವಾದರು ನೋಡ. ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ ಮರ್ತ್ಯದಲ್ಲಿ ಅವತರಿಸಿ ದಡೆ, ಅದೇನು ಕಾರಣ ಉದಯವಾದರು ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ ಅವಲಕ್ಷಣ ನಾಯ ನಾಲಗೆಯ, ಯಮದೂತರು ಕೀಳದೆ ಮಾಣ್ಬರೆ? ಇವರಿಂಗೆ ನಾಯಕನರಕ ತಪ್ಪದು ಕಾಣಾ, ಎಲೆ ಶಿವನೆ ನೀ ಸಾಕ್ಷಿಯಾಗಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ"- ತೋಂಟದ ಸಿದ್ಧಲಿಂಗೇ ಶ್ವರ ಹೀಗೆ ಆಚಾರಕ್ಕೆ ಗುರುವರ್ಗ, ಅನುಷ್ಠಾನಕ್ಕೆ ಶಿವಾಚಾರ್ಯರು, ವಿಚಾರಕ್ಕೆ ವಿರಕ್ತವರ್ಗ ಎಂದಾಯಿತು.
ಗುರುವರ್ಗ ಸಂವಿಧಾನದಂತಿದ್ದರೆ, ಅದಕ್ಕೆ ತಕ್ಕ ನ್ಯಾಯ, ನೀತಿ ಸಂಹಿತೆಯನ್ನು ಶಿವಾಚಾರ್ಯರು ರೂಪಿಸುತ್ತಿದ್ದರು. ವಿರಕ್ತವರ್ಗದವರು ಆಡಳಿತಾಂಗದಂತೆ ಇದನ್ನು ಅನುಷ್ಠಾನಗೊಳಿಸುತ್ತಿದ್ದರು. ಹಾಗಾಗಿಯೇ ವೀರಶೈವ ಎಂಬ ಪದ ಗ್ರಾಂಥಿಕ ಎನಿಸಿ, ಲಿಂಗಾಯತ ಎಂಬುದು ಆಡುಪದವಾಗಿ ಬಳಕೆಗೆ ಬಂದಿತು. ಸಾಮಾಜಿಕವಾಗಿ ಗುರುವರ್ಗದ ಪಂಚಪೀಠಗಳು ಅಡ್ಡಪಲ್ಲಕ್ಕಿ ಮಹೋತ್ಸವ, ಧಾರ್ಮಿಕ ಸಮಾವೇಶ ಬಿಟ್ಟರೆ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ರಾಜಗುರುಗಳು ಎಂದೇ ಖ್ಯಾತರಾಗಿದ್ದ ಈ ಜಗದ್ಗುರುಗಳು ಯಾವುದೇ ಪುರಪ್ರವೇಶಕ್ಕೆ ಇಂತಿಂಥ ರಾಜಮರ್ಯಾದೆಗಳನ್ನು ಮಾಡಬೇಕು ಎಂಬ ನಿಯಮಗಳಿದ್ದವು. ಇಂಥ ನಿಯಮಾವಳಿಗಳನ್ನು ರಾಜಪ್ರಭುತ್ವಗಳಲ್ಲದೆ ಬ್ರಿಟಿಷರು ಸಹ ಅನುಮೋದಿಸಿ ತಕ್ಕ ಅನುದಾನಗಳನ್ನು ಕೊಟ್ಟಿರುವ ಇತಿಹಾಸವೇ ಇದೆ. ಈ ಎಲ್ಲಾ ಗೌರವದ ಪರಿಽಗಳ ಕಾರಣವಾಗಿ ಪಂಚಪೀಠಾಧೀಶರು ಹೆಚ್ಚಾಗಿ ಸಂಚರಿಸುತ್ತಿರಲಿಲ್ಲ.
ಬೇರೆ ಎಲ್ಲಾ ಲೌಕಿಕ ವಿಚಾರಕ್ಕೆ ಸಂಪರ್ಕದಲ್ಲಿದ್ದದ್ದು ಗುರುವಿರಕ್ತರೇ ಆಗಿರುತ್ತಿದ್ದರು. ಗುರುಮಠ, ವಿರಕ್ತಮಠ ಎಂಬ ಯಾವ ಭೇದವೂ ಗುರುಗಳಲ್ಲಾಗಲಿ, ಭಕ್ತರಲ್ಲಾಗಲಿ ಇರಲಿಲ್ಲ. ಗುರುವಿರಕ್ತ ಮಠದ ಚರಮೂರ್ತಿಗಳು ಆಗಾಗ್ಗೆ ಭಕ್ತರ ಮನೆಗೆ ತೆರಳಿ ಅವರ ಎಲ್ಲಾ ಯೋಗಕ್ಷೇಮವನ್ನು ವಿಚಾರಿಸಿ ಸೂಕ್ತ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮಾರ್ಗದರ್ಶನ ನೀಡುತ್ತಿದ್ದರು.
ದಾವಣಗೆರೆಯ ಹಲವಾರು ಭಕ್ತರ ಮನೆಗೆ ಗುರುವರ್ಗದ ಸದ್ಯೋಜಾತ ಸ್ವಾಮಿಗಳು ಮತ್ತು ಮುರುಘಾಮಠದ ಚರಮೂರ್ತಿಗಳಾಗಿದ್ದ ವಿರಕ್ತವರ್ಗದ ಲೀಲಾಮೂರ್ತಿ ಸ್ವಾಮಿಗಳು ಕಾಲ ಕಾಲಕ್ಕೆ ಭೇಟಿ ಕೊಟ್ಟು ಮಾರ್ಗದರ್ಶನ ನೀಡುತ್ತಿದ್ದುದನ್ನು ನಾನೇ ಸಾಕಷ್ಟು ಸಾರಿ ನೋಡಿದ್ದೇನೆ, ಅನುಭವಿಸಿದ್ದೇನೆ.
