ಅಶ್ವತ್ಥಕಟ್ಟೆ
ranjith.hoskere@gmail.com
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಎಷ್ಟು ಮುಖ್ಯವೋ, ಆ ರಾಜಕೀಯ ಪಕ್ಷಗಳು ‘ಬಲಿಷ್ಠ’ವಾಗಿ ರೂಪುಗೊಳ್ಳಲು ಕಾರ್ಯಕರ್ತರೇ ಮೂಲವಾಗಿರುತ್ತಾರೆ. ಯಾವುದೇ ಒಂದು ಪಕ್ಷವು ತಳಮಟ್ಟದಲ್ಲಿ ಗಟ್ಟಿಯಾಗಿರಲು ಕಾರ್ಯಕರ್ತರ ಬಲ ಪ್ರಮುಖವಾಗಿರುತ್ತದೆ. ಆದರೆ ಬಹುತೇಕ ಸಮಯದಲ್ಲಿ ಪಕ್ಷದ ಬಲವರ್ಧನೆಗೆ ‘ಶ್ರಮಿಸುವ’ ಕಾರ್ಯಕರ್ತರಿಗೆ ಅಧಿಕಾರ ನೀಡುವ ವಿಷಯ ದಲ್ಲಿ ಮಾತ್ರ ಎಲ್ಲ ಪಕ್ಷಗಳು ಮೀನ-ಮೇಷ ಎಣಿಸುವುದು ಸಾಮಾನ್ಯ ಎನ್ನುವಂತಾಗಿದೆ.
ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ನಾಯಕರ ‘ಬಲಪ್ರದರ್ಶನ’ಕ್ಕಾಗಿ ಮಾಡುವ ಹತ್ತಾರು ತಂತ್ರ ಗಳಲ್ಲಿ ಸಿಲುಕಿ ನಲುಗುತ್ತಿರುವವರು ಕಾರ್ಯಕರ್ತರು. ಯಾವುದೇ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತ ರ ಅಸಮಾಧಾನ ಹೊಸದೇನಲ್ಲ. ಆದರೆ ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಈ ಸಮಸ್ಯೆ ‘ಕೊಂಚ’ ಹೆಚ್ಚೇ ಎನ್ನುವ ರೀತಿಯಲ್ಲಿದೆ.
ಅದರಲ್ಲಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಕಾರ್ಯಕರ್ತರಿಗೆ ಸಮಾನ ಸಮಸ್ಯೆಗಳಿವೆ. ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿದ್ದರೆ, ಬಿಜೆಪಿ ಯಲ್ಲಿ ರಾಜ್ಯಾಧ್ಯಕ್ಷರ ಮೇಲಿನ ಅಸಹನೆಯ ಕಾರಣಕ್ಕೆ ಬಣ ರಾಜಕೀಯದ ಮಾತುಗಳು ಜೋರಾ ಗಿವೆ. ಆದರೆ ಎರಡೂ ಪಕ್ಷದಲ್ಲಿಯೂ ಬಣ ರಾಜಕೀಯದಲ್ಲಿ ನಿಜವಾಗಿಯೂ ಏನು ಮಾಡಬೇಕೆಂಬ ಗೊಂದಲಕ್ಕೆ ಸಿಲುಕಿರುವುದು ಮಾತ್ರ ಕಾರ್ಯಕರ್ತರು ಎನ್ನುವುದು ಸ್ಪಷ್ಟ.