ನಿಜಕ್ಕೂ ಇಲ್ಲಿ ತಪೋನಿಷ್ಠ ವಿರಕ್ತವಾಗಿರುತ್ತಿದ್ದುದು ಪಂಚಪೀಠಗಳೇ ಆಗಿದ್ದವು, ಮತ್ತು ಧಾರ್ಮಿಕ ಮುಖವಾಣಿಯಾಗಿ ಗುರುವಿರಕ್ತಪೀಠಗಳೇ ಇದ್ದವು. ಇಂಥ ನಿಯಂತ್ರಣ ಮತ್ತು ಸಮತೋಲನ ( check and balance) ಸಮನ್ವಯವು ವೀರಶೈವದ ಸಮಗ್ರ ನೀತಿಯಾಗಿತ್ತು. ವೀರಶೈವಧರ್ಮದ ಮೂಲ ತಾತ್ವಿಕ ಘನತೆಯು ಗ್ರಾಂಥಿಕ ಗುರುವರ್ಗದಲ್ಲಿದ್ದರೂ, ಅದರ ಪ್ರಾಯೋಗಿಕ ಮುಖವು ವಿರಕ್ತ ಪೀಠಗಳ ಮೂಲಕ ಸಮಾಜಕ್ಕೆ ಹತ್ತಿರವಾಗಿ ಬೆಳೆಯಿತು.
ಈ ವ್ಯವಸ್ಥೆಯನ್ನು ಮತ್ತಷ್ಟು ಬೆಳೆಸಿದ್ದು ಹಾನಗಲ್ ಕುಮಾರಸ್ವಾಮಿಗಳು. ಇವರು ಮಠಾಧೀಶ ರನ್ನು ತಯಾರು ಮಾಡುವ ವ್ಯವಸ್ಥಿತ ಶಿವಯೋಗಾಶ್ರಮವನ್ನು ಆರಂಭಿಸಿದರು. ಇದು ಒಂದು ಸಂವಹನದ, ಅನುಭವಾಧಿಷ್ಠಿತ ಧರ್ಮ ರೂಪುಗೊಳ್ಳಲು ಕಾರಣವಾಯಿತು. ಆದ್ದರಿಂದ ಬಸವಣ್ಣ ನಲ್ಲದೇ ವಚನಕಾರರಾದಿಯಾಗಿ ಹೆಚ್ಚು ಬಳಸದ ಆಡುಮಾತಿನ ‘ಲಿಂಗಾಯತ’ ಎಂಬ ಪದ ಹೀಗೆ ಸಾಮಾಜಿಕವಾಗಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತು.
ಹೀಗಾಗಿಯೇ ವೈಚಾರಿಕ ವಿರಕ್ತಪೀಠಗಳು ಸಾಮಾಜಿಕವಾಗಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದರೆ, ಆಚಾರ್ಯ ಗುರುವರ್ಗಗಳು ಯಾವುದೇ ಪ್ರಮುಖ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿಲ್ಲ. ಇಂತಿಪ್ಪ ವಿರಕ್ತಪೀಠಗಳು ಸಹ ಖುದ್ದು ವಿದ್ಯಾಸಂಸ್ಥೆಗಳನ್ನು ಆರಂಭಿಸಿದರೂ ತಾವಾಗೇ ಅಧಿಕಾರವನ್ನು ವಹಿಸಿಕೊಂಡಿರಲಿಲ್ಲ. ಅದನ್ನು ಭಕ್ತರಿಗೇ ಬಿಟ್ಟಿದ್ದರು.
ಇದಕ್ಕೆ ಸಾಕ್ಷಿಯಾಗಿ ವೀರಶೈವ ಮಹಾಸಭಾವನ್ನು ಸ್ಥಾಪಿಸಿದ ಗುರು ಕುಮಾರೇಶ್ವರರು ಮಹಾ ಸಭಾದ ಬೈಲಾದಲ್ಲಿ ಸಭಾವು ಯಾವುದೇ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಬಾರದು ಎಂದಿದೆ. ತನ್ನ ಮಹಾಸಭೆಯ ಬೆಳಗಾವಿ ಅಧಿವೇಶನದ ಸಮ್ಮೇಳನದಲ್ಲಿ ಸಂಗ್ರಹಿಸಿದ ಹಣದಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಲಿಂಗಾಯತ ಎಜ್ಯುಕೇಶನ್(KLE) ಸೊಸೈಟಿಯ ಸ್ಥಾಪನೆಗೆ ಮೊದಲ ಅಡಿಪಾಯದ ಪರಿಸರವನ್ನು ನಿರ್ಮಿಸಿತು.
ಅದು ನಂತರ ಓರ್ವ ವ್ಯಕ್ತಿಯ ಅಧಿಕಾರಶಾಹಿಯಾಯಿತು. ಇದೇ ರೀತಿ ಬಳ್ಳಾರಿಯ ಅಧಿವೇಶನದ ನಂತರ ಸ್ಥಾಪಿತಗೊಂಡ ವೀರಶೈವ ವಿದ್ಯಾವರ್ಧಕ ಸಂಘ ಸಹ ಇನ್ನೋರ್ವ ವ್ಯಕ್ತಿಯ ಅಧಿಕಾರ ಶಾಹಿಯಾಗಿ ಪರಿವರ್ತನೆಗೊಂಡಿತು. ಮಹಾಸಭಾದ ಆಚೆ ವಿರಕ್ತ ಜಯದೇವ ಮುರುಘರಾಜೇಂದ್ರ ಸ್ವಾಮಿಗಳ ಬೆಂಬಲದಿಂದ ಸ್ಥಾಪನೆಯಾದ ಬಾಪೂಜಿ ಸಂಸ್ಥೆ ಸಹ ವ್ಯಕ್ತಿಯೋರ್ವರ ಅಧಿಕಾರಶಾಹಿ ಯಾಯಿತು.
ಬಂಥನಾಳ ಶಿವಯೋಗಿಗಳು ಸ್ಥಾಪಿಸಿದ BLDE ಸಹ ಓರ್ವ ವ್ಯಕ್ತಿಯ ಅಧಿಕಾರಶಾಹಿಯಾಯಿತು. ಎಲ್ಲಿ ನಿಯಂತ್ರಣ ಮತ್ತು ಸಮತೋಲನ ಸಮನ್ವಯವಿತ್ತೋ ಅದು ಹೀಗೆ ಮೊದಲ್ಗೊಂಡು ಸಮತೋಲನ ತಪ್ಪಿತು.
ಈ ತಪ್ಪಿದ ಸಮತೋಲನದ ದೆಸೆಯಿಂದ ಆಯಾಯಾ ಅಧಿಕಾರಶಾಹಿ ವ್ಯಕ್ತಿಗಳ ಮೂಲಕ ಸ್ವಜನ ಪಕ್ಷಪಾತ ಆರಂಭಗೊಂಡು ನಂತರ ಅವರ ಜಾತಿ ಈ ಸಂಸ್ಥೆಗಳಲ್ಲಿ ತೂರಿ ವೀರಶೈವರಲ್ಲಿಯೇ ಜಾತೀಯತೆ ಉಂಟಾಗಲು ಕಾರಣವಾಯಿತು. ಮುಂದೆ ಜಾತಿಯಾಧಾರಿತ ಮಠಾಧೀಶರು ಖುದ್ದು ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಖಜಾನೆಯನ್ನು ತಮ್ಮ ಮಠಗಳ ಇರಿಸಿಕೊಳ್ಳಲಾರಂಭಿಸಿದರು.
ತದನಂತರ ಜಾತಿಗಳು ಯಾವಾಗ ಪ್ರಜಾಪ್ರಭುತ್ವದ ಮತ-ಖಜಾನೆ ಎನಿಸಿತೋ ಆಗ ಅಖಂಡ ವೀರಶೈವದ ವಿಭಜನೆ ಆರಂಭವಾಯಿತು. ಜಾತಿಯಾಧಾರಿತ ಮಠಗಳು ಸೃಷ್ಟಿಯಾಗಿ ನೇರ ರಾಜಕೀಯ ಲಾಬಿ, ವರ್ಗಾವಣೆ ದಂಧೆ ಮುಂತಾಗಿ ಭ್ರಷ್ಟಾಚಾರದ ಮಹಾಪೋಷಕವಾದವು. ದಿಢೀರನೆ ಬಂದ ಶ್ರೀಮಂತಿಕೆಯು ಕೆಲವೇ ಕೆಲವು ವಿರಕ್ತರಲ್ಲಿ ಮತ್ತು ನವ್ಯಜಾತಿಪೀಠಿಗಳಲ್ಲಿ ನಾವೇನು ಕಡಿಮೆ ಎಂಬ ಅಹಂ, ಪಂಚಪೀಠಗಳಿಗೇಕೆ ಎತ್ತರದ ಕುರ್ಚಿಗಳು, ಅಡ್ಡಪಲ್ಲಕ್ಕಿ ಮಹೋತ್ಸವ, ಕಿರೀಟ, ಪುರಪ್ರವೇಶ ಗೌರವ ಎಂದು ಪ್ರಶ್ನಿಸಲಾರಂಭಿಸಿತು.
ಪ್ರಜಾಪ್ರಭುತ್ವದ ಸಂಸತ್ತು, ಪರಿಷತ್ತು, ವಿಧಾನಸಭೆಗಳಲ್ಲಿ ಸಭಾಧ್ಯಕ್ಷರಿಗೆ ಎತ್ತರದ ಕುರ್ಚಿ, ಸರಕಾರಿ ಸಂಹಿತೆ (protocol), ಸರಕಾರಿ ಮರ್ಯಾದೆ ಇದ್ದಂತೆಯೇ ವೀರಶೈವ ಧಾರ್ಮಿಕ ವ್ಯವಸ್ಥೆಯು ಪಂಚ ಪೀಠಗಳಿಗೆ ಎತ್ತರದ ಕುರ್ಚಿ ಕೊಟ್ಟಿದೆ. ಇದೇ ರೀತಿಯ ಎತ್ತರದ ಸ್ಥಾನ ಮತ್ತು ಆಸನಗಳು ವಿಶ್ವದ ಅನೇಕ ಧರ್ಮಗಳಲ್ಲಿದೆ. ಆದರೆ ಇಂಥ ವಾಸ್ತವಾಂಶಗಳನ್ನು ವಾಸ್ತವಿಕವಾಗಿ ಅನುರಕ್ತರಾಗಿ ಪರಿವರ್ತಿತಗೊಂಡಿದ್ದ ವಿರಕ್ತರ ರಾಗದ್ವೇಷವು ಕಡೆಗಣಿಸಿ ಹೆಡೆಯೆತ್ತಿ ವಿಷ ಕಕ್ಕಲಾರಂಬಿಸಿತು.