ಇದನ್ನೂ ಓದಿ: Ranjith H Ashwath Column: ಹೈಕಮಾಂಡ್ ಅನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಕರ್ನಾಟಕ
ರಾಜ್ಯ ರಾಜಕೀಯದಲ್ಲಿ ನಾಯಕತ್ವದ ವಿಷಯದಲ್ಲಿ ಪದೇಪದೆ ಉಂಟಾಗುತ್ತಿರುವ ಗೊಂದಲ ಗಳಿಂದ ಬೇಸತ್ತು ಎರಡೂ ಪಕ್ಷದ ಅನೇಕ ನಿಷ್ಠಾವಂತರು ಸದ್ದಿಲ್ಲದೇ ತೆರೆಮರೆಯಲ್ಲಿ ನಿಂತಿದ್ದಾರೆ. ಈ ಎಲ್ಲ ಸಮಸ್ಯೆಗಳ ಸ್ಪಷ್ಟ ಚಿತ್ರಣ ಎರಡೂ ಪಕ್ಷದ ದೆಹಲಿ ನಾಯಕರಿಗೆ ಇದ್ದರೂ, ಏನು ಮಾಡಬೇಕೆಂಬ ಸ್ಪಷ್ಟ ತೀರ್ಮಾನಕ್ಕೆ ಬಾರದಿರುವುದರಿಂದ ಕರ್ನಾಟಕದ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ಸಮಸ್ಯೆ ಬಗ್ಗೆ ಚರ್ಚಿಸುವ ಮೊದಲು ರಾಜ್ಯ ಬಿಜೆಪಿಯಲ್ಲಿನ ಸಮಸ್ಯೆಯ ಕಡೆಗೆ ಗಮನ ಹರಿಸೋಣ. ಈ ಸಮಸ್ಯೆ ಬಹುದೊಡ್ಡ ಸವಾಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದ ದಿನದಿಂದ ಪಕ್ಷದೊಳಗಿನ ಗೊಂದಲಗಳಿಗೆ ಉತ್ತರಗಳಿಲ್ಲವಾಗಿದೆ. ಚುನಾವಣೆಯ ಸಮಯದಲ್ಲಿಯೇ ಅನೇಕ ಗೊಂದಲಗಳಿದ್ದರೂ, ಅಧಿಕಾರದ ಗದ್ದುಗೆ ಏರಬೇಕೆಂಬ ಕಾರಣಕ್ಕೆ ಕೆಲವರು ‘ಮೌನ’ಕ್ಕೆ ಶರಣಾದರು.
ಆದರೆ ಚುನಾವಣೆ ಮುಗಿದು, ಏಳೆಂಟು ತಿಂಗಳು ಕಳೆದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಿಸುತ್ತಿದ್ದಂತೆ ಪಕ್ಷದಲ್ಲಿ ಶುರುವಾಗಿರುವ ತಿಕ್ಕಾಟಗಳೆಲ್ಲವೂ ಈಗ ‘ದೈತ್ಯಾಕಾರ’ವಾಗಿ ಕಾಣಿಸಿಕೊಳ್ಳುತ್ತಿವೆ. ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿ ವರ್ಷ ಕಳೆಯುವ ತನಕ ಪಕ್ಷದ ಹಿರಿಯನ್ನು ವಿಶ್ವಾಸಕ್ಕೆ ಪಡೆಯುವ ಕೆಲಸ ಮಾಡಲಿಲ್ಲ.
ಬದಲಿಗೆ ಎಲ್ಲದಕ್ಕೂ ದೆಹಲಿ ನಾಯಕರನ್ನು ತೋರಿಸಿ, ಇಲ್ಲಿ ಪಕ್ಷವನ್ನು ಮುನ್ನಡೆಸುವ ಮನಸ್ಥಿತಿ ಯಲ್ಲಿದ್ದರು. ಇದರೊಂದಿಗೆ ಜೆಡಿಎಸ್‌ನೊಂದಿಗೆ ಮೈತ್ರಿಯಾಗಿದ್ದರಿಂದ, ಲೋಕಸಭಾ ಚುನಾವಣೆ ಯ ಸಮಯದಲ್ಲಿ ಸಂಘಟನೆ ಹಾಗೂ ಮತಗಳಿಕೆ ವಿಷಯದಲ್ಲಿ ಹೊಡೆತ ಬಿದ್ದರೂ, ‘ಹೀನಾಯ’ ಎನ್ನುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.
ಆದರೆ ದಿನದಿಂದ ದಿನಕ್ಕೆ ಬಿಜೆಪಿಯಲ್ಲಿನ ಆಂತರಿಕ ಕಿತ್ತಾಟ ಬಹಿರಂಗವಾಗುತ್ತಿರುವ ಬೆನ್ನಲ್ಲೇ, ಪಕ್ಷದ ವರಿಷ್ಠರು ‘ಎಚ್ಚೆತ್ತು’ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎನ್ನುವ ಸಂದೇಶ ರವಾನಿಸಿದ ಬಳಿಕ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯಕ್ಕೆ ವಿಜಯೇಂದ್ರ ಮುಂದಾದರು. ಆದರೆ ಅದು ನಿರೀಕ್ಷಿತ ಫಲ ನೀಡಿಲ್ಲ.