ಶ್ರೀಮಂತ ಸ್ವಾಮಿಗಳ ವಿಷ ಮತ್ತು ಕೆಲವು ರಾಜಕಾರಣಿ ಭಕ್ತರ ಜಾತಿ ಓಲೈಕೆ ಲಾಬಿಗೆ ನಾಂದಿಯಾಗಿ ಕ್ರಮೇಣ ಬಾಲವೇ ದೇಹವನ್ನು ಅಡಿಸಲಾರಂಭಿಸಿತು. ಯಾವಾಗ ಬಾಲಗಳು ದೇಹಗಳನ್ನು ಅಡಿಸಲು ಆರಂಭಿಸಿದವೋ ಆಗ ಅವರ ಬಾಲಗಳ ಅಲುಗಾಟಕ್ಕೆ ಶಕ್ತಿ ತುಂಬಲು ಸಂಶೋಧನೆಯ ಹೆಸರಲ್ಲಿ ಸಂಕಥನಗಳು ಸೃಷ್ಟಿಯಾದವು. ವಚನಗಳು ಅವರವರ ಭಾವಕ್ಕೆ ವ್ಯಾಖ್ಯಾನಗೊಂಡವು.
ಕಮ್ಯುನಿ ಚಿಂತನೆಯ ಸ್ಪರ್ಶಕ್ಕೊಳಗಾದವು, ಸಂವಿಧಾನ ಎನಿಸಿದವು. ಮೊದಲ ಸಂಸತ್ತು ಎನಿಸಿದವು. ಪ್ರಜಾಪ್ರಭುತ್ವದ ಬುನಾದಿ ಎನಿಸಿದವು. ಬಸವಣ್ಣ ಸ್ಥಾಪಕನಾದ. ವಚನಗಳು ಧರ್ಮಗ್ರಂಥಗಳಾದವು. ಅಡ್ಡಪಲ್ಲಕ್ಕಿ ಗೌರವವು ಮನುಷ್ಯರನ್ನು ಹೊರುವ ಕ್ರೂರ ವ್ಯವಸ್ಥೆ ಎಂಬ ಕರುಣಾಜನಕ ಕತೆಗಳಾದವು.
ನಂತರ ನಮ್ಮ ಮೊದಲು’ ಎನ್ನುವಂತೆ ‘ನಮ್ಮದೇ ಸರ್ವಶ್ರೇಷ್ಠ’ ಎನಿಸಿದವು. ಭಾವುಕ ಭಾವನೆ ಗಳನ್ನು ಶೋಷಿಸಲು ಕನ್ನಡದ ಮೊದಲ ಧರ್ಮ, ಶೋಷಿತರ ಧರ್ಮ, ಮಹಿಳಾ ಸಮಾನತೆಯ ಧರ್ಮ... ಹೀಗೆ ಹೇಗೆ ಬೇಕೋ ಹಾಗೆ ಅನಿಸತೊಡಗಿದವು. ಬಸವಣ್ಣ ಧರ್ಮ ಭಂಜಕರ ಕತ್ತಿ ಗುರಾಣಿ, ಆದಾಯದ ಅಗಣಿತ ಗಣಿಯೇ ಆದ. ಈ ಅಲುಗಾಟಕ್ಕೆ ಅನಿಸುವಿಕೆಯು ಪರಸ್ಪರ ಲಯಗೊಂಡು ಸಾಮರಸ್ಯ ಮೂಡಿ ಇಂದು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಸವಣ್ಣನ ಕುರಿತು ಸಂಶೋಧನೆ ಮಾಡಬೇಕೆಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ನಿಂದ ವಿವಿಗಳಿಗೆ ಸೂಚನೆ ಹೊರಡಿಸ ಲಾಗಿದೆ.
ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯಗಳ ತಾಂತ್ರಿಕ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವ ವಿದ್ಯಾಲಯಗಳು ಮತ್ತು ಪರಿಷತ್‌ನಿಂದ ಮಾನ್ಯತೆ ಪಡೆದಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಒಟ್ಟಾರೆ ಬಸವ ಶೋಷಣೆ ದಿಗ್ದಿಗಂತದೆ ಮೀರಿ ಗಮ್ಯ ಗೋಚರವಾಗಲಿದೆ. ಈವರೆಗೆ ವಿಶ್ವವಿದ್ಯಾಲಯಗಳು ಇತಿಹಾಸ, ಪುರಾತತ್ವ, ಭಾಷಾ ವಿಜ್ಞಾನ, ಸಮಾಜಶಾಸ್ತ್ರ, ಸಾಂಸ್ಕೃತಿಕ ಅಧ್ಯಯನಗಳಾಗಿ ಸಂಶೋಧ ನೆಗಳಾದ ಬಸವಣ್ಣ ಈಗ ತಾಂತ್ರಿಕವಾಗಿ ಮಾಂತ್ರಿಕ ನಾಗುತ್ತಿದ್ದಾನೆ.
ಈ ಆದೇಶವನ್ನು ಕ್ರಿಯಾಶೀಲ ಅಭಿಯಂತರನಾಗಿ ಯೋಚಿಸಿದರೆ ಇಲ್ಲಿ ತಾರ್ಕಿಕವಾಗಿ ತಾಂತ್ರಿಕ ವಾಗಿ ಮಾಡಬಹುದಾದ ಸಂಶೋಧನೆಗಳು ಯಾವುವು? ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಂಶೋಧನೆ ಇಡೀ ತಂತ್ರಜ್ಞಾನ, ಸಂರಚನೆ, ರಸಾಯನಶಾಸ್ತ್ರ, ಇಲೆಕ್ಟ್ರಾನಿಕ್ಸ್, ಡೇಟಾ ಅನಾಲಿಸಿಸ್ ಮೊದಲಾದ ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆ ಸಾಗುತ್ತದೆ. ಆದ್ದರಿಂದ, ಕೆಮಿಕಲ್ ಎಂಜಿನಿಯರಿಂಗ್ ಅಥವಾ ಮೆಟೀರಿಯಲ್ಸ್ ಸೈ ವಿಭಾಗದ ವಿದ್ಯಾರ್ಥಿಗಳು ಶಾಸನ ಅಥವಾ ತಾಳೆ ಯೋಲೆಗಳ ಮೇಲೆ ರಾಸಾಯನಿಕ ಸಂಶೋಧನೆ (ಉದಾ: ತಾಳೆಗರಿ/ಕಾಗದದ ವಯಸ್ಸು, ಬಳಕೆಯ ಶಾಯಿ, ಸಂರಕ್ಷಣೆ ವಿಧಾನಗಳು) ನಡೆಸಬಹುದು.
ಶಾಸನಗಳ ದಿನಾಂಕ ನಿಗದಿಪಡಿಸಲು ಕಾರ್ಬನ್ ಡೇಟಿಂಗ್, ಲೇಪನ ಅಥವಾ ಶಾಯಿಯ ಸಂರಚನೆ ತಿಳಿಯಲು ಕ್ರೋಮಟೋಗ್ರಾಫಿ ಅಥವಾ ಐಆರ್ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನ ಉಪಯೋಗಿಸಿ ಐತಿಹಾಸಿಕ ದಾಖಲೆಗಳ ವಿಶ್ವಾಸಾರ್ಹತೆ ಖಚಿತಪಡಿಸಬಹುದು.
ಇಂಥ ಸಂಶೋಧನೆಗಳಿಂದ ಈಗಾಗಲೇ ಸಾಬೀತಾಗಿರುವಂತೆ ವಚನಗಳ ಒಂದೇ ಒಂದು ತಾಳೆಗರಿ ಯೂ ಹನ್ನೆರಡನೇ ಶತಮಾನದ್ದಲ್ಲ, ಅರ್ಜುನವಾಡ ಮತ್ತಿತರೆ ಶಿಲಾಶಾಸನಗಳ ಕಾಲ ಎಲ್ಲವೂ ಪುನರ್ ಸಾಬೀತಾಗುತ್ತವೆಯಷ್ಟೇ. ಇನ್ನು ತಾಂತ್ರಿಕವಾಗಿ ಯಾವ ಹೊಸ ಅಂಶಗಳು ಈ ಅಲುಗಾಡು ವಿಕೆ-ಅನಿಸುವಿಕೆಗಳಿಗೆ ಬೆಂಬಲ ನೀಡುವುದೋ ಎಂಬ predictive analysis ತಾಂತ್ರಿಕತೆಯನ್ನು ಕೂಡಾ ಚೆನ್ನಬಸವಣ್ಣ ಆಗಲೇ ಕಾಲಜ್ಞಾನ ವಚನವಾಗಿ ಹೇಳಿ ಮುಗಿಸಿದ್ದಾನೆ.
ಇಷ್ಟೆ ಆದ ಮೇಲೆ ತಾಂತ್ರಿಕವಾಗಿ ಸಂಶೋಧಿಸಲು ಏನುಳಿದಿದೆ, ನಿಶ್ಶೂನ್ಯ ಬಯಲೇ ಬಯಲಲ್ಲವೇ! ಅಲ್ಲಿಗೆ ಮತ್ತದೇ ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ‘ಛಾಂಗು ಭಲೇ, ಛಾಂಗು ಭಲೇ’ ಎಂದಂತಾ ಗುತ್ತದೆ. ಆದ್ದರಿಂದ ದೇಹವನ್ನು ಅಡಿಸುವ ಬಾಲಗಳನ್ನು ಕೇವಲ ಬಾಲಗಳಾಗಿಸುವ ಧಾರ್ಮಿಕ ಧ್ರುವೀಕರಣ ಇಂದಿನ ತುರ್ತು.
ಈ ಎಲ್ಲಾ ಕಾರಣಗಳಿಗಾಗಿಯೇ ಯಾವುದೇ ರಾಜಕಾರಣದ ಬಾಧ್ಯಸ್ಥಿಕ ಧರ್ಮಾನುವಾದ ಧಾರ್ಮಿಕ ಎನಿಸದು. ಅದು ಮತ್ತೆ ಅಧಿಕಾರಶಾಹಿಗಳು ಧರ್ಮದ ತಲೆಹಿಡಿವ ರಾಜಕಾರಣವೇ ಆಗುತ್ತದೆ. ಇಂದು ವೀರಶೈವವನ್ನು ಅದರ ಆಡುಮಾತಿನ ಲಿಂಗಾಯತ ಪದವನ್ನು ಹಿಡಿದು ಗುಂಜಿ ಅತಾರ್ಕಿಕ ವಾಗಿ ಪ್ರತ್ಯೇಕ ಧರ್ಮ ಎಂದು ಜನರನ್ನು ಯಾಮಾರಿಸಿ ಅದೇ ಸಾರ್ವಕಾಲಿಕ ಸತ್ಯ ಎಂದು ಸುಳ್ಳನ್ನು ಪ್ರತಿಷ್ಠಾಪಿಸುತ್ತಿರುವುದೂ ರಾಜಕಾರಣಿಗಳ ಬಾಧ್ಯಸ್ಥಿಕೆಯೇ ಆಗಿದೆ.