ಇಂದಿನ ಪರಿಸ್ಥಿತಿಯಲ್ಲಿ ಒಡೆದ ಮನೆಯಾಗಿರುವ ಬಿಜೆಪಿ ಒಂದಾಗಿ ಹೋಗುವುದು ಸುಲಭವಲ್ಲ ಎನ್ನುವುದು ಬಿಜೆಪಿಯ ಬಹುತೇಕ ನಾಯಕರ ಅಭಿಪ್ರಾಯವಾಗಿದೆ. ಹಾಗೆ ನೋಡಿದರೆ, ಬಿಜೆಪಿಯ ಇಂದಿನ ಪರಿಸ್ಥಿತಿಯಲ್ಲಿ ಕೇವಲ ರಾಜ್ಯ ನಾಯಕರದ್ದು ಮಾತ್ರವಲ್ಲದೇ, ರಾಷ್ಟ್ರಮಟ್ಟದ ನಾಯಕರ ಪಾಲೂ ಇದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ, ಅಶೋಕ್ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಿದ್ದನ್ನು ರಾಜ್ಯ ಬಿಜೆಪಿಯ ಹಲವು ಹಿರಿಯ ನಾಯಕರು ವಿರೋಧಿಸಿದರು.
ಪಕ್ಷ ಸಂಘಟನೆಗೆ ದಶಕಗಳಿಂದ ಕಾರ್ಯನಿರ್ವಹಿಸಿದ್ದ ಹಲವು ನಾಯಕರನ್ನು ಕೈಬಿಟ್ಟು, ಯಡಿಯೂರಪ್ಪನವರ ಪುತ್ರ ಹಾಗೂ ಲಿಂಗಾಯತ ಮತಗಳನ್ನು ಸೆಳೆಯುವ ಕಾರಣಕ್ಕೆ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು ಹಾಗೂ ಲಿಂಗಾಯತರಿಗೆ ಒಂದು ಸ್ಥಾನ ನೀಡಿರುವ ಕಾರಣಕ್ಕೆ ಮತ್ತೊಂದು ಸ್ಥಾನ ಒಕ್ಕಲಿಗರಿಗೆ ನೀಡಬೇಕೆಂದು, ಅಶೋಕ್ ಅವರಿಗೆ ವಿಧಾನ ಸಭಾ ಪ್ರತಿಪಕ್ಷ ನಾಯಕ ಸ್ಥಾನ ನೀಡುವ ಆಲೋಚನೆಯೇ ಪಕ್ಷದ ಇಂದಿನ ಪರಿಸ್ಥಿತಿಗೆ ಬುನಾದಿ ಎಂದರೆ ತಪ್ಪಾಗುವುದಿಲ್ಲ.
ಹಲವು ವಿರೋಧದ ನಡುವೆಯೇ ಅಧಿಕಾರ ಸ್ವೀಕರಿಸಿದ ಈ ನಾಯಕರು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಎಡವಿದರು. ಅದರಲ್ಲಿಯೂ ಸಂಘ ಪರಿವಾರದೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಹಲವು ನಾಯಕರನ್ನು ಎದುರು ಹಾಕಿಕೊಂಡಿದ್ದು, ಪಕ್ಷದೊಳಗಿನ ಭಿನ್ನರಾಗ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ಪಕ್ಷದ ನಾಯಕರ ನಡುವಿನ ತಿಕ್ಕಾಟವಿದ್ದರೂ, ಇದರಲ್ಲಿ ಅತಿಹೆಚ್ಚು ಸಮಸ್ಯೆಗೆ ಒಳಗಾಗಿದ್ದು ಮಾತ್ರ ಸಂಘಟನೆ. ಏಕೆಂದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇತ್ತ ಪಕ್ಷವನ್ನೂ ಬಿಟ್ಟುಕೊಡಲಾಗದೇ, ಅತ್ತ ನಾಯಕರನ್ನೂ ಬಿಟ್ಟು ಕೊಡಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಉದಾಹರಣೆಗೆ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ ಅಥವಾ ಜಿ.ಎಂ.ಸಿದ್ದೇಶ್ವರ ಅವರೊಂದಿಗೆ ದಶಕಗಳ ಕಾಲ ಗುರುತಿಸಿ ಕೊಂಡಿರುವ ಪಕ್ಷದ ಕಾರ್ಯಕರ್ತರು ಈಗ ರಾಜ್ಯಾಧ್ಯಕ್ಷ ಹಾಗೂ ತಮ್ಮ ನಾಯಕನ ನಡುವೆ ಭಿನ್ನಮತ ಉಂಟಾದ ಮಾತ್ರಕ್ಕೆ ಇತ್ತ ನಾಯಕರನ್ನು ಬಿಡಲಾಗದೇ, ಅತ್ತ ಪಕ್ಷವನ್ನೂ ಬಿಡಲಾಗದ ಸ್ಥಿತಿಗೆ ಬಂದು ನಿಂತಿದ್ದಾರೆ.