ಮೇಲಿನ ವಿದ್ಯಾವರ್ತಕ-ಕಂ- ರಾಜಕಾರಣಿಗಳು ಎರಡೂ ಕಡೆ ಸಲ್ಲುತ್ತ ಮತಗಳ ಬೇಟೆಯಾಡು ತ್ತಿದ್ದಾರೆ. ಇದು ವರ್ತಮಾನದ ಮತ್ತು ಮುಂದಿನ ಇತಿಹಾಸದ ಅತ್ಯಂತ ನಗೆಪಾಟಲಿನ ಅಂಶವಾಗಿ ದಾಖಲಾಗುತ್ತದೆ!
ಮೊನ್ನೆ ದಾವಣಗೆರೆಯಲ್ಲಿ ಅಖಂಡ ವೀರಶೈವವನ್ನು ಎತ್ತಿ ಹಿಡಿಯಲು ನಡೆದ ಶೃಂಗಸಭೆಯಲ್ಲಿ ಎಲ್ಲಾ ಅಪವ್ಯಾಖ್ಯಾನ, ಅಪವ್ಯಯಗಳನ್ನು ಕ್ಷಮಿಸಿ ಪಂಚಪೀಠಾಧೀಶ್ವರರು ಹಲವು ರಾಜಕಾರಣಿ ಗಳನ್ನು ಒಗ್ಗೂಡಿಕೆಯ ದೃಷ್ಟಿಯಿಂದ ಆಹ್ವಾನಿಸಿದ್ದರು. ಇಂದು ಅನೇಕ ಫಟಿಂಗ ರಾಜಕಾರಣಿಗಳು ಲಿಂಗಾಯತ ಎಂಬ ಒಂದು ಅನ್ವರ್ಥನಾಮ ಪದವನ್ನು ಹಿಡಿದು ಅನರ್ಥ ಧರ್ಮ ಎಂದು ಬಿಂಬಿಸುತ್ತಿರುವಾಗ ಅದನ್ನು ತೊಲಗಿಸಿ ಅಖಂಡ ವೀರಶೈವವನ್ನು ಪುನರ್ ರೂಪಿಸಲು ಇಂಥ ಕರೆ ಅನಿವಾರ್ಯ ಎಂಬುದು ಅನೇಕ ಭಕ್ತರ ಅಭಿಪ್ರಾಯವಾಗಿತ್ತು.
ಈ ಜನಾಭಿಪ್ರಾಯದಂತೆ ಜರುಗಿದ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಕೈಕೊಂಡ ನಿರ್ಣಯಗಳು ಹೀಗಿವೆ: ೧) ಬರಲಿರುವ ಜಾತಿ ಗಣತಿಯಲ್ಲಿ ಎಲ್ಲಾ ಒಳ ಪಂಗಡಗಳು ‘ವೀರಶೈವ ಲಿಂಗಾಯತ’ ಎಂದು ಬರೆಯಿಸಬೇಕು. ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟನ್ನು ಪ್ರತಿಪಾದಿಸ ಬೇಕೆಂದು ಸಭೆ ತೀರ್ಮಾನಿಸಿತು.
೨) ಸನಾತನ ಹಿಂದೂ ವೀರಶೈವ ಲಿಂಗಾಯತ ಧರ್ಮದ ಅನುಯಾಯಿಗಳು ತಾವು ಮಾಡುವ ಉದ್ಯೋಗಗಳಿಂದಲೇ ಉಪಜಾತಿಗಳು ನಿರ್ಮಾಣವಾಗಿವೆ. ಈ ಉಪಜಾತಿಗಳಿಂದ ಧರ್ಮವು ಹರಿದು ಹಂಚಿ ಹೋಗಬಾರದು. ಉಪಜಾತಿ ಯಾವುದೇ ಇದ್ದರೂ ನಾವೆಲ್ಲ ವೀರಶೈವ ಲಿಂಗಾಯತರೆಂಬ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗಬೇಕು.
೩) ಜನಗಣತಿಯ ಫಾರಂನಲ್ಲಿ ಮತದ ಕಾಲಂ ಇರಬೇಕೆಂಬ ಆಗ್ರಹವನ್ನು ಅಖಿಲ ಭಾರತ ವೀರ ಶೈವ ಮಹಾಸಭೆಯ ಮುಖಾಂತರ ಕೂಡಲೇ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಬೇಕು.
೪) ಈ ವಿಷಯವಾಗಿ ಪ್ರಧಾನ ಮಂತ್ರಿಗಳ ಗಮನ ಸೆಳೆಯಲು ಸಮಾಜದ ಮುಖಂಡರ, ವೀರಶೈವ ಮಠಾಧೀಪತಿಗಳ ಮತ್ತು ಎಲ್ಲ ಪಕ್ಷಗಳ ವೀರಶೈವ ಲಿಂಗಾಯತ ಸಂಸದರ ಒಂದು ನಿಯೋಗವನ್ನು ದಿಲ್ಲಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಬೇಕು.
೫) ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳಿಗೆ ಕೇಂದ್ರ ಸರಕಾರದ ‘ಓಬಿಸಿ’ ದೊರಕಿಸಿ ಕೊಡಲು ಎಲ್ಲ ಒಳಪಂಗಡಗಳ ಮುಖಂಡರು ಒಗ್ಗಟ್ಟಿನಿಂದ ಕೇಂದ್ರ ಸರಕಾರದ ಗಮನ ಸೆಳೆಯಲು ರಚನಾತ್ಮಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಬೇಕು.
೬) ವೀರಶೈವ ಲಿಂಗಾಯತದ ಕೆಲವು ಒಳಪಂಗಡಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಯಡಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದು ಅದರ ಮುಂದುವರಿಕೆ ಅಗತ್ಯವೆಂದು ಸಭೆ ತೀರ್ಮಾನಿಸಿತು.