ಬಹಿರಂಗವಾಗಿ ಯಾರ ಪರವೂ ಮಾತನಾಡದ ಸ್ಥಿತಿ ತಲುಪಿರುವ ಬಹುತೇಕ ಕಾರ್ಯಕರ್ತರು, ಇಂದು ಮೌನಕ್ಕೆ ಶರಣಾಗಿದ್ದಾರೆ. ಈ ಧರ್ಮಸಂಕಟ ಪಕ್ಷದ ನಾಯಕರಿಗೆ ತಿಳಿದಿಲ್ಲವೆಂದಲ್ಲ. ಆದರೆ ಪಕ್ಷದ ಸಂಘಟನೆ ಏನಾದರೂ ಆಗಲಿ, ತಮ್ಮ ಕೈ ಮೇಲಾಗಬೇಕು ಎನ್ನುವ ಮನಸ್ಥಿತಿಯಲ್ಲಿ ಹಲವರಿರುವುದರಿಂದ ಕಾರ್ಯಕರ್ತರಿಗೆ ‘ಅತ್ತ ದರಿ-ಇತ್ತ ಪುಲಿ’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿಪಕ್ಷದಲ್ಲಿರುವ ಬಿಜೆಪಿಯಲ್ಲಿಯೇ ಈ ಪರಿಸ್ಥಿತಿಯಿರುವಾಗ ಆಡಳಿತಾರೂಢ ಕಾಂಗ್ರೆಸ್ ಕಾರ್ಯಕರ್ತರಿಗೆ ಗೊಂದಲಗಳಿರುವುದು ಆಶ್ಚರ್ಯವೇನಲ್ಲ. ಅದರಲ್ಲಿಯೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎನ್ನುವ ಎರಡು ‘ಶಕ್ತಿಕೇಂದ್ರ’ ಗಳೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ತಮ್ಮದೇಯಾದ ಶಕ್ತಿಕೇಂದ್ರವನ್ನು ಸೃಷ್ಟಿಸಿಕೊಂಡಿರುವುದರಿಂದ ಯಾರ ಮಾತು ಕೇಳಬೇಕು ಎನ್ನುವ ಗೊಂದಲದಲ್ಲಿ ಕಾರ್ಯಕರ್ತರು ಸಿಲುಕಿದ್ದಾರೆ.
ಪಕ್ಷದ ಹಿತಕ್ಕಿಂತ ತಮ್ಮ ಬಣಗಳನ್ನು ಬಲಿಷ್ಠವೆಂದು ತೋರಿಸುವ ಮನಸ್ಥಿತಿಯಲ್ಲಿ ಈ ನಾಯಕ ರಿರುವುದರಿಂದ ಯಾರ ಪರವಾಗಿಯೇ ಮಾತನಾಡಿದರೂ, ಇನ್ನೊಂದು ಬಣದ ವಿರೋಧ ಕಟ್ಟಿಕೊಳ್ಳಬೇಕಾದ ಆತಂಕ ಹಲವರಲ್ಲಿದೆ. ಕಾಂಗ್ರೆಸ್‌ನಲ್ಲಿನ ‘ಪವರ್ ಹೌಸ್’ಗಳ ಶಕ್ತಿ ಪ್ರದರ್ಶನದ ಮೇಲಾಟಕ್ಕೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ, ಕಾರ್ಯಕರ್ತರಿಗೆ ಅಧಿಕಾರ ಸಿಕ್ಕಿಲ್ಲ.
ಅಧಿಕಾರಕ್ಕೆ ಬಂದ ದಿನದಿಂದ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನ ಗಳಿಗೆ ಕಾರ್ಯಕರ್ತ ರನ್ನು ನೇಮಿಸಿ ಎನ್ನುವ ಬೇಡಿಕೆ ಶುರುವಾಗಿದೆ. ಆದರೆ ಸಚಿವ ಸ್ಥಾನ ವಂಚಿತ ಶಾಸಕರನ್ನು ಸಂತೈಸುವ ಕಾರಣಕ್ಕೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ವಾಗಿದೆಯೇ ಹೊರತು, ಪಕ್ಷದ ಕಾರ್ಯಕರ್ತರ ಬೇಡಿಕೆಯಿರುವ ನಿರ್ದೇಶಕ ಸ್ಥಾನಗಳಿಗೆ ನೇಮಿಸಲು ಕಾಲ ಕೂಡಿಬಂದಿಲ್ಲ.
ಹಾಗೆ ನೋಡಿದರೆ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿರುವ ನಾಮನಿರ್ದೇಶನ ಸ್ಥಾನಗಳನ್ನು ಭರ್ತಿ ಮಾಡಿದರೆ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಸ್ಥಾನಮಾನ ನೀಡಬಹುದು. ಆದರೆ ಪಕ್ಷದಲ್ಲಿರುವ ‘ಪವರ್ ಹೌಸ್’ಗಳ ಮೇಲಾಟದಿಂದ ಪಟ್ಟಿ ಅಂತಿಮಗೊಳ್ಳಲು ಸಾಧ್ಯವಾಗಿಲ್ಲ. ನಿರ್ದೇಶಕ ಸ್ಥಾನವನ್ನು ತುಂಬುವುದಕ್ಕೂ ದೆಹಲಿ ನಾಯಕರತ್ತ ನೋಡುವ, ಸರಣಿ ಸಭೆಗಳನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ನಿಗಮ-ಮಂಡಳಿ ನಿರ್ದೇಶಕ ಸ್ಥಾನಕ್ಕೆ ಸಂಬಂಧಿಸಿದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಸಿದರೂ, ‘ಒಮ್ಮತ’ದ ತೀರ್ಮಾನಕ್ಕೆ ಬರಲು ಸಾಧ್ಯವಾಗದೇ ಪುನಃ ಈ ಶನಿವಾರ ‘ದೆಹಲಿ ನಾಯಕ’ರ ಕಚೇರಿಯ ಕದತಟ್ಟಲು ತೀರ್ಮಾನಿಸಿದ್ದಾರೆ.
ಇನ್ನು ಪ್ರಾದೇಶಿಕ ಪಕ್ಷ ಎನಿಸಿರುವ ಜೆಡಿಎಸ್‌ನಲ್ಲಿಯೂ ಈ ಸಮಸ್ಯೆಯಿತ್ತು. 2018ರಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್ -ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜೆಡಿಎಸ್ ವಿರುದ್ಧ ಪಕ್ಷದ ಕಾರ್ಯಕರ್ತರು ತಿರುಗಿಬೀಳಲು ಇದೇ ಕಾರಣವಾಗಿತ್ತು. ಮೊದಲ ಬಾರಿಗೆ ಬಿಜೆಪಿಯೊಂದಿಗೆ ಅಧಿಕಾರಕ್ಕೆ ಬಂದಾಗ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಸ್ಪಂದಿಸಿದ ರೀತಿಗೂ, ಎರಡನೇ ಬಾರಿ ಕಾಂಗ್ರೆಸ್ ನೊಂದಿಗೆ ಅಧಿಕಾರ ಹಂಚಿಕೊಂಡಾಗ ನಡೆದುಕೊಂಡ ರೀತಿಗೂ ಅಜಗಜಾಂತರವಿತ್ತು.
ಮೈತ್ರಿ ಸರಕಾರದ ಅವಧಿಯಲ್ಲಿ, ಸ್ವಪಕ್ಷದ ಕಾರ್ಯಕರ್ತರು, ಶಾಸಕರ ಕೆಲಸಕ್ಕಿಂತ ಅನ್ಯಪಕ್ಷದವರ ಕೆಲಸಗಳೇ ಸಲೀಸಾಗಿ ಆಗುತ್ತಿತ್ತಂತೆ. ಇದಿಷ್ಟೇ ಅಲ್ಲದೇ, ಬೇರೆ ಪಕ್ಷದ ಶಾಸಕರಿಗೆ ಸುಲಭವಾಗಿ ಸಿಗುತ್ತಿದ್ದ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿತ್ತು.