೭) ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಎಲ್ಲಾ ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಸಂಘಟನೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಫೋಟೊ ಹಾಕುವುದನ್ನು ಮರೆಯ ಬಾರದು. ವೀರಶೈವ ಲಿಂಗಾಯತ ಮೂಲ ತತ್ವ ಸಿದ್ಧಾಂತಗಳನ್ನು ಮತ್ತು ಶರಣರ ವಿಚಾರಧಾರೆಗಳನ್ನು ಸಂಯುಕ್ತವಾಗಿ ಮನವರಿಕೆ ಮಾಡಿಕೊಡಬೇಕೆಂದು ಸಭೆ ತೀರ್ಮಾನಿಸಿತು.
೮) ಗುರು ಪರಂಪರೆಯ ಪ್ರಾಚೀನ ಸಂಪ್ರದಾಯಗಳನ್ನು ಶೃದ್ಧೆಯಿಂದ ಆಚರಿಸಲು ಲಕ್ಷ್ಯ ವಹಿಸುವುದು ಮತ್ತು ಯುವ ಜನಾಂಗದಲ್ಲಿ ಅರಿವು ಆಚರಣೆ ಮೂಡಿಸಬೇಕೆಂದು ಸಭೆ ತೀರ್ಮಾನಿಸಿತು.
೯) ವೀರಶೈವ ಲಿಂಗಾಯತ ಸಂಪ್ರದಾಯದ ಮಹಿಳೆಯರು, ಅಂಗವಿಕಲರು ಮತ್ತು ಶೋಷಿತರ ಹಿತರಕ್ಷಣೆಗಾಗಿ ಸರ್ವತೋ ಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಭೆ ತೀರ್ಮಾನಿಸಿತು.
೧೦) ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಮಧ್ಯೆ ಉತ್ತಮ ವಾತಾವರಣ ನಿರ್ಮಾಣಗೊಳ್ಳಬೇಕು. ಆಯಾ ಪೀಠಗಳ ಶಾಖಾ ಮಠಗಳ ಹಿತರಕ್ಷಣೆ-ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಪೀಠಾಚಾರ್ಯರು ಮಾರ್ಗದರ್ಶನ ನೀಡಿ ಬಲಪಡಿಸಬೇಕು. ಇನ್ನೊಂದು ಶಾಖಾ ಮಠದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಸಭೆ ತೀರ್ಮಾನಿಸಿತು.
೧೧) ವರ್ಷದಲ್ಲಿ ಒಮ್ಮೆ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಬೃಹತ್ ಸಮಾವೇಶ ನಡೆಸಿ ವೀರಶೈವ ಲಿಂಗಾಯತ ಪರಂಪರೆಯ ಆದರ್ಶ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಬರಬೇಕೆಂದು ಸಭೆ ತೀರ್ಮಾನಿಸಿತು.
೧೨) ಉತ್ತರ ಭಾರತದ ದಿಲ್ಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಕೂಡ ವೀರಶೈವರು ಅನಾದಿಕಾಲದಿಂದಲೂ ವಾಸವಾಗಿದ್ದು, ಅವರಿಗೆ ಧರ್ಮ ಸಂಸ್ಕಾರಗಳ ಮತ್ತು ಸರಕಾರಿ ಸೌಲಭ್ಯಗಳ ಪ್ರಾಪ್ತಿಯ ಯೋಜನೆಗಳನ್ನು ರೂಪಿಸಬೇಕು.
ಮೇಲಿನ ಎಲ್ಲ ನಿರ್ಣಯಗಳೂ ಸಂಯುಕ್ತ ಅಖಂಡ ವೀರಶೈವ ಲಿಂಗಾಯತವನ್ನು ಎತ್ತಿ ಹಿಡಿಯಲಿವೆ. ಹಾಗಾಗಿ ವೀರಶೈವ ಲಿಂಗಾಯತರು ತಮ್ಮಲ್ಲಿನ ಕೆಲವು ಸುಳ್ಳುಕೋರ, ಎಡಬಿಡಂಗಿ, ನಾಸ್ತಿಕ, ಕಮ್ಯುನಿ, ಅಧಾರ್ಮಿಕ, ವ್ಯವಹಾರಿ ಸೋಗಿನ ಅವ್ಯವಹಾರಿ ವ್ಯಕ್ತಿಗಳಿಂದ ಬಸವಣ್ಣನನ್ನು ಬಿಡಿಸಿ ಸಮಗ್ರತೆಯನ್ನು ಎತ್ತಿ ಹಿಡಿಯಬೇಕು.