ಅಧಿಕಾರದಿಂದ ಕೆಳಗಿಳಿಯುವ ತನಕ ಕಾರ್ಯಕರ್ತರ ಕೈಗೆ ಸಿಗದ ಕುಮಾರಸ್ಚಾಮಿ ಅವರು, ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತಿದ್ದಂತೆ, ಕಾರ್ಯಕರ್ತರಿಗೆ ತಮ್ಮ ಮನೆಬಾಗಿಲನ್ನು ತೆರೆದರು ಎನ್ನುವುದು ಜೆಡಿಎಸ್ ನೊಳಗಿರುವವರ ಮಾತಾಗಿದೆ. ಪ್ರತಿಪಕ್ಷ ಸ್ಥಾನದಲ್ಲಿ ಕೂತ ಬಳಿಕವಾದರೂ ಜೆಡಿಎಸ್ ಎಚ್ಚೆತ್ತುಕೊಳ್ಳುವ ಕೆಲಸವನ್ನು ಮಾಡಿತ್ತು; ಆದರೆ ಬಿಜೆಪಿ ಈ ಹಂತದಲ್ಲಿಯೂ ‘ನಾಯಕರ ಕಿತ್ತಾಟ’ದಲ್ಲಿ ಕಾರ್ಯಕರ್ತರನ್ನು ಬಡವಾಗಿಸುತ್ತಿದೆ ಎನ್ನುವುದು ಬಿಜೆಪಿ ಕಾರ್ಯಕರ್ತರ ಅಳಲಾಗಿದೆ.
ಚುನಾವಣಾ ಸಮಯದಲ್ಲಿ ಅಥವಾ ಸಾರ್ವಜನಿಕ ಭಾಷಣಗಳಲ್ಲಿ ಬಹುತೇಕ ನಾಯಕರು ‘ಕಾರ್ಯಕರ್ತ’ರೇ ಪಕ್ಷದ ಜೀವಾಳವೆಂದು ಭಾಷಣ ಮಾಡಿಕೊಂಡು ಓಡಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ಪಕ್ಷಗಳಲ್ಲಿ ನಾಯಕರ ನಡುವಿನ ‘ಪವರ್’ ತಿಕ್ಕಾಟದಿಂದ ಕಾರ್ಯಕರ್ತರು ಬಡವಾಗುತ್ತಿದ್ದಾರೆ.
‘ಬದಲಿ’ ರಾಜಕೀಯ ವ್ಯವಸ್ಥೆಯಿಲ್ಲದ ಕರ್ನಾಟಕದಂಥ ರಾಜ್ಯದಲ್ಲಿ ಒಂದಿಲ್ಲೊಂದು ಬಾರಿ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನುವ ವಿಶ್ವಾಸದಲ್ಲಿರುವ ನಾಯಕರು, ಅಧಿಕಾರ ಸಿಗುತ್ತಿದ್ದಂತೆ ಕೆಲವೊಮ್ಮೆ ಕಾರ್ಯಕರ್ತರನ್ನು ಮರೆಯುವ ಕೆಲಸಗಳಾಗುತ್ತಿವೆ. ಬದಲಿ ವ್ಯವಸ್ಥೆಯಿಲ್ಲದ ಸಮಯದಲ್ಲಿ ಕಾರ್ಯಕರ್ತರು ತಟಸ್ಥರಾದರೂ ಅಧಿಕಾರದ ಗದ್ದುಗೆ ಏರಬಹುದು. ಆದರೆ ಯಾವುದೇ ಒಂದು ಪಕ್ಷದ ಜೀವಾಳವಾಗಿರುವ ಕಾರ್ಯಕರ್ತರನ್ನು ಸ್ವಹಿತಾಸಕ್ತಿಗಾಗಿ ಮರೆತರೆ ಭವಿಷ್ಯದಲ್ಲಿ ಇದರ ನೇರ ಪರಿಣಾಮವನ್ನು ಪಕ್ಷವೇ ಅನುಭವಿಸಬೇಕು ಎನ್ನುವುದನ್ನು ನಾಯಕರು ಮರೆಯಬಾರದು.