ಅಲ್ಲದೇ ಬಸವಣ್ಣನೂ ಇಂಥ ಸೋಗಲಾಡಿಗಳು ಷಡುಸ್ಥಲಕ್ಕೆ ಹೊರಗು ಎಂದು ಸ್ಪಷ್ಟವಾಗಿ ಕೆಳಗಿನ ವಚನದಲ್ಲಿ ಹೇಳಿದ್ದಾನೆ: “ ಅಂಗಲಿಂಗಸಂಗಸುಖಸಾರಾಯದನುಭಾವ ಲಿಂಗವಂತಂ ಗಲ್ಲದೆ ಸಾಧ್ಯವಾಗದು ನೋಡಾ. ಏಕಲಿಂಗಪರಿಗ್ರಾಹಕನಾದ ಬಳಿಕ, ಆ ಲಿಂಗನಿಷ್ಠೆ ಗಟ್ಟಿಗೊಂಡು, ಸ್ವಯಲಿಂಗಾರ್ಚನೋಪಚಾರ ಅರ್ಪಿತ ಪ್ರಸಾದಭೋಗಿಯಾಗಿ, ವೀರಶೈವ ಸಂಪನ್ನನೆನಿಸಿ ಲಿಂಗ ವಂತನಾದ ಬಳಿಕ ತನ್ನಂಗಲಿಂಗಸಂಬಂಧಕ್ಕನ್ಯವಾದ ಜಡಭೌತಿಕ ಪ್ರತಿಷ್ಠೆಯ ನುಳ್ಳ ಭವಿಶೈವ ದೈವಕ್ಷೇತ್ರತೀರ್ಥಂಗಳಾದಿಯಾದ ಹಲವು ಲಿಂಗಾಚನೆಯ ಮನದಲ್ಲಿ ನೆನೆ(ಯ)ಲಿಲ್ಲ, ಮಾಡಲೆಂತೂಬಾರದು.
ಇಷ್ಟೂ ಗುಣವಳವಟ್ಟಿತ್ತಾದಡೆ ಆತನೀಗ ಏಕಲಿಂಗನಿಷಾಚಾ ರಯುಕ್ತನಾದ ವೀರಮಾಹೇಶ್ವರನು. ಇವರೊಳಗೆ ಅನುಸರಿಸಿಕೊಂಡು ನಡೆದನಾದಡೆ ಗುರುಲಿಂಗಜಂಗಮಪಾದೋದಕಪ್ರಸಾದ ಸದ್ಭಕ್ತಿಯುಕ್ತವಾದ ವೀರಶೈವ ಷಡುಸ್ಥಲಕ್ಕೆ ಹೊರಗಾಗಿ ನರಕಕ್ಕಿಳಿವನು ಕಾಣಾ, ಕೂಡಲ ಸಂಗಮದೇವಾ".
ವಿರಕ್ತಮಠಗಳ ಸಂಸ್ಥಾಪಕರಾದ ತೋಂಟದ ಸಿದ್ದಲಿಂಗೇಶ್ವರರು ರೇಣುಕರನ್ನು ನೆನೆಸಿರುವುದು ಮತ್ತು ಬಸವಣ್ಣನೇ ತನ್ನ ವಚನಗಳಲ್ಲಿ ವೀರಶೈವ ಭಂಜಕರು ನರಕಕ್ಕಿಳಿವರು ಎಂದಿರುವುದು ಅಖಂಡ ವೀರಶೈವವನ್ನು ಎತ್ತಿ ಹಿಡಿಯುತ್ತದೆ.
ಅಲ್ಲದೇ ‘ವಿಶ್ವವಾಣಿ’ಯ ಈವರೆಗಿನ ‘ಬಸವ ಮಂಟಪ’ ಅಂಕಣದಲ್ಲಿ ಸಾಕ್ಷಿ ಪುರಾವೆಗಳ ಸಮೇತ ವೀರಶೈವ ಲಿಂಗಾಯತದ ಅಖಂಡತ್ವವನ್ನು ನಿರೂಪಿಸಲಾಗಿದೆ. ಇದೇ ಅಂಕಣಮಾಲೆಯಲ್ಲಿ ತಿಳಿಸಿರುವಂತೆ ಪ್ರತ್ಯೇಕ ಧರ್ಮ ಅನುಷ್ಠಾನವನ್ನು ಹೇಗೆ ಪ್ರತಿಪಾದಿಸಬೇಕು ಎಂಬ ಅಂಶವೂ ಕೂಡಿದೆ.
ಇದೆಲ್ಲವನ್ನೂ ವೀರಶೈವ ಲಿಂಗವಂತ ಸಮಾಜವು ಇಂದು ಎತ್ತಿಹಿಡಿಯುವ ಕಾಲವೂ ಕೇಂದ್ರ ಸರಕಾರದ ಜಾತಿಗಣತಿ ರೂಪದಲ್ಲಿ ಕೂಡಿಬಂದಿದೆ. ವೀರಶೈವ ಲಿಂಗಾಯತ ಮಹಾಸಭಾವು ಪಂಚಪೀಠಾಧೀಶ್ವರರ ಸಮ್ಮುಖದಲ್ಲಿ ಮೇಲಿನ ನಿರ್ಣಯಗಳನ್ನು ಅನುಮೋದಿಸಿದೆ. ಈಗ ಚೆಂಡು ಸಮಾಜದ ಮುಂದಿದೆ.
ಬಸವಣ್ಣ ಮತ್ತು ಸಿದ್ದಲಿಂಗೇಶ್ವರರ ಆಶಯದಂತೆ ಸಮಾಜವು ಗುರಿ ತಲುಪಿಸಿ “ಜಯನ್ನಮ ಪಾರ್ವತೀ ಪತಿ ಹರಹರ ಮಹಾದೇವ" ಎಂದು ಎಲ್ಲದಕ್ಕೂ ಮಂಗಳ ಹಾಡುವುದೋ ಇಲ್ಲವೇ ಧರ್ಮಭಂಜಕರ ವೈಯಾರದ ಬಿನ್ನಾಣಕ್ಕೆ, ಮರುಳು ಮಾತಿಗೆ ಕೋಲೆಬಸವನಾಗಿ ತಲೆದೂಗಿ ಮುಂದಿನ ಜನಾಂಗಕ್ಕೆ ‘ಆಲೇ ಲೂಯ’ ಹಾಡಿಸುವುದೋ ಕಾಲeನಿ ಚೆನ್ನಬಸವಣ್ಣನೇ ಬಲ್ಲ!
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